ಮತ್ತೊಂದು ನವೆಂಬರ್, ಅದರ ಜತೆ ಜತೆಗೇ ರಾಜ್ಯೋತ್ಸವದ ಸಂಭ್ರಮ. ಪ್ರತಿ ವರ್ಷದಂತೆ ಈ ಬಾರಿಯೂ ಸಹ ರಾಜ್ಯದಾದ್ಯಂತ ಕನ್ನಡದ ಶ್ರೇಷ್ಠತೆಯ ಬಗ್ಗೆ ,ಪ್ರಾಚೀನತೆಯ ಬಗ್ಗೆ ಕರ್ನಾಟಕದ ವೈಭವದ ಬಗ್ಗೆ ಸಾಂಸ್ಕೃತಿಕ ಕಾರ್ಯಕ್ರಮಗಳು, ಸಂಭ್ರಮ, ಕನ್ನಡ ಬಾವುಟಗಳ ಪ್ರದರ್ಶನ .ಈ ತಿಂಗಳು ಪೂರ್ತಿಯಾಗಿ ಕನ್ನಡವೇ ಉಸಿರು. ನಮ್ಮ ಭಾಷೆ, ಜನಜೀವನ, ಸಂಸ್ಕೃತಿ, ಇತಿಹಾಸ-ಇವೆಲ್ಲವುಗಳ ಮೇಲೆ ಬೆಳಕು ಚೆಲ್ಲುವ ಇಂಥ ಕಾರ್ಯಕ್ರಮಗಳು ಸ್ವಾಗತಾರ್ಹವೇ; ಅಲ್ಲದೆ, ಕನ್ನಡ ಮಾತನಾಡುವವರನ್ನೆಲ್ಲ ಒಂದು ಆಡಳಿತದಡಿಯಲ್ಲಿ ತರುವ ಕ್ರಮದ ಹಿಂದಿನ ಆಶಯಗಳು ಎಷ್ಟರ ಮಟ್ಟಿಗೆ ಸಾಕಾರಗೊಂಡಿವೆ ಎನ್ನುವುದನ್ನು ವಿಶ್ಲೇಷಿಸುವ ಅವಕಾಶವನ್ನು ಒದಗಿಸಿಕೊಡುವ ಸಂದರ್ಭವೂ ಇದೇ ಆಗಿದೆ.
1947ರಲ್ಲಿ ಬ್ರಿಟಿಷರು ಈ ದೇಶದ ಆಡಳಿತವನ್ನು ಭಾರತೀಯರಿಗೆ ಹಸ್ತಾಂತರಿಸುವವರೆಗೂ ಒಂದು ಭಾಷೆಯನ್ನಾಡುವ ಜನರು ಒಂದು ಆಡಳಿತದ ಘಟಕದ ಭಾಗವಾಗಿರುವುದು ಅಪರೂಪವಾಗಿತ್ತು. 1920ರಲ್ಲಿ ನಾಗಪುರದಲ್ಲಿ ನಡೆದ ಅಧಿವೇಶನದಲ್ಲಿ ಕಾಂಗ್ರೆಸ್ ಪಕ್ಷವು ಇಂಥ ಯೋಚನೆಯನ್ನು ಬೆಂಬಲಿಸುವ ಒಂದು ತೀರ್ಮಾನವನ್ನು ತೆಗೆದುಕೊಂಡಿತು. ಅಲ್ಲದೆ, ಬ್ರಿಟಿಷರ ಆಳ್ವಿಕೆ ಇದ್ದಾಗಲೇ, 1936ರಲ್ಲಿ ಒಡಿಯಾ ಮಾತನಾಡುವವರೆಲ್ಲರೂ ಒರಿಸ್ಸಾ ಪ್ರಾಂತ್ಯದ ಭಾಗವಾಗಿದ್ದು ಭಾಷೆಯಾಧರಿತ ರಾಜ್ಯಗಳ ಸ್ಥಾಪನೆಯ ಚರಿತ್ರೆಯಲ್ಲಿ ಒಂದು ಪ್ರಮುಖ ವಿದ್ಯಮಾನ.
ಭಾರತ ಬ್ರಿಟಿಷರಿಂದ ಪೂರ್ತಿ ವಿಮುಕ್ತಿ ಪಡೆದ 1947ರ ನಂತರ ಈ ದೇಶದಲ್ಲಿ ಭಾಷಾವಾರು ರಾಜ್ಯಗಳ ಸ್ಥಾಪನೆಯ ಕುರಿತಾದ ಸ್ಪಷ್ಟ ನಿಲುವುಗಳು ಹಾಗೂ ಒತ್ತಾಯಗಳು ವ್ಯಕ್ತವಾದವು. ಇಷ್ಟಾದರೂ ಈ ವಿಷಯವನ್ನು ಅಧ್ಯಯನ ಮಾಡಲು ನೇಮಕಗೊಂಡಿದ್ದ ಧರ್ ಆಯೋಗ ಮತ್ತು ಜೆವಿಪಿ (ಜವಹರಲಾಲ್ ನೆಹರು, ವಲ್ಲಭಭಾಯ್ ಪಟೇಲ್ ಹಾಗೂ ಪಟ್ಟಾಭಿ ಸೀತಾರಮಯ್ಯ) ಸಮಿತಿ ಈ ಪ್ರಸ್ತಾಪವನ್ನು ವಿರೋಧಿಸಿದವು ಇಂಥ ವ್ಯವಸ್ಥೆಯು ದೇಶದ ಐಕ್ಯತೆಗೆ ಧಕ್ಕೆ ತರಬಹುದೆಂಬುದು ಅವರ ಅನುಮಾನವಾಗಿತ್ತು. ಆದರೆ ಆಂಧ್ರದ ಪೊಟ್ಟ ಶ್ರೀರಾಮುಲು ಅವರು ತೆಲುಗರಿಗಾಗಿ ಪ್ರತ್ಯೇಕ ರಾಜ್ಯಕ್ಕಾಗಿ 56 ದಿನಗಳ ಉಪವಾಸ ಮುಷ್ಕರವನ್ನು ಆರಂಭಿಸಿ ಡಿಸೆಂಬರ್ 1952ರಲ್ಲಿ ನಿಧನರಾಗಿದ್ದು ಪ್ರತ್ಯೇಕ ರಾಜ್ಯಗಳ ಸ್ಥಾಪನೆಗಾಗಿ ನಡೆಯುತ್ತಿದ್ದ ಚಳುವಳಿ ಒಂದು ನಿರ್ಣಾಯಕ ಹಂತವನ್ನು ತಲುಪುವಂತಾಯಿತು. ಒಕ್ಕೂಟ ಸರ್ಕಾರ ಭಾಷಾವಾರು ರಾಜ್ಯಗಳ ಒತ್ತಾಯಕ್ಕೆ ಮಣಿಯಲೇ ಬೇಕಾಯಿತು. ಪರಿಣಾಮವಾಗಿ ಸ್ವಾತಂತ್ರ್ಯಾ ನಂತರ ದೇಶದ ಮೊಟ್ಟ ಮೊದಲ ಭಾಷೆಯಾಧಾರಿತ ರಾಜ್ಯವಾಗಿ ಆಂಧ್ರಪ್ರದೇಶ 1956 ನವೆಂಬರ್ 1 ರಂದು ಹೊರಹೊಮ್ಮಿತು.
1947ರ ನಂತರ ಹಿಂದಿನ ಮೈಸೂರು ಸಂಸ್ಥಾನವು ಹಲವು ಇತರ ಸಂಸ್ಥಾನಗಳಂತೆ ಭಾರತದಲ್ಲಿ ವಿಲೀನವಾಗಲು ಒಪ್ಪಿತು. ಹಲವು ಹಂತಗಳನ್ನು ದಾಟಿ 1956ರ ನವೆಂಬರ್ 1ರಂದು ಮೈಸೂರು ರಾಜ್ಯವಾಗಿ ದೇಶದಲ್ಲಿ ಕನ್ನಡ ಮಾತನಾಡುವ ಜನರೆಲ್ಲರೂ ಒಂದು ಗೂಡಿಗೆ ಸೇರುವಂತಾಯಿತು. ಮುಂದೆ 1973ರ ನವೆಂಬರ್ 1 ರಂದು, ದೇವರಾಜ ಅರಸರು ಮುಖ್ಯಮಂತ್ರಿಯಾಗಿದ್ದಾಗ, ಮೈಸೂರು ರಾಜ್ಯವು ಕನ್ನಡಿಗರ ಬಹಳ ದಿನಗಳ ಕನಸಾದ ಕರ್ನಾಟಕವೆಂಬ ಹೆಸರನ್ನು ಪಡೆಯಿತು. ಕನ್ನಡ ರಾಜ್ಯೋತ್ಸವ ಕನ್ನಡಿಗರ ನಾಡ ಹಬ್ಬವಾಯಿತು.
ಹೀಗೆ ಒಂದು ಭಾಷೆಯನ್ನಾಡುವವರು ಒಂದೇ ರಾಜ್ಯದ ನಾಗರಿಕರಾಗಿ ಬಾಳ್ವೆ ನಡೆಸುವುದು ಸಾಂಸ್ಕೃತಿಕ, ರಾಜಕೀಯ ಹಾಗೂ ಆಡಳಿತಾತ್ಮಕ ದೃಷ್ಟಿಯಿಂದ ಸರಿಯಾದ ವ್ಯವಸ್ಥೆ ಎನ್ನುವುದು ಒಪ್ಪತಕ್ಕ ಮಾತು. ಮುಖ್ಯವಾಗಿ ಸರ್ಕಾರ ಹಾಗೂ ಜನರ ನಡುವೆ ಆಡಳಿತಾತ್ಮಕ ಸಂಬಂಧಗಳು ರಾಜ್ಯದ ಭಾಷೆಯ ಮೂಲಕ ಗಟ್ಟಿಗೊಳ್ಳುತ್ತವೆ. ರಾಜ್ಯದ ಎಲ್ಲರೂ (ಕೆಲವು ಅಪವಾದಗಳು ಇದ್ದೇ ಇರುತ್ತವೆ.) ಆಡುವ ಭಾಷೆಯೇ ಸರ್ಕಾರದ ಭಾಷೆಯೂ ಆದಾಗ ಅವರ ನಡುವಿನ ಸಂವಹನ ಸುಲಭ. ಶ್ರೀಸಾಮಾನ್ಯರೂ ಸಹ ಆಡಳಿತವನ್ನು ಅರ್ಥ ಮಾಡಿಕೊಳ್ಳಬಹುದು. ತಾವೂ ಸಹ ಅದರಲ್ಲಿ ಭಾಗಿಗಳಾಗಲೂ ಸಾಧ್ಯ. ರಾಜ್ಯದ ಎಲ್ಲ ಮಕ್ಕಳಿಗೂ ಒಂದೇ ಭಾಷೆಯಲ್ಲಿ, ಅವರು ದಿನನಿತ್ಯ ಬಳಸುವ ಭಾಷೆಯಲ್ಲಿ, ಶಿಕ್ಷಣ ಸಿಗುವಂತಾದರೆ ಶೈಕ್ಷಣಿಕ ಅಭಿವೃದ್ಧಿಯೂ ಸಾಧ್ಯ. ನ್ಯಾಯಾಲಯಗಳಲ್ಲಿ ಸ್ಥಳೀಯ ಭಾಷೆಯಲ್ಲಿ ವಾದ ನಡೆದಾಗ ಮತ್ತು ಕಾನೂನಿನ ಸೂಕ್ಷ್ಮಗಳು ಅವರ ಭಾಷೆಯಲ್ಲಿಯೇ ವ್ಯಕ್ತಗೊಂಡಾಗ ನ್ಯಾಯದಾನ ವ್ಯವಸ್ಥೆಯನ್ನು ಅರ್ಥಮಾಡಿಕೊಳ್ಳುವುದು ಸುಲಭ. ಇನ್ನು, ಒಂದೇ ಭಾಷೆ ಮಾತನಾಡುವ ಜನರ ಸಾಂಸ್ಕೃತಿಕ ಸಾಮ್ಯತೆಯೂ ಸಹ ಅವರ ನಡುವೆ ಐಕ್ಯತೆಯನ್ನುಂಟು ಮಾಡುವ ಸುಗಮ ಹಾದಿ.
ಮೇಲಿನ ಅಂಶಗಳ ಹಿನ್ನಲೆಯಲ್ಲಿ ಕರ್ನಾಟಕದ ಪರಿಸ್ಥಿತಿಯನ್ನು ಅವಲೋಕಿಸಿದಾಗ ಈ ಎಲ್ಲ ಆಶಯಗಳೂ ಕೈಗೂಡಿವೇಯೇ ಎನ್ನುವ ಪ್ರಶ್ನೆ ಏಳುವುದು. ಆಡಳಿತದಲ್ಲಿ ಕನ್ನಡದ ಬಳಕೆ ತಕ್ಕ ಮಟ್ಟಿಗೆ, ಸಂಪೂರ್ಣವಾಗಿ ಅಲ್ಲದಿದ್ದರೂ, ಆಗುತ್ತಿದೆ ಎನ್ನಬಹುದು. ಆದರೆ ಅತ್ಯಂತ ಪ್ರಮುಖವಾದ ಶಿಕ್ಷಣ ಕ್ಷೇತ್ರದಲ್ಲಿ ಕನ್ನಡದ ಸ್ಥಾನ ಏನು ಎನ್ನುವುದರ ಸ್ಪಷ್ಟ ಚಿತ್ರಣ ಸಿಗುವುದಿಲ್ಲ. ಭಾವನಾತ್ಮಕವಾಗಿ ನಮ್ಮ ತಾಯಿ ನುಡಿ ಎನ್ನುವ ಪ್ರೀತಿಯಿಂದಾಗಿ ಕನ್ನಡವನ್ನು ಎಷ್ಟೇ ತಲೆಯ ಮೇಲೆ ಹೊತ್ತರೂ ದೈನಂದಿನ, ವ್ಯಾವಹಾರಿಕ ಜೀವನದಲ್ಲಿ ಅದರ ಪಾತ್ರವೇನೆಂಬುದಕ್ಕೆ ಸರ್ಕಾರದ ಬಳಿಯೇ ಸ್ಪಷ್ಟ ಉತ್ತರವಿಲ್ಲ. ಪ್ರಾಥಮಿಕ, ಪ್ರೌಢ ಹಂತಗಳಲ್ಲಿ ಕನ್ನಡವೇ ಪ್ರಥಮ ಭಾಷೆಯಾಗಿರಬೇಕು ಎನ್ನುವ ಕೂಗು ಇನ್ನು ಒಂದು ಕೂಗಿನ ಹಂತದಲ್ಲಿಯೆ. ಇನ್ನು ಕನ್ನಡ ಹಾಗೂ ಇಂಗ್ಲಿಷ್ ಭಾಷೆಗಳು ಭಾಷೆಗಳಾಗಿ ಬೊಧಿಸಲ್ಪಡುವುದಕ್ಕೂ ಮಾಧ್ಯಮವಾಗಿ ಬಳಕೆಯಾಗುವುದಕ್ಕೂ ಇರುವ ವ್ಯತ್ಯಾಸವೂ ಇಲ್ಲಿನ ಬಹುತೇಕರಿಗೆ ಅರ್ಥವಾಗಿಲ್ಲ. ಕನ್ನಡ ಮಾಧ್ಯಮವಾಗಿ ಮತ್ತು ಇಂಗ್ಲಿಷ್ ಒಂದು ಭಾಷೆಯಾಗಿ ಉತ್ತಮ ರೀತಿಯಲ್ಲಿ ವಿದ್ಯಾರ್ಥಿಗಳಿಗೆ ಲಭ್ಯವಾಗುವುದು ಎಲ್ಲ ದೃಷ್ಟಿಯಿಂದಲೂ ಸೂಕ್ತ. ಆದರೆ ಮಾಧ್ಯವಾಗಿ ಇಂಗ್ಲಿಷ್ ಬಳಕೆಯಾದಾಗ ಮಾತ್ರ ಮಕ್ಕಳಿಗೆ ಆ ಭಾಷೆಯ ಮೇಲೆ ಹಿಡಿತ ಸಿಗುವುದೆಂಬ ಕಲ್ಪನೆ ಬೇರೂರಿ ಬಿಟ್ಟಿದೆ; ಹಾಗಾಗಿ ಅನ್ನದ ಭಾಷೆಯಾಗಬೇಕಾದ ಕನ್ನಡ ಆ ಸ್ಥಾನದಿಂದ ವಂಚಿತವಾಗಿದೆ. ಇದಕ್ಕೆ ಸರ್ಕಾರದ ಅಸ್ಪಷ್ಟ ಭಾಷಾ ನೀತಿಯೇ ಕಾರಣ. ಸಹಜವಾಗಿಯೇ ಪೋಷಕರು ತಮ್ಮ ಮಕ್ಕಳಿಗಾಗಿ ಇಂಗ್ಲಿಷ್ ಮಾಧ್ಯಮವನ್ನು ಬಯಸಿದಾಗ ಅದು ಅವರ ಇಂಗ್ಲಿಷ್ ವ್ಯಾಮೋಹವನ್ನು ತೋರಿಸುತ್ತದೆಂದು ಜರಿಯುವುದುಂಟು. ಆದರೆ ವಾಸ್ತವವೇ ಬೇರೆ. ಹಿಂದಿನಿಂದಲೂ ಕನ್ನಡವನ್ನು ಸರಿಯಾದ ರೀತಿಯಲ್ಲಿ ಅಭಿವೃದ್ಧಿ ಪಡಿಸಿ, ಅದೇ ಸಮಯದಲ್ಲಿ ಇಂಗ್ಲಿಷಿನ ಉತ್ತಮ ಬೋಧನೆಗೂ ಅನುವು ಮಾಡಿಕೊಟ್ಟಿದ್ದರೆ ಈ ಗೊಂದಲಗಳನ್ನು ತಪ್ಪಿಸಬಹುದಿತ್ತು. ಅದು ನಡೆಯಲಿಲ್ಲವಾದ್ದರಿಂದ ಕನ್ನಡ ಮಾಧ್ಯಮ ಮತ್ತು ಇಂಗ್ಲಿಷ್ ಮಾಧ್ಯಮಗಳು ಇಂದು ಸಾಮಾಜಿಕ ಅಂತಸ್ತಿನ ದ್ಯೋತಕಗಳಾಗಿ ಬೆಳೆದು ಬಿಟ್ಟಿವೆ.
ಇದೇ ಸಂದರ್ಭದಲ್ಲಿ ಪ್ರಸ್ತಾಪ ಮಾಡಬೇಕಾದ ಮತ್ತೊಂದು ವಿಷಯವೆಂದರೆ ಸರ್ಕಾರ ತನ್ನದೇ ಆದ ಶಾಲೆಗಳನ್ನು ನೋಡಿಕೊಳ್ಳುವ ರೀತಿ. ಬಹುತೇಕ ಬಡ ಕುಟುಂಬಗಳ ಮಕ್ಕಳೇ ದಾಖಲಾಗುವ ಸರ್ಕಾರಿ ಶಾಲೆಗಳ ದಯನೀಯ ಸ್ಥಿತಿಯ ಬಗ್ಗೆ ಪುಂಖಾನು ಪುಂಖವಾಗಿ ವರದಿಗಳು ಪ್ರಕಟವಾಗುತ್ತಲೇ ಇರುತ್ತವೆ. ಯಾರೋ ದುಡ್ಡು ಮಾಡಲು ಕಟ್ಟಿರುವ, ಅಪಾಯಕಾರಿ ಸ್ಥಿತಿಯಲ್ಲಿರುವ ಕಟ್ಟಡಗಳು, ಎಲ್ಲ ವಿಷಯಗಳಿಗೂ ಅಧ್ಯಾಪಕರಿಲ್ಲದಿರುವುದು, ಅತ್ಯಂತ ಅವಮಾನಕರವಾದ ಮತ್ತು ಅಸಮರ್ಪಕವಾದ ‘ಅತಿಥಿ’ ಅಧ್ಯಾಪಕರ ನೇಮಕಾತಿ, ಕಛೇರಿ ಕೆಲಸಕ್ಕೆ ಬೇಕಾದ ಸಿಬ್ಬಂದಿಯಿಲ್ಲದಿರುವುದು-ಮುಂತಾದ ಸಮಸ್ಯೆಗಳಿಂದಾಗಿ ವಿದ್ಯಾರ್ಥಿಗಳ ದಾಖಲಾತಿ ಕಡಿಮೆಯಾಗುತ್ತಿದೆ. ಇಂಥ ಸ್ಥಿತಿಯನ್ನು ಹುಟ್ಟುಹಾಕಿ, ನಂತರ ಶಾಲೆಗಳಲ್ಲಿ ಮಕ್ಕಳಿಲ್ಲ ಎನ್ನುವ ನೆಪ ಹೇಳಿಕೊಂಡು ವಿಲೀನದ ಹೆಸರಲ್ಲಿ ಹಲವು ಶಾಲೆಗಳನ್ನು ಮುಚ್ಚುವ ಪ್ರಯತ್ನ ನಡೆಯುತ್ತಿದೆ. ಈ ಸರ್ಕಾರದ ತೀರ ಇತ್ತೀಚಿನ ಪ್ರಕಟಣೆಯಂತೂ ತೀರ ಆತಂಕಕಾರಿ. ಅದೆಷ್ಟೋ ಶಾಲೆಗಳನ್ನು ಖಾಸಗಿಯವರಿಗೆ ವಹಿಸಿಕೊಡುತ್ತಾರಂತೆ. ಅಗತ್ಯ ಸವಲತ್ತುಗಳನ್ನು ಒದಗಿಸಿ, ಖಾಯಂ ಅಧ್ಯಾಪಕರನ್ನು ನೇಮಕ ಮಾಡಿ ತನ್ನ ಶಾಲೆಗಳನ್ನು ಅಭಿವೃದ್ಧಿ ಪಡಿಸಬಹುದು ಎಂದು ಯೋಚಿಸುವ ಬದಲಿಗೆ ಅವುಗಳನ್ನು ಖಾಸಗಿಯವರ ತೆಕ್ಕೆಗೆ ಹಾಕುವಂಥ ತೀರ ಅವಮಾನಕರ ಹೆಜ್ಜೆ ನೀತಿ ನಿರೂಪಕರಿಗೆ ಹೊಳೆದಿದೆ. ಈ ನಿರ್ಧಾರ ಜಾರಿಯಾದದ್ದೇ ಆದರೆ ಹಂತ, ಹಂತವಾಗಿ ಸರ್ಕಾರಿ ಶಾಲೆಗಳು, ಅವುಗಳ ಆಸ್ತಿಗಳ ಸಮೇತ ಖಾಸಗಿ ದಂಧೆಕೊರರ ಪಾಲಾಗುವುದು ಖಚಿತ. ಮತ್ತು ಉಳ್ಳವರ ಮಕ್ಕಳಿಗೆ ಮಾತ್ರ ಶಿಕ್ಷಣ ಮತ್ತು ಇಲ್ಲದವರಿಗೆ ವಂಚನೆ ಎನ್ನುವುದು ಸಾಮಾನ್ಯ ಸ್ಥಿತಿಯಾಗುತ್ತದೆ. ಸರ್ಕಾರದಲ್ಲಿಯೇ ಖಾಸಗಿ ಲಾಬಿ ಇದ್ದಾಗ, ಹೊರಗಿನ ಲಾಬಿಗೆ ತನ್ನ ಬೇಳೆ ಬೇಯಿಸಿಕೊಳ್ಳಲು ಹೆಚ್ಚು ಕಷ್ಟ ಪಡಬೇಕಾಗಿಲ್ಲ. ಖಾಸಗಿಯವರು ನಡೆಸುವ ಯಾವುದೇ ವ್ಯವಹಾರದಲ್ಲಿ ಅವರಿಗೆ ಮುಖ್ಯವಾದದ್ದು ಲಾಭ. ಇಂದು ಮಾರುಕಟ್ಟೆಯಲ್ಲಿ ಬೇಡಿಕೆ ಇರುವುದು ಇಂಗ್ಲಿಷ್ಗೆ. ತುಂಬ ಸಹಜವಾಗಿಯೇ, ಸರ್ಕಾರಿ ಶಾಲೆಗಳನ್ನು ತಮ್ಮ ಹಿಡಿತಕ್ಕೆ ತೆಗೆದುಕೊಳ್ಳುವ ಖಾಸಗಿ ಆಡಳಿತದವರು ಆ ಶಾಲೆಗಳಲ್ಲಿ ಕನ್ನಡಕ್ಕೆ ಪ್ರಾಮುಖ್ಯತೆಯನ್ನು ನೀಡುತ್ತಾರೆ ಎನ್ನುವ ಯಾವ ಖಚಿತತೆಯು ಇಲ್ಲ. ಹಾಗಾದಾಗ ನಾವು ಎಷ್ಟೇ ಕನ್ನಡ ರಾಜ್ಯೋತ್ಸವಗಳನ್ನು ನಡೆಸಿ ಸಂಭ್ರಮಿಸಿದರೂ ಕನ್ನಡ ಕೇವಲ ಎರಡನೆಯ ದರ್ಜೆಯ ಭಾಷೆಯ ಮಟ್ಟಕ್ಕೆ ನಿಲ್ಲುತ್ತದೆ. ಅದರಿಂದಾಗಿ ಮೊದಲ ಪೆಟ್ಟು ಬೀಳುವುದು ರಾಜ್ಯದ ಬಡ, ತಳಸಮುದಾಯಗಳ ಮಕ್ಕಳಿಗೆ. ಜನರ ಪ್ರಮುಖ ಅಗತ್ಯವಾದ ಶಿಕ್ಷಣಕ್ಕೇ ಸಂಚಕಾರ ಒದಗಿದಾಗ ಜನ ಜೀವನ ಹಸನಾಗುವುದು ಕನಸಿನ ಮಾತು. ಸರ್ಕಾರ ತನ್ನ ಜನವಿರೋಧಿ, ಶಿಕ್ಷಣ ವಿರೋಧಿ ತೀರ್ಮಾನವನ್ನು ಕೈಬಿಡಬೇಕೆಂದು ಕನ್ನಡವನ್ನು ಮತ್ತು ಕನ್ನಡ ಜನರನ್ನು ಪ್ರೀತಿಸುವ ಎಲ್ಲರ ಒಕ್ಕರಲ ಒತ್ತಾಯವಾಗಬೇಕು.
ಇಂಥ ಸಮಸ್ಯೆಗಳಿಗೆ ಸೂಕ್ತ ಪರಿಹಾರವನ್ನು ಕಂಡುಕೊಳ್ಳದೆ, ಕೇವಲ ಕನ್ನಡ, ಕನ್ನಡಿಗ ಎಂದು ಘೋಷಣೆ ಕೂಗಿದರೆ, ಅದರ ಗತವೈಭವವನ್ನೇ ಹೊಗಳುತ್ತಾ ಕಾಲ ಕಳೆಯುತ್ತಿದ್ದರೆ ಕನ್ನಡ ತನ್ನ ಪ್ರಾಮುಖ್ಯತೆಯನ್ನು ಕಳೆದುಕೊಂಡು ಅಲಂಕಾರ ಪ್ರಾಯವಾದ ಒಂದು ಆಭರಣವಾಗಿ ಮಾತ್ರ ಉಳಿಯುವ ಸಾಧ್ಯತೆಯೇ ಹೆಚ್ಚು.
ಇದನ್ನೂ ಓದಿ: ಕನ್ನಡಿಗರಿಗೆ ಉದ್ಯೋಗ ನಿರಾಕರಿಸಿದರೆ ಖಾಸಗಿ ಸಂಸ್ಥೆಗಳ ವಿರುದ್ಧ ಕ್ರಮ: ಕರ್ನಾಟಕ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಎಚ್ಚರಿಕೆ


