ಸಮುದಾಯದ ಬಹುದಿನಗಳ ಬೇಡಿಕೆಯ ಹಿನ್ನೆಲೆಯಲ್ಲಿ, ಕಾಡುಗೊಲ್ಲ ಮತ್ತು ಹಟ್ಟಿಗೊಲ್ಲ ಸಮುದಾಯಗಳಿಗೆ ಪರಿಶಿಷ್ಟ ಪಂಗಡ (ಎಸ್‌ಟಿ) ಮಾನ್ಯತೆ ದೊರಕಿಸುವ ನಿಟ್ಟಿನಲ್ಲಿ ಮೂರು ತಿಂಗಳೊಳಗೆ ಜನಾಂಗೀಯ ಅಧ್ಯಯನ ಪೂರ್ಣಗೊಳಿಸಿ ಕೇಂದ್ರ ಸರ್ಕಾರಕ್ಕೆ ಮತ್ತೊಮ್ಮೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಸಮುದಾಯದ ವಿಶಿಷ್ಟ ಗುರುತು, ಸಂಪ್ರದಾಯ ಹಾಗೂ ಜೀವನಶೈಲಿಯನ್ನು ಸಮಗ್ರವಾಗಿ ದಾಖಲಿಸಲು ಈ ಅಧ್ಯಯನ ಕೈಗೊಳ್ಳಲಾಗುತ್ತಿದ್ದು, ಸಮುದಾಯದ ಹಕ್ಕು ಮತ್ತು ನ್ಯಾಯಯುತ ಮಾನ್ಯತೆಗಾಗಿ ಸರ್ಕಾರ ನಿರಂತರವಾಗಿ ಪ್ರಯತ್ನಿಸಲಿದೆ ಎಂದು ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಮಾಹಿತಿಯಲ್ಲಿ ತಿಳಿದ್ದಾರೆ. ಕೇಂದ್ರ ಸರ್ಕಾರ ಎತ್ತಿರುವ ಆಕ್ಷೇಪಣೆಗಳಿಗೆ ಉತ್ತರ ನೀಡಿ ಎಸ್‌ಟಿ ಸೇರ್ಪಡೆಯ ಬೇಡಿಕೆಯನ್ನು ಬಲಪಡಿಸುವ ಉದ್ದೇಶದಿಂದ ಹೊಸ ಸಮಗ್ರ ಜನಾಂಗೀಯ ಅಧ್ಯಯನಕ್ಕೆ ಆದೇಶಿಸಿ, ಕೇಂದ್ರಕ್ಕೆ ಶಿಫಾರಸನ್ನು ನವೀಕರಿಸಲು ನವೆಂಬರ್ 19ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ.
ರಾಜ್ಯದ 12 ಜಿಲ್ಲೆಗಳ 40 ತಾಲ್ಲೂಕುಗಳಲ್ಲಿನ ಸುಮಾರು 1,273 ಹಟ್ಟಿಗಳಲ್ಲಿ ಆರು ಲಕ್ಷಕ್ಕೂ ಹೆಚ್ಚು ಮಂದಿ ನೆಲೆಸಿದ್ದಾರೆ. ಚಿತ್ರದುರ್ಗ ಜಿಲ್ಲೆಯ ಹಿರಿಯೂರು, ಚಳ್ಳಕೆರೆ, ಹೊಳಲ್ಕೆರೆ, ಹೊಸದುರ್ಗ ಸೇರಿದಂತೆ ಮಧ್ಯ ಮತ್ತು ದಕ್ಷಿಣ ಕರ್ನಾಟಕದ ಹಲವು ಭಾಗಗಳಲ್ಲಿ ಈ ಸಮುದಾಯದ ಉಪಸ್ಥಿತಿ ಗಮನಾರ್ಹವಾಗಿದೆ. ಹಲವು ಹಟ್ಟಿಗಳು ದೊಡ್ಡ ಗ್ರಾಮಗಳ ಹೊರವಲಯದಲ್ಲಿ, ಮುಖ್ಯ ವಸತಿ ಪ್ರದೇಶಗಳಿಂದ ಮೂರರಿಂದ ನಾಲ್ಕು ಕಿಲೋಮೀಟರ್ ದೂರದಲ್ಲಿ ಹಾಗೂ ಅರಣ್ಯದ ಗಡಿಗಳ ಸಮೀಪದಲ್ಲಿದ್ದು, ರಸ್ತೆ, ಕುಡಿಯುವ ನೀರು, ಶಿಕ್ಷಣ ಮತ್ತು ಆರೋಗ್ಯ ಸೇರಿದಂತೆ ಮೂಲಭೂತ ಸೌಲಭ್ಯಗಳ ಕೊರತೆಯ ನಡುವೆಯೇ ಜನರು ಜೀವನ ಸಾಗಿಸುತ್ತಿದ್ದಾರೆ. ಈ ಸಮುದಾಯವು ದಶಕಗಳಿಂದ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕವಾಗಿ ಹಿಂದುಳಿದಿದ್ದು, ಮೀಸಲಾತಿ ಮಾನ್ಯತೆ ಅವರ ಮೂಲಭೂತ ಹಕ್ಕುಗಳ ಸಾಕಾರಕ್ಕೆ ಅಗತ್ಯವಾಗಿದೆ.
2015ರಿಂದಲೇ ಎಸ್‌ಟಿ ಸೇರ್ಪಡೆಗಾಗಿ ರಾಜ್ಯ ಸರ್ಕಾರ ಪ್ರಯತ್ನಿಸುತ್ತಾ ಬಂದಿದ್ದರೂ, ಈ ಹಿಂದೆ ಐದು ಬಾರಿ ಪ್ರಸ್ತಾವನೆ ತಿರಸ್ಕೃತಗೊಂಡಿರುವ ಹಿನ್ನೆಲೆ ಇದೆ. ಫೆಬ್ರವರಿ 6, 2017, ಫೆಬ್ರವರಿ 18, 2019, ಸೆಪ್ಟೆಂಬರ್ 22, 2022, ಮಾರ್ಚ್ 27, 2024 ಮತ್ತು ಜೂನ್ 15, 2026ರಂದು ರಿಜಿಸ್ಟ್ರಾರ್ ಜನರಲ್ ಆಫ್ ಇಂಡಿಯಾ (ORGI) ಕಚೇರಿಯು ಪ್ರಸ್ತಾವನೆಯನ್ನು ಶಿಫಾರಸು ಮಾಡಲು ನಿರಾಕರಿಸಿತ್ತು; ಸಮುದಾಯವನ್ನು ಎಸ್‌ಟಿ ಪಟ್ಟಿಗೆ ಸೇರಿಸುವುದನ್ನು ಸಮರ್ಥಿಸಲು ಸಾಕಷ್ಟು ಹೊಸ ಮಾಹಿತಿ ಅಥವಾ ಹೆಚ್ಚುವರಿ ಪುರಾವೆಗಳನ್ನು ರಾಜ್ಯ ನೀಡಿಲ್ಲ ಎಂಬುದು ಮುಖ್ಯ ಆಕ್ಷೇಪಣೆಯಾಗಿತ್ತು.
ಇದರ ಬೆನ್ನಲ್ಲೇ, ಜುಲೈ 22, 2026ರಂದು ಕೇಂದ್ರ ಬುಡಕಟ್ಟು ವ್ಯವಹಾರಗಳ ಸಚಿವಾಲಯವು ಕರ್ನಾಟಕದ ಪ್ರಸ್ತಾವನೆಯನ್ನು ಅಧಿಕೃತವಾಗಿ ತಿರಸ್ಕರಿಸಿತ್ತು. ಸಂವಿಧಾನದ 342ನೇ ವಿಧಿಯಡಿ ಪರಿಶಿಷ್ಟ ಪಂಗಡಗಳ ಪಟ್ಟಿಗೆ ಸೇರಿಸುವ ಅಂತಿಮ ತೀರ್ಮಾನ ಕೇಂದ್ರ ಸರ್ಕಾರಕ್ಕೆ ಇದ್ದರೂ, ಸಮಗ್ರ ಜನಾಂಗೀಯ ಅಧ್ಯಯನ ಮತ್ತು ದತ್ತಾಂಶಗಳನ್ನು ಸಲ್ಲಿಸುವಲ್ಲಿ ರಾಜ್ಯ ಸರ್ಕಾರದ ಪಾತ್ರ ಪ್ರಮುಖವಾಗಿದೆ. ಈ ಹಿನ್ನೆಲೆಯಲ್ಲಿ, ಮೂರು ತಿಂಗಳೊಳಗೆ ಅಧ್ಯಯನ ಪೂರ್ಣಗೊಳಿಸಿ ವರದಿ ಸಲ್ಲಿಸುವಂತೆ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯು ನವೆಂಬರ್ 18ರಂದು ಆದೇಶ ಹೊರಡಿಸಿದ್ದು, ಧಾರವಾಡದ CMDR ಸಂಸ್ಥೆಯ ತಜ್ಞ ಮಾನವಶಾಸ್ತ್ರಜ್ಞರ ತಂಡವು ಸಮುದಾಯದ ಸಾಮಾಜಿಕ ರಚನೆ, ಸಾಂಸ್ಕೃತಿಕ ಆಚರಣೆಗಳು, ಸಂಪ್ರದಾಯಗಳು ಮತ್ತು ವಿಶಿಷ್ಟ ಜೀವನಶೈಲಿಯನ್ನು ದಾಖಲಿಸಲಿದೆ.
ಇದೇ ವೇಳೆ, ಇನ್ನೂ ಅಧಿಕೃತವಾಗಿ ಘೋಷಣೆಯಾಗದ ಹಿರಿಯೂರು ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕ್ಷೇತ್ರದಲ್ಲಿ ಸಕ್ರಿಯವಾಗಿದ್ದಾರೆ. ಹಿರಿಯೂರಿನಲ್ಲಿ ನಡೆದ ಪ್ರಜಾಸೇವೆ ಸಭೆಯಲ್ಲಿ ಪಾಲ್ಗೊಂಡು ಸಾರ್ವಜನಿಕರ ಅಹವಾಲುಗಳನ್ನು ಆಲಿಸಿರುವುದಲ್ಲದೆ, ವಿವಿಧ ಯೋಜನೆಗಳ ಸೌಲಭ್ಯ ಹಾಗೂ ಅಭಿವೃದ್ಧಿ ಕಾರ್ಯಕ್ರಮಗಳ ಮೂಲಕ ಕ್ಷೇತ್ರದಲ್ಲಿ ಗಮನ ಸೆಳೆಯುತ್ತಿದ್ದಾರೆ. ಗೊಲ್ಲ ಮತ್ತು ಕಾಡುಗೊಲ್ಲ ಸಮುದಾಯದ ಮತದಾರರು ನಿರ್ಣಾಯಕವಾಗಿರುವ ಹಿರಿಯೂರು ಕ್ಷೇತ್ರದಲ್ಲಿ ಸುಮಾರು 40,000ಕ್ಕೂ ಹೆಚ್ಚು ಕಾಡುಗೊಲ್ಲ ಮತದಾರರಿದ್ದಾರೆ ಎಂದು ಹಿಂದಿನ ಅಂದಾಜುಗಳು ಸೂಚಿಸುತ್ತಿದ್ದು, ಕ್ಷೇತ್ರದಲ್ಲಿ ನಡೆಯುತ್ತಿರುವ ಈ ಬೆಳವಣಿಗೆಗಳು ರಾಜಕೀಯ ವಲಯದಲ್ಲೂ ಚರ್ಚೆಯಾಗುತ್ತಿವೆ.


