ಕೇರಳದ ಕಣ್ಣೂರು ಜಿಲ್ಲೆಯ ಪಯ್ಯನ್ನೂರಿನಲ್ಲಿ 2016ರಲ್ಲಿ ನಡೆದ ಸಿಪಿಐ(ಎಂ) ನಾಯಕ ಸಿ.ವಿ. ಧನರಾಜ್ ಅವರ ಕೊಲೆ ಪ್ರಕರಣದಲ್ಲಿ ಮೂವರು ಬಿಜೆಪಿ-ಆರ್‌ಎಸ್‌ಎಸ್ ಕಾರ್ಯಕರ್ತರು ದೋಷಿಗಳು ಎಂದು ಸ್ಥಳೀಯ ನ್ಯಾಯಾಲಯ ಸೋಮವಾರ (ನವೆಂಬರ್ 23) ತೀರ್ಪು ನೀಡಿದೆ. ಪ್ರಕರಣದಲ್ಲಿ ಇತರ 16 ಆರೋಪಿಗಳನ್ನು ಖುಲಾಸೆಗೊಳಿಸಿದೆ.
ತಳಿಪರಂಬ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಕೆ.ಎನ್. ಪ್ರಶಾಂತ್ ಅವರು ಟಿ.ಪಿ. ಬಿಜು (34), ಸಹೋದರರಾದ ಎಂ. ವಿಪಿನ್ (34) ಮತ್ತು ಎಂ. ವೈಶಾಖ್ (31) ಅವರನ್ನು ದೋಷಿಗಳೆಂದು ಘೋಷಿಸಿದ್ದಾರೆ.
ದೋಷಿಗಳೆಂದು ಘೋಷಿಸಲ್ಪಟ್ಟ ಮೂವರು ಕೊಲೆಯಲ್ಲಿ ನೇರವಾಗಿ ಭಾಗಿಯಾಗಿದ್ದರು ಎಂದು ನ್ಯಾಯಾಲಯ ತಿಳಿಸಿದೆ. ಶಿಕ್ಷೆಯ ಪ್ರಮಾಣವನ್ನು ನಿರ್ಧರಿಸುವ ಮೊದಲು ವಾದಗಳನ್ನು ಆಲಿಸಲಿರುವ ನ್ಯಾಯಾಲಯ, ಬಳಿಕ ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಲಿದೆ.
ಎಳಿಮಲೈ ಪ್ರದೇಶದ ಸಿಪಿಐ(ಎಂ) ಶಾಖಾ ಕಾರ್ಯದರ್ಶಿಯಾಗಿದ್ದ ಧನರಾಜ್ ಅವರು 2016ರ ಜುಲೈ 11ರಂದು ರಾಮಂತಳಿಯಲ್ಲಿರುವ ತಮ್ಮ ಮನೆಗೆ ಹಿಂದಿರುಗುತ್ತಿದ್ದಾಗ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಲಾಗಿತ್ತು.
ಪ್ರಾಸಿಕ್ಯೂಷನ್ ಪ್ರಕಾರ, ಮೋಟಾರ್‌ಸೈಕಲ್‌ಗಳಲ್ಲಿ ಬಂದಿದ್ದ ದುಷ್ಕರ್ಮಿಗಳ ಗುಂಪೊಂದು ಧನರಾಜ್ ಅವರನ್ನು ಹಿಂಬಾಲಿಸಿ, ಅವರ ಮನೆಯ ಸಮೀಪವೇ ಹರಿತವಾದ ಆಯುಧಗಳಿಂದ ದಾಳಿ ನಡೆಸಿತ್ತು. ತಾಯಿ ಮತ್ತು ಪತ್ನಿಯ ಎದುರಲ್ಲೇ ಅವರನ್ನು ಕೊಚ್ಚಿ, ಇರಿದು ಹತ್ಯೆ ಮಾಡಲಾಗಿತ್ತು.
ಈ ಪ್ರಕರಣದಲ್ಲಿ ಒಟ್ಟು 20 ಬಿಜೆಪಿ-ಆರ್‌ಎಸ್‌ಎಸ್ ಕಾರ್ಯಕರ್ತರನ್ನು ಆರೋಪಿಗಳೆಂದು ಹೆಸರಿಸಲಾಗಿತ್ತು. ಆದರೆ, ಪ್ರಕರಣದ 12ನೇ ಆರೋಪಿ ಸಿ. ಬಿಜು ಅಲಿಯಾಸ್ ಚುರಕ್ಕಟ್ಟು ಬಿಜು ನಂತರ ಮತ್ತೊಂದು ಕೊಲೆ ಪ್ರಕರಣದಲ್ಲಿ ಹತ್ಯೆಯಾಗಿದ್ದರಿಂದ, ಉಳಿದ 19 ಆರೋಪಿಗಳ ವಿರುದ್ಧ ಮಾತ್ರ ವಿಚಾರಣೆ ಪೂರ್ಣಗೊಂಡಿದೆ.
ವಿಚಾರಣೆ ವೇಳೆ ನ್ಯಾಯಾಲಯವು 43 ಸಾಕ್ಷಿಗಳನ್ನು ವಿಚಾರಣೆ ನಡೆಸಿದ್ದು, 177 ದಾಖಲೆಗಳು ಮತ್ತು 33 ಭೌತಿಕ ಸಾಕ್ಷ್ಯಗಳನ್ನು ಹಾಜರುಪಡಿಸಲಾಗಿತ್ತು.
ಆರಂಭದಲ್ಲಿ ಅಂದಿನ ಪಯ್ಯನ್ನೂರು ವೃತ್ತ ನಿರೀಕ್ಷಕ ವಿ.ಆರ್. ರಮೇಶನ್ ಅವರು ಪ್ರಕರಣದ ತನಿಖೆ ನಡೆಸಿದ್ದರು. ಬಳಿಕ ಎಂ.ಪಿ. ಅಸಾದ್ ಅವರು ತನಿಖೆ ಪೂರ್ಣಗೊಳಿಸಿ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ಇತ್ತೀಚೆಗೆ ಧನರಾಜ್ ಅವರ ಕೊಲೆ ಪ್ರಕರಣ ಮತ್ತೆ ರಾಜಕೀಯ ಚರ್ಚೆಯ ಕೇಂದ್ರಕ್ಕೆ ಬಂದಿತ್ತು. ಧನರಾಜ್ ಅವರ ‘ಹುತಾತ್ಮತ್ವ’ದ ಹೆಸರಿನಲ್ಲಿ ಸಂಗ್ರಹಿಸಲಾದ ಹಣದ ವಿತರಣೆಯಲ್ಲಿ ಅಕ್ರಮಗಳು ನಡೆದಿವೆ ಎಂದು ಸಿಪಿಐ(ಎಂ)ನ ಮಾಜಿ ಜಿಲ್ಲಾ ಸಮಿತಿ ಸದಸ್ಯ ವಿ. ಕುನ್ನಿಕೃಷ್ಣನ್ ಆರೋಪಿಸಿದ್ದರು.
ಈ ಆರೋಪಗಳ ಬೆನ್ನಲ್ಲೇ ಕುನ್ನಿಕೃಷ್ಣನ್ ಅವರನ್ನು ಪಕ್ಷದಿಂದ ಉಚ್ಚಾಟಿಸಲಾಗಿತ್ತು.
ನಂತರ ಅವರು ಕಾಂಗ್ರೆಸ್ ನೇತೃತ್ವದ ಯುಡಿಎಫ್ ಬೆಂಬಲದೊಂದಿಗೆ ಸ್ವತಂತ್ರ ಅಭ್ಯರ್ಥಿಯಾಗಿ ಪಯ್ಯನ್ನೂರು ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು.


