ಅರ್ಜೆಂಟೀನಾದ ನೌಕಾಪಡೆ ಮತ್ತು ವಾಯುಪಡೆಯನ್ನು ಇರಾನ್ ಸರ್ಕಾರವು ಭಯೋತ್ಪಾದಕ ಸಂಸ್ಥೆಗಳು ಎಂದು ಘೋಷಿಸಿದ್ದು, ಈ ವರ್ಷದ ಆರಂಭದಲ್ಲಿ ಟೆಹ್ರಾನ್‌ನ ‘ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್’ (ಐಆರ್ ಜಿಸಿ) ಅನ್ನು ಕಪ್ಪುಪಟ್ಟಿಗೆ ಸೇರಿಸುವ ಬ್ಯೂನಸ್ ಐರಿಸ್‌ನ (ಅರ್ಜೆಂಟೀನಾ ರಾಜಧಾನಿ) ನಿರ್ಧಾರದ ನಂತರ ಉಭಯ ದೇಶಗಳ ನಡುವಿನ ಉದ್ವಿಗ್ನತೆ ಹೆಚ್ಚಾಗಿದೆ.
ಮಾರ್ಚ್‌ನಲ್ಲಿ ಅರ್ಜೆಂಟೀನಾ ತೆಗೆದುಕೊಂಡ ಕ್ರಮಕ್ಕೆ ಪ್ರತಿಯಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸಮರ್ಥಿಸಿರುವ ಇರಾನ್ ವಿದೇಶಾಂಗ ಸಚಿವಾಲಯವು ಬುಧವಾರ ಈ ನಿರ್ಧಾರವನ್ನು ಪ್ರಕಟಿಸಿದೆ. ಅಂತರರಾಷ್ಟ್ರೀಯ ಕಾನೂನಿನ ಮೂಲಭೂತ ತತ್ವಗಳನ್ನು ಉಲ್ಲಂಘಿಸುವ ಶತ್ರುತ್ವದ ಹೆಜ್ಜೆಯನ್ನು ಬ್ಯೂನಸ್ ಐರಿಸ್ ಇಟ್ಟಿದೆ ಎಂದು ಸಚಿವಾಲಯ ಆರೋಪಿಸಿದೆ.
ಐಆರ್‌ಜಿಸಿ ಅನ್ನು ಭಯೋತ್ಪಾದಕ ಸಂಸ್ಥೆ ಎಂದು ಅಮೆರಿಕ ಘೋಷಿಸಿರುವುದಕ್ಕೆ ಬೆಂಬಲ ನೀಡುವ ಅಥವಾ ಪಾಲಿಸುವ ದೇಶಗಳ ವಿರುದ್ಧ ಪ್ರತ್ಯುತ್ತರ ಕ್ರಮಗಳನ್ನು ಕೈಗೊಳ್ಳಲು ಅವಕಾಶ ನೀಡುವ ದೇಶೀಯ ಕಾನೂನಿನ ಆಧಾರದ ಮೇಲೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಟೆಹ್ರಾನ್ ತಿಳಿಸಿದೆ. ಐಆರ್‌ಜಿಸಿ ಇರಾನ್‌ನ ಸಶಸ್ತ್ರ ಪಡೆಗಳ ಭಾಗವಾಗಿದೆ ಎಂಬುದನ್ನು ಒತ್ತಿ ಹೇಳಿರುವ ಇರಾನ್, ಈ ಕ್ರಮದಿಂದ ಉಂಟಾಗುವ ಯಾವುದೇ ಪರಿಣಾಮಗಳಿಗೆ ಅರ್ಜೆಂಟೀನಾ ಸರ್ಕಾರವೇ ಹೊಣೆ ಎಂದು ಹೇಳಿದೆ ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಇರಾನಿನ ಪಡೆ ಮತ್ತು ಹಿಜ್ಬುಲ್ಲಾವನ್ನು ಕಪ್ಪುಪಟ್ಟಿಗೆ ಸೇರಿಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತದ ಒತ್ತಡದ ನಂತರ ಅರ್ಜೆಂಟೀನಾ ಮಾರ್ಚ್ 31 ರಂದು ಐಆರ್‌ಜಿಸಿ ಅನ್ನು ಭಯೋತ್ಪಾದಕ ಸಂಸ್ಥೆ ಎಂದು ಘೋಷಿಸಿತ್ತು.
1994 ರಲ್ಲಿ ಬ್ಯೂನಸ್ ಐರಿಸ್‌ನಲ್ಲಿ ನಡೆದ ಎಎಂಐಎ ಯಹೂದಿ ಸಮುದಾಯ ಕೇಂದ್ರದ ಬಾಂಬ್ ಸ್ಫೋಟಕ್ಕೆ ಅರ್ಜೆಂಟೀನಾ ಹಿಜ್ಬುಲ್ಲಾವನ್ನು ಹೊಣೆಗಾರರನ್ನಾಗಿ ಮಾಡಿದ್ದು, ಈ ಹಿಜ್ಬುಲ್ಲಾಗೆ ಐಆರ್‌ಜಿಸಿ ಬೆಂಬಲ ನೀಡಿದೆ ಎಂಬ ಆರೋಪವನ್ನು ಉಲ್ಲೇಖಿಸಿ ಅರ್ಜೆಂಟೀನಾ ತನ್ನ ನಿರ್ಧಾರವನ್ನು ಸಮರ್ಥಿಸಿಕೊಂಡಿತ್ತು. ಈ ದಾಳಿಯಲ್ಲಿ 85 ಜನರು ಮೃತಪಟ್ಟು 300 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.
ಈ ತಿಂಗಳ ಆರಂಭದಲ್ಲಿ, ಇರಾನ್ ಬ್ರಿಟನ್‌ನ ರಾಯಲ್, ರಾಯಲ್ ಏರ್‌ಫೋರ್ಸ್ ಮತ್ತು ಸೀಕ್ರೆಟ್ ಇಂಟೆಲಿಜೆನ್ಸ್ ಸರ್ವಿಸ್ (ಎಂI6) ಅನ್ನು ಸಹ ಟೆಹ್ರಾನ್ ವಿರುದ್ಧದ ಲಂಡನ್‌ನ ಕ್ರಮಗಳಿಗಾಗಿ ಭಯೋತ್ಪಾದಕ ಮತ್ತು ಶತ್ರು ಘಟಕಗಳು ಎಂದು ಘೋಷಿಸಿತ್ತು.


