ಮಧ್ಯ ಗಾಜಾದ ದೇರ್ ಅಲ್-ಬಲಾಹ್ನಲ್ಲಿ ಸ್ಥಳಾಂತರಗೊಂಡ ಕುಟುಂಬಗಳು ಆಶ್ರಯ ಪಡೆದಿದ್ದ ಟೆಂಟ್ಗಳ ಮೇಲೆ ಮರಳಿನ ದಿಬ್ಬ ಕುಸಿದು ಬಿದ್ದ ಪರಿಣಾಮ ನಾಲ್ವರು ಮಕ್ಕಳು ಮತ್ತು ಓರ್ವ ಮಹಿಳೆ ಸೇರಿದಂತೆ ಕನಿಷ್ಠ ಐವರು ಪ್ಯಾಲೆಸ್ತೀನಿಯರು ಮೃತಪಟ್ಟಿದ್ದಾರೆ. ಭಾನುವಾರ (ನ.8) ಈ ದುರಂತ ಸಂಭವಿಸಿದೆ ಎಂದು ಪ್ಯಾಲೆಸ್ತೀನ್ ಮಾಧ್ಯಮಗಳು ವರದಿ ಮಾಡಿವೆ.
ಸೂಕ್ತ ಆಶ್ರಯವಿಲ್ಲದೆ ಸತತ ನಾಲ್ಕನೇ ಚಳಿಗಾಲವನ್ನು ಎದುರಿಸುತ್ತಿರುವ ಪ್ಯಾಲೆಸ್ತೀನಿಯರ ಸಂಕಷ್ಟವನ್ನು ಈ ಘಟನೆ ಮತ್ತಷ್ಟು ಹೆಚ್ಚಿಸಿದೆ. ಗಾಜಾದಾದ್ಯಂತ ತಾತ್ಕಾಲಿಕ ಶಿಬಿರಗಳಲ್ಲಿ ವಾಸಿಸುತ್ತಿರುವ ಸಾವಿರಾರು ಸ್ಥಳಾಂತರಗೊಂಡ ಕುಟುಂಬಗಳು ಭಾರಿ ಮಳೆ ಮತ್ತು ಬಿರುಗಾಳಿಯಿಂದ ತೀವ್ರ ತೊಂದರೆ ಅನುಭವಿಸುತ್ತಿವೆ.
ಗಾಜಾದ ನಾಗರಿಕ ರಕ್ಷಣಾ ಪಡೆಗಳು ಮರಳು ಮತ್ತು ಅವಶೇಷಗಳ ಅಡಿಯಿಂದ ಐವರ ಮೃತದೇಹಗಳನ್ನು ಹೊರತೆಗೆದಿವೆ. ಘಟನಾ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದ್ದು, ಅವಶೇಷಗಳ ಅಡಿಯಿಂದ ಗಾಯಗೊಂಡಿದ್ದ ಐವರನ್ನು ಜೀವಂತವಾಗಿ ಹೊರತರಲಾಗಿದೆ ಎಂದು ಸ್ಥಳೀಯ ವರದಿಗಳು ತಿಳಿಸಿವೆ.
ದೇರ್ ಅಲ್-ಬಲಾಹ್ನ ದಕ್ಷಿಣ ಭಾಗದಲ್ಲಿರುವ ಸ್ಥಳಾಂತರಿತ ಕುಟುಂಬಗಳ ಶಿಬಿರದ ಮೇಲೆ ಮರಳು ಮತ್ತು ಬಂಡೆಗಳ ರಾಶಿ ಕುಸಿದು ಬಿದ್ದಿದ್ದು, ಹಲವರು ಅದರ ಅಡಿಯಲ್ಲಿ ಸಿಲುಕಿಕೊಂಡಿದ್ದಾರೆ ಎಂದು ಗಾಜಾ ನಾಗರಿಕ ರಕ್ಷಣಾ ಪಡೆಯ ವಕ್ತಾರ ಮಹಮೂದ್ ಬಸ್ಸಾಲ್ ತಿಳಿಸಿದ್ದಾರೆ.
ಅವಶೇಷಗಳ ಅಡಿಯಲ್ಲಿ ಸಿಲುಕಿದ್ದವರನ್ನು ರಕ್ಷಿಸಲು ಸ್ಥಳೀಯ ನಿವಾಸಿಗಳು ಧಾವಿಸಿದ್ದು, ಸಲಿಕೆ ಸೇರಿದಂತೆ ಲಭ್ಯವಿದ್ದ ಸಾಮಾನ್ಯ ಉಪಕರಣಗಳನ್ನು ಬಳಸಿ ಕಾರ್ಯಾಚರಣೆ ನಡೆಸಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ದೃಶ್ಯಗಳಲ್ಲಿ ಕೆಲವರು ಮರಳನ್ನು ಅಗೆದು ದೊಡ್ಡ ಕಾಂಕ್ರೀಟ್ ಚಪ್ಪಡಿಯೊಂದನ್ನು ಎತ್ತಲು ಪ್ರಯತ್ನಿಸುತ್ತಿರುವುದು ಕಂಡುಬಂದಿದೆ. ಮತ್ತೊಬ್ಬ ವ್ಯಕ್ತಿ ಅವಶೇಷಗಳ ಅಡಿಯಲ್ಲಿ ಸಿಲುಕಿದ್ದವರನ್ನು ರಕ್ಷಿಸಲು ಬರಿಗೈಯಲ್ಲೇ ಮರಳನ್ನು ತೆರವುಗೊಳಿಸುತ್ತಿರುವುದು ದೃಶ್ಯಗಳಲ್ಲಿ ದಾಖಲಾಗಿದೆ.
ನವೆಂಬರ್ 6ರ ಶುಕ್ರವಾರ ರಾತ್ರಿ ಗಾಜಾದಲ್ಲಿ ಆರಂಭವಾದ ತೀವ್ರ ಹವಾಮಾನ ವೈಪರೀತ್ಯದ ನಡುವೆ ಈ ದುರಂತ ಸಂಭವಿಸಿದೆ. ಅಂದಿನಿಂದ ಭಾರಿ ಮಳೆ ಮತ್ತು ಬಲವಾದ ಗಾಳಿಯಿಂದಾಗಿ ಪ್ರದೇಶದಲ್ಲಿ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿದೆ.
ನವೆಂಬರ್ 7ರಂದು ಗಾಜಾ ಸರ್ಕಾರದ ಮಾಧ್ಯಮ ಕಚೇರಿ ಬಿಡುಗಡೆ ಮಾಡಿದ ವರದಿಯ ಪ್ರಕಾರ, ಮೊದಲ ಕಡಿಮೆ ಒತ್ತಡದ ಹವಾಮಾನ ವ್ಯವಸ್ಥೆ ಗಾಜಾವನ್ನು ಪ್ರವೇಶಿಸಿದ ಕೇವಲ 12 ಗಂಟೆಗಳಲ್ಲಿ ಸುಮಾರು 70 ಸಾವಿರ ಟೆಂಟ್ಗಳು ಜಲಾವೃತಗೊಂಡಿವೆ. ಅಲ್ಲದೆ, ಹಲವು ಗೋಡೆಗಳು ಕುಸಿದಿದ್ದು, ಇದರಿಂದ ಉಂಟಾದ ಹಾನಿಯ ಮೊತ್ತ ಸುಮಾರು 30 ಲಕ್ಷ ಅಮೆರಿಕನ್ ಡಾಲರ್ ಎಂದು ಅಂದಾಜಿಸಲಾಗಿದೆ.
ಗಾಜಾ ಆರೋಗ್ಯ ಸಚಿವಾಲಯದ ಮಹಾನಿರ್ದೇಶಕ ಮುನೀರ್ ಅಲ್-ಬುರ್ಷ್ ಅವರು, ಸುಮಾರು 3.5 ಲಕ್ಷ ಸ್ಥಳಾಂತರಗೊಂಡ ಪ್ಯಾಲೆಸ್ತೀನಿಯರು ಪ್ರತಿಕೂಲ ಹವಾಮಾನ ವೈಪರೀತ್ಯಕ್ಕೆ ನೇರವಾಗಿ ಒಡ್ಡಿಕೊಂಡಿದ್ದಾರೆ ಎಂದು ಎಚ್ಚರಿಸಿದ್ದಾರೆ. ತಾಪಮಾನ ಕುಸಿಯುತ್ತಿರುವುದರಿಂದ ವಿಶೇಷವಾಗಿ ಮಕ್ಕಳು, ವೃದ್ಧರು ಮತ್ತು ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವವರ ಜೀವಕ್ಕೆ ಅಪಾಯ ಎದುರಾಗಬಹುದು ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.
ಹಾನಿಗೊಳಗಾದ ಒಳಚರಂಡಿ ಮತ್ತು ಕೊಳಚೆನೀರು ಸಂಸ್ಕರಣಾ ವ್ಯವಸ್ಥೆಗಳು, ಇಂಧನ ಹಾಗೂ ತಾಪನ ಸೌಲಭ್ಯಗಳ ಕೊರತೆಯೂ ತಾತ್ಕಾಲಿಕ ಆಶ್ರಯಗಳಲ್ಲಿ ವಾಸಿಸುತ್ತಿರುವ ಕುಟುಂಬಗಳ ಸಂಕಷ್ಟವನ್ನು ಮತ್ತಷ್ಟು ಹೆಚ್ಚಿಸಿವೆ.
2025ರ ಅಕ್ಟೋಬರ್ 10ರಿಂದ ಕದನ ವಿರಾಮ ಜಾರಿಯಲ್ಲಿದ್ದರೂ, ಮಾನವೀಯ ನೆರವು, ಆಶ್ರಯ ನಿರ್ಮಾಣ ಸಾಮಗ್ರಿಗಳು ಮತ್ತು ಪುನರ್ನಿರ್ಮಾಣಕ್ಕೆ ಅಗತ್ಯವಾದ ಸರಕುಗಳ ಪೂರೈಕೆಯ ಮೇಲಿನ ನಿರ್ಬಂಧಗಳು ಮುಂದುವರಿದಿವೆ. ಇದರಿಂದ ಗಾಜಾದಲ್ಲಿ ಜನರ ಜೀವನಮಟ್ಟ ಸುಧಾರಿಸುವ ಪ್ರಯತ್ನಗಳಿಗೆ ಅಡ್ಡಿಯಾಗುತ್ತಿದೆ.
ಕದನ ವಿರಾಮದ ಅವಧಿಯಲ್ಲೂ ಮುಂದುವರಿದ ಸಾವು-ನೋವು
2023ರ ಅಕ್ಟೋಬರ್ 7ರಿಂದ ಈವರೆಗೆ ಇಸ್ರೇಲ್ ದಾಳಿಗಳಲ್ಲಿ ಕನಿಷ್ಠ 74,640 ಪ್ಯಾಲೆಸ್ತೀನಿಯರು ಮೃತಪಟ್ಟಿದ್ದು, 1,75,947 ಮಂದಿ ಗಾಯಗೊಂಡಿದ್ದಾರೆ ಎಂದು ಗಾಜಾ ಆರೋಗ್ಯ ಸಚಿವಾಲಯ ತಿಳಿಸಿದೆ.
ನವೆಂಬರ್ 8ರಂದು ಬಿಡುಗಡೆ ಮಾಡಿದ ಅಂಕಿಅಂಶಗಳ ಪ್ರಕಾರ, ಕದನ ವಿರಾಮ ಜಾರಿಯಾದ ಬಳಿಕವೂ 1,610 ಪ್ಯಾಲೆಸ್ತೀನಿಯರು ಮೃತಪಟ್ಟಿದ್ದು, 5,819 ಮಂದಿ ಗಾಯಗೊಂಡಿದ್ದಾರೆ. ಇದೇ ಅವಧಿಯಲ್ಲಿ ಕಟ್ಟಡಗಳ ಅವಶೇಷಗಳ ಅಡಿಯಿಂದ 849 ಮೃತದೇಹಗಳನ್ನು ಹೊರತೆಗೆಯಲಾಗಿದೆ ಎಂದು ಸಚಿವಾಲಯ ತಿಳಿಸಿದೆ.


