ನವದೆಹಲಿ: ಕೇಂದ್ರ ಸರ್ಕಾರದ ಕ್ಷೇತ್ರ ಪುನರ್ವಿಂಗಡಣೆ ಪ್ರಸ್ತಾಪದ ವಿರುದ್ಧ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಕಾಂಗ್ರೆಸ್ ನಾಯಕ ಹಾಗೂ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಭಾರತದ ಪ್ರಜಾಪ್ರಭುತ್ವದ ಕೊಲೆಯಾಗುತ್ತಿದೆ, ದಯವಿಟ್ಟು ಎದ್ದೇಳಿ ಎಂದು ದೇಶದ ಎಲ್ಲ ರಾಜಕೀಯ ಪಕ್ಷಗಳಿಗೆ ಕರೆ ನೀಡಿದ್ದಾರೆ. ಕಾಂಗ್ರೆಸ್ನ ಮಿತ್ರಪಕ್ಷಗಳು ಮಾತ್ರವಲ್ಲದೆ, ಬಿಜೆಪಿ ನೇತೃತ್ವದ ಎನ್ಡಿಎ ಮೈತ್ರಿಕೂಟದ ಪಾಲುದಾರ ಪಕ್ಷಗಳೂ ಈ ವಿಚಾರದಲ್ಲಿ ತಮ್ಮ ನಿಲುವು ಸ್ಪಷ್ಟಪಡಿಸಬೇಕು. ಪ್ರಜಾಪ್ರಭುತ್ವವನ್ನು ಯಾರು ರಕ್ಷಿಸುತ್ತಿದ್ದಾರೆ, ಯಾರು ರಕ್ಷಿಸುತ್ತಿಲ್ಲ ಎಂಬುದು ಈ ಹೋರಾಟದಲ್ಲಿ ಬಹಿರಂಗವಾಗಲಿದೆ ಎಂದು ಅವರು ಹೇಳಿದ್ದಾರೆ.
ಶನಿವಾರ ನವದೆಹಲಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರಾಹುಲ್ ಗಾಂಧಿ, ಕ್ಷೇತ್ರ ಪುನರ್ವಿಂಗಡಣೆ ಸಂಬಂಧಿತ ಸಂವಿಧಾನ ತಿದ್ದುಪಡಿ ಮಸೂದೆಯ ವಿರುದ್ಧದ ಹೋರಾಟವನ್ನು ಪ್ರಜಾಪ್ರಭುತ್ವದ ಅಸ್ತಿತ್ವಕ್ಕಾಗಿ ನಡೆಯುತ್ತಿರುವ ಹೋರಾಟ ಎಂದು ಬಣ್ಣಿಸಿದ್ದಾರೆ. “ಇದು ಪ್ರಜಾಪ್ರಭುತ್ವದ ಹೃದಯಕ್ಕಾಗಿ ನಡೆಯುತ್ತಿರುವ ಹೋರಾಟ. ಇದಕ್ಕಿಂತ ಕಡಿಮೆ ಮಹತ್ವದ ಹೋರಾಟವಲ್ಲ. ಈ ಹೋರಾಟದಲ್ಲಿ ಪ್ರಜಾಪ್ರಭುತ್ವದ ಪರವಾಗಿ ಯಾರು ಇದ್ದಾರೆ, ಅದನ್ನು ರಕ್ಷಿಸುತ್ತಿರುವವರು ಯಾರು ಮತ್ತು ರಕ್ಷಿಸುತ್ತಿಲ್ಲದವರು ಯಾರು ಎಂಬುದು ಬಹಳ ಸ್ಪಷ್ಟವಾಗಲಿದೆ” ಎಂದು ಹೇಳಿದ್ದಾರೆ.
ಡಿಎಂಕೆಯಂತಹ INDIA ಮೈತ್ರಿಕೂಟದ ಪಕ್ಷಗಳು ಕ್ಷೇತ್ರ ಪುನರ್ವಿಂಗಡಣೆ ಸಂಬಂಧಿತ ಸಂವಿಧಾನ ತಿದ್ದುಪಡಿ ಮಸೂದೆಗೆ ಬೆಂಬಲ ಸೂಚಿಸಿರುವ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ಈ ಹೇಳಿಕೆ ನೀಡಿದ್ದಾರೆ. ಮೈತ್ರಿಕೂಟದ ಭಾಗವಾಗಿರುವ ಶರದ್ ಪವಾರ್ ನೇತೃತ್ವದ ಎನ್ಸಿಪಿ (ಎಸ್ಪಿ) ಕೂಡ ಮಸೂದೆಯನ್ನು ಬೆಂಬಲಿಸುವ ಸಾಧ್ಯತೆಯಿದೆ ಎಂಬ ಚರ್ಚೆಗಳ ನಡುವೆಯೇ ಅವರು ಪ್ರತಿಕ್ರಿಯಿಸಿದ್ದಾರೆ. ಎನ್ಸಿಪಿ (ಎಸ್ಪಿ) ಮಸೂದೆಯನ್ನು ಬೆಂಬಲಿಸಿದರೂ INDIA ಮೈತ್ರಿಕೂಟದೊಂದಿಗಿನ ಅದರ ಸಂಬಂಧದಲ್ಲಿ ಬದಲಾವಣೆಯಾಗುವುದಿಲ್ಲ ಎಂದು ರಾಹುಲ್ ಗಾಂಧಿ ಸ್ಪಷ್ಟಪಡಿಸಿದ್ದಾರೆ.
ತಮ್ಮ ಸಂದೇಶವನ್ನು ವಿರೋಧ ಪಕ್ಷಗಳ ಮಿತ್ರಪಕ್ಷಗಳಿಗೆ ಮಾತ್ರ ಸೀಮಿತಗೊಳಿಸದ ಅವರು, ತೆಲುಗು ದೇಶಂ ಪಕ್ಷದ ನಾಯಕ ಚಂದ್ರಬಾಬು ನಾಯ್ಡು ಮತ್ತು ವೈಎಸ್ಆರ್ಸಿಪಿ ನಾಯಕ ಜಗನ್ ಮೋಹನ್ ರೆಡ್ಡಿ ಸೇರಿದಂತೆ ಬಿಜೆಪಿ ನೇತೃತ್ವದ ಎನ್ಡಿಎಗೆ ಬೆಂಬಲ ನೀಡುವ ರಾಜಕೀಯ ನಾಯಕರಿಗೂ ಮನವಿ ಮಾಡಿದ್ದಾರೆ. “ನಮ್ಮ ಎಲ್ಲ ಪಾಲುದಾರರು ಮಾತ್ರವಲ್ಲದೆ, ಚಂದ್ರಬಾಬು ನಾಯ್ಡು ಮತ್ತು ಜಗನ್ ಮೋಹನ್ ರೆಡ್ಡಿಯಂತಹ ನಾಯಕರೂ ಭಾರತದ ಬಗ್ಗೆ ಯೋಚಿಸಬೇಕು. ಪ್ರಜಾಪ್ರಭುತ್ವವನ್ನು ರಕ್ಷಿಸಬೇಕು ಮತ್ತು ಈ ಅಪರಾಧಿಗಳ ವಿರುದ್ಧ ಹೋರಾಡಬೇಕು” ಎಂದು ಮನವಿ ಮಾಡಿದ್ದಾರೆ.
ಚುನಾವಣಾ ಅಕ್ರಮಗಳ ಕುರಿತು ತಾವು ಮಾಡುತ್ತಿರುವ ‘ಮತ ಚೋರಿ’ ಆರೋಪವನ್ನೂ ಪ್ರಸ್ತಾಪಿಸಿದ ರಾಹುಲ್ ಗಾಂಧಿ, ಕೇಂದ್ರ ಸರ್ಕಾರದ ಕ್ಷೇತ್ರ ಪುನರ್ವಿಂಗಡಣೆ ಪ್ರಸ್ತಾಪವನ್ನು ಟೀಕಿಸಿದ್ದಾರೆ. “ಅಂತಿಮವಾಗಿ ನಾವು ಗೆಲ್ಲುತ್ತೇವೆ. ಅವರು ಮತಗಳ್ಳತನ ಮಾಡುತ್ತಾರೆಯೇ, ಕ್ಷೇತ್ರ ಪುನರ್ವಿಂಗಡಣೆ ಮಾಡುತ್ತಾರೆಯೇ, ಲೋಕಸಭೆಯ ಸ್ಥಾನಗಳನ್ನು 850ಕ್ಕೆ ಹೆಚ್ಚಿಸುತ್ತಾರೆಯೇ ಎಂಬುದು ಮುಖ್ಯವಲ್ಲ. ಒಂದು ದಿನ ಅವರು ಸೋಲುತ್ತಾರೆ. ತಮ್ಮ ಸೋಲನ್ನು ಎಷ್ಟು ವಿಳಂಬ ಮಾಡುತ್ತಾರೋ, ಅಷ್ಟು ದೊಡ್ಡ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಜನರಲ್ಲಿನ ಆಕ್ರೋಶ ಹೆಚ್ಚುತ್ತಿದೆ” ಎಂದು ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ದೇಶದಲ್ಲಿ ತಮ್ಮ ಸರ್ಕಾರದ ವಿರುದ್ಧ ಹೆಚ್ಚುತ್ತಿರುವ ಅಸಮಾಧಾನವನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ. ಪ್ರಧಾನಿ ತಮ್ಮ ಕೋಣೆಯಲ್ಲಿ ಹೊಗಳುಭಟ್ಟ ಅಧಿಕಾರಿಗಳ ನಡುವೆ ಇರುವುದರಿಂದ ಜನರ ನೈಜ ಭಾವನೆಗಳು ಅವರಿಗೆ ತಲುಪುತ್ತಿಲ್ಲ ಎಂದು ಟೀಕಿಸಿದ್ದಾರೆ. “ಜನರು ರಸ್ತೆಯಲ್ಲಿ ನನ್ನನ್ನು ತಡೆದು ನಿಲ್ಲಿಸಿ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸುತ್ತಾರೆ. ಆದರೆ ಮೋದಿಯವರಿಗೆ ದೇಶದಲ್ಲಿ ಏನು ನಡೆಯುತ್ತಿದೆ ಎಂಬುದು ಅರ್ಥವಾಗುತ್ತಿಲ್ಲ. ಅವರು ಚುನಾವಣೆಗಳನ್ನು ತಿರುಚಬಹುದು, ಲೋಕಸಭೆಯ ಸ್ಥಾನಗಳನ್ನು 850ಕ್ಕೆ ಹೆಚ್ಚಿಸಬಹುದು. ಆದರೆ ಅದರಿಂದ ಜನರ ಆಕ್ರೋಶವನ್ನು ತಡೆಯಲು ಸಾಧ್ಯವಿಲ್ಲ” ಎಂದು ಹೇಳಿದ್ದಾರೆ.
ಮಸೂದೆಯ ಉದ್ದೇಶದ ಕುರಿತು ಮಾತನಾಡಿದ ಅವರು, ಇದು ಕೇವಲ ಲೋಕಸಭಾ ಸ್ಥಾನಗಳ ಸಂಖ್ಯೆಯನ್ನು 850ಕ್ಕೆ ಹೆಚ್ಚಿಸುವ ಅಥವಾ ರಾಜ್ಯಗಳಿಗೆ ಸಿಗುವ ಪ್ರಾತಿನಿಧ್ಯದ ಪಾಲಿನ ವಿಚಾರವಲ್ಲ ಎಂದಿದ್ದಾರೆ. ಅದಾನಿ ,ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಮತ್ತು ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ಅವರಿಗೆ ಯಾವುದೇ ಕ್ಷೇತ್ರವನ್ನು ತಮಗೆ ಬೇಕಾದಂತೆ ಮರುವಿಂಗಡಿಸಲು ಖಾಲಿ ಚೆಕ್ ನೀಡುವ ಪ್ರಯತ್ನ ಇದಾಗಿದೆ ಎಂದು ಆರೋಪಿಸಿದ್ದಾರೆ. ತಮ್ಮ ಮೈತ್ರಿಕೂಟದ ಬಹುತೇಕ ಸದಸ್ಯರು ಈ ವಿಚಾರದಲ್ಲಿ ಒಗ್ಗಟ್ಟಿನ ನಿಲುವು ಹೊಂದಿದ್ದಾರೆ. ಆದರೆ ಕೆಲವು ಪಕ್ಷಗಳು ಭಿನ್ನ ನಿಲುವು ತಳೆದಿವೆ ಎಂದೂ ತಿಳಿಸಿದ್ದಾರೆ.
“ನಾನು ಈ ಮನವಿಯನ್ನು INDIA ಮೈತ್ರಿಕೂಟದ ನಾಯಕರಿಗೆ ಮಾತ್ರ ಮಾಡುತ್ತಿಲ್ಲ. ಜಗನ್ಜಿ, ನಾಯ್ಡುಜಿ ಮತ್ತು ಬಿಜೆಪಿಯ ಮಿತ್ರಪಕ್ಷಗಳಿಗೂ ಹೇಳುತ್ತಿದ್ದೇನೆ. ಭಾರತದ ಪ್ರಜಾಪ್ರಭುತ್ವದ ಕೊಲೆಯಾಗುತ್ತಿದೆ. ದಯವಿಟ್ಟು ಎದ್ದೇಳಿ” ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಇದಕ್ಕೂ ಮೊದಲು ಬಿಜೆಪಿ ದೇಶವನ್ನು ಸರ್ವಾಧಿಕಾರದತ್ತ ಕೊಂಡೊಯ್ಯುತ್ತಿದೆ ಎಂದು ಆರೋಪಿಸಿದ್ದ ಅವರು, ಲೋಕಸಭೆಯ ಸದಸ್ಯಬಲವನ್ನು 850ಕ್ಕೆ ಹೆಚ್ಚಿಸುವ ಕೇಂದ್ರದ ಪ್ರಸ್ತಾಪವನ್ನು ಭಾರತೀಯ ಪ್ರಜಾಪ್ರಭುತ್ವದ ಕೊಲೆ ಎಂದು ಕರೆದಿದ್ದರು. ಕ್ಷೇತ್ರ ಪುನರ್ವಿಂಗಡಣೆ ಮತ್ತು ಮಹಿಳಾ ಮೀಸಲಾತಿ ಜಾರಿಗೆ ಸಂಬಂಧಿಸಿದ ಸಂವಿಧಾನ ತಿದ್ದುಪಡಿ ಮಸೂದೆಯನ್ನು ಸಂಸತ್ತಿನಲ್ಲಿ ಒಗ್ಗಟ್ಟಿನಿಂದ ವಿರೋಧಿಸಲು INDIA ಮೈತ್ರಿಕೂಟ ಶನಿವಾರ ನಿರ್ಧರಿಸಿತ್ತು. ಈ ಪ್ರಸ್ತಾಪದಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಹಿತಾಸಕ್ತಿಗಳಿಗೆ ಹಾನಿಯಾಗಲಿದೆ ಎಂಬುದು ಪ್ರತಿಪಕ್ಷಗಳ ಆಕ್ಷೇಪವಾಗಿದೆ.
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕೂಡ ಮಸೂದೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಅವರ ಇತ್ತೀಚಿನ ಜನಸಂಖ್ಯೆಗೆ ಅನುಗುಣವಾಗಿ ಲೋಕಸಭೆಯಲ್ಲಿ ಹೆಚ್ಚಿನ ಪ್ರಾತಿನಿಧ್ಯ ಕಲ್ಪಿಸುವ ಉದ್ದೇಶ ಮಸೂದೆಯಲ್ಲಿ ಇಲ್ಲ ಎಂದು ಹೇಳಿದ್ದಾರೆ.
ಕೇಂದ್ರ ಸರ್ಕಾರದ ಪ್ರಸ್ತಾಪದ ಪ್ರಕಾರ, ಪ್ರತಿ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಲೋಕಸಭಾ ಸ್ಥಾನಗಳ ಸಂಖ್ಯೆಯನ್ನು ಶೇ 50ರಷ್ಟು ಹೆಚ್ಚಿಸುವ ಮೂಲಕ ಮಹಿಳೆಯರಿಗೆ ಮೂರನೇ ಒಂದು ಭಾಗದಷ್ಟು ಮೀಸಲಾತಿ ಜಾರಿಗೆ ತರಲು ಉದ್ದೇಶಿಸಲಾಗಿದೆ. ಪರಿಷ್ಕೃತ ಸ್ಥಾನ ಹಂಚಿಕೆಯನ್ನು 2051ರವರೆಗೆ ಸ್ಥಗಿತಗೊಳಿಸುವ ಪ್ರಸ್ತಾಪವೂ ಇದರಲ್ಲಿದೆ. ಸಂವಿಧಾನದ 132ನೇ ತಿದ್ದುಪಡಿ ಮಸೂದೆ, 2026ರ ಮೂಲಕ ಲೋಕಸಭೆಯ ಗರಿಷ್ಠ ಸದಸ್ಯಬಲವನ್ನು 850ಕ್ಕೆ ಹೆಚ್ಚಿಸಲು ಉದ್ದೇಶಿಸಲಾಗಿದ್ದು, ಇದರಲ್ಲಿ ರಾಜ್ಯಗಳಿಂದ 815 ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ 35 ಸದಸ್ಯರು ಇರಲಿದ್ದಾರೆ. ರಾಜ್ಯ ವಿಧಾನಸಭೆಗಳ ಗರಿಷ್ಠ ಸದಸ್ಯಬಲದ ಮಿತಿಯನ್ನು 500ರಿಂದ 650ಕ್ಕೆ ಹೆಚ್ಚಿಸುವ ಪ್ರಸ್ತಾಪವೂ ಮಸೂದೆಯಲ್ಲಿದೆ.
ಈ ಮಸೂದೆಯನ್ನು ಮಂಡಿಸಲು ಕೇಂದ್ರ ಸರ್ಕಾರ ಸಂಸತ್ತಿನ ವಿಶೇಷ ಅಧಿವೇಶನ ಕರೆದಿದೆ. ನವೆಂಬರ್ 30ರಂದು ಲೋಕಸಭೆ ಮತ್ತು ಡಿಸೆಂಬರ್ 2ರಂದು ರಾಜ್ಯಸಭೆ ಸಭೆ ಸೇರಲಿದ್ದು, ಸರ್ಕಾರದ ಕಾರ್ಯಕಲಾಪಗಳ ಅಗತ್ಯಕ್ಕೆ ಅನುಗುಣವಾಗಿ ಡಿಸೆಂಬರ್ 3ರಂದು ಅಧಿವೇಶನ ಮುಕ್ತಾಯಗೊಳ್ಳುವ ಸಾಧ್ಯತೆಯಿದೆ.


