ಸುಪ್ರೀಂ ಕೋರ್ಟ್‌ಗೆ ಚುನಾವಣಾ ಆಯೋಗ ಸೋಮವಾರ (ಅ.26) ಸಲ್ಲಿಸಿರುವ ಅಫಿಡವಿಟ್‌ನಲ್ಲಿ ಹೊಸ ಮತದಾರರನ್ನು ಸೇರಿಸುವ ‘ಫಾರಂ-6ರ’ ಜೊತೆ ಸಲ್ಲಿಸುವಂತೆ ಸೂಚಿಸಲಾಗಿದ್ದ ‘ಘೋಷಣಾ ಪತ್ರ’ ಫಾರಂ-6ರ ಭಾಗವಾಗಿರಲಿಲ್ಲ (Declaration not a part of Form-6 ) ಎಂದು ಹೇಳಿದೆ.
ಚುನಾವಣಾ ಆಯೋಗ ನಿರ್ಧಾರಗಳ ಕುರಿತು ಪ್ರಶ್ನೆಗಳನ್ನು ಎತ್ತಿ ಸಾಮಾಜಿಕ ಕಾರ್ಯಕರ್ತ ರಾಕೇಶ್ ಕುಮಾರ್ ಸಿಂಗ್ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿರುವ ಅರ್ಜಿಗೆ ಉತ್ತರವಾಗಿ ಚುನಾವಣಾ ಆಯೋಗ ಈ ಅಫಿಡವಿಟ್ ಸಲ್ಲಿಸಿದೆ.
ಚುನಾವಣಾ ಆಯೋಗದ ಈ ಅಪಿಡವಿಟ್ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧ ಚರ್ಚೆಗಳು ನಡೆಯುತ್ತಿವೆ. ಅನೇಕ ವಕೀಲರು, ಸಾಮಾಜಿಕ ಕಾರ್ಯಕರ್ತರು, ಹೋರಾಟಗಾರರು ಚುನಾವಣಾ ಆಯೋಗ ಸುಪ್ರೀಂ ಕೋರ್ಟ್‌ಗೆ ಸುಳ್ಳು ಹೇಳಿದೆ ಎಂದು ಹೇಳಿದ್ದಾರೆ.
ಹಿರಿಯ ನ್ಯಾಯವಾದಿ ಪ್ರಶಾಂತ್ ಭೂಷಣ್ ಅವರು ಒಂದು ಹೆಜ್ಜೆ ಮುಂದೆ ಹೋಗಿ, “ಸುಪ್ರೀಂ ಕೋರ್ಟ್‌ಗೆ ಸುಳ್ಳು ಹೇಳಿದ್ದಕ್ಕೂ ಮುಖ್ಯ ಸಿಇಸಿ ಗ್ಯಾನೇಶ್ ಕುಮಾರ್ ಮೇಲೆ ಕ್ರಮ ಕೈಗೊಳ್ಳಬೇಕು” ಆಗ್ರಹಿಸಿದ್ದಾರೆ.
ಪ್ರಸ್ತುತ ಹಿಂಪಡೆದಿರುವ ಫಾರಂ-6ರ ಜೊತೆಗಿನ ಹೆಚ್ಚುವರಿ ‘ಘೋಷಣಾ ಪತ್ರ’ ಫಾರಂ-6ರ ಭಾಗವಾಗಿರಲಿಲ್ಲ ಎಂದು ಚುನಾವಣಾ ಆಯೋಗ ತನ್ನ ಅಫಿಡವಿಟ್‌ನಲ್ಲಿ ಸಮರ್ಥಿಸಿಕೊಂಡಿದೆ ಎಂದು ವರದಿಯಾಗಿದೆ. ಆದರೆ, ಆಯೋಗವೇ ಈ ಹಿಂದೆ ಹೊರಡಿಸಿದ್ದ ಪತ್ರಿಕಾ ಪ್ರಕಟಣೆಯಲ್ಲಿ ‘ಘೋಷಣಾ ಪತ್ರ’ ಫಾರಂ-6 ಭಾಗವಾಗಿದೆ ಎಂಬುದಾಗಿ ಹೇಳಿತ್ತು ಎಂದು ಆರ್‌ಟಿಐ ಕಾರ್ಯಕರ್ತೆ ಮತ್ತು ಎಸ್‌ಐಆರ್ ವಿರುದ್ಧದ ಮುಂಚೂಣಿ ಹೋರಾಟಗಾರ್ತಿ ಅಂಜಲಿ ಭಾರದ್ವಾಜ್ ಎತ್ತಿ ತೋರಿಸಿದ್ದಾರೆ.
“ವಾಹ್! ಚುನಾವಣಾ ಆಯೋಗ ತನ್ನ ಅಫಿಡವಿಟ್‌ನಲ್ಲಿ ‘ಘೋಷಣೆಯು ಫಾರಂ 6ರ ಭಾಗವಲ್ಲ’ ಎಂದು ಹೇಳಿದೆ. ಆದರೆ ಸೆಪ್ಟೆಂಬರ್ 26, 2026ರ ತನ್ನ ಪತ್ರಿಕಾ ಪ್ರಕಟಣೆಯಲ್ಲಿ, ‘ಎಸ್‌ಐಆರ್‌ಗಾಗಿ ಫಾರಂ 6ಕ್ಕೆ ಲಗತ್ತಿಸಲಾದ ಘೋಷಣೆಯನ್ನು ಗೌರವಾನ್ವಿತ ಸುಪ್ರೀಂ ಕೋರ್ಟ್ ಎತ್ತಿಹಿಡಿದಿದೆ’ ಎಂದು ಹೇಳಿತ್ತು. ಹೊಣೆಗಾರಿಕೆಯಿಂದ ನುಣುಚಿಕೊಳ್ಳಲು ಚುನಾವಣಾ ಆಯೋಗವು ಪದಗಳ ಆಟವಾಡುತ್ತಿದೆಯೇ?!” ಎಂದು ಅಂಜಲಿ ಭಾರದ್ವಾಜ್ ಎಕ್ಸ್ ಜಾಲತಾಣದಲ್ಲಿ ಹಾಕಿರುವ ಪೋಸ್ಟ್‌ನಲ್ಲಿ ಪ್ರಶ್ನಿಸಿದ್ದಾರೆ.
2026ರ ಸೆಪ್ಟೆಂಬರ್ 29ರಂದು ಹೊರಡಿಸಿದ ಪತ್ರಿಕಾ ಪ್ರಕಟಣೆಯಲ್ಲಿ, “ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಗಾಗಿ ಫಾರಂ- 6ರೊಂದಿಗೆ ಲಗತ್ತಿಸಲಾದ ಘೋಷಣಾ ಪತ್ರವನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿದೆ. ಎಸ್‌ಐಆರ್ ಅಲ್ಲದ ಸಮಯದಲ್ಲಿ ನಿಯಮಗಳ (1960ರ ಮತದಾರರ ನೋಂದಣಿ ನಿಯಮಗಳು) ಪ್ರಕಾರ ಅನ್ವಯವಾಗುವ ನಮೂನೆಗಳನ್ನು ಬಳಸಲಾಗುತ್ತದೆ” ಎಂದು ಚುನಾವಣಾ ಆಯೋಗ ಹೇಳಿತ್ತು.
ಅಂಜಲಿ ಭಾರದ್ವಾಜ್ ಸೇರಿದಂತೆ ಹಲವರು ಎತ್ತಿರುವ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿರುವ ಕೆಲ ಸಾಮಾಜಿಕ ಜಾತಾಣ ಬಳಕೆದಾರರು,” ಚುನಾವಣಾ ಆಯೋಗ ‘ಘೋಷಣಾ ಪತ್ರ’ ಫಾರಂ-6ರಲ್ಲೇ ಒಳಗೊಂಡಿರಲಿಲ್ಲ, ಅದು ಪ್ರತ್ಯೇಕ ಇತ್ತು. ಹಾಗಾಗಿ, ಫಾರಂ-6ರಲ್ಲಿ ಬದಲಾವಣೆಗಳು ಮಾಡಲಾಗಿಲ್ಲ” ಎಂದು ಹೇಳಿದೆ. ಆದ್ದರಿಂದ ಆಯೋಗದ ಸಮರ್ಥನೆ ಸರಿಯಾಗಿದೆ ಎಂದಿದ್ದಾರೆ.

ವರದಿಗಳ ಪ್ರಕಾರ, ಮೂರನೇ ಹಂತದ ಎಸ್‌ಐಆರ್ ನಡೆಯುತ್ತಿದ್ದ ಸಂದರ್ಭದಲ್ಲಿ ಚುನಾವಣಾ ಆಯೋಗವು ಅನ್‌ಲೈನ್ ಫಾರಂ-6ರಲ್ಲಿ ಎಸ್‌ಐಆರ್ ಮ್ಯಾಪಿಂಗ್ ಮಾಡುವ ಹೊಸತೊಂದು ಕಾಲಂ ಸೇರಿಸಿತ್ತು. ಆನ್‌ಲೈನ್ ಆವೃತ್ತಿಯಲ್ಲಿ ಮಾತ್ರ ಗೌಪ್ಯವಾಗಿ ಈ ಬದಲಾವಣೆ ಮಾಡಿತ್ತು. ಆಫ್‌ಲೈನ್ ಅವೃತ್ತಿಯಲ್ಲಿ ಬದಲಾವಣೆ ಮಾಡಿರಲಿಲ್ಲ.
ಈ ವಿಷಯ ಬಹಿರಂಗೊಂಡಾಗ, ಸಿಪಿಐ(ಎಂ) ರಾಜ್ಯಸಭಾ ಸಂಸದ ಜಾನ್ ಬ್ರಿಟ್ಟಾಸ್ ಅವರು ಮುಖ್ಯ ಚುನಾವಣಾ ಆಯುಕ್ತರಿಗೆ ಪತ್ರ ಬರೆದು ಆಕ್ಷೇಪ ವ್ಯಕ್ತಪಡಿಸಿದ್ದರು. ಚುನಾವಣಾ ಆಯೋಗವು ‘ಸಂಪೂರ್ಣವಾಗಿ ಕಾನೂನು ಅಧಿಕಾರವಿಲ್ಲದೆ ಕಾರ್ಯನಿರ್ವಹಿಸಿದೆ’ ಎಂದು ಅವರು ಕಳವಳ ವ್ಯಕ್ತಪಡಿಸಿದ್ದರು.
ಜಾನ್ ಬ್ರಿಟ್ಟಾಸ್ ಪತ್ರ ಬರೆದ ಬಳಿಕ ಈ ವಿಷಯ ದೊಡ್ಡ ಮಟ್ಟದಲ್ಲಿ ಚರ್ಚೆ ಆಗಿತ್ತು. ಆ ಬಳಿಕ ಚುನಾವಣಾ ಆಯೋಗ ಸದ್ದಿಲ್ಲದೆ ಆನ್‌ಲೈನ್ ಫಾರಂ-6ರಲ್ಲಿ ಮಾಡಿದ್ದ ಬದಲಾವಣೆಯನ್ನು ತೆಗೆದು ಹಾಕಿತು.
ಸಾಮಾನ್ಯವಾಗಿ ಫಾರ್ಮ್ 6 ರಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಲು 1950ರ ಜನಪ್ರತಿನಿಧಿ ಕಾಯ್ದೆ ಅಥವಾ ಅದಕ್ಕೆ ಸಂಬಂಧಿಸಿದ ನಿಯಮಗಳಿಗೆ ಸಂಸತ್ತಿನ ತಿದ್ದುಪಡಿಯ ಅಗತ್ಯವಿರುತ್ತದೆ. ಹಾಗಾಗಿ, ನೇರವಾಗಿ ಫಾರಂ 6ರಲ್ಲಿ ಬದಲಾವಣೆ ಸಾಧ್ಯವಿಲ್ಲ ಎಂದು ಅರಿತ ಚುನಾವಣಾ ಆಯೋಗ, ಫಾರಂ 6ರ ಜೊತೆ ಹೆಚ್ಚುವರಿ ಘೋಷಣಾ ಪತ್ರ ತಂದಿತ್ತು.
ಈ ಹೆಚ್ಚುವರಿ ಘೋಷಣಾ ಪತ್ರದ ಬಗ್ಗೆಯೂ ಆಕ್ಷೇಪಗಳು ವ್ಯಕ್ತವಾಗಿತ್ತು. ಆದರೆ, ಆಯೋಗ ಅದನ್ನು ಸಮರ್ಥಿಸಿಕೊಂಡೇ ಬಂದಿತ್ತು. ಇತ್ತೀಚೆಗೆ ಪ್ರಕಟಗೊಂಡ ಇಂಡಿಯನ್ ಎಕ್ಸ್‌ಪ್ರೆಸ್ ವರದಿಯ ನಂತರ ದೇಶದಲ್ಲಿ ಎಸ್‌ಐಆರ್ ಮತ್ತು ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ವಿರುದ್ಧ ದೊಡ್ಡ ಮಟ್ಟದ ಆಕ್ರೋಶ ವ್ಯಕ್ತವಾದಾಗ ಆಯೋಗ ಘೋಷಣಾ ಪತ್ರವನ್ನೂ ವಾಪಾಸ್ ಪಡೆದುಕೊಂಡಿತು.


