Homeಮುಖಪುಟಶಾಶ್ವತವಾಗಿ ಅಧಿಕಾರ ಉಳಿಸಿಕೊಳ್ಳಲು ಬಿಜೆಪಿಯಿಂದ '800 ಪಾರ್' ಗುರಿ ; SC/ST ಸಮುದಾಯಕ್ಕೆ ಅನ್ಯಾಯ :...

ಶಾಶ್ವತವಾಗಿ ಅಧಿಕಾರ ಉಳಿಸಿಕೊಳ್ಳಲು ಬಿಜೆಪಿಯಿಂದ ‘800 ಪಾರ್’ ಗುರಿ ; SC/ST ಸಮುದಾಯಕ್ಕೆ ಅನ್ಯಾಯ : ಕ್ಷೇತ್ರ ಪುನರ್ವಿಂಗಡಣೆ ಮಸೂದೆ ಬಗ್ಗೆ ಖರ್ಗೆ ಕಳವಳ

- Advertisement -
- Advertisement -

ಶನಿವಾರ (ನ.28) ತಮ್ಮ ನಿವಾಸದಲ್ಲಿ ‘ಇಂಡಿಯಾ’ ಮೈತ್ರಿಕೂಟದ ಸದನ ನಾಯಕರ ಸಭೆಯ ನಂತರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ನರೇಂದ್ರ ಮೋದಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಪ್ರಸ್ತಾವಿತ ಕ್ಷೇತ್ರ ಪುನರ್ವಿಂಗಡಣೆ ಮಸೂದೆಯು ಪ್ರಜಾಪ್ರಭುತ್ವಕ್ಕೆ ಅಪಾಯಕಾರಿಯಾಗಿದೆ ಎಂದ ಅವರು, ಅಧಿಕಾರವನ್ನು ಶಾಶ್ವತವಾಗಿ ತಮ್ಮ ಕೈಯಲ್ಲೇ ಉಳಿಸಿಕೊಳ್ಳಲು ಬಿಜೆಪಿ ಈಗ “800 ಪಾರ್ (800ಕ್ಕೂ ಹೆಚ್ಚು)” ಗುರಿಯನ್ನು ಬೆನ್ನಟ್ಟಿದೆ ಎಂದು ಆರೋಪಿಸಿದ್ದಾರೆ.

ಹೊಸ ಜನಗಣತಿಯು ಎಸ್‌ಸಿ ಮತ್ತು ಎಸ್‌ಟಿ ಸ್ಥಾನಗಳ ಸಂಖ್ಯೆಯನ್ನು ಹೆಚ್ಚಿಸಲಿದೆ ಎಂದಿರುವ ಖರ್ಗೆ ಅವರು, ಕ್ಷೇತ್ರ ಪುನರ್ವಿಂಗಡಣೆ ಪ್ರಕ್ರಿಯೆಯ ಜಾತಿ ಆಯಾಮದ ಬಗ್ಗೆಯೂ ಕಳವಳ ವ್ಯಕ್ತಪಡಿಸಿದ್ದಾರೆ. ಮಸೂದೆಯಲ್ಲಿ ಪರಿಶಿಷ್ಟರ ಮೀಸಲು ಸ್ಥಾನಗಳ ಬಗ್ಗೆ ಯಾವುದೇ ವಿಷಯ ಉಲ್ಲೇಖಿಸಿಲ್ಲ ಎಂದಿದ್ದಾರೆ.

ಮಸೂದೆಯ ಪರಿಷ್ಕೃತ ಪ್ರಸ್ತಾವನೆಗಳಿಗೆ ಬೆಂಬಲ ಸೂಚಿಸಿರುವ ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಶರದ್‌ಚಂದ್ರ ಪವಾರ್) ನಾಯಕಿ ಸುಪ್ರಿಯಾ ಸುಳೆ ಸಭೆಯಲ್ಲಿ ಭಾಗವಹಿಸಿಲ್ಲ ಎಂದು ವರದಿಯಾಗಿದೆ. ನ. 30ರಿಂದ ಆರಂಭವಾಗಲಿರುವ ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಮಸೂದೆ ಮಂಡನೆಯಾಗಲಿದೆ.

“ಮೋದಿ ಸರ್ಕಾರ ಮಂಡಿಸುತ್ತಿರುವ ಸಂವಿಧಾನ ತಿದ್ದುಪಡಿ ಮಸೂದೆಯು ಪ್ರಜಾಪ್ರಭುತ್ವಕ್ಕೆ ಗಂಭೀರ ಬೆದರಿಕೆಯಾಗಿದೆ ಎಂಬುವುದು ನಮ್ಮ ಇಂಡಿಯಾ ಮೈತ್ರಿಕೂಟದ ಎಲ್ಲಾ ನಾಯಕರ ಒಗ್ಗಟ್ಟಿನ ನಿಲುವಾಗಿದೆ. ಪ್ರಜಾಪ್ರಭುತ್ವವನ್ನು ನಾಶಮಾಡಿ ಸಂಪೂರ್ಣ ಅಧಿಕಾರವನ್ನು ಕೇಂದ್ರೀಕರಿಸುವ ಪ್ರಯತ್ನದಲ್ಲಿ, ಅವರು ಈಗ ‘800 ಪಾರ್’ ಗುರಿ ಇಟ್ಟುಕೊಂಡಿದ್ದಾರೆ. ಈ ಹಿಂದೆ ಚುನಾವಣೆಯಲ್ಲಿ ‘400 ಪಾರ್’ ಗುರಿ ಇಟ್ಟುಕೊಂಡಿದ್ದರು – ಆ ಗುರಿ ಹಾದಿತಪ್ಪಿ ಹೋಯಿತು. ಈಗ ಸ್ಥಾನಗಳ ಸಂಖ್ಯೆಯನ್ನು 850ಕ್ಕೆ ಹೆಚ್ಚಿಸುವ ಮೂಲಕ, ಅನಿರ್ದಿಷ್ಟ ಅವಧಿಗೆ ಅಧಿಕಾರವನ್ನು ವಶಪಡಿಸಿಕೊಳ್ಳಲು ಮತ್ತು ಉಳಿಸಿಕೊಳ್ಳಲು ಅವರು ಹೊರಟಿದ್ದಾರೆ” ಎಂದು ಖರ್ಗೆ ಹೇಳಿದ್ದಾರೆ.

ಅಲ್ಲದೆ, ದೊಡ್ಡ ಸದನವು ಆಡಳಿತ ಪಕ್ಷಕ್ಕೆ ಸಂವಿಧಾನವನ್ನು ಪುನಃ ಬರೆಯುವ ಸಂಖ್ಯಾಬಲ ನೀಡಬಹುದು ಎಂದು ಖರ್ಗೆ ಒತ್ತಿ ಹೇಳಿದ್ದಾರೆ. “ಬಹುಮತ ರೂಪಿಸುವ ಮೂಲಕ ಅವರು ಪ್ರಜಾಪ್ರಭುತ್ವವನ್ನೂ ಕೊನೆಗೊಳಿಸುತ್ತಾರೆ; ಈ ಸರ್ಕಾರವು ಶಾಶ್ವತವಾಗಿ ಆರ್‌ಎಸ್‌ಎಸ್ ಮತ್ತು ಬಿಜೆಪಿ ಕೈಯಲ್ಲಿ ಉಳಿಯುತ್ತದೆ ಮತ್ತು ಮನುಸ್ಮೃತಿ ಜಾರಿಯಾಗುತ್ತದೆ. ಇದನ್ನು ನೀವು ಖಚಿತವೆಂದು ಪರಿಗಣಿಸಬೇಕು” ಎಂದಿದ್ದಾರೆ.

ಮೂರು ಬೇಡಿಕೆಗಳು

ಸಭೆಯ ನಂತರ, ಇಂಡಿಯಾ ಮೈತ್ರಿಕೂಟವು ಮೂರು ಬೇಡಿಕೆಗಳನ್ನು ಮುಂದಿಟ್ಟಿದೆ. ಲೋಕಸಭೆಯ ಪ್ರಸ್ತುತ ಬಲವನ್ನು ಯಥಾಸ್ಥಿತಿಯಲ್ಲಿ ಉಳಿಸಿಕೊಳ್ಳಬೇಕು, ಲೋಕಸಭೆಯ ಪ್ರಸ್ತುತ ಬಲದ ಆಧಾರದ ಮೇಲೆ ಮಹಿಳಾ ಮೀಸಲಾತಿಯನ್ನು ಒದಗಿಸಬೇಕು ಮತ್ತು ಲೋಕಸಭೆಯಲ್ಲಿ ರಾಜ್ಯಗಳ ನಡುವಿನ ಪ್ರಸ್ತುತ ಸ್ಥಾನ ಹಂಚಿಕೆಯನ್ನು ಮುಂದಿನ 25 ವರ್ಷಗಳವರೆಗೆ ಉಳಿಸಿಕೊಳ್ಳಬೇಕು ಎಂದು ಆಗ್ರಹಿಸಿದೆ.

ಎಸ್‌ಸಿ/ಎಸ್‌ಟಿ ಸ್ಥಾನಗಳು ಮತ್ತು ಜನಗಣತಿ

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಲೋಕಸಭೆಯಲ್ಲಿ ಮೀಸಲಿರುವ ಸ್ಥಾನಗಳಿಗೆ ಸಂಬಂಧಿಸಿದ 330ನೇ ವಿಧಿಯನ್ನು ಉಲ್ಲೇಖಿಸಿದ ಮಲ್ಲಿಕಾರ್ಜುನ ಖರ್ಗೆಯವರು, ಎಸ್‌ಸಿ/ಎಸ್‌ಟಿ ಸ್ಥಾನಗಳ ಸಂಖ್ಯೆ ಹೆಚ್ಚಾಗಬೇಕು, ಆದರೆ ಈ ಮಸೂದೆಯಲ್ಲಿ ಅಂತಹ ಯಾವುದೇ ಅವಕಾಶವಿಲ್ಲ ಎಂದಿದ್ದಾರೆ. “ಇಲ್ಲಿನ ಎರಡನೇ ವಿಷಯವೆಂದರೆ..ಎಸ್‌ಸಿ ಮತ್ತು ಎಸ್‌ಟಿಗಳ, ಅಂದರೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಹಿತಾಸಕ್ತಿಗಳನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಅವರಿಗೆ ಅನ್ಯಾಯ ಮಾಡಲಾಗಿದೆ” ಎಂದು ಹೇಳಿದ್ದಾರೆ.

2026ರಲ್ಲಿ ನಡೆಯಬೇಕಿರುವ ಜನಗಣತಿಯ ಕುರಿತು ಸರ್ಕಾರದ ಮೌನವನ್ನೂ ಖರ್ಗೆ ಪ್ರಶ್ನಿಸಿದ್ದಾರೆ. ಎಸ್‌ಸಿ ಮತ್ತು ಎಸ್‌ಟಿ ಜನಸಂಖ್ಯೆ ಬೆಳೆದಿದೆ. ಹಾಗಾಗಿ, ಹೊಸ ಜನಗಣತಿಯನ್ನು ಬಳಸುವುದರಿಂದ ಮೀಸಲು ಸ್ಥಾನಗಳ ಸಂಖ್ಯೆ ಹೆಚ್ಚಾಗುತ್ತದೆ ಎಂದು ವಾದಿಸಿದ್ದಾರೆ.

“2026ರ ಜನಗಣತಿ ದತ್ತಾಂಶ ಬಿಡುಗಡೆಯಾಗಬೇಕಿದೆ. ಅದರ ಬಗ್ಗೆ ಅವರು ಏನನ್ನೂ ಹೇಳಿಲ್ಲ. ಇತ್ತೀಚಿನ ಜನಗಣತಿಯ ಆಧಾರದ ಮೇಲೆ ಹಂಚಿಕೆಯನ್ನು ಪ್ರಕಟಿಸಿದರೆ, ಸಹಜವಾಗಿಯೇ ಎಸ್‌ಸಿ ಮತ್ತು ಎಸ್‌ಟಿ ಜನಸಂಖ್ಯೆ ಹೆಚ್ಚಾಗಿರುವುದರಿಂದ, ತಮ್ಮ ಜನಸಂಖ್ಯೆಗೆ ಅನುಗುಣವಾಗಿ ಅವರಿಗೆ ಹೆಚ್ಚಿನ ಸ್ಥಾನಗಳು ಸಿಗುತ್ತವೆ” ಎಂದು ಖರ್ಗೆ ಹೇಳಿದ್ದಾರೆ.

“ಆದಾಗ್ಯೂ, ಎಸ್‌ಸಿ ಮತ್ತು ಎಸ್‌ಟಿಗಳಿಗೆ ತಮ್ಮ ನ್ಯಾಯಯುತ ಪಾಲು ಸಿಗದಂತೆ ನೋಡಿಕೊಳ್ಳಲು ಮತ್ತು ಈಗ ತಮಗೆ ಅನುಕೂಲಕರವಾದದ್ದನ್ನು ತ್ವರಿತವಾಗಿ ಜಾರಿಗೆ ತರಲು ಅವರು ಬಯಸುತ್ತಿದ್ದಾರೆ. ಅವರ ತಿದ್ದುಪಡಿಯಿಂದ ಇದು ಸ್ಪಷ್ಟವಾಗಿರುವಂತೆ, ಅದನ್ನೇ ಅನುಸರಿಸಲಾಗುತ್ತಿದೆ” ಎಂದು ಖರ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.

ಕೇಂದ್ರದ ಯೋಜನೆಯ ಪ್ರಕಾರ, ಕ್ಷೇತ್ರಗಳ ಪುನರ್ವಿಂಗಡಣೆ ಮತ್ತು ಎಸ್‌ಸಿ/ಎಸ್‌ಟಿ ಸ್ಥಾನಗಳನ್ನು ನಿಗದಿಪಡಿಸಲು 2011ರ ಜನಗಣತಿಯನ್ನು ಬಳಸಲಾಗುತ್ತದೆ, ಆದರೆ ರಾಜ್ಯಗಳ ನಡುವೆ ಸ್ಥಾನಗಳನ್ನು ಹಂಚಲು 1971ರ ಜನಸಂಖ್ಯೆಯ ಆಧಾರವು 2051ರವರೆಗೆ ಜಾರಿಯಲ್ಲಿರುತ್ತದೆ.

ಚುನಾವಣಾ ಆಯೋಗದ ವಿರುದ್ಧ ಖರ್ಗೆ ವಾಗ್ದಾಳಿ

ಕ್ಷೇತ್ರ ಪುನರ್ವಿಂಗಡಣೆ ಜವಾಬ್ದಾರಿಯನ್ನು ಚುನಾವಣಾ ಆಯೋಗಕ್ಕೆ (ಇಸಿ) ನೀಡುವುದಕ್ಕೂ ಖರ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಮತದಾರರ ಪಟ್ಟಿಯಿಂದ 10 ಕೋಟಿಗೂ ಹೆಚ್ಚು ಜನರನ್ನು ತೆಗೆದುಹಾಕಿರುವ ಅದೇ ಕಳಂಕಿತ ಚುನಾವಣಾ ಆಯೋಗಕ್ಕೆ ಕ್ಷೇತ್ರ ಪುನರ್ವಿಂಗಡಣೆಯ ಜವಾಬ್ದಾರಿಯನ್ನು ನೀಡಲಾಗುತ್ತಿದೆ. ಇದು ಸಂಪೂರ್ಣವಾಗಿ ಸ್ವೀಕಾರಾರ್ಹವಲ್ಲ ಎಂದು ಹೇಳಿದ್ದಾರೆ.

ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ಆರೋಪಿಯಂತೆ ಕಟಕಟೆಯಲ್ಲಿ ನಿಂತಿದ್ದಾರೆ ಎಂದು ಖರ್ಗೆ ತಿಳಿಸಿದ್ದಾರೆ. ಕ್ಷೇತ್ರ ಪುನರ್ವಿಂಗಡಣೆಯನ್ನು ತಿರುಚಬಹುದು ಎಂದು ಎಚ್ಚರಿಸಿದ ಅವರು, “ಮತ ಕಳ್ಳತನಕ್ಕೆ ಸಂಬಂಧಿಸಿದ ನಿರ್ದೇಶನಗಳು ಇಲ್ಲಿಂದ ನೇರವಾಗಿ ಸಿಇಸಿ ಕಚೇರಿಗೆ ಹೋದಾಗ, ಕ್ಷೇತ್ರ ಪುನರ್ವಿಂಗಡಣೆ ಸಮಯದಲ್ಲಿ ಅವರು ಏನು ಬೇಕಾದರೂ ತಿರುಚಬಹುದು” ಎಂದಿದ್ದಾರೆ.

ಆಡಳಿತ ಪಕ್ಷಕ್ಕೆ ಅನುಕೂಲವಾಗುವಂತೆ ಗಡಿಗಳು ಮತ್ತು ಮೀಸಲಾತಿ ಸ್ಥಾನಮಾನವನ್ನು ಮರುರೂಪಿಸಲಾಗಿದೆ ಎನ್ನಲಾದ ಸ್ಥಳಗಳಾಗಿ ಅಸ್ಸಾಂ ಮತ್ತು ಜಮ್ಮು ಮತ್ತು ಕಾಶ್ಮೀರವನ್ನು ಅವರು ಉಲ್ಲೇಖಿಸಿದ್ದಾರೆ.

ಸಮಯದ ಬಗ್ಗೆ ಮಾತನಾಡಿದ ಖರ್ಗೆ, ತಮ್ಮ ಸಂಖ್ಯಾಬಲ ಖಚಿತವಾಗುವವರೆಗೆ ಸರ್ಕಾರ ಕಾದು ಕುಳಿತಿತ್ತು. ಕಳೆದ ಬಾರಿ ಅವರು ಆ ಮಸೂದೆಯನ್ನು ತಂದಾಗ ವಿಫಲರಾದರು. ಏಪ್ರಿಲ್‌ನಲ್ಲಿ ಅದು ತಿರಸ್ಕೃತವಾಯಿತು. ಆದ್ದರಿಂದ ಈಗ ಅವರು ಇಂತಹ ಅದ್ಭುತಗಳನ್ನು ಮಾಡಿದ್ದಾರೆ. ಟಿಎಂಸಿ [ತೃಣಮೂಲ ಕಾಂಗ್ರೆಸ್] ಒಡೆಯುವುದು, ನಂತರ ಎನ್‌ಸಿಪಿ-ಎಸ್‌ಪಿ ಒಡೆಯುವುದು, ಶಿವಸೇನೆ ಒಡೆಯುವುದು – ಎಲ್ಲರನ್ನೂ ಒಡೆದು ಬೇರ್ಪಡಿಸಿ, ತಮ್ಮ ಸಂಖ್ಯೆ ಬರುವವರೆಗೆ ಸುಮ್ಮನೆ ಕುಳಿತಿರುವುದು ಎಂದು ತಿಳಿಸಿದ್ದಾರೆ.

ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಸಭೆಯಲ್ಲಿ ಉಪಸ್ಥಿತರಿದ್ದರು, ಅವರೊಂದಿಗೆ ಕಾಂಗ್ರೆಸ್ ನಾಯಕರಾದ ಪವನ್ ಖೇರಾ, ಕೆ.ಸಿ. ವೇಣುಗೋಪಾಲ್, ಸೈಯದ್ ನಾಸಿರ್ ಹುಸೇನ್, ಪ್ರಮೋದ್ ತಿವಾರಿ ಮತ್ತು ಗೌರವ್ ಗೊಗೊಯ್ ಇದ್ದರು. ಟಿಎಂಸಿಯನ್ನು ಅಭಿಷೇಕ್ ಬ್ಯಾನರ್ಜಿ ಮತ್ತು ಡೆರೆಕ್ ಒ’ಬ್ರಿಯಾನ್ ಪ್ರತಿನಿಧಿಸಿದ್ದರು. ಇತರ ಉಪಸ್ಥಿತರಿದ್ದವರಲ್ಲಿ ಎ. ರಹೀಮ್ (ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ)), ಎನ್.ಕೆ. ಪ್ರೇಮಚಂದ್ರನ್ (ರಾಷ್ಟ್ರೀಯ ಸಮಾಜ ಪಕ್ಷ), ಚೌಧರಿ ಮೊಹಮ್ಮದ್ ರಂಜಾನ್ (ನ್ಯಾಷನಲ್ ಕಾನ್ಫರೆನ್ಸ್), ಅಭಯ್ ಕುಶ್ವಾಹ ಮತ್ತು ಮನೋಜ್ ಝಾ (ರಾಷ್ಟ್ರೀಯ ಜನತಾ ದಳ), ರಾಮ್‌ಜಿ ಲಾಲ್ ಸುಮನ್ (ಸಮಾಜವಾದಿ ಪಕ್ಷ), ಇ.ಟಿ. ಮೊಹಮ್ಮದ್ ಬಶೀರ್ (ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್), ಅರವಿಂದ್ ಸಾವಂತ್ (ಶಿವಸೇನೆ-ಯುಬಿಟಿ), ಪಿ. ಸಂತೋಷ್ (ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ) ಮತ್ತು ಸ್ವತಂತ್ರ ಸಂಸದ ಕಪಿಲ್ ಸಿಬಲ್ ಸೇರಿದ್ದಾರೆ. ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ)ದ ಬೈದ್ಯನಾಥ್ ರಾಮ್ ಆನ್‌ಲೈನ್ ಮೂಲಕ ಭಾಗವಹಿಸಿದ್ದರು. ವಿದುತಲೈ ಚಿರುತೈಗಲ್ ಕಚ್ಚಿ (ವಿಸಿಕೆ) ನಾಯಕರೊಬ್ಬರು ತಮ್ಮ ಮನೆಯಲ್ಲಿ ಮದುವೆ ಇದ್ದ ಕಾರಣ ಸಭೆಗೆ ಗೈರಾಗಿದ್ದರು.

ಇಬ್ಬರು ನಾಯಕರು/ಪಕ್ಷಗಳು ಗಮನಾರ್ಹವಾಗಿ ಗೈರಾಗಿದ್ದರು. ಪರಿಷ್ಕೃತ ಪ್ರಸ್ತಾವನೆಗಳನ್ನು ಬೆಂಬಲಿಸುವುದಾಗಿ ಈಗಾಗಲೇ ಹೇಳಿರುವ ಎನ್‌ಸಿಪಿ(ಎಸ್‌ಪಿ) ಪರವಾಗಿ ಸುಳೆ ಹಾಜರಾಗಿರಲಿಲ್ಲ. ಮಸೂದೆಯನ್ನು ಬೆಂಬಲಿಸುವುದಾಗಿ ದಿನದ ಆರಂಭದಲ್ಲಿ ಘೋಷಿಸಿದ ನಂತರ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಕೂಡ ದೂರ ಉಳಿದಿತ್ತು.

“ಡಿಎಂಕೆ ಅಧ್ಯಕ್ಷ ಎಂ.ಕೆ. ಸ್ಟಾಲಿನ್ ಅಧ್ಯಕ್ಷತೆಯಲ್ಲಿ ನಡೆದ ಸಂಸದೀಯ ಪಕ್ಷದ ಸಭೆಯಲ್ಲಿ ವಿವರವಾದ ಚರ್ಚೆಯ ನಂತರ, ರಾಷ್ಟ್ರ ಮತ್ತು ತಮಿಳುನಾಡಿನ ಹಿತದೃಷ್ಟಿಯಿಂದ ನಾವು ದೃಢ ನಿರ್ಧಾರ ತೆಗೆದುಕೊಂಡಿದ್ದೇವೆ. ಎಲ್ಲಾ ರಾಜ್ಯಗಳಲ್ಲಿ ಸಂಸತ್ತಿನ ಸ್ಥಾನಗಳ ಸಂಖ್ಯೆಯನ್ನು ಶೇ. 50ರಷ್ಟು ಹೆಚ್ಚಿಸುವ ಪ್ರಸ್ತಾವನೆಯನ್ನು ಬೆಂಬಲಿಸಲು ಡಿಎಂಕೆ ನಿರ್ಣಯಿಸಿದೆ” ಎಂದು ಡಿಎಂಕೆ ಸಂಸದ ಎ. ರಾಜಾ ಹೇಳಿದ್ದಾರೆ.

ಸ್ಟಾಲಿನ್ ನಿವಾಸದಲ್ಲಿ ನಡೆದ ಸಭೆಯ ನಂತರ ಪಕ್ಷವು ನಿರ್ಣಯವನ್ನೂ ಅಂಗೀಕರಿಸಿದೆ. “ತಮಿಳುನಾಡಿನ ಪ್ರಾತಿನಿಧ್ಯದ ಹಕ್ಕು ತನ್ನ ಪ್ರಸ್ತುತ ಶೇ. 7.18ರ ಅನುಪಾತದ ಪಾಲಿಗಿಂತ ಕಡಿಮೆಯಾಗಬಾರದು ಎಂಬ ಬೇಡಿಕೆಯನ್ನು ಡಿಎಂಕೆ ಸರ್ಕಾರದಲ್ಲಿದ್ದಾಗಲೂ ದೃಢವಾಗಿ ಮತ್ತು ಪ್ರಾಮಾಣಿಕವಾಗಿ ಮುಂದಿಟ್ಟಿತ್ತು” ಎಂದು ಅದರಲ್ಲಿ ಉಲ್ಲೇಖಿಸಲಾಗಿದೆ.

ಸೋಮವಾರ (ನ. 30) ಸಂಸತ್ತಿನಲ್ಲಿ ಮಂಡಿಸಲಾಗುವ ಹೊಸ ಸಂವಿಧಾನ ತಿದ್ದುಪಡಿ ಮಸೂದೆಯು, ಪ್ರತಿ ರಾಜ್ಯದಲ್ಲಿನ ಕ್ಷೇತ್ರಗಳ ಸಂಖ್ಯೆಯನ್ನು ಏಕರೂಪವಾಗಿ ಶೇ. 50ರಷ್ಟು ಹೆಚ್ಚಿಸುವ ಮೂಲಕ ಲೋಕಸಭೆಯನ್ನು 550ರಿಂದ 850 ಸ್ಥಾನಗಳಿಗೆ ವಿಸ್ತರಿಸಲು ಉದ್ದೇಶಿಸಿದೆ. ಜೊತೆಗೆ ಅಂತರ-ರಾಜ್ಯ ಲೋಕಸಭಾ ಸ್ಥಾನಗಳ ಹಂಚಿಕೆಯ ಮೇಲಿನ ಪ್ರಸ್ತುತ ಸ್ಥಗಿತವನ್ನು ಇನ್ನೂ 25 ವರ್ಷಗಳ ಕಾಲ ಅಂದರೆ 2051ರವರೆಗೆ ವಿಸ್ತರಿಸುತ್ತದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕ್ಷೇತ್ರ ಪುನರ್‌ವಿಂಗಡಣೆ : ಮಸೂದೆ ವಿರುದ್ಧ ಮತ ಚಲಾಯಿಸುವಂತೆ ಸಂಸದರಿಗೆ ವಿಪ್ ಜಾರಿ ಮಾಡಿದ ಸಮಾಜವಾದಿ ಪಕ್ಷ

ಮುಂಬರುವ ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಕೇಂದ್ರ ಸರ್ಕಾರ ಮಂಡಿಸಲಿರುವ ಲೋಕಸಭಾ ಕ್ಷೇತ್ರಗಳ ಪುನರ್‌ವಿಂಗಡಣೆ (ಡಿಲಿಮಿಟೇಶನ್) ಮಸೂದೆಗಳ ವಿರುದ್ಧ ಮತ ಚಲಾಯಿಸುವಂತೆ ಸಮಾಜವಾದಿ ಪಕ್ಷ (ಎಸ್‌ಪಿ) ತನ್ನ ಎಲ್ಲಾ ಲೋಕಸಭಾ ಸದಸ್ಯರಿಗೆ ಮೂರು ಸಾಲಿನ...

ಕ್ಷೇತ್ರ ಪುನರ್ವಿಂಗಡಣೆ: ವಿರೋಧ ಪಕ್ಷಗಳ ಒಗ್ಗಟ್ಟಿಗೆ ಸವಾಲು; ಸ್ಟಾಲಿನ್, ಶರದ್ ಪವಾರ್ ಮನವೊಲಿಸಲು ಖರ್ಗೆ, ರಾಹುಲ್, ಸೋನಿಯಾ ಚೆನ್ನೈ, ಮುಂಬೈಗೆ ಭೇಟಿ

ನವದೆಹಲಿ: ವಿವಾದಾತ್ಮಕ ಕ್ಷೇತ್ರ ಪುನರ್ವಿಂಗಡಣೆ ಮಸೂದೆಯನ್ನು ವಿರೋಧಿಸುವ ವಿಚಾರದಲ್ಲಿ ಪ್ರತಿಪಕ್ಷಗಳ ನಡುವಿನ ಭಿನ್ನಮತ INDIA ಮೈತ್ರಿಕೂಟದ ಒಗ್ಗಟ್ಟಿಗೇ ಸವಾಲಾಗಿ ಪರಿಣಮಿಸಿದೆ. ಈ ಹಿನ್ನೆಲೆಯಲ್ಲಿ ಡಿಎಂಕೆ ಮತ್ತು ಎನ್‌ಸಿಪಿ (ಎಸ್‌ಪಿ) ಪಕ್ಷಗಳು ತಮ್ಮ ನಿಲುವು...

ಸ್ಟಾಲಿನ್ ಅಲಿಯಾಸ್ ‘ಸಾವರ್ಕರ್ 2.0’: ಕ್ಷೇತ್ರ ಪುನರ್‌ವಿಂಗಡಣೆ ಬೆಂಬಲಿಸಿದ ಡಿಎಂಕೆ ವಿರುದ್ಧ ಟಿವಿಕೆ ತೀಕ್ಷ್ಣ ವಾಗ್ದಾಳಿ

ಚೆನ್ನೈ: ಕೇಂದ್ರ ಸರ್ಕಾರದ ಪರಿಷ್ಕೃತ ಕ್ಷೇತ್ರ ಪುನರ್‌ವಿಂಗಡಣೆ (Delimitation) ಮಸೂದೆಗೆ ಡಿಎಂಕೆ ಅಧಿಕೃತ ಬೆಂಬಲ ಘೋಷಿಸಿದ ಬೆನ್ನಲ್ಲೇ, ನಟ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (TVK) ಪಕ್ಷವು ಡಿಎಂಕೆ ಅಧ್ಯಕ್ಷ ಎಂ.ಕೆ....

“ಸ್ಪಷ್ಟ ಲಿಖಿತ ಭರವಸೆ ದೊರೆಯುವವರೆಗೂ ಹೋರಾಟವನ್ನು ಹಿಂಪಡೆಯುವುದಿಲ್ಲ”: ಸರ್ಕಾರಿ ಶಾಲೆಗಳ ದತ್ತು ನೀತಿ ವಿರೋಧಿಸಿ ಅಹೋರಾತ್ರಿ ಧರಣಿ ಮುಂದುವರಿಕೆ; ಪ್ರತಿಭಟನಾ ಸ್ಥಳಕ್ಕೆ ಸಚಿವ ಡಾ. ಅಜಯ್ ಸಿಂಗ್ ಭೇಟಿ

ಬೆಂಗಳೂರು, ನವೆಂಬರ್ 28, 2026: ಶಿಕ್ಷಣ ಹಕ್ಕು ಕಾಯಿದೆ (RTE) ಸಮರ್ಪಕ ಜಾರಿ ಹಾಗೂ ಸರ್ಕಾರಿ ಶಾಲೆಗಳನ್ನು ಖಾಸಗಿ ಸಂಸ್ಥೆಗಳಿಗೆ ದತ್ತು ನೀಡುವ ನೀತಿಯನ್ನು ತಕ್ಷಣವೇ ಕೈಬಿಡುವಂತೆ ಆಗ್ರಹಿಸಿ 'ಸರ್ಕಾರಿ ಶಾಲೆ ಅಭಿವೃದ್ಧಿ...

ಚಿಕ್ಕಮಗಳೂರು: ಕಡಿಮೆ ಕೂಲಿ ಪ್ರಶ್ನಿಸಿದ ವಲಸೆ ಕಾರ್ಮಿಕರ ಮೇಲೆ ಬಂದೂಕು, ದೊಣ್ಣೆಯಿಂದ ಮಾರಣಾಂತಿಕ ಹಲ್ಲೆ; ಕರ್ನಾಟಕ ಜನಶಕ್ತಿ ಸಂಘಟನೆಯಿಂದ ನಾಳೆ ಪ್ರತಿಭಟನೆಗೆ ಕರೆ

ಚಿಕ್ಕಮಗಳೂರು: ದಿನಕ್ಕೆ 200-300 ರೂಪಾಯಿ ಕೂಲಿ ಸಾಕಾಗುವುದಿಲ್ಲ, ಬೇರೆ ತೋಟಕ್ಕೆ ಕೆಲಸಕ್ಕೆ ಹೋಗುತ್ತೇವೆ ಎಂದಿದ್ದಕ್ಕೆ ಕಾಫಿ ಎಸ್ಟೇಟ್ ಮಾಲೀಕರು ಬಂದೂಕು ಮತ್ತು ದೊಣ್ಣೆಗಳಿಂದ ಮಹಿಳೆಯರು ಸೇರಿದಂತೆ 34 ವಲಸೆ ಕಾರ್ಮಿಕರ ಮೇಲೆ ಮಾರಣಾಂತಿಕ...

‘ಬಿಜೆಪಿಗೆ ಚುನಾವಣೆಗಳೇ ಮುಖ್ಯ, ದೇಶವಲ್ಲ..’; ಕ್ಷೇತ್ರ ಮರುವಿಂಗಡಣೆ ಮಸೂದೆ ವಿಚಾರವಾಗಿ ಕೇಂದ್ರದ ವಿರುದ್ಧ ಅಖಿಲೇಶ್ ಯಾದವ್ ವಾಗ್ದಾಳಿ

ಮುಂಬರುವ ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಕೇಂದ್ರ ಸರ್ಕಾರ ಕ್ಷೇತ್ರ ಮರುವಿಂಗಡಣೆ ಮಸೂದೆಯನ್ನು ಮಂಡಿಸುವ ಸಾಧ್ಯತೆಗಳ ಕುರಿತು ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೇ, ಸಮಾಜವಾದಿ ಪಕ್ಷದ (ಎಸ್‌ಪಿ) ಅಧ್ಯಕ್ಷ ಅಖಿಲೇಶ್ ಯಾದವ್ ಅವರು ಬಿಜೆಪಿ ವಿರುದ್ಧ...

“ಶೇ.50ರಷ್ಟು ಸ್ಥಾನ ಹೆಚ್ಚಳಕ್ಕೆ ಬೆಂಬಲ ನೀಡಿ, ಇಲ್ಲವೇ ಜನಸಂಖ್ಯೆ ಆಧಾರಿತ ಕ್ಷೇತ್ರ ಪುನರ್‌ವಿಂಗಡಣೆ ಎದುರಿಸಿ” : ಡಿಎಂಕೆಗೆ ಬಿಜೆಪಿ ಪರೋಕ್ಷ ಎಚ್ಚರಿಕೆ-ವರದಿ

ಕೇಂದ್ರದ ಕ್ಷೇತ್ರ ಪುನರ್‌ವಿಂಗಡಣೆ (Delimitation) ಮಸೂದೆಗೆ ಬೆಂಬಲ ನೀಡಲು ತಮಿಳುನಾಡಿನ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಪಕ್ಷ ನಿರ್ಧರಿಸಿದೆ. ಶನಿವಾರ (ನ.28) ಚೆನ್ನೈನಲ್ಲಿ ಪಕ್ಷದ ಮುಖ್ಯಸ್ಥ ಹಾಗೂ ಮಾಜಿ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್...

ಕ್ಷೇತ್ರ ಪುನರ್‌ವಿಂಗಡಣೆ ಮಸೂದೆಗೆ ಡಿಎಂಕೆ ಅಧಿಕೃತ ಬೆಂಬಲ: ದಕ್ಷಿಣ ಭಾರತದ ಪ್ರಾತಿನಿಧ್ಯಕ್ಕೆ ಸಂದ ಜಯ ಎಂದ ಎಂ.ಕೆ. ಸ್ಟಾಲಿನ್

ಚೆನ್ನೈ: ನವೆಂಬರ್ 30ರಿಂದ ಆರಂಭವಾಗಲಿರುವ ಸಂಸತ್ತಿನ ವಿಶೇಷ ಅಧಿವೇಶನಕ್ಕೂ ಮುನ್ನ ಮಹತ್ವದ ರಾಜಕೀಯ ಬೆಳವಣಿಗೆಯಲ್ಲಿ, ಕೇಂದ್ರ ಸರ್ಕಾರದ ಪರಿಷ್ಕೃತ ಕ್ಷೇತ್ರ ಪುನರ್‌ವಿಂಗಡಣೆ (Delimitation) ಸಂವಿಧಾನ ತಿದ್ದುಪಡಿ ಮಸೂದೆಗೆ ಡಿಎಂಕೆ ಶನಿವಾರ ಅಧಿಕೃತವಾಗಿ ಬೆಂಬಲ...

ನ್ಯಾಯಾಂಗ ನೇಮಕಾತಿಯಲ್ಲಿ ರಾಜಕೀಯ ಹಸ್ತಕ್ಷೇಪ, ವಿಚಾರಣೆಯಿಲ್ಲದೆ ವರ್ಷಗಳ ಕಾಲ ಜೈಲು ಮತ್ತು ನ್ಯಾಯಾಂಗದ ಸ್ವಾತಂತ್ರ್ಯದ ಬಗ್ಗೆ ಹ್ಯೂಮನ್ ರೈಟ್ಸ್ ವಾಚ್ ಗಂಭೀರ ಆತಂಕ!

ಭಾರತದ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (NHRC) ಮತ್ತು ನ್ಯಾಯಾಂಗದ ಸ್ವಾತಂತ್ರ್ಯದ ಕುರಿತು ಅಂತರರಾಷ್ಟ್ರೀಯ ಮಾನವ ಹಕ್ಕುಗಳ ಸಂಸ್ಥೆ 'ಹ್ಯೂಮನ್ ರೈಟ್ಸ್ ವಾಚ್' (HRW) ಗಂಭೀರ ಆತಂಕ ವ್ಯಕ್ತಪಡಿಸಿದೆ. ಕಾನೂನು ತಿದ್ದುಪಡಿಗಳು, ರಾಜಕೀಯ...

ತಿರುಪರಂಕುಂದ್ರಂ ಬೆಟ್ಟದ ಭದ್ರತೆ ವಹಿಸಿಕೊಂಡ ಸಿಆರ್‌ಪಿಎಫ್ : ದೀಪ ಬೆಳಗಿಸಲು ಸಿದ್ಧತೆ; ದರ್ಗಾಕ್ಕೆ ಮುಸ್ಲಿಮರ ಭೇಟಿ

ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ಮಧುರೈನ ತಿರುಪರಂಕುಂದ್ರಂ ಬೆಟ್ಟದ ಸಂಪೂರ್ಣ ಭದ್ರತೆ ಮತ್ತು ಕಣ್ಗಾವಲು ಹೊಣೆಯನ್ನು ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್‌) ಶನಿವಾರ (ನ.28) ಬೆಳಿಗ್ಗೆ ವಹಿಸಿಕೊಂಡಿದೆ. ಬೆಟ್ಟದ ಮೇಲಿರುವ ದೀಪತ್ತೂಣ್...