ಸುಪ್ರೀಂ ಕೋರ್ಟ್ನ ನಿರ್ದೇಶನದ ಹಿನ್ನೆಲೆ, ಅಕ್ಟೋಬರ್ 14ರಂದು ಅಧಿಸೂಚನೆ ಹೊರಡಿಸಲಾಗಿದ್ದ ಎಲ್ಲಾ 100 ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ಪ್ರಕ್ರಿಯೆಯನ್ನು ತಕ್ಷಣವೇ ತಡೆಹಿಡಿಯುವಂತೆ ಆಂಧ್ರ ಪ್ರದೇಶ ರಾಜ್ಯ ಚುನಾವಣಾ ಆಯುಕ್ತ (ಎಸ್ಇಸಿ) ಅನಿಲ್ ಚಂದ್ರ ಪುನೇಠಾ ಅವರು ಆದೇಶಿಸಿದ್ದಾರೆ.
ಪುನೇಠಾ ಅವರು ಬುಧವಾರ (ಅ.21) ತಡರಾತ್ರಿ ಹೊರಡಿಸಿದ ಆದೇಶದಲ್ಲಿ, ಅಕ್ಟೋಬರ್ 22ರಂದು ಜಿಲ್ಲಾಧಿಕಾರಿಗಳು, ಜಿಲ್ಲಾ ಚುನಾವಣಾಧಿಕಾರಿಗಳು ಮತ್ತು ಪೊಲೀಸ್ ಆಯುಕ್ತರು ಅಥವಾ ಪೊಲೀಸ್ ವರಿಷ್ಠಾಧಿಕಾರಿಗಳಿಂದ ವರದಿಗಳನ್ನು ಪಡೆದ ನಂತರ ಚುನಾವಣೆಗಳ ಕುರಿತು ಆದೇಶವನ್ನು ಹೊರಡಿಸುವುದಾಗಿ ತಿಳಿಸಿದ್ದಾರೆ.
ರಾಜ್ಯದ 13 ಮಹಾನಗರ ಪಾಲಿಕೆಗಳು, 87 ಪುರಸಭೆಗಳು ಮತ್ತು ನಗರ ಪಂಚಾಯತ್ಗಳ ಚುನಾವಣೆಗಾಗಿ ಅಕ್ಟೋಬರ್ 14ರಂದು ಅಧಿಸೂಚನೆ ಹೊರಡಿಸಲಾಗಿದ್ದು, ಅಕ್ಟೋಬರ್ 16ರಿಂದ 18ರವರೆಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಪೂರ್ಣಗೊಂಡಿದೆ ಮತ್ತು ಅಕ್ಟೋಬರ್ 19ರಂದು ನಾಮಪತ್ರಗಳ ಪರಿಶೀಲನೆ ನಡೆಯಿತು ಎಂದು ಅವರು ಹೇಳಿದ್ದಾರೆ.
ಆದರೆ, ಚುನಾವಣೆಯ ಅಭ್ಯರ್ಥಿಗಳ ಅಂತಿಮ ಪಟ್ಟಿಯ ಪ್ರಕಟಣೆಯನ್ನು ಅಕ್ಟೋಬರ್ 25ರವರೆಗೆ ಮುಂದೂಡುವಂತೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ ಎಂದಿದ್ದಾರೆ.
ಕಾನೂನು ಮತ್ತು ಸುವ್ಯವಸ್ಥೆಯ ಸಮಸ್ಯೆಯಿಂದಾಗಿ ಅಭ್ಯರ್ಥಿಗಳು ತಮ್ಮ ನಾಮಪತ್ರಗಳನ್ನು ಸಲ್ಲಿಸಲು ಸಾಧ್ಯವಾಗಿಲ್ಲ ಎಂದು ಭಾವಿಸುವ ಸಂದರ್ಭಗಳಲ್ಲಿ, ಅರ್ಜಿದಾರ ಪಕ್ಷ (ವೈಎಸ್ಆರ್ಸಿಪಿ) ಮತ್ತು ಇತರ ಅಭ್ಯರ್ಥಿಗಳು ಸಲ್ಲಿಸಿದ ಮನವಿಗಳು, ಸಾಕ್ಷ್ಯದ ವಸ್ತುಗಳು ಹಾಗೂ ವಿದ್ಯುನ್ಮಾನ ಸಾಕ್ಷ್ಯಗಳನ್ನು ಪರಿಗಣಿಸಿ, ನಾಮಪತ್ರ ಸಲ್ಲಿಸುವ ಕೊನೆಯ ದಿನಾಂಕದ ಕುರಿತು ನಿರ್ಧಾರ ತೆಗೆದುಕೊಳ್ಳುವಂತೆ ಸುಪ್ರೀಂ ಸೂಚಿಸಿದೆ ಎಂದು ತಿಳಿಸಿದ್ದಾರೆ.
ಆಂಧ್ರ ಪ್ರದೇಶ ಹೈಕೋರ್ಟ್ ನಾಮಪತ್ರ ಸಲ್ಲಿಕೆ ಅವಧಿಯನ್ನು ವಿಸ್ತರಿಸಲು ನಿರಾಕರಿಸಿದ ನಂತರ ವೈಎಸ್ಆರ್ಸಿಪಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಅಕ್ಟೋಬರ್ 16 ರಿಂದ 18 ರವರೆಗೆ ನಿಗದಿಯಾಗಿದ್ದ ನಾಮಪತ್ರ ಸಲ್ಲಿಕೆ ಅವಧಿಯಲ್ಲಿ ತಮ್ಮ ಅಭ್ಯರ್ಥಿಗಳ ಮೇಲೆ ಹಲ್ಲೆ ನಡೆಸಲಾಗಿದೆ, ಬೆದರಿಕೆ ಹಾಕಲಾಗಿದೆ ಅಥವಾ ನಾಮಪತ್ರ ಕೇಂದ್ರಗಳಿಗೆ ತಲುಪದಂತೆ ತಡೆಯಲಾಗಿದೆ ಎಂದು ಪಕ್ಷವು ಆರೋಪಿಸಿದೆ. ಅಲ್ಲದೆ, ತಮ್ಮ ಅಭ್ಯರ್ಥಿಗಳ ನಾಮಪತ್ರಗಳನ್ನು ಕಸಿದುಕೊಳ್ಳಲಾಗಿದೆ ಅಥವಾ ಹರಿದು ಹಾಕಲಾಗಿದೆ ಎಂದು ಹೇಳಿದೆ.


