Homeದಲಿತ್ ಫೈಲ್ಸ್ಜೆಎನ್‌ಯು ಪಿಎಚ್‌ಡಿ ಪ್ರವೇಶದಲ್ಲಿ ಪಾಲನೆಯಾಗದ ಮೀಸಲಾತಿ ಮಾನದಂಡ; 56 ಕೋರ್ಸ್‌ಗಳಲ್ಲಿ ಇಲ್ಲ ಒಂದೇ ಒಂದು ಎಸ್‌ಟಿ...

ಜೆಎನ್‌ಯು ಪಿಎಚ್‌ಡಿ ಪ್ರವೇಶದಲ್ಲಿ ಪಾಲನೆಯಾಗದ ಮೀಸಲಾತಿ ಮಾನದಂಡ; 56 ಕೋರ್ಸ್‌ಗಳಲ್ಲಿ ಇಲ್ಲ ಒಂದೇ ಒಂದು ಎಸ್‌ಟಿ ಸೀಟ್

- Advertisement -
- Advertisement -

ಮೀಸಲಾತಿ ಸೀಟುಗಳ ಹಂಚಿಕೆ ವ್ಯತ್ಯಾಸಕ್ಕೆ ವಿವರಣೆ ನೀಡುವಂತೆ ಬಾಪ್ಸಾ ಆಗ್ರಹ

2026-27ನೇ ಶೈಕ್ಷಣಿಕ ಸಾಲಿನ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ (ಜೆಎನ್‌ಯು) ಪಿಎಚ್‌ಡಿ ಪ್ರವೇಶ ಪ್ರಕ್ರಿಯೆಯಲ್ಲಿ ಪರಿಶಿಷ್ಟ ಪಂಗಡಗಳ (ಎಸ್‌ಟಿ) ಮೀಸಲಾತಿ ಪ್ರಮಾಣದಲ್ಲಿ ಕೊರತೆಯಾಗಿದೆ ಎಂದು ಬಿರ್ಸಾ ಅಂಬೇಡ್ಕರ್ ಫುಲೆ ವಿದ್ಯಾರ್ಥಿ ಸಂಘ (ಬಾಪ್ಸಾ) ಆರೋಪಿಸಿದೆ. ವಿಶ್ವವಿದ್ಯಾಲಯವು ತನ್ನ ಪ್ರವೇಶ ಕೈಪಿಡಿಯಲ್ಲಿ (ಇ-ಪ್ರಾಸ್ಪೆಕ್ಟಸ್) ಉಲ್ಲೇಖಿಸಿರುವ ಮೀಸಲಾತಿ ಮಾನದಂಡವನ್ನು ಪಾಲಿಸಿಲ್ಲ ಎಂದು ಸಂಘಟನೆ ದೂರಿದೆ.

ಅಕ್ಟೋಬರ್ 19ರಂದು ಬಿಡುಗಡೆ ಮಾಡಿದ ಹೇಳಿಕೆಯಲ್ಲಿ, ಒಟ್ಟು 711 ಪಿಎಚ್‌ಡಿ ಸೀಟುಗಳ ಪೈಕಿ ಕೇವಲ 38 ಎಸ್‌ಟಿ ಸೀಟುಗಳನ್ನು ಮಾತ್ರ ಜೆಎನ್‌ಯು ಪ್ರಕಟಿಸಿದೆ ಎಂದು ಬಾಪ್ಸಾ ತಿಳಿಸಿದೆ. ಇದು ಒಟ್ಟು ಸೀಟುಗಳ ಶೇ. 5.3ರಷ್ಟಾಗಿದ್ದು, ವಿಶ್ವವಿದ್ಯಾಲಯದ ಪಿಎಚ್‌ಡಿ ಪ್ರವೇಶ ಕೈಪಿಡಿಯಲ್ಲಿ ನಿಗದಿಪಡಿಸಿರುವ ಶೇ. 7.5ರ ಮೀಸಲಾತಿ ಪ್ರಮಾಣಕ್ಕಿಂತ ಕಡಿಮೆಯಾಗಿದೆ. ನಿಗದಿತ ಶೇ. 7.5ರ ಮೀಸಲಾತಿ ಪ್ರಮಾಣವನ್ನು ಸಾಧಿಸಲು 53 ಎಸ್‌ಟಿ ಸೀಟುಗಳು ಅಗತ್ಯವಿದ್ದು, ಪ್ರಸ್ತುತ ಪ್ರಕಟಿಸಿರುವ ಸೀಟುಗಳ ಸಂಖ್ಯೆಯಲ್ಲಿ ಸುಮಾರು 15 ಸೀಟುಗಳ ಕೊರತೆಯಿದೆ ಎಂದು ಸಂಘಟನೆ ಹೇಳಿದೆ.

ಈ ಹಿನ್ನೆಲೆಯಲ್ಲಿ, ಹೆಚ್ಚುವರಿಯಾಗಿ 15 ಎಸ್‌ಟಿ ಸೀಟುಗಳನ್ನು ಸೇರಿಸಿ ತಿದ್ದುಪಡಿ ಪ್ರಕಟಣೆ ಹೊರಡಿಸಬೇಕು ಹಾಗೂ ಮೀಸಲಾತಿ ಸೀಟುಗಳ ಹಂಚಿಕೆಯಲ್ಲಿ ಉಂಟಾಗಿರುವ ವ್ಯತ್ಯಾಸಕ್ಕೆ ವಿಶ್ವವಿದ್ಯಾಲಯ ಅಧಿಕೃತ ವಿವರಣೆ ನೀಡಬೇಕು ಎಂದು ಬಾಪ್ಸಾ ಆಗ್ರಹಿಸಿದೆ.

ಈ ಕೊರತೆಯು ಸಂವಿಧಾನಾತ್ಮಕ ಮೀಸಲಾತಿ ನಿಯಮಗಳ ಅನುಷ್ಠಾನ, ಸೀಟು ಹಂಚಿಕೆಯ ಪಾರದರ್ಶಕತೆ ಹಾಗೂ ಐತಿಹಾಸಿಕವಾಗಿ ಅಂಚಿಗೆ ತಳ್ಳಲ್ಪಟ್ಟ ಸಮುದಾಯಗಳ ಬಗೆಗಿನ ವಿಶ್ವವಿದ್ಯಾಲಯದ ಹೊಣೆಗಾರಿಕೆಯ ಕುರಿತು ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ ಎಂದು ಸಂಘಟನೆ ಅಭಿಪ್ರಾಯಪಟ್ಟಿದೆ.

ಜೆಎನ್‌ಯು 2026-27ನೇ ಸಾಲಿನ ಪಿಎಚ್‌ಡಿ ಪ್ರವೇಶ ಕೈಪಿಡಿಯಲ್ಲಿ ಪರಿಶಿಷ್ಟ ಪಂಗಡಗಳಿಗೆ ಶೇ. 7.5, ಪರಿಶಿಷ್ಟ ಜಾತಿಗಳಿಗೆ (ಎಸ್‌ಸಿ) ಶೇ. 15 ಮತ್ತು ಇತರ ಹಿಂದುಳಿದ ವರ್ಗಗಳಿಗೆ (ಒಬಿಸಿ) ಶೇ. 27ರಷ್ಟು ಮೀಸಲಾತಿಯನ್ನು ಉಲ್ಲೇಖಿಸಿದೆ. ಆದರೆ, ಸೀಟು ಹಂಚಿಕೆಗೆ ಬಳಸುವ ರೋಸ್ಟರ್ ವ್ಯವಸ್ಥೆ ಹಾಗೂ ವಿವಿಧ ಅಧ್ಯಯನ ಕಾರ್ಯಕ್ರಮಗಳು, ಕೇಂದ್ರಗಳು ಮತ್ತು ಸಂಸ್ಥೆಗಳ ನಡುವೆ ಸೀಟುಗಳನ್ನು ಹಂಚುವ ವಿಧಾನವನ್ನು ಪ್ರವೇಶ ಕೈಪಿಡಿಯಾಗಲಿ, ಜೆಎನ್‌ಯು ಆಧ್ಯಾದೇಶ 2022 ಆಗಲಿ ಸಮರ್ಪಕವಾಗಿ ವಿವರಿಸುವುದಿಲ್ಲ ಎಂದು ಬಾಪ್ಸಾ ಆರೋಪಿಸಿದೆ.

ಪ್ರವೇಶ ಕೈಪಿಡಿಯಲ್ಲಿ ಮೀಸಲಾತಿ ಪ್ರಮಾಣಗಳನ್ನು ಉಲ್ಲೇಖಿಸುವುದರಿಂದ ಮಾತ್ರ ಅವುಗಳನ್ನು ವಾಸ್ತವಿಕ ಸೀಟು ಹಂಚಿಕೆಯಲ್ಲಿ ಜಾರಿಗೊಳಿಸಲಾಗಿದೆ ಎಂದು ಹೇಳಲಾಗದು ಎಂದು ಸಂಘಟನೆ ತಿಳಿಸಿದೆ. ಅನ್ವಯವಾಗುವ ಮೀಸಲಾತಿ ರೋಸ್ಟರ್, ಸೀಟು ಹಂಚಿಕೆಯ ನಿಯಮಗಳು ಮತ್ತು ವಿವಿಧ ವರ್ಗಗಳಿಗೆ ಸೀಟುಗಳನ್ನು ಹಂಚಿಕೆ ಮಾಡುವಾಗ ಕೈಗೊಂಡ ನಿರ್ಧಾರಗಳನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಬೇಕು ಎಂದು ಒತ್ತಾಯಿಸಿದೆ.

56 ಅಧ್ಯಯನ ಕೋರ್ಸ್‌ಗಳಲ್ಲಿ ಎಸ್‌ಟಿ ಸೀಟುಗಳೇ ಇಲ್ಲ

2026-27ನೇ ಸಾಲಿನ ಪಿಎಚ್‌ಡಿ ಸೀಟುಗಳ ಪಟ್ಟಿಯನ್ನು (ಸೀಟ್ ಮ್ಯಾಟ್ರಿಕ್ಸ್) ವಿಶ್ಲೇಷಿಸಿದಾಗ, ಪ್ರವೇಶಕ್ಕೆ ಸೀಟುಗಳನ್ನು ಪ್ರಕಟಿಸಿರುವ ಒಟ್ಟು 84 ಅಧ್ಯಯನ ಕಾರ್ಯಕ್ರಮಗಳ ಪೈಕಿ 56 ಕೋರ್ಸ್‌ಗಳಲ್ಲಿ ಒಂದೇ ಒಂದು ಎಸ್‌ಟಿ ಸೀಟನ್ನೂ ಮೀಸಲಿಡಲಾಗಿಲ್ಲ ಎಂದು ಬಾಪ್ಸಾ ಹೇಳಿದೆ. ಈ 56 ಕೋರ್ಸ್‌ಗಳಲ್ಲಿ 24 ಕಾರ್ಯಕ್ರಮಗಳಲ್ಲಿ ಆರ್ಥಿಕವಾಗಿ ದುರ್ಬಲ ವರ್ಗಗಳ (ಇಡಬ್ಲ್ಯೂಎಸ್) ಅಭ್ಯರ್ಥಿಗಳಿಗೆ ಸೀಟುಗಳನ್ನು ಮೀಸಲಿಡಲಾಗಿದೆ ಎಂದು ಸಂಘಟನೆ ತಿಳಿಸಿದೆ.

ವಿವಿಧ ವರ್ಗಗಳಿಗೆ ಸೀಟುಗಳನ್ನು ಹಂಚಿಕೆ ಮಾಡಿದ ಆಧಾರವೇನು ಎಂದು ಪ್ರಶ್ನಿಸಿರುವ ಬಾಪ್ಸಾ, ಅನೇಕ ಅಧ್ಯಯನ ಕೋರ್ಸ್‌ಗಳಲ್ಲಿ ಎಸ್‌ಟಿ ಸೀಟುಗಳೇ ಇಲ್ಲದಿರುವುದು ಐತಿಹಾಸಿಕವಾಗಿ ಅವಕಾಶಗಳಿಂದ ವಂಚಿತ ಸಮುದಾಯಗಳ ಪ್ರಾತಿನಿಧ್ಯಕ್ಕೆ ಧಕ್ಕೆಯುಂಟುಮಾಡುತ್ತದೆ ಎಂದು ಹೇಳಿದೆ.

ಸತತ ನಾಲ್ಕು ಪ್ರವೇಶ ಸುತ್ತುಗಳಲ್ಲಿಯೂ ಇದೇ ಮಾದರಿ ಮುಂದುವರಿದಿದೆ ಎಂದು ಸಂಘಟನೆ ಆರೋಪಿಸಿದೆ. 2024-25, 2025-26ರ ಮೊದಲ ಹಂತ, 2025-26ರ ಎರಡನೇ ಹಂತ ಮತ್ತು 2026-27ನೇ ಸಾಲಿನಲ್ಲಿ ಒಟ್ಟು 351 ಪಿಎಚ್‌ಡಿ ಸೀಟುಗಳನ್ನು ಹೊಂದಿದ್ದ 30 ಅಧ್ಯಯನ ಕಾರ್ಯಕ್ರಮಗಳಲ್ಲಿ ಒಂದರಲ್ಲೂ ಎಸ್‌ಟಿ ಸೀಟುಗಳನ್ನು ಪ್ರಕಟಿಸಿರಲಿಲ್ಲ ಎಂದು ಬಾಪ್ಸಾ ತಿಳಿಸಿದೆ.

ಶೇಕಡಾವಾರು ಆಧಾರಿತ ಮೀಸಲಾತಿ ವ್ಯವಸ್ಥೆಯ ಪ್ರಕಾರ, ಶೇ. 7.5ರ ಎಸ್‌ಟಿ ಮೀಸಲಾತಿಯಡಿ ಕನಿಷ್ಠ ಒಂದು ಸೀಟನ್ನು ಒದಗಿಸಲು ಒಂದು ಅಧ್ಯಯನ ಕೋರ್ಸ್‌ನಲ್ಲಿ ಕನಿಷ್ಠ ಏಳು ಸೀಟುಗಳಿರಬೇಕು ಎಂದು ಬಾಪ್ಸಾ ಹೇಳಿದೆ. ಆದರೆ, ಯುಜಿಸಿ/ಸಿಎಸ್‌ಐಆರ್ ನೆಟ್ ಪರೀಕ್ಷೆ ಮತ್ತು ನೆಟ್-ಜೆಆರ್‌ಎಫ್ ಸೇರಿದಂತೆ ವಿವಿಧ ಪ್ರವೇಶ ಮಾರ್ಗಗಳ ನಡುವೆ ಸೀಟುಗಳನ್ನು ವಿಭಜಿಸುವುದರಿಂದ ಮೀಸಲಾತಿ ಸೀಟುಗಳ ಹಂಚಿಕೆಯ ಮೇಲೂ ಪರಿಣಾಮ ಉಂಟಾಗಬಹುದು ಎಂದು ಸಂಘಟನೆ ಅಭಿಪ್ರಾಯಪಟ್ಟಿದೆ.

ಇದಕ್ಕೆ ಉದಾಹರಣೆಯಾಗಿ, ಸಂಸ್ಕೃತ ಮತ್ತು ಭಾರತೀಯ ಅಧ್ಯಯನಗಳ ಶಾಲೆಯನ್ನು (ಸ್ಕೂಲ್ ಆಫ್ ಸಂಸ್ಕೃತ ಅಂಡ್ ಇಂಡಿಕ್ ಸ್ಟಡೀಸ್) ಬಾಪ್ಸಾ ಉಲ್ಲೇಖಿಸಿದೆ. ಈ ವಿಭಾಗದಲ್ಲಿ ಒಟ್ಟು 12 ಸೀಟುಗಳಿದ್ದು, ಎರಡು ಪ್ರವೇಶ ಮಾರ್ಗಗಳಿಗೆ ತಲಾ ಆರು ಸೀಟುಗಳನ್ನು ಹಂಚಲಾಗಿದೆ ಎಂದು ಸಂಘಟನೆ ತಿಳಿಸಿದೆ. ಒಟ್ಟು 12 ಸೀಟುಗಳಿಗೆ ಶೇ. 7.5ರ ಮೀಸಲಾತಿ ಅನ್ವಯಿಸಿದರೆ ಒಂದು ಎಸ್‌ಟಿ ಸೀಟು ಬರಬೇಕಾಗುತ್ತದೆ. ಆದರೆ, ಆರು ಸೀಟುಗಳ ಎರಡು ಪ್ರತ್ಯೇಕ ಗುಂಪುಗಳಾಗಿ ವಿಭಜಿಸಿದಾಗ ಮೀಸಲಾತಿಯನ್ನು ಹೇಗೆ ಅನ್ವಯಿಸಲಾಗುತ್ತದೆ ಎಂಬ ಪ್ರಶ್ನೆ ಎದುರಾಗುತ್ತದೆ ಎಂದು ಬಾಪ್ಸಾ ಹೇಳಿದೆ.

ಸೀಟುಗಳನ್ನು ವಿಭಜಿಸುವ ವಿಧಾನಕ್ಕೆ ವಿಶ್ವವಿದ್ಯಾಲಯ ವಿವರಣೆ ನೀಡಬೇಕು, ವಿವಿಧ ಪ್ರವೇಶ ವಿಧಾನಗಳಡಿ ವರ್ಗವಾರು ಸೀಟು ಹಂಚಿಕೆಯ ವಿವರಗಳನ್ನು ಬಹಿರಂಗಪಡಿಸಬೇಕು ಎಂದು ಸಂಘಟನೆ ಒತ್ತಾಯಿಸಿದೆ.

ಇದಲ್ಲದೆ, 2024-25ನೇ ಸಾಲಿನ ಪ್ರವೇಶ ಪ್ರಕ್ರಿಯೆಯಲ್ಲಿ ಯುಜಿಸಿ/ಸಿಎಸ್‌ಐಆರ್ ನೆಟ್, ನೆಟ್-ಜೆಆರ್‌ಎಫ್ ಮತ್ತು ಗೇಟ್ ಪ್ರವೇಶ ಮಾರ್ಗಗಳ ಮೂಲಕ ಸುಮಾರು 200 ಪಿಎಚ್‌ಡಿ ಸೀಟುಗಳು ಖಾಲಿ ಉಳಿದಿದ್ದವು ಎಂದು ಬಾಪ್ಸಾ ಹೇಳಿದೆ. ಈ ಸೀಟುಗಳನ್ನು ವರ್ಗವಾರು ಹೇಗೆ ಹಂಚಿಕೆ ಮಾಡಲಾಗಿತ್ತು, ಅವು ಖಾಲಿ ಉಳಿಯಲು ಕಾರಣವೇನು ಎಂಬುದನ್ನು ವಿಶ್ವವಿದ್ಯಾಲಯ ಬಹಿರಂಗಪಡಿಸಬೇಕು ಎಂದು ಆಗ್ರಹಿಸಿದೆ.

ನಿಗದಿತ ಮಾನದಂಡಕ್ಕಿಂತ ಕಡಿಮೆ ಎಸ್‌ಟಿ – ಎಸ್‌ಸಿ ಸೀಟುಗಳ ಪ್ರಮಾಣ

ಬಾಪ್ಸಾ ಬಿಡುಗಡೆ ಮಾಡಿರುವ ಅಂಕಿಅಂಶಗಳ ಪ್ರಕಾರ, ಪಿಎಚ್‌ಡಿ ಪ್ರವೇಶದಲ್ಲಿ ಎಸ್‌ಟಿ ಸೀಟುಗಳ ಪ್ರಮಾಣವು 2021-22ರಲ್ಲಿ ಶೇ. 6.8, 2022-23ರಲ್ಲಿ ಶೇ. 6.1, 2023-24ರಲ್ಲಿ ಶೇ. 6.2, 2024-25ರಲ್ಲಿ ಶೇ. 7.5, 2025-26ರಲ್ಲಿ ಶೇ. 7.2, 2025-26ರ ಎರಡನೇ ಹಂತದಲ್ಲಿ ಶೇ. 5.6 ಮತ್ತು 2026-27ರಲ್ಲಿ ಶೇ. 5.3ರಷ್ಟಿತ್ತು.

ನಿಗದಿತ ಶೇ. 7.5ರ ಮಾನದಂಡಕ್ಕೆ ಹೋಲಿಸಿದಾಗ, 2025-26ನೇ ಸಾಲಿನಲ್ಲಿ ಎಸ್‌ಟಿ ಸೀಟುಗಳ ಪ್ರಮಾಣದಲ್ಲಿನ ಕೊರತೆಯು ಶೇ. 25.2ರಷ್ಟಿದ್ದರೆ, 2026-27ರಲ್ಲಿ ಅದು ಶೇ. 28.7ಕ್ಕೆ ತಲುಪಿದೆ ಎಂದು ಬಾಪ್ಸಾ ತಿಳಿಸಿದೆ.

ಪರಿಶಿಷ್ಟ ಜಾತಿಗಳ (ಎಸ್‌ಸಿ) ಸೀಟುಗಳ ಪ್ರಮಾಣವೂ ಪರಿಶೀಲಿಸಿದ ಏಳು ಪ್ರವೇಶ ಸುತ್ತುಗಳಲ್ಲಿ ಯಾವುದರಲ್ಲಿಯೂ ನಿಗದಿತ ಶೇ. 15ರ ಮಾನದಂಡವನ್ನು ತಲುಪಿಲ್ಲ ಎಂದು ಸಂಘಟನೆ ಆರೋಪಿಸಿದೆ. ಎಸ್‌ಸಿ ಪ್ರಾತಿನಿಧ್ಯದಲ್ಲಿನ ಕೊರತೆಯು ಶೇ. 3.4ರಿಂದ ಶೇ. 14.4ರ ವ್ಯಾಪ್ತಿಯಲ್ಲಿತ್ತು. ಇತರ ವರ್ಗಗಳಿಗೆ ನಿಗದಿಪಡಿಸಿದ ಮಾನದಂಡಗಳನ್ನು ಪಾಲಿಸಲಾಗಿತ್ತು ಅಥವಾ ಅವುಗಳಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಸೀಟುಗಳನ್ನು ಹಂಚಲಾಗಿತ್ತು ಎಂದು ಬಾಪ್ಸಾ ಹೇಳಿದೆ.

ಈ ಏಳು ಪ್ರವೇಶ ಸುತ್ತುಗಳಲ್ಲಿ ಒಟ್ಟು 5,270 ಸೀಟುಗಳಿದ್ದವು. ಅವುಗಳಲ್ಲಿ 743 ಸೀಟುಗಳು ಎಸ್‌ಸಿ ಅಭ್ಯರ್ಥಿಗಳಿಗೆ ಮತ್ತು 345 ಸೀಟುಗಳು ಎಸ್‌ಟಿ ಅಭ್ಯರ್ಥಿಗಳಿಗೆ ಮೀಸಲಾಗಿದ್ದವು ಎಂದು ಸಂಘಟನೆ ತಿಳಿಸಿದೆ. ಒಟ್ಟು ಸೀಟುಗಳಿಗೆ ಹೋಲಿಸಿದರೆ, ಎಸ್‌ಸಿ ಸೀಟುಗಳ ಪ್ರಮಾಣ ಶೇ. 14.08 ಮತ್ತು ಎಸ್‌ಟಿ ಸೀಟುಗಳ ಪ್ರಮಾಣ ಶೇ. 6.55ರಷ್ಟಾಗಿದೆ. ಇದು ಎಸ್‌ಸಿಗಳಿಗೆ ನಿಗದಿಪಡಿಸಿರುವ ಶೇ. 15 ಮತ್ತು ಎಸ್‌ಟಿಗಳಿಗೆ ನಿಗದಿಪಡಿಸಿರುವ ಶೇ. 7.5ರ ಮಾನದಂಡಕ್ಕಿಂತ ಕಡಿಮೆಯಾಗಿದೆ.

ಈ ಅಂಕಿಅಂಶಗಳು ಪಿಎಚ್‌ಡಿ ಪ್ರವೇಶದಲ್ಲಿ ಅಂಚಿನಲ್ಲಿರುವ ಸಮುದಾಯಗಳಿಗೆ ಸೂಕ್ತ ಪ್ರಾತಿನಿಧ್ಯ ಕಲ್ಪಿಸುವಲ್ಲಿ ನಿರಂತರ ವೈಫಲ್ಯವಿರುವುದನ್ನು ತೋರಿಸುತ್ತವೆ ಎಂದು ಬಾಪ್ಸಾ ಅಭಿಪ್ರಾಯಪಟ್ಟಿದೆ.

ಜೆಎನ್‌ಯು ವಿಭಾಗಗಳ ನಡುವೆ ಸೀಟು ಹಂಚಿಕೆಯಲ್ಲಿ ಅಸಮಾನತೆ

2026-27ನೇ ಸಾಲಿನ ಸೀಟುಗಳ ಪಟ್ಟಿಯನ್ನು ಶಾಲಾವಾರು ವಿಶ್ಲೇಷಿಸಿದಾಗ, ಜೆಎನ್‌ಯುನ ವಿವಿಧ ಶೈಕ್ಷಣಿಕ ಘಟಕಗಳಲ್ಲಿ ಎಸ್‌ಟಿ ಸೀಟುಗಳ ಹಂಚಿಕೆಯಲ್ಲಿ ವ್ಯತ್ಯಾಸಗಳಿರುವುದು ಕಂಡುಬಂದಿದೆ ಎಂದು ಬಾಪ್ಸಾ ಹೇಳಿದೆ.

14 ಕೇಂದ್ರಗಳು ಮತ್ತು 21 ಅಧ್ಯಯನ ಕಾರ್ಯಕ್ರಮಗಳನ್ನು ಹೊಂದಿರುವ ಅಂತಾರಾಷ್ಟ್ರೀಯ ಅಧ್ಯಯನಗಳ ವಿಭಾಗಗಳಲ್ಲಿ (ಸ್ಕೂಲ್ ಆಫ್ ಇಂಟರ್‌ನ್ಯಾಷನಲ್ ಸ್ಟಡೀಸ್) ನಿರೀಕ್ಷಿತ ಎಂಟು ಎಸ್‌ಟಿ ಸೀಟುಗಳ ಬದಲಿಗೆ ಕೇವಲ ನಾಲ್ಕು ಸೀಟುಗಳನ್ನು ಒದಗಿಸಲಾಗಿದೆ ಎಂದು ಸಂಘಟನೆ ತಿಳಿಸಿದೆ. ಇದು ನಿರೀಕ್ಷಿತ ಹಂಚಿಕೆಗೆ ಹೋಲಿಸಿದರೆ ಶೇ. 50ರಷ್ಟು ಕೊರತೆಯಾಗಿದೆ.

ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿ ಅಧ್ಯಯನಗಳ ವಿಭಾಗಗಳಲ್ಲಿ (ಸ್ಕೂಲ್ ಆಫ್ ಲ್ಯಾಂಗ್ವೇಜ್, ಲಿಟರೇಚರ್ ಅಂಡ್ ಕಲ್ಚರ್ ಸ್ಟಡೀಸ್) ಆರು ಎಸ್‌ಟಿ ಸೀಟುಗಳನ್ನು ಪ್ರಕಟಿಸಲಾಗಿದ್ದು, ಇದು ನಿರೀಕ್ಷಿತ ಹಂಚಿಕೆಗಿಂತ ಶೇ. 33.3ರಷ್ಟು ಕಡಿಮೆಯಾಗಿದೆ ಎಂದು ಬಾಪ್ಸಾ ಹೇಳಿದೆ.

ಸಾಮಾಜಿಕ ವಿಜ್ಞಾನಗಳ ವಿಭಾಗದಲ್ಲಿ (ಸ್ಕೂಲ್ ಆಫ್ ಸೋಷಿಯಲ್ ಸೈನ್ಸಸ್) ಒಟ್ಟು 19 ಅಧ್ಯಯನ ಕಾರ್ಯಕ್ರಮಗಳಿದ್ದು, ಅವುಗಳಲ್ಲಿ ಕೇವಲ ಏಳು ಕಾರ್ಯಕ್ರಮಗಳಲ್ಲಿ ಮಾತ್ರ ಎಸ್‌ಟಿ ಸೀಟುಗಳನ್ನು ಒದಗಿಸಲಾಗಿದೆ ಎಂದು ಸಂಘಟನೆ ತಿಳಿಸಿದೆ.

ಇನ್ನೊಂದೆಡೆ, ಗಣಕ ಮತ್ತು ಸಮಗ್ರ ವಿಜ್ಞಾನಗಳ ಶಾಲೆ (ಸ್ಕೂಲ್ ಆಫ್ ಕಂಪ್ಯೂಟೇಶನಲ್ ಅಂಡ್ ಇಂಟಿಗ್ರೇಟಿವ್ ಸೈನ್ಸಸ್), ಜೈವಿಕ ತಂತ್ರಜ್ಞಾನ ಶಾಲೆ (ಸ್ಕೂಲ್ ಆಫ್ ಬಯೋಟೆಕ್ನಾಲಜಿ) ಮತ್ತು ಸಂಸ್ಕೃತ ಹಾಗೂ ಭಾರತೀಯ ಅಧ್ಯಯನಗಳ ಶಾಲೆಗಳಲ್ಲಿ ಪ್ರಕಟಿತ ಸೀಟುಗಳ ಪಟ್ಟಿಯ ಪ್ರಕಾರ ಯಾವುದೇ ಎಸ್‌ಟಿ ಸೀಟುಗಳಿಲ್ಲ ಎಂದು ಬಾಪ್ಸಾ ಆರೋಪಿಸಿದೆ.

ಜೆಎನ್‌ಯುನ ಒಟ್ಟು 13 ಶಾಲೆಗಳ ಪೈಕಿ ಕೇವಲ ನಾಲ್ಕು ಶಾಲೆಗಳು ಮಾತ್ರ ನಿರೀಕ್ಷಿತ ಎಸ್‌ಟಿ ಸೀಟುಗಳ ಪ್ರಮಾಣವನ್ನು ಒದಗಿಸಿವೆ ಎಂದು ಸಂಘಟನೆ ಹೇಳಿದೆ. ಸಾಮಾಜಿಕ ವಿಜ್ಞಾನಗಳ ಶಾಲೆ, ಎಂಜಿನಿಯರಿಂಗ್ ಶಾಲೆ, ಜೈವಿಕ ತಂತ್ರಜ್ಞಾನ ಶಾಲೆ ಮತ್ತು ಭೌತಿಕ ವಿಜ್ಞಾನಗಳ ಶಾಲೆಗಳಲ್ಲಿ ಎಸ್‌ಸಿ ಸೀಟುಗಳ ಹಂಚಿಕೆಯಲ್ಲಿಯೂ ಕೊರತೆಯಿರುವುದನ್ನು ತನ್ನ ವಿಶ್ಲೇಷಣೆ ಗುರುತಿಸಿದೆ ಎಂದು ತಿಳಿಸಿದೆ.

ಮೀಸಲಾತಿ ನಿಯಮಗಳನ್ನು ವಿಶ್ವವಿದ್ಯಾಲಯದಾದ್ಯಂತ ಏಕರೂಪವಾಗಿ ಜಾರಿಗೊಳಿಸಲಾಗುತ್ತಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಪ್ರತಿಯೊಂದು ಅಧ್ಯಯನ ಕಾರ್ಯಕ್ರಮ ಮತ್ತು ಕೇಂದ್ರದ ಮಟ್ಟದಲ್ಲಿ ಮೀಸಲಾತಿ ಸೀಟುಗಳ ಹಂಚಿಕೆಯ ಲೆಕ್ಕಪರಿಶೋಧನೆ ನಡೆಸಬೇಕು ಎಂದು ಬಾಪ್ಸಾ ಆಗ್ರಹಿಸಿದೆ.

ಮೌಖಿಕ ಸಂದರ್ಶನಗಳ ಮೌಲ್ಯಮಾಪನದ ಬಗ್ಗೆಯೂ ಬಾಪ್ಸಾ ಆಕ್ಷೇಪ

ಪಿಎಚ್‌ಡಿ ಸೀಟು ಹಂಚಿಕೆಯ ವಿವಾದದ ನಡುವೆ, ಪಿಎಚ್‌ಡಿ ಪ್ರವೇಶದ ಮೌಖಿಕ ಸಂದರ್ಶನಗಳಲ್ಲಿ (ವೈವಾ ವೋಸ್) ಜಾತಿ ಆಧಾರಿತ ತಾರತಮ್ಯ ನಡೆಯುತ್ತಿದೆ ಎಂಬ ಆತಂಕವನ್ನೂ ಬಾಪ್ಸಾ ಪುನರುಚ್ಚರಿಸಿದೆ.

ಸಂಘಟನೆ ವಿವರಿಸಿರುವ ಪ್ರವೇಶ ವ್ಯವಸ್ಥೆಯ ಪ್ರಕಾರ, ಲಿಖಿತ ಪರೀಕ್ಷೆಗೆ ಶೇ. 70ರಷ್ಟು ಮತ್ತು ಮೌಖಿಕ ಸಂದರ್ಶನಕ್ಕೆ ಶೇ. 30ರಷ್ಟು ಅಂಕಗಳನ್ನು ನೀಡಲಾಗುತ್ತದೆ. ಎಸ್‌ಸಿ, ಎಸ್‌ಟಿ ಮತ್ತು ಒಬಿಸಿ ಸಮುದಾಯಗಳ ಅಭ್ಯರ್ಥಿಗಳು ಸಂದರ್ಶನದ ವೇಳೆ ತಾರತಮ್ಯವನ್ನು ಎದುರಿಸಿದ್ದಾರೆ ಎಂದು ಬಾಪ್ಸಾ ಆರೋಪಿಸಿದೆ. ಲಿಖಿತ ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಗಳಿಸಿದ ಅಭ್ಯರ್ಥಿಗಳಿಗೆ ಮೌಖಿಕ ಸಂದರ್ಶನದಲ್ಲಿ ಅತ್ಯಂತ ಕಡಿಮೆ ಅಂಕಗಳನ್ನು ನೀಡಿರುವ ಪ್ರಕರಣಗಳೂ ಇವೆ ಎಂದು ಸಂಘಟನೆ ಹೇಳಿದೆ.

2012ರ ರಾಜೀವ್ ಭಟ್ ಸಮಿತಿಯ ವರದಿಯನ್ನು ಉಲ್ಲೇಖಿಸಿರುವ ಬಾಪ್ಸಾ, ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ಹೋಲಿಸಿದರೆ ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳು ಮೌಖಿಕ ಸಂದರ್ಶನದಲ್ಲಿ ಶೇ. 19ರಿಂದ 20ರಷ್ಟು ಕಡಿಮೆ ಅಂಕಗಳನ್ನು ಪಡೆದಿದ್ದರು, ಒಬಿಸಿ ಅಭ್ಯರ್ಥಿಗಳು ಶೇ. 11ರಷ್ಟು ಕಡಿಮೆ ಅಂಕಗಳನ್ನು ಪಡೆದಿದ್ದರು ಎಂದು ವರದಿ ತಿಳಿಸಿದೆ ಎಂಬುದಾಗಿ ಹೇಳಿದೆ.

2013ರ ಸುಖದೇವ್ ಥೋರಟ್ ಸಮಿತಿಯ ವರದಿಯನ್ನೂ ಸಂಘಟನೆ ಉಲ್ಲೇಖಿಸಿದೆ. ಮೌಖಿಕ ಸಂದರ್ಶನದ ಅಂಕಗಳನ್ನು ಸಂಶೋಧನಾ ಪ್ರಸ್ತಾವನೆ, ವಿಷಯದ ಜ್ಞಾನ ಮತ್ತು ವಿಶ್ಲೇಷಣಾತ್ಮಕ ಗ್ರಹಿಕೆ ಎಂಬ ಮೂರು ವಿಭಾಗಗಳಾಗಿ ವಿಂಗಡಿಸಬೇಕು ಎಂದು ಈ ಸಮಿತಿ ಶಿಫಾರಸು ಮಾಡಿತ್ತು ಎಂದು ಬಾಪ್ಸಾ ತಿಳಿಸಿದೆ.

ಜೆಎನ್‌ಯು ರಚಿಸಿದ್ದ ಅಬ್ದುಲ್ ನಫೆ ಸಮಿತಿಯು 2016ರಲ್ಲಿ ಮೌಖಿಕ ಸಂದರ್ಶನದ ಅಂಕಗಳನ್ನು ಶೇ. 30ರಿಂದ ಶೇ. 15ಕ್ಕೆ ಇಳಿಸಲು ಶಿಫಾರಸು ಮಾಡಿತ್ತು ಎಂದು ಸಂಘಟನೆ ಹೇಳಿದೆ.

ಮೌಖಿಕ ಸಂದರ್ಶನದ ಪ್ರಕ್ರಿಯೆಯು ತಾರತಮ್ಯದ ಮೂಲಕ ಅಭ್ಯರ್ಥಿಗಳನ್ನು ಹೊರಗಿಡಲು ಅವಕಾಶ ಕಲ್ಪಿಸಬಹುದು ಎಂಬ ಕಾರಣಕ್ಕೆ 2016ರಲ್ಲಿಯೇ ಅದನ್ನು ಸಂಪೂರ್ಣವಾಗಿ ರದ್ದುಗೊಳಿಸುವಂತೆ ಬಾಪ್ಸಾ ಒತ್ತಾಯಿಸಿತ್ತು. ನೆಟ್-ಜೆಆರ್‌ಎಫ್ ಆಧಾರಿತ ಪಿಎಚ್‌ಡಿ ಪ್ರವೇಶವನ್ನೂ ರದ್ದುಗೊಳಿಸಬೇಕು ಎಂದು ಸಂಘಟನೆ ಆಗ್ರಹಿಸಿದೆ. ಈ ಪ್ರವೇಶ ಮಾರ್ಗದಲ್ಲಿ ಮೌಖಿಕ ಸಂದರ್ಶನಕ್ಕೆ ಶೇ. 100ರಷ್ಟು ಅಂಕಗಳ ತೂಕ ನೀಡಲಾಗುತ್ತದೆ ಎಂಬುದು ಅದರ ವಾದವಾಗಿದೆ.

ಬೋಧಕರ ಮಾರ್ಗದರ್ಶನ ಮಿತಿಯೂ ಪಿಎಚ್‌ಡಿ ಸೀಟುಗಳ ಕೊರತೆಗೆ ಕಾರಣ?

ಬೋಧಕ ಸಿಬ್ಬಂದಿ ಮಾರ್ಗದರ್ಶನ ನೀಡಬಹುದಾದ ಸಂಶೋಧನಾ ವಿದ್ಯಾರ್ಥಿಗಳ ಸಂಖ್ಯೆಗೆ ವಿಧಿಸಿರುವ ಮಿತಿಯೂ ಪಿಎಚ್‌ಡಿ ಪ್ರವೇಶಗಳ ಸಂಖ್ಯೆ ಕುಸಿಯಲು ಕಾರಣವಾಗಿದೆ ಎಂದು ಬಾಪ್ಸಾ ಹೇಳಿದೆ.

ಸಂಘಟನೆಯ ಪ್ರಕಾರ, ಸಹಾಯಕ ಪ್ರಾಧ್ಯಾಪಕರು ಗರಿಷ್ಠ ನಾಲ್ಕು, ಸಹ ಪ್ರಾಧ್ಯಾಪಕರು ಆರು ಮತ್ತು ಪ್ರಾಧ್ಯಾಪಕರು ಎಂಟು ಪಿಎಚ್‌ಡಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಬಹುದು.

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಇತರ ಹಿಂದುಳಿದ ವರ್ಗಗಳಿಗೆ ಸೇರಿದ ಬೋಧಕ ಸಿಬ್ಬಂದಿಗೆ “ಸೂಕ್ತ ಅಭ್ಯರ್ಥಿ ಕಂಡುಬಂದಿಲ್ಲ” (ನಾಟ್ ಫೌಂಡ್ ಸೂಟಬಲ್-ಎನ್‌ಎಫ್‌ಎಸ್) ಎಂಬ ವರ್ಗದಡಿ ಬಡ್ತಿ ನಿರಾಕರಿಸಿರುವುದು ಲಭ್ಯವಿರುವ ಪಿಎಚ್‌ಡಿ ಸೀಟುಗಳ ಸಂಖ್ಯೆ ಕಡಿಮೆಯಾಗಲು ಕಾರಣವಾಗಿದೆ ಎಂದು ಬಾಪ್ಸಾ ಆರೋಪಿಸಿದೆ.

ಬಾಪ್ಸಾದ ಒಂಬತ್ತು ಬೇಡಿಕೆಗಳು

2026-27ನೇ ಸಾಲಿನ ಪಿಎಚ್‌ಡಿ ಪ್ರವೇಶಕ್ಕೆ ತಕ್ಷಣವೇ ಹೆಚ್ಚುವರಿಯಾಗಿ 15 ಎಸ್‌ಟಿ ಸೀಟುಗಳನ್ನು ಸೇರಿಸುವುದು ಮತ್ತು ಸೀಟುಗಳ ಕೊರತೆಗೆ ಸಂಬಂಧಿಸಿದಂತೆ ಅಧಿಕೃತ ಸ್ಪಷ್ಟನೆ ನೀಡುವುದು ಸೇರಿದಂತೆ ಒಟ್ಟು ಒಂಬತ್ತು ಬೇಡಿಕೆಗಳನ್ನು ಬಾಪ್ಸಾ ಮುಂದಿಟ್ಟಿದೆ.

ಮುಂದಿನ ಪಿಎಚ್‌ಡಿ ಪ್ರವೇಶ ಕೈಪಿಡಿಗಳಲ್ಲಿ ವಿಶ್ವವಿದ್ಯಾಲಯ, ಶಾಲೆ, ಕೇಂದ್ರ ಮತ್ತು ಅಧ್ಯಯನ ಕಾರ್ಯಕ್ರಮಗಳ ಮಟ್ಟದಲ್ಲಿ ವಿವಿಧ ವರ್ಗಗಳಿಗೆ ಸೀಟುಗಳನ್ನು ಹಂಚಿಕೆ ಮಾಡುವ ವಿಧಾನವನ್ನು ಸ್ಪಷ್ಟವಾಗಿ ಪ್ರಕಟಿಸಬೇಕು ಎಂದು ಸಂಘಟನೆ ಒತ್ತಾಯಿಸಿದೆ. ಇದರಲ್ಲಿ ಅನ್ವಯವಾಗುವ ಮೀಸಲಾತಿ ನಿಯಮಗಳು, ರೋಸ್ಟರ್ ವ್ಯವಸ್ಥೆ ಮತ್ತು ವಿಶ್ವವಿದ್ಯಾಲಯದ ಪ್ರವೇಶ ಸಮಿತಿಗಳು ಕೈಗೊಂಡ ನಿರ್ಧಾರಗಳ ವಿವರಗಳೂ ಇರಬೇಕು ಎಂದು ಆಗ್ರಹಿಸಿದೆ.

ರಾಜೀವ್ ಭಟ್, ಸುಖದೇವ್ ಥೋರಟ್ ಮತ್ತು ಅಬ್ದುಲ್ ನಫೆ ಸಮಿತಿಗಳ ಶಿಫಾರಸುಗಳನ್ನು ಜಾರಿಗೊಳಿಸಬೇಕು, ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ ಪ್ರವೇಶ ಪರೀಕ್ಷೆಯನ್ನು (ಜೆಎನ್‌ಯುಇಇ) ಪುನಃ ಜಾರಿಗೆ ತರಬೇಕು ಹಾಗೂ ನೆಟ್-ಜೆಆರ್‌ಎಫ್ ಆಧಾರಿತ ಪಿಎಚ್‌ಡಿ ಪ್ರವೇಶ ವ್ಯವಸ್ಥೆಯನ್ನು ಸ್ಥಗಿತಗೊಳಿಸಬೇಕು ಎಂಬ ಬೇಡಿಕೆಗಳನ್ನೂ ಸಂಘಟನೆ ಮುಂದಿಟ್ಟಿದೆ.

ಇದರ ಜೊತೆಗೆ, ಪ್ರತಿಯೊಂದು ಅಧ್ಯಯನ ಕಾರ್ಯಕ್ರಮ ಮತ್ತು ಕೇಂದ್ರದಲ್ಲಿ ಮೀಸಲಾತಿ ನಿಯಮಗಳ ಅನುಷ್ಠಾನದ ಕುರಿತು ಪ್ರತ್ಯೇಕ ಲೆಕ್ಕಪರಿಶೋಧನೆ ನಡೆಸಬೇಕು ಎಂದು ಬಾಪ್ಸಾ ಒತ್ತಾಯಿಸಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಎಸ್‌ಐಆರ್ ವಿರುದ್ಧ ದೆಹಲಿಯಲ್ಲಿ ಭುಗಿಲೆದ್ದ ಪ್ರತಿಭಟನೆ: ಚುನಾವಣಾ ಆಯೋಗದತ್ತ ಮೆರವಣಿಗೆ, ಹಲವರನ್ನು ವಶಕ್ಕೆ ಪಡೆದ ಪೊಲೀಸರು 

ನವದೆಹಲಿ: ದೇಶದ ಹಲವು ರಾಜ್ಯಗಳಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯಲ್ಲಿ ಮತದಾರರ ಹೆಸರುಗಳನ್ನು ಅಳಿಸಲಾಗುತ್ತಿದೆ ಎಂದು ಆರೋಪಿಸಿ, ದೆಹಲಿಯಲ್ಲಿ ಶುಕ್ರವಾರ ನಡೆದ ‘ಪೀಪಲ್ ಅಗೇನ್ಸ್ಟ್ ಎಸ್‌ಐಆರ್’ ಪ್ರತಿಭಟನಾ...

“ಭಿನ್ನಾಭಿಪ್ರಾಯ ಅಪರಾಧವಲ್ಲ”: ಬಾಬರಿ ಮಸೀದಿ ತೀರ್ಪಿನ ವಿರುದ್ಧ ಪೋಸ್ಟರ್ ಹಾಕಿದ್ದ 13 ಜನರ ಮೇಲಿನ ದೇಶದ್ರೋಹ ಪ್ರಕರಣ ರದ್ದುಪಡಿಸಿದ ಹೈಕೋರ್ಟ್

ಮಂಗಳೂರು: ಸುಪ್ರೀಂ ಕೋರ್ಟ್‌ನ ಬಾಬರಿ ಮಸೀದಿ ತೀರ್ಪಿನ ವಿರುದ್ಧ ಭಿನ್ನಾಭಿಪ್ರಾಯ ವ್ಯಕ್ತಪಡಿಸುವ ಪೋಸ್ಟರ್‌ಗಳನ್ನು ಹಾಕಿದ್ದ ಆರೋಪದ ಮೇಲೆ 13 ಜನರ ವಿರುದ್ಧ ದಾಖಲಾಗಿದ್ದ ಪ್ರಕರಣವನ್ನು ಕರ್ನಾಟಕ ಹೈಕೋರ್ಟ್ ರದ್ದುಗೊಳಿಸಿದೆ. ಸರ್ಕಾರದ ಅಥವಾ ನ್ಯಾಯಾಲಯದ...

ಯುಪಿ ಎಂಎಲ್‌ಸಿ ಚುನಾವಣೆ: ‘ಕಳ್ಳಮತದಾನ’ ಹಾಗೂ ‘ಬೂತ್ ಕ್ಯಾಪ್ಚರಿಂಗ್’ ರಂಪಾಟ; ಬಿಜೆಪಿ ನಾಯಕರು ಹಾಗೂ ಅಧಿಕಾರಿಗಳ ವಿರುದ್ಧ ಎಸ್‌ಪಿ ಗಂಭೀರ ಆರೋಪ!

ಉತ್ತರ ಪ್ರದೇಶದಲ್ಲಿ ನಡೆಯುತ್ತಿರುವ ಪ್ರತಿಷ್ಠಿತ ಎಂಎಲ್‌ಸಿ (ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರಗಳ) ಚುನಾವಣೆಯ ಮತದಾನದ ವೇಳೆ ಆಡಳಿತಾರೂಢ ಬಿಜೆಪಿ ನಾಯಕರು ಮತ್ತು ಸರ್ಕಾರಿ ಅಧಿಕಾರಿಗಳು ಸಾಲು ಸಾಲು ಚುನಾವಣಾ ಅಕ್ರಮಗಳಲ್ಲಿ ಭಾಗಿಯಾಗಿದ್ದಾರೆ ಎಂಬ...

ತಮಿಳುನಾಡು| ದಲಿತ ವಿದ್ಯಾರ್ಥಿ ಸಾವು; ಶಾಲೆಯಲ್ಲಿ ಜಾತಿ ತಾರತಮ್ಯ ಎಂದು ಆರೋಪಿಸಿದ ಪೋಷಕರು

ತಮಿಳುನಾಡಿನ ಕೊಯಮತ್ತೂರಿನಲ್ಲಿ 11ನೇ ತರಗತಿಯ ದಲಿತ ವಿದ್ಯಾರ್ಥಿಯೊಬ್ಬ ಶಾಲೆಯ ಪೂಜಾ ರಜೆ ಮುಗಿಸಿ ಮರಳಿ ಶಾಲೆಗೆ ತೆರಳಿದ ದಿನವೇ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ. ಶಾಲೆಯಲ್ಲಿ ತನ್ನ ಮಗ ಜಾತಿ ಆಧಾರಿತ ತಾರತಮ್ಯವನ್ನು ಎದುರಿಸುತ್ತಿದ್ದ...

ಅರುಣಾಚಲ ಪ್ರದೇಶದಲ್ಲಿ ಚೀನಾ ಜೊತೆ ಮುಂದುವರಿದ ಮುಖಾಮುಖಿ: ಮೋದಿ ಸರ್ಕಾರದ ‘ಕಿವುಡಗೊಳಿಸುವ ಮೌನ’ವನ್ನು ಟೀಕಿಸಿದ ಕಾಂಗ್ರೆಸ್

ನವದೆಹಲಿ: ಅರುಣಾಚಲ ಪ್ರದೇಶದ ಗಡಿಯಲ್ಲಿ ಚೀನಾದ ಸೈನಿಕರೊಂದಿಗೆ ಹಲವು ಸ್ಥಳಗಳಲ್ಲಿ ಮುಖಾಮುಖಿ ಮುಂದುವರಿದಿದೆ ಎಂಬ ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ (ಐಟಿಬಿಪಿ) ಮಹಾನಿರ್ದೇಶಕ ಶತ್ರುಜೀತ್ ಕಪೂರ್ ಅವರ ಹೇಳಿಕೆಯ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ...

ಅರುಣಾಚಲದಲ್ಲಿ ಚೀನಾ ಒಳನುಗ್ಗುವಿಕೆ ದೃಢ: ಬ್ರಿಕ್ಸ್ ಸಮಯದಲ್ಲೂ ಮುಂದುವರಿದಿತ್ತು ಗಡಿ ಬಿಕ್ಕಟ್ಟು; ಐಟಿಬಿಪಿ ಡಿಜಿ ಹೇಳಿಕೆಯಿಂದ ಕೇಂದ್ರ ಸರ್ಕಾರದ ಮೌನ ಬಟಾಬಯಲು!

ಭಾರತ ಮತ್ತು ಚೀನಾ ಗಡಿಯ ನೈಜ ಪರಿಸ್ಥಿತಿಯ ಕುರಿತು ಕೇಂದ್ರ ಸರ್ಕಾರವು ಬಿಂಬಿಸುತ್ತಾ ಬಂದಿರುವ ಸಮಾಧಾನಕರ ಚಿತ್ರಣದ ರಾಜತಾಂತ್ರಿಕ ಧೋರಣೆಯ ವಿರುದ್ಧ ಗಂಭೀರ ಪ್ರಶ್ನೆಗಳು ಎದ್ದಿವೆ. ಅರುಣಾಚಲ ಪ್ರದೇಶದ ಗಡಿ ಭಾಗಗಳಲ್ಲಿ ಚೀನಾ...

ಚುನಾವಣಾ ಆಯೋಗದಲ್ಲಿ ಆಡಳಿತಾತ್ಮಕ ಭಿನ್ನಮತ: ಆರ್‌ಟಿಐ ದಾಖಲೆಗಳಿಂದ ಬಯಲಾಯ್ತು ಆಂತರಿಕ ಸಂಘರ್ಷ!

ಭಾರತೀಯ ಚುನಾವಣಾ ಆಯೋಗದ ಉನ್ನತ ಆಡಳಿತಾತ್ಮಕ ಮಟ್ಟದಲ್ಲಿ ಮೂಡಿದ್ದ ಆಂತರಿಕ ಭಿನ್ನಾಭಿಪ್ರಾಯಗಳು ಹಾಗೂ ಕಚೇರಿಯ ಅಧಿಕಾರ ಹಂಚಿಕೆ ಕುರಿತಾದ ಸಂಘರ್ಷಗಳು ಈಗ ಆರ್‌ಟಿಐ ದಾಖಲೆಗಳ ಮೂಲಕ ಅಧಿಕೃತವಾಗಿ ಬಹಿರಂಗಗೊಂಡಿವೆ. ಆಯೋಗದ ಹಿರಿಯ ಅಧಿಕಾರಿಯೊಬ್ಬರು...

‘ಪ್ರತಿ ಗಲ್ಲಿಯೂ ಜಂತರ್ ಮಂತರ್..’; ಎಸ್‌ಐಆರ್‌ ವಿರುದ್ಧ ಅ.23ರಂದು ದೇಶಾದ್ಯಂತ ಪ್ರತಿಭಟನೆ

ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಯನ್ನು ರದ್ದುಗೊಳಿಸಬೇಕು, ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಗ್ಯಾನೇಶ್‌ ಕುಮಾರ್‌ ಅವರನ್ನು ಸಂಸತ್ತಿನ ಮೂಲಕ ಪದಚ್ಯುತಗೊಳಿಸಬೇಕು ಹಾಗೂ "ಪ್ರಜಾಪ್ರಭುತ್ವವನ್ನು ಮರುಸ್ಥಾಪಿಸಬೇಕು" ಎಂದು ಆಗ್ರಹಿಸಿ "ಪೀಪಲ್‌...

SIR ಅಂತಿಮ ಪಟ್ಟಿಯಲ್ಲಿದ್ದ 13 ಸಾವಿರಕ್ಕೂ ಹೆಚ್ಚು ಮತದಾರರ ಹೆಸರುಗಳಲ್ಲಿ ಬದಲಾವಣೆ : ಯುಪಿಯಲ್ಲಿ ಮತಗಳ್ಳತನದ ಹೊಸ ಸಂಚು ಬೆಳಕಿಗೆ; ಇಬ್ಬರು ಚುನಾವಣಾ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಸೂಚನೆ

ಉತ್ತರ ಪ್ರದೇಶದ ಪಿಲಿಭಿತ್ ವಿಧಾನಸಭಾ ಕ್ಷೇತ್ರದ ಇಬ್ಬರು ಚುನಾವಣಾ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಬುಧವಾರ (ಅಕ್ಟೋಬರ್ 21) ರಾಜ್ಯ ಮುಖ್ಯ ಚುನಾವಣಾಧಿಕಾರಿ (ಸಿಇಒ) ಸೂಚಿಸಿದ್ದಾರೆ. ಆಂತರಿಕ ತನಿಖೆಯಲ್ಲಿ ಮತದಾರರ ಗುರುತಿನ...

ಪ್ರಜಾಪ್ರಭುತ್ವ ಉಳಿವಿಗಾಗಿ ಜನತೆಯ ಮೆರವಣಿಗೆ; ಎಸ್‌ಐಆರ್ ವಿರೋಧಿ ಪ್ರತಿಭಟನೆ ನಿಮ್ಮೂರಲ್ಲೆಲ್ಲಿ ಗೊತ್ತಾ?

ಎಸ್ಐಆರ್ ರದ್ದುಪಡಿಸುವಂತೆ ಆಗ್ರಹಿಸಿ ಹಾಗೂ ನವದೆಹಲಿಯ 'ಜಂತರ್ ಮಂತರ್' ಮೈದಾನದಲ್ಲಿ ಪ್ರತಿಭಟನೆ ಮಾಡದಂತೆ ನಿರ್ಬಂಧಿಸಿರುವ ದೆಹಲಿ ಪೊಲೀಸರ ಪ್ರಜಾಪ್ರಭುತ್ವ ವಿರೋಧಿ ನಿಲುವು ಖಂಡಿಸಿ ದೇಶದಾದ್ಯಂತ ಜನಪರ ಸಂಘಟನೆಗಳು ಏಕಕಾಲದಲ್ಲಿ 'ಪ್ರಜಾಪ್ರಭುತ್ವ ಉಳಿವಿಗಾಗಿ ಜನತೆಯ...