ಲಕ್ನೋ: ಉತ್ತರ ಪ್ರದೇಶದಲ್ಲಿ ಪೊಲೀಸರಿಂದ ನಾಗರಿಕರ ಮೂಲಭೂತ ಹಕ್ಕುಗಳ ಉಲ್ಲಂಘನೆ ನಿರಂತರವಾಗಿ ನಡೆಯುತ್ತಿದೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಅಲಹಾಬಾದ್ ಹೈಕೋರ್ಟ್, ರಾಜ್ಯದಲ್ಲಿನ ನಾಗರಿಕ ಸ್ವಾತಂತ್ರ್ಯದ ಪರಿಸ್ಥಿತಿಯನ್ನು ‘ನಾಚಿಕೆಗೇಡಿನದ್ದು’ ಎಂದು ಬಣ್ಣಿಸಿದೆ. ನಾಗರಿಕರ ಮೂಲಭೂತ ಹಕ್ಕುಗಳು ಮತ್ತು ಸ್ವಾತಂತ್ರ್ಯಗಳ ಬಗ್ಗೆ ಉತ್ತರ ಪ್ರದೇಶ ಪೊಲೀಸರಿಗೆ ಯಾವುದೇ ಗೌರವವಿಲ್ಲದಂತೆ ಕಾಣುತ್ತಿದೆ. ಹಕ್ಕುಗಳ ಉಲ್ಲಂಘನೆಯೇ ಪೊಲೀಸರಿಗೆ ದಿನನಿತ್ಯದ ಸಂಗತಿಯಾಗಿ ಬಿಟ್ಟಿದೆ ಎಂದು ನ್ಯಾಯಾಲಯ ಕಟುವಾಗಿ ಟೀಕಿಸಿದೆ.
ಎರಡು ದಿನಗಳ ಕಾಲ ಪೊಲೀಸರು ತನ್ನನ್ನು ಅಕ್ರಮವಾಗಿ ಬಂಧನದಲ್ಲಿಟ್ಟಿದ್ದರು ಎಂದು ಆರೋಪಿಸಿ ವ್ಯಕ್ತಿಯೊಬ್ಬರು ಸಲ್ಲಿಸಿದ್ದ ಹೇಬಿಯಸ್ ಕಾರ್ಪಸ್ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಅಚಲ್ ಸಚ್ದೇವ್ ಮತ್ತು ಅತುಲ್ ಶ್ರೀಧರನ್ ಅವರನ್ನೊಳಗೊಂಡ ವಿಭಾಗೀಯ ಪೀಠ ಈ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ. ಪ್ರಕರಣದ ವಿಚಾರಣೆ ವೇಳೆ ಪೊಲೀಸರ ಕಾರ್ಯವೈಖರಿ, ಸಿಸಿಟಿವಿ ದೃಶ್ಯಾವಳಿಗಳನ್ನು ಒದಗಿಸುವಲ್ಲಿ ತೋರಿದ ನಿರ್ಲಕ್ಷ್ಯ ಮತ್ತು ಅಕ್ರಮ ಬಂಧನದ ಆರೋಪವನ್ನು ನ್ಯಾಯಾಲಯ ಗಂಭೀರವಾಗಿ ಪರಿಗಣಿಸಿದೆ.
“ನಾಗರಿಕ ಸ್ವಾತಂತ್ರ್ಯದ ದೃಷ್ಟಿಯಿಂದ ಉತ್ತರ ಪ್ರದೇಶ ರಾಜ್ಯದಲ್ಲಿರುವ ಪರಿಸ್ಥಿತಿ ನಾಚಿಕೆಗೇಡಿನ ಸಂಗತಿ. ನಾಗರಿಕರ ಮೂಲಭೂತ ಹಕ್ಕುಗಳು ಮತ್ತು ನಾಗರಿಕ ಸ್ವಾತಂತ್ರ್ಯಗಳ ಬಗ್ಗೆ ಪೊಲೀಸರಿಗೆ ಕಡಿಮೆ ಗೌರವವಿದೆ. ಈ ಹಕ್ಕುಗಳ ಉಲ್ಲಂಘನೆಯೇ ರಾಜ್ಯ ಪೊಲೀಸರಿಗೆ ದಿನನಿತ್ಯದ ಸಂಗತಿಯಾಗಿರುವಂತೆ ತೋರುತ್ತಿದೆ” ಎಂದು ನ್ಯಾಯಪೀಠ ತನ್ನ ತೀರ್ಪಿನಲ್ಲಿ ಹೇಳಿದೆ.
ಅಕ್ರಮ ಬಂಧನದ ಆರೋಪಗಳಿಗೆ ಸಂಬಂಧಿಸಿದಂತೆ ಸಿಸಿಟಿವಿ ದೃಶ್ಯಾವಳಿಗಳನ್ನು ಕೇಳಿದಾಗಲೆಲ್ಲ ಪೊಲೀಸರು ಅವು ಲಭ್ಯವಿಲ್ಲ ಎಂಬ ಒಂದೇ ರೀತಿಯ ಕಾರಣಗಳನ್ನು ನೀಡುತ್ತಿರುವುದಕ್ಕೂ ನ್ಯಾಯಾಲಯ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. “ಈ ನ್ಯಾಯಾಲಯವು ಒಂದರ ನಂತರ ಒಂದರಂತೆ ಸಿಸಿಟಿವಿ ದೃಶ್ಯಾವಳಿಗಳನ್ನು ಕೇಳಿದಾಗಲೆಲ್ಲ, ಹೆಚ್ಚಿನ ಪ್ರಕರಣಗಳಲ್ಲಿ ಒಂದಲ್ಲ ಒಂದು ಕಾರಣ ನೀಡಿ ದೃಶ್ಯಾವಳಿಗಳು ಲಭ್ಯವಿಲ್ಲ ಎಂದು ವರದಿ ಸಲ್ಲಿಸಲಾಗುತ್ತದೆ” ಎಂದು ನ್ಯಾಯಪೀಠ ಅಸಮಾಧಾನ ವ್ಯಕ್ತಪಡಿಸಿದೆ.
ಈ ಪ್ರಕರಣದಲ್ಲಿ ಅರ್ಜಿದಾರರನ್ನು ಸೆಪ್ಟೆಂಬರ್ 5ರಂದು ಬಿಜ್ನೋರ್ ಜಿಲ್ಲೆಯ ನಂಗಲ್ ಪೊಲೀಸ್ ಠಾಣೆಯ ಹೊರಗಿನಿಂದ ಪೊಲೀಸರು ಕರೆದೊಯ್ದಿದ್ದರು. ಆದರೆ ಅವರ ಅಧಿಕೃತ ಬಂಧನವನ್ನು ಸೆಪ್ಟೆಂಬರ್ 7ರಂದು ದಾಖಲಿಸಲಾಗಿತ್ತು. ಅಂದರೆ, ಎರಡು ದಿನಗಳ ಕಾಲ ಅಕ್ರಮ ಬಂಧನದಲ್ಲಿಟ್ಟುಕೊಂಡು ನಂತರ ಬಂಧನ ತೋರಿಸಲಾಗಿದೆ ಎಂಬುದು ಅರ್ಜಿದಾರರ ಪ್ರಮುಖ ಆರೋಪವಾಗಿತ್ತು.
ಈ ಕುರಿತು ಸೆಪ್ಟೆಂಬರ್ 5 ಮತ್ತು 7ರ ಸಿಸಿಟಿವಿ ದೃಶ್ಯಾವಳಿಗಳನ್ನು ನ್ಯಾಯಾಲಯ ಕೇಳಿದಾಗ ಪೊಲೀಸರು ವಿಚಿತ್ರ ಕಾರಣ ಮುಂದಿಟ್ಟಿದ್ದರು. ಗುಡುಗು ಸಹಿತ ಮಳೆಯಾದ ಬಳಿಕ LAN ಕೇಬಲ್ ಮೂಲಕ ನೀರು ಹರಿದು ಸಿಸಿಟಿವಿ ವ್ಯವಸ್ಥೆಯಲ್ಲಿ ತಾಂತ್ರಿಕ ದೋಷ ಉಂಟಾಗಿತ್ತು. ಹೀಗಾಗಿ ದೃಶ್ಯಾವಳಿಗಳು ಲಭ್ಯವಿಲ್ಲ ಎಂದು ಪೊಲೀಸರು ಸಮರ್ಥಿಸಿಕೊಂಡಿದ್ದರು.
ಆದರೆ ಪೊಲೀಸರ ಈ ವಿವರಣೆಯನ್ನು ನ್ಯಾಯಾಲಯ ಒಪ್ಪಿಕೊಂಡಿಲ್ಲ. ಕಾನೂನುಬಾಹಿರ ಬಂಧನದ ಆರೋಪ ಎದುರಾದಾಗ ಸಿಸಿಟಿವಿ ವ್ಯವಸ್ಥೆ ಸರಿಯಾಗಿ ಕಾರ್ಯನಿರ್ವಹಿಸುತ್ತಿರಲಿಲ್ಲ ಎಂಬ ನೆಪ ಹೇಳಿ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ. ದೃಶ್ಯಾವಳಿಗಳನ್ನು ಒದಗಿಸದಿರುವುದು ಮತ್ತು ಅದಕ್ಕೆ ನೀಡಿರುವ ಕಾರಣಗಳ ಕುರಿತು ತೀವ್ರ ಅನುಮಾನ ವ್ಯಕ್ತಪಡಿಸಿರುವ ನ್ಯಾಯಪೀಠ, ಸತ್ಯವನ್ನು ಉದ್ದೇಶಪೂರ್ವಕವಾಗಿ ಮರೆಮಾಚುವ ಉದ್ದೇಶದಿಂದಲೇ ದೃಶ್ಯಾವಳಿಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿಲ್ಲ ಎಂಬ ಅರ್ಜಿದಾರರ ವಾದವನ್ನು ಉಲ್ಲೇಖಿಸಿದೆ.
ಅರ್ಜಿದಾರರು ಬೇರೆ ಯಾವುದೇ ಪ್ರಕರಣದಲ್ಲಿ ಪೊಲೀಸರಿಗೆ ಅಗತ್ಯವಿಲ್ಲದಿದ್ದರೆ ಅವರನ್ನು ತಕ್ಷಣವೇ ಬಿಡುಗಡೆ ಮಾಡುವಂತೆ ನ್ಯಾಯಾಲಯ ಆದೇಶಿಸಿದೆ. ಅಲ್ಲದೆ, ಅರ್ಜಿದಾರರಿಗೆ ಪರಿಹಾರವಾಗಿ 20 ಸಾವಿರ ರೂಪಾಯಿ ಪಾವತಿಸುವಂತೆ ಉತ್ತರ ಪ್ರದೇಶ ಸರ್ಕಾರಕ್ಕೆ ನಿರ್ದೇಶನ ನೀಡಿದೆ.
ಪೊಲೀಸರೇ ಕಾನೂನನ್ನು ಉಲ್ಲಂಘಿಸಿ ನಾಗರಿಕರ ಸ್ವಾತಂತ್ರ್ಯವನ್ನು ಕಸಿದುಕೊಂಡರೆ, ಸಾಮಾನ್ಯ ಜನರು ತಮ್ಮ ಮೂಲಭೂತ ಹಕ್ಕುಗಳನ್ನು ಯಾರ ಬಳಿ ಕೇಳಬೇಕು ಎಂಬ ಗಂಭೀರ ಪ್ರಶ್ನೆಯನ್ನು ಈ ಪ್ರಕರಣ ಮುನ್ನೆಲೆಗೆ ತಂದಿದೆ. ವಿಶೇಷವಾಗಿ ಅಕ್ರಮ ಬಂಧನದಂತಹ ಗಂಭೀರ ಆರೋಪಗಳ ಸಂದರ್ಭದಲ್ಲಿ ಸಾಕ್ಷ್ಯವಾಗಬೇಕಾದ ಸಿಸಿಟಿವಿ ದೃಶ್ಯಾವಳಿಗಳೇ ಲಭ್ಯವಿಲ್ಲ ಎಂಬ ಪೊಲೀಸ್ ಸಮರ್ಥನೆ ನ್ಯಾಯಾಂಗದ ವಿಶ್ವಾಸಾರ್ಹತೆ ಮತ್ತು ಪೊಲೀಸ್ ಹೊಣೆಗಾರಿಕೆಯ ಕುರಿತ ಚರ್ಚೆಯನ್ನು ಮತ್ತೆ ಮುನ್ನೆಲೆಗೆ ತಂದಿದೆ.
ಉತ್ತರ ಪ್ರದೇಶ ಪೊಲೀಸರ ಕಾರ್ಯವೈಖರಿಯನ್ನು ನೇರವಾಗಿ ತರಾಟೆಗೆ ತೆಗೆದುಕೊಂಡಿರುವ ಹೈಕೋರ್ಟ್ನ ಈ ತೀರ್ಪು, ನಾಗರಿಕ ಸ್ವಾತಂತ್ರ್ಯ ಮತ್ತು ಮೂಲಭೂತ ಹಕ್ಕುಗಳ ರಕ್ಷಣೆಯಲ್ಲಿ ಪೊಲೀಸ್ ವ್ಯವಸ್ಥೆಯ ಹೊಣೆಗಾರಿಕೆ ಎಷ್ಟು ಮುಖ್ಯ ಎಂಬುದನ್ನು ಎತ್ತಿಹಿಡಿದಿದೆ.


