2029ರ ಲೋಕಸಭಾ ಚುನಾವಣೆಗೆ ಮುನ್ನ ಕೇಂದ್ರ ಸರ್ಕಾರವು ಕ್ಷೇತ್ರ ಪುನರ್ವಿಂಗಡಣೆ (Delimitation) ಮಸೂದೆಯನ್ನು ಮಂಡಿಸಲು ಸಿದ್ಧತೆ ನಡೆಸುತ್ತಿರುವ ಬೆನ್ನಲ್ಲೇ, ರಾಜಕೀಯ ವಲಯದಲ್ಲಿ ‘ಜೆರಿಮ್ಯಾಂಡರಿಂಗ್’ (Gerrymandering) ಎಂಬ ಪದ ಭಾರಿ ಚರ್ಚೆಗೆ ಗ್ರಾಸವಾಗಿದೆ. ಕ್ಷೇತ್ರಗಳ ಗಡಿಗಳನ್ನು ಮರುನಿಗದಿಪಡಿಸುವ ಮೂಲಕ ಆಡಳಿತಾರೂಢ ಬಿಜೆಪಿ ಚುನಾವಣಾ ಲಾಭ ಪಡೆಯಲು ಯತ್ನಿಸುತ್ತಿದೆ ಎಂದು ವಿರೋಧ ಪಕ್ಷಗಳು ಗಂಭೀರ ಆತಂಕ ವ್ಯಕ್ತಪಡಿಸಿವೆ.
ಏನಿದು ಜೆರಿಮ್ಯಾಂಡರಿಂಗ್?
ಸರಳವಾಗಿ ಹೇಳುವುದಾದರೆ, ಒಂದು ರಾಜಕೀಯ ಪಕ್ಷವು ತನ್ನ ಒಟ್ಟಾರೆ ಮತಗಳಿಕೆಗಿಂತ ಹೆಚ್ಚಿನ ಸ್ಥಾನಗಳನ್ನು ಗೆಲ್ಲುವ ಉದ್ದೇಶದಿಂದ ಚುನಾವಣಾ ಕ್ಷೇತ್ರಗಳ ಗಡಿಗಳನ್ನು ತನಗೆ ಅನುಕೂಲಕರವಾಗಿ ಬದಲಾಯಿಸುವ ತಂತ್ರವೇ ‘ಜೆರಿಮ್ಯಾಂಡರಿಂಗ್’. ಇದರಲ್ಲಿ ಎರಡು ಪ್ರಮುಖ ವಿಧಾನಗಳಿವೆ:
1. ಪ್ಯಾಕಿಂಗ್ (Packing) :’ಪ್ಯಾಕಿಂಗ್’ ಎಂದರೆ ವಿರೋಧ ಪಕ್ಷವನ್ನು ಬೆಂಬಲಿಸುವ ಸಾಧ್ಯತೆಯಿರುವ ಮತದಾರರನ್ನು ಕಡಿಮೆ ಸಂಖ್ಯೆಯ ಚುನಾವಣಾ ಕ್ಷೇತ್ರಗಳಲ್ಲಿ ಕೇಂದ್ರೀಕರಿಸುವುದು. ಇದು ಆ ಪಕ್ಷಕ್ಕೆ ಆ ಸ್ಥಾನಗಳನ್ನು ದೊಡ್ಡ ಅಂತರದಿಂದ ಗೆಲ್ಲಲು ಅವಕಾಶ ನೀಡುತ್ತದೆ, ಆದರೆ ನೆರೆಯ ಕ್ಷೇತ್ರಗಳಲ್ಲಿ ಅದರ ಪ್ರಭಾವವನ್ನು ಕಡಿಮೆ ಮಾಡುತ್ತದೆ.
2. ಕ್ರ್ಯಾಕಿಂಗ್ (Cracking) : ‘ಕ್ರ್ಯಾಕಿಂಗ್’ ಎಂದರೆ ಒಂದು ಗುಂಪಿನ ಮತದಾರರನ್ನು ಹಲವಾರು ಕ್ಷೇತ್ರಗಳಲ್ಲಿ ವಿಭಜಿಸುವುದು, ಇದರಿಂದ ಅವರು ಪ್ರತಿಯೊಂದು ಕ್ಷೇತ್ರದಲ್ಲೂ ಅಲ್ಪಸಂಖ್ಯಾತರಾಗುತ್ತಾರೆ. ಇದು ಅವರ ಆದ್ಯತೆಗಳನ್ನು ಪ್ರತಿನಿಧಿಸುವ ಅಭ್ಯರ್ಥಿಗಳನ್ನು ಆಯ್ಕೆ ಮಾಡುವುದನ್ನು ಕಷ್ಟಕರವಾಗಿಸುತ್ತದೆ.
ಈ ಎರಡೂ ಸಂದರ್ಭಗಳಲ್ಲಿ, ಮತದಾರರ ಪಟ್ಟಿಯಿಂದ ಯಾವುದೇ ಮತದಾರರನ್ನು ತೆಗೆದುಹಾಕುವ ಅಗತ್ಯವಿರುವುದಿಲ್ಲ. ಮತದಾರರನ್ನು ಭೌಗೋಳಿಕವಾಗಿ ಹೇಗೆ ಗುಂಪು ಮಾಡಲಾಗಿದೆ ಎಂಬುದನ್ನು ಬದಲಾಯಿಸುವುದರಿಂದ ಈ ಪ್ರಯೋಜನ ಸಿಗುತ್ತದೆ. ಆದ್ದರಿಂದ, ಒಂದು ಪಕ್ಷವು ತನ್ನ ಒಟ್ಟಾರೆ ಮತಗಳ ಪಾಲಿನಲ್ಲಿ ಅದಕ್ಕೆ ತಕ್ಕ ಹೆಚ್ಚಳವನ್ನು ಪಡೆಯದೆಯೇ ಹೆಚ್ಚಿನ ಸ್ಥಾನಗಳನ್ನು ಗೆಲ್ಲಬಹುದು.
ವಿಪಕ್ಷಗಳ ಆತಂಕಕ್ಕೆ ಕಾರಣವೇನು?
ರಾಜ್ಯಗಳ ಹಾಲಿ ಲೋಕಸಭಾ ಸ್ಥಾನಗಳ ಪ್ರಮಾಣವನ್ನು (Relative share) ಮುಂದಿನ 25 ವರ್ಷಗಳವರೆಗೆ ಕಾಯ್ದುಕೊಳ್ಳುವ ಭರವಸೆಯನ್ನು ಕೇಂದ್ರ ಸರ್ಕಾರ ನೀಡಿದ್ದರೂ, ವಿಪಕ್ಷಗಳ ಆತಂಕ ದೂರವಾಗಿಲ್ಲ. ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರು, 2029ರ ಚುನಾವಣೆಗೆ ಮುನ್ನ ಬಿಜೆಪಿ ದೇಶದ ಚುನಾವಣಾ ನಕ್ಷೆಯನ್ನು ತನಗೆ ಬೇಕಾದಂತೆ ಬದಲಿಸಲು ಹೊರಟಿದೆ ಎಂದು ಆರೋಪಿಸಿದ್ದಾರೆ.
ಮತ್ತೊಂದೆಡೆ, ರಾಜ್ಯಸಭೆಯ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಕೂಡ ಸ್ಥಾನಗಳ ಸಂಖ್ಯೆಯನ್ನು ಶೇ. 50ರಷ್ಟು ಹೆಚ್ಚಿಸುವ ಪ್ರಸ್ತಾವನೆಯನ್ನು ಪ್ರಶ್ನಿಸಿದ್ದಾರೆ. “ಸ್ಥಾನಗಳ ಪ್ರಮಾಣವನ್ನು ಸ್ಥಿರವಾಗಿಟ್ಟರೂ, ಒಟ್ಟು ಸ್ಥಾನಗಳ ಸಂಖ್ಯೆ ಹೆಚ್ಚಾದಾಗ ದಕ್ಷಿಣದ ರಾಜ್ಯಗಳು ಮತ್ತು ಇತರ ರಾಜ್ಯಗಳ ನಡುವಿನ ಸ್ಥಾನಗಳ ಅಂತರವು 413ರಿಂದ 620ಕ್ಕೆ ಏರಿಕೆಯಾಗಲಿದೆ. ಇದು ಸಂಸತ್ತಿನಲ್ಲಿ ದಕ್ಷಿಣ ಭಾರತದ ರಾಜ್ಯಗಳ ಧ್ವನಿಯನ್ನು ಕುಗ್ಗಿಸಲಿದೆ” ಎಂದು ಅವರು ಎಚ್ಚರಿಸಿದ್ದಾರೆ.
ಅಸ್ಸಾಂ ಮತ್ತು ಜಮ್ಮು-ಕಾಶ್ಮೀರದ ಉದಾಹರಣೆ
2023ರಲ್ಲಿ ಅಸ್ಸಾಂನಲ್ಲಿ ನಡೆದ ಕ್ಷೇತ್ರ ಪುನರ್ವಿಂಗಡಣೆಯನ್ನು ವಿಪಕ್ಷಗಳು ಉದಾಹರಣೆಯಾಗಿ ನೀಡುತ್ತಿವೆ. ಅಲ್ಲಿ ಒಟ್ಟು 126 ವಿಧಾನಸಭಾ ಕ್ಷೇತ್ರಗಳ ಸಂಖ್ಯೆ ಬದಲಾಗದಿದ್ದರೂ, ಗಡಿಗಳ ಮರುನಿಗದಿಯಿಂದಾಗಿ ಬರಾಕ್ ಕಣಿವೆಯಲ್ಲಿ ಸ್ಥಾನಗಳು 15ರಿಂದ 13ಕ್ಕೆ ಇಳಿದರೆ, ಬೋಡೋಲ್ಯಾಂಡ್ ಪ್ರದೇಶದಲ್ಲಿ 11ರಿಂದ 15ಕ್ಕೆ ಏರಿಕೆಯಾಯಿತು. ಅಲ್ಲದೆ, ಮುಸ್ಲಿಂ ಪ್ರಾಬಲ್ಯದ ಕ್ಷೇತ್ರಗಳ ಸಂಖ್ಯೆ 35ರಿಂದ 24ಕ್ಕೆ ಇಳಿದು, ಕಾಂಗ್ರೆಸ್ ಮತ್ತು ಎಐಯುಡಿಎಫ್ ಪಕ್ಷಗಳ ಸಾಂಪ್ರದಾಯಿಕ ಮತಬ್ಯಾಂಕ್ ಸಮೀಕರಣವನ್ನೇ ಬದಲಿಸಿತು.
ಜೆರಿಮ್ಯಾಂಡರಿಂಗ್ ಪದದ ಹಿನ್ನೆಲೆ ಮತ್ತು ಆಯೋಗದ ಅಧಿಕಾರ
ಈ ಪದವು 1812ರಲ್ಲಿ ಯುನೈಟೆಡ್ ಸ್ಟೇಟ್ಸ್ನಲ್ಲಿ (US) ಹುಟ್ಟಿಕೊಂಡಿತು ಮತ್ತು ಇದು ಮ್ಯಾಸಚೂಸೆಟ್ಸ್ ಗವರ್ನರ್ ಎಲ್ಬ್ರಿಡ್ಜ್ ಗೆರಿ (Elbridge Gerry) ಅವರ ಹೆಸರು ಮತ್ತು ‘ಸಲಾಮಾಂಡರ್’ (salamander) ಪದದ ಸಂಯೋಜನೆಯಾಗಿದೆ.
ಗೆರಿ ಅವರು ತಮ್ಮ ಡೆಮಾಕ್ರಟಿಕ್-ರಿಪಬ್ಲಿಕನ್ ಪಕ್ಷಕ್ಕೆ ಪ್ರಯೋಜನವಾಗುವ ರೀತಿಯಲ್ಲಿ ರಾಜ್ಯದ ಸೆನೆಟ್ ಚುನಾವಣಾ ಕ್ಷೇತ್ರಗಳ ಗಡಿಗಳನ್ನು ಪುನರ್ರಚಿಸುವ ಮಸೂದೆಗೆ ಸಹಿ ಹಾಕಿದ್ದರು. ಮಾರ್ಚ್ 26, 1812 ರಂದು ‘ಬೋಸ್ಟನ್ ಗೆಜೆಟ್’ (Boston Gazette) ಪತ್ರಿಕೆಯಲ್ಲಿ ಪ್ರಕಟವಾದ ವ್ಯಂಗ್ಯಚಿತ್ರವೊಂದರಲ್ಲಿ, ವಿಚಿತ್ರ ಆಕಾರದಲ್ಲಿದ್ದ ಈ ಕ್ಷೇತ್ರಗಳಲ್ಲಿ ಒಂದನ್ನು ಸಲಾಮಾಂಡರ್ ಪ್ರಾಣಿಗೆ ಹೋಲಿಸಲಾಯಿತು. ಹೀಗೆ ‘ಗೆರಿ-ಮ್ಯಾಂಡರ್’ (Gerry-mander) ಎಂಬ ಪದವು ಹುಟ್ಟಿಕೊಂಡಿತು.
ಸ್ವತಃ ಗೆರಿ ಅವರಿಗೇ ಈ ಪ್ರಸ್ತಾವನೆಯು ‘ತೀವ್ರ ಅಸಮ್ಮತಿಕರ’ ಎನಿಸಿತ್ತು ಎನ್ನಲಾಗಿದೆ ಮತ್ತು ಅವರು ಮುಂದಿನ ಚುನಾವಣೆಯಲ್ಲಿ ಸೋತರು. ಆದಾಗ್ಯೂ, ಅವರ ಪಕ್ಷವು ಶಾಸಕಾಂಗದ ಮೇಲಿನ ನಿಯಂತ್ರಣವನ್ನು ಉಳಿಸಿಕೊಂಡಿತು. ಅಂದಿನಿಂದ, ಚುನಾವಣಾ ಕ್ಷೇತ್ರಗಳ ಗಡಿ ಬದಲಾವಣೆಗಳನ್ನು ರಾಜಕೀಯ ಅಸ್ತ್ರವಾಗಿ ಬಳಸುವುದನ್ನು ವಿವರಿಸಲು ಈ ಪದವು ಬಳಕೆಯಲ್ಲಿದೆ.
ಭಾರತದಲ್ಲಿ ಕ್ಷೇತ್ರ ಪುನರ್ವಿಂಗಡಣೆಯ ಹೊಣೆಯನ್ನು ‘ಪುನರ್ವಿಂಗಡಣಾ ಆಯೋಗ’ ನಿರ್ವಹಿಸುತ್ತದೆ. ಈ ಆಯೋಗದ ಆದೇಶಗಳಿಗೆ ಕಾನೂನಿನ ಬಲವಿದ್ದು, ಇವುಗಳನ್ನು ನ್ಯಾಯಾಲಯದಲ್ಲೂ ಪ್ರಶ್ನಿಸಲು ಸಾಧ್ಯವಿಲ್ಲ. ಹೀಗಾಗಿ, ಈ ಪ್ರಕ್ರಿಯೆಯು ಪಾರದರ್ಶಕವಾಗಿ ಮತ್ತು ನಿಷ್ಪಕ್ಷಪಾತವಾಗಿ ನಡೆಯಬೇಕು ಎಂಬುದು ವಿರೋಧ ಪಕ್ಷಗಳ ಪ್ರಮುಖ ಆಗ್ರಹವಾಗಿದೆ.


