Homeಮುಖಪುಟಎಸ್‌ಐಆರ್‌ ರದ್ದಾದರೆ ಸಿಇಸಿ ಗ್ಯಾನೇಶ್ ಕುಮಾರ್ ಜೈಲಿಗೆ: ಪ್ರಶಾಂತ್ ಭೂಷಣ್

ಎಸ್‌ಐಆರ್‌ ರದ್ದಾದರೆ ಸಿಇಸಿ ಗ್ಯಾನೇಶ್ ಕುಮಾರ್ ಜೈಲಿಗೆ: ಪ್ರಶಾಂತ್ ಭೂಷಣ್

- Advertisement -
- Advertisement -

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದರೆ, ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಗ್ಯಾನೇಶ್ ಕುಮಾರ್ ಜೈಲು ಸೇರಬೇಕು ಎಂದು ಹಿರಿಯ ವಕೀಲ ಪ್ರಶಾಂತ್ ಭೂಷಣ್ ಹೇಳಿದ್ದಾರೆ.

ಭಾನುವಾರ (ನ.22) ಹೈದರಾಬಾದ್‌ನಲ್ಲಿ ಸಂವಿಧಾನಾತ್ಮಕ ಪ್ರಜಾಪ್ರಭುತ್ವ ವೇದಿಕೆ ಆಯೋಜಿಸಿದ್ದ ಎಸ್‌ಐಆರ್ ಕುರಿತ ಚರ್ಚೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, “ಅವರು ಈ ದೇಶಕ್ಕೆ ದೊಡ್ಡ ಅನ್ಯಾಯ ಮಾಡಿದ್ದಾರೆ” ಎಂದು ಹೇಳಿದರು.

ಗ್ಯಾನೇಶ್ ಕುಮಾರ್ ಅವರಿಗೆ ಕಾನೂನು ಕ್ರಮದಿಂದ ವಿನಾಯಿತಿ ಇದೆಯೇ ಎಂಬ ಪ್ರಶ್ನೆ ಇನ್ನೂ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆಗೆ ಬರಬೇಕಿದೆ. ಆದರೆ, ಆ ವಿಚಾರಣೆ ಯಾವಾಗ ನಡೆಯಲಿದೆ ಎಂಬುದು ಸ್ಪಷ್ಟವಾಗಿಲ್ಲ ಎಂದು ಅವರು ತಿಳಿಸಿದರು.

ಎಸ್‌ಐಆರ್ ಪ್ರಕ್ರಿಯೆಯನ್ನು ಯಾವಾಗ ರದ್ದುಗೊಳಿಸಬಹುದು ಎಂಬ ಪ್ರಶ್ನೆಗೆ ಉತ್ತರಿಸಿದ ಭೂಷಣ್, ಪ್ರಸ್ತುತ ಮುಖ್ಯ ನ್ಯಾಯಮೂರ್ತಿಗಳು ನಿವೃತ್ತರಾದ ಬಳಿಕ ಗ್ಯಾನೇಶ್ ಕುಮಾರ್ ಅಥವಾ ಎಸ್‌ಐಆರ್ ಪ್ರಕ್ರಿಯೆ ಎರಡರಲ್ಲಿ ಒಂದು ಅಂತ್ಯಗೊಳ್ಳಬಹುದು ಎಂದು ಹೇಳಿದರು. ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸೂರ್ಯಕಾಂತ್ ಅವರು 2027ರ ಫೆಬ್ರವರಿ 9ರಂದು ನಿವೃತ್ತರಾಗಲಿದ್ದಾರೆ.

ಮಾಜಿ ಕೇಂದ್ರ ಕಾನೂನು ಸಚಿವ ಶಾಂತಿ ಭೂಷಣ್ ಅವರ ಪುತ್ರರಾಗಿರುವ ಪ್ರಶಾಂತ್ ಭೂಷಣ್, ಪ್ರಜಾಸತ್ತಾತ್ಮಕ ಸುಧಾರಣೆಗಳ ಸಂಘಟನೆ (ಎಡಿಆರ್) ಪರವಾಗಿ ಸುಪ್ರೀಂ ಕೋರ್ಟ್‌ನಲ್ಲಿ ಎಸ್‌ಐಆರ್ ವಿರುದ್ಧದ ಪ್ರಕರಣದಲ್ಲಿ ವಾದ ಮಂಡಿಸುತ್ತಿದ್ದಾರೆ.

ಮುಖ್ಯ ಚುನಾವಣಾ ಆಯುಕ್ತರ ನಿರ್ಧಾರಗಳ ಬಗ್ಗೆ ಪ್ರಶ್ನೆ

ಚುನಾವಣಾ ಆಯುಕ್ತರಾದ ಸುಖ್ಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ ಅವರೊಂದಿಗೆ ಸಮಾಲೋಚನೆ ನಡೆಸದೆ ಗ್ಯಾನೇಶ್ ಕುಮಾರ್ ಏಕಪಕ್ಷೀಯವಾಗಿ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ ಎಂದು ಭೂಷಣ್ ಆರೋಪಿಸಿದರು.

ಕಾನೂನಿನ ಪ್ರಕಾರ, ಮತದಾರರ ಪಟ್ಟಿಗೆ ಹೆಸರುಗಳನ್ನು ಸೇರ್ಪಡೆಗೊಳಿಸುವ ಅಥವಾ ತೆಗೆದುಹಾಕುವ ಅಧಿಕಾರ ಆಯಾ ಕ್ಷೇತ್ರಗಳ ಚುನಾವಣಾ ನೋಂದಣಾಧಿಕಾರಿಗಳಿಗೆ (ಇಆರ್‌ಒ) ಇದೆ. ಆದರೆ, ಈ ಅಧಿಕಾರವನ್ನು ಚುನಾವಣಾ ಆಯೋಗದ ಐಟಿ ವ್ಯವಸ್ಥೆಯಾದ ‘ECINet’ಗೆ ವರ್ಗಾಯಿಸಲಾಗಿದೆ ಎಂದು ಅವರು ಹೇಳಿದರು.

ಗ್ಯಾನೇಶ್ ಕುಮಾರ್ ಅವರ ನಿರ್ಧಾರಗಳಿಗೆ ಉಳಿದ ಇಬ್ಬರು ಚುನಾವಣಾ ಆಯುಕ್ತರು 14 ಬಾರಿ ಆಕ್ಷೇಪ ವ್ಯಕ್ತಪಡಿಸಿದ್ದರೂ, ಆ ನಿರ್ಧಾರಗಳನ್ನು ಜಾರಿಗೊಳಿಸಲಾಗಿದೆ ಎಂಬ ‘ಇಂಡಿಯನ್ ಎಕ್ಸ್‌ಪ್ರೆಸ್’ ವರದಿಯನ್ನು ಅವರು ಉಲ್ಲೇಖಿಸಿದರು.

ಜನಪ್ರತಿನಿಧಿಗಳ ಕಾಯ್ದೆಯ ಸೆಕ್ಷನ್ 21(3)ರ ಪ್ರಕಾರ, ಒಂದು ಕ್ಷೇತ್ರ ಅಥವಾ ಅದರ ಒಂದು ಭಾಗದಲ್ಲಿ ಮಾತ್ರ ವಿಶೇಷ ತೀವ್ರ ಪರಿಷ್ಕರಣೆ ನಡೆಸಲು ಅವಕಾಶವಿದೆಯೇ ಹೊರತು ಇಡೀ ದೇಶದಲ್ಲಿ ಏಕಕಾಲಕ್ಕೆ ನಡೆಸಲು ಅವಕಾಶವಿಲ್ಲ ಎಂದು ಭೂಷಣ್ ವಾದಿಸಿದರು.

ಸಾಮಾಜಿಕ ಕಾರ್ಯಕರ್ತೆ ಅಂಜಲಿ ಭಾರದ್ವಾಜ್ ಅವರು ಮಾಹಿತಿ ಹಕ್ಕು ಕಾಯ್ದೆಯಡಿ ಸಲ್ಲಿಸಿದ್ದ ಅರ್ಜಿಗೆ ಉತ್ತರಿಸಿದ ಚುನಾವಣಾ ಆಯೋಗವು, ಎಸ್‌ಐಆರ್ ನಡೆಸುವ ಕುರಿತು ಯಾವುದೇ ನಿರ್ಧಾರದ ದಾಖಲೆ ತನ್ನ ಬಳಿ ಇಲ್ಲ ಎಂದು ತಿಳಿಸಿತ್ತು. ಈ ವಿಷಯವನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಸ್ತಾಪಿಸಿದಾಗ, ತುರ್ತು ಸಂದರ್ಭಗಳಲ್ಲಿ ಔಪಚಾರಿಕ ಸಭೆ ನಡೆಸದೆ, ಪರಸ್ಪರ ವಾಟ್ಸ್‌ಆ್ಯಪ್ ಮೂಲಕ ಸಮಾಲೋಚಿಸಿ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಚುನಾವಣಾ ಆಯೋಗ ಹೇಳಿದೆ ಎಂದು ಭೂಷಣ್ ಆರೋಪಿಸಿದರು.

ಆದರೆ, ಈ ವರ್ಷದ ಮೇ ತಿಂಗಳಲ್ಲಿ ಬಿಹಾರದಲ್ಲಿ ನಡೆದ ಎಸ್‌ಐಆರ್ ಪ್ರಕ್ರಿಯೆಯನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿತ್ತು.

ಎಸ್‌ಐಆರ್‌ನಲ್ಲಿ ಸಾಬೀತುಪಡಿಸುವ ಹೊಣೆಗಾರಿಕೆ ಮತದಾರರ ಮೇಲೆ: ಪ್ರಶಾಂತ್ ಭೂಷಣ್

2002ರಲ್ಲಿ ನಡೆದ ಮತದಾರರ ಪಟ್ಟಿ ಪರಿಷ್ಕರಣೆ ಸೇರಿದಂತೆ ಹಿಂದಿನ ಪರಿಷ್ಕರಣೆಗಳಲ್ಲಿ, ಈಗಾಗಲೇ ಅಸ್ತಿತ್ವದಲ್ಲಿದ್ದ ಮತದಾರರ ಪಟ್ಟಿಯನ್ನೇ ಆಧಾರವಾಗಿಟ್ಟುಕೊಂಡು ಮನೆಮನೆಗೆ ತೆರಳಿ ಪರಿಶೀಲನೆ ನಡೆಸಲಾಗುತ್ತಿತ್ತು ಎಂದು ಭೂಷಣ್ ಹೇಳಿದರು.

ಆದರೆ, ಈ ಬಾರಿ ಗಣತಿ ನಮೂನೆಗಳನ್ನು ಸ್ವೀಕರಿಸದ ಅಥವಾ ಭರ್ತಿ ಮಾಡಲು ಸಾಧ್ಯವಾಗದ ಮತದಾರರ ಹೆಸರುಗಳನ್ನು ಕರಡು ಮತದಾರರ ಪಟ್ಟಿಯಿಂದ ಕೈಬಿಡಲಾಗಿದೆ. ನಂತರ, ಹೊಸ ಮತದಾರರ ನೋಂದಣಿಗೆ ಉದ್ದೇಶಿಸಲಾದ ಫಾರ್ಮ್ 6 ಮೂಲಕ ಮತ್ತೆ ಅರ್ಜಿ ಸಲ್ಲಿಸುವಂತೆ ಸೂಚಿಸಲಾಗಿದೆ. ಈ ಅರ್ಜಿಯಲ್ಲಿ ತಾವು ಈ ಹಿಂದೆ ಎಂದಿಗೂ ಮತ ಚಲಾಯಿಸಿಲ್ಲ ಎಂಬ ಘೋಷಣೆ ನೀಡಬೇಕಾಗುತ್ತದೆ ಎಂದು ಅವರು ವಿವರಿಸಿದರು.

ಸುಪ್ರೀಂ ಕೋರ್ಟ್ ಈ ಕ್ರಮವನ್ನು ಅವಿವೇಕದ ಎಂದು ಪ್ರಶ್ನಿಸಿದ ಬಳಿಕ ಚುನಾವಣಾ ಆಯೋಗ ತನ್ನ ನಿಲುವಿನಿಂದ ಹಿಂದೆ ಸರಿದಿದೆ ಎಂದು ಅವರು ಹೇಳಿದರು.

1995ರ ಲಾಲ್ ಬಾಬು ಹುಸೇನ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿದ್ದ ತೀರ್ಪಿನ ಪ್ರಕಾರ, ಮತದಾರರ ಪಟ್ಟಿಯಲ್ಲಿ ಈಗಾಗಲೇ ಹೆಸರು ಹೊಂದಿರುವ ವ್ಯಕ್ತಿಯ ಹೆಸರು ಸರಿಯಾಗಿಯೇ ಇದೆ ಎಂದು ಪರಿಗಣಿಸಬೇಕು. ಸೂಕ್ತ ನೋಟಿಸ್ ನೀಡದೆ ಮತ್ತು ವಿಚಾರಣೆಗೆ ಅವಕಾಶ ಕಲ್ಪಿಸದೆ ಅಂತಹ ವ್ಯಕ್ತಿಯ ಹೆಸರನ್ನು ಪಟ್ಟಿಯಿಂದ ತೆಗೆದುಹಾಕುವಂತಿಲ್ಲ. ಆದರೆ, ಎಸ್‌ಐಆರ್‌ನಲ್ಲಿ ಈ ತತ್ವವನ್ನೇ ತಲೆಕೆಳಗೆ ಮಾಡಲಾಗಿದೆ ಎಂದು ಭೂಷಣ್ ಆರೋಪಿಸಿದರು.

“ಅವರು ಇಡೀ ಪ್ರಕ್ರಿಯೆಯನ್ನೇ ತಿರುಗಿಸಿದ್ದಾರೆ. ನೀವು ನಿಮ್ಮ ದಾಖಲೆಗಳನ್ನು ಸಲ್ಲಿಸಿ, ಯಾವ ದಾಖಲೆಗಳನ್ನು ಒಪ್ಪಿಕೊಳ್ಳಬೇಕು ಎಂಬುದನ್ನು ನಾವು ನಿರ್ಧರಿಸುತ್ತೇವೆ ಎಂದು ಹೇಳುತ್ತಿದ್ದಾರೆ” ಎಂದು ಅವರು ಟೀಕಿಸಿದರು.

‘ತಾರ್ಕಿಕ ವ್ಯತ್ಯಾಸ’ (Logical Discrepancy) ಎಂಬ ಹೆಸರಿನಲ್ಲಿ ನೀಡಲಾಗುತ್ತಿರುವ ನೋಟಿಸ್‌ಗಳ ಬಗ್ಗೆಯೂ ಅವರು ಆಕ್ಷೇಪ ವ್ಯಕ್ತಪಡಿಸಿದರು. ಈ ಪದಕ್ಕೆ ಯಾವುದೇ ಅಧಿಕೃತ ವ್ಯಾಖ್ಯಾನ ನೀಡಿಲ್ಲ ಮತ್ತು ಅದರ ಹಿಂದೆ ಬಳಸಲಾಗಿರುವ ಅಲ್ಗಾರಿದಮ್ ಬಗ್ಗೆಯೂ ಮಾಹಿತಿ ಬಹಿರಂಗಪಡಿಸಿಲ್ಲ ಎಂದು ಹೇಳಿದರು.

ಹೆಸರಿನ ಕಾಗುಣಿತದಲ್ಲಿ ಒಂದೇ ಒಂದು ಅಕ್ಷರದ ವ್ಯತ್ಯಾಸವಿದ್ದರೂ ಅಥವಾ ಐದಕ್ಕಿಂತ ಹೆಚ್ಚು ಸಹೋದರ-ಸಹೋದರಿಯರಿದ್ದರೂ ಇಂತಹ ನೋಟಿಸ್ ನೀಡುವ ಸಾಧ್ಯತೆಯಿದೆ ಎಂದು ಅವರು ಆರೋಪಿಸಿದರು.

ಪಶ್ಚಿಮ ಬಂಗಾಳದಲ್ಲಿ ಇಂತಹ ನೋಟಿಸ್ ಪಡೆದವರಲ್ಲಿ ಸುಮಾರು ಮೂರನೇ ಎರಡರಷ್ಟು ಮಂದಿ ಮುಸ್ಲಿಮರಾಗಿದ್ದಾರೆ. ಆದರೆ, ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ ಮುಸ್ಲಿಮರ ಪ್ರಮಾಣ ಸುಮಾರು ಶೇ.27ರಷ್ಟಿದೆ ಎಂದು ಅವರು ಹೇಳಿದರು.

ಪಶ್ಚಿಮ ಬಂಗಾಳದಲ್ಲಿ ನ್ಯಾಯಾಂಗ ಅಧಿಕಾರಿಗಳ ಪರಿಶೀಲನೆಯ ಬಳಿಕ ಸುಮಾರು 27 ಲಕ್ಷ ಮತದಾರರ ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕಲಾಗಿದೆ. ಪ್ರತಿಯೊಂದು ಪ್ರಕರಣವನ್ನು ಪರಿಶೀಲಿಸಲು ನ್ಯಾಯಾಂಗ ಅಧಿಕಾರಿಗಳಿಗೆ ಕೇವಲ ಎರಡು ನಿಮಿಷಗಳ ಕಾಲಾವಕಾಶ ನೀಡಲಾಗಿತ್ತು ಎಂದು ಭೂಷಣ್ ಆರೋಪಿಸಿದರು. ಈ ಕ್ರಮದ ವಿರುದ್ಧ ಸುಮಾರು 22 ಲಕ್ಷ ಮಂದಿ ಮೇಲ್ಮನವಿ ಸಲ್ಲಿಸಿದ್ದಾರೆ ಎಂದು ತಿಳಿಸಿದರು.

ಇದುವರೆಗೆ ತೀರ್ಮಾನಿಸಲಾದ ಸುಮಾರು 1.4 ಲಕ್ಷ ಮೇಲ್ಮನವಿಗಳಲ್ಲಿ ಶೇ.93ರಷ್ಟು ಪ್ರಕರಣಗಳಲ್ಲಿ ಮತದಾರರನ್ನು ತಪ್ಪಾಗಿ ಪಟ್ಟಿಯಿಂದ ಹೊರಗಿಡಲಾಗಿತ್ತು ಎಂದು ಅವರು ಹೇಳಿದರು. ಇದೇ ವೇಗದಲ್ಲಿ ಉಳಿದ ಮೇಲ್ಮನವಿಗಳನ್ನು ವಿಲೇವಾರಿ ಮಾಡಲು ಇನ್ನೂ 14 ವರ್ಷಗಳು ಬೇಕಾಗಬಹುದು ಎಂದು ಆತಂಕ ವ್ಯಕ್ತಪಡಿಸಿದರು.

ಕಳೆದ ತಿಂಗಳು ಪ್ರಕಟವಾದ ‘ಹ್ಯೂಮನ್ ರೈಟ್ಸ್ ವಾಚ್’ ವರದಿಯಲ್ಲೂ ಇದೇ ರೀತಿಯ ಅಂಕಿ-ಅಂಶಗಳನ್ನು ಉಲ್ಲೇಖಿಸಲಾಗಿದೆ ಎಂದು ಅವರು ಹೇಳಿದರು. ಪಟ್ಟಿಯಿಂದ ಹೊರಗಿಡಲಾದವರು ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲೂ ಮತ ಚಲಾಯಿಸಲು ಸಾಧ್ಯವಾಗದ ಪರಿಸ್ಥಿತಿ ಎದುರಾಗಬಹುದು ಎಂದು ಎಚ್ಚರಿಸಿದರು.

“ತಪ್ಪಾಗಿ ಕೆಲವರು ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾದರೂ ಆಕಾಶವೇನೂ ಕಳಚಿ ಬೀಳುವುದಿಲ್ಲ. ಆದರೆ, ಅರ್ಹರಾದ ಕೆಲವರನ್ನು ಮತದಾರರ ಪಟ್ಟಿಯಿಂದ ಹೊರಗಿಟ್ಟರೆ ಆಕಾಶವೇ ಕಳಚಿ ಬಿದ್ದಂತಾಗುತ್ತದೆ” ಎಂದು ಭೂಷಣ್ ಹೇಳಿದರು.

ಇದಕ್ಕೆ ಬದಲಾಗಿ, ಚುನಾವಣಾ ಆಯೋಗದ ಸ್ವಂತ ಕೈಪಿಡಿಯಲ್ಲಿರುವಂತೆ ಹಳೆಯ ಮತದಾರರ ಪಟ್ಟಿಯನ್ನು ಸಾರ್ವಜನಿಕವಾಗಿ ಪರಿಶೀಲಿಸಲು ಬೂತ್ ಮಟ್ಟದಲ್ಲಿ ಸಭೆಗಳನ್ನು ನಡೆಸಿ, ಅವುಗಳ ಸಂಪೂರ್ಣ ಪ್ರಕ್ರಿಯೆಯನ್ನು ವಿಡಿಯೋ ಚಿತ್ರೀಕರಣ ಮಾಡಬೇಕಿತ್ತು ಎಂದು ಅವರು ಅಭಿಪ್ರಾಯಪಟ್ಟರು.

ಚುನಾವಣಾ ಆಯುಕ್ತರ ನೇಮಕಾತಿ ಪ್ರಕ್ರಿಯೆಯ ಬಗ್ಗೆಯೂ ಆಕ್ಷೇಪ

ಚುನಾವಣಾ ಆಯುಕ್ತರನ್ನು ಆಯ್ಕೆ ಮಾಡುವ ಸಮಿತಿಯಲ್ಲಿ ಮುಖ್ಯ ನ್ಯಾಯಮೂರ್ತಿಗಳ ಬದಲಿಗೆ ಕೇಂದ್ರ ಸಚಿವರನ್ನು ಸೇರಿಸುವ ಮೂಲಕ ಕೇಂದ್ರ ಸರ್ಕಾರವು 2023ರ ಸಂವಿಧಾನ ಪೀಠದ ತೀರ್ಪನ್ನು ಬದಿಗೊತ್ತಿದೆ ಎಂದು ಭೂಷಣ್ ಆರೋಪಿಸಿದರು.

ಈ ವಿಷಯಕ್ಕೆ ಸಂಬಂಧಿಸಿದ ಅರ್ಜಿಯನ್ನು ಸಂವಿಧಾನ ಪೀಠಕ್ಕೆ ವರ್ಗಾಯಿಸುವ ಕುರಿತು ಸೆಪ್ಟೆಂಬರ್‌ನಲ್ಲಿ ಸುಪ್ರೀಂ ಕೋರ್ಟ್‌ನ ಇಬ್ಬರು ನ್ಯಾಯಮೂರ್ತಿಗಳ ಪೀಠದಲ್ಲಿ ಭಿನ್ನಾಭಿಪ್ರಾಯ ವ್ಯಕ್ತವಾಗಿತ್ತು. ನ್ಯಾಯಮೂರ್ತಿ ದೀಪಂಕರ್ ದತ್ತ ಅವರು ಅರ್ಜಿಯನ್ನು ಸಂವಿಧಾನ ಪೀಠಕ್ಕೆ ವರ್ಗಾಯಿಸುವುದನ್ನು ವಿರೋಧಿಸಿದರೆ, ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ಅವರು ಅದನ್ನು ಬೆಂಬಲಿಸಿದ್ದರು.

ಆದರೆ, ನ್ಯಾಯಮೂರ್ತಿ ಶರ್ಮಾ ಅವರು ತಮ್ಮ ಪುತ್ರನನ್ನು ಇತ್ತೀಚೆಗೆ ಚುನಾವಣಾ ಆಯೋಗದ ಪರ ವಕೀಲರನ್ನಾಗಿ ನೇಮಕ ಮಾಡಿರುವ ವಿಚಾರವನ್ನು ಬಹಿರಂಗಪಡಿಸದೆ ಪ್ರಕರಣದ ವಿಚಾರಣೆ ನಡೆಸಿದ್ದಾರೆ ಎಂದು ಭೂಷಣ್ ಆರೋಪಿಸಿದರು.

ಈ ಆಧಾರದ ಮೇಲೆ ಪ್ರಕರಣವನ್ನು ಮರುಪರಿಶೀಲನೆಗೆ ಒಳಪಡಿಸುವಂತೆ ಸಲ್ಲಿಸಲಾಗಿದ್ದ ಅರ್ಜಿಯನ್ನು ತುರ್ತಾಗಿ ವಿಚಾರಣೆಗೆ ಪಟ್ಟಿ ಮಾಡಲು ಶುಕ್ರವಾರ (ನವೆಂಬರ್ 20) ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ನಿರಾಕರಿಸಿದರು. ಈ ವಿಚಾರವನ್ನು ಸಂವಿಧಾನ ಪೀಠದ ಮುಂದೆ ಪ್ರಸ್ತಾಪಿಸಬಹುದು ಎಂದು ಅವರು ತಿಳಿಸಿದರು. ನ್ಯಾಯಮೂರ್ತಿ ಶರ್ಮಾ ಅವರು ನವೆಂಬರ್ 29ರಂದು ನಿವೃತ್ತರಾಗಲಿದ್ದಾರೆ.

ಲೋಕಸಭೆ ಸ್ಪೀಕರ್ ವಿರುದ್ಧ ವಾಗ್ದಾಳಿ, ಚುನಾವಣೆಯಲ್ಲಿ ಹಣಬಲದ ಪ್ರಾಬಲ್ಯದ ಆರೋಪ

ಲೋಕಸಭಾ ಸ್ಪೀಕರ್ ಓಂ ಬಿರ್ಲಾ ವಿರುದ್ಧವೂ ಪ್ರಶಾಂತ್ ಭೂಷಣ್ ತೀವ್ರ ವಾಗ್ದಾಳಿ ನಡೆಸಿದರು. ಅವರನ್ನು “ಸಂಪೂರ್ಣ ಅವಮಾನಕರ ವ್ಯಕ್ತಿ” ಎಂದು ಟೀಕಿಸಿದ ಅವರು, ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಸೇವಕರಂತೆ ಲೋಕಸಭೆಯನ್ನು ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.

ಕಾನೂನು ರಚನೆಯಲ್ಲಿ ನಾಗರಿಕರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಲು ಇರುವ ಏಕೈಕ ಮಾರ್ಗಗಳಾಗಬೇಕಿದ್ದ ಸಂಸದೀಯ ಸಮಿತಿಗಳನ್ನು ಕಳೆದ 12 ವರ್ಷಗಳಲ್ಲಿ ಬಹುತೇಕ ನಿಷ್ಕ್ರಿಯಗೊಳಿಸಲಾಗಿದೆ ಎಂದು ಅವರು ಹೇಳಿದರು. ಪ್ರಸ್ತುತ ಕೇವಲ ಶೇ.5ರಷ್ಟು ಮಸೂದೆಗಳನ್ನು ಮಾತ್ರ ಸಂಸದೀಯ ಸಮಿತಿಗಳ ಪರಿಶೀಲನೆಗೆ ಕಳುಹಿಸಲಾಗುತ್ತಿದೆ ಎಂದು ಆರೋಪಿಸಿದರು.

ಚುನಾವಣೆಯಲ್ಲಿ ಹಣಬಲವು ಉಳಿದೆಲ್ಲ ಅಂಶಗಳನ್ನು ಮೀರಿಸಿದೆ ಎಂದು ಭೂಷಣ್ ಅಭಿಪ್ರಾಯಪಟ್ಟರು. ಅಭ್ಯರ್ಥಿಗಳು ಚುನಾವಣೆಯಲ್ಲಿ ಖರ್ಚು ಮಾಡಬಹುದಾದ ಹಣಕ್ಕೆ ಕಾನೂನಿನ ಮೂಲಕ ಮಿತಿ ವಿಧಿಸಲಾಗಿದೆ. ಆದರೆ, ರಾಜಕೀಯ ಪಕ್ಷಗಳು ಖರ್ಚು ಮಾಡಬಹುದಾದ ಹಣಕ್ಕೆ ಯಾವುದೇ ಮಿತಿಯಿಲ್ಲ. ಹೀಗಾಗಿ ಅಭ್ಯರ್ಥಿಗಳ ಮೇಲಿನ ವೆಚ್ಚದ ಮಿತಿಯು ಅರ್ಥಹೀನವಾಗಿದೆ ಎಂದು ಅವರು ಹೇಳಿದರು.

2024ರಲ್ಲಿ ಚುನಾವಣಾ ಬಾಂಡ್ ಯೋಜನೆಯನ್ನು ರದ್ದುಗೊಳಿಸಿದ ಪ್ರಕರಣದಲ್ಲಿ ವಾದ ಮಂಡಿಸಿದ್ದ ಭೂಷಣ್, ಭಾರತೀಯ ಜನತಾ ಪಕ್ಷ (ಬಿಜೆಪಿ) ಅಧಿಕೃತವಾಗಿ ವರ್ಷಕ್ಕೆ 10,000 ಕೋಟಿ ರೂ.ಗೂ ಅಧಿಕ ದೇಣಿಗೆ ಸಂಗ್ರಹಿಸುತ್ತಿದೆ ಎಂದು ಆರೋಪಿಸಿದರು. ಇದರಲ್ಲಿ ಹೆಚ್ಚಿನ ಮೊತ್ತವು ಕಾರ್ಪೊರೇಟ್ ಸಂಸ್ಥೆಗಳಿಂದ ಬರುವ ಬಹುತೇಕ ಕಡ್ಡಾಯ ಸ್ವರೂಪದ ದೇಣಿಗೆಗಳಾಗಿವೆ ಎಂದು ಹೇಳಿದರು.

ಬಿಜೆಪಿ ಸರ್ಕಾರಗಳಿಂದ ಗುತ್ತಿಗೆಗಳನ್ನು ಪಡೆದ ಕಂಪನಿಗಳು ನಂತರ ಪಕ್ಷಕ್ಕೆ ದೊಡ್ಡ ಮೊತ್ತದ ದೇಣಿಗೆ ನೀಡುವಾಗ ತಮ್ಮ ವಿವರಗಳು ಬಹಿರಂಗವಾಗುವ ಆತಂಕ ಎದುರಿಸುತ್ತಿದ್ದವು. ಇಂತಹ ದೇಣಿಗೆಗಳನ್ನು ಅನಾಮಧೇಯವಾಗಿ ನೀಡಲು ಅವಕಾಶ ಕಲ್ಪಿಸುವ ಉದ್ದೇಶದಿಂದ ಚುನಾವಣಾ ಬಾಂಡ್‌ಗಳನ್ನು ಜಾರಿಗೆ ತರಲಾಗಿತ್ತು ಎಂದು ಭೂಷಣ್ ಆರೋಪಿಸಿದರು.

“ಇದು ಕಿಕ್‌ಬ್ಯಾಕ್‌ಗಳ ರೀತಿಯಲ್ಲಿದೆ ಎಂದು ಕಾಣುತ್ತದೆ. ಆದ್ದರಿಂದ, ದೇಣಿಗೆಗಳನ್ನು ಅನಾಮಧೇಯವಾಗಿ ನೀಡಲು ಅವಕಾಶ ಕಲ್ಪಿಸುವ ವ್ಯವಸ್ಥೆ ಬೇಕೆಂದು ಅವರು ಕೇಳಿಕೊಂಡರು. ಅದರ ಪರಿಣಾಮವಾಗಿ ಚುನಾವಣಾ ಬಾಂಡ್‌ಗಳನ್ನು ಜಾರಿಗೆ ತರಲಾಯಿತು” ಎಂದು ಅವರು ಹೇಳಿದರು.

ಇದೇ ವೇಳೆ, ಇವಿಎಂ ಬದಲಿಗೆ ಮತಪತ್ರಗಳ ಮೂಲಕ ಚುನಾವಣೆ ನಡೆಸಬೇಕೆಂಬ ಪ್ರತಿಪಕ್ಷಗಳ ಬೇಡಿಕೆಯನ್ನು ಅವರು ಸಮರ್ಥಿಸಿಕೊಂಡರು. ವಿವಿಪ್ಯಾಟ್ ಚೀಟಿಗಳಲ್ಲಿ ಕೇವಲ ಶೇ.2ರಷ್ಟನ್ನು ಮಾತ್ರ ಎಣಿಕೆ ಮಾಡಲಾಗುತ್ತಿದೆ ಎಂದು ಉಲ್ಲೇಖಿಸಿದ ಅವರು, ಮತಪತ್ರಗಳ ಬಳಕೆಗೆ ಪ್ರತಿಪಕ್ಷಗಳು ಒತ್ತಾಯಿಸುತ್ತಿರುವುದು ಸಂಪೂರ್ಣ ಸಮರ್ಥನೀಯ ಎಂದು ಹೇಳಿದರು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬಿಸ್ಲೆರಿ ವಿರುದ್ಧ FSSAI ಕ್ರಮ ಕೈಗೊಂಡಿದ್ದೇಕೆ? ಕುಡಿಯುವ ನೀರಿನಲ್ಲಿ ಪತ್ತೆಯಾದ ಕ್ಯಾನ್ಸರ್ ಕಾರಕ ಯಾವುದು?

ಲಕ್ಷಾಂತರ ಭಾರತೀಯರಿಗೆ ಬಿಸ್ಲೆರಿ (Bisleri) ನೀರಿನ ಬಾಟಲಿಯನ್ನು ಖರೀದಿಸುವುದು ಬಹುತೇಕ ಸಹಜ ಅಭ್ಯಾಸವಾಗಿದೆ. ರೈಲ್ವೆ, ವಿಮಾನ ನಿಲ್ದಾಣಗಳು, ರೆಸ್ಟೋರೆಂಟ್‌ಗಳು ಮತ್ತು ನೆರೆಹೊರೆಯ ಅಂಗಡಿಗಳಲ್ಲಿ ಈ ಚಿರಪರಿಚಿತ ಲೇಬಲ್ ಸುರಕ್ಷಿತ ಕುಡಿಯುವ ನೀರಿಗೆ ಪರ್ಯಾಯ...

ಸರ್ಕಾರಿ ಶಾಲೆಯಲ್ಲಿ ಜಾತಿ ತಾರತಮ್ಯದ ಆರೋಪ: ದಲಿತ ಲ್ಯಾಬ್ ಅಸಿಸ್ಟೆಂಟ್ ಮೇಜಿನ ಮೇಲೆ ಮಲ ಸುರಿದು ಕಿರುಕುಳ!

ತಮಿಳುನಾಡಿನ ಅರಿಯಲೂರು ಜಿಲ್ಲೆಯ ಜಯಂಕೊಂಡಂ ಸಮೀಪದ ಕೀಲವೆಲಿ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ದಲಿತ ಸಮುದಾಯಕ್ಕೆ ಸೇರಿದ ಪ್ರಯೋಗಾಲಯ ಸಹಾಯಕ (ಲ್ಯಾಬ್ ಅಸಿಸ್ಟೆಂಟ್) ಪಿ. ಕಣ್ಣದಾಸನ್ ಅವರ ಮೇಜಿನ ಮೇಲೆ ಕೆಲವು ಸಿಬ್ಬಂದಿ...

ಜೆಡಿಯು ವಿಲೀನಕ್ಕೆ ಬಿಜೆಪಿ ಏಜೆಂಟರಿಂದ ಸಂಚು; ನಿತೀಶ್ ಕುಮಾರ್ ಅವರನ್ನು ಸಾರ್ವಜನಿಕ ಕಾರ್ಯಕ್ರಮಗಳಿಂದ ದೂರವಿಡಲಾಗುತ್ತಿದೆ: ಪ್ರಶಾಂತ್ ಕಿಶೋರ್ ಆರೋಪ

ಪಾಟ್ನಾ: ಬಿಹಾರದಲ್ಲಿ ಆಡಳಿತಾರೂಢ ಜನತಾ ದಳ (ಯುನೈಟೆಡ್) ಅಥವಾ ಜೆಡಿಯು ಪಕ್ಷದೊಳಗೆ ಬಿಜೆಪಿ ಏಜೆಂಟರು ಕಾರ್ಯನಿರ್ವಹಿಸುತ್ತಿದ್ದು, ಪಕ್ಷವನ್ನು ಬಿಜೆಪಿಯೊಂದಿಗೆ ವಿಲೀನಗೊಳಿಸುವುದಕ್ಕೆ ವ್ಯವಸ್ಥಿತವಾಗಿ ದಾರಿ ಮಾಡಿಕೊಡುತ್ತಿದ್ದಾರೆ. ಈ ಉದ್ದೇಶದಿಂದಲೇ ಜೆಡಿಯು ರಾಷ್ಟ್ರೀಯ ಅಧ್ಯಕ್ಷ ನಿತೀಶ್...

ಕಣ್ಣೂರು ಸಿಪಿಐ(ಎಂ) ನಾಯಕನ ಕೊಲೆ ಪ್ರಕರಣ: ಮೂವರು ಬಿಜೆಪಿ-ಆರ್‌ಎಸ್‌ಎಸ್ ಕಾರ್ಯಕರ್ತರು ದೋಷಿಗಳು ಎಂದು ತೀರ್ಪು

ಕೇರಳದ ಕಣ್ಣೂರು ಜಿಲ್ಲೆಯ ಪಯ್ಯನ್ನೂರಿನಲ್ಲಿ 2016ರಲ್ಲಿ ನಡೆದ ಸಿಪಿಐ(ಎಂ) ನಾಯಕ ಸಿ.ವಿ. ಧನರಾಜ್ ಅವರ ಕೊಲೆ ಪ್ರಕರಣದಲ್ಲಿ ಮೂವರು ಬಿಜೆಪಿ-ಆರ್‌ಎಸ್‌ಎಸ್ ಕಾರ್ಯಕರ್ತರು ದೋಷಿಗಳು ಎಂದು ಸ್ಥಳೀಯ ನ್ಯಾಯಾಲಯ ಸೋಮವಾರ (ನವೆಂಬರ್ 23) ತೀರ್ಪು...

2024ರಲ್ಲಿ ಚಂದ್ರಬಾಬು ನಾಯ್ಡು ಗೆದ್ದ ಚುನಾವಣೆ | ಸಂಜೆ 6ರ ನಂತರದ ಮತದಾನದಲ್ಲಿ ಭಾರೀ ವ್ಯತ್ಯಾಸ; ತನಿಖೆ ನಡೆಸದ ಚುನಾವಣಾ ಆಯೋಗ

ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರ 2024ರ ಚುನಾವಣಾ ಗೆಲುವಿಗೆ ಸಾಕ್ಷಿಯಾದ ಚಿತ್ತೂರು ಲೋಕಸಭಾ ಕ್ಷೇತ್ರದ ಮತದಾನದ ಅಂಕಿಅಂಶಗಳಲ್ಲಿ ಭಾರೀ ವ್ಯತ್ಯಾಸ ಕಂಡುಬಂದಿರುವುದನ್ನು 'ದಿ ರಿಪೋರ್ಟರ್ಸ್ ಕಲೆಕ್ಟಿವ್' (The Reporters’ Collective)...

ಆಲೋಚನೆ, ಹಾಸ್ಯ – ಚರ್ಚೆಗೆ ಮುಕ್ತ ವೇದಿಕೆ: ‘ಕಾಕ್ರೋಚ್ ಕ್ಲಬ್’ ಆರಂಭಿಸಿದ ಸಿಜೆಪಿ

ದೇಶದಲ್ಲಿ ಬದಲಾವಣೆ ತರಲು ಯುವಜನರ ಶಕ್ತಿಯನ್ನು ವ್ಯವಸ್ಥಿತವಾಗಿ ಬಳಸಿಕೊಳ್ಳುವ ಉದ್ದೇಶದಿಂದ ರಾಜಕೀಯ ಮತ್ತು ವಿಡಂಬನಾತ್ಮಕ ಮುಕ್ತ ಚರ್ಚೆಗಳನ್ನು ಆಯೋಜಿಸಲು "ಕಾಕ್ರೋಚ್ ಕ್ಲಬ್" ಎಂಬ ಹೊಸ ಉಪಕ್ರಮವನ್ನು ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಆರಂಭಿಸಿದೆ...

ಖಲಿಸ್ತಾನಿ ಪ್ರತ್ಯೇಕತಾವಾದಿ ಪನ್ನುನ್ ಹತ್ಯೆಗೆ ಸಂಚು : ಭಾರತೀಯ ಪ್ರಜೆಗೆ 19 ವರ್ಷ ಜೈಲು ಶಿಕ್ಷೆ ವಿಧಿಸಿದ ಅಮೆರಿಕ ನ್ಯಾಯಾಲಯ

ಅಮೆರಿಕ ಮೂಲದ ಖಲಿಸ್ತಾನಿ ಪ್ರತ್ಯೇಕತಾವಾದಿ ನಾಯಕ ಗುರುಪತ್ವಂತ್ ಸಿಂಗ್ ಪನ್ನುನ್ ಅವರ ಹತ್ಯೆಗೆ ಸಂಚು ರೂಪಿಸಿದ ಪ್ರಕರಣದಲ್ಲಿ ಭಾರತೀಯ ಪ್ರಜೆ ನಿಖಿಲ್ ಗುಪ್ತಾ (55) ಅವರಿಗೆ ಅಮೆರಿಕದ ಫೆಡರಲ್ ನ್ಯಾಯಾಲಯವು 235 ತಿಂಗಳುಗಳ...

560 ದಿನಗಳ ಜೈಲುವಾಸದ ಬಳಿಕ ಪತ್ರಕರ್ತನ ವಿರುದ್ಧದ ಯುಎಪಿಎ ಆರೋಪ ಕೈಬಿಟ್ಟ ನ್ಯಾಯಾಲಯ

ಕೇರಳ ಮೂಲದ ಪತ್ರಕರ್ತ ರೆಜಾಜ್ ಎಂ. ಶೀಬಾ ಸಿದ್ದೀಕ್ ವಿರುದ್ಧ ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯ್ದೆ (ಯುಎಪಿಎ) ಅಡಿಯಲ್ಲಿ ದಾಖಲಿಸಲಾಗಿದ್ದ ಎರಡು ಆರೋಪಗಳಿಂದ ನಾಗಪುರದ ಸೆಷನ್ಸ್ ನ್ಯಾಯಾಲಯ ಅವರನ್ನು ಬಿಡುಗಡೆಗೊಳಿಸಿದೆ. ಈ ಪ್ರಕರಣದಲ್ಲಿ...

ಪತ್ರಕರ್ತರನ್ನು ವಶಕ್ಕೆ ಪಡೆದು ‘ಜನಸಂದಣಿ ನಿಯಂತ್ರಣ’ ಎಂದು ಸಮರ್ಥಿಸಿಕೊಳ್ಳಲಾಗದು: ದೆಹಲಿ ಪೊಲೀಸರ ಕ್ರಮಕ್ಕೆ ಸುಪ್ರೀಂ ಕೋರ್ಟ್‌ನಲ್ಲಿ ಮಹಿಳಾ ಪತ್ರಕರ್ತರ ಸಂಘದ ಆಕ್ಷೇಪ

ನವದೆಹಲಿ: ಪ್ರತಿಭಟನೆಗಳನ್ನು ವರದಿ ಮಾಡಲು ತೆರಳಿದ ಪತ್ರಕರ್ತರನ್ನು ಬಲವಂತವಾಗಿ ಸ್ಥಳದಿಂದ ಹೊರಗೆಳೆದು ಪೊಲೀಸ್ ವಾಹನಗಳಿಗೆ ತಳ್ಳುವುದು, ಅವರ ಚಲನವಲನಗಳಿಗೆ ನಿರ್ಬಂಧ ಹೇರುವುದು ಸೇರಿದಂತೆ ವೈಯಕ್ತಿಕ ಸ್ವಾತಂತ್ರ್ಯಕ್ಕೆ ಧಕ್ಕೆ ತರುವ ಕ್ರಮಗಳನ್ನು ಕೇವಲ ‘ಜನಸಂದಣಿ...

‘BJP Ka Beta, BJPberg’ : ಮೆಟಾ ವಿರುದ್ಧ ಯುವ ಕಾಂಗ್ರೆಸ್ ರಾಷ್ಟ್ರವ್ಯಾಪಿ ಅಭಿಯಾನ; ನಿರ್ಬಂಧಿತ ಖಾತೆ, ಪೋಸ್ಟ್‌ಗಳ ಮರುಸ್ಥಾಪನೆಗೆ 7 ದಿನಗಳ ಗಡುವು 

ವಿರೋಧ ಪಕ್ಷದ ನಾಯಕರು (ವಿಶೇಷವಾಗಿ ಕಾಂಗ್ರೆಸ್ ನಾಯಕರು), ಪತ್ರಕರ್ತರು ಮತ್ತು ಸಾಮಾಜಿಕ ಜಾಲತಾಣದ ಪ್ರಭಾವಿಗಳ (Influencers) ಖಾತೆಗಳನ್ನು ನಿರ್ಬಂಧಿಸಲಾಗುತ್ತಿದೆ ಎಂದು ಆರೋಪಿಸಿ, ಭಾರತೀಯ ಯುವ ಕಾಂಗ್ರೆಸ್ (ಐವೈಸಿ) ಟೆಕ್ ದೈತ್ಯ ‘ಮೆಟಾ’ (Meta)...