ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಸಂಬಂಧಿಸಿದ ಭಾರತದ ಸಂವಿಧಾನದ ವಿಧಿ 19 (1) ಭಾಗವು ಹೀಗಿದೆ:
19.ವಾಕ್ -ಸ್ವಾತಂತ್ರ್ಯ, ಮುಂತಾದವುಗಳ ಬಗ್ಗೆ ಕೆಲವು ಹಕ್ಕುಗಳ ಸಂರಕ್ಷಣೆ.-
(1) ಸಮಸ್ತ ನಾಗರಿಕರೂ-
(ಎ) ವಾಕ್ ಸ್ವಾತಂತ್ರ್ಯದ ಮತ್ತು ಅಭಿವ್ಯಕ್ತಿಸ್ವಾತಂತ್ರ್ಯದ;(ಬಿ) ಶಾಂತಿಯಿಂದ ಹಾಗೂ ನಿರಾಯುಧರಾಗಿ ಸಭೆ ಸೇರುವ;
(ಸಿ) ಸಂಸ್ಥೆಗಳನ್ನು ಅಥವಾ ಸಂಘಗಳನ್ನು [ಅಥವಾ ಸಹಕಾರ ಸಂಘಗಳನ್ನು] ರಚಿಸುವ;
(ಡಿ) ಭಾರತದ ರಾಜ್ಯಕ್ಷೇತ್ರದಲ್ಲಿ ಅಬಾಧಿತವಾಗಿ ಸರ್ವತ್ರ ಸಂಚಾರ ಮಾಡುವ;
ಹಕ್ಕನ್ನು ಹೊಂದಿರತಕ್ಕದ್ದು.
ಆದರೆ, 19ನೇ ವಿಧಿಯ 2ರಿಂದ6ನೇ ಭಾಗಗಳು 19(1) ಕೊಟ್ಟಿರುವ ಹಕ್ಕುಗಳ ಚಲಾವಣೆಯ ಮೇಲೆ ಪ್ರಭುತ್ವ ರಚಿಸುವ ಕಾನೂನುಗಳ ಮೂಲಕ ನಿರ್ಬಂಧನೆ ಮಾಡುವುದಕ್ಕೆ ಅವಕಾಶಗಳನ್ನು ನೀಡುತ್ತದೆ. ಸಂವಿಧಾನಿಕ ಹಕ್ಕನ್ನು ನಿರ್ಬಂಧಿಸುವ ತಿದ್ದುಪಡಿಗಳು 1951 ರಿಂದಲೇ ಆರಂಭವಾದವು ಮತ್ತೂ ಹೊಸ ಕಾನೂನು ಕಾಯ್ದೆಗಳು ಸೇರ್ಪಡೆ ಆಗುತ್ತಲೇ ಇವೆ. ಈ ನಿರ್ಬಂಧಗಳ ಉದ್ದೇಶವು : ಸಾರ್ವಜನಿಕರಿಗೆ ಆಗುವ ಅನಾನುಕೂಲ, ಶಾಂತಿ ಭಂಗ, ದೇಶದ ಆಂತರಿಕ ಮತ್ತು ಬಹಿರಂಗ ಅಭದ್ರತೆ ಸೃಷ್ಟಿ, ಮಿತ್ರ ರಾಷ್ಟ್ರಗಳ ಜೊತೆ ಮೈತ್ರಿಗೆ ಭಂಗ ಮುಂತಾದವುಗಳನ್ನು ತಡೆಯುವುದಕ್ಕೆ ಎಂದು ತಿದ್ದುಪಡಿಗಳು ಸಾರುತ್ತವೆ. ಆದರೆ, ಹಕ್ಕನ್ನು ಪ್ರಜೆಗಳು ಈ ಉದ್ದೇಶಗಳಿಗೆ ದುರ್ಬಳಕೆ ಮಾಡಿಕೊಳ್ಳುತ್ತಾರೆ ಎಂದು ಕಾಯ್ದೆಗಳನ್ನು ಮಾಡುವುದು ಪ್ರಭುತ್ವ ಹಾಗು ಆ ಕಾಯ್ದೆಗಳ ಸಂವಿಧಾನಿಕ ಸಾಚಾತನವನ್ನು ಪ್ರಶ್ನಿಸಿದಾಗ ತೀರ್ಪು ನೀಡುವುದು ನ್ಯಾಯಾಂಗ.
ಹೀಗಾಗಿ ತಮಗೆ ಕೊಡಲಾಗಿರುವ ಹಕ್ಕನ್ನು ಚಲಾಯಿಸಲು ಪ್ರಜೆಗಳು ಕಾಲಾನುಕಾಲಕ್ಕೆ ಕೋರ್ಟು ಕಟ್ಟೆ ಹತ್ತುವುದು, ಸಾರ್ವಜನಿಕ ಹೋರಾಟ ಮಾಡುವುದೂ ನಡೆಯುತ್ತಿದೆ. ಹಾಗೆಯೇ ಪ್ರಭುತ್ವ ಹಾಗು ನ್ಯಾಯಾಲಯಗಳು ಸಂವಿಧಾನಿಕ ನಿರ್ಬಂಧವನ್ನು ಮುಂದೆ ಮಾಡಿಕೊಂಡು ಹಕ್ಕುಗಳನ್ನು ಮೊಟಕುಗೊಳಿಸುವ ಕೆಲಸವನ್ನು ಮಾಡಿಕೊಂಡು ಬರುತ್ತಿವೆ. ಆದರೆ ಈ ಸೆಣಸಾಟವು ಎಲ್ಲ ಪ್ರಜೆಗಳಿಗೂ ಸಮಾನವಾಗಿ ಲಘುವಾಗುವುದಿಲ್ಲ. ಪ್ರಜೆಗಳು ಸಾಮಾಜಿಕವಾಗಿ ಅಧಿಕಾರಸ್ಥರಾಗಿದ್ದರೆ ಅವರ ಸಂವಿಧಾನಿಕ ಹಕ್ಕುಗಳ ಚಲಾವಣೆಯನ್ನು ಪ್ರಭುತ್ವ ಹಾಗು ನ್ಯಾಯಾಲಯಗಳು ನಿರಾಯಾಸವಾಗಿ ಮನ್ನಿಸುತ್ತವೆ. ಪ್ರಜೆಗಳು ಅಧಿಕಾರಹೀನರು, ಪ್ರಭುತ್ವದ ನೀತಿನಿಯಮಗಳನ್ನು ಪ್ರತಿರೋಧಿಸುವವರರೂ ಆಗಿದ್ದರೆ, ಅವರ ಹಕ್ಕುಗಳನ್ನು ಮೊಟಕು ಮಾಡಲು ಸಂವಿಧಾನದ ನಿರ್ಬಂಧ ನಿಯಮಗಳನ್ನು ಮುಂದೆ ಮಾಡುತ್ತವೆ. ಪ್ರಭುತ್ವದ ಅಧಿಕಾರವು ಯಾವುದೇ ರಾಜಕೀಯ ಪಕ್ಷದ ಕೈಯಲ್ಲಿದ್ದರೂ, 19ನೇ ವಿಧಿ ನೀಡಿರುವ ಹಕ್ಕುಗಳ ಚಲಾವಣೆಯ ವಿಷಯದಲ್ಲಿ ಈ ತಾರತಮ್ಯವು ಸಾಮಾನ್ಯ ಲಕ್ಷಣವೆಂಬಂತೆ ಆಗಿಬಿಟ್ಟಿದೆ.
ಸಂವಿಧಾನಿಕ ಹಕ್ಕನ್ನು ಅನಿರ್ಬಂಧಿತವಾಗಿ ನೀಡುವ ಅಥವ ನಿರ್ಬಂಧಿಸುವ ಇಂತಹ ಅಧಿಕಾರದಾಟಕ್ಕೆ ಕರ್ನಾಟಕದ ರಾಜಧಾನಿಯಾದ ಬೆಂಗಳೂರಿನಲ್ಲಿ ನಡೆಯುತ್ತಿರುವ ವಿದ್ಯಮಾನಗಳನ್ನು ಉದಾಹರಣೆಯಾಗಿ ನೋಡಬಹುದು. ಬೆಂಗಳೂರು ರಾಜಧಾನಿಯಾಗಿ ಇರುವುದರಿಂದ ಅಲ್ಲಿ ನಡೆಯುವ ಸಾರ್ವಜನಿಕ ಕಾರ್ಯಗಳು ರಾಜ್ಯ ಹಾಗು ದೇಶದ ಮಾಧ್ಯಮಗಳ ಗಮನವನ್ನು ಸೆಳೆಯುತ್ತವೆ. ಬೆಂಗಳೂರು ಕರ್ನಾಟಕ ರಾಜ್ಯದ ಶಾಸನ ಸಭೆಯ ಕೇಂದ್ರವಾಗಿ ಇರುವುದರಿಂದ, ಸರಕಾರ ಮಾಡುವ ಕಾನೂನು ಕಾಯ್ದೆಗಳಿಗೆ ಪ್ರಭಾವಶಾಲಿಯಾಗಿ ಪ್ರತಿಕ್ರಿಯಿಸಲು ಸಭೆಗಳನ್ನು ನಡೆಸಿ ಸರಕಾರದ ಗಮನ ಸೆಳೆಯುವುದಕ್ಕೆ ತಕ್ಕುದಾದ ಮಹಾನಗರವೂ ಆಗಿದೆ. ಹಾಗಾಗಿ ಬೆಂಗಳೂರಿನಲ್ಲಿ ಸಂವಿಧಾನದ 19(1)ನೇ ವಿಧಿಯು ನೀಡುವ ಹಕ್ಕಿನ ಚಲಾವಣೆ ಹಾಗು ನಿರ್ಬಂಧಗಳ ಸಂಗತಿಗಳು ಪ್ರಜೆಗಳ ಸಂವಿಧಾನಿಕ ಹಕ್ಕುಗಳ ವಿಷಯದಲ್ಲಿ ಪ್ರಭುತ್ವವು ಯಾವ ರೀತಿ ನಡೆದುಕೊಳ್ಳುತ್ತದೆ ಎಂಬುದಕ್ಕೆ ಮಾಪಕವೂ ಆಗಿದೆ.
2008 ರಲ್ಲಿ, ಬೆಂಗಳೂರು ನಗರದಲ್ಲಿ ಸಂಘಟಿತವಾಗುವ ಸಭೆ ಹಾಗು ಮೆರವಣಿಗೆಗಳ ನಿಯಂತ್ರಿಸುವ ಉದ್ದೇಶದಿಂದ, ಸಭೆ, ಮೆರವಣಿಗೆ ಆಯೋಜಿಸುವವರು ಸಂಬಂಧಿತ ನಗರ ಪೊಲೀಸು ಪ್ರಾಧಿಕಾರದಿಂದ ಪೂರ್ವ ಪರವಾನಗಿ ಪಡೆಯಬೇಕು ಎಂಬ ಕಾನೂನು ಆಜ್ಞೆ ಮಾಡಲಾಯಿತು. ಪರವಾನಗಿ ನೀಡುವುದು/ನೀಡದೇ ಇರುವುದು ಪೊಲೀಸು ಪ್ರಾಧಿಕಾರದ ನಿರ್ಧಾರವಾಗಿದ್ದು, ಅದು 19(2)-(6)ರ ಅನ್ವಯ ಯಾವುದೇ ಕಾರಣ ನೀಡಿ, ಪರವಾನಗಿ ನೀಡದಿರುವ ಅಧಿಕಾರವನ್ನು ಪ್ರಾಧಿಕಾರಕ್ಕೆ ನೀಡಲಾಗಿತ್ತು. 2019ರಲ್ಲಿ ಈ ಆಜ್ಞೆಯು ಸಂವಿಧಾನವು ಪ್ರಜೆಗಳಿಗೆ ನೀಡಿರುವ ಹಕ್ಕನ್ನು ಮೊಟಕು ಮಾಡುವಂತಹದಾಗಿದ್ದು, ಅದನ್ನು ರದ್ದು ಮಾಡಬೇಕು ಎಂದು ದಿವ್ಯಾ ಬಾಲಗೋಪಾಲ್ ಎಂಬುವವರು ಕರ್ನಾಕಟಕದ ಉಚ್ಚ ನ್ಯಾಯಾಲಯದಲ್ಲಿ ದಾವೆ ಹೂಡಿದರು. ಸಂವಿಧಾನವು 19(1)ರ ಅನ್ವಯ ಹಕ್ಕು ನೀಡಿರುವಾಗ ಅದಕ್ಕೆ ಪ್ರಾಧಿಕಾರದ ಪರವಾನಗಿ ಯಾಕೆ ಬೇಕು? 19(2)-(6)ವರೆಗಿನ ವಿಧಿಗಳು ಪರವಾನಗಿ ನಿರಾಕರಣೆಗೆ ಕಾರಣವಾಗಿದ್ದರೆ, ಸಂಘಟಕರು ಆ ಬಗೆಯ ಕಾನೂನು ಉಲ್ಲಂಘಿಸುವರು ಎಂಬ ಪೂರ್ವಯೋಜಿತ ನಿರ್ಧಾರವನ್ನು ಹೇಗೆ ಕೈಗೊಳ್ಳುತ್ತಾರೆ? ಎಂಬುದು ದಾವೆಯ ಮುಖ್ಯ ವಾದವಾಗಿತ್ತು. ಆದರೆ, ಕರ್ನಾಟಕದ ಉಚ್ಚ ನ್ಯಾಯಾಲಯವು ಸರಕಾರದ ಆಜ್ಞೆಯನ್ನು ಎತ್ತಿಹಿಡಿದು ದಾವೆಯನ್ನು ವಜಾ ಮಾಡಿತು.
ಇದಕ್ಕೆ ಮುಂದುವರಿಕೆಯಾಗಿ, 2021ರಲ್ಲಿ ಸರಕಾರವು ಬೆಂಗಳೂರು ನಗರದಲ್ಲಿ ನಡೆಸುವ ಪ್ರತಿಭಟನಾ ಸಭೆ ಹಾಗು ಮೆರವಣಿಗೆಗಳನ್ನು ಫ್ರೀಡಮ್ ಪಾರ್ಕಿನ ಆವರಣದ ಮಿತಿಯಲ್ಲಿ ಮಾತ್ರವೇ ನಡೆಸಬೇಕು ಎಂಬ ಆಜ್ಞೆ ಹೊರಡಿಸಿತು. ಈ ವಿಷಯಕ್ಕೆ ಸಂಬಂಧಿಸಿ ಪ್ರಜೆಗಳು ದಾವೆ ಹೂಡುವ ಮುನ್ನವೇ ಕರ್ನಾಟಕದ ಉಚ್ಚ ನ್ಯಾಯಾಲಯವು ಸ್ವಯಂ ವಿಚಾರಣೆ (ಸುವೋ ಮೋಟೋ) ನಡೆಸಿ, 2022 ಆಗಸ್ಟ್ 1ನೇ ದಿನಾಂಕದಿಂದ ಖಚಿತವಾಗಿ 2021ರ ಆಜ್ಞೆಯನ್ನು ಜ್ಯಾರಿ ಮಾಡಬೇಕೆಂದು ತೀರ್ಪು ಪ್ರಕಟಿಸಿತು. ಈ ಆಜ್ಞೆಯು ಪ್ರತಿಭಟನಾ ಪ್ರದರ್ಶನ ಹಾಗು ಮೆರವಣಿಗೆಗಳಿಗೆ ಸೀಮಿತವಾಗಿತ್ತೇ ಹೊರತು ಬೇರೆ ಸಾರ್ವಜನಿಕ ಸಭೆ, ಮೆರವಣಿಗೆಗಳಿಗೆ ಅಲ್ಲ ಎನ್ನುವುದು ಗಮನಾರ್ಹ.
2008ರಲ್ಲಿ ರಾಜ್ಯದಲ್ಲಿ ಬಿ.ಜೆ.ಪಿ.ಸರಕಾರವಿತ್ತು; 2013ರಲ್ಲಿ ಕಾಂಗ್ರೇಸ್ ಸರಕಾರ ಆಡಳಿತಕ್ಕೆ ಬಂತು; ಆದರೆ 2008ರ ಪೊಲೀಸು ಪ್ರಾಧಿಕಾರದ ಪರವಾನಗಿ ಹಾಗು ನಿಯಂತ್ರಣ ಆಜ್ಞೆಯು ಬದಲಾಗಲಿಲ್ಲ. 2019-2023ರವರೆಗೆ ಬಿ.ಜೆ.ಪಿ. ಆಡಳಿತದಲ್ಲಿತ್ತು, 2023ರಲ್ಲಿ ಕಾಂಗ್ರೇಸ್ ಸರಕಾರ ಮತ್ತೇ ಆಡಳಿತ ವಹಿಸಿಕೊಂಡಿತು. ಆದರೆ 2021ರ ಸರಕಾರದ ಆಜ್ಞೆಯು ರದ್ಧಾಗಲಿಲ್ಲ. ಇದರ ಫಲವಾಗಿ, 2023ರಿಂದ ನಿರಂತರವಾಗಿ, ಗಾಝದ ಪ್ರದೇಶದಲ್ಲಿ ಇಸ್ರೇಲ್ ನಡೆಸುತ್ತಿರುವ ಹತ್ಯಾಕಾಂಡವನ್ನು ಪ್ರತಿಭಟಿಸುವ ಸಾರ್ವಜನಿಕ ಪ್ರದರ್ಶನ ಹಾಗು ಸಭೆಗಳನ್ನು ಸರಕಾರವು ನಡೆಯಲು ಬಿಡಲಿಲ್ಲ. 2026 ರಲ್ಲಿ SIR ವಿರುದ್ಧ ನಡೆದ ಪ್ರತಿಭಟನೆಗಳು ಫ್ರೀಡಮ್ ಪಾರ್ಕಿನ ಮಿತಿ ದಾಟಿದವೆಂಬ ಕಾರಣಕ್ಕೆ ಪ್ರತಿಭಟನಾಕಾರರ ಮೇಲೆ ಕಾನೂನು ಉಲ್ಲಂಘನೆಯ ಕ್ರಮ ಜರುಗಿಸಲಾಯಿತು. ಆದರೆ, ಮುಖ್ಯಮಂತ್ರಿಗಳು ಮಂತ್ರಿಗಳು ಶಾಸಕರು SIR ಸಂಬಂಧ ಫ್ರೀಡಮ್ ಪಾರ್ಕಿನ ಮಿತಿಯಾಚೆ ಪ್ರದರ್ಶನ ನಡೆಸಿದಾಗ, ಅದಕ್ಕೆ ಯಾವುದೇ ಕಾನೂನು ಅಡ್ಡಿಯಾಗಲಿಲ್ಲ.
2025ರಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘವು ತನ್ನ ಶತಮಾನೋತ್ಸವ ಆಚರಣೆ ಪ್ರಯುಕ್ತ ಪಥಸಂಚಲನ ಘೋಷಿಸಿದಾಗ, ಸಚಿವ ಪ್ರಿಯಾಂಕ ಖರ್ಗೆ ಅವರು ಸಂಘದ ಅಸಂವಿಧಾನಿಕ ಕಾರ್ಯಾಚರಣೆಗಳ ಕುರಿತು ಸಕಾರಣವಾದ ಪ್ರಶ್ನೆಗಳನ್ನು ಬಹಿರಂಗವಾಗಿ ಪ್ರಕಟಿಸಿದರು. ಸಿದ್ಧರಾಮಯ್ಯನವರ ಸರಕಾರವು ಸಾರ್ವಜನಿಕ ಪ್ರದೇಶಗಳಾದ ರಸ್ತೆ, ಮೈದಾನ, ಉದ್ಯಾನವನಗಳಲ್ಲಿ ಪರವಾನಗಿ ರಹಿತಸಭೆ, ಮೆರವಣಿಗೆಗಳನ್ನು ನಿರ್ಬಂಧಿಸುವ ಆಜ್ಞೆ ಹೊರಡಿಸಿತು. ಆ ಆಜ್ಞೆಯು ರಾ.ಸ್ವ.ಸಂ.ದ ಕಾರ್ಯಕ್ರಮಕ್ಕೆ ನಿರ್ದಿಷ್ಟವಾಗಿರಲಿಲ್ಲವಾದರೂ, ಸರಕಾರವು ಸಂಘವನ್ನು ಮಟ್ಟ ಹಾಕಲೆಂದೇ ಈ ಆಜ್ಞೆ ಹೊರಡಿಸಿದೆ ಎಂಬಂತೆ ಪ್ರಚಾರ ನಡೆಯಿತು. ಈ ಆಜ್ಞೆಯನ್ನು ತಡೆಹಿಡಿಯಬೇಕು ಎಂದು ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ದಾವೆ ಹೂಡಿದ ತಕ್ಷಣವೇ, ಉಚ್ಚ ನ್ಯಾಯಾಲಯವು ಈ ಆಜ್ಞೆಯು ಸಂವಿಧಾನದ 19(1)ಕ್ಕೆ ವ್ಯತಿರಿಕ್ತವಾಗಿದೆ ಎಂದು ಅದಕ್ಕೆ ತಡೆ ನೀಡಿತು. ಸಂಘದ ಮೆರವಣಿಗೆಗಳು ಸಾಂಗವಾಗಿ ನಡೆದವು. 2026ರಲ್ಲಿ ಡಿ.ಕೆ.ಶಿವಕುಮಾರ್ ಸರಕಾರದಲ್ಲಿ ಗೃಹಮಂತ್ರಿ ಸ್ಥಾನ ಪಡೆದ ಪ್ರಿಯಾಂಕ ಖರ್ಗೆಯವರು, ರಾ.ಸ್ವ.ಸಂ.ವು ತನ್ನ ವಿಜಯದಶಮಿ ಪಥಸಂಚಲನ ನಡೆಸಲು ಕಾನೂನು ರೀತ್ಯಾ ಪರವಾನಗಿಗೆ ಅರ್ಜಿ ಸಲ್ಲಿಸಿ, ಪರವಾನಗಿ ಪಡೆಯದೆ ಕಾರ್ಯಕ್ರಮ ನಡೆಸುವುದಕ್ಕೆ ಅವಕಾಶ ಕೊಡುವುದಿಲ್ಲ ಎಂಬ ಬಹಿರಂಗ ಹೇಳಿಕೆಗಳು ಮತ್ತೊಮ್ಮೆ ಪ್ರಾಮುಖ್ಯತೆ ಪಡೆದವು. ಆದರೆ, ಬೆಂಗಳೂರು ನಗರದಲ್ಲಿ ಮೂರು ನಾಲ್ಕು ಕಡೆ ಸಂಘದ ಪಥಸಂಚಲನಕ್ಕೆ ಯಾವ ಅಡ್ಡಿಯೂ ಇಲ್ಲದೆ ಪರವಾನಗಿ ನೀಡಲಾಯಿತು.
ಇದು ರಾ.ಸ್ವ.ಸಂ.ಕ್ಕೆ ಪರವಾನಗಿ ನೀಡಿದ್ದು ಸರಿಯೋ ತಪ್ಪೋ ಎಂಬ ಸರಳ ಪ್ರಶ್ನೆಯಲ್ಲ. ಸರಕಾರದ ಆಜ್ಞೆಗಳು ರಾಜ್ಯ ಅಥವಾ ಕೇಂದ್ರದ ಒಕ್ಕೂಟ ಸರಕಾರಗಳ ನೀತಿ -ನಿಯಮ -ಕಾಯ್ದೆ – ಕಾನೂನುಗಳನ್ನು ಪ್ರಶ್ನಿಸಿ ಪ್ರತಿಭಟಿಸುವ ಸಭೆ ಮೆರವಣಿಗೆಗಳನ್ನು ನಿರ್ಬಂಧಿಸುವುದಕ್ಕೆ ಮಾತ್ರವೇ ಲಘುವಾಗುವುದು ಯಾಕೆ? ನ್ಯಾಯಾಲಯಗಳು ಸಾರ್ವಜನಿಕರ ಸಂಚಾರ, ಶಾಂತಿಯುತ ಬದುಕಿಗೆ ಎರವಾಗುತ್ತವೆ ಎಂಬ ಕಾರಣ ನೀಡಿ ಪ್ರತಿಭಟನೆಗಳ ನಿರ್ಬಂಧವನ್ನು ಎತ್ತಿ ಹಿಡಿಯುವುದಾದರೆ, ಉಳಿದ ಸಭೆ ಮೆರವಣಿಗೆಗಳು ಇದಕ್ಕೆ ಹೊರತಾಗಿ ಇರುತ್ತವೆಯೆ? 19(2)-(6)ರ ವರೆಗಿನ ವಿಧಿಗಳು ಪಟ್ಟಿ ಮಾಡುವ ನಿರ್ಬಂಧನೆಗೆ ಕಾರಣಗಳನ್ನು ಮುಚ್ಚುಮರೆ ಇಲ್ಲದೇ ಪ್ರಜಾತಾಂತ್ರಿಕ ವಿಧಾನಗಳಲ್ಲಿ ಪ್ರಭುತ್ವದ ಧೋರಣೆಗಳನ್ನು ಪ್ರಶ್ನಿಸುವ ಪ್ರತಿರೋಧಿ ಪ್ರದರ್ಶನ ಮೆರವಣಿಗೆ ಆಯೋಜಿಸುವವರ ಮೇಲೆ ಮಾತ್ರವೇ ಪೂರ್ವ ನಿರ್ಧಾರಿತವಾಗಿ ಆರೋಪಿಸುವುದಕ್ಕೆ ಯಾವುದೇ ಪುರಾವೆ ಸಹಿತವಾದ ಆಧಾರಗಳು ಇವೆಯೇ? ಬೇರೆ ಬಗೆಯ ಸಭೆ ಮೆರವಣಿಗೆಗಳ ಆಯೋಜಕರ ಆಶಯ-ಉದ್ದೇಶಗಳು ಸಂವಿಧಾನ ಶುದ್ಧವಾಗಿ ಇರುವುದು ಸಹಜ ಎಂದು ಭಾವಿಸಿ ಅಡ್ಡಿ ಮಾಡದೆ ಅನುಮತಿಯನ್ನು ಏಕೆ ನೀಡಲಾಗುತ್ತದೆ?- ಇಂತಹ ಸಾಮಾಜಿಕ-ರಾಜಕೀಯ ಪ್ರಶ್ನೆಗಳಿಗೆ ಸರಕಾರಗಳಾಗಲೀ, ನ್ಯಾಯಾಲಯಗಳಾಗಲೀ ಇದುವರೆವಿಗೂ ಖಚಿತವಾದ ಉತ್ತರಗಳನ್ನು ನೀಡಿಲ್ಲ. ಸಾಲುಸಾಲು ನಿದರ್ಶನಗಳ ಆಧಾರದಲ್ಲಿ ಹೇಳಬಹುದಾದರೆ: ಸಂವಿಧಾನದ 19ನೇ ವಿಧಿಯು ಪ್ರಜಾತಂತ್ರದ ರಕ್ಷಣೆಗೆ ಪ್ರಜೆಗಳು ಬಳಸಬಹುದಾದ ಶಕ್ತ ಸಾಧನವಾಗುವುದು ಅಧಿಕಾರಸ್ತ ವರ್ಗಗಳ ಹಿತ ಕಾಪಾಡುವ ಪ್ರಭುತ್ವಕ್ಕೆ ಅಪಾಯಕಾರಿಯಾಗಿ ಕಾಣುತ್ತಿದೆ; 19(1)ನ್ನು ಕೈದು ಮಾಡುವುದು ಪ್ರಜಾತಂತ್ರ ವ್ಯವಸ್ಥೆಯನ್ನು ಬುಡಮೇಲುಗೊಳಿಸುವ ಕುಕೃತ್ಯವಾಗುತ್ತದೆ; ಹೀಗಾಗಿ 19(1)ನ್ನು ದುರ್ಬಲಗೊಳಿಸುವ ಕೆಲಸವನ್ನು ನಿರ್ಬಂದ ಕಾಯ್ದೆಗಳ ಮೂಲಕ ಸಾಧಿಸುವ ತಂತ್ರ ಅನುಸರಿಸಲಾಗುತ್ತಿದೆ. ಇದು ತಟ್ಟೆಯಲ್ಲಿ ಊಟವಿಟ್ಟು, ಕೈಬಾಯಿ ಕಟ್ಟಿ ಉಣ್ಣಲು ಎಲ್ಲರೂ ಸ್ವತಂತ್ರರು ಎಂದಂತೆ! ಪ್ರಜಾಪ್ರಭುತ್ವದ ಮುಖವಾಡ ಹಿಂದೆ ಸರ್ವಾಧಿಕಾರ ಅಡಗಿಕೊಳ್ಳುವ ವರಸೆ ಇದು.
ಭಾರತದ ವಸಾಹತುಶಾಹಿ ವಿರೋಧಿ ಹೋರಾಟವು ಬರೀ ಬ್ರಿಟೀಷ್ ವಸಾಹತುಶಾಹಿಯ ವಿರುದ್ಧದ ಹೋರಾಟ ಮಾತ್ರವಾಗಿರದೆ, ನಮ್ಮ ಊರು ಕೇರಿ ಸಂಪನ್ಮೂಲಗಳನ್ನು ತಮ್ಮ ವಸಾಹತು ಮಾಡಿಕೊಂಡಿದ್ದ ಮೇಲ್ಜಾತಿ ಮೇಲ್ವರ್ಗಗಳ ಆಂತರಿಕ ವಸಾಹತುಶಾಹಿಯನ್ನು ಕೊನೆಗೊಳಿಸುವ ಹೋರಾಟವೂ ಆಗಿತ್ತು. ಊರು ಕೇರಿ ಸಂಪನ್ಮೂಲಗಳು ಜಾತಿ-ಮತ-ಲಿಂಗ-ವರ್ಗ ಭೇದಗಳಿಲ್ಲದೆ ಭಾರತದ ಎಲ್ಲ ಪ್ರಜೆಗಳಿಗೂ ಸಮಾನ ವಾರಸುದಾರಿಕೆ ವಹಿಸುವ ಸಲುವಾಗಿಯೇ ಸಂವಿಧಾನಿಕ ಪ್ರಜಾಪ್ರಭುತ್ವ ವ್ಯವಸ್ಥೆಯ ಸ್ಥಾಪನೆಯನ್ನು ಜನರು ಬೆಂಬಲಿಸಿದರು. ‘ಸಾರ್ವಜನಿಕ’ ಎಂದರೆ ಎಲ್ಲ ಜನರಿಗೂ ಸೇರಿದ್ದು ಎಂದರ್ಥ. ಸಾರ್ವಜನಿಕವಾದ ಸಕಲ ಸಂಪನ್ಮೂಲಗಳನ್ನು ಅಧಿಕಾರಸ್ತ ಜಾತಿ-ಮತ-ಲಿಂಗ-ವರ್ಗಗಳು ಮರಳಿ ಸ್ವಾಮ್ಯಕ್ಕೆ ಪಡೆಯದಂತೆ, ಸಕಲ ಜನರ ಅನುಭೋಗಕ್ಕೆ ತಕ್ಕುನಾಗಿ ನಿರ್ವಹಿಸುವಂತೆ ಕಾರ್ಯವೆಸಗುವುದು ಸರಕಾರದ ಜವಾಬ್ದಾರಿ. ಆದರೆ ಸರಕಾರವೇ ತನ್ನ ಸಂವಿಧಾನಿಕ ನೇಮಕದ ಉದ್ದೇಶಕ್ಕೆ ವಿರುದ್ಧವಾಗಿ ‘ಸಾರ್ವಜನಿಕ ಸಂಪನ್ಮೂಲಗಳ ಅನುಭೋಗ’ವನ್ನು ಅಧಿಕಾರಸ್ಥರ ಹಿತಾಸಕ್ತಿಗೆ ಅನುಗುಣವಾಗಿ ನಿಯಂತ್ರಿಸುವುದು ’ಮರು ಆಂತರಿಕ ವಸಾಹತೀಕರಣ’ ವಾಗಿದೆ. ಇಂತಹ ಕ್ರಮಗಳ ವಿರುದ್ಧ ಜನರನ್ನು ಸಂಘಟಿಸಿ, ಊರುಕೇರಿಗಳ ಸ್ವಾಮ್ಯವನ್ನು ಅಧಿಕಾರಹೀನ ಜನಸಮುದಾಯಗಳಿಗೆ ಮರಳಿ ಪಡೆಯುವ ಹೋರಾಟವು ಅನಿವಾರ್ಯವಾಗಿದೆ.
ಈ ಅರಿವಿನಿಂದ, ಬೆಂಗಳೂರಿನ ಜನ ಸಂಘಟನೆಗಳು ನಾಗರಿಕರು ಒಟ್ಟಾಗಿ ‘ಮುಕ್ತ ಸಾರ್ವಜನಿಕ ಪ್ರದರ್ಶನದ ಹಕ್ಕಿಗಾಗಿ ಆಂದೋಲನ’ ಎಂಬ ವೇದಿಕೆ ಅಡಿ ಕೂಡಿ, ಕರ್ನಾಟಕ ಸರಕಾರವು 2021ರಲ್ಲಿ ಹೊರಡಿಸಿದ ಆಜ್ಞೆಯನ್ನು ‘ಸಂವಿಧಾನ ದಿನ’ವಾದ ನವೆಂಬರ್ 26ರ ಒಳಗೆ ಹಿಂಪಡೆಯಬೇಕು ಎಂಬ ಆಗ್ರಹವನ್ನು ಇಟ್ಟಿದ್ದಾರೆ. ಇದು ಬರಿ ಬೆಂಗಳೂರು ನಗರಕ್ಕೆ ಸೀಮಿತವಾಗಿರುವ ಸಂಗತಿ ಆಗಿರದೇ ರಾಜ್ಯದ ಪ್ರತಿ ಊರುಕೇರಿಗಳ ಜನಸ್ವಾಮ್ಯದ ವಿಷಯವಾಗಿದೆ. ರಾಜ್ಯದ ಪ್ರತಿ ಊರುಗಳ ಜನರೂ ಈ ಆಂದೋಲನಕ್ಕೆ ಬೆಂಬಲ ನೀಡಿ, 2021ರ ಆಜ್ಞೆಯ ರದ್ದತಿಗೆ ದನಿಗೂಡಿಸಬೇಕಾಗಿದೆ.
ಊರು ಯಾರದು? ಕೇರಿ ಯಾರದು?
- Advertisement -
- Advertisement -
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ


