ತಮಿಳುನಾಡಿನ ಆಡಳಿತಾರೂಢ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಮತ್ತು ಪ್ರಮುಖ ವಿರೋಧ ಪಕ್ಷವಾದ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಸೇರಿದಂತೆ ಒಂಬತ್ತು ರಾಜಕೀಯ ಪಕ್ಷಗಳು, ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ಶುಕ್ರವಾರ (ಅ.23) ನಡೆದ ಸರ್ವಪಕ್ಷ ಸಭೆಯಿಂದ ಹೊರನಡೆದಿವೆ. ಮತದಾರರ ಪಟ್ಟಿಯ ಹಿಂದಿನ ವಿಶೇಷ ತೀವ್ರ ಪರಿಷ್ಕರಣೆಯಲ್ಲಿ (ಎಸ್ಐಆರ್) ಅಕ್ರಮಗಳು ನಡೆದಿವೆ ಎಂದು ಪಕ್ಷಗಳು ಆರೋಪಿಸಿದ್ದು, ಮುಂದಿನ ಪರಿಷ್ಕರಣೆಗೆ ಮುನ್ನ ಇವುಗಳನ್ನು ಸರಿಪಡಿಸಬೇಕು ಎಂದು ಒತ್ತಾಯಿಸಿವೆ.
ಚೆನ್ನೈನ ಸಚಿವಾಲಯದಲ್ಲಿ ಮುಖ್ಯ ಚುನಾವಣಾ ಅಧಿಕಾರಿ ಅರ್ಚನಾ ಪಟ್ನಾಯಕ್ ನೇತೃತ್ವದಲ್ಲಿ ನಡೆದ ಈ ಸಭೆಯು, ರಾಜ್ಯದಲ್ಲಿ ನವೆಂಬರ್ 12ರಿಂದ ಪ್ರಾರಂಭವಾಗಲಿರುವ ಮುಂಬರುವ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ (ಎಸ್ಎಸ್ಆರ್) ಕುರಿತು ಚರ್ಚಿಸಲು ಆಯೋಜಿತವಾಗಿತ್ತು. ಭಾರತೀಯ ಚುನಾವಣಾ ಆಯೋಗವು (ಇಸಿಐ) ಮಾನ್ಯತೆ ಪಡೆದ 13 ರಾಷ್ಟ್ರೀಯ ಮತ್ತು ಪ್ರಾದೇಶಿಕ ಪಕ್ಷಗಳನ್ನು ಈ ಸಭೆಗೆ ಆಹ್ವಾನಿಸಿತ್ತು. ಇದರಲ್ಲಿ ಬಹುಜನ ಸಮಾಜ ಪಕ್ಷವು (ಬಿಎಸ್ಪಿ) ಭಾಗವಹಿಸಿರಲಿಲ್ಲ, ಆದರೆ ಬಿಜೆಪಿ, ಎಐಎಡಿಎಂಕೆ ಮತ್ತು ನ್ಯಾಷನಲ್ ಪೀಪಲ್ಸ್ ಪಾರ್ಟಿ (ಎನ್ಪಿಪಿ) ಪಕ್ಷಗಳು ಸಭೆಯಲ್ಲೇ ಮುಂದುವರಿದಿದ್ದವು.
ಸಭೆಯಿಂದ ಹೊರನಡೆದ ಪಕ್ಷಗಳಲ್ಲಿ ಟಿವಿಕೆ, ಡಿಎಂಕೆ, ಕಾಂಗ್ರೆಸ್, ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಸಿಪಿಐ), ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್ವಾದಿ), ವಿಡುದಲೈ ಚಿರುತೈಗಳ್ ಕಚ್ಚಿ (ವಿಸಿಕೆ), ನಾಮ್ ತಮಿಳರ್ ಕಚ್ಚಿ (ಎನ್ಟಿಕೆ), ಆಮ್ ಆದ್ಮಿ ಪಕ್ಷ (ಎಎಪಿ) ಮತ್ತು ದೇಶೀಯ ಮುರ್ಪೋಕ್ಕು ದ್ರಾವಿಡ ಕಳಗಂ (ಡಿಎಂಡಿಕೆ) ಸೇರಿವೆ. ಇವುಗಳ ಪ್ರತಿನಿಧಿಗಳು ಹೊರಹೋಗುವ ಮುನ್ನ ತಮ್ಮ ಆಕ್ಷೇಪಣೆಗಳನ್ನು ದಾಖಲಿಸಿದ್ದಾರೆ.
ಟಿವಿಕೆಯನ್ನು ಪ್ರತಿನಿಧಿಸಿದ್ದ ತಮಿಳುನಾಡಿನ ಇಂಧನ ಸಂಪನ್ಮೂಲ ಮತ್ತು ಕಾನೂನು ಸಚಿವ ಸಿ.ಟಿ.ಆರ್. ನಿರ್ಮಲ್ ಕುಮಾರ್ ಅವರು, ಪಕ್ಷವು ಆರಂಭದಿಂದಲೂ ವಿಶೇಷ ತೀವ್ರ ಪರಿಷ್ಕರಣೆಯನ್ನು (ಎಸ್ಐಆರ್) ವಿರೋಧಿಸುತ್ತಾ ಬಂದಿದೆ ಮತ್ತು ಇದರ ವಿರುದ್ಧ ಪ್ರತಿಭಟನೆಗಳನ್ನು ಸಂಘಟಿಸಿದೆ ಎಂದು ತಿಳಿಸಿದ್ದಾರೆ. ಹಿಂದಿನ ಪ್ರಕ್ರಿಯೆಯಲ್ಲಿನ ತಪ್ಪುಗಳನ್ನು ಸರಿಪಡಿಸದೆ ಮತ್ತೊಂದು ಪರಿಷ್ಕರಣೆಯನ್ನು ಮುಂದುವರಿಸುವುದು ಅನಗತ್ಯ ಎಂದು ಅವರು ವಾದಿಸಿದ್ದಾರೆ.
“ಎಸ್ಎಸ್ಆರ್ ನಡೆಸುವ ಮುನ್ನ ಎಸ್ಐಆರ್ನಲ್ಲಿ ನಡೆದಿರುವ ತಪ್ಪುಗಳನ್ನು ಸರಿಪಡಿಸಲು ಚುನಾವಣಾ ಆಯೋಗವು ಮೊದಲು ಕ್ರಮ ಕೈಗೊಳ್ಳಬೇಕು” ಎಂದು ಹೇಳಿದ ಅವರು, ಗ್ಯಾನೇಶ್ ಕುಮಾರ್ ಅವರ ರಾಜೀನಾಮೆ ಬೇಡಿಕೆಯನ್ನು ಪುನರುಚ್ಚರಿಸಿದ್ದಾರೆ.
ಮತದಾರರ ಪಟ್ಟಿಯಿಂದ ಹೆಸರುಗಳನ್ನು ಕೈಬಿಡಲಾದವರಲ್ಲಿ ಯುವಕರು ಮತ್ತು ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಎಂದೂ ನಿರ್ಮಲ್ ಕುಮಾರ್ ಹೇಳಿದ್ದಾರೆ. ಹೆಸರುಗಳ ಈ ತೆಗೆದು ಹಾಕುವಿಕೆ ತಮ್ಮ ಪಕ್ಷದ ಚುನಾವಣಾ ಭವಿಷ್ಯದ ಮೇಲೆ ತೀವ್ರ ಪರಿಣಾಮ ಬೀರಿದೆ ಎಂದು ದೂರಿದ ಅವರು, ಒಂದು ವೇಳೆ ಎಸ್ಐಆರ್ ನಡೆಸದೇ ಇದ್ದಿದ್ದರೆ ಟಿವಿಕೆ ಪಕ್ಷವು ವಿಧಾನಸಭಾ ಚುನಾವಣೆಯಲ್ಲಿ 160ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುತ್ತಿತ್ತು ಎಂದಿದ್ದಾರೆ.
ಉಪ ಸಾಂಘಿಕ ಕಾರ್ಯದರ್ಶಿ ಎಸ್. ಆಸ್ಟಿನ್ ಅವರೊಂದಿಗೆ ಪಕ್ಷವನ್ನು ಪ್ರತಿನಿಧಿಸಿದ್ದ ಡಿಎಂಕೆ ನಾಯಕ ಐ. ಪರಂತಾಮನ್ ಅವರು, ಮತದಾರರ ಹೆಸರುಗಳನ್ನು ಕೈಬಿಟ್ಟಿರುವುದರ ಕುರಿತು ಆತಂಕ ವ್ಯಕ್ತಪಡಿಸಿದ್ದಾರೆ ಮತ್ತು ಅರ್ಹ ಮತದಾರರನ್ನು ಹೇಗೆ ಮತ್ತು ಯಾವಾಗ ಮರುಸೇರ್ಪಡೆಗೊಳಿಸಲಾಗುತ್ತದೆ ಎಂಬ ಬಗ್ಗೆ ಸ್ಪಷ್ಟನೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಎಸ್ಐಆರ್ ಸಮಯದಲ್ಲಿ ತಮಿಳುನಾಡಿನ ಮತದಾರರ ಪಟ್ಟಿಯಿಂದ ಸುಮಾರು 74 ಲಕ್ಷ ಮತದಾರರ ಹೆಸರುಗಳನ್ನು ಕೈಬಿಟ್ಟಿರುವುದನ್ನು ಪ್ರಸ್ತಾಪಿಸಿದ ಪರಂತಾಮನ್ ಅವರು, ಅರ್ಹ ಮತದಾರರನ್ನು ಪಟ್ಟಿಗೆ ಸೇರಿಸಲು ಚುನಾವಣಾ ಆಯೋಗವು ಯಾವ ಕ್ರಮಗಳನ್ನು ಕೈಗೊಂಡಿದೆ ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ, ಶೇ 100ರಷ್ಟು ಮತದಾನಕ್ಕೆ ಪ್ರಚಾರ ಮಾಡುವ ಆಯೋಗವು, ಇನ್ನೊಂದೆಡೆ ಅರ್ಹ ಮತದಾರರು ತಮ್ಮ ಹೆಸರುಗಳನ್ನು ಪಟ್ಟಿಗೆ ಸೇರಿಸಿಕೊಳ್ಳುವುದನ್ನು ಕಷ್ಟಕರವಾಗಿಸುತ್ತಿದೆ ಎಂದು ಟೀಕಿಸಿದ್ದಾರೆ.
“ಚುನಾವಣಾ ಆಯೋಗವು ಜನಸ್ನೇಹಿಯಾಗಿರಬೇಕು ಮತ್ತು ಅರ್ಹ ಮತದಾರರ ಹೆಸರು ನೋಂದಣಿಗೆ ಅನುಕೂಲ ಮಾಡಿಕೊಡಬೇಕು. ಶೇಕಡಾ 100ರಷ್ಟು ಮತದಾನಕ್ಕಾಗಿ ಪ್ರಚಾರ ಮಾಡುತ್ತಿರುವ ಆಯೋಗವು, ಅದೇ ಸಮಯದಲ್ಲಿ ಅರ್ಹ ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಗೆ ಸೇರಿಸಲು ಅಡೆತಡೆಗಳನ್ನು ಸೃಷ್ಟಿಸುತ್ತಿದೆ” ಎಂದಿದ್ದಾರೆ.
ಡಿಎಂಕೆ ಈಗಾಗಲೇ ತನ್ನ ಸಂಸದರ ಸಭೆಯಲ್ಲಿ ಮುಖ್ಯ ಚುನಾವಣಾ ಆಯುಕ್ತರ (ಸಿಇಸಿ) ರಾಜೀನಾಮೆಗೆ ಆಗ್ರಹಿಸಿ ನಿರ್ಣಯ ಅಂಗೀಕರಿಸಿದೆ ಎಂದು ಪರಂತಾಮನ್ ತಿಳಿಸಿದ್ದಾರೆ. ಅಲ್ಲದೆ, ಪಕ್ಷವು ಎಸ್ಐಆರ್ ವಿರುದ್ಧ ತನ್ನ ಪ್ರತಿಭಟನೆಯನ್ನು ಮುಂದುವರಿಸಲಿದ್ದು, ಈ ವಿಷಯದ ಕುರಿತು ರಾಷ್ಟ್ರಪತಿಯವರಿಗೆ ಜ್ಞಾಪನಾ ಪತ್ರವನ್ನು (ಮೆಮೊರಾಂಡಮ್) ಸಲ್ಲಿಸಲು ಯೋಜಿಸುತ್ತಿದೆ ಎಂದು ಹೇಳಿದ್ದಾರೆ.
ವಿಸಿಕೆಯ ಮಾಜಿ ಶಾಸಕ ಎಸ್.ಎಸ್. ಬಾಲಾಜಿ ಅವರು, ಮತದಾರರ ಪಟ್ಟಿಯಿಂದ ನುಸುಳುಕೋರರನ್ನು ಹೊರಹಾಕುವ ಉದ್ದೇಶದಿಂದ ಎಸ್ಐಆರ್ ನಡೆಸಲಾಗಿದೆ ಎಂಬ ಚುನಾವಣಾ ಆಯೋಗದ ಸಮರ್ಥನೆಯನ್ನು ಪ್ರಶ್ನಿಸಿದ್ದಾರೆ. ಇಂತಹ ಎಷ್ಟು ಜನರನ್ನು ಗುರುತಿಸಲಾಗಿದೆ, ಅವರನ್ನು ಹೇಗೆ ಪತ್ತೆಹಚ್ಚಲಾಗಿದೆ ಅಥವಾ ಅವರ ವಿರುದ್ಧ ಕೈಗೊಂಡಿರುವ ಕ್ರಮವೇನು ಎಂಬುದರ ಕುರಿತು ಆಯೋಗವು ಸಾರ್ವಜನಿಕರಿಗೆ ಯಾವುದೇ ಸ್ಪಷ್ಟನೆ ನೀಡಿಲ್ಲ ಎಂದಿದ್ದಾರೆ.
“ಅದನ್ನು ಬಿಟ್ಟು, ಚುನಾವಣಾ ಆಯೋಗವು ಈ ಹಿಂದಿನ ಪ್ರಕ್ರಿಯೆಯಲ್ಲಿ ಏನೂ ನಡೆದಿಲ್ಲ ಎನ್ನುವಂತೆ ಎಸ್ಐಆರ್ ನಂತರದ ಮುಂದಿನ ಎಸ್ಎಸ್ಆರ್ ಪ್ರಕ್ರಿಯೆಯನ್ನು ಮುಂದುವರಿಸುತ್ತಿದೆ” ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮತ್ತೊಂದೆಡೆ, ಎಐಎಡಿಎಂಕೆ ಪಕ್ಷವು ಮತದಾರರ ಹೆಸರುಗಳನ್ನು ತೆಗೆದು ಹಾಕಿದ ಕುರಿತು ಮರುಪರಿಶೀಲನೆ ನಡೆಸುವಂತೆ ಕರೆ ನೀಡಿತಾದರೂ, ಸಭೆಯಲ್ಲೇ ಮುಂದುವರಿಯಿತು. ಮಾಜಿ ಸಚಿವ ಡಿ. ಜಯಕುಮಾರ್ ಅವರು, ತಮ್ಮ ಪಕ್ಷವು ಸಿಇಸಿ ಸೇರಿದಂತೆ ಯಾವುದೇ ವ್ಯಕ್ತಿಯನ್ನು ಸಮರ್ಥಿಸುತ್ತಿಲ್ಲ ಮತ್ತು ಪರಿಷ್ಕರಣೆ ಪ್ರಕ್ರಿಯೆಯ ಬಗ್ಗೆ ಇರುವ ಅನುಮಾನಗಳನ್ನು ಚುನಾವಣಾ ಆಯೋಗವು ಬಗೆಹರಿಸಬೇಕೆಂದು ಬಯಸುತ್ತದೆ ಎಂದು ತಿಳಿಸಿದ್ದಾರೆ.
ಮರಣ ಹೊಂದಿದ ಮತದಾರರು, ವಾಸಸ್ಥಳ ಬದಲಾಯಿಸಿದವರು, ನಕಲಿ ನೋಂದಣಿಗಳು ಮತ್ತು ಒಂದಕ್ಕಿಂತ ಹೆಚ್ಚು ಕ್ಷೇತ್ರಗಳಲ್ಲಿ ಹೆಸರಿರುವ ಮತದಾರರು ಸೇರಿದಂತೆ ಎಸ್ಐಆರ್ ಅವಧಿಯಲ್ಲಿ ಸುಮಾರು 97 ಲಕ್ಷ ಮತದಾರರ ದಾಖಲೆಗಳ ಮೇಲೆ ಪರಿಣಾಮ ಬೀರಿದೆ ಎಂದು ಜಯಕುಮಾರ್ ಹೇಳಿದ್ದಾರೆ. ವಾಸಸ್ಥಳ ಬದಲಾಯಿಸಿದ್ದಕ್ಕಾಗಿ 55 ಲಕ್ಷ ಮತದಾರರು, 4 ಲಕ್ಷ ನಕಲಿ ನೋಂದಣಿಗಳು ಮತ್ತು ಎರಡು ಕ್ಷೇತ್ರಗಳ ಪಟ್ಟಿಯಲ್ಲಿ ಹೆಸರಿದ್ದ 13 ಲಕ್ಷ ಮತದಾರರನ್ನು ಕೈಬಿಡಲಾಗಿದೆ ಎಂಬ ಅಂಕಿ-ಅಂಶಗಳನ್ನು ಉಲ್ಲೇಖಿಸಿದ ಅವರು, ಈ ತೆಗದು ಹಾಕುವಿಕೆಯ ಕುರಿತು ಮರುಪರಿಶೀಲಿಸಬೇಕು ಎಂದು ಒತ್ತಾಯಿಸಿದ್ದಾರೆ.
ಹೊರನಡಿಗೆಯನ್ನು ಪ್ರಜಾಸತ್ತಾತ್ಮಕ ಹಕ್ಕು ಎಂದು ಬಣ್ಣಿಸಿದ ಜಯಕುಮಾರ್ ಅವರು, ಚುನಾವಣೆಯಲ್ಲಿ ಸೋತಾಗ ಎಲೆಕ್ಟ್ರಾನಿಕ್ ಮತಯಂತ್ರಗಳನ್ನು ಪ್ರಶ್ನಿಸುವ ಮತ್ತು ಗೆದ್ದಾಗ ಅವುಗಳನ್ನು ಹೊಗಳುವ ಪಕ್ಷಗಳನ್ನು ಟೀಕಿಸಿದ್ದಾರೆ. ಈ ಪ್ರಕ್ರಿಯೆಯ ಕುರಿತಾದ ಅಂಕಿ-ಅಂಶಗಳನ್ನು ಸ್ಪಷ್ಟಪಡಿಸುವ ಮತ್ತು ಆತಂಕಗಳನ್ನು ಬಗೆಹರಿಸುವ ಜವಾಬ್ದಾರಿ ಚುನಾವಣಾ ಆಯೋಗದ ಮೇಲಿದೆ ಎಂದು ಅವರು ಹೇಳಿದ್ದಾರೆ.


