Homeಮುಖಪುಟಗೋವು ಕಳ್ಳಸಾಗಣೆ ಆರೋಪ: ಮುಸ್ಲಿಮರನ್ನು ಗುರಿಯಾಗಿಸಿ ಗುಂಡಿನ ದಾಳಿ ನಡೆಸುತ್ತಿರುವ ಉತ್ತರ ಪ್ರದೇಶ ಪೊಲೀಸರು!

ಗೋವು ಕಳ್ಳಸಾಗಣೆ ಆರೋಪ: ಮುಸ್ಲಿಮರನ್ನು ಗುರಿಯಾಗಿಸಿ ಗುಂಡಿನ ದಾಳಿ ನಡೆಸುತ್ತಿರುವ ಉತ್ತರ ಪ್ರದೇಶ ಪೊಲೀಸರು!

- Advertisement -
- Advertisement -

ಪೊಲೀಸರು ಬಿಡುಗಡೆ ಮಾಡುವ ವಿಡಿಯೊಗಳಲ್ಲಿ ಒಂದೇ ರೀತಿಯ ದೃಶ್ಯಗಳು ಮರುಕಳಿಸುತ್ತವೆ: ಕಾಲಿನ ಕೆಳಭಾಗಕ್ಕೆ ಗುಂಡೇಟು ತಗುಲಿದ ವ್ಯಕ್ತಿಯೊಬ್ಬರು ಕತ್ತಲಿನಲ್ಲಿ ಕುಂಟುತ್ತಾ ಸಾಗುತ್ತಿದ್ದರೆ, ಪೊಲೀಸರು ಅವರನ್ನು ಸುತ್ತುವರಿದು ಕರೆದೊಯ್ಯುತ್ತಾರೆ.

ಭಾರತದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಉತ್ತರ ಪ್ರದೇಶದಲ್ಲಿ ಪೊಲೀಸರು ನೂರಾರು ಶಂಕಿತರ ಮೇಲೆ ಇದೇ ಮಾದರಿಯ ಗುಂಡಿನ ದಾಳಿಗಳನ್ನು ನಡೆಸಿದ್ದಾರೆ. ಈ ದಾಳಿಗಳಲ್ಲಿ ಗೋವುಗಳ ಕಳ್ಳಸಾಗಣೆ ಆರೋಪ ಎದುರಿಸುತ್ತಿರುವ ಮುಸ್ಲಿಮರೇ ಹೆಚ್ಚಿನ ಸಂಖ್ಯೆಯಲ್ಲಿ ಗುರಿಯಾಗಿದ್ದಾರೆ. ಹಿಂದೂ ಧಾರ್ಮಿಕ ನಂಬಿಕೆಗಳಲ್ಲಿ ಬೇರೂರಿರುವ ಗೋಸಂರಕ್ಷಣಾ ಕಾನೂನುಗಳಿಗೆ ನಿಕಟ ಸಂಬಂಧ ಹೊಂದಿರುವ ಅಪರಾಧವಿದು ಎಂದು ಅಸೋಸಿಯೇಟೆಡ್ ಪ್ರೆಸ್ (ಎಪಿ) ನಡೆಸಿದ ತನಿಖಾ ವರದಿ ತಿಳಿಸಿದೆ.

ಅಪರಾಧಗಳ ವಿರುದ್ಧದ ವ್ಯಾಪಕ ಕಾರ್ಯಾಚರಣೆಯ ಭಾಗವಾಗಿ ಈ ಗುಂಡಿನ ದಾಳಿಗಳನ್ನು ಪೊಲೀಸರು ಸಾರ್ವಜನಿಕವಾಗಿ ಪ್ರಚಾರ ಮಾಡಿದ್ದಾರೆ. ಇವು ಆತ್ಮರಕ್ಷಣೆಗಾಗಿ ನಡೆಸಿದ ಕ್ರಮಗಳೆಂದು ಸಮರ್ಥಿಸಿಕೊಂಡಿದ್ದಾರೆ. ಆದರೆ, ಮಾನವ ಹಕ್ಕುಗಳ ಹೋರಾಟಗಾರರು, ವಿರೋಧ ಪಕ್ಷದ ನಾಯಕರು ಮತ್ತು ಸ್ಥಳೀಯ ನ್ಯಾಯಾಧೀಶರು ಈ ಹಿಂಸಾಚಾರವು ನ್ಯಾಯಾಂಗ ಪ್ರಕ್ರಿಯೆಯ ಹೊರತಾಗಿ ನೀಡುವ ಶಿಕ್ಷೆ ಮತ್ತು ಬೆದರಿಕೆಯ ರೂಪವಾಗಿದೆ ಎಂದು ಆರೋಪಿಸಿದ್ದಾರೆ. ಇದು ಭಾರತದ ದೊಡ್ಡ ಮುಸ್ಲಿಂ ಅಲ್ಪಸಂಖ್ಯಾತ ಸಮುದಾಯದ ಮೇಲೆ ದುಷ್ಪರಿಣಾಮ ಬೀರುವುದರ ಜೊತೆಗೆ, ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಕಾನೂನಿನ ಆಳ್ವಿಕೆಯನ್ನು ದುರ್ಬಲಗೊಳಿಸುತ್ತಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

“ಇದು ಅಪಾಯಕಾರಿ ಪರಿಸ್ಥಿತಿ. ತನಿಖೆ ನಡೆಸುವ ಬದಲು ಪೊಲೀಸರು ವ್ಯಕ್ತಿಯೊಬ್ಬರನ್ನು ಕೊಲ್ಲುತ್ತಾರೆ ಅಥವಾ ಗಾಯಗೊಳಿಸುತ್ತಾರೆ; ಅಲ್ಲಿಗೇ ನ್ಯಾಯ ದೊರೆತಂತಾಗುತ್ತದೆ. ಇದು ಪೊಲೀಸರ ನಿಯಮಿತ ಕಾರ್ಯವಿಧಾನವಾಗಿ ಬದಲಾಗಿದೆ” ಎಂದು ನವದೆಹಲಿಯ ಮಾನವ ಹಕ್ಕುಗಳ ವಕೀಲೆ ಮಂಗಳ ವರ್ಮಾ ಹೇಳಿದ್ದಾರೆ.

ವಾಷಿಂಗ್ಟನ್ ಮೂಲದ ಚಿಂತಕರ ಚಾವಡಿ ಸೆಂಟರ್ ಫಾರ್ ದಿ ಸ್ಟಡಿ ಆಫ್ ಆರ್ಗನೈಸ್ಡ್ ಹೇಟ್ 2020ರಿಂದ ಉತ್ತರ ಪ್ರದೇಶ ಪೊಲೀಸರು ಗೋವುಗಳ ಕಳ್ಳಸಾಗಣೆ ಆರೋಪ ಎದುರಿಸುತ್ತಿರುವ ಸುಮಾರು 650 ಶಂಕಿತರ ಮೇಲೆ ಗುಂಡು ಹಾರಿಸಿ ಗಾಯಗೊಳಿಸಿದ ಪ್ರಕರಣಗಳ ದಾಖಲೆಗಳನ್ನು ಸಂಗ್ರಹಿಸಿದೆ. ಈ ಮಾಹಿತಿಯನ್ನು ಎಪಿ ಸಂಸ್ಥೆಯೊಂದಿಗೆ ಪ್ರತ್ಯೇಕವಾಗಿ ಹಂಚಿಕೊಳ್ಳಲಾಗಿತ್ತು. ಎಪಿ ಸ್ವತಂತ್ರವಾಗಿ 200ಕ್ಕೂ ಹೆಚ್ಚು ಪ್ರಕರಣಗಳ ಮಾದರಿಯನ್ನು ಪರಿಶೀಲಿಸಿದೆ. ಈ ಪ್ರಕರಣಗಳಲ್ಲಿ ಬಹುಪಾಲು ಮುಸ್ಲಿಮರು ಭಾಗಿಯಾಗಿದ್ದಾರೆ ಎಂದು ಕೇಂದ್ರವು ತನ್ನ ಅಧ್ಯಯನದಲ್ಲಿ ಕಂಡುಕೊಂಡಿದೆ.

ಪ್ರಕರಣದಿಂದ ಪ್ರಕರಣಕ್ಕೆ ಗುಂಡುಗಳು ಶಂಕಿತರ ದೇಹದ ಒಂದೇ ಭಾಗಕ್ಕೆ ತಗುಲಿರುವುದು ಕಂಡುಬಂದಿದೆ. ಹೆಚ್ಚಾಗಿ ಮೊಣಕಾಲಿನ ಕೆಳಭಾಗಕ್ಕೆ ಗುಂಡು ಹಾರಿಸಲಾಗಿದೆ. ಈ ವರದಿಯು ಪೊಲೀಸರು ಸ್ವತಃ ಸಾರ್ವಜನಿಕವಾಗಿ ಪ್ರಕಟಿಸಿದ ಘಟನೆಗಳನ್ನು ಮಾತ್ರ ಆಧರಿಸಿದ್ದು, ವಾಸ್ತವದಲ್ಲಿ ಇಂತಹ ಪ್ರಕರಣಗಳ ಸಂಖ್ಯೆ ಇನ್ನೂ ಹೆಚ್ಚಿರುವ ಸಾಧ್ಯತೆಯಿದೆ.

ಉತ್ತರ ಪ್ರದೇಶದ ಹಿರಿಯ ಪೊಲೀಸ್ ಅಧಿಕಾರಿ ಅಮಿತಾಭ್ ಯಶ್ ಅವರು ಎಪಿಗೆ ಪ್ರತಿಕ್ರಿಯಿಸಿ, ಪೊಲೀಸರು ಆತ್ಮರಕ್ಷಣೆಯ ಸಂದರ್ಭದಲ್ಲಷ್ಟೇ ಪ್ರತಿಕ್ರಿಯಿಸುವಂತೆ ಸೂಚಿಸಲಾಗಿದೆ ಎಂದು ಹೇಳಿದ್ದಾರೆ. ಅಲ್ಲದೆ, ತಲಾ ಜನಸಂಖ್ಯೆಯ ಆಧಾರದಲ್ಲಿ ಹೋಲಿಸಿದರೆ, ಅಮೆರಿಕದ ಪೊಲೀಸರಿಗೆ ಹೋಲಿಸಿದಾಗ ತಮ್ಮ ರಾಜ್ಯದ ಪೊಲೀಸರು ಕೊಂದಿರುವ ಮತ್ತು ಗಾಯಗೊಳಿಸಿರುವ ಶಂಕಿತರ ಸಂಖ್ಯೆ ಬಹಳ ಕಡಿಮೆ ಎಂದು ಸಮರ್ಥಿಸಿಕೊಂಡಿದ್ದಾರೆ.

ಶಂಕಿತರ ಕಾಲಿಗೆ ಗುಂಡು ಹಾರಿಸುವಂತೆ ಯಾವುದೇ ಆದೇಶವಿಲ್ಲ ಎಂದು ಯಶ್ ಹೇಳಿದ್ದಾರೆ. ಆದರೆ, ಗಾಯಗಳ ಸ್ವರೂಪದಲ್ಲಿ ಇಂತಹ ಏಕರೂಪದ ಮಾದರಿ ಕಂಡುಬಂದಿರುವ ಕುರಿತು ಸೂಕ್ತ ದೂರು ದಾಖಲಾದರೆ ತನಿಖೆ ನಡೆಸುವುದಾಗಿ ತಿಳಿಸಿದ್ದಾರೆ.

“ಪೊಲೀಸರು ಕೈಗೊಳ್ಳುವ ಪ್ರತಿಯೊಂದು ಕ್ರಮವನ್ನೂ ಪ್ರಶ್ನಿಸಬೇಕು. ಸಾವು ಸಂಭವಿಸಿದರೂ ಅಥವಾ ಗಾಯವಾದರೂ ಪ್ರತಿಯೊಂದು ಕ್ರಮವೂ ಪರಿಶೀಲನೆಗೆ ಒಳಪಡಬೇಕು. ಕಳೆದ ಒಂದು ವರ್ಷದಲ್ಲಿ ಅನುಚಿತವಾಗಿ ಬಲಪ್ರಯೋಗ ಮಾಡಿದ ಕಾರಣಕ್ಕೆ ಯಾವುದೇ ಪೊಲೀಸ್ ಅಧಿಕಾರಿಯನ್ನು ಶಿಕ್ಷಿಸಬೇಕಾದ ಪರಿಸ್ಥಿತಿ ಎದುರಾಗಿಲ್ಲ” ಎಂದು ಅವರು ಹೇಳಿದ್ದಾರೆ.

ಇತರ ರಾಜ್ಯಗಳಿಗೂ ಹರಡುತ್ತಿರುವ ‘ಆಪರೇಷನ್ ಲಂಗ್ಡಾ’!

ಗಾಯಗೊಳಿಸುವ ಉದ್ದೇಶದಿಂದ ಗುಂಡು ಹಾರಿಸುವ ಈ ತಂತ್ರವನ್ನು ಸ್ಥಳೀಯವಾಗಿ “ಆಪರೇಷನ್ ಲಂಗ್ಡಾ’ ಅಥವಾ “ಆಪರೇಷನ್ ಲೇಮ್” ಎಂದು ಕರೆಯಲಾಗುತ್ತದೆ. ಇದು ಉತ್ತರ ಪ್ರದೇಶದಾದ್ಯಂತ ವ್ಯಾಪಕವಾಗಿದೆ. ಗೋವುಗಳ ಕಳ್ಳಸಾಗಣೆ ಆರೋಪ ಎದುರಿಸುತ್ತಿರುವವರ ವಿರುದ್ಧ ಮಾತ್ರವಲ್ಲದೆ, ಕಳ್ಳತನ ಮತ್ತು ಅತ್ಯಾಚಾರದಂತಹ ಇತರ ಅಪರಾಧಗಳ ಆರೋಪಿಗಳ ವಿರುದ್ಧವೂ ಈ ತಂತ್ರವನ್ನು ಬಳಸಲಾಗುತ್ತಿದೆ.

ಭಾರತದಲ್ಲಿ ಗೋವುಗಳಿಗೆ ಅನೇಕ ಹಿಂದೂಗಳು ಪವಿತ್ರ ಸ್ಥಾನ ನೀಡಿರುವುದರಿಂದ ಮತ್ತು ಗೋಸಂರಕ್ಷಣೆ ರಾಜಕೀಯವಾಗಿ ವಿವಾದಾತ್ಮಕ ವಿಷಯವಾಗಿರುವುದರಿಂದ, ಗೋವುಗಳ ಕಳ್ಳಸಾಗಣೆ ಗಂಭೀರ ಸ್ವರೂಪದ ಅಪರಾಧವೆಂದು ಪರಿಗಣಿಸಲ್ಪಡುತ್ತದೆ.

ಭಾರತದಲ್ಲಿ ಪೊಲೀಸರು ಶಂಕಿತರನ್ನು ಗುಂಡಿಕ್ಕಿ ಕೊಲ್ಲುವ, ಆದರೆ ಅವುಗಳ ಸಂದರ್ಭಗಳು ಅನುಮಾನಾಸ್ಪದವಾಗಿರುವ ‘ಎನ್‌ಕೌಂಟರ್ ಹತ್ಯೆ’ಗಳ ದೀರ್ಘ ಇತಿಹಾಸವಿದೆ. ಸಾರ್ವಜನಿಕರ ಆಕ್ರೋಶವನ್ನು ಕಡಿಮೆ ಮಾಡುವ ಉದ್ದೇಶದಿಂದ ಪೊಲೀಸರು ತಮ್ಮ ಕಾರ್ಯತಂತ್ರವನ್ನು ಬದಲಿಸಿಕೊಂಡಿದ್ದಾರೆ ಎಂದು ಕೆಲವು ಹೋರಾಟಗಾರರು ಅಭಿಪ್ರಾಯಪಡುತ್ತಾರೆ. ಅಂದರೆ, ಶಂಕಿತರನ್ನು ಕೊಲ್ಲುವ ಬದಲು ಗಾಯಗೊಳಿಸುವ ಮೂಲಕ ಕಡಿಮೆ ಸಾರ್ವಜನಿಕ ಪ್ರತಿರೋಧ ಎದುರಿಸುವ ‘ಅರೆ ಎನ್‌ಕೌಂಟರ್’ಗಳ ವಿಧಾನವನ್ನು ಅನುಸರಿಸಲಾಗುತ್ತಿದೆ ಎಂಬುದು ಅವರ ಆರೋಪ.

2025ರ ಡಿಸೆಂಬರ್ 19ರಂದು ಕನೌಜ್ ಪೊಲೀಸರು ಎಕ್ಸ್‌ನಲ್ಲಿ ಹಂಚಿಕೊಂಡ ವಿಡಿಯೊದಲ್ಲಿ, ಗೋವುಗಳ ಕಳ್ಳಸಾಗಣೆ ಆರೋಪ ಎದುರಿಸುತ್ತಿದ್ದ ಶಂಕಿತನನ್ನು ಪೊಲೀಸರು ಬಂಧಿಸಿರುವುದಾಗಿ ತಿಳಿಸಿದ್ದರು.

ಪ್ರಧಾನಿ ನರೇಂದ್ರ ಮೋದಿ ಮತ್ತು ಉತ್ತರ ಪ್ರದೇಶದಲ್ಲಿರುವ ಅವರ ರಾಜಕೀಯ ಮಿತ್ರರು ಕಠಿಣ ಪೊಲೀಸ್ ಕ್ರಮಗಳಿಗೆ ಒತ್ತು ನೀಡುತ್ತಿರುವ ಸಂದರ್ಭದಲ್ಲೇ ಈ ಹಿಂಸಾಚಾರ ನಡೆಯುತ್ತಿದೆ. ಅಪರಾಧಿಗಳಲ್ಲಿ ಭಯ ಮೂಡಿಸಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ‘ಅಪರಾಧಗಳ ವಿರುದ್ಧ ಶೂನ್ಯ ಸಹಿಷ್ಣುತೆ’ ನೀತಿಯನ್ನು ಅವರು ಪ್ರಚಾರ ಮಾಡುತ್ತಿದ್ದಾರೆ.

ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿರುವ ಯೋಗಿ ಆದಿತ್ಯನಾಥ್ ಹಿಂದೂ ಸನ್ಯಾಸಿಯಾಗಿದ್ದವರು; ಮೋದಿಯವರ ಭಾರತೀಯ ಜನತಾ ಪಕ್ಷದ (ಬಿಜೆಪಿ) ಹಿರಿಯ ನಾಯಕರಾಗಿದ್ದಾರೆ.

ಆದಿತ್ಯನಾಥ್ ಅವರು 2017ರ ಮಾರ್ಚ್‌ನಲ್ಲಿ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ದಿನದಿಂದ ಈ ವರ್ಷದ ಅಕ್ಟೋಬರ್ 13ರವರೆಗೆ ಎನ್‌ಕೌಂಟರ್‌ಗಳಲ್ಲಿ 316 ಶಂಕಿತರು ಮೃತಪಟ್ಟಿದ್ದಾರೆ. ಅವರಲ್ಲಿ 110 ಮಂದಿ ಮುಸ್ಲಿಮರಾಗಿದ್ದಾರೆ. ಎಪಿ ಪಡೆದುಕೊಂಡ ರಾಜ್ಯ ಪೊಲೀಸ್ ಮಾಹಿತಿಯಲ್ಲಿ ಈ ಅಂಕಿಅಂಶಗಳು ಬಹಿರಂಗವಾಗಿವೆ.

ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ ಮುಸ್ಲಿಮರ ಪಾಲು ಸುಮಾರು ಐದನೇ ಒಂದರಷ್ಟಿದ್ದು, ಎನ್‌ಕೌಂಟರ್‌ಗಳಲ್ಲಿ ಮೃತಪಟ್ಟವರ ಪೈಕಿ ಮುಸ್ಲಿಮರ ಪ್ರಮಾಣ ಅದಕ್ಕಿಂತ ಹೆಚ್ಚಾಗಿದೆ.

ಇದೇ ಅವಧಿಯಲ್ಲಿ 12,890 ಶಂಕಿತರು ಗಾಯಗೊಂಡಿದ್ದಾರೆ. ಕರ್ತವ್ಯ ನಿರ್ವಹಿಸುವಾಗ 18 ಪೊಲೀಸರು ಮೃತಪಟ್ಟಿದ್ದು, 1,953 ಮಂದಿ ಗಾಯಗೊಂಡಿದ್ದಾರೆ. ಪೊಲೀಸರಿಂದ ಗಾಯಗೊಂಡ ಶಂಕಿತರ ಧರ್ಮಕ್ಕೆ ಸಂಬಂಧಿಸಿದ ಮಾಹಿತಿ ಲಭ್ಯವಿರಲಿಲ್ಲ.

“ಶೂನ್ಯ ಸಹಿಷ್ಣುತೆ ನೀತಿಯು ಅಪರಾಧಿಗಳಲ್ಲಿ ಭಯವನ್ನು ಹೆಚ್ಚಿಸಿದೆ, ಸಾರ್ವಜನಿಕರಲ್ಲಿ ಭದ್ರತೆಯ ಭಾವನೆಯನ್ನು ಬಲಪಡಿಸಿದೆ. ಇದೇ ಕಾರಣಕ್ಕೆ ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆ ದೇಶಾದ್ಯಂತ ಮೆಚ್ಚುಗೆಗೆ ಪಾತ್ರವಾಗಿದೆ” ಎಂದು ಉತ್ತರ ಪ್ರದೇಶ ಪೊಲೀಸರು ಮೇ ತಿಂಗಳ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಆದರೆ, ಈ ಕಾರ್ಯವಿಧಾನವು ಬಿಜೆಪಿ ಆಡಳಿತವಿರುವ ನೆರೆಯ ಹರಿಯಾಣ, ಬಿಹಾರ, ಉತ್ತರಾಖಂಡ ಮತ್ತು ರಾಷ್ಟ್ರ ರಾಜಧಾನಿ ನವದೆಹಲಿಯ ಹೊರವಲಯಗಳಿಗೂ ಹರಡುತ್ತಿದೆ ಎಂದು ಹೋರಾಟಗಾರರು ಆರೋಪಿಸಿದ್ದಾರೆ.

ಗುಂಡಿನ ದಾಳಿಗಳಲ್ಲಿನ ಏಕರೂಪದ ಮಾದರಿಯ ಬಗ್ಗೆ ತಜ್ಞರ ಪ್ರಶ್ನೆ

ಪೊಲೀಸರು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಕಟಿಸುವ ವಿಡಿಯೊಗಳಲ್ಲಿ ಪದೇಪದೇ ಒಂದೇ ರೀತಿಯ ಘಟನೆಗಳನ್ನು ವಿವರಿಸುತ್ತಾರೆ. ಶಂಕಿತರು ತಪ್ಪಿಸಿಕೊಳ್ಳಲು ಯತ್ನಿಸುತ್ತಾರೆ, ಪೊಲೀಸರು ಗುಂಡಿನ ದಾಳಿಗೆ ಒಳಗಾಗುತ್ತಾರೆ ಮತ್ತು ಅವರನ್ನು ಕೊಲ್ಲುವ ಬದಲು ನಿಷ್ಕ್ರಿಯಗೊಳಿಸುವ ಉದ್ದೇಶದಿಂದ ಗುಂಡು ಹಾರಿಸುತ್ತಾರೆ ಎಂಬುದು ಪೊಲೀಸರ ವಿವರಣೆಯಾಗಿರುತ್ತದೆ.

ಆದರೆ, ಭಾರತದಲ್ಲಿ ನಡೆಯುವ ಅನೇಕ ಪೊಲೀಸ್ ಗುಂಡಿನ ದಾಳಿಗಳ ಸಂದರ್ಭದಲ್ಲಿ ಶಂಕಿತರಿಂದ ಯಾವುದೇ ಅಪಾಯವಿರುವುದಿಲ್ಲ ಎಂದು ಮಾನವ ಹಕ್ಕುಗಳ ಹೋರಾಟಗಾರರು ಬಹಳ ಹಿಂದಿನಿಂದಲೂ ಆರೋಪಿಸುತ್ತಿದ್ದಾರೆ. ವಿಶೇಷವಾಗಿ, ಮೊಣಕಾಲಿನ ಕೆಳಭಾಗಕ್ಕೆ ಗುಂಡು ತಗುಲಿರುವ ಪ್ರಕರಣಗಳಲ್ಲಿನ ಏಕರೂಪದ ಮಾದರಿಯನ್ನು ಕೆಲವರು ಪ್ರಶ್ನಿಸಿದ್ದಾರೆ. ಇಂತಹ ಗಾಯಗಳು ನಿಜವಾಗಿಯೂ ಆತ್ಮರಕ್ಷಣೆಯ ಸಂದರ್ಭದಲ್ಲಿ ಸಂಭವಿಸಿವೆಯೇ ಎಂಬ ಅನುಮಾನವನ್ನೂ ಅವರು ವ್ಯಕ್ತಪಡಿಸಿದ್ದಾರೆ.

“ಇಂತಹ ಘಟನೆಗಳು ಕಾನೂನನ್ನು ಅಣಕಿಸುವಂತಿವೆ. ಇವು ವ್ಯವಸ್ಥೆಯನ್ನೇ ದುರ್ಬಲಗೊಳಿಸುತ್ತವೆ. ಇದು ರಾಜ್ಯ ಪ್ರಾಯೋಜಿತ ಹಿಂಸಾಚಾರ” ಎಂದು ಉತ್ತರ ಪ್ರದೇಶದ ಹೋರಾಟಗಾರ ಹಾಗೂ ವಿರೋಧ ಪಕ್ಷದ ರಾಜಕೀಯ ನಾಯಕ ಸಂದೀಪ್ ಪಾಂಡೆ ಹೇಳಿದ್ದಾರೆ.

ಉತ್ತರ ಪ್ರದೇಶದ ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದ ಜವಾಹರಲಾಲ್ ನೆಹರು ವೈದ್ಯಕೀಯ ಕಾಲೇಜಿನಲ್ಲಿ ವಿಧಿವಿಜ್ಞಾನ ವೈದ್ಯಕೀಯ ವಿಭಾಗದ ಪ್ರಾಧ್ಯಾಪಕರಾಗಿರುವ ಡಾ. ಮೊಹಮ್ಮದ್ ಕಲೀಂ ಖಾನ್ ಅವರು, ಓಡಿಹೋಗುತ್ತಿರುವ ಅಥವಾ ಹೋರಾಡುತ್ತಿರುವ ವ್ಯಕ್ತಿಯ ಕಾಲಿನ ಮೀನಖಂಡದ ಮೂಲಕ ಮೂಳೆಗೆ ತಾಗದೆ ಗುಂಡು ಅಡ್ಡಲಾಗಿ ಹಾದುಹೋಗುವುದು ಅತ್ಯಂತ ಅಸಂಭವ ಎಂದು ಹೇಳಿದ್ದಾರೆ. ವಿಶೇಷವಾಗಿ, ಗುಂಡು ಹಾರಿಸಿದವರು ಮತ್ತು ಗಾಯಗೊಂಡ ವ್ಯಕ್ತಿಯ ನಡುವಿನ ಅಂತರವನ್ನು ಪರಿಗಣಿಸಿದಾಗ ಇದು ಇನ್ನಷ್ಟು ಅನುಮಾನಾಸ್ಪದವಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

“ಇದು ಆತ್ಮರಕ್ಷಣೆಗಾಗಿ ಹಾರಿಸಿದ ಗುಂಡಲ್ಲ. ವ್ಯಕ್ತಿಯೊಬ್ಬರ ಮೇಲೆ ಉದ್ದೇಶಪೂರ್ವಕವಾಗಿ ಹತ್ತಿರದಿಂದ ಗುಂಡು ಹಾರಿಸಲಾಗಿದೆ” ಎಂದು ಅವರು ಹೇಳಿದ್ದಾರೆ.

ಪೊಲೀಸರ ನಿರ್ಬಂಧರಹಿತ ಅಧಿಕಾರ ಪ್ರಜಾಪ್ರಭುತ್ವಕ್ಕೆ ಅಪಾಯ: ನ್ಯಾಯಾಧೀಶರ ಎಚ್ಚರಿಕೆ

ಈ ಹಿಂಸಾಚಾರವು ನ್ಯಾಯಾಂಗದ ಗಮನವನ್ನೂ ಸೆಳೆದಿದೆ. ಈ ವರ್ಷದ ಜನವರಿಯಲ್ಲಿ ಉತ್ತರ ಪ್ರದೇಶದ ಅತ್ಯುನ್ನತ ನ್ಯಾಯಾಲಯವಾದ ಅಲಹಾಬಾದ್ ಹೈಕೋರ್ಟ್, ರಾಜ್ಯದಲ್ಲಿ ಹೆಚ್ಚುತ್ತಿರುವ ಪೊಲೀಸ್ ಗುಂಡಿನ ದಾಳಿಗಳ ಕುರಿತು ಸಾರ್ವಜನಿಕ ಅಸಮಾಧಾನ ವ್ಯಕ್ತಪಡಿಸಿತ್ತು.

ಪೊಲೀಸರು ನ್ಯಾಯವ್ಯವಸ್ಥೆಯ ಸ್ಥಾನವನ್ನು ಆಕ್ರಮಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಎಚ್ಚರಿಸಿದ್ದ ನ್ಯಾಯಾಲಯ, ಕಾನೂನಿನ ಪ್ರಕಾರ ಕಡ್ಡಾಯವಾಗಿರುವ ವರದಿ ಸಲ್ಲಿಕೆ ಮತ್ತು ತನಿಖಾ ಪ್ರಕ್ರಿಯೆಗಳನ್ನು ಪೊಲೀಸರು ಪಾಲಿಸುತ್ತಿಲ್ಲ ಎಂದು ಟೀಕಿಸಿತ್ತು.

ಈ ವರ್ಷದ ಆರಂಭದಲ್ಲಿ ಜಾಮೀನು ಅರ್ಜಿಯ ವಿಚಾರಣೆ ವೇಳೆ ನೀಡಿದ ತೀರ್ಪಿನಲ್ಲಿ ನ್ಯಾಯಾಧೀಶರೊಬ್ಬರು ಹೀಗೆ ಬರೆದಿದ್ದರು:

“ಪೊಲೀಸ್ ಎನ್‌ಕೌಂಟರ್‌ಗಳ ಪದ್ಧತಿ, ಅದರಲ್ಲೂ ಆರೋಪಿಗಳ ಕಾಲಿಗೆ ಗುಂಡು ಹಾರಿಸುವ ಕ್ರಮವು ದಿನನಿತ್ಯದ ಘಟನೆಯಾಗಿ ಪರಿಣಮಿಸಿರುವುದನ್ನು ಈ ನ್ಯಾಯಾಲಯ ಗಮನಿಸಿದೆ. ಕಾನೂನಿನ ಆಳ್ವಿಕೆಯ ಅಡಿಯಲ್ಲಿ ಇಂತಹ ವರ್ತನೆ ಸಂಪೂರ್ಣವಾಗಿ ಅನುಮತಿಸಲಾಗದು” ಎಂದು ನ್ಯಾಯಾಲಯ ಹೇಳಿತ್ತು.

ಕೆಲವು ಪೊಲೀಸ್ ಅಧಿಕಾರಿಗಳು ವೃತ್ತಿಜೀವನದಲ್ಲಿ ಪ್ರಗತಿ ಸಾಧಿಸುವ ಅಥವಾ ಪ್ರಚಾರ ಪಡೆಯುವ ಉದ್ದೇಶದಿಂದ ಇಂತಹ ಕ್ರಮಗಳನ್ನು ಕೈಗೊಳ್ಳುತ್ತಿರಬಹುದು ಎಂದು ಅಲಹಾಬಾದ್ ಹೈಕೋರ್ಟ್ ಅಭಿಪ್ರಾಯಪಟ್ಟಿತ್ತು. ಹಿರಿಯ ಅಧಿಕಾರಿಗಳ ಗಮನ ಸೆಳೆಯಲು ಅಥವಾ ಸಾರ್ವಜನಿಕರ ಸಹಾನುಭೂತಿ ಪಡೆಯುವ ಚಿತ್ರಣ ಸೃಷ್ಟಿಸಲು ಪೊಲೀಸರು ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳುತ್ತಿರುವಂತೆ ಕಾಣುತ್ತಿದೆ ಎಂದೂ ನ್ಯಾಯಾಲಯ ಹೇಳಿತ್ತು.

ಮತ್ತೊಂದು ಪ್ರಕರಣದಲ್ಲಿ, ಜೂನ್ ತಿಂಗಳಲ್ಲಿ ಅಲಹಾಬಾದ್ ಹೈಕೋರ್ಟ್‌ನ ಮತ್ತೊಬ್ಬ ನ್ಯಾಯಾಧೀಶರು ಉತ್ತರ ಪ್ರದೇಶದಲ್ಲಿ “ಸಾಂಸ್ಥಿಕ ನಿರ್ಬಂಧರಹಿತತೆಯ ಸಂಸ್ಕೃತಿ” ಬೆಳೆಯುತ್ತಿರುವ ಕುರಿತು “ಆಳವಾದ ಸಾಂವಿಧಾನಿಕ ಕಳವಳ” ವ್ಯಕ್ತಪಡಿಸಿದ್ದರು.

ನ್ಯಾಯಾಧೀಶರು ಇಂತಹ ಸಾರ್ವಜನಿಕ ಕಳವಳಗಳನ್ನು ವ್ಯಕ್ತಪಡಿಸಿದ್ದರೂ, ಕಳೆದ ಒಂದು ದಶಕದಲ್ಲಿ ಈ ಪ್ರಕರಣಗಳ ಕುರಿತ ನ್ಯಾಯಾಂಗ ಕ್ರಮಗಳು ನಿಧಾನಗತಿಯಲ್ಲಿ ಸಾಗಿವೆ.

ಉದಾಹರಣೆಗೆ, 2018ರಲ್ಲಿ ಮಾನವ ಹಕ್ಕುಗಳ ಸಂಘಟನೆಯಾದ ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್ (ಪಿಯುಸಿಎಲ್), ಉತ್ತರ ಪ್ರದೇಶದಲ್ಲಿ ನಡೆದ ಪೊಲೀಸ್ ಎನ್‌ಕೌಂಟರ್ ಹತ್ಯೆಗಳಿಗೆ ಸಂಬಂಧಿಸಿದ ಸಾಕ್ಷ್ಯಗಳನ್ನು ಸಲ್ಲಿಸಿತ್ತು. ಇಂತಹ ಘಟನೆಗಳ ಕುರಿತು ಸ್ವತಂತ್ರ ಸಂಸ್ಥೆಯಿಂದ ತನಿಖೆ ನಡೆಸುವಂತೆ ನ್ಯಾಯಾಲಯ ಮಧ್ಯಪ್ರವೇಶಿಸಬೇಕೆಂದು ಮನವಿ ಮಾಡಿತ್ತು. ಆದರೆ, ಆ ಪ್ರಕರಣ ಇನ್ನೂ ಬಾಕಿ ಉಳಿದಿದೆ.

ಗುಂಡಿನ ದಾಳಿಗಳ ಸಂಖ್ಯೆ; ವರ್ಷವಾರು ವಿವರ

ಉತ್ತರ ಪ್ರದೇಶದಲ್ಲಿ ಪೊಲೀಸರು ಗುಂಡು ಹಾರಿಸಿದ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದೆ. ಈ ದಾಳಿಗಳಲ್ಲಿ ಸಾವನ್ನಪ್ಪಿದವರ ಜೊತೆಗೆ ಗಾಯಗೊಂಡವರ ಸಂಖ್ಯೆಯೂ ಹೆಚ್ಚಾಗಿದೆ.

ನ್ಯಾಯವು ರಾಜಕೀಯ ಪ್ರಭಾವಕ್ಕೆ ಒಳಗಾಗಿದೆ ಎಂಬ ಆರೋಪವನ್ನು ಉತ್ತರ ಪ್ರದೇಶದ ಪೊಲೀಸ್ ಅಧಿಕಾರಿ ಅಮಿತಾಭ್ ಯಶ್ ತಳ್ಳಿಹಾಕಿದ್ದಾರೆ. ಶಂಕಿತರ ಮೇಲೆ ಗುಂಡು ಹಾರಿಸಿದ ಕಾರಣಕ್ಕೆ ಪೊಲೀಸರಿಗೆ ಯಾವುದೇ ಬಹುಮಾನ ಅಥವಾ ವೃತ್ತಿಜೀವನದಲ್ಲಿ ಪ್ರಗತಿಯ ಅವಕಾಶ ನೀಡಲಾಗುವುದಿಲ್ಲ ಎಂದೂ ಅವರು ಹೇಳಿದ್ದಾರೆ.

“ಪೊಲೀಸರು ನಡೆಸುವ ಯಾವುದೇ ಕಾರ್ಯಾಚರಣೆಗೆ ಸಂಬಂಧಿಸಿದಂತೆ ವೃತ್ತಿಜೀವನದಲ್ಲಿ ಪ್ರಗತಿ ಕಲ್ಪಿಸುವ ನೀತಿ ಇಲ್ಲ. ಖಂಡಿತವಾಗಿಯೂ ಅಂತಹ ಯಾವುದೇ ನೀತಿಯಿಲ್ಲ” ಎಂದು ಅವರು ಹೇಳಿದ್ದಾರೆ.

ಪೊಲೀಸ್ ಗುಂಡಿನ ದಾಳಿಯಿಂದ ಕುಟುಂಬಗಳು ದಿಕ್ಕುತೋಚದ ಸ್ಥಿತಿಗೆ

ಪೊಲೀಸರಿಂದ ಕಾಲಿಗೆ ಗುಂಡೇಟು ತಗುಲಿದ್ದ ಉತ್ತರ ಪ್ರದೇಶದ ಆರು ಜನ ಮುಸ್ಲಿಮರ ಕುಟುಂಬಗಳೊಂದಿಗೆ ಅಸೋಸಿಯೇಟೆಡ್ ಪ್ರೆಸ್ (ಎಪಿ) ಮಾತನಾಡಿದೆ. ಸಾರ್ವಜನಿಕವಾಗಿ ಮಾತನಾಡಲು ತೀವ್ರ ಭಯವಿರುವುದಾಗಿ ತಿಳಿಸಿದ ಈ ಎಲ್ಲ ಕುಟುಂಬಗಳು ತಮ್ಮ ಗುರುತನ್ನು ಬಹಿರಂಗಪಡಿಸದಂತೆ ಮನವಿ ಮಾಡಿವೆ. ಸಂದರ್ಶನದ ಸಮಯದಲ್ಲಿ ಈ ಆರು ಜನರೂ ಜೈಲಿನಲ್ಲಿದ್ದರು ಅಥವಾ ಪೊಲೀಸರಿಂದ ತಪ್ಪಿಸಿಕೊಳ್ಳಲು ಅಡಗಿಕೊಂಡು ಬದುಕುತ್ತಿದ್ದರು.

ಎಮ್ಮೆಗಳನ್ನು ಖರೀದಿಸಿ ಮಾರಾಟ ಮಾಡುವ ಮೂಲಕ ತನ್ನ ಮಗ ಕುಟುಂಬದ ಎಲ್ಲ ಸದಸ್ಯರ ಜೀವನ ನಿರ್ವಹಣೆಗೆ ನೆರವಾಗುತ್ತಿದ್ದ ಎಂದು ಮಹಿಳೆಯೊಬ್ಬರು ಎಪಿಗೆ ತಿಳಿಸಿದ್ದಾರೆ. ಎಮ್ಮೆಗಳು ಗೋಸಂರಕ್ಷಣಾ ಕಾನೂನುಗಳ ವ್ಯಾಪ್ತಿಗೆ ಬರುವುದಿಲ್ಲ.

“ಈಗ ಅವನು ಕುಂಟನಾಗಿದ್ದಾನೆ. ಅವನ ಕಾಲಿನಲ್ಲಿ ದೊಡ್ಡ ಊತ ಕಾಣಿಸಿಕೊಂಡಿದೆ. ಯಾರಾದರೂ ಏನಾದರೂ ಕೊಟ್ಟರೆ ನಾವು ಅದನ್ನು ಸ್ವೀಕರಿಸುತ್ತೇವೆ. ಹೀಗೆ ಹೇಗೋ ಜೀವನ ಸಾಗಿಸುತ್ತಿದ್ದೇವೆ. ಆ ಬಡಪಾಯಿ ಈಗ ಹೊರಗೆ ಹೋಗಿ ದುಡಿದು ಸಂಪಾದಿಸಲು ಸಾಧ್ಯವಾಗುತ್ತಿಲ್ಲ. ಜನರು ಏನು ಕೊಡುತ್ತಾರೋ ಅದನ್ನೇ ತಿಂದು ಬದುಕುತ್ತಿದ್ದೇವೆ” ಎಂದು ಅವರು ಹೇಳಿದ್ದಾರೆ.

ಎಮ್ಮೆಗಳ ಹಾಲಿನ ವ್ಯಾಪಾರ ಮಾಡುತ್ತಿದ್ದ ತನ್ನ ಮಗನ ಎರಡೂ ಮೊಣಕಾಲುಗಳಿಗೆ ಪೊಲೀಸರು ಗುಂಡು ಹಾರಿಸಿದ್ದಾರೆ ಎಂದು ಮತ್ತೊಬ್ಬ ಮಹಿಳೆ ಹೇಳಿದ್ದಾರೆ. ಇದರಿಂದಾಗಿ ಕುಟುಂಬವು ಸಣ್ಣಪುಟ್ಟ ಸಾಲಗಳನ್ನು ಪಡೆದು ಜೀವನ ನಡೆಸುವಂತಾಗಿದೆ. ಮಗನನ್ನು ಆಸ್ಪತ್ರೆಯಲ್ಲಿ ನೋಡಲು ಹೋದಾಗ ಆತನ ಗಾಯಗಳಿಂದ ರಕ್ತ ಸುರಿಯುತ್ತಿತ್ತು ಎಂದು ಅವರು ತಿಳಿಸಿದ್ದಾರೆ.

“ಅವನು ಸಂಪೂರ್ಣವಾಗಿ ಕುಗ್ಗಿಹೋಗಿದ್ದಾನೆ. ನಮ್ಮ ಕೈಗಳನ್ನು ಹಿಡಿದುಕೊಂಡಿದ್ದ ಅಷ್ಟೇ. ಇಡೀ ಕುಟುಂಬ ಅತ್ತಿತು. ಅವನು ನಿರಂತರವಾಗಿ ಅಳುತ್ತಿದ್ದ” ಎಂದು ಆಕೆ ಹೇಳಿದ್ದಾರೆ.

ಪೊಲೀಸ್ ಗುಂಡಿನ ದಾಳಿಗಳಿಗೆ ಇದೆ ಧಾರ್ಮಿಕ ಆಯಾಮ!

“ಸೆಂಟರ್ ಫಾರ್ ದಿ ಸ್ಟಡಿ ಆಫ್ ಆರ್ಗನೈಸ್ಡ್ ಹೇಟ್” ಸಂಗ್ರಹಿಸಿದ ಅಂಕಿಅಂಶಗಳ ಪ್ರಕಾರ, ಗೋವುಗಳ ಕಳ್ಳಸಾಗಣೆಗೆ ಸಂಬಂಧಿಸಿದ ಎನ್‌ಕೌಂಟರ್‌ಗಳಲ್ಲಿ ಗಾಯಗೊಂಡ ಶಂಕಿತರಲ್ಲಿ ಸುಮಾರು ಶೇ. 93ರಷ್ಟು ಮಂದಿ ಮುಸ್ಲಿಮರಾಗಿದ್ದಾರೆ. ಭಾರತದ ಜನಸಂಖ್ಯೆಯ ಬಹುಪಾಲು ಹಿಂದೂಗಳಾಗಿದ್ದು, ಪೊಲೀಸ್ ಇಲಾಖೆಯಲ್ಲಿಯೂ ಹಿಂದೂಗಳೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.

ಹೆಸರು ಅಥವಾ ಇತರ ಗುರುತಿನ ಮಾಹಿತಿಗಳು ಲಭ್ಯವಿದ್ದ 627 ಪ್ರಕರಣಗಳನ್ನು ಮಾತ್ರ ಈ ವಿಶ್ಲೇಷಣೆ ಒಳಗೊಂಡಿದೆ.

ನೂರಾರು ಗುಂಡಿನ ದಾಳಿಗಳ ಕುರಿತು ಸಂಗ್ರಹಿಸಿರುವ ಸಾಕ್ಷ್ಯಗಳು, “ರಾಜ್ಯದ ಸಂಸ್ಥೆಗಳು, ವಿಶೇಷವಾಗಿ ಕಾನೂನು ಜಾರಿ ಸಂಸ್ಥೆಗಳು, ಮುಸ್ಲಿಂ ಅಲ್ಪಸಂಖ್ಯಾತ ಸಮುದಾಯದ ಮೇಲಿನ ದಮನಕ್ಕೆ ಬಳಸುವ ಸಾಧನಗಳಾಗಿ ಹೆಚ್ಚೆಚ್ಚು ರೂಪಾಂತರಗೊಳ್ಳುತ್ತಿವೆ ಎಂಬುದನ್ನು ಸ್ಪಷ್ಟವಾಗಿ ತೋರಿಸುತ್ತವೆ” ಎಂದು ಕೇಂದ್ರದ ಕಾರ್ಯನಿರ್ವಾಹಕ ನಿರ್ದೇಶಕ ರಕೀಬ್ ನಾಯಕ್ ಹೇಳಿದ್ದಾರೆ.

“ಇದು ದಮನವನ್ನು ಆಡಳಿತಾತ್ಮಕ ವ್ಯವಸ್ಥೆಯ ಭಾಗವಾಗಿಸುವ ಪ್ರಕ್ರಿಯೆಯಾಗಿ ವಿಕಸನಗೊಂಡಿರುವಂತೆ ಕಾಣುತ್ತದೆ. ಪೊಲೀಸ್ ಕಾರ್ಯವೈಖರಿಯು ಬಹುಸಂಖ್ಯಾತ ಸಮುದಾಯದ ಪರವಾದ ರಾಜಕೀಯದೊಂದಿಗೆ ಹೆಚ್ಚು ನಿಕಟವಾಗಿ ಬೆಸೆದುಕೊಳ್ಳುತ್ತಿರುವಂತೆ ತೋರುತ್ತದೆ” ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಶಾಂತಿ ಬಾಂಡ್‌ಗೆ ಸಹಿ ಹಾಕಲು ನಿರಾಕರಿಸಿದ ನೇಹಾ ಬೋರಾ; ನೋಟಿಸ್‌ನ ಔಚಿತ್ಯದ ಬಗ್ಗೆ ಪ್ರಶ್ನೆ

ಅಖಿಲ ಭಾರತ ವಿದ್ಯಾರ್ಥಿ ಸಂಘದ (ಎಐಎಸ್‌ಎ) ಅಧ್ಯಕ್ಷೆ ನೇಹಾ ಬೋರಾ ಅವರು ವಿಶೇಷ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್‌ (ಎಸ್‌ಇಎಂ) ಮುಂದೆ ಶಾಂತಿ ಬಾಂಡ್‌ಗೆ ಸಹಿ ಹಾಕುವುದಿಲ್ಲ ಎಂದು ಶನಿವಾರ (ಅ. 24) ಹೇಳಿದ್ದಾರೆ. ರೂ....

ಚುನಾವಣಾ ಆಯೋಗದ ಕಾರ್ಯವೈಖರಿ ಪರಿಶೀಲಿಸಲು ನಿವೃತ್ತ ಸಿಜೆಐ ನೇತೃತ್ವದಲ್ಲಿ ತಜ್ಞರ ಸಮಿತಿ ರಚಿಸುವಂತೆ ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ

ಭಾರತೀಯ ಚುನಾವಣಾ ಆಯೋಗದ (ಇಸಿಐ) ಕಾರ್ಯನಿರ್ವಹಣೆಯಲ್ಲಿರುವ ಸಾಂಸ್ಥಿಕ ನ್ಯೂನತೆಗಳನ್ನು ಪರಿಶೀಲಿಸಲು, ಸುಪ್ರೀಂ ಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಅಥವಾ ನಿವೃತ್ತ ನ್ಯಾಯಾಧೀಶರೊಬ್ಬರ ಅಧ್ಯಕ್ಷತೆಯಲ್ಲಿ ಸ್ವತಂತ್ರ ತಜ್ಞ ಸಮಿತಿಯೊಂದನ್ನು ರಚಿಸುವಂತೆ ಕೋರಿ ಸುಪ್ರೀಂ ಕೋರ್ಟ್‌ನಲ್ಲಿ...

ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ₹13.97 ಕೋಟಿ ಅನಧಿಕೃತ ವಹಿವಾಟು: ಎಫ್‌ಐಆರ್ ದಾಖಲು

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಜೊತೆಗಿನ ತನ್ನ ಸೆಟಲ್‌ಮೆಂಟ್ ಖಾತೆಯಿಂದ ರೂ 13.97 ಕೋಟಿ ಹಣವನ್ನು ಅನಧಿಕೃತವಾಗಿ ವರ್ಗಾಯಿಸಲಾಗಿದೆ (ಸೈಫನ್ ಮಾಡಲಾಗಿದೆ) ಎಂದು ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಆರೋಪಿಸಿದೆ. ಹಿಂದುಸ್ತಾನ್ ಟೈಮ್ಸ್...

ಡಿ.ಕೆ ಶಿವಕುಮಾರ್, ಕೇರಳ ಸಿಎಂ ಸತೀಶನ್‌ಗೆ ಸ್ಟಿಂಗ್ ಆಪರೇಷನ್ ಬಲೆ? ಉನ್ನತ ಮಟ್ಟದ ತನಿಖೆಗೆ ಕಾಂಗ್ರೆಸ್ ಹೈಕಮಾಂಡ್ ಸೂಚನೆ

ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಕೇರಳದ ಮುಖ್ಯಮಂತ್ರಿ ವಿ.ಡಿ. ಸತೀಶನ್ ಅವರನ್ನು ಗುರಿಯಾಗಿಸಿಕೊಂಡು ಸ್ಟಿಂಗ್ ಆಪರೇಷನ್ ನಡೆಸಲು ಯತ್ನಿಸಲಾಗಿದೆ ಎಂಬ ಆರೋಪದ ಕುರಿತು ಉನ್ನತ ಮಟ್ಟದ ತನಿಖೆ ನಡೆಸುವಂತೆ ಕಾಂಗ್ರೆಸ್ ಹೈಕಮಾಂಡ್...

‘ಬಿಳೇಕಹಳ್ಳಿ’ ಮೆಟ್ರೋ ನಿಲ್ದಾಣಕ್ಕೆ ಕೇವಲ ‘ಐಐಎಂಬಿ’ ಹೆಸರಿಟ್ಟಿರುವುದಕ್ಕೆ ಸ್ಥಳೀಯರಿಂದ ತೀವ್ರ ವಿರೋಧ : ಮರುನಾಮಕರಣಕ್ಕೆ ಆಗ್ರಹ

ಬೆಂಗಳೂರಿನ 'ನಮ್ಮ ಮೆಟ್ರೋ' ಗುಲಾಬಿ ಮಾರ್ಗದ (Pink Line) 'ಬಿಳೇಕಹಳ್ಳಿ' ನಿಲ್ದಾಣಕ್ಕೆ ಕೇವಲ ಐಐಎಂಬಿ (ಇಂಡಿಯನ್ ಇನ್ಸಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಬೆಂಗಳೂರು) ಎಂದು ಹೆಸರಿಟ್ಟಿರುವುದಕ್ಕೆ ಊರಿನ ಜನರು ತೀವ್ರ ಅಸಮಾಧಾನ, ಆಕ್ರೋಶ ವ್ಯಕ್ತಪಡಿಸಿದ್ದು,...

ಬಾಲ್ಯದಲ್ಲಿ ಮಾಡಿದ ಕೃತ್ಯಗಳಿಗಾಗಿ ಸೌದಿಯಲ್ಲಿ ಮರಣದಂಡನೆ: ವಿಶ್ವಸಂಸ್ಥೆ ತಜ್ಞರ ತೀವ್ರ ಖಂಡನೆ, ಇಬ್ಬರ ಜೀವ ಉಳಿಸಲು ಆಗ್ರಹ

ಸೌದಿ ಅರೇಬಿಯಾದಲ್ಲಿ ಬಾಲ್ಯದಲ್ಲಿ ಮಾಡಿದ ಕೃತ್ಯಗಳಿಗಾಗಿ ಮರಣದಂಡನೆಗೆ ಗುರಿಯಾಗಿದ್ದ ಹಸನ್ ಝಾಕಿ ಅಲ್-ಫರಾಜ್ ಅವರನ್ನು ಗಲ್ಲಿಗೇರಿಸಿರುವುದಕ್ಕೆ ವಿಶ್ವಸಂಸ್ಥೆಯ ತಜ್ಞರು ತೀವ್ರ ಆಘಾತ ಮತ್ತು ಖಂಡನೆ ವ್ಯಕ್ತಪಡಿಸಿದ್ದಾರೆ. ಇದೇ ಪ್ರಕರಣದ ಮಾದರಿಯಲ್ಲಿ ಮರಣದಂಡನೆ ಎದುರಿಸುತ್ತಿರುವ...

ತಮಿಳುನಾಡು| ಜಾತಿ ತಾರತಮ್ಯಕ್ಕೆ ದಲಿತ ವಿದ್ಯಾರ್ಥಿ ಆತ್ಮಹತ್ಯೆ ಪ್ರಕರಣ: ಶಿಕ್ಷಕನ ಬಂಧನ; ಸಹಪಾಠಿಗಳ ವಿರುದ್ಧ ಕೇಸ್‌ ದಾಖಲು

ಕೊಯಮತ್ತೂರಿನ ಸರ್ಕಾರಿ ಅನುದಾನಿತ ಶಾಲೆಯೊಂದರಲ್ಲಿ 11ನೇ ತರಗತಿಯಲ್ಲಿ ಓದುತ್ತಿದ್ದ 16 ವರ್ಷದ ದಲಿತ ವಿದ್ಯಾರ್ಥಿಯೊಬ್ಬ, ಸಹಪಾಠಿಗಳಿಂದ ಜಾತಿ ಆಧಾರಿತ ಕಿರುಕುಳಕ್ಕೆ ಒಳಗಾದ ನಂತರ, ಅಕ್ಟೋಬರ್ 21, ಬುಧವಾರದಂದು ತನ್ನ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ...

ತಮಿಳುನಾಡು ಮುಖ್ಯ ಚುನಾವಣಾಧಿಕಾರಿಯ ಸರ್ವಪಕ್ಷ ಸಭೆಯಿಂದ ಹೊರನಡೆದ ಟಿವಿಕೆ, ಡಿಎಂಕೆ ಸೇರಿದಂತೆ ಒಂಬತ್ತು ಪಕ್ಷಗಳು : ಸಿಇಸಿ ಗ್ಯಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹ

ತಮಿಳುನಾಡಿನ ಆಡಳಿತಾರೂಢ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಮತ್ತು ಪ್ರಮುಖ ವಿರೋಧ ಪಕ್ಷವಾದ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಸೇರಿದಂತೆ ಒಂಬತ್ತು ರಾಜಕೀಯ ಪಕ್ಷಗಳು, ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ಅವರ...

ಉತ್ತರ ಪ್ರದೇಶ: ದುರ್ಗಾ ಮೂರ್ತಿ ವಿಸರ್ಜನೆ ಮೆರವಣಿಗೆ ವೀಕ್ಷಿಸುತ್ತಿದ್ದ ದಲಿತರ ಮೇಲೆ ಹಲ್ಲೆ, ಜಾತಿ ನಿಂದನೆ; ಆರು ಜನರ ವಿರುದ್ಧ ಪ್ರಕರಣ

ಉತ್ತರ ಪ್ರದೇಶದ ಬಲ್ಲಿಯಾ ಜಿಲ್ಲೆಯಲ್ಲಿ ದುರ್ಗಾ ಮೂರ್ತಿ ವಿಸರ್ಜನೆ ಮೆರವಣಿಗೆಯನ್ನು ವೀಕ್ಷಿಸುತ್ತಿದ್ದ ದಲಿತ ಸಮುದಾಯದ ಪುರುಷರ ಮೇಲೆ ಗುಂಪೊಂದು ಹಲ್ಲೆ ನಡೆಸಿ, ಜಾತಿ ನಿಂದನೆ ಮಾಡಿರುವ ಆರೋಪ ಕೇಳಿಬಂದಿದೆ. ಈ ಘಟನೆಯಲ್ಲಿ ನಾಲ್ವರು...

‘ಮತ್ತೊಂದು ಗಾಲ್ವಾನ್ ಸಂಭವಿಸುತ್ತಿದೆಯೇ?’: ಅರುಣಾಚಲದಲ್ಲಿ ಚೀನಾ ಸೇನೆ ಜೊತೆಗಿನ ಮುಖಾಮುಖಿ ವರದಿ ಬೆನ್ನಲ್ಲೇ ಪ್ರಧಾನಿ ಮೋದಿ ವಿರುದ್ಧ ಕಾಂಗ್ರೆಸ್ ವಾಗ್ದಾಳಿ

ಅರುಣಾಚಲ ಪ್ರದೇಶದಲ್ಲಿ ಭಾರತ ಮತ್ತು ಚೀನಾ ಪಡೆಗಳ ನಡುವೆ ಮುಖಾಮುಖಿ ಮುಂದುವರಿದಿರುವ ವರದಿಗಳ ಕುರಿತು ಕೇಂದ್ರ ಸರ್ಕಾರ ಮೌನ ವಹಿಸಿದೆ ಎಂದು ಶುಕ್ರವಾರ (ಅ.23) ಕಾಂಗ್ರೆಸ್ ವಾಗ್ದಾಳಿ ನಡೆಸಿದೆ. ಗಡಿ ಭದ್ರತೆ ಮತ್ತು...