HomeಅಂಕಣಗಳುSIRSIR ವಿರುದ್ಧದ ಹೋರಾಟದೇಶಕ್ಕೆ ಮಾದರಿಯಾದ ಕರ್ನಾಟಕ

SIR ವಿರುದ್ಧದ ಹೋರಾಟದೇಶಕ್ಕೆ ಮಾದರಿಯಾದ ಕರ್ನಾಟಕ

- Advertisement -
- Advertisement -

ಸಂವಿಧಾನ, ಪ್ರಜಾಪ್ರಭುತ್ವ ಉಳಿಸುವ ನಿರ್ಣಾಯಕ ಹೋರಾಟಕ್ಕೆ ಪ್ರಸ್ತುತ ದೇಶದ ಜನರು ಧುಮುಕಿದ್ದಾರೆ. ರಾಷ್ಟ್ರ ರಾಜಧಾನಿ ದೆಹಲಿಯಿಂದ ಹಿಡಿದು, ನಮ್ಮ ಕರ್ನಾಟಕದ ಕೊಡಗಿನ ಆದಿವಾಸಿ ಹಾಡಿಗಳವರೆಗೆ ಹೋರಾಟದ ಕಿಚ್ಚು ಹಬ್ಬಿದೆ. ಕಳೆದ 10-12 ವರ್ಷಗಳಲ್ಲಿ ಮೋದಿ-ಶಾ ನೇತೃತ್ವದ ಆಡಳಿತ ದೇಶದಲ್ಲಿ ಮಾಡಿಟ್ಟಿರುವ ಅವಾಂತರಗಳ ವಿರುದ್ಧದ ಜನರ ಆಕ್ರೋಶ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ವಿರೋಧಿ ಹೋರಾಟದ ಮೂಲಕ ಜ್ವಾಲೆಯಾಗಿ ಹೊರಹೊಮ್ಮಿದೆ.

ದೇಶದ ಆಡಳಿತದ ಚುಕ್ಕಾಣಿ ಹಿಡಿದ ದಿನದಿಂದ ಸಂವಿಧಾನದ ಆಶಯಗಳ ವಿರುದ್ಧ ಕೆಲಸ ಮಾಡುತ್ತಾ, ಪ್ರಜಾಪ್ರಭುತ್ವವೆಂಬ ಹೆಮ್ಮರದ ಬುಡಕ್ಕೆ ಕೊಡಲಿಯೇಟು ಕೊಡುವುದನ್ನು ಮೋದಿ-ಶಾ ಆಡಳಿತ ಮಾಡಿಕೊಂಡು ಬಂದಿದೆ. ಸಿಎಎ-ಎನ್‌ಆರ್‌ಸಿ ಕಾನೂನುಗಳು, ಕರಾಳ ಕೃಷಿ ಕಾಯ್ದೆಗಳು, ನೀಟ್ ಹಗರಣಗಳು ಇತ್ಯಾದಿ ಇದಕ್ಕೆ ಉದಾಹರಣೆಗಳಾಗಿದೆ.

ಜನವಿರೋಧಿ ನೀತಿಗಳನ್ನು ಸರ್ಕಾರ ರೂಪಿಸಿದಾಗಲೆಲ್ಲಾ ಕಾಲಕಾಲಕ್ಕೆ ಜನರು ಬೀದಿಗಿಳಿದು ಹೋರಾಡುವ ಮೂಲಕ ಅದನ್ನು ಸಮರ್ಥವಾಗಿ ಎದುರಿಸಿದ್ದಾರೆ. ಆದರೆ, ಎಸ್‌ಐಆರ್ ಮೂಲಕ ಆಡಳಿತ ಮಾಡಿದ ದುಷ್ಕೃತ್ಯ ಬರೀ ಜನ ವಿರೋಧಿ ಅಲ್ಲ, ಅದು ನಮ್ಮ ಸಂವಿಧಾನದ ಆಶಯಗಳನ್ನೇ ಬುಡಮೇಲು ಮಾಡುವಂತದ್ದು. ಯಾವಾಗ ನಮ್ಮ ದೇಶದ ಸಂವಿಧಾನದ ಅಶಯಗಳು ಸತ್ತು ಹೋಗುತ್ತದೋ.. ಅದರೊಂದಿಗೆ ಪ್ರಜಾಪ್ರಭುತ್ವವೂ ಸತ್ತು ಹೋಗುತ್ತದೆ. ಇದರಲ್ಲಿ ಯಾವುದೇ ಅನುಮಾನಗಳು ಇಲ್ಲ. ಹಾಗಾಗಿ, ಎಸ್‌ಐಆರ್ ವಿರುದ್ಧದ ಹೋರಾಟ ಈವರೆಗಿನ ಇತರ ಹೋರಾಟಗಳಿಗಿಂತ ಭಿನ್ನವಾಗಿದೆ ಮತ್ತು ನಿರ್ಣಾಯಕವಾಗಿದೆ.

ಎಸ್‌ಐಆರ್ ವಿರುದ್ಧದ ಹೋರಾಟ ಒಂದು ವರ್ಗಕ್ಕೆ ಸೀಮಿತವಲ್ಲ. ಇದು ದೇಶದ ಎಲ್ಲಾ ನಾಗರಿಕರ ಅಳಿವುಉಳಿವಿನ ಹೋರಾಟ. ಸರ್ವಾಧಿಕಾರಿ ಮನಸ್ಥಿತಿಯ ಆಡಳಿತ ಮತ್ತು ದೇಶದ ಪ್ರಜೆಗಳ ನಡುವಿನ ಸಂಘರ್ಷ. ಈ ಹೋರಾಟದಲ್ಲಿ ನಾವೆಲ್ಲ ಗೆಲ್ಲಲೇಬೇಕಿದೆ. ಇಲ್ಲದಿದ್ದರೆ ನಮಗೆ ಉಳಿಗಾಲವಿಲ್ಲ. ಹಾಗಾಗಿ, ದೇಶದ ಭವಿಷ್ಯವಾದ ಯುವಜನರು ಈ ಹೋರಾಟದ ಮುಂಚೂಣಿಯಲ್ಲಿ ನಿಂತಿದ್ದಾರೆ.

ಎಸ್‌ಐಆರ್ ಅಥವಾ ಚುನಾವಣಾ ಅವ್ಯವಸ್ಥೆಯ ವಿರುದ್ಧದ ಹೋರಾಟದಲ್ಲಿ ಕರ್ನಾಟಕ ದೇಶಕ್ಕೆ ಮಾದರಿ ಎನ್ನಬಹುದು. ಮೊದಲ ಹಂತದಲ್ಲಿ ಬಿಹಾರದಲ್ಲಿ ಎಸ್‌ಐಆರ್ ನಡೆದು, ಎರಡೇ ಹಂತದಲ್ಲಿ ಅದು ಪಶ್ಚಿಮ ಬಂಗಾಳ ಮತ್ತು ಇತರ ರಾಜ್ಯಗಳಿಗೆ ಬಂದಾಗ ಮಾಡಿದ ಅವಾಂತರಗಳಿಂದ ಎಚ್ಚೆತ್ತುಕೊಂಡ ಕರ್ನಾಟಕ, ಆಗಲೇ ಹೋರಾಟ ಕಣಕ್ಕೆ ಧುಮುಕಿತ್ತು.

ಕರ್ನಾಟಕದ ಜನಪರ ಸಂಘಟನೆಗಳು ಮತ್ತು ಜಾತ್ಯತೀತ ಪಕ್ಷಗಳ ಹೋರಾಟಗಾರರು ಎಸ್‌ಐಆರ್ ವಿರೋಧಿ ಒಕ್ಕೂಟವೊಂದನ್ನು ರಚಿಸಿಕೊಂಡು ಎಸ್‌ಐಆರ್ ಪ್ರಕ್ರಿಯೆ ಆರಂಭಗೊಳ್ಳುವ ಮುನ್ನವೇ ತಮ್ಮ ಹೋರಾಟ ಪ್ರಾರಂಭಿಸಿದ್ದರು. ಕರ್ನಾಟಕದ ಎಸ್‌ಐಆರ್ ಪ್ರಕ್ರಿಯೆ ಜೂನ್ 31ರಂದು ಅಧಿಕೃತವಾಗಿ ಪ್ರಾರಂಭಗೊಂಡರೆ, ಅದಕ್ಕೂ ಮುನ್ನ ಜೂನ್ 12ರಿಂದ 18ರವರೆಗೆ ರಾಜ್ಯದ 31 ಜಿಲ್ಲೆಗಳಲ್ಲೂ ಎಸ್‌ಐಆರ್ ವಿರೋಧಿ ಒಕ್ಕೂಟದ ನೇತೃತ್ವದಲ್ಲಿ ಜಾಗೃತಿ ಜಾಥಾ ನಡೆಯಿತು. ಆ ಬಳಿಕ ಜೂನ್ 20ರಂದು ಬೆಂಗಳೂರಿನ ಫ್ರೀಡಂಪಾರ್ಕ್‌ನಲ್ಲಿ ದೊಡ್ಡ ಮಟ್ಟದ ಪ್ರತಿಭಟನಾ ಸಮಾವೇಶ ಆಯೋಜಿಸಲಾಗಿತ್ತು.

ನಂತರ ಬಿಎಲ್‌ಒಗಳು ಎನ್ಯುಮರೇಷನ್ ಫಾರಂ ವಿತರಿಸಿ ಮನೆ ಮನೆ ಗಣತಿ ಪ್ರಾರಂಭಿಸಿದಾಗ, ಎಸ್‌ಐಆರ್ ವಿರೋಧಿಸುವುದರ ಜೊತೆಜೊತೆಗೆ, ಹಳೆಯ ಪಟ್ಟಿಯಲ್ಲಿ ತಮ್ಮ ಹೆಸರು ಹುಡುಕಲು, ಫಾರಂ ತುಂಬಲು, ದಾಖಲೆಗಳನ್ನು ಹೊಂದಿಸಲು ಹೋರಾಟಗಾರರು ಮತದಾರರಿಗೆ ನೆರವಾದರು.

ಗಣತಿ ನಮೂನೆ ವಿತರಣೆ ಮತ್ತು ಸಂಗ್ರಹ ಮುಗಿದು, ತೆಗೆದುಹಾಕಲ್ಪಟ್ಟ (ಡಿಲೀಟ್ ಮಾಡಲಾದ) ಮತದಾರರ ಮಾಹಿತಿ ಬಿಡುಗಡೆಯಾದಾಗ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಮತ್ತೊಂದು ದೊಡ್ಡಮಟ್ಟದ ಪ್ರತಿಭಟನಾ ಸಮಾವೇಶ ಆಯೋಜಿಸಿದ ಹೋರಾಟಗಾರರು, ಪಟ್ಟಿಯಿಂದ ತೆಗೆದು ಹಾಕಲ್ಪಟ್ಟ ಅರ್ಹ ಮತದಾರರ ಹಕ್ಕನ್ನು ಉಳಿಸಲು ಬೀದಿಗಿಳಿದರು. ನಟರಾದ ಪ್ರಕಾಶ್ ರಾಜ್, ಕಿಶೋರ್ ಕುಮಾರ್‌ನಂತವರು ಇದಕ್ಕೆ ಕೈಜೋಡಿಸಿದರು.

ನಟ ಪ್ರಕಾಶ್ ರಾಜ್ ಅಂತೂ ಸಕ್ರಿಯವಾಗಿ ಹೋರಾಟದ ಕಣಕ್ಕೆ ಧುಮುಕಿದರು. ಎಸ್‌ಐಆರ್ ಪರಿಶೋಧನೆ ಮತ್ತು ಪ್ರತಿರೋಧದ ಹೆಸರಿನಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ಭೇಟಿ ಕೊಟ್ಟು ಸಂತ್ರಸ್ತರ ಮನವಿ ಆಲಿಸಿದರು. ಅವರಿಗೆ ಧೈರ್ಯ ತುಂಬಿದರು. ಈ ವೇಳೆ ಪೊಲೀಸರು ಪ್ರಕಾಶ್ ರಾಜ್ ಸೇರಿದಂತೆ ಪ್ರತಿಭಟನಾಕಾರರನ್ನು ವಶಕ್ಕೆ ಪಡೆದಿರುವುದನ್ನು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳಬಹುದು.

ಇಷ್ಟಕ್ಕೆ ಸುಮ್ಮನಾಗದ ಹೋರಾಟಗಾರರು ದೇಶದ ಇತರ ರಾಜ್ಯಗಳಿಗಿಂತ ಭಿನ್ನವಾಗಿ ಎಸ್‌ಐಆರ್ ಸಂತ್ರಸ್ತರ ಮಾಹಿತಿ ಸಂಗ್ರಹಿಸುವ ಕಾರ್ಯಕ್ಕಿಳಿದರು. ಇದಕ್ಕಾಗಿ ವಿಶೇಷ ಆಪ್ ಸಿದ್ಧಪಡಿಸಿ ಸುಮಾರು 10 ದಿನಗಳ ಕಾಲ ರಾಜ್ಯದ ಕನಿಷ್ಟ 70 ಬೂತ್‌ಗಳಲ್ಲಿ ಸಮೀಕ್ಷೆ ನಡೆಸಿತು. ಈ ಮೂಲಕ ನೂರಾರು ಸಂತ್ರಸ್ತರ ನಿಖರ ಮಾಹಿತಿಯನ್ನು ಸಂಗ್ರಹ ಮಾಡಲಾಗಿದೆ.

ಇವಿಷ್ಟು ಹೋರಾಟದ ಪ್ರಮುಖ ಮಜಲುಗಳಾದರೆ, ನೂರಾರು ಸಭೆಗಳು, ಚರ್ಚಾಗೋಷ್ಠಿಗಳು, ಪತ್ರಿಕಾ ಪ್ರಕಟಣೆ, ಚುನಾವಣಾ ಆಯೋಗಕ್ಕೆ ಪತ್ರ ಬರೆಯುವಿಕೆ, ಮುಖ್ಯಮಂತ್ರಿಯ ಭೇಟಿ, ಮಾಧ್ಯಮಗೋಷ್ಠಿ ಸೇರಿದಂತೆ ಹತ್ತು ಹಲವು ಕಾರ್ಯಗಳನ್ನು ಹೋರಾಟಗಾರರು ಮಾಡಿದ್ದಾರೆ. ಈ ಮೂಲಕ. ಕರ್ನಾಟಕದ ಎಸ್‌ಐಆರ್ ಹೋರಾಟ ದೇಶಕ್ಕೆ ಮಾದರಿಯಾಗಿದೆ.

ಹೋರಾಟಕ್ಕೆ ಶಕ್ತಿ ತುಂಬಿದ ಯುವ ಮುಖಗಳು

ಕರ್ನಾಟಕದ ಎಸ್‌ಐಆರ್ ಹೋರಾಟದಲ್ಲಿ ಅಕ್ಟೋಬರ್ 8ರಂದು ಮಹತ್ವದ ದಿನವಾಗಿತ್ತು. ಅಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನಡೆದ ಬೃಹತ್ ಪ್ರತಿಭಟನಾ ಸಮಾವೇಶದ ಮತ್ತು ಎಸ್‌ಐಆರ್ ಸಂತ್ರಸ್ತರ ಜನತಾ ನ್ಯಾಯಾಲಯದಲ್ಲಿ ಖ್ಯಾತ ಯೂಟ್ಯೂಬರ್ ಧ್ರುವ ರಾಠಿ, ಕಾಕ್ರೋಚ್ ಜನತಾ ಪಕ್ಷದ (ಸಿಜೆಪಿ) ನಾಯಕರಾದ ಅಭಿಜೀತ್ ದೀಪ್ಕೆ, ಸೌರವ್ ದಾಸ್, ಅಶುತೋಷ್ ರಾಂಕಾ, ರತ್ನಾ ಸಿಂಗ್, ಆಫ್ರೀನ್ ನವಾಝ್, ಎಸ್‌ಎಫ್‌ಐನ ಐಶೆ ಘೋಷ್, ನಟ ಪ್ರಕಾಶ್ ರಾಜ್, ನಾಡಿನ ಎಲ್ಲಾ ಜಾತ್ಯತೀತ ಪಕ್ಷ ಮತ್ತು ಸಂಘಟನೆಗಳ ನಾಯಕರು ಹಾಗೂ ಅಪಾರ ಸಂಖ್ಯೆಯಲ್ಲಿ ಜೆನ್ ಝೀ ಯುವಜನರು ಪಾಲ್ಗೊಂಡಿದ್ದರು.

ಯೂಟ್ಯೂಬರ್ ಧ್ರುವ ರಾಠಿ ಅವರು ಪಾಲ್ಗೊಂಡ ಭಾರತದ ಮೊದಲ ಬಹಿರಂಗ ಕಾರ್ಯಕ್ರಮ ಇದಾಗಿತ್ತು. ಕಾರ್ಯಕ್ರಮದಲ್ಲಿ ಮಾತನಾಡಿದ ರಾಠಿ, ದೇಶದಲ್ಲಿ ವೋಟ್ ಚೋರಿ (ಮತಗಳ್ಳತನ) ಆಗುತ್ತಿದೆ ಎನ್ನುವುದಕ್ಕೆ ನಾನು ಮೂರು ಸಾಕ್ಷಿಗಳನ್ನು ನೀಡುತ್ತೇನೆ. ಇದಕ್ಕೆ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಉತ್ತರಿಸಬೇಕು ಎಂದಿದ್ದರು.

“ಪಶ್ಚಿಮ ಬಂಗಾಳದಲ್ಲಿ ಎಸ್‌ಐಆರ್ ವೇಳೆ ಸುಮಾರು 70 ಲಕ್ಷ ಮತದಾರರ ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕಲಾಗಿತ್ತು. ಅವರು ಮೊದಲು ಮತದಾರರ ಪಟ್ಟಿಯಲ್ಲಿದ್ದರೂ ಚುನಾವಣಾ ಸಂದರ್ಭದಲ್ಲಿ ಇರಲಿಲ್ಲ, ಚುನಾವಣೆಯ ಬಳಿಕ ಮತ್ತೆ ಪಟ್ಟಿಯಲ್ಲಿ ಕಾಣಿಸಿಕೊಂಡರು. ಬಿಹಾರದಲ್ಲಿ 75 ಲಕ್ಷ ಜನರ ಹೆಸರುಗಳನ್ನು ತೆಗೆದುಹಾಕಲಾಗಿತ್ತು. ಈ ಕುರಿತು ಗ್ಯಾನೇಶ್‌ಕುಮಾರ್ ಅವರು ಸುಪ್ರೀಂಕೋರ್ಟ್ ಕೇಳುವವರೆಗೆ ವಿವರ ನೀಡಿರಲಿಲ್ಲ. ಅಲ್ಲದೆ, ಸುಮಾರು 14 ಲಕ್ಷ ಜನರ ಹೆಸರುಗಳನ್ನು ಸೇರಿಸಲಾಗಿದ್ದು, ಯಾರ ಹೆಸರುಗಳನ್ನು ತೆಗೆದುಹಾಕಲಾಗಿದೆ ಮತ್ತು ಯಾರನ್ನು ಸೇರಿಸಲಾಗಿದೆ ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿ ನೀಡಲಾಗಿಲ್ಲ” ಎಂದು ರಾಠಿ ಹೇಳಿದ್ದರು.

“ದೇಶ ಉಳಿಯುವುದು ವೋಟ್ ಉಳಿದರೆ ಮಾತ್ರ, ಮತ ಹೋದರೆ ಎಲ್ಲವನ್ನೂ ಮರೆತಂತೆ ಆಗುತ್ತದೆ. ನಮ್ಮ ಹೋರಾಟ ಗ್ಯಾನೇಶ್ ಕುಮಾರ್ ಅವರ ರಾಜೀನಾಮೆಗಷ್ಟೇ ಅಲ್ಲ, ಎಸ್‌ಐಆರ್ ಪ್ರಕ್ರಿಯೆಯನ್ನೇ ರದ್ದುಪಡಿಸುವವರೆಗೆ ಮುಂದುವರಿಯಲಿದೆ” ಎಂದು ಸಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಅಭಿಜಿತ್ ದೀಪ್ಕೆ ಮಾತನಾಡಿದ್ದರು.

“ಬಿಜೆಪಿ ಹೇಳುವ ‘ಒನ್ ನೇಷನ್, ಒನ್ ಎಲೆಕ್ಷನ್’ ಘೋಷಣೆಯ ಹಿಂದೆ ‘ಒನ್ ನೇಷನ್, ಒನ್ ಪಾರ್ಟಿ’ ಉದ್ದೇಶವಿದೆ ಎಂದು ಆರೋಪಿಸಿದ್ದ ದೀಪ್ಕೆ,. “ಅದು ಹಿಟ್ಲರ್‌ನ ಘೋಷಣೆಯಾಗಿತ್ತು. ಹಿಟ್ಲರ್‌ಗೆ ಏನಾಯಿತು ಎಂಬುದನ್ನು ಒಮ್ಮೆ ನೋಡಿಕೊಳ್ಳಿ” ಎಂದು ಮೋದಿ-ಶಾ ಆಡಳಿತಕ್ಕೆ ಎಚ್ಚರಿಕೆ ನೀಡಿದ್ದರು.

“ಈ ದೇಶವು ಸಂವಿಧಾನದಲ್ಲಿ ಬರೆದಿರುವಂತೆಯೇ ನಡೆಯುತ್ತದೆ. ಆದರೆ, ಆಳುವವರಿಗೆ ಅದು ಬೇಕಿಲ್ಲ. ನಾವೆಲ್ಲರೂ ಜೊತೆಗೂಡಿ ಹೋರಾಡಿ, ಗ್ಯಾನೇಶ್ ಕುಮಾರ್ ರಾಜೀನಾಮೆ ನೀಡುವಂತೆ ಮಾಡೋಣ” ಎಂದು ಎಸ್‌ಎಫ್‌ಐ ನಾಯಕಿ ಐಶೆ ಘೋಷ್ ಕರೆಕೊಟ್ಟಿದ್ದರು.


ಈ ಕಾರ್ಯಕ್ರಮದಲ್ಲಿ ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ವಿ.ಗೋಪಾಲಗೌಡ ಅವರು ಎಸ್‌ಐಆರ್ ಸಂತ್ರಸ್ತರ ನೋವು ಆಲಿಸುವ ‘ಜನತಾ ನ್ಯಾಯಾಲಯ’ ನಡೆಸಿದ್ದು ಬಹಳ ಆರ್ಥಪೂರ್ಣವಾಗಿತ್ತು. ಕ್ಷುಲ್ಲಕ ಕಾರಣಗಳಿಗೆ ಮತದಾನದ ಅಮೂಲ್ಯ ಹಕ್ಕು ಕಳೆದುಕೊಂಡ ಕೊಡಗಿನ ಆದಿವಾಸಿ ಹಾಡಿಗಳ ಮುಗ್ಧ ಮೂಲನಿವಾಸಿಗಳಿಂದ ಹಿಡಿದು, ಮದುವೆಯಾಗಿ ಗಂಡನ ಮನೆಗೆ ಹೋದ ಮೇಲೆ ಹೆಸರು ಬದಲಾದ ಕಾರಣಕ್ಕೆ ಮತ ಹಕ್ಕು ಕಳೆದುಕೊಂಡ ಹೆಣ್ಣುಮಕ್ಕಳವರೆಗೆ ಅನೇಕ ಎಸ್‌ಐಆರ್ ಸಂತ್ರಸ್ತರು ತಮ್ಮ ಕಥೆಗಳನ್ನು ಹಂಚಿಕೊಂಡರು.

ಕಾರ್ಯಕ್ರಮದ ವೇದಿಕೆಯಲ್ಲಿ ಬಿಜೆಪಿ-ಜೆಡಿಎಸ್ ಹೊರತುಪಡಿಸಿ ನಾಡಿನ ಎಲ್ಲಾ ಜಾತ್ಯತೀತ ಪಕ್ಷ ಮತ್ತು ಸಂಘಟನೆಗಳ ನಾಯಕರು ಇದ್ದರು. ವೇದಿಕೆ ಮುಂಭಾಗ ಸಾವಿರಾರು ಸಂಖ್ಯೆಯಲ್ಲಿ ಯುವಜನರು ಸೇರಿದ್ದರು. ಉನ್ನತ ವಿದ್ಯಾಭ್ಯಾಸ ಮಾಡಿರುವ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸಂವಿಧಾನ ವಿರೋಧಿಗಳ ವಿರುದ್ಧ ತಮ್ಮ ಆಕ್ರೋಶ ಹೊರಹಾಕಿದರು.

ಎಸ್‌ಐಆರ್‌ಗೆ ಸಂಬಂಧಪಟ್ಟಂತೆ ಈ ರೀತಿಯ ಹೋರಾಟ ನಡೆದಿರುವುದು ಇದೇ ಮೊದಲು ಎನ್ನಬಹುದು. ಪಶ್ಚಿಮ ಬಂಗಾಳ, ಬಿಹಾರ ಮತ್ತು ಉತ್ತರ ಪ್ರದೇಶ ಸೇರಿದಂತೆ ವಿವಿಧೆಡೆ ಎಸ್‌ಐಆರ್ ವಿರುದ್ಧ ಜನ ಸಂಘಟನೆಗಳು ಸಾಕಷ್ಟು ಹೋರಾಟಗಳನ್ನು ಮಾಡಿದೆ. ಪಶ್ಚಿಮ ಬಂಗಾಳದಲ್ಲಂತೂ ಅಲ್ಲಿನ ಮುಖ್ಯಮಂತ್ರಿಯಾಗಿದ್ದ ಮಮತಾ ಬ್ಯಾನರ್ಜಿಯವರು ಸ್ವತಃ ಸುಪ್ರೀಂಕೋರ್ಟ್‌ನಲ್ಲಿ ವಾದ ಮಾಡಿದ್ದರು. ಆದರೆ, ಕರ್ನಾಟಕದ ಹೋರಾಟ ಇವೆಲ್ಲದ್ದಕ್ಕಿಂತ ಭಿನ್ನವಾಗಿತ್ತು.

ದೆಹಲಿ ತಲುಪಿದ ಕರ್ನಾಟಕದ ಸಂತ್ರಸ್ತರು

ಎಸ್‌ಐಆರ್ ಸಂತ್ರಸ್ತರು ರಾಷ್ಟ್ರ ರಾಜಧಾನಿ ದೆಹಲಿಗೆ ಹೋಗಿ ಸುದ್ದಿಗೋಷ್ಠಿ ನಡೆಸಿರುವುದನ್ನು ಕರ್ನಾಟಕದ ಎಸ್‌ಐಆರ್ ವಿರೋಧಿ ಹೋರಾಟ ದೇಶಕ್ಕೆ ಮಾದರಿ ಎನ್ನುವುದಕ್ಕೆ ಉದಾಹರಣೆಯಾಗಿ ನೀಡಬಹುದು. ಮೂಲಭೂತ ಸೌಲಭ್ಯ ತಲುಪದ ಕೊಡಗಿನ ಆದಿವಾಸಿ ಹಾಡಿಗಳ ಜನರೂ ಕೂಡ ದೆಹಲಿಗೆ ಹೋಗಿ ನೂರಾರು ಮಾಧ್ಯಮಗಳ ಮುಂದೆ ತಮ್ಮ ನೋವು ಹೇಳಿಕೊಳ್ಳುವ ಅವಕಾಶವನ್ನು ಕರ್ನಾಟಕದ ಎಸ್‌ಐಆರ್ ವಿರೋಧಿ ಒಕ್ಕೂಟ ಸೃಷ್ಟಿಸಿತ್ತು.

ಕರ್ನಾಟಕದ ಸಂತ್ರಸ್ತರು ದೆಹಲಿಗೆ ಹೋದಾಗ ಅಲ್ಲಿ, ವಿವಿಧ ಜಾತ್ಯತೀತ ಪಕ್ಷ ಮತ್ತು ಸಂಘಟನೆಗಳ ನೇತೃತ್ವದಲ್ಲಿ ಹಲವು ರೀತಿಯ ಪ್ರತಿಭಟನೆಗಳು ದೊಡ್ಡ ಮಟ್ಟದಲ್ಲಿ ನಡೆಯುತ್ತಿತ್ತು. ದೇಶದ ಚಿತ್ತ ಸಂಪೂರ್ಣ ದೆಹಲಿಯತ್ತ ಇತ್ತು.

ರಾಜಧಾನಿಯ ಯಾವುದೇ ರಸ್ತೆಗೆ ಇಳಿದರೂ ಪೊಲೀಸ್ ಬ್ಯಾರಿಕೇಡ್‌ಗಳು ಕಾಣುತಿತ್ತು. ಸಾವಿರಾರು ಪೊಲೀಸರು ಮತ್ತು ವಿವಿಧ ಬಣ್ಣದ ಯೂನಿಫಾರ್ಮ್ ತೊಟ್ಟ ವಿವಿಧ ಬೆಟಾಲಿಯನ್‌ಗಳ ಯೋಧರು ಓಡಾಡುತಿದ್ದರು. “ಸಾರ್ವಜನಿಕರು ಹೋರಾಟ ಮಾಡಬಾರದು” ಎಂಬ ಪೊಲೀಸರ ಮನವಿ ಮತ್ತು ಘೋಷಣೆಗಳು ದೆಹಲಿಯಾದ್ಯಂತ ಲೌಡ್ ಸ್ಪೀಕರ್‌ಗಳಲ್ಲಿ ಕೇಳಿಸುತ್ತಿತ್ತು.

ಅ. 16ರಂದು ಸಂಜೆ 5 ಗಂಟೆಯ ಹೊತ್ತಿಗೆ ನಗರದ ಜಗಜೀತ್ ಭವನದಿಂದ ಕನ್ನಾಟ್ ಪ್ಲೇಸ್‌ನಲ್ಲಿರುವ ಸೆಂಟ್ರಲ್ ಪಾರ್ಕ್ ಕಡೆಗೆ ನಾವು ಆಟೋ ಹತ್ತಿ ಹೊರಟಾಗ, ಬಹುತೇಕ ರಸ್ತೆಗಳು ಬಂದ್ ಆಗಿರುವ ಕುರಿತು ಆಟೋ ಚಾಲಕ ನಮಗೆ ಮೊದಲೇ ಎಚ್ಚರಿಕೆ ನೀಡಿದ್ದರು. ಕನ್ನಾಟ್ ಪ್ಲೇಸ್‌ಗಿಂತ ಎರಡು ಕಿಲೋಮೀಟರ್ ದೂರದಲ್ಲೇ ನಮ್ಮನ್ನು ಇಳಿಸಿದ ಆತ, “ಗುಂಪಾಗಿ ಹೋಗಬೇಡಿ, ಒಬ್ಬೊಬ್ಬರೇ ಪ್ರತ್ಯೇಕವಾಗಿ ಹೊರಡಿ” ಎಂಬ ಸೂಚನೆಯನ್ನೂ ಕೊಟ್ಟರು. ದಾರಿಯುದ್ದಕ್ಕೂ ಇದ್ದ ಪೊಲೀಸರನ್ನು ನೋಡುತ್ತಲೇ ಕನ್ನಾಟ್ ಪ್ಲೇಸ್‌ನ ಸೆಂಟ್ರಲ್ ಪಾರ್ಕ್ ತಲುಪುವ ಹೊತ್ತಿಗೆ, ಅಲ್ಲಿ ಆಗಲೇ ಸಾವಿರಾರು ಯುವಜನರು ಸೇರಿದ್ದರು. ಮೋದಿ-ಅಮಿತ್ ಶಾ, ಕೇಂದ್ರ ಸರ್ಕಾರ, ಚುನಾವಣಾ ಆಯೋಗ ಮತ್ತು ಗ್ಯಾನೇಶ್ ಕುಮಾರ್ ವಿರುದ್ಧ ಘೋಷಣೆಗಳನ್ನು ಕೂಗುತ್ತಿದ್ದರು. “ಜೈ ಭೀಮ್, ಇಂಕ್ವಿಲಾಬ್ ಜಿಂದಾಬಾದ್” ಎಂಬ ಘೋಷಣೆಗಳು ಮೊಳಗುತ್ತಿದ್ದವು. ಎಲ್ಲರ ಕೈಯಲ್ಲೂ ತ್ರಿವರ್ಣ ಧ್ವಜ ಮತ್ತು ಸಂವಿಧಾನದ ಪೀಠಿಕೆ ಇತ್ತು.

ಅ.10ರಂದು ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಕರೆ ನೀಡಿದ್ದ ಹೋರಾಟವನ್ನು ತನ್ನ ಅಧಿಕಾರದ ದುರುಪಯೋಗದ ಮೂಲಕ ಕೇಂದ್ರ ಸರ್ಕಾರ ಹತ್ತಿಕ್ಕಿತ್ತು. ಜಂತರ್‌ಮಂತರ್ ಪ್ರದೇಶದಲ್ಲಿ ಪ್ರತಿಭಟನೆಗಳಿಗೆ ನಿಷೇಧ ಹೇರಿದ್ದನ್ನು ವಿರೋಧಿಸಿ, ಸೆ. 16ರಂದು ಸೆಂಟ್ರಲ್ ಪಾರ್ಕ್‌ನಲ್ಲಿ ಸಿಜೆಪಿ ಕರೆ ನೀಡಿದ್ದ ತಿರಂಗ ಯಾತ್ರೆಯನ್ನೂ ತಡೆಯಲು ದೆಹಲಿ ಪೊಲೀಸರು ತಯಾರಿ ನಡೆಸಿದ್ದರು. ಮುನ್ನೆಚ್ಚರಿಕೆಯಾಗಿ ಅಭಿಜೀತ್ ದಿಪ್ಕೆ ಅವರನ್ನು ವಿಮಾನ ನಿಲ್ದಾಣದಲ್ಲೇ ವಶಕ್ಕೆ ಪಡೆದಿದ್ದರು. ತಿರಂಗ ಯಾತ್ರೆ ಆರಂಭಿಸಿದ ಎಐಎಸ್‌ಎ ಅಧ್ಯಕ್ಷೆ ನೇಹಾ ಬೋರಾ ಅವರನ್ನೂ ಕೂಡಲೇ ವಶಕ್ಕೆ ಪಡೆದ ಪೊಲೀಸರು, ಹೋರಾಟ ಮುಗಿಯಿತು ಎಂಬ ಸಮಾಧಾನದಲ್ಲಿದ್ದರು. ಆದರೆ, ಹೋರಾಟಕ್ಕೆ ಕರೆ ನೀಡಿದ್ದ ಮುಂಚೂಣಿ ನಾಯಕರ ಬಂಧನದ ಹೊರತಾಗಿಯೂ ಅಲ್ಲಿ ಸಾವಿರಾರು ಯುವಜನರು ಸೇರಿದ್ದರು.

ಹೋರಾಟದ ಸ್ಥಳಕ್ಕೆ ಬಂದಿದ್ದವರೆಲ್ಲರೂ ತ್ರಿವರ್ಣ ಧ್ವಜ ಮತ್ತು ಸಂವಿಧಾನದ ಪೀಠಿಕೆ ಹಿಡಿದಿದ್ದರು. ಕೆಲವರು ಮೋದಿ, ಅಮಿತ್ ಶಾ, ಚುನಾವಣಾ ಆಯೋಗ ಮತ್ತು ಗ್ಯಾನೇಶ್ ಕುಮಾರ್ ಅವರನ್ನು ಲೇವಡಿ ಮಾಡುವಂತಹ ಫಲಕಗಳನ್ನು ಹಿಡಿದಿದ್ದರು. ಅಲ್ಲಿ ಘೋಷಣೆಗಳಿದ್ದವು; ಯಾರನ್ನೂ ನಿಂದಿಸುತ್ತಿರಲಿಲ್ಲ. ಕಾನೂನನ್ನು ಕೈಗೆತ್ತಿಕೊಳ್ಳುವಂತಹ ಯಾವುದೇ ಕೃತ್ಯಗಳಿಗೂ ಅವರು ಆಸ್ಪದ ಕೊಡಲೇ ಇಲ್ಲ.

ಬಿಜೆಪಿಗರ ಪ್ರಚೋದನೆಗೆ ಸೊಪ್ಪು ಹಾಕದ ಕಾಕ್ರೋಚ್ ಬೆಂಬಲಿಗರು

ಸೆಂಟ್ರಲ್ ಪಾರ್ಕ್ ಬಳಿಗೆ ಸಿಜೆಪಿ ಬೆಂಬಲಿಗರು ಆಗಮಿಸುತ್ತಿದ್ದಂತೆಯೇ, ಅಲ್ಲಿಗೆ ಬಂದಿದ್ದ 50ರಿಂದ 60 ಜನರಿದ್ದ ಬಿಜೆಪಿ ಬೆಂಬಲಿಗರು ಸಿಜೆಪಿ ವಿರುದ್ಧ ಘೋಷಣೆಗಳನ್ನು ಕೂಗಲು ಆರಂಭಿಸಿದರು. ಮೋದಿ ಪರವಾಗಿ ಘೋಷಣೆಗಳನ್ನು ಕೂಗುತ್ತಿದ್ದರು. ಸಾಲದ್ದಕ್ಕೆ, ಅಲ್ಲಿಗೆ ಬಂದಿದ್ದ ಮುಸ್ಲಿಂ ಸಮುದಾಯದ ಹೋರಾಟಗಾರರನ್ನು ಪ್ರಚೋದಿಸುವ ಘೋಷಣೆಗಳನ್ನೂ ಕೂಗುತ್ತಿದ್ದರು. ಆದರೆ, ಬಿಜೆಪಿ ಬೆಂಬಲಿಗರು ಕಾಲು ಕೆರೆದು ಜಗಳಕ್ಕೆ ಬಂದರೂ, ಗಲಭೆಗೆ ಅವರು ಎಷ್ಟೇ ಪ್ರಚೋದನೆ ನೀಡಿದರೂ ಅದಕ್ಕೆ ಸಿಜೆಪಿ ಕಾರ್ಯಕರ್ತರು ಬಲಿಯಾಗಲಿಲ್ಲ. ಅವರ ‘ಜೈ ಶ್ರೀರಾಮ್’, ‘ಜೈ ಮೋದಿ’ ಘೋಷಣೆಗಳಿಗೆ ಪ್ರತಿಯಾಗಿ ಸಿಜೆಪಿ ಬೆಂಬಲಿಗರು ‘ಜೈ ಭೀಮ್’ ಘೋಷಣೆ ಕೂಗಿದರು; ‘ಜೈ ಸಂವಿಧಾನ’ ಎಂದರು. ಗುದ್ದಾಟಕ್ಕೆ ಇಳಿಯದೆ ಸಂಯಮ ಮೆರೆದ ಅವರ ನಡೆ ಪ್ರಬುದ್ಧತೆಯನ್ನು ತೋರಿಸುತ್ತದೆ. ಸೆ. 16ರಂದು ಸಿಜೆಪಿ ಕರೆ ನೀಡಿದ್ದ ತಿರಂಗ ಯಾತ್ರೆಯಲ್ಲಿ ನಡೆದ ಈ ಘಟನೆ, ಪ್ರಚೋದನೆಗೆ ಪ್ರತಿಯಾಗಿ ಸಂಘರ್ಷವನ್ನೇ ಆಯ್ಕೆ ಮಾಡಬೇಕಿಲ್ಲ ಎಂಬುದನ್ನು ಸಾಬೀತುಪಡಿಸುತ್ತದೆ. ಕೊನೆಗೆ ಪ್ರತಿಭಟನೆ ಮುಕ್ತಾಯವಾದಾಗ, ಇದೇ ಬಿಜೆಪಿ ಬೆಂಬಲಿಗರು ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಸಪ್ಪೆ ಮೋರೆ ಹಾಕಿಕೊಂಡು ಮನೆಗೆ ಹೊರಟರು.

ಹೋರಾಟಕ್ಕೆ ಧುಮುಕಿದ ರೈತ, ದಲಿತ ಸಂಘಟನೆಗಳು

ಅ. 8ರ ಐತಿಹಾಸಿಕ ಸಮಾವೇಶದ ಬಳಿಕ ಅ.23ರಂದು ಬೆಂಗಳೂರಿನಲ್ಲಿ ಮತ್ತೊಂದು ಮಹತ್ವದ ಹೋರಾಟ ನಡೆಯಿತು. ಈ ಹೋರಾಟಕ್ಕೆ ನಾಡಿನ ರೈತ, ದಲಿತ ಸಂಘಟನೆಗಳು ಕೈಜೋಡಿಸಿದ್ದು ಹೆಚ್ಚಿನ ಬಲ ನೀಡಿತು. ಎಸ್‌ಐಆರ್ ರದ್ದತಿ, ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ಅವರ ರಾಜೀನಾಮೆ, ಚುನಾವಣಾ ಆಯೋಗದ ಸಮಗ್ರ ಪುನರ್ ರಚನೆಗೆ ಆಗ್ರಹಿಸಿ ಮತ್ತು ದೆಹಲಿ ಜಂತರ್‌ಮಂತರ್‌ಅನ್ನು ಪ್ರತಿಭಟನಾ ಸ್ಥಳದಿಂದ ಕೈಬಿಟ್ಟಿರುವುದನ್ನು ವಿರೋದಿಸಿ ಈ ಹೋರಾಟ ಹಮ್ಮಿಕೊಳ್ಳಲಾಗಿತ್ತು.

ನಗರದ ಟೌನ್‌ಹಾಲ್‌ನಿಂದ ಫ್ರೀಡಂ ಪಾರ್ಕ್‌ವರೆಗೆ ನಡೆದ ಮೆರವಣಿಗೆಯಲ್ಲಿ ದಲಿತ, ರೈತ, ಕಾರ್ಮಿಕ, ವಿದ್ಯಾರ್ಥಿ, ಮಹಿಳಾ, ಅಲ್ಪಸಂಖ್ಯಾತ ಮತ್ತು ಪ್ರಗತಿಪರ ಸಂಘಟನೆಗಳ ಕಾರ್ಯಕರ್ತರು ಭಾಗವಹಿಸಿದ್ದರು. ರಾಷ್ಟ್ರಧ್ವಜ ಹಿಡಿದು ಸಾಗಿದ ಪ್ರತಿಭಟನಾಕಾರರು, ‘ಪ್ರಜಾಪ್ರಭುತ್ವದ ಉಳಿವಿಗಾಗಿ ಜನತೆಯ ಮೆರವಣಿಗೆಗಳು’ ಎಂಬ ಘೋಷಣೆಯಡಿ ಒಗ್ಗಟ್ಟಿನ ಹೆಜ್ಜೆ ಹಾಕಿದರು. ‘ಪ್ರಜಾಪ್ರಭುತ್ವಕ್ಕೆ ಕಂಟಕವಾಗಿರುವ ಎಸ್‌ಐಆರ್ ರದ್ದಾಗಲಿ’, ‘ಗ್ಯಾನೇಶ್ ಕುಮಾರ್ ರಾಜೀನಾಮೆ ನೀಡಲಿ’, ‘ನಿಷ್ಪಕ್ಷಪಾತ ಚುನಾವಣಾ ಆಯೋಗ ಮರುರಚನೆಯಾಗಲಿ’ ಎಂಬ ಘೋಷಣೆಗಳು ಜಾಥಾದಲ್ಲಿ ಮೊಳಗಿದವು.

ಪೀಪಲ್ ಅಗೆನ್ಟ್ ಎಸ್‌ಐಆರ್

ಕರ್ನಾಟಕದಲ್ಲಿ ಎದ್ದೇಳು ಕರ್ನಾಟಕ, ಕರ್ನಾಟಕ ಜನಶಕ್ತಿ, ಕರ್ನಾಟಕ ರೈತ ಸಂಘ, ಪ್ರಾಂತ ರೈತ ಸಂಘ, ಡಿಎಸ್‌ಎಸ್, ಜಮಾಅತೆ ಇಸ್ಲಾಮಿ ಹಿಂದ್ ಸೇರಿದಂತೆ ಜನಪರ ಸಂಘಟನೆಗಳು ಮತ್ತು ಕಾಂಗ್ರೆಸ್, ಸಿಪಿಐಎಂ, ಎಎಪಿ, ಎಸ್‌ಡಿಪಿಐ ಸೇರಿದಂತೆ ಜಾತ್ಯತೀತ ಪಕ್ಷಗಳು ಸೇರಿಕೊಂಡು ಎಸ್‌ಐಆರ್ ವಿರೋಧಿ ಒಕ್ಕೂಟ ರಚಿಸಿಕೊಂಡಿದೆ.

ಇದುವರೆಗೆ ವಿವರಿಸಿದ ಕರ್ನಾಟಕದ ಎಲ್ಲಾ ಎಸ್‌ಐಆರ್ ಹೋರಾಟಗಳು ಈ ಒಕ್ಕೂಟದಡಿ ನಡೆದಿದೆ. ಈ ನಡುವೆ ಅ.14ರಂದು ದೆಹಲಿಯ ಸುರ್ಜಿತ್ ಭವನದಲ್ಲಿ ನಡೆದ ಸಭೆಯಲ್ಲಿ ರೈತರು, ಕಾರ್ಮಿಕರು, ಮಹಿಳೆಯರು, ಯುವಜನರು, ವಿದ್ಯಾರ್ಥಿಗಳು, ಆದಿವಾಸಿಗಳು, ದಲಿತರು ಮತ್ತು ಅಲ್ಪಸಂಖ್ಯಾತರು ಸೇರಿದಂತೆ ವಿವಿಧ ಜನಪರ ಸಂಘಟನೆಗಳ ಹೊಸ ಒಕ್ಕೂಟ ‘ಪೀಪಲ್ ಅಗೆನ್ಟ್ ಎಸ್‌ಐಆರ್’ ರಚಿಸಲಾಗಿದೆ.


ಈ ಒಕ್ಕೂಟದ ಮೊದಲ ಹೋರಾಟವಾಗಿ ಅ.23ರಂದು ತಿರಂಗ ರ‍್ಯಾಲಿ ನಡೆಸಲಾಗಿದೆ. ಕರ್ನಾಟಕದ ಎಸ್‌ಐಆರ್ ವಿರೋಧಿ ಒಕ್ಕೂಟ ಈ ಹೊಸ ಒಕ್ಕೂಟದ ಜೊತೆ ಕೈಜೋಡಿಸಿದೆ. ಈ ಮೂಲಕ ದೇಶದ ಎಸ್‌ಐಆರ್ ಹೋರಾಟಕ್ಕೆ ಜಂಟಿ ವೇದಿಕೆಯನ್ನು ರಚಿಸಿಕೊಳ್ಳಲಾಗಿದೆ. ಮುಂದಿನ ಹೋರಾಟಗಳನ್ನು ಈ ಸಮನ್ವಯ ವೇದಿಕೆಯ ಮೂಲಕ ನಡೆಸಲು ನಿರ್ಧರಿಸಲಾಗಿದೆ.

ಈ ನಡುವೆ ಪ್ರತಿಪಕ್ಷಗಳ ಇಂಡಿಯಾ ಒಕ್ಕೂಟ ಸೇರಿದಂತೆ ಮತ್ತಿತರರು ನಡೆಸಿದ ಹೋರಾಟಗಳಿಗೆ ಕರ್ನಾಟಕದ ಎಸ್‌ಐಆರ್ ವಿರೋಧಿ ಒಕ್ಕೂಟ ಕೈಜೋಡಿಸಿದೆ.

ಫಾರಂ-7 ಸಂಚು ಮತ್ತು ಪ್ರತಿರೋಧ

ಬಿಜೆಪಿ ಸರ್ಕಾರದ ಕುಮ್ಮಕ್ಕಿನಿಂದ ಚುನಾವಣಾ ಆಯೋಗ ನಡೆಸಿದ ಎಸ್‌ಐಆರ್ ಕರ್ನಾಟಕದಲ್ಲಿ ಉದ್ದೇಶಿಸಿದಂತೆ ಯಶಸ್ವಿಯಾಗಿಲ್ಲ ಎಂದೇ ಹೇಳಬಹುದು. ಪಶ್ಚಿಮ ಬಂಗಾಳದಲ್ಲಿ ಸುಮಾರು 90 ಲಕ್ಷ ಮತದಾರರ ಹೆಸರನ್ನು ಡಿಲೀಟ್ ಮಾಡಿ ಈ ಪೈಕಿ 37 ಲಕ್ಷ ಅರ್ಹರು ಕಟಕಟೆಯಲ್ಲಿ ನಿಲ್ಲುವಂತೆ ಮಾಡಿದ್ದ ಚುನಾವಣಾ ಆಯೋಗ ಕರ್ನಾಟಕದಲ್ಲಿ ಅದಕ್ಕಿಂತ ದೊಡ್ಡ ಸಂಚು ರೂಪಿಸಿತ್ತು ಎಂಬ ಆರೋಪವಿದೆ. ಆದರೆ, ಅದನ್ನು ಹೋರಾಟಗಾರರು ಸಮರ್ಥವಾಗಿ ಹಿಮ್ಮೆಟ್ಟಿಸಿದ್ದಾರೆ.

ಕರ್ನಾಟಕದ ಎಸ್‌ಐಆರ್ ಆರಂಭದಿಂದ ಮುಗಿಯುವವರೆಗೆ ಕಾಲಕಾಲಕ್ಕೆ ಅದರ ಅವಾಂತರಗಳನ್ನು ಜನರ ಮುಂದಿಟ್ಟ ಹೋರಾಟಗಾರರು, ಯಾವುದೇ ವಂಚನೆ ನಡೆಯದಂತೆ ಹದ್ದಿನ ಕಣ್ಣಿಟ್ಟಿದ್ದರು. ಈ ಕಾರಣಕ್ಕೆ ಚುನಾವಣಾ ಆಯೋಗ ಕೂಡ ಜನರನ್ನು ವಂಚಿಸಿ ತನ್ನ ಕಾರ್ಯ ಸಾಧಿಸಲು ಅಷ್ಟು ಸುಲಭವಾಗಿ ಸಾಧ್ಯವಾಗಿಲ್ಲ.

ರಾಜ್ಯದಲ್ಲಿ ಎಸ್‌ಐಆರ್ ಪ್ರಕ್ರಿಯೆ ಕೊನೆಯ ಹಂತದಲ್ಲಿದ್ದಾಗ ಬಿಜೆಪಿಗರು ಬಲ್ಕ್ ಫಾರಂ-7 ಹಾಕಿ ಅರ್ಹ ಮತದಾರರ, ವಿಶೇಷವಾಗಿ ಮುಸ್ಲಿಂ ಮತದಾರರ ಹೆಸರನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಲು ಪ್ರಯತ್ನಿಸಿದ್ದರು. ಇದರಲ್ಲಿ ವಿಜಯಪುರದ ಉಚ್ಚಾಟಿತ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಬೆಳಗಾವಿ ದಕ್ಷಿಣ ಬಿಜೆಪಿ ಶಾಸಕ ಅಭಯ್ ಪಾಟೀಲ್ ಸೇರಿದಂತೆ ಹಲವರು ನೇರವಾಗಿ ಪಾಲ್ಗೊಂಡಿದ್ದರು. ರಾಜ್ಯದಾದ್ಯಂತ ನಡೆದ ಇಂತಹ ವಂಚನೆಗಳನ್ನು ತಕ್ಷಣಕ್ಕೆ ಬಹಿರಂಗಪಡಿಸುವಲ್ಲಿ ಹೋರಾಟಗಾರರು ಯಶಸ್ವಿಯಾಗಿದ್ದರು. ಈ ಕಾರಣದಿಂದ ಬಿಜೆಪಿಗರ ಕುತಂತ್ರ ವಿಫಲವಾಯಿತು.

ಈ ಬಗ್ಗೆ ಹೋರಾಟಗಾರರು ಹಲವು ಬಾರಿ ಸರ್ಕಾರದ ಕಿವಿ ಹಿಂಡುವ ಕೆಲಸ ಮಾಡಿದ್ದರು. ಆರಂಭದಲ್ಲಿ ಗಂಭೀರವಾಗಿ ತೆಗೆದುಕೊಳ್ಳದ ಸರ್ಕಾರ, ವಿಷಯ ರಾಜಕೀಯ ಬಣ್ಣ ಪಡೆದಾಗ ಎಚ್ಚೆತ್ತುಕೊಂಡಿತು. ಕೊನೆಗೆ ಮುಖ್ಯಮಂತ್ರಿ ಡಿ.ಕೆ ಶಿವಕುಮಮಾರ್ ಅವರೇ ತನ್ನ ಸಚಿವಸಂಪುಟ ಸಹೋದ್ಯೋಗಿಗಳ ಜೊತೆ ಮುಖ್ಯ ಚುನಾವಣಾ ಆಯುಕ್ತರ ಕಚೇರಿ ಮುಂದೆ ಧರಣಿ ಕೂರುವ ಮಟ್ಟಕ್ಕೆ ಹೋಯ್ತು.

ಅಂತಿಮ ಪಟ್ಟಿ ತಿರಸ್ಕರಿಸುವಂತೆ ಸರ್ಕಾರಕ್ಕೆ ಆಗ್ರಹ

ಎಸ್‌ಐಆರ್ ಬಳಿಕ ಪ್ರಸ್ತುತ ಕರ್ನಾಟಕದ ಅಂತಿಮ ಮತದಾರರ ಪಟ್ಟಿ ಬಿಡುಗಡೆಯಾಗಿದೆ. ಇದನ್ನು ಸಾರಾಸಗಟಾಗಿ ತಿರಸ್ಕರಿಸಿರುವ ಹೋರಾಟಗಾರರು ತಮ್ಮ ಹೋರಾಟ ಮುಂದುವರಿಸುವುದಾಗಿ ಘೋಷಿಸಿದ್ದಾರೆ. ಒಂದು ಕೋಟಿಯಷ್ಟು ಅರ್ಹ ಮತದಾರರನ್ನು ಹೊರಗಿಟ್ಟಿರುವ ಪಟ್ಟಿಯನ್ನು ರಾಜ್ಯ ಸರ್ಕಾರ ಕೂಡ ತಿರಸ್ಕರಿಸಬೇಕು. ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಅದನ್ನು ಬಳಸಬಾರದು ಎನ್ನುವುದು ಹೋರಾಟಗಾರರ ಆಗ್ರಹವಾಗಿದೆ.

ಎಸ್‌ಐಆರ್ ವಿರುದ್ಧ ಪ್ರಾರಂಭಗೊಂಡ ಹೋರಾಟ, ಈಗ ಕೇವಲ ಅದಕ್ಕೆ ಸೀಮಿತವಾಗಿಲ್ಲ. ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ಅವರ ರಾಜೀನಾಮೆ, ಚುನಾವಣಾ ಆಯೋಗದ ಸಮಗ್ರ ಬದಲಾವಣೆಯ ಆಗ್ರಹದೊಂದಿಗೆ ಮುಂದುವರಿದಿದೆ. ಮುಂದೆ ಇದು ಆಡಳಿತದ ವಿರುದ್ಧ ದೊಡ್ಡ ಜನಾಕ್ರೋಶವಾಗಿ ಹೊರಹೊಮ್ಮುವ ಎಲ್ಲಾ ಸಾಧ್ಯತೆಗಳು ಕಾಣುತ್ತಿವೆ.


ಇದನ್ನೂ ಓದಿ: ಎಸ್‌ಐಆರ್ ಅಂತಿಮ ಪಟ್ಟಿ 192 ಕ್ಷೇತ್ರಗಳಲ್ಲಿ ಗೆಲುವಿನ ಅಂತರಕ್ಕಿಂತ ಹೆಚ್ಚು ಮತಗಳು ಡಿಲೀಟ್ ಕಾಂಗ್ರೆಸ್- 115, ಬಿಜೆಪಿ-58 ಹಾಗೂ ಜೆಡಿ(ಎಸ್)ನ 19 ಕ್ಷೇತ್ರಗಳಲ್ಲಿ ಭಾರೀ ವ್ಯತ್ಯಾಸ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ದಿಲ್ಜಿತ್ ದೋಸಾಂಜ್ ಬೆಂಗಳೂರು ಸಂಗೀತ ಕಾರ್ಯಕ್ರಮಕ್ಕೆ ಬಾಂಬ್ ಬೆದರಿಕೆ; ಮಾದಾವರ ಮೆಟ್ರೋ ನಿಲ್ದಾಣದಲ್ಲೂ ಐಇಡಿ ಸ್ಫೋಟದ ಎಚ್ಚರಿಕೆ

ಬೆಂಗಳೂರು: ಖ್ಯಾತ ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಅವರ ಬೆಂಗಳೂರಿನಲ್ಲಿ ನಡೆಯಲಿರುವ ಸಂಗೀತ ಕಾರ್ಯಕ್ರಮಕ್ಕೆ ಬಾಂಬ್ ಬೆದರಿಕೆ ಇಮೇಲ್ ಬಂದಿರುವ ಘಟನೆ ಆತಂಕಕ್ಕೆ ಕಾರಣವಾಗಿದೆ. ನವೆಂಬರ್ 29ರಂದು ಮಾದಾವರದ ನೈಸ್ ಮೈದಾನದಲ್ಲಿ ನಡೆಯಲಿರುವ...

ಎಫ್‌ಐಆರ್ ರದ್ದತಿ ಕೋರಿ ಹೈಕೋರ್ಟ್‌ ಮೆಟ್ಟಿಲೇರಿದ ವಿವಾದಿತ ‘ಬಸವ ಮಂಟಪ’ ಕೃತಿ ಲೇಖಕ ರವಿ ಹಂಜ್‌

‘ಬಸವ ಮಂಟಪ’ ಕೃತಿಗೆ ಸಂಬಂಧಿಸಿದಂತೆ ತಮ್ಮ ವಿರುದ್ಧ ದಾಖಲಾಗಿರುವ ಎಫ್‌ಐಆರ್ ರದ್ದುಗೊಳಿಸುವಂತೆ ಕೋರಿ ಲೇಖಕ ರವಿ ಹಂಜಗಿಮಠ ಅವರು ಕರ್ನಾಟಕ ಹೈಕೋರ್ಟ್‌ ಮೊರೆ ಹೋಗಿದ್ದಾರೆ. ತಮ್ಮ ಅರ್ಜಿಯಲ್ಲಿ, ತಾನು ಬದ್ಧ ವೀರಶೈವ ಲಿಂಗಾಯತ ಧರ್ಮದ...

ದೇವಾಲಯ ಆವರಣದಲ್ಲಿನ ಪೆರಿಯಾರ್ ಪ್ರತಿಮೆ ಸ್ಥಳಾಂತರಿಸಲು ಹೈಕೋರ್ಟ್ ಸೂಚನೆ: ಆದೇಶ ಪ್ರಶ್ನಿಸಿ ಸುಪ್ರೀಂಕೋರ್ಟ್‌ಗೆ ತಮಿಳುನಾಡು ಸರ್ಕಾರ ಮೇಲ್ಮನವಿ

ತಂಜಾವೂರು (ತಮಿಳುನಾಡು): ತಂಜಾವೂರು ಜಿಲ್ಲೆಯ ಅರುಳ್ಮಿಗು ಬ್ರಹ್ಮಸಿರಕಂಡೀಶ್ವರರ್ ದೇವಾಲಯದ ಸಮೀಪ ಸ್ಥಾಪಿಸಲಾಗಿರುವ ದ್ರಾವಿಡ ಚಳವಳಿಯ ನಾಯಕ ಹಾಗೂ ಸಮಾಜ ಸುಧಾರಕ ಇ.ವಿ. ರಾಮಸ್ವಾಮಿ (ಪೆರಿಯಾರ್) ಅವರ ಪ್ರತಿಮೆಯನ್ನು ತೆರವುಗೊಳಿಸುವಂತೆ ಮದ್ರಾಸ್ ಹೈಕೋರ್ಟ್ ನೀಡಿದ್ದ...

ಬಿಲ್ ಬಾಣ – ಭಾಗ 2 ಬಡತನವೇ ಮರಣದಂಡನೆಯಾದಾಗ

ಹಿಂದಿನ ಅಂಕಣದಲ್ಲಿ ಹಣ ಪಾವತಿಸಬಲ್ಲವರು ಮತ್ತು ವಿಮೆ ಹೊಂದಿರುವವರು ಹೇಗೆ ಅನಗತ್ಯ ಪರೀಕ್ಷೆಗಳು, ಶಸ್ತ್ರಚಿಕಿತ್ಸೆಗಳು, ದುಬಾರಿ ಬಿಲ್ಲಿಂಗ್ ಮತ್ತು ವಿಮಾ ಹಕ್ಕುಗಳ ನಿರಾಕರಣೆಯಿಂದ ಶೋಷಿಸಲ್ಪಡುತ್ತಾರೆ ಎಂಬುದನ್ನು ನೋಡಿದ್ದೇವೆ. ಆರೋಗ್ಯ ವ್ಯವಸ್ಥೆಯ ಆ ಮುಖದಲ್ಲಿ...

ಹಗ್ಗಿಂಗ್‌ಫೇಸ್ ಮೇಲೆ ಓಪನ್‌ಎಐ ಏಜೆಂಟ್‌ಗಳ ಸೈಬರ್ ದಾಳಿ: ಎಐ ನಿಯಂತ್ರಣದ ಕುರಿತು ಜಾಗತಿಕ ಕಳವಳ

2026ರ ಜುಲೈ 11ರಂದು, ಚಾಟ್‌ಜಿಪಿಟಿ ಖ್ಯಾತಿಯ ಓಪನ್‌ಎಐ (OpenAI) ಕಂಪನಿಯು ನಿರ್ಮಿಸಿದ ಸ್ವಾಯತ್ತ ಕೃತಕ ಬುದ್ಧಿಮತ್ತೆ (ತಮ್ಮಷ್ಟಕ್ಕೆ ತಾವೇ ನಿರ್ಧಾರ ಕೈಗೊಳ್ಳುವ ಎಐ) ಏಜೆಂಟ್‌ಗಳು, ಮಷೀನ್ ಲರ್ನಿಂಗ್ ಮಾದರಿಗಳನ್ನು ಹೋಸ್ಟ್ ಮಾಡುವ ‘ಹಗ್ಗಿಂಗ್...

ಕಿರುಕುಳ ಆರೋಪ : ಟಿವಿಕೆ ಶಾಸಕನ ವಿರುದ್ಧ ಪೊಲೀಸರಿಗೆ ದೂರು ನೀಡಿದ ಮಹಿಳಾ ಜಿಲ್ಲಾಧಿಕಾರಿ, ಎಫ್‌ಐಆರ್ ದಾಖಲು

ಕಿರುಕುಳ ಮತ್ತು ಅನುಚಿತ ವರ್ತನೆ ಆರೋಪಿಸಿ ತಮಿಳುನಾಡಿನ ಆಡಳಿತರೂಢ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ಶಾಸಕ ಸಿ. ಅರುಳ್ ವಿಘ್ನೇಶ್ ವಿರುದ್ಧ ಕಳ್ಳಕುರಿಚಿ ಜಿಲ್ಲಾಧಿಕಾರಿ ಜೆ.ಇ. ಪದ್ಮಜಾ ಅವರು ಪೊಲೀಸರಿಗೆ ಅಧಿಕೃತ...

ಬಾಂಗ್ಲಾದೇಶಕ್ಕೆ ಮರಳಲು ‘ವಿಜಯ ದಿನ’ವನ್ನೇ ಆಯ್ದುಕೊಂಡ ಶೇಖ್ ಹಸೀನಾ; ಡಿ.16ರಂದು ಭಾರತದಿಂದ ವಾಪಸಾಗುವ ಯೋಜನೆ

ಬಾಂಗ್ಲಾದೇಶದ ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಅವರು ಭಾರತದಲ್ಲಿ ಆಶ್ರಯ ಪಡೆದಿರುವುದರಿಂದ ತಾಯ್ನಾಡಿಗೆ ಮರಳಲು ಡಿಸೆಂಬರ್ 16ರ ದಿನಾಂಕವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಪಾಕಿಸ್ತಾನದ ವಿರುದ್ಧದ ಯುದ್ಧದಲ್ಲಿ ಬಾಂಗ್ಲಾದೇಶ ಸ್ವಾತಂತ್ರ್ಯ ಗಳಿಸಿದ ದಿನದ ಸ್ಮರಣಾರ್ಥ...

ನ.25ರಂದು ಶರ್ಜೀಲ್ ಇಮಾಮ್ -ಉಮರ್ ಖಾಲಿದ್ ಜಾಮೀನು ಅರ್ಜಿ ವಿಚಾರಣೆ ನಡೆಸಲಿರುವ ಸುಪ್ರೀಂ ಕೋರ್ಟ್

2020ರ ಫೆಬ್ರವರಿಯಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಗಳ ಹಿಂದಿನ 'ದೊಡ್ಡ ಸಂಚು' ಆರೋಪಕ್ಕೆ ಸಂಬಂಧಿಸಿದ ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯ್ದೆ (ಯುಎಪಿಎ) ಪ್ರಕರಣದಲ್ಲಿ ಜಾಮೀನು ನಿರಾಕರಿಸಿದ ದೆಹಲಿ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸಾಮಾಜಿಕ...

ಲಂಡನ್‌ಗೆ ತೆರಳುತ್ತಿದ್ದ ಸಿಜೆಪಿಯ ಸೌರವ್ ದಾಸ್‌ಗೆ ದೆಹಲಿ ವಿಮಾನ ನಿಲ್ದಾಣದಲ್ಲಿ ತಡೆ

ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಸಹ-ಸಂಚಾಲಕ ಮತ್ತು ವಕ್ತಾರ ಸೌರವ್ ದಾಸ್ ಅವರನ್ನು ಬ್ರಿಟನ್‌ಗೆ ಪ್ರಯಾಣಿಸದಂತೆ ದೆಹಲಿ ವಿಮಾನ ನಿಲ್ದಾಣದಲ್ಲಿ ತಡೆಯಲಾಗಿದೆ. ಸೋಮವಾರ (ನ.23) ರಾತ್ರಿ ಲಂಡನ್‌ಗೆ ತೆರಳುವ ವಿಮಾನವನ್ನು ಏರಲು ಸಿದ್ಧರಾಗಿದ್ದಾಗ...

ಸೆಂಟ್ರಲ್ ವಿಸ್ತಾ ಯೋಜನೆಗಾಗಿ ವಕ್ಫ್ ಸ್ಥಾನಮಾನ ಪರಿಗಣಿಸದೆ ಕದೀಮಿ ಮಸೀದಿ ಕೆಡವಲು ಸಾಧ್ಯವಿಲ್ಲ: ದೆಹಲಿ ಹೈಕೋರ್ಟ್‌ಗೆ ವಕ್ಫ್ ಮಂಡಳಿ ಉತ್ತರ

ನವದೆಹಲಿ: ದೆಹಲಿಯ ಕೃಷಿ ಭವನ ಆವರಣದಲ್ಲಿರುವ ಕದೀಮಿ ಮಸೀದಿಯು (Qadeemi Masjid) ಅಧಿಕೃತವಾಗಿ ಅಧಿಸೂಚಿತ ವಕ್ಫ್ ಆಸ್ತಿಯಾಗಿದ್ದು, ಸೆಂಟ್ರಲ್ ವಿಸ್ತಾ ಪುನರಾಭಿವೃದ್ಧಿ ಯೋಜನೆಗೆ ಅನುಕೂಲ ಮಾಡಿಕೊಡುವ ಏಕೈಕ ಕಾರಣಕ್ಕೆ ಅದರ ಧಾರ್ಮಿಕ ಸ್ವರೂಪ...