ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದ ವಿದ್ಯಾರ್ಥಿ ಒಕ್ಕೂಟದ (AMUSU) 105 ವರ್ಷಗಳ ಇತಿಹಾಸದಲ್ಲೇ ಉಪಾಧ್ಯಕ್ಷರಾಗಿ ಆಯ್ಕೆಯಾದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಕಾನೂನು ವಿದ್ಯಾರ್ಥಿನಿ ನಶ್ರಾ ನಯೀಮ್ ಪಾತ್ರರಾಗಿದ್ದಾರೆ. ಶುಕ್ರವಾರ (ನ.6) ಪ್ರಕಟಗೊಂಡ ಚುನಾವಣೆಯ ಫಲಿತಾಂಶದಲ್ಲಿ, ಒಟ್ಟು 13 ಸ್ಥಾನಗಳ ಪೈಕಿ ಮಹಿಳಾ ಅಭ್ಯರ್ಥಿಗಳು ಆರು ಸ್ಥಾನಗಳನ್ನು ಗೆದ್ದುಕೊಂಡಿದ್ದಾರೆ.
ನಶ್ರಾ ನಯೀಮ್ 7,091 ಮತಗಳನ್ನು ಪಡೆಯುವ ಮೂಲಕ, 5,818 ಮತಗಳನ್ನು ಗಳಿಸಿದ ತಮ್ಮ ಸಮೀಪದ ಪ್ರತಿಸ್ಪರ್ಧಿಯನ್ನು ಸೋಲಿಸಿದ್ದಾರೆ. ಮಹಿಳಾ ಅಭ್ಯರ್ಥಿಗಳು ಒಟ್ಟು 10 ಕ್ಯಾಬಿನೆಟ್ ಸದಸ್ಯ ಸ್ಥಾನಗಳ ಪೈಕಿ ಐದರಲ್ಲಿ ದಾಖಲೆ ಜಯ ಸಾಧಿಸಿದ್ದಾರೆ, ಇದು ವಿದ್ಯಾರ್ಥಿ ಒಕ್ಕೂಟದಲ್ಲಿ ಅವರ ಪ್ರಾತಿನಿಧ್ಯದ ಗಣನೀಯ ಹೆಚ್ಚಳವನ್ನು ಸೂಚಿಸುತ್ತದೆ.
ಸಂಶೋಧನಾ ವಿದ್ಯಾರ್ಥಿ ಮೊಹಮ್ಮದ್ ನೋಮನ್ ಅಶ್ರಫ್ ಅವರು 4,100ಕ್ಕೂ ಹೆಚ್ಚು ಮತಗಳ ಅಂತರದಿಂದ ಅಧ್ಯಕ್ಷ ಸ್ಥಾನವನ್ನು ಗೆದ್ದುಕೊಂಡರೆ, ಬಿ.ಟೆಕ್ ವಿದ್ಯಾರ್ಥಿ ಮೊಹಮ್ಮದ್ ಹಮ್ದಾನ್ ಅವರು ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ.
AMUSU ಮತ್ತು AMU ಕೋರ್ಟ್ ಚುನಾವಣೆಗಳ ಮುಖ್ಯ ಚುನಾವಣಾಧಿಕಾರಿ ಪ್ರೊ. ಜಾವೈದ್ ತಾಲಿಬ್ ಹಾಗೂ ಮಹಿಳಾ ಕಾಲೇಜು ವಿದ್ಯಾರ್ಥಿ ಒಕ್ಕೂಟದ ಚುನಾವಣೆಗಳ ಮುಖ್ಯ ಚುನಾವಣಾಧಿಕಾರಿ ಪ್ರೊ. ನಾಝಿಯಾ ಹಸನ್ ಅವರು ಫಲಿತಾಂಶಗಳನ್ನು ಘೋಷಿಸಿದ್ದಾರೆ.
ಕಳೆದ ಮೂರು ವರ್ಷಗಳಿಂದ ವಿದ್ಯಾರ್ಥಿಗಳು ನಡೆಸಿದ ನಿರಂತರ ಪ್ರತಿಭಟನೆಗಳ ಪರಿಣಾಮ, ಎಂಟು ವರ್ಷಗಳ ಸುದೀರ್ಘ ಅವಧಿಯ ಬಳಿಕ ವಿವಿಯಲ್ಲಿ ಚುನಾವಣೆ ನಡೆದಿದೆ. ಹಾಗಾಗಿ, ಈ ವರ್ಷದ ಚುನಾವಣೆ ವಿಶೇಷ ಮಹತ್ವವನ್ನು ಪಡೆದುಕೊಂಡಿದ್ದವು.
ಹಿರಿಯ ಪ್ರಾಧ್ಯಾಪಕರೊಬ್ಬರು ಮಾತನಾಡಿ, ‘ಜೆನ್ ಝೀ’ ಪ್ರತಿಭಟನೆಗಳು ಚುನಾವಣೆಯ ಮೇಲೂ ಪ್ರಭಾವ ಬೀರಿವೆ ಎಂದು ಹೇಳಿದ್ದಾಗಿ telegraphindia.com ವರದಿ ಮಾಡಿದೆ.
ವಿವಿಯ ಉಪಕುಲಪತಿ ಪ್ರೊ. ನೈಮಾ ಖಾತೂನ್ ಅವರು ಚುನಾವಣೆ ಶಾಂತಿಯುತವಾಗಿ ನಡೆದಿದ್ದನ್ನು ಶ್ಲಾಘಿಸಿದ್ದಾರೆ ಮತ್ತು ಇದನ್ನು ಸಂಸ್ಥೆಯ ಅತ್ಯುನ್ನತ ಪ್ರಜಾಪ್ರಭುತ್ವ ಸಂಪ್ರದಾಯಗಳ ಗೆಲುವು ಎಂದು ಬಣ್ಣಿಸಿದ್ದಾರೆ.
ಮಹಿಳಾ ಸಬಲೀಕರಣದ ಮಹತ್ವವನ್ನು ಒತ್ತಿಹೇಳಿದ ಅವರು, ಮಹಿಳೆಯರ ಹೆಚ್ಚುತ್ತಿರುವ ಭಾಗವಹಿಸುವಿಕೆ ಮತ್ತು ಪ್ರಾತಿನಿಧ್ಯವನ್ನು ಸ್ವಾಗತಿಸಿದ್ದಾರೆ.


