Homeಅಂತರಾಷ್ಟ್ರೀಯಅತ್ಯಾಚಾರದ ಬೆದರಿಕೆ, ಆಹಾರ ನಿರಾಕರಣೆ: ಇಸ್ರೇಲ್ ಬಂಧನದಲ್ಲಿರುವ 380 ಮಕ್ಕಳು ಸೇರಿದಂತೆ 9,200 ಪ್ಯಾಲೆಸ್ಟೀನಿಯನ್ನರ ಜೀವಕ್ಕೆ...

ಅತ್ಯಾಚಾರದ ಬೆದರಿಕೆ, ಆಹಾರ ನಿರಾಕರಣೆ: ಇಸ್ರೇಲ್ ಬಂಧನದಲ್ಲಿರುವ 380 ಮಕ್ಕಳು ಸೇರಿದಂತೆ 9,200 ಪ್ಯಾಲೆಸ್ಟೀನಿಯನ್ನರ ಜೀವಕ್ಕೆ ಅಪಾಯ: ವರದಿ

- Advertisement -
- Advertisement -

ಗಾಜಾ ಮೇಲಿನ ಇಸ್ರೇಲ್‌ನ ನರಮೇಧದ ದಾಳಿ ಮುಂದುವರಿದಿರುವ ಬೆನ್ನಲ್ಲೇ, ಪ್ಯಾಲೆಸ್ಟೀನಿಯನ್ನರ ಮೇಲಿನ ದೌರ್ಜನ್ಯಗಳು ಜೈಲುಗಳ ಒಳಗೂ ಭೀಕರ ಸ್ವರೂಪ ಪಡೆದುಕೊಂಡಿವೆ. ಚಿತ್ರಹಿಂಸೆ, ಲೈಂಗಿಕ ದೌರ್ಜನ್ಯದ ಬೆದರಿಕೆ, ಆಹಾರದ ಕೊರತೆ, ವೈದ್ಯಕೀಯ ಚಿಕಿತ್ಸೆಯ ನಿರಾಕರಣೆ, ಅಮಾನವೀಯ ಬಂಧನ ಪರಿಸ್ಥಿತಿಗಳು ಮತ್ತು ಕಾನೂನು ರಕ್ಷಣೆಯ ಅಭಾವದ ನಡುವೆ ಸಾವಿರಾರು ಪ್ಯಾಲೆಸ್ಟೀನಿಯನ್ನರು ಇಸ್ರೇಲಿ ಜೈಲುಗಳಲ್ಲಿ ನರಕಯಾತನೆ ಅನುಭವಿಸುತ್ತಿದ್ದಾರೆ ಎಂದು ಪ್ಯಾಲೆಸ್ಟೀನಿಯನ್ ಸೆಂಟರ್ ಫಾರ್ ಪ್ರಿಸನರ್ಸ್ ಅಡ್ವೊಕಸಿ ಬಿಡುಗಡೆ ಮಾಡಿರುವ ವರದಿ ಗಂಭೀರ ಆರೋಪ ಮಾಡಿದೆ. 2026ರ ಜೂನ್ ವೇಳೆಗೆ ಸುಮಾರು 9,200 ಪ್ಯಾಲೆಸ್ಟೀನಿಯನ್ನರು ಇಸ್ರೇಲಿ ಬಂಧನದಲ್ಲಿದ್ದು, ಅವರಲ್ಲಿ ಸುಮಾರು 380 ಮಕ್ಕಳು ಸೇರಿದ್ದಾರೆ. ಬಂಧಿತರಲ್ಲಿ ಮಹಿಳೆಯರು, ಗರ್ಭಿಣಿಯರು ಮತ್ತು ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವವರೂ ಇದ್ದಾರೆ. ಬಂಧನದಲ್ಲಿರುವವರ ಜೀವ, ಆರೋಗ್ಯ ಮತ್ತು ಘನತೆಗೆ ನೇರ ಅಪಾಯ ಎದುರಾಗಿದೆ ಎಂದು ಮಾನವ ಹಕ್ಕುಗಳ ಪರವಾಗಿ ಕೆಲಸ ಮಾಡುವ ಈ ಕೇಂದ್ರ ಎಚ್ಚರಿಸಿದೆ.

2023ರ ಅಕ್ಟೋಬರ್‌ನಲ್ಲಿ ಗಾಜಾ ಮೇಲೆ ಇಸ್ರೇಲ್ ತನ್ನ ಭೀಕರ ಯುದ್ಧ ಆರಂಭಿಸಿದ ಬಳಿಕ ಪ್ಯಾಲೆಸ್ಟೀನಿಯನ್ ಬಂಧಿತರ ಪರಿಸ್ಥಿತಿ ನಿರಂತರವಾಗಿ ಹದಗೆಡುತ್ತ ಬಂದಿದೆ. 2026ರಲ್ಲಿಯೂ ಅವರ ಕಾನೂನು ಸ್ಥಿತಿಯಲ್ಲಿ ಅಥವಾ ಜೈಲುಗಳಲ್ಲಿನ ಬದುಕಿನ ಪರಿಸ್ಥಿತಿಯಲ್ಲಿ ಯಾವುದೇ ಗಮನಾರ್ಹ ಸುಧಾರಣೆ ಕಂಡುಬಂದಿಲ್ಲ. ಬದಲಿಗೆ, ದೈಹಿಕ ಮತ್ತು ಮಾನಸಿಕ ಚಿತ್ರಹಿಂಸೆ, ಲೈಂಗಿಕ ಹಿಂಸೆಯ ಬೆದರಿಕೆ, ಆಹಾರದ ಕೊರತೆ, ಆರೋಗ್ಯ ಸೇವೆಗಳ ನಿರಾಕರಣೆ ಹಾಗೂ ಕುಟುಂಬ ಮತ್ತು ವಕೀಲರನ್ನು ಸಂಪರ್ಕಿಸುವ ಅವಕಾಶಗಳ ಮೇಲಿನ ನಿರ್ಬಂಧಗಳು ಮತ್ತಷ್ಟು ತೀವ್ರಗೊಂಡಿವೆ ಎಂದು ಕೇಂದ್ರ ತನ್ನ ವರದಿಯಲ್ಲಿ ವಿವರಿಸಿದೆ.

ನವೆಂಬರ್‌ನಲ್ಲಿ ಬಿಡುಗಡೆಯಾದ ವರದಿಯ ಪ್ರಕಾರ, ಇಸ್ರೇಲಿ ಅಧಿಕಾರಿಗಳು ಜಾರಿಗೆ ತಂದಿರುವ ಹೊಸ ಕಾನೂನುಗಳು ಮತ್ತು ಇಸ್ರೇಲ್ ಜೈಲು ಸೇವೆಯ (IPS) ನೀತಿಗಳು ಬಂಧಿತರ ಮೂಲಭೂತ ಹಕ್ಕುಗಳನ್ನು ಮತ್ತಷ್ಟು ದುರ್ಬಲಗೊಳಿಸಿವೆ. ಅಂತರರಾಷ್ಟ್ರೀಯ ಮಾನವೀಯ ಕಾನೂನು ಮತ್ತು ಮಾನವ ಹಕ್ಕುಗಳ ಕಾನೂನಿನಡಿ ಬಂಧಿತರಿಗೆ ಸಿಗಬೇಕಾದ ರಕ್ಷಣೆಗಳನ್ನೂ ನಿರ್ಲಕ್ಷಿಸಲಾಗುತ್ತಿದೆ. ಬಂಧಿತರ ಮೇಲೆ ನಡೆಯುತ್ತಿರುವ ಹಿಂಸೆ ಕೇವಲ ವೈಯಕ್ತಿಕ ಅಧಿಕಾರಿಗಳ ದುರ್ವರ್ತನೆಗೆ ಸೀಮಿತವಾಗಿಲ್ಲ; ಅದು ಜೈಲು ಆಡಳಿತ ಮತ್ತು ಸರ್ಕಾರದ ನೀತಿಗಳಿಂದ ರೂಪುಗೊಂಡ ವ್ಯವಸ್ಥಿತ ಸಮಸ್ಯೆಯಾಗಿದೆ ಎಂಬ ಗಂಭೀರ ಆರೋಪವನ್ನು ಕೇಂದ್ರ ಮಾಡಿದೆ.

“ಪ್ರಸ್ತುತ ಜೈಲು ನೀತಿಗಳು ಪ್ಯಾಲೆಸ್ಟೀನಿಯನ್ ಕೈದಿಗಳ ಜೀವಕ್ಕೆ ಅಪಾಯವನ್ನುಂಟುಮಾಡುತ್ತಿವೆ” ಎಂದು ಕೇಂದ್ರ ಎಚ್ಚರಿಸಿದೆ.

9,200 ಬಂಧಿತರಲ್ಲಿ 380 ಮಕ್ಕಳು; ಮಹಿಳಾ ಬಂಧಿತರ ಸಂಖ್ಯೆಯೂ ಏರಿಕೆ

2026ರ ಜೂನ್ ವೇಳೆಗೆ ಇಸ್ರೇಲ್ ಜೈಲು ಸೇವೆಯ ವಶದಲ್ಲಿ ಸುಮಾರು 9,200 ಪ್ಯಾಲೆಸ್ಟೀನಿಯನ್ನರು ಇದ್ದರು. ಅವರಲ್ಲಿ 1,500ಕ್ಕೂ ಹೆಚ್ಚು ಮಂದಿ ಗಾಜಾ ಪಟ್ಟಿಗೆ ಸೇರಿದವರು. ಗಾಜಾದಲ್ಲಿ ನಡೆಯುತ್ತಿರುವ ಯುದ್ಧದ ಜೊತೆಗೆ ಪ್ಯಾಲೆಸ್ಟೀನಿಯನ್ ಜನಸಂಖ್ಯೆಯ ವಿರುದ್ಧ ವ್ಯಾಪಕವಾಗಿ ಬಂಧನಾಧಿಕಾರವನ್ನು ಬಳಸಲಾಗುತ್ತಿದೆ ಎಂದು ಕೇಂದ್ರ ಆರೋಪಿಸಿದೆ.

ಬಂಧನದಲ್ಲಿರುವವರ ನಿಖರ ಸಂಖ್ಯೆಯನ್ನು ತಿಳಿದುಕೊಳ್ಳುವುದೂ ಈಗ ಕಷ್ಟಕರವಾಗಿದೆ. ಈ ಹಿಂದೆ ಲಭ್ಯವಿದ್ದ ಬಂಧಿತರ ಕುರಿತ ಮಾಹಿತಿಯನ್ನು ಇಸ್ರೇಲಿ ಅಧಿಕಾರಿಗಳು ಬಹಿರಂಗಪಡಿಸುವುದನ್ನು ನಿಲ್ಲಿಸಿದ್ದಾರೆ ಅಥವಾ ನಿರ್ಬಂಧಿಸಿದ್ದಾರೆ. ಎಷ್ಟು ಜನರನ್ನು ಬಂಧಿಸಲಾಗಿದೆ, ಅವರನ್ನು ಯಾವ ಕಾನೂನಿನಡಿ ಇರಿಸಲಾಗಿದೆ, ಅವರ ವಿರುದ್ಧ ಯಾವ ಆರೋಪಗಳಿವೆ ಎಂಬ ವಿವರಗಳೂ ಸುಲಭವಾಗಿ ಲಭ್ಯವಾಗುತ್ತಿಲ್ಲ. ಹೀಗಾಗಿ ವರದಿಯಲ್ಲಿ ಉಲ್ಲೇಖಿಸಿರುವ ಅಂಕಿಅಂಶಗಳು ಲಭ್ಯವಿರುವ ಸೀಮಿತ ಮಾಹಿತಿಯನ್ನು ಆಧರಿಸಿದ್ದು, ಅವುಗಳಲ್ಲಿ ಬದಲಾವಣೆಗಳಾಗುವ ಸಾಧ್ಯತೆಯಿದೆ ಎಂದು ಕೇಂದ್ರ ಸ್ಪಷ್ಟಪಡಿಸಿದೆ.

ಬಂಧಿತರಲ್ಲಿ ಬಹುಪಾಲು ಮಂದಿ ವಿಚಾರಣಾಧೀನ ಕೈದಿಗಳು ಅಥವಾ ಆಡಳಿತಾತ್ಮಕ ಬಂಧನದಲ್ಲಿರುವವರು. 2026ರಲ್ಲಿ ಆಡಳಿತಾತ್ಮಕ ಬಂಧನದಲ್ಲಿರುವವರ ಸಂಖ್ಯೆ ಸುಮಾರು 3,100ರಿಂದ 3,550ರ ನಡುವೆ ಏರಿಳಿತ ಕಂಡಿದೆ. ಇದೇ ವೇಳೆ, ‘ಕಾನೂನುಬಾಹಿರ ಹೋರಾಟಗಾರರು’ (Unlawful Combatants) ಎಂಬ ವರ್ಗದಡಿ ಬಂಧಿಸಲ್ಪಟ್ಟವರ ಸಂಖ್ಯೆ ಸುಮಾರು 1,400ಕ್ಕೆ ಏರಿಕೆಯಾಗಿದೆ.

2026ರ ಮೊದಲ ಆರು ತಿಂಗಳಲ್ಲಿ ಪ್ಯಾಲೆಸ್ಟೀನಿಯನ್ ಮಹಿಳಾ ಬಂಧಿತರ ಸಂಖ್ಯೆಯೂ ಸುಮಾರು 100ಕ್ಕೆ ತಲುಪಿದೆ. ಇವರಲ್ಲಿ ಗರ್ಭಿಣಿಯರೂ ಸೇರಿದ್ದಾರೆ. ಮಹಿಳೆಯರ ಬಂಧನ ಮತ್ತು ಅವರ ಮೇಲಿನ ವರ್ತನೆಯ ಕುರಿತು ವರದಿಯಲ್ಲಿ ಗಂಭೀರ ಆತಂಕ ವ್ಯಕ್ತಪಡಿಸಲಾಗಿದೆ. ಬಂಧನದಲ್ಲಿರುವ ಮಹಿಳೆಯರಿಗೆ ಅಗತ್ಯವಾದ ವೈದ್ಯಕೀಯ ಸೌಲಭ್ಯಗಳನ್ನೂ ನಿರಾಕರಿಸಲಾಗುತ್ತಿದೆ ಎಂಬ ಆರೋಪವಿದೆ.

ಇದೇ ಅವಧಿಯಲ್ಲಿ ಸುಮಾರು 380 ಮಕ್ಕಳು ಇಸ್ರೇಲಿ ಬಂಧನದಲ್ಲಿದ್ದರು. ಅವರಲ್ಲಿ ಕೆಲವರನ್ನು ‘ಕಾನೂನುಬಾಹಿರ ಹೋರಾಟಗಾರರು’ ಎಂಬ ವರ್ಗದಡಿ ಇರಿಸಲಾಗಿದೆ. ಈ ವರ್ಗೀಕರಣವು ಅಂತರರಾಷ್ಟ್ರೀಯ ಮಾನವೀಯ ಕಾನೂನಿನಡಿ ಸಾಮಾನ್ಯವಾಗಿ ಸಿಗಬೇಕಾದ ಕನಿಷ್ಠ ರಕ್ಷಣೆಯನ್ನೂ ದುರ್ಬಲಗೊಳಿಸುತ್ತದೆ ಎಂದು ಕೇಂದ್ರ ಹೇಳಿದೆ.

ಮಕ್ಕಳ ಬಂಧನದ ಕುರಿತು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿಯವರ ‘ಮಕ್ಕಳು ಮತ್ತು ಸಶಸ್ತ್ರ ಸಂಘರ್ಷ’ ಕುರಿತ ವರದಿಯೂ ಆತಂಕಕಾರಿ ಅಂಕಿಅಂಶಗಳನ್ನು ದಾಖಲಿಸಿದೆ. 2025ನೇ ವರ್ಷವನ್ನು ಪರಿಶೀಲಿಸಿರುವ ಈ ವರದಿ (S/2026/357), ಒಟ್ಟು 981 ಪ್ಯಾಲೆಸ್ಟೀನಿಯನ್ ಮಕ್ಕಳ ಬಂಧನವನ್ನು ಪರಿಶೀಲಿಸಿದೆ. ಇವರಲ್ಲಿ 973 ಹುಡುಗರು ಮತ್ತು ಎಂಟು ಹುಡುಗಿಯರು ಸೇರಿದ್ದಾರೆ.

ಈ ಮಕ್ಕಳ ಪೈಕಿ 978 ಮಂದಿಯನ್ನು ಇಸ್ರೇಲಿ ಸಶಸ್ತ್ರ ಪಡೆಗಳು ಮತ್ತು ಭದ್ರತಾ ಪಡೆಗಳು ಭದ್ರತಾ ಅಪರಾಧಗಳ ಆರೋಪದಡಿ ಬಂಧಿಸಿವೆ. ಪೂರ್ವ ಜೆರುಸಲೇಂನಲ್ಲಿ 182 ಮಕ್ಕಳು, ಪಶ್ಚಿಮ ದಂಡೆಯ ಇತರ ಭಾಗಗಳಲ್ಲಿ 782 ಮಕ್ಕಳು ಹಾಗೂ ಗಾಜಾ ಪಟ್ಟಿಯಲ್ಲಿ 14 ಮಕ್ಕಳು ಬಂಧನಕ್ಕೊಳಗಾಗಿದ್ದರು. 2025ರ ಡಿಸೆಂಬರ್ 31ರ ವೇಳೆಗೆ 180 ಪ್ಯಾಲೆಸ್ಟೀನಿಯನ್ ಮಕ್ಕಳನ್ನು ಯಾವುದೇ ಆರೋಪ ಅಥವಾ ವಿಚಾರಣೆಯಿಲ್ಲದೆ ಆಡಳಿತಾತ್ಮಕ ಬಂಧನದಲ್ಲಿ ಇರಿಸಲಾಗಿತ್ತು. ಗಾಜಾದಿಂದ ವರ್ಗಾಯಿಸಲ್ಪಟ್ಟು ‘ಕಾನೂನುಬಾಹಿರ ಹೋರಾಟಗಾರರು’ ಎಂಬ ಹಣೆಪಟ್ಟಿಯಡಿ ಬಂಧನದಲ್ಲಿದ್ದ ಏಳು ಮಕ್ಕಳೂ ಈ ಪರಿಸ್ಥಿತಿಯನ್ನು ಎದುರಿಸುತ್ತಿದ್ದರು.

ಇಸ್ರೇಲಿ ಬಂಧನದಲ್ಲಿರುವ ಮಕ್ಕಳ ಮೇಲೆ ದೈಹಿಕ ಹಿಂಸೆ ಮತ್ತು ಇತರ ಅಮಾನವೀಯ ವರ್ತನೆಗಳು ನಡೆದಿರುವುದಕ್ಕೆ ವಿಶ್ವಸಂಸ್ಥೆ ಸಾಕ್ಷ್ಯಗಳನ್ನು ಸ್ವೀಕರಿಸಿದೆ. ಒಟ್ಟು 66 ಮಕ್ಕಳಿಂದ ಇಂತಹ ದೌರ್ಜನ್ಯಗಳ ಕುರಿತು ಸಾಕ್ಷ್ಯಗಳು ಲಭ್ಯವಾಗಿವೆ. ಬಂಧನದಲ್ಲಿದ್ದ ಒಬ್ಬ ಪ್ಯಾಲೆಸ್ಟೀನಿಯನ್ ಬಾಲಕ ಸಾವನ್ನಪ್ಪಿದ್ದು, ಆತನ ಮರಣೋತ್ತರ ಪರೀಕ್ಷೆಯಲ್ಲಿ ತೀವ್ರ ಹಾಗೂ ಬಹುಶಃ ದೀರ್ಘಕಾಲದ ಅಪೌಷ್ಟಿಕತೆ ಮತ್ತು ಸೂಕ್ತ ವೈದ್ಯಕೀಯ ಆರೈಕೆಯ ಕೊರತೆಯ ಕುರಿತು ಆತಂಕಕಾರಿ ಅಂಶಗಳು ಬೆಳಕಿಗೆ ಬಂದಿವೆ ಎಂದು ವಿಶ್ವಸಂಸ್ಥೆಯ ವರದಿ ತಿಳಿಸಿದೆ.

‘ರಹಸ್ಯ ಕಡತ’ದ ಆಧಾರದಲ್ಲಿ ಆರೋಪವಿಲ್ಲದೆ ಅನಿರ್ದಿಷ್ಟ ಬಂಧನ

ಪ್ಯಾಲೆಸ್ಟೀನಿಯನ್ನರನ್ನು ಬಂಧನದಲ್ಲಿಡಲು ಇಸ್ರೇಲ್ ವ್ಯಾಪಕವಾಗಿ ಬಳಸುತ್ತಿರುವ ಆಡಳಿತಾತ್ಮಕ ಬಂಧನ ವ್ಯವಸ್ಥೆಯು ಮತ್ತೊಂದು ಗಂಭೀರ ಕಾನೂನು ಪ್ರಶ್ನೆಯನ್ನು ಹುಟ್ಟುಹಾಕಿದೆ. ಈ ವ್ಯವಸ್ಥೆಯಡಿ ಒಬ್ಬ ವ್ಯಕ್ತಿಯನ್ನು ಯಾವುದೇ ಔಪಚಾರಿಕ ಆರೋಪ ಹೊರಿಸದೆ ಅಥವಾ ನ್ಯಾಯಾಲಯದಲ್ಲಿ ವಿಚಾರಣೆ ನಡೆಸದೆ ಜೈಲಿನಲ್ಲಿ ಇರಿಸಬಹುದು. ಬಂಧನಕ್ಕೆ ಆಧಾರವಾಗಿರುವ ಸಾಕ್ಷ್ಯಗಳನ್ನು ಬಂಧಿತರಿಗೆ ಮಾತ್ರವಲ್ಲ, ಅವರ ಪರವಾಗಿ ವಾದಿಸುವ ವಕೀಲರಿಗೂ ಬಹಿರಂಗಪಡಿಸುವುದಿಲ್ಲ.

‘ರಹಸ್ಯ ಕಡತ’ದ ಆಧಾರದ ಮೇಲೆ ಬಂಧನ ಆದೇಶಗಳನ್ನು ನೀಡಲಾಗುತ್ತದೆ. ನಂತರ ಅವುಗಳನ್ನು ಪದೇಪದೇ ನವೀಕರಿಸಲಾಗುತ್ತದೆ. ಹೀಗಾಗಿ ಬಂಧಿತರಿಗೆ ತಮ್ಮ ವಿರುದ್ಧದ ಆರೋಪಗಳೇನು, ಯಾವ ಸಾಕ್ಷ್ಯಗಳ ಆಧಾರದಲ್ಲಿ ತಮ್ಮನ್ನು ಬಂಧಿಸಲಾಗಿದೆ ಎಂಬುದನ್ನು ತಿಳಿದುಕೊಳ್ಳಲು ಸಾಧ್ಯವಾಗುವುದಿಲ್ಲ. ನ್ಯಾಯಾಲಯದಲ್ಲಿ ತಮ್ಮ ವಿರುದ್ಧದ ಆರೋಪಗಳನ್ನು ಪ್ರಶ್ನಿಸುವ ಮತ್ತು ಸಮರ್ಪಕವಾಗಿ ಪ್ರತಿವಾದ ಮಂಡಿಸುವ ಅವಕಾಶವೂ ಸೀಮಿತವಾಗುತ್ತದೆ. ಇದರಿಂದ ವಿಚಾರಣೆ ಇಲ್ಲದೆ, ಕಾನೂನು ಪ್ರಕ್ರಿಯೆಯ ಸ್ಪಷ್ಟತೆಯಿಲ್ಲದೆ ದೀರ್ಘಕಾಲ ಅಥವಾ ಅನಿರ್ದಿಷ್ಟ ಅವಧಿಗೆ ಬಂಧನದಲ್ಲಿರುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಕೇಂದ್ರ ಹೇಳಿದೆ.

ಹೆಚ್ಚಿನ ಸಂಖ್ಯೆಯ ಪ್ಯಾಲೆಸ್ಟೀನಿಯನ್ನರ ವಿರುದ್ಧ ಈ ವ್ಯವಸ್ಥೆಯನ್ನು ಬಳಸುತ್ತಿರುವುದು ಅಂತರರಾಷ್ಟ್ರೀಯ ಮಾನವೀಯ ಕಾನೂನಿನ ಉಲ್ಲಂಘನೆಯಾಗಿದೆ ಎಂಬುದು ಕೇಂದ್ರದ ಆರೋಪ.

ಇದಕ್ಕೆ ಉದಾಹರಣೆಯಾಗಿ ಅಬ್ದೆಲ್-ಸಲಾಮ್ ಅಬು ಅಲ್-ಹೈಜಾ ಅವರ ಪ್ರಕರಣವನ್ನು ವರದಿ ಉಲ್ಲೇಖಿಸಿದೆ. ಅವರನ್ನು 2022ರ ಆಗಸ್ಟ್‌ನಲ್ಲಿ ಆಡಳಿತಾತ್ಮಕ ಬಂಧನಕ್ಕೆ ಒಳಪಡಿಸಲಾಗಿತ್ತು. 2026ರ ಆಗಸ್ಟ್‌ನಲ್ಲಿ ಬಿಡುಗಡೆಯಾಗುವವರೆಗೂ ಅವರು ಬಂಧನದಲ್ಲಿದ್ದರು. ಈ ನಾಲ್ಕು ವರ್ಷಗಳ ಅವಧಿಯಲ್ಲಿ ಅವರ ತಾಯಿ ಮೃತಪಟ್ಟಿದ್ದರು. ತಾಯಿಯ ಅಂತಿಮ ಕ್ಷಣಗಳಲ್ಲಾಗಲಿ, ಅಂತ್ಯಕ್ರಿಯೆಯಲ್ಲಾಗಲಿ ಭಾಗವಹಿಸಲು ಸಾಧ್ಯವಾಗದ ಅವರು ಬಿಡುಗಡೆಯಾದ ಬಳಿಕ ತಾಯಿಯ ಸಮಾಧಿಗೆ ಭೇಟಿ ನೀಡಿದರು. ಒಬ್ಬ ವ್ಯಕ್ತಿಯನ್ನು ವಿಚಾರಣೆಯಿಲ್ಲದೆ ದೀರ್ಘಕಾಲ ಬಂಧನದಲ್ಲಿಡುವುದರಿಂದ ಆತನ ವೈಯಕ್ತಿಕ ಮತ್ತು ಕೌಟುಂಬಿಕ ಬದುಕಿನ ಮೇಲೆ ಎಂತಹ ಪರಿಣಾಮ ಉಂಟಾಗುತ್ತದೆ ಎಂಬುದಕ್ಕೆ ಈ ಪ್ರಕರಣ ಸಾಕ್ಷಿಯಾಗಿದೆ.

ನುಸೇರತ್ ನಿರಾಶ್ರಿತರ ಶಿಬಿರದ 24 ವರ್ಷದ ಮೊಹಮ್ಮದ್ ಜಿಹಾದ್ ಅಲ್-ಶೋರ್ಬಾಜಿ ಅವರ ಪ್ರಕರಣವೂ ವರದಿಯಲ್ಲಿ ದಾಖಲಾಗಿದೆ. ಈಜಿಪ್ಟ್‌ನಿಂದ ರಫಾ ಗಡಿ ದಾಟಿ ವಾಪಸಾಗುತ್ತಿದ್ದ ಸಂದರ್ಭದಲ್ಲಿ ಅವರನ್ನು ಬಂಧಿಸಲಾಗಿತ್ತು.

ಮತ್ತೊಂದು ಪ್ರಕರಣದಲ್ಲಿ, ಅಹ್ಲಾಮ್ ಇಶ್ತಾಯೆಹ್ ಅವರ ಮನೆಗೆ ಇಸ್ರೇಲಿ ಸೈನಿಕರು ನುಗ್ಗಿ ದರೋಡೆ ನಡೆಸಿದ ಬಳಿಕ 2026ರ ಮೇ ತಿಂಗಳಲ್ಲಿ ಅವರನ್ನು ಆಡಳಿತಾತ್ಮಕ ಬಂಧನಕ್ಕೆ ಒಳಪಡಿಸಲಾಯಿತು. ಯಾವುದೇ ಕಾನೂನುಬದ್ಧ ಕಾರಣ ಅಥವಾ ಸಮರ್ಥನೆಯನ್ನು ನೀಡದೆ ನಾಲ್ಕು ತಿಂಗಳ ಕಾಲ ಅವರನ್ನು ಬಂಧನದಲ್ಲಿರಿಸಲಾಗಿತ್ತು ಎಂದು ಕೇಂದ್ರ ತಿಳಿಸಿದೆ.

ತುಲ್ಕಾರ್ಮ್‌ನ ಸುರ್ರಾ ಗ್ರಾಮದ ಮುತಾಸಿಮ್ ತೈಸೀರ್ ಸಮರಾ ಅವರನ್ನು 2022ರ ಡಿಸೆಂಬರ್‌ನಿಂದ ಆಡಳಿತಾತ್ಮಕ ಬಂಧನದಲ್ಲಿಡಲಾಗಿದೆ. ಅವರ ಬಂಧನ ಆದೇಶವನ್ನು ನಾಲ್ಕು ತಿಂಗಳ ಅವಧಿಗೆ ನವೀಕರಿಸಲಾಗಿದೆ. ಪತ್ರಕರ್ತೆ ಬುಷ್ರಾ ಅಲ್-ತಾವಿಲ್ ಅವರ ಬಂಧನವೂ ಮುಂದುವರಿದಿದ್ದು, ಅವರ ಆಡಳಿತಾತ್ಮಕ ಬಂಧನ ಆದೇಶವನ್ನು ಮತ್ತೆ ನಾಲ್ಕು ತಿಂಗಳವರೆಗೆ ವಿಸ್ತರಿಸಲಾಗಿದೆ. ಅವರು ನಿರಂತರ ದೌರ್ಜನ್ಯಗಳನ್ನು ಎದುರಿಸುತ್ತಿದ್ದಾರೆ ಎಂದು ವರದಿ ಹೇಳಿದೆ.

ಇತ್ತೀಚಿನ ಬೆಳವಣಿಗೆಯಾಗಿ ಪಶ್ಚಿಮ ದಂಡೆಯಾದ್ಯಂತ 15 ಪ್ಯಾಲೆಸ್ಟೀನಿಯನ್ ಬಂಧಿತರ ವಿರುದ್ಧ ಇಸ್ರೇಲಿ ಅಧಿಕಾರಿಗಳು ಹೊಸ ಆಡಳಿತಾತ್ಮಕ ಬಂಧನ ಆದೇಶಗಳನ್ನು ಹೊರಡಿಸಿದ್ದಾರೆ ಅಥವಾ ಈಗಾಗಲೇ ಜಾರಿಯಲ್ಲಿದ್ದ ಆದೇಶಗಳನ್ನು ಮತ್ತೆ ನವೀಕರಿಸಿದ್ದಾರೆ. ಈ ಆದೇಶಗಳ ಅವಧಿ ಮೂರರಿಂದ ಆರು ತಿಂಗಳವರೆಗೆ ಇದೆ.

ನೆಲದ ಮೇಲೆ ನಿದ್ರೆ, ಆಹಾರದ ಕೊರತೆ, ಅತ್ಯಾಚಾರದ ಬೆದರಿಕೆ

ಇಸ್ರೇಲಿ ಜೈಲುಗಳಲ್ಲಿ ಬಂಧಿತರನ್ನು ಇರಿಸಿರುವ ಪರಿಸ್ಥಿತಿಗಳು ಅತ್ಯಂತ ಅಮಾನವೀಯವಾಗಿವೆ ಎಂಬ ಆರೋಪಗಳು ವರದಿಯಲ್ಲಿ ದಾಖಲಾಗಿವೆ. ಡ್ಯಾಮನ್ ಮತ್ತು ನೆಗೆವ್ ಸೇರಿದಂತೆ ಹಲವು ಜೈಲುಗಳಲ್ಲಿ ಬಂಧಿತರಿಗೆ ಮೂಲಭೂತ ಆರೋಗ್ಯ ಸೇವೆಗಳು, ವೈಯಕ್ತಿಕ ಸ್ವಚ್ಛತಾ ಸಾಮಗ್ರಿಗಳು ಮತ್ತು ಶುಚಿಗೊಳಿಸುವ ವಸ್ತುಗಳನ್ನು ಒದಗಿಸುತ್ತಿಲ್ಲ. ಧಾರ್ಮಿಕ ಆಚರಣೆಗಳ ಮೇಲೂ ನಿರ್ಬಂಧ ವಿಧಿಸಲಾಗುತ್ತಿದೆ ಎಂದು ಪ್ಯಾಲೆಸ್ಟೀನಿಯನ್ ಸೆಂಟರ್ ಫಾರ್ ಪ್ರಿಸನರ್ಸ್ ಅಡ್ವೊಕಸಿ ತಿಳಿಸಿದೆ.

ಸರಿಯಾದ ಹಾಸಿಗೆಗಳಿಲ್ಲದೆ, ಕಂಬಳಿಗಳಿಲ್ಲದೆ ಬಂಧಿತರನ್ನು ನೆಲದ ಮೇಲೆಯೇ ಮಲಗುವಂತೆ ಮಾಡಲಾಗುತ್ತಿದೆ. ಸಾಕಷ್ಟು ಆಹಾರ ನೀಡದಿರುವುದರಿಂದ ಅನೇಕರು ತೀವ್ರವಾಗಿ ತೂಕ ಕಳೆದುಕೊಳ್ಳುತ್ತಿದ್ದಾರೆ. ಜೈಲಿನಲ್ಲಿ ಕನಿಷ್ಠ ಮಾನವೀಯ ಬದುಕಿಗೆ ಅಗತ್ಯವಾದ ಸೌಲಭ್ಯಗಳನ್ನೂ ನಿರಾಕರಿಸಲಾಗುತ್ತಿದೆ ಎಂಬುದು ವರದಿಯ ಪ್ರಮುಖ ಆರೋಪ.

ಕ್ಯಾನ್ಸರ್ ಸೇರಿದಂತೆ ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವ ಬಂಧಿತರಿಗೂ ಸೂಕ್ತ ವೈದ್ಯಕೀಯ ಚಿಕಿತ್ಸೆ ನೀಡಲಾಗುತ್ತಿಲ್ಲ. ದೀರ್ಘಕಾಲದಿಂದ ಜೈಲಿನಲ್ಲಿರುವ ಮಹಿಳಾ ಬಂಧಿತರಲ್ಲಿ ಒಬ್ಬರಾದ ಶತಿಲಾ ಅಬು ಅಯಾದಾ ಅವರ ಆರೋಗ್ಯ ಪರಿಸ್ಥಿತಿ ಗಂಭೀರವಾಗಿದೆ. ಅವರ ಯಕೃತ್ತಿನ ಕಿಣ್ವಗಳ ಮಟ್ಟ ಹೆಚ್ಚಾಗಿದ್ದು, ತುರ್ತು ವೈದ್ಯಕೀಯ ಆರೈಕೆಯ ಅಗತ್ಯವಿದೆ. ಆದರೆ ಇಂತಹ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿರುವ ಬಂಧಿತರಿಗೆ ಅಗತ್ಯ ಚಿಕಿತ್ಸೆ ಒದಗಿಸುವಲ್ಲಿ ಜೈಲು ಆಡಳಿತ ವಿಫಲವಾಗಿದೆ ಎಂದು ಕೇಂದ್ರ ಆರೋಪಿಸಿದೆ.

ಚಿತ್ರಹಿಂಸೆ ಮತ್ತು ಇತರ ಕ್ರೂರ ವರ್ತನೆಗಳು ನಿರಂತರವಾಗಿ ನಡೆಯುತ್ತಿವೆ. ಬಂಧಿತರ ಸಾಕ್ಷ್ಯಗಳ ಪ್ರಕಾರ, ಇಸ್ರೇಲಿ ಅಧಿಕಾರಿಗಳು ಮಹಿಳಾ ಕೈದಿಗಳನ್ನು ದೂರುಗಳನ್ನು ಹಿಂಪಡೆಯುವಂತೆ ಅಥವಾ ತಮಗೆ ಬೇಕಾದ ಮಾಹಿತಿಯನ್ನು ನೀಡುವಂತೆ ಒತ್ತಾಯಿಸಲು ಅತ್ಯಾಚಾರದ ಬೆದರಿಕೆ ಹಾಕಿದ್ದಾರೆ. ಲೈಂಗಿಕ ಹಿಂಸೆ, ಚಿತ್ರಹಿಂಸೆ, ಆಹಾರದ ಕೊರತೆ, ನೈರ್ಮಲ್ಯ ಸಾಮಗ್ರಿಗಳ ಅಭಾವ ಮತ್ತು ವೈಯಕ್ತಿಕ ಆರೈಕೆಯ ನಿರಾಕರಣೆಯ ಕುರಿತು ಮಹಿಳಾ ಬಂಧಿತರಿಂದ ಸಾಕ್ಷ್ಯಗಳನ್ನು ಸ್ವೀಕರಿಸಲಾಗಿದೆ ಎಂದು ಕೇಂದ್ರ ತಿಳಿಸಿದೆ.

ಇದು ಕೇವಲ ದೈಹಿಕ ಹಿಂಸೆಗೆ ಸಂಬಂಧಿಸಿದ ಆರೋಪವಲ್ಲ. ಮಹಿಳೆಯರ ದೇಹ ಮತ್ತು ಘನತೆಯನ್ನು ಬೆದರಿಕೆಯ ಸಾಧನವಾಗಿ ಬಳಸಿಕೊಂಡು ಅವರನ್ನು ಮಾನಸಿಕವಾಗಿ ಕುಗ್ಗಿಸುವ ಪ್ರಯತ್ನವೂ ನಡೆಯುತ್ತಿದೆ ಎಂಬ ಗಂಭೀರ ಆರೋಪವನ್ನು ವರದಿ ಮುಂದಿಟ್ಟಿದೆ. ಬಂಧನದಲ್ಲಿರುವ ಮಹಿಳೆಯರು ತಮ್ಮ ಮೇಲಿನ ದೌರ್ಜನ್ಯಗಳ ವಿರುದ್ಧ ಧ್ವನಿ ಎತ್ತದಂತೆ ಮಾಡಲು ಅತ್ಯಾಚಾರದ ಬೆದರಿಕೆ ಬಳಸಲಾಗುತ್ತಿದೆ ಎಂಬುದು ಅಂತರರಾಷ್ಟ್ರೀಯ ಮಾನವ ಹಕ್ಕುಗಳ ಸಂಘಟನೆಗಳ ಗಮನ ಸೆಳೆಯಬೇಕಾದ ಸಂಗತಿಯಾಗಿದೆ.

ಅಂತರರಾಷ್ಟ್ರೀಯ ಮಾನವೀಯ ಕಾನೂನಿನಡಿ ಬಂಧಿತರಿಗೆ ಆಹಾರ, ವೈದ್ಯಕೀಯ ಸೇವೆ, ವೈಯಕ್ತಿಕ ಸ್ವಚ್ಛತೆ ಮತ್ತು ಧಾರ್ಮಿಕ ಆಚರಣೆಗಳ ಸ್ವಾತಂತ್ರ್ಯ ಒದಗಿಸುವುದು ಬಂಧನಾಧಿಕಾರಿಗಳ ಕರ್ತವ್ಯ. ಆದರೆ ಬಂಧಿತರ ಹೇಳಿಕೆಗಳು ಮತ್ತು ಬಿಡುಗಡೆಯಾದವರ ಆರೋಗ್ಯ ಪರಿಸ್ಥಿತಿಗಳು ಈ ಕರ್ತವ್ಯಗಳನ್ನು ಇಸ್ರೇಲ್ ಸಮರ್ಪಕವಾಗಿ ಪಾಲಿಸುತ್ತಿಲ್ಲ ಎಂಬುದನ್ನು ತೋರಿಸುತ್ತವೆ ಎಂದು ಕೇಂದ್ರ ಹೇಳಿದೆ.

ನಾಲ್ಕನೇ ಜಿನೀವಾ ಒಪ್ಪಂದದ 86ನೇ ವಿಧಿಯ ಪ್ರಕಾರ, ಬಂಧನದಲ್ಲಿರುವವರಿಗೆ ಧಾರ್ಮಿಕ ಸೇವೆಗಳನ್ನು ನಡೆಸಲು ಸೂಕ್ತ ಸ್ಥಳಾವಕಾಶ ಕಲ್ಪಿಸಬೇಕು. 93ನೇ ವಿಧಿಯು ಬಂಧಿತರಿಗೆ ತಮ್ಮ ಧರ್ಮವನ್ನು ಆಚರಿಸುವ ಸಂಪೂರ್ಣ ಸ್ವಾತಂತ್ರ್ಯವನ್ನು ಖಾತರಿಪಡಿಸುತ್ತದೆ. 92ನೇ ವಿಧಿಯ ಪ್ರಕಾರ, ಬಂಧಿತರನ್ನು ತಿಂಗಳಿಗೊಮ್ಮೆಯಾದರೂ ವೈದ್ಯಕೀಯವಾಗಿ ಪರೀಕ್ಷಿಸಬೇಕು. ಆದರೆ ಜೈಲುಗಳಲ್ಲಿನ ಪರಿಸ್ಥಿತಿಗಳು ಈ ನಿಯಮಗಳಿಗೆ ವಿರುದ್ಧವಾಗಿವೆ ಎಂದು ಕೇಂದ್ರ ಆರೋಪಿಸಿದೆ.

ಚಿತ್ರಹಿಂಸೆ, ಕ್ರೂರ, ಅಮಾನವೀಯ ಅಥವಾ ಅವಮಾನಕರ ವರ್ತನೆಯನ್ನು ಯಾವುದೇ ಸಂದರ್ಭದಲ್ಲಿಯೂ ಸಮರ್ಥಿಸಲು ಸಾಧ್ಯವಿಲ್ಲ. ಅಂತರರಾಷ್ಟ್ರೀಯ ಮಾನವೀಯ ಕಾನೂನು ಮತ್ತು ಮಾನವ ಹಕ್ಕುಗಳ ಕಾನೂನಿನಡಿ ಇಂತಹ ಕೃತ್ಯಗಳ ಮೇಲೆ ಸಂಪೂರ್ಣ ನಿಷೇಧವಿದೆ ಎಂದು ವರದಿ ನೆನಪಿಸಿದೆ.

ಪ್ಯಾಲೆಸ್ಟೀನಿಯನ್ನರಿಗೆ ಮರಣದಂಡನೆ ವಿಧಿಸಲು ಹೊಸ ಕಾನೂನು

2026ರಲ್ಲಿ ಇಸ್ರೇಲ್ ಜಾರಿಗೆ ತಂದಿರುವ ಹೊಸ ಕಾನೂನುಗಳು ಬಂಧಿತರ ಪರಿಸ್ಥಿತಿಯನ್ನು ಮತ್ತಷ್ಟು ಅಪಾಯಕಾರಿಯಾಗಿಸಿವೆ ಎಂದು ಕೇಂದ್ರ ಎಚ್ಚರಿಸಿದೆ. ವಿಶೇಷವಾಗಿ ಮರಣದಂಡನೆಗೆ ಸಂಬಂಧಿಸಿದ ಕಾನೂನು ಬದಲಾವಣೆಗಳು ಪ್ಯಾಲೆಸ್ಟೀನಿಯನ್ನರ ನ್ಯಾಯಾಂಗ ರಕ್ಷಣೆಯ ಕುರಿತು ಗಂಭೀರ ಆತಂಕ ಮೂಡಿಸಿವೆ.

2026ರ ಮಾರ್ಚ್ 30ರಂದು ಇಸ್ರೇಲ್ ಸಂಸತ್ ನೆಸ್ಸೆಟ್, ರಾಷ್ಟ್ರೀಯ ಭದ್ರತಾ ಸಚಿವ ಇಟಮಾರ್ ಬೆನ್-ಗ್ವಿರ್ ಅವರ ಪಕ್ಷದ ನೇತೃತ್ವದಲ್ಲಿ ಮಂಡಿಸಲಾದ ಮಸೂದೆಯನ್ನು ಅಂಗೀಕರಿಸಿತು. ಈ ಕಾನೂನು ಮಿಲಿಟರಿ ಮತ್ತು ನಾಗರಿಕ ನ್ಯಾಯಾಲಯಗಳಲ್ಲಿ ಮರಣದಂಡನೆ ವಿಧಿಸುವ ಅವಕಾಶವನ್ನು ವಿಸ್ತರಿಸಿದೆ.

ಆಕ್ರಮಿತ ಪಶ್ಚಿಮ ದಂಡೆಯಲ್ಲಿ ಭಯೋತ್ಪಾದನೆ ಎಂದು ವರ್ಗೀಕರಿಸಲಾದ ಉದ್ದೇಶಪೂರ್ವಕ ಹತ್ಯೆಗಳಿಗೆ ಮರಣದಂಡನೆಯನ್ನು ಸಾಮಾನ್ಯ ಶಿಕ್ಷೆಯನ್ನಾಗಿ ಮಾಡಲಾಗಿದೆ. ನಿರ್ದಿಷ್ಟವಾಗಿ ವ್ಯಾಖ್ಯಾನಿಸದ ‘ವಿಶೇಷ ಸಂದರ್ಭಗಳಲ್ಲಿ’ ಮಾತ್ರ ಜೀವಾವಧಿ ಶಿಕ್ಷೆ ವಿಧಿಸಲು ಅವಕಾಶ ನೀಡಲಾಗಿದೆ ಎಂದು ವರದಿ ವಿವರಿಸಿದೆ.

ಇದರ ಬೆನ್ನಲ್ಲೇ 2026ರ ಮೇ 11ರಂದು ಇಸ್ರೇಲ್ ಸಂಸತ್ ಮತ್ತೊಂದು ಮಹತ್ವದ ಕಾನೂನನ್ನು ಅಂಗೀಕರಿಸಿತು. 2023ರ ಅಕ್ಟೋಬರ್ 7ರ ಕಾರ್ಯಾಚರಣೆಗಳಲ್ಲಿ ಭಾಗಿಯಾಗಿದ್ದಾರೆಂದು ಆರೋಪಿಸಲಾದ ಪ್ಯಾಲೆಸ್ಟೀನಿಯನ್ನರಿಗೆ ಮರಣದಂಡನೆ ವಿಧಿಸುವ ಅಧಿಕಾರ ಹೊಂದಿರುವ ವಿಶೇಷ ಮಿಲಿಟರಿ ನ್ಯಾಯಮಂಡಳಿಯನ್ನು ರಚಿಸುವ ಮಸೂದೆ ಪರವಾಗಿ 93 ಸದಸ್ಯರು ಮತ ಚಲಾಯಿಸಿದರು. ಈ ಮತದಾನದಲ್ಲಿ ವಿರುದ್ಧವಾಗಿ ಯಾರೂ ಮತ ಚಲಾಯಿಸಿರಲಿಲ್ಲ ಎಂದು ವರದಿ ತಿಳಿಸಿದೆ.

ಈ ಕಾನೂನುಗಳು ಪ್ಯಾಲೆಸ್ಟೀನಿಯನ್ ಬಂಧಿತರ ನ್ಯಾಯಾಂಗ ಸುರಕ್ಷತೆಯನ್ನು ಮತ್ತಷ್ಟು ದುರ್ಬಲಗೊಳಿಸುವ ಸಾಧ್ಯತೆಯಿದೆ. ಈಗಾಗಲೇ ರಹಸ್ಯ ಸಾಕ್ಷ್ಯಗಳ ಆಧಾರದಲ್ಲಿ ವಿಚಾರಣೆಯಿಲ್ಲದೆ ಬಂಧನ, ಚಿತ್ರಹಿಂಸೆ ಮತ್ತು ವಕೀಲರ ಸಂಪರ್ಕದ ನಿರ್ಬಂಧಗಳನ್ನು ಎದುರಿಸುತ್ತಿರುವ ಜನರಿಗೆ ಮರಣದಂಡನೆಯ ಭೀತಿ ಮತ್ತೊಂದು ಗಂಭೀರ ಅಪಾಯವಾಗಿ ಪರಿಣಮಿಸಿದೆ.

ಮರಣದಂಡನೆಗೆ ಸಂಬಂಧಿಸಿದ ಈ ಕಾನೂನುಗಳು ಅಂತರರಾಷ್ಟ್ರೀಯ ಮಾನವೀಯ ಕಾನೂನಿನ ಮೂಲಭೂತ ತತ್ವಗಳಿಗೆ ವಿರುದ್ಧವಾಗಿವೆ ಎಂಬ ಆತಂಕವನ್ನು ಮಾನವ ಹಕ್ಕುಗಳ ಸಂಘಟನೆಗಳು ವ್ಯಕ್ತಪಡಿಸಿವೆ. ಚಿತ್ರಹಿಂಸೆಯ ಸಂಪೂರ್ಣ ನಿಷೇಧ ಸೇರಿದಂತೆ ಅಂತರರಾಷ್ಟ್ರೀಯ ಕಾನೂನಿನ ಗಂಭೀರ ಉಲ್ಲಂಘನೆಗಳಿಗೆ ಈ ಕಾನೂನುಗಳು ದಾರಿ ಮಾಡಿಕೊಡಬಹುದು ಎಂದು ವಿಶ್ವಸಂಸ್ಥೆಯ ಚಿತ್ರಹಿಂಸೆ ಕುರಿತ ವಿಶೇಷ ವರದಿಗಾರ ಎಚ್ಚರಿಸಿದ್ದಾರೆ.

ರೆಡ್ ಕ್ರಾಸ್ ಭೇಟಿಗೂ ನಿರ್ಬಂಧ; ಸುಪ್ರೀಂ ಕೋರ್ಟ್ ಆದೇಶಕ್ಕೂ ಸ್ಪಷ್ಟ ಅನುಷ್ಠಾನವಿಲ್ಲ

ಪ್ಯಾಲೆಸ್ಟೀನಿಯನ್ ಬಂಧಿತರ ಪರಿಸ್ಥಿತಿಯನ್ನು ಸ್ವತಂತ್ರವಾಗಿ ಪರಿಶೀಲಿಸಲು ಅವಕಾಶ ಕಲ್ಪಿಸಬೇಕಾದ ಅಂತರರಾಷ್ಟ್ರೀಯ ರೆಡ್ ಕ್ರಾಸ್ ಸಮಿತಿಯ (ICRC) ಭೇಟಿಗಳನ್ನೂ ಇಸ್ರೇಲ್ ನಿರ್ಬಂಧಿಸಿದೆ. 2023ರ ಅಕ್ಟೋಬರ್‌ನಿಂದ ಇಸ್ರೇಲ್, ಪ್ಯಾಲೆಸ್ಟೀನಿಯನ್ ಬಂಧಿತರನ್ನು ಅಂತರರಾಷ್ಟ್ರೀಯ ರೆಡ್ ಕ್ರಾಸ್ ಸಮಿತಿ ಭೇಟಿ ಮಾಡುವುದನ್ನು ತಡೆದಿದೆ.

ಬಂಧನದಲ್ಲಿರುವವರ ಸ್ಥಿತಿಗತಿ, ಅವರಿಗೆ ನೀಡಲಾಗುತ್ತಿರುವ ಆಹಾರ ಮತ್ತು ವೈದ್ಯಕೀಯ ಸೌಲಭ್ಯಗಳು, ಅವರ ಮೇಲಿನ ವರ್ತನೆ ಹಾಗೂ ಬಂಧನ ಕೇಂದ್ರಗಳ ಪರಿಸ್ಥಿತಿಗಳನ್ನು ಪರಿಶೀಲಿಸುವಲ್ಲಿ ರೆಡ್ ಕ್ರಾಸ್‌ಗೆ ಮಹತ್ವದ ಪಾತ್ರವಿದೆ. ಬಂಧಿತರನ್ನು ಖಾಸಗಿಯಾಗಿ ಭೇಟಿ ಮಾಡಿ, ಅವರೊಂದಿಗೆ ಯಾವುದೇ ಸಾಕ್ಷಿಗಳಿಲ್ಲದೆ ಮಾತನಾಡುವ ಅವಕಾಶವೂ ಈ ಸಮಿತಿಗೆ ಅಂತರರಾಷ್ಟ್ರೀಯ ಕಾನೂನಿನಡಿ ಇದೆ.

ಆದರೆ ಈ ಭೇಟಿಗಳನ್ನು ನಿಷೇಧಿಸಿರುವ ಇಸ್ರೇಲ್‌ನ ನೀತಿಯನ್ನು 2026ರ ಜೂನ್ 3ರಂದು ಇಸ್ರೇಲ್ ಸುಪ್ರೀಂ ಕೋರ್ಟ್ ಸರ್ವಾನುಮತದಿಂದ ತಿರಸ್ಕರಿಸಿತು. ಆದರೂ ರೆಡ್ ಕ್ರಾಸ್ ಭೇಟಿಗಳನ್ನು ಯಾವಾಗ ಪುನರಾರಂಭಿಸಬೇಕು ಎಂಬುದಕ್ಕೆ ನ್ಯಾಯಾಲಯ ನಿರ್ದಿಷ್ಟ ಕಾಲಮಿತಿಯನ್ನು ನಿಗದಿಪಡಿಸಲಿಲ್ಲ. ನ್ಯಾಯಾಲಯದ ತೀರ್ಪನ್ನು ಇಸ್ರೇಲ್ ಸರ್ಕಾರ ಎಷ್ಟರ ಮಟ್ಟಿಗೆ ಪಾಲಿಸಲಿದೆ ಎಂಬುದೂ ಸ್ಪಷ್ಟವಾಗಿಲ್ಲ. ಆದೇಶ ಪಾಲಿಸದಿದ್ದರೆ ಯಾವ ಕ್ರಮ ಕೈಗೊಳ್ಳಬೇಕು ಎಂಬುದಕ್ಕೆ ಪರಿಣಾಮಕಾರಿ ವ್ಯವಸ್ಥೆಯೂ ಇಲ್ಲ ಎಂದು ಕೇಂದ್ರ ಆತಂಕ ವ್ಯಕ್ತಪಡಿಸಿದೆ.

ನಾಲ್ಕನೇ ಜಿನೀವಾ ಒಪ್ಪಂದದ 76ನೇ ಮತ್ತು 143ನೇ ವಿಧಿಗಳು ಬಂಧಿತರನ್ನು ರೆಡ್ ಕ್ರಾಸ್ ಭೇಟಿ ಮಾಡುವ ಹಕ್ಕನ್ನು ಖಾತರಿಪಡಿಸುತ್ತವೆ. ಬಂಧನ ಕೇಂದ್ರಗಳ ಪರಿಸ್ಥಿತಿಗಳನ್ನು ಪರಿಶೀಲಿಸುವುದು ಮತ್ತು ಬಂಧಿತರೊಂದಿಗೆ ಗೌಪ್ಯವಾಗಿ ಮಾತನಾಡುವುದು ಈ ಹಕ್ಕಿನ ಭಾಗವಾಗಿದೆ. ಆದರೆ ಇಸ್ರೇಲ್ ಈ ಅವಕಾಶವನ್ನು ನಿರಾಕರಿಸುವ ಮೂಲಕ ಅಂತರರಾಷ್ಟ್ರೀಯ ಕಾನೂನನ್ನು ಉಲ್ಲಂಘಿಸುತ್ತಿದೆ ಎಂದು ಕೇಂದ್ರ ಆರೋಪಿಸಿದೆ.

ಈ ನಿರ್ಬಂಧದ ಪರಿಣಾಮವಾಗಿ ಬಂಧನದಲ್ಲಿರುವ ಪ್ಯಾಲೆಸ್ಟೀನಿಯನ್ನರ ಪರಿಸ್ಥಿತಿಯನ್ನು ಸ್ವತಂತ್ರವಾಗಿ ಪರಿಶೀಲಿಸುವ ಅವಕಾಶವೇ ಇಲ್ಲದಂತಾಗಿದೆ. ಬಂಧಿತರು ಹೇಳುತ್ತಿರುವ ದೌರ್ಜನ್ಯಗಳನ್ನು ದೃಢಪಡಿಸುವುದು, ಅವರ ಆರೋಗ್ಯ ಸ್ಥಿತಿಯನ್ನು ಪರಿಶೀಲಿಸುವುದು ಮತ್ತು ಕುಟುಂಬಗಳಿಗೆ ಮಾಹಿತಿ ತಲುಪಿಸುವುದೂ ಕಷ್ಟಕರವಾಗಿದೆ.

ಮಿಲಿಟರಿ ನ್ಯಾಯಾಲಯಗಳ ಕಾರ್ಯವೈಖರಿಯ ಬಗ್ಗೆಯೂ ವರದಿ ಪ್ರಶ್ನೆಗಳನ್ನು ಎತ್ತಿದೆ. 2026ರ ಆಗಸ್ಟ್ 18ರಂದು ಇಸ್ರೇಲಿ ಪಡೆಗಳು ಡಾ. ದಿಮಾ ಅಮೀನ್ ಅವರ ಮನೆಗೆ ರಾತ್ರಿ ದಾಳಿ ನಡೆಸಿ ಅವರನ್ನು ಬಂಧಿಸಿವೆ. ಬಂಧನದ ವೇಳೆ ಅವರ ಕೈಗಳನ್ನು ಪ್ಲಾಸ್ಟಿಕ್ ನಿರ್ಬಂಧಗಳಿಂದ ಕಟ್ಟಲಾಗಿತ್ತು ಮತ್ತು ಕಣ್ಣುಗಳಿಗೆ ಬಟ್ಟೆ ಕಟ್ಟಲಾಗಿತ್ತು ಎಂದು ವರದಿ ಹೇಳಿದೆ. ಆಗಸ್ಟ್ 20ರಂದು ಸಾಮಾಜಿಕ ಮಾಧ್ಯಮದಲ್ಲಿ ಪ್ರಚೋದನೆ ನೀಡಿದ ಆರೋಪದ ಮೇಲೆ ಅವರನ್ನು ವಿಚಾರಣೆಗೆ ಒಳಪಡಿಸಲು ಓಫರ್ ಮಿಲಿಟರಿ ನ್ಯಾಯಾಲಯವು ಅವರ ಬಂಧನವನ್ನು ಐದು ದಿನಗಳವರೆಗೆ ವಿಸ್ತರಿಸಿತು.

ಅಂತರರಾಷ್ಟ್ರೀಯ ಸಮುದಾಯದ ಹೇಳಿಕೆಗಳಷ್ಟೇ; ಬಂಧಿತರಿಗೆ ರಕ್ಷಣೆ ಇಲ್ಲ

ಪ್ಯಾಲೆಸ್ಟೀನಿಯನ್ ಬಂಧಿತರ ಮೇಲಿನ ದೌರ್ಜನ್ಯಗಳ ಕುರಿತು ವಿಶ್ವಸಂಸ್ಥೆ ಮತ್ತು ಮಾನವ ಹಕ್ಕುಗಳ ಸಂಘಟನೆಗಳು ಹಲವು ಬಾರಿ ಆತಂಕ ವ್ಯಕ್ತಪಡಿಸಿವೆ. ಆದರೆ ಈ ಹೇಳಿಕೆಗಳು ಇಸ್ರೇಲ್‌ನ ನೀತಿಯಲ್ಲಿ ಅಥವಾ ಜೈಲುಗಳಲ್ಲಿನ ಬಂಧಿತರ ಪರಿಸ್ಥಿತಿಯಲ್ಲಿ ಯಾವುದೇ ಗೋಚರ ಬದಲಾವಣೆ ತರಲು ಸಾಧ್ಯವಾಗಿಲ್ಲ ಎಂದು ಪ್ಯಾಲೆಸ್ಟೀನಿಯನ್ ಸೆಂಟರ್ ಫಾರ್ ಪ್ರಿಸನರ್ಸ್ ಅಡ್ವೊಕಸಿ ಟೀಕಿಸಿದೆ.

2026ರ ಏಪ್ರಿಲ್‌ನಲ್ಲಿ ಬಿಡುಗಡೆಯಾದ ಸಂಘರ್ಷಕ್ಕೆ ಸಂಬಂಧಿಸಿದ ಲೈಂಗಿಕ ಹಿಂಸಾಚಾರದ ಕುರಿತ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿಯವರ ವರದಿಯಲ್ಲೂ ಪ್ಯಾಲೆಸ್ಟೀನಿಯನ್ನರ ಮೇಲಿನ ಹಿಂಸಾಚಾರದ ವಿಷಯ ಪ್ರಸ್ತಾಪವಾಗಿದೆ. ಎಲ್ಲ ರೀತಿಯ ಲೈಂಗಿಕ ಹಿಂಸಾಚಾರವನ್ನು ತಕ್ಷಣ ನಿಲ್ಲಿಸಬೇಕು ಮತ್ತು ಇಂತಹ ಕೃತ್ಯಗಳನ್ನು ತಡೆಗಟ್ಟಲು ಹಾಗೂ ಅವುಗಳಿಗೆ ಹೊಣೆಗಾರಿಕೆಯನ್ನು ನಿಗದಿಪಡಿಸಲು ಕಾಲಮಿತಿಯ ಬದ್ಧತೆಗಳನ್ನು ರೂಪಿಸಬೇಕು ಎಂದು ವರದಿ ಶಿಫಾರಸು ಮಾಡಿತ್ತು.

ಇದೇ ರೀತಿ, 2026ರ ಏಪ್ರಿಲ್ 2ರಂದು ಮಾನವೀಯ ಮತ್ತು ಮಾನವ ಹಕ್ಕುಗಳ ಸಂಘಟನೆಗಳು ಜಂಟಿ ಹೇಳಿಕೆ ಬಿಡುಗಡೆ ಮಾಡಿ, ಇಸ್ರೇಲ್‌ನ ನೆಸ್ಸೆಟ್ ಅಂಗೀಕರಿಸಿರುವ ಮರಣದಂಡನೆ ಕಾನೂನಿನ ವಿರುದ್ಧ ತುರ್ತು ಕ್ರಮ ಕೈಗೊಳ್ಳುವಂತೆ ಯುರೋಪಿಯನ್ ಒಕ್ಕೂಟವನ್ನು ಒತ್ತಾಯಿಸಿದ್ದವು.

ಆದರೆ ಇಂತಹ ಎಚ್ಚರಿಕೆಗಳು ಮತ್ತು ಹೇಳಿಕೆಗಳ ಹೊರತಾಗಿಯೂ ಇಸ್ರೇಲ್ ತನ್ನ ಬಂಧನ ನೀತಿಯನ್ನು ಬದಲಾಯಿಸಿಲ್ಲ ಎಂದು ಕೇಂದ್ರ ಹೇಳಿದೆ. ಗಾಜಾದಲ್ಲಿ ಯುದ್ಧ ಆರಂಭವಾಗಿ ಮೂರು ವರ್ಷಗಳಿಗೂ ಹೆಚ್ಚು ಕಾಲ ಕಳೆದಿದ್ದರೂ, ಜೈಲುಗಳೊಳಗಿನ ಹಿಂಸೆ ಮತ್ತು ಅಮಾನವೀಯ ವರ್ತನೆಗಳು ಮುಂದುವರಿದಿವೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸೇರಿದಂತೆ ಅಂತರರಾಷ್ಟ್ರೀಯ ಸಂಸ್ಥೆಗಳು ಮತ್ತು ವ್ಯವಸ್ಥೆಗಳು ಬಂಧಿತರನ್ನು ರಕ್ಷಿಸುವ ನಿಟ್ಟಿನಲ್ಲಿ ಪರಿಣಾಮಕಾರಿ ಕ್ರಮ ಕೈಗೊಳ್ಳಲು ವಿಫಲವಾಗಿವೆ ಎಂಬುದು ಕೇಂದ್ರದ ಟೀಕೆ.

“ಕೇವಲ ಹೇಳಿಕೆಗಳು ಬಂಧಿತರಿಗೆ ರಕ್ಷಣೆ ನೀಡುವುದಿಲ್ಲ. ಅವು ಸ್ವತಂತ್ರ ಮೇಲ್ವಿಚಾರಣೆಗೆ ಅವಕಾಶ ಕಲ್ಪಿಸುವುದೂ ಇಲ್ಲ” ಎಂದು ಕೇಂದ್ರ ಹೇಳಿದೆ.

ಅಂತರರಾಷ್ಟ್ರೀಯ ಸಮುದಾಯದ ಪ್ರತಿಕ್ರಿಯೆ ಕೇವಲ ಖಂಡನೆ ಮತ್ತು ಆತಂಕ ವ್ಯಕ್ತಪಡಿಸುವ ಹೇಳಿಕೆಗಳಿಗೆ ಸೀಮಿತವಾಗಿರುವಾಗ, ಜೈಲುಗಳ ಒಳಗೆ ಬಂಧಿತರ ಬದುಕು ಮತ್ತಷ್ಟು ಅಪಾಯಕ್ಕೆ ಸಿಲುಕುತ್ತಿದೆ. ಕಾನೂನಿನ ರಕ್ಷಣೆ, ವೈದ್ಯಕೀಯ ಆರೈಕೆ ಮತ್ತು ಕುಟುಂಬದ ಸಂಪರ್ಕದಿಂದ ವಂಚಿತರಾಗಿರುವ ಸಾವಿರಾರು ಜನರಿಗೆ ತಕ್ಷಣದ ನೆರವು ಅಗತ್ಯವಿದೆ ಎಂದು ವರದಿ ಒತ್ತಿಹೇಳಿದೆ.

‘ಪ್ಯಾಲೆಸ್ಟೀನಿಯನ್ನರ ನೋವಿನ ಮತ್ತೊಂದು ತಾಣವಾಗಿ ಜೈಲುಗಳು ಬದಲಾಗಿವೆ’

ಗಾಜಾದಲ್ಲಿ ನರಮೇಧದ ಯುದ್ಧ ಆರಂಭವಾದ ಮೂರು ವರ್ಷಗಳ ಬಳಿಕ ಇಸ್ರೇಲಿ ಜೈಲುಗಳ ಪರಿಸ್ಥಿತಿಯು ಉಲ್ಲಂಘನೆಗಳ ಪ್ರಮಾಣ ಮತ್ತು ಸ್ವರೂಪ ಎರಡರಲ್ಲೂ ಹಿಂದೆಂದೂ ಕಾಣದಷ್ಟು ಬದಲಾಗಿದೆ ಎಂದು ಪ್ಯಾಲೆಸ್ಟೀನಿಯನ್ ಸೆಂಟರ್ ಫಾರ್ ಪ್ರಿಸನರ್ಸ್ ಅಡ್ವೊಕಸಿ ಹೇಳಿದೆ.

2026ರಲ್ಲಿ ಜಾರಿಗೆ ಬಂದ ಮರಣದಂಡನೆ ಕಾನೂನು, ವಿಶೇಷ ಮಿಲಿಟರಿ ನ್ಯಾಯಮಂಡಳಿ ರಚನೆ, ರಹಸ್ಯ ಸಾಕ್ಷ್ಯಗಳ ಆಧಾರದ ಮೇಲೆ ಆಡಳಿತಾತ್ಮಕ ಬಂಧನವನ್ನು ನಿರಂತರವಾಗಿ ವಿಸ್ತರಿಸುವುದು ಮತ್ತು ‘ಕಾನೂನುಬಾಹಿರ ಹೋರಾಟಗಾರರು’ ಎಂಬ ವರ್ಗದಡಿ ಗಾಜಾದ ಬಂಧಿತರನ್ನು ದೀರ್ಘಕಾಲ ಇರಿಸುವುದು ಈ ಪರಿಸ್ಥಿತಿಯನ್ನು ಮತ್ತಷ್ಟು ಗಂಭೀರಗೊಳಿಸಿವೆ.

ಸಾವಿರಾರು ಬಂಧಿತರು ಸಾಮಾನ್ಯ ಜೈಲು ಶಿಕ್ಷೆಯನ್ನೂ ಮೀರಿದ ಅಮಾನವೀಯ ಪರಿಸ್ಥಿತಿಗಳನ್ನು ಎದುರಿಸುತ್ತಿದ್ದಾರೆ. ಅವರ ಜೀವ, ಆರೋಗ್ಯ ಮತ್ತು ಮಾನವ ಘನತೆಗೆ ನೇರ ಬೆದರಿಕೆ ಎದುರಾಗಿದೆ ಎಂದು ಕೇಂದ್ರ ಹೇಳಿದೆ.

ಈ ಹಿನ್ನೆಲೆಯಲ್ಲಿ ಬಂಧನದಲ್ಲಿರುವ ಎಲ್ಲ ಪ್ಯಾಲೆಸ್ಟೀನಿಯನ್ನರ ಸುರಕ್ಷತೆಯನ್ನು ಖಾತರಿಪಡಿಸಲು ಮತ್ತು ಅವರ ಮೇಲಿನ ದೌರ್ಜನ್ಯಗಳನ್ನು ತಡೆಯಲು ಕೇಂದ್ರ ಹಲವು ತುರ್ತು ಕ್ರಮಗಳನ್ನು ಒತ್ತಾಯಿಸಿದೆ. ಬಲವಂತವಾಗಿ ಕಾಣೆಯಾಗಿರುವವರು ಮತ್ತು ನಾಪತ್ತೆಯಾಗಿರುವ ಬಂಧಿತರ ಬಗ್ಗೆ ತಕ್ಷಣ ಮಾಹಿತಿ ಬಹಿರಂಗಪಡಿಸಬೇಕು. ಅವರನ್ನು ಯಾವ ಸ್ಥಳದಲ್ಲಿ ಇರಿಸಲಾಗಿದೆ, ಅವರ ಆರೋಗ್ಯ ಸ್ಥಿತಿ ಹೇಗಿದೆ ಎಂಬುದನ್ನು ಕುಟುಂಬಗಳಿಗೆ ತಿಳಿಸಬೇಕು. ಜೈಲುಗಳು ಮತ್ತು ಮಿಲಿಟರಿ ಬಂಧನ ಶಿಬಿರಗಳನ್ನು ಅಂತರರಾಷ್ಟ್ರೀಯ ಸ್ವತಂತ್ರ ಮೇಲ್ವಿಚಾರಣೆಗೆ ತೆರೆಯಬೇಕು. ವಿಶೇಷವಾಗಿ ರೆಡ್ ಕ್ರಾಸ್ ಸಮಿತಿಗೆ ಬಂಧಿತರನ್ನು ಭೇಟಿ ಮಾಡಲು ಅವಕಾಶ ನೀಡಬೇಕು ಎಂದು ಅದು ಆಗ್ರಹಿಸಿದೆ.

ಬಂಧನದ ಕ್ಷಣದಿಂದ ಬಿಡುಗಡೆಯಾಗುವವರೆಗೆ ಪ್ರತಿಯೊಬ್ಬ ಬಂಧಿತನಿಗೂ ಪರಿಣಾಮಕಾರಿ ಕಾನೂನು ಪ್ರಾತಿನಿಧ್ಯ ಒದಗಿಸಬೇಕು. ಕುಟುಂಬ ಸದಸ್ಯರ ಭೇಟಿಗಳನ್ನು ಪುನರಾರಂಭಿಸಬೇಕು. ಸಾಕಷ್ಟು ಆಹಾರ, ವೈದ್ಯಕೀಯ ಚಿಕಿತ್ಸೆ, ಬಟ್ಟೆ ಮತ್ತು ಬದುಕಲು ಅಗತ್ಯವಾದ ಮೂಲಭೂತ ಸೌಲಭ್ಯಗಳನ್ನು ಖಾತರಿಪಡಿಸಬೇಕು ಎಂದು ಕೇಂದ್ರ ಒತ್ತಾಯಿಸಿದೆ.

ಅದೇ ರೀತಿ ಏಕಾಂತ ಬಂಧನ ಮತ್ತು ಸಾಮೂಹಿಕ ಶಿಕ್ಷೆಯನ್ನು ಕೊನೆಗೊಳಿಸಬೇಕು. ಮರಣದಂಡನೆಗೆ ಅವಕಾಶ ನೀಡುವ ಹೊಸ ಕಾನೂನು ಮತ್ತು ವಿಶೇಷ ಮಿಲಿಟರಿ ನ್ಯಾಯಮಂಡಳಿ ರಚನೆಗೆ ಸಂಬಂಧಿಸಿದ ಕಾನೂನನ್ನು ರದ್ದುಗೊಳಿಸಬೇಕು. ರಹಸ್ಯ ಸಾಕ್ಷ್ಯಗಳ ಆಧಾರದ ಮೇಲೆ ವಿಚಾರಣೆಯಿಲ್ಲದೆ ಬಂಧನದಲ್ಲಿಡುವ ಆಡಳಿತಾತ್ಮಕ ಬಂಧನ ವ್ಯವಸ್ಥೆಯನ್ನು ಅಂತ್ಯಗೊಳಿಸಬೇಕು ಎಂದು ಆಗ್ರಹಿಸಿದೆ.

ಜೈಲುಗಳಲ್ಲಿ ನಡೆದಿರುವ ಚಿತ್ರಹಿಂಸೆ, ಬಂಧನದಲ್ಲಿನ ಸಾವುಗಳು, ಲೈಂಗಿಕ ದೌರ್ಜನ್ಯ ಮತ್ತು ವೈದ್ಯಕೀಯ ನಿರ್ಲಕ್ಷ್ಯದ ಪ್ರಕರಣಗಳ ಕುರಿತು ಸ್ವತಂತ್ರ ತನಿಖೆ ನಡೆಸಬೇಕು. ತಪ್ಪಿತಸ್ಥ ಅಧಿಕಾರಿಗಳನ್ನು ಗುರುತಿಸಿ ಹೊಣೆಗಾರರನ್ನಾಗಿ ಮಾಡಬೇಕು. ಬಂಧಿತರ ಮೇಲಿನ ಹಿಂಸಾಚಾರಕ್ಕೆ ಕಾರಣರಾದವರಿಗೆ ಶಿಕ್ಷೆಯಾಗುವಂತೆ ಕಾನೂನು ಕ್ರಮ ಕೈಗೊಳ್ಳಬೇಕು ಎಂಬುದು ಕೇಂದ್ರದ ಮತ್ತೊಂದು ಪ್ರಮುಖ ಬೇಡಿಕೆಯಾಗಿದೆ.

ಗಾಜಾ ಪಟ್ಟಿಯಿಂದ ಬಂಧಿಸಲ್ಪಟ್ಟವರ ವಿಚಾರದಲ್ಲಿ ಕಾನೂನು ಪ್ರಾತಿನಿಧ್ಯದ ಕೊರತೆ ಇನ್ನಷ್ಟು ಗಂಭೀರವಾಗಿದೆ ಎಂದು ವರದಿ ವಿಶೇಷವಾಗಿ ಎಚ್ಚರಿಸಿದೆ. ಒಬ್ಬ ಬಂಧಿತನಿಗೆ ವಕೀಲರಿಲ್ಲದಿರುವುದು ಕೇವಲ ಕಾನೂನು ನೆರವು ಇಲ್ಲದಿರುವ ಸಮಸ್ಯೆಯಲ್ಲ. ಆತನ ಬಂಧನದ ಪರಿಸ್ಥಿತಿಯನ್ನು ಹೊರಜಗತ್ತಿಗೆ ತಿಳಿಸಬಲ್ಲ ಕೆಲವೇ ಸ್ವತಂತ್ರ ಸಾಕ್ಷಿಗಳಲ್ಲಿ ಒಬ್ಬರನ್ನು ಕಳೆದುಕೊಂಡಂತಾಗುತ್ತದೆ. ಬಂಧಿತ ಮತ್ತು ಆತನ ಕುಟುಂಬದ ನಡುವಿನ ಸಂಪರ್ಕ ಕಡಿದುಹೋಗುತ್ತದೆ. ಕುಟುಂಬಕ್ಕೆ ತನ್ನ ಸದಸ್ಯನನ್ನು ಎಲ್ಲಿ ಇರಿಸಲಾಗಿದೆ ಎಂಬ ಮಾಹಿತಿಯೂ ಸಿಗದಿರಬಹುದು.

ಗಾಜಾದಿಂದ ಬಂಧಿಸಲ್ಪಟ್ಟ ವ್ಯಕ್ತಿಯೊಬ್ಬನನ್ನು ಬಂಧನದ ಪರಿಶೀಲನೆಗಾಗಿ ಕೆಲವು ತಿಂಗಳಿಗೊಮ್ಮೆ ವಿಡಿಯೋ ಪರದೆಯ ಮೂಲಕ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುತ್ತದೆ. ಆದರೆ ಆತನ ಕುಟುಂಬಕ್ಕೆ ಆತ ಯಾವ ಜೈಲಿನಲ್ಲಿದ್ದಾನೆ ಎಂಬುದೇ ತಿಳಿದಿರದ ಪರಿಸ್ಥಿತಿ ಇರಬಹುದು. ಅವರನ್ನು ಸಂಪರ್ಕಿಸುವ ಅವಕಾಶವೂ ಇಲ್ಲದಿರಬಹುದು. ಹೀಗಾಗಿ ಗಾಜಾದಿಂದ ಬಂಧಿಸಲ್ಪಟ್ಟ ಪ್ರತಿಯೊಬ್ಬರಿಗೂ ಬಂಧನದಿಂದ ಬಿಡುಗಡೆಯಾಗುವವರೆಗೆ ಪರಿಣಾಮಕಾರಿ ವಕೀಲರ ನೆರವು ಖಾತರಿಪಡಿಸುವುದು ಮಾನವ ಹಕ್ಕುಗಳ ರಕ್ಷಣೆಯ ಪ್ರಮುಖ ಆದ್ಯತೆಯಾಗಬೇಕು ಎಂದು ಕೇಂದ್ರ ಹೇಳಿದೆ.

ಎಲ್ಲ ಬಂಧಿತರನ್ನು, ಗಾಜಾದಿಂದ ಬಂಧಿಸಲ್ಪಟ್ಟವರನ್ನೂ ಒಳಗೊಂಡಂತೆ, ಅಂತರರಾಷ್ಟ್ರೀಯ ರೆಡ್ ಕ್ರಾಸ್ ಸಮಿತಿಯು ಖಾಸಗಿ ಮತ್ತು ಗೌಪ್ಯ ಸಭೆಗಳ ಮೂಲಕ ಭೇಟಿ ಮಾಡುವ ಅವಕಾಶವನ್ನು ಪುನರಾರಂಭಿಸಬೇಕು ಎಂದು ಕೇಂದ್ರ ಆಗ್ರಹಿಸಿದೆ. ಕಾಣೆಯಾದ ಮತ್ತು ಬಲವಂತವಾಗಿ ಕಣ್ಮರೆಯಾಗಿರುವ ಬಂಧಿತರ ಭವಿಷ್ಯವನ್ನು ಪತ್ತೆಹಚ್ಚಲು ಈ ಸಮಿತಿ ನೆರವಾಗಬೇಕು. ವಿಶ್ವಸಂಸ್ಥೆ ಹಾಗೂ ಅಂತರರಾಷ್ಟ್ರೀಯ ಮಾನವ ಹಕ್ಕು ಮತ್ತು ಮಾನವೀಯ ಸಂಘಟನೆಗಳು ತಮ್ಮ ಜವಾಬ್ದಾರಿಯನ್ನು ನಿರ್ವಹಿಸಬೇಕು. ಕೇವಲ ಹೇಳಿಕೆಗಳನ್ನು ನೀಡುವುದನ್ನು ಬಿಟ್ಟು ಬಂಧಿತರನ್ನು ರಕ್ಷಿಸುವ ಮತ್ತು ಉಲ್ಲಂಘನೆಗಳಿಗೆ ಹೊಣೆಗಾರರನ್ನು ಶಿಕ್ಷಿಸುವಂತಹ ನೈಜ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅದು ಒತ್ತಾಯಿಸಿದೆ.

“ಈ ವರ್ಷಗಳು ಬಹಿರಂಗಪಡಿಸಿರುವ ಅತ್ಯಂತ ಗಂಭೀರ ವಾಸ್ತವವೆಂದರೆ, ಜೈಲುಗಳು ಪ್ಯಾಲೆಸ್ಟೀನಿಯನ್ನರ ನೋವಿನ ಮತ್ತೊಂದು ತಾಣವಾಗಿ ಬದಲಾಗಿವೆ. ಬಂಧಿತರನ್ನು ಮೇಲ್ವಿಚಾರಣೆ ಮತ್ತು ಹೊಣೆಗಾರಿಕೆಯ ವ್ಯಾಪ್ತಿಯಿಂದ ಹೊರಗಿಟ್ಟರೆ, ಇನ್ನಷ್ಟು ಬಲಿಪಶುಗಳು ಸೃಷ್ಟಿಯಾಗುವ ಅಪಾಯವಿದೆ” ಎಂದು ಕೇಂದ್ರ ಎಚ್ಚರಿಸಿದೆ.

ಬಂಧಿತರ ಜೀವಗಳನ್ನು ರಕ್ಷಿಸುವುದು, ಕಾಣೆಯಾದವರ ಭವಿಷ್ಯವನ್ನು ಪತ್ತೆಹಚ್ಚುವುದು ಮತ್ತು ಅವರ ವಿರುದ್ಧ ನಡೆಯುತ್ತಿರುವ ಉಲ್ಲಂಘನೆಗಳನ್ನು ನಿಲ್ಲಿಸುವುದು ಇನ್ನು ಮುಂದೆ ಮುಂದೂಡಬಹುದಾದ ಬೇಡಿಕೆಗಳಲ್ಲ. ಅವು ಅಂತರರಾಷ್ಟ್ರೀಯ ಸಮುದಾಯ ಮತ್ತು ಅದರ ಸಂಸ್ಥೆಗಳ ತುರ್ತು ಮಾನವೀಯ ಹಾಗೂ ಕಾನೂನುಬದ್ಧ ಜವಾಬ್ದಾರಿಗಳಾಗಿವೆ ಎಂದು ಪ್ಯಾಲೆಸ್ಟೀನಿಯನ್ ಸೆಂಟರ್ ಫಾರ್ ಪ್ರಿಸನರ್ಸ್ ಅಡ್ವೊಕಸಿ ಸ್ಪಷ್ಟಪಡಿಸಿದೆ.

ಗಾಜಾದಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮವಾಗಿ ಸಾವಿರಾರು ಜನರು ಮನೆ, ಕುಟುಂಬ ಮತ್ತು ಬದುಕುವ ನೆಲೆಯನ್ನು ಕಳೆದುಕೊಂಡಿರುವಾಗ, ಬಂಧನದಲ್ಲಿರುವವರ ಸ್ಥಿತಿಯೂ ಮತ್ತೊಂದು ಮಾನವೀಯ ಬಿಕ್ಕಟ್ಟಾಗಿ ಬೆಳೆದಿದೆ. ಆರೋಪವಿಲ್ಲದ ಬಂಧನ, ರಹಸ್ಯ ಸಾಕ್ಷ್ಯಗಳು, ಚಿತ್ರಹಿಂಸೆ, ಲೈಂಗಿಕ ಹಿಂಸೆಯ ಬೆದರಿಕೆ, ಆಹಾರದ ಅಭಾವ ಮತ್ತು ವೈದ್ಯಕೀಯ ನಿರ್ಲಕ್ಷ್ಯದ ಆರೋಪಗಳು ಇಸ್ರೇಲಿ ಜೈಲು ವ್ಯವಸ್ಥೆಯ ಕುರಿತು ಗಂಭೀರ ಪ್ರಶ್ನೆಗಳನ್ನು ಎತ್ತಿವೆ. ಬಂಧಿತರ ಮೇಲಿನ ದೌರ್ಜನ್ಯಗಳನ್ನು ತಡೆಯಲು ಸ್ವತಂತ್ರ ತನಿಖೆ ಮತ್ತು ಅಂತರರಾಷ್ಟ್ರೀಯ ಮೇಲ್ವಿಚಾರಣೆ ತಕ್ಷಣ ಆರಂಭವಾಗದಿದ್ದರೆ, ಈಗಾಗಲೇ ಅಪಾಯದಲ್ಲಿರುವ ಸಾವಿರಾರು ಜೀವಗಳು ಮತ್ತಷ್ಟು ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆಯಿದೆ ಎಂಬ ಎಚ್ಚರಿಕೆಯನ್ನು ವರದಿ ನೀಡಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮೂರನೇ ಪತ್ನಿಗೂ ವಿಚ್ಛೇದನ: ರಷ್ಯಾದ ಅನ್ನಾ ಲೆಜ್ನೆವಾ ಜೊತೆಗಿನ 12 ವರ್ಷಗಳ ದಾಂಪತ್ಯ ಅಂತ್ಯಗೊಳಿಸಿದ ಪವನ್ ಕಲ್ಯಾಣ್

ಹೈದರಾಬಾದ್: ತೆಲುಗು ಚಿತ್ರರಂಗದ ನಟ ಹಾಗೂ ಆಂಧ್ರಪ್ರದೇಶದ ಉಪಮುಖ್ಯಮಂತ್ರಿ, ಜನಸೇನಾ ಪಕ್ಷದ ಮುಖ್ಯಸ್ಥ ಪವನ್ ಕಲ್ಯಾಣ್ ಅವರ ಮೂರನೇ ದಾಂಪತ್ಯವೂ ಮುರಿದುಬಿದ್ದಿದೆ. ರಷ್ಯಾದ ಮಾಡೆಲ್ ಮತ್ತು ನಟಿ ಅನ್ನಾ ಲೆಜ್ನೆವಾ ಅವರೊಂದಿಗಿನ 12...

ಬ್ರಿಟಿಷ್ ಲೇಖಕ ಎಂ. ಜಾನ್ ಹ್ಯಾರಿಸನ್‌ಗೆ 2026ರ ಬೂಕರ್ ಪ್ರಶಸ್ತಿ : ‘ದಿ ಎಂಡ್ ಆಫ್ ಎವೆರಿಥಿಂಗ್’ ವೈಜ್ಞಾನಿಕ ಕಾದಂಬರಿಗೆ ಜಾಗತಿಕ ಮನ್ನಣೆ

ಬ್ರಿಟಿಷ್ ಮೂಲದ ಪ್ರಸಿದ್ಧ ಲೇಖಕ ಎಂ. ಜಾನ್ ಹ್ಯಾರಿಸನ್ ಅವರು ತಮ್ಮ ವೈಜ್ಞಾನಿಕ ಹಾಗೂ ಡಿಸ್ಟೋಪಿಯನ್ ವಿಡಂಬನಾತ್ಮಕ ಕಾದಂಬರಿ 'ದಿ ಎಂಡ್ ಆಫ್ ಎವೆರಿಥಿಂಗ್' ಕೃತಿಗೆ 2026ರ ಪ್ರತಿಷ್ಠಿತ ಬೂಕರ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.  ಲಂಡನ್‌ನ...

ದಾಖಲೆಯ 89 ದಿನಗಳು ಕಳೆದರೂ ಅಧಿಕೃತವಾಗಿ ಮುಕ್ತಾಯಗೊಳ್ಳದ ಸಂಸತ್ತಿನ ಮುಂಗಾರು ಅಧಿವೇಶನ!

ಸಂಸತ್ತಿನ ಮುಂಗಾರು ಅಧಿವೇಶನವು ಇತಿಹಾಸದಲ್ಲೇ ಅತ್ಯಂತ ಸುದೀರ್ಘವಾದ 'ಸೈನ್ ಡೈ' (ನಿರ್ದಿಷ್ಟ ದಿನಾಂಕ ನಿಗದಿಪಡಿಸದೆ ಮುಂದೂಡುವುದು) ಮುಂದೂಡಿಕೆಯನ್ನು ದಾಖಲಿಸಿದೆ. ಬರೋಬ್ಬರಿ 89 ದಿನಗಳು ಕಳೆದರೂ ಅಧಿವೇಶನವನ್ನು ಔಪಚಾರಿಕವಾಗಿ ಮುಕ್ತಾಯಗೊಳಿಸುವ 'ಪ್ರೊರೋಗ್' (ಅಧಿವೇಶನದ ಮುಕ್ತಾಯ...

ಗೋಹತ್ಯೆ ಶಂಕೆಯ ಮೇಲಷ್ಟೇ ವಾಹನ ಜಪ್ತಿ ಮಾಡುವಂತಿಲ್ಲ: ಸಂತ್ರಸ್ತನಿಗೆ 15 ಲಕ್ಷ ರೂ. ಪರಿಹಾರ ನೀಡಲು ಅಲಹಾಬಾದ್ ಹೈಕೋರ್ಟ್ ಆದೇಶ

ಸೂಕ್ತ ಸಾಕ್ಷ್ಯಾಧಾರಗಳಿಲ್ಲದೆ ಕೇವಲ ಗೋಹತ್ಯೆಯ ಶಂಕೆಯ ಆಧಾರದ ಮೇಲೆ ವಾಹನವನ್ನು ಮುಟ್ಟುಗೋಲು ಹಾಕಿಕೊಳ್ಳುವುದು ಸಂಪೂರ್ಣ ಕಾನೂನುಬಾಹಿರ ಎಂದು ಅಲಹಾಬಾದ್ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ನಿಯಮಬಾಹಿರವಾಗಿ ವಾಹನ ಜಪ್ತಿ ಮಾಡಿ ಸಂತ್ರಸ್ತನಿಗೆ ನಷ್ಟ...

ಕ್ಯಾಬ್ ಚಾಲಕನಿಂದ ಕುಟುಂಬದ ಏಳು ಮಂದಿಯ ಹತ್ಯೆ ಪ್ರಕರಣ: ಎಲ್ಲ ಮೃತದೇಹಗಳೂ ಪತ್ತೆ

ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಕ್ಯಾಬ್ ಚಾಲಕನೊಬ್ಬ ತನ್ನ ಕುಟುಂಬದ ಏಳು ಮಂದಿಯನ್ನು ಹತ್ಯೆ ಮಾಡಿರುವ ಆರೋಪದ ಪ್ರಕರಣದಲ್ಲಿ, ನವೆಂಬರ್ 9ರ ಸೋಮವಾರ ಕೊನೆಯ ಎರಡೂ ಮೃತದೇಹಗಳನ್ನೂ ಪೊಲೀಸರು ಪತ್ತೆಹಚ್ಚಿದ್ದಾರೆ. ಶಿರಾಡಿ ಘಾಟ್‌ನ ಅರಣ್ಯ...

ಪೆಟ್ರೋಲ್‌ನಲ್ಲಿ ನಿಗದಿಗಿಂತ ಹೆಚ್ಚಿನ ಎಥೆನಾಲ್ ಮಿಶ್ರಣ ಆರೋಪಕ್ಕೆ ಕರ್ನಾಟಕ ಸರ್ಕಾರ ಬದ್ಧ: ಸಚಿವ ರಿಜ್ವಾನ್ ಅರ್ಷದ್

ಪೆಟ್ರೋಲ್‌ನಲ್ಲಿ ನಿಗದಿಪಡಿಸಿರುವ ಶೇ.20ರ ಮಿತಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಎಥೆನಾಲ್ ಮಿಶ್ರಣ ಮಾಡಲಾಗುತ್ತಿದೆ ಎಂಬ ತನ್ನ ವರದಿಗೆ ಕರ್ನಾಟಕ ಸರ್ಕಾರ ಬದ್ಧವಾಗಿದೆ ಎಂದು ಆಹಾರ, ನಾಗರಿಕ ಸರಬರಾಜು, ಗ್ರಾಹಕ ವ್ಯವಹಾರಗಳು ಹಾಗೂ ಕಾನೂನು ಮಾಪನಶಾಸ್ತ್ರ...

ಫಿರೋಜಾಬಾದ್‌ನಲ್ಲಿ ದಲಿತ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ, ಭೀಕರ ಹಲ್ಲೆ: ಆಗ್ರಾ ಆಸ್ಪತ್ರೆಯಲ್ಲಿ 16ರ ಬಾಲಕಿ ಸಾವು 

ಉತ್ತರ ಪ್ರದೇಶ: ಉತ್ತರ ಪ್ರದೇಶದ ಫಿರೋಜಾಬಾದ್‌ನಲ್ಲಿ ಮೂವರು ವ್ಯಕ್ತಿಗಳಿಂದ ಸಾಮೂಹಿಕ ಅತ್ಯಾಚಾರ ಮತ್ತು ಅತ್ಯಂತ ಕ್ರೂರ ಹಲ್ಲೆಗೊಳಗಾಗಿದ್ದ 16 ವರ್ಷದ ದಲಿತ ಬಾಲಕಿ, ಒಂದು ವಾರದ ಸಾವು ಬದುಕಿನ ಹೋರಾಟದ ಬಳಿಕ ಶುಕ್ರವಾರ...

ಗ್ಯಾನೇಶ್ ಕುಮಾರ್ ವಿರುದ್ಧ ಭ್ರಷ್ಟಾಚಾರ ತನಿಖೆ: ಕೇರಳದ ವಿಜಿಲೆನ್ಸ್ ಮುಂದೆ ಹಾಜರಾದ ಗುತ್ತಿಗೆದಾರ; ಹಿಂದಿನ ತನಿಖೆ ಸಾಕ್ಷ್ಯ ಮುಚ್ಚಿಹಾಕಿದ ಆರೋಪ

ತಿರುವನಂತಪುರಂ: ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಗ್ಯಾನೇಶ್ ಕುಮಾರ್ ವಿರುದ್ಧದ ಭ್ರಷ್ಟಾಚಾರದ ಆರೋಪಕ್ಕೆ ಸಂಬಂಧಿಸಿದ ತನಿಖೆ ಮತ್ತೆ ಮುನ್ನೆಲೆಗೆ ಬಂದಿದೆ. ಕೇರಳ ಲೋಕೋಪಯೋಗಿ ಇಲಾಖೆಯ ಕಾರ್ಯದರ್ಶಿಯಾಗಿ ಅವರು ಕಾರ್ಯನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ನಡೆದ ರಸ್ತೆ...

ಸಿಂಧನೂರು| ಆಂಜನೇಯ ಜಾತ್ರೋತ್ಸವದಲ್ಲಿ ದಲಿತರ ಮೇಲೆ ದೌರ್ಜನ್ಯ; ತಿಡಿಗೋಳದಲ್ಲಿ ಬೃಹತ್‌ ಪ್ರತಿಭಟನೆ

ರಾಯಚೂರು ಜಿಲ್ಲೆಯ ಸಿಂಧನೂರು ತಾಲ್ಲೂಕಿನ ತಿಡಿಗೋಳ ಗ್ರಾಮದಲ್ಲಿ ಇತ್ತೀಚೆಗೆ ಜರುಗಿದ ಆಂಜನೇಯ ಜಾತ್ರೋತ್ಸವದಲ್ಲಿ ದಲಿತರ ಮೇಲೆ ಸವರ್ಣೀಯರಿಂದ ನಡೆದ ದೌರ್ಜನ್ಯ, ಸಾಮೂಹಿಕ ಬಹಿಷ್ಕಾರ ಮತ್ತು ಅಸ್ಪೃಶ್ಯತೆ ಆಚರಣೆ ವಿರೋಧಿಸಿ ದಲಿತ ಮತ್ತು ಪ್ರಗತಿಪರ...

ಗೌರಿ ಲಂಕೇಶ್, ಕಲ್ಬುರ್ಗಿ ಹತ್ಯೆ ಪ್ರಕರಣ: 6 ತಿಂಗಳಲ್ಲಿ ವಿಚಾರಣೆ ಮುಗಿಸಿ ಆರೋಪಿಗಳನ್ನು ಜೈಲಿಗೆ ಕಳುಹಿಸುವೆ – ಗೃಹ ಸಚಿವ ಪ್ರಿಯಾಂಕ್ ಖರ್ಗೆ

ಪತ್ರಕರ್ತೆ ಗೌರಿ ಲಂಕೇಶ್ ಮತ್ತು ವಿಚಾರವಾದಿ ಎಂ.ಎಂ. ಕಲ್ಬುರ್ಗಿ ಹತ್ಯೆ ಪ್ರಕರಣಗಳ ವಿಚಾರಣೆಯನ್ನು ಮುಂಬರುವ ಆರು ತಿಂಗಳೊಳಗೆ ಪೂರ್ಣಗೊಳಿಸಿ, ಆರೋಪಿಗಳನ್ನು ಜೈಲಿಗೆ ಕಳುಹಿಸುವುದಾಗಿ ಕರ್ನಾಟಕದ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಘೋಷಿಸಿದ್ದಾರೆ. ಕೇರಳದ...