Homeಮುಖಪುಟಇನ್ನೂ ನಡೆಯುತ್ತಿದೆ ಜಾತ್ಯಹಂಕಾರಗಳ "ರುದ್ರ ನರ್ತನ"

ಇನ್ನೂ ನಡೆಯುತ್ತಿದೆ ಜಾತ್ಯಹಂಕಾರಗಳ “ರುದ್ರ ನರ್ತನ”

- Advertisement -
- Advertisement -

ಆಕೆಯ ಹೆಸರು ಅಮೃತ ವರ್ಷಿಣಿ. ತೆಲಂಗಾಣದ ಮಿರಿಯಾಲಗೂಡ ನಗರದ ಆರ್ಯ-ವೈಶ್ಯ ಸಮಾಜದ ಉದ್ಯಮಿ ಟಿ. ಮಾರುತಿ ರಾವ್‍ನ ಏಕೈಕ ಮಗಳು. ತಂದೆಗೆ ಮಗಳ ಮೇಲಿನ ಪ್ರೀತಿ ಸಹಜ.

(ತನ್ನ ತಂದೆ ಮಾರುತಿ ರಾವ್ ಜೊತೆಗೆ ಅಮೃತ ವರ್ಷಿನಿ)

2018ರ ಜನವರಿಯಲ್ಲಿ ಅಮೃತ ಆಕೆಯ ಸಹಪಾಠಿ ಪ್ರಣಯ್‍ ಕುಮಾರ್ ಎಂಬ ದಲಿತ ಕ್ರಿಶ್ಚಿಯನ್ ಹುಡುಗನನ್ನು ಮನೆ ಬಿಟ್ಟು ಹೋಗಿ ಮದುವೆ ಆದಳು. ಹುಡುಗರಿಬ್ಬರೂ ಪ್ರೀತಿಸುತ್ತಿದ್ದರು, ಆಕೆಯ ಮನೆಯಲ್ಲಿ ವಿರೋಧ, ಬೆದರಿಕೆಗಳು. ದಿಟ್ಟವಾಗಿ ಎದುರಿಸಿ ಹೊರನಡೆದು ಮದುವೆ ಆದಳು. ಪ್ರಣಯ್ ಅವರ ಮನೆಯವರೇ ನಿಂತು ಮದುವೆ ಮಾಡಿದರು, ಅವರ ಜೊತೆಯೇ ಜೀವನ ನಡೆಸಲಾರಂಭಿಸಿದಳು. ಕೆಲ ತಿಂಗಳಿನಲ್ಲಿ ಆಕೆ ಬಸಿರಾದಳು. ಇದೇ ಸಂದರ್ಭದಲ್ಲಿ ಆಕೆಯ ಕುಟುಂಬ ಕೈಚಾಚಿತು. ಸಹಜವಾಗಿಯೇ ಹುಡುಗಿ ತಾಯಿಯ ಆಸರೆಗೆ ಹಾತೊರೆಯಿತು. ತಾಯಿಯ ಜೊತೆ ಬಾಂಧವ್ಯ ಮತ್ತೆ ಶುರುವಾಯಿತು. ಆದರೆ ಇದರ ಹಿಂದಿನ ವಿಷ ಅರಿಯದಾದಳು ಹುಡುಗಿ.

(ಪ್ರಣಯ್ ಮತ್ತು ಅಮೃತ ವರ್ಷಿನಿ)

ಸೆಪ್ಟೆಂಬರ್ 2018. ಪ್ರಣಯ್ ಮತ್ತು ಅಮೃತ ವೈದ್ಯರನ್ನು ಕಾಣಲು ಹೋಗಿದ್ದಾಗ ಆಕೆಯ ಮುಂದೆಯೇ ಪ್ರಿಯಕರ ಪ್ರಣಯ್‍ನನ್ನು ಭೀಕರವಾಗಿ ಕೊಚ್ಚಿ ಕೊಲೆಗೈಯ್ಯಲಾಯಿತು. ಸುಪಾರಿ ಕೊಟ್ಟಿದ್ದು ಆಕೆಯ ತಂದೆ ಮಾರುತಿರಾವ್. ತಾಯಿಯ ಜೊತೆ ಅಮೃತ ನಡೆಸಿದ್ದ ಸಂಭಾಷಣೆಗಳೇ ಆಕೆಗೆ ಮುಳುವಾದವು. ಈ ಕರೆಗಳಿಂದ ಅಮೃತ-ಪ್ರಣಯ್ ಎಲ್ಲಿದ್ದಾರೆಂಬ ಮಾಹಿತಿ ಮಾರುತಿರಾವ್ ಮತ್ತು ಕೊಲೆಗಾರರಿಗೆ ಸಿಕ್ಕಿತ್ತು. ಮಾರುತಿರಾವ್ ಪ್ರಣಯ್‍ನನ್ನು ಕೊಲ್ಲಲು ಒಂದು ಕೋಟಿ ಸುಪಾರಿ ಕೊಟ್ಟದ್ದ. ತನ್ನ ತಂದೆತಾಯಿಯೂ ಸಹ ತನ್ನ ಮದುವೆಯನ್ನು ಒಪ್ಪಿಕೊಂಡರು, ಇನ್ನೆಲ್ಲವೂ ಸರಿಹೋಗುತ್ತದೆ ಎಂದು ಕನಸಿದ್ದಳು ಹುಡುಗಿ. ತಾನೆಣಿಸಲಾರದ ದುರಂತವಾಯಿತು ಬದುಕು. ತನ್ನ ತಂದೆಯನ್ನು ಗಲ್ಲಿಗೇರಿಸಬೇಕೆಂದು ಚೀರಿದಳು ಬಸುರಿ ಹುಡುಗಿ. ಜನವರಿ 2019ರಲ್ಲಿ ಗಂಡುಮಗುವಿಗೆ ಜನ್ಮ ನೀಡಿದಳು ಅಮೃತ. ಪ್ರಣಯ್ ಅವರ ಕುಟುಂಬದ ಜೊತೆ ಅವರ ಮಗಳಾಗಿ ಜೀವನ ನಡೆಸುತ್ತಿದ್ದಾಳೆ. ಅವರ ಮನಸ್ಸು ನಿಜಕ್ಕೂ ದೊಡ್ಡದು.

ಈಗ ಜಾಮೀನಿನ ಮೇಲೆ ಹೊರಬಂದಿದ್ದ ಮಾರುತಿರಾವ್ ಹೈದರಾಬಾದಿನಲ್ಲಿ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮಾಧ್ಯಮಗಳ ಮುಂದೆ ಮಾತನಾಡುತ್ತಿದ್ದ ಅಮೃತ ಬಹುಶಃ ಅಪ್ಪನಿಗೆ ತಾನು ಮಾಡಿದ ತಪ್ಪಿನ ಅರಿವಾಗಿ ಪಶ್ಚಾತ್ತಾಪವಾಗಿ ಹೀಗೆ ಮಾಡಿಕೊಂಡಿರಬಹುದು ಎಂದವಳ ದನಿಯಲ್ಲಿ ದುಗುಡ, ಹತಾಶೆಯ ಜೊತೆ ಒಂದು ಸಣ್ಣ ಆಸೆಯೂ ಇದ್ದಂತಿತ್ತು. ಮಾರುತಿರಾವ್ ತನ್ನ ಜೀವನ ಅಂತ್ಯಗೊಳಿಸಿದ್ದು ಹೈದರಾಬಾದಿನ ಆರ್ಯವೈಶ್ಯ ಭವನದ ರೂಂ ನಂಬರ್ 306ರಲ್ಲಿ! ಆತ ಎರಡು ಸಾಲಿನ ಪತ್ರ ಬರೆದಿಟ್ಟು ಹೋಗಿದ್ದಾನೆ. “ಗಿರಿಜಾ ನನ್ನು ಕ್ಷಮಿಂಚು. ತಲ್ಲಿ ಅಮೃತ ಅಮ್ಮ ದೆಗ್ಗರಿಕಿ ವೆಳ್ಳಿಪೋ” – “ಗಿರಿಜಾ (ಆತನ ಪತ್ನಿ) ನನ್ನನ್ನು ಕ್ಷಮಿಸು. ತಾಯಿ ಅಮೃತ ಅಮ್ಮನ ಬಳಿ ಹೋಗಿಬಿಡು”. ಅಮೃತಳ ಆಸೆ ಹುಸಿಯಾಗಿತ್ತು. ಮಾರುತಿರಾವ್‍ಗೆ ಸಾಯುವಾಗಲೂ ಜಾತಿಯೇ ಮುಖ್ಯವಾಗಿತ್ತು, ಆತ ಸತ್ತದ್ದು ಆರ್ಯವೈಶ್ಯ ಭವನದಲ್ಲಿ ಮತ್ತು ಆ ಕಡೆಯ ಕ್ಷಣದಲ್ಲೂ ಆತನ ಮಗಳು ದಲಿತನೊಬ್ಬನ ಮನೆಯಲ್ಲಿರುವುದು ಆತನಿಗೆ ಸಹಿಸಿಕೊಳ್ಳಲಾಗಲಿಲ್ಲ!

(ತನ್ನ ಮಗುವಿನೊಂದಿಗೆ ಅಮೃತ ವರ್ಷಿನಿ)

ಮಾರುತಿರಾವ್‍ನ ಜಾತಿ ವ್ಯಾಮೋಹ ಮತ್ತು ಹಿಂಸೆಯ ಪ್ರತಿಫಲನ ಈ ದುರಂತ ಕಥೆಗೆ ಸಮಾಜ, ಮಾಧ್ಯಮ ಸ್ಪಂದಿಸಿದ ರೀತಿಯಲ್ಲೂ ಕಾಣಬಹುದು. ಬಹುತೇಕ ಟಿವಿ ಮಾಧ್ಯಮ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಅಮೃತಳನ್ನು ವಿಲನ್ ಆಗಿ ಚಿತ್ರಿಸಲಾಗಿದೆ! ಟಿವಿ-9 ತೆಲುಗು ವಾಹಿನಿಯ ಪ್ರಮುಖ ಆಂಕರ್ ರಜನೀಕಾಂತ್ ವಲ್ಲೆಲಚೆರುವು ಟ್ವೀಟ್ ಮಾಡಿದ್ದಾರೆ: “ಆತನ ನೆಗೆಟಿವ್ ಗುಣಗಳನ್ನು ಪಕ್ಕಕ್ಕಿಟ್ಟರೆ, ಮಾರುತಿ ರಾವ್‍ಗೆ ಸಾಯಿಸೋ ಅಷ್ಟು ಮತ್ತು ಸತ್ತು ಹೋಗೋಷ್ಟು ಮಗಳ ಬಗ್ಗೆ ಪ್ರೀತಿ ಇತ್ತು”. ಸಾಮಾಜಿಕ ಮಾಧ್ಯಮಗಳಲ್ಲಿ ಇವತ್ತಲ್ಲ ಮಾರುತಿ ರಾವ್ ಪ್ರಣಯ್‍ನನ್ನು ಕೊಲ್ಲಿಸಿ ಜೈಲು ಸೇರಿದಾಗಲೇ ಆತನಿಗೆ ಅಭಿಮಾನಿ ಪೇಜುಗಳು ಹುಟ್ಟುಕೊಂಡಿದ್ದವು ಮತ್ತು ಇವರೆಲ್ಲರೂ ಆತನ ಮಗಳ ಮೇಲಿನ ಪ್ರೇಮವನ್ನೇ ಐಡಿಯಲೈಸ್ ಮಾಡುತ್ತಿದ್ದರು. ಆಗ ಇದು ಎಷ್ಟು ತಾರಕಕ್ಕೆ ಹೋಗಿತ್ತೆಂದರೆ ಅಮೃತ ತಂದೆ-ತಾಯಿಗಳು ಅವರ ಸುಖಕ್ಕೆ ಸೆಕ್ಸ್‍ನಲ್ಲಿ ಭಾಗವಹಿಸುವುದರಿಂದ ಮಕ್ಕಳಾಗುತ್ತಾರೆಯೇ ಹೊರತು ನಮ್ಮನ್ನು ಹುಟ್ಟಿಸಬೇಕೆಂದೇನೂ ಅಲ್ಲ ಅಂದಿದ್ದಳು ಮತ್ತು ಅದನ್ನು ಎಲ್ಲರೂ ಖಂಡಿಸಿ ದೊಡ್ಡ ರಾದ್ಧಾಂತ ಮಾಡಿದ್ದರು. ಮೊನ್ನೆ ಎಷ್ಟೇ ಆಗಲಿ ತಂದೆ ಅಲ್ಲವೇ ಅಮೃತ ಶವ ನೋಡಲು ಹೋದಾಗ ಜನ ಘೋಷಣೆ ಕೂಗಿ ಆಕೆಯನ್ನು ಹೊರದೂಡಿಬಿಟ್ಟರು. ಇವರೆಲ್ಲರ ಪ್ರಕಾರ ಇಡೀ ದುರಂತ ಕತೆಗೆ ಆಕೆಯೇ ಕಾರಣ! ತಂದೆತಾಯಿಯ ಪ್ರೀತಿಯನ್ನು ಮನಗಾಣದೆ, ತನ್ನ (ತೆಳು ಎಂದು ಅವರ ಭಾವನೆಯೆ?) ಪ್ರೀತಿಗೇ ಕಟ್ಟುಬಿದ್ದು ಇಡೀ ದುರಂತಕ್ಕೆ ಕಾರಣವಾಗಿಬಿಟ್ಟಳು ಎಂದು ಮಾಧ್ಯಮಗಳೂ ಹಲುಬುತ್ತಿರುವುದು ಅವರ ಜಾತಿ ಮನಸ್ಥಿತಿ ಮತ್ತು ಮುಸುಕಿಗೆ ಸ್ಪಷ್ಟ ನಿದರ್ಶನ.

ಮಾರುತಿರಾವ್‍ಗೆ ಪ್ರೀತಿ ಇದ್ದದ್ದು ತನ್ನ ಮಗಳ ಮೇಲೆಯೋ ಇಲ್ಲ ತನ್ನ ಜಾತಿ ಮತ್ತು ಅದರ ಸುತ್ತ ಆತ ಕಟ್ಟುಕೊಂಡಿದ್ದ ತಾನು ಮೇಲೆಂಬ ಹುಸಿ ಭಾವನೆಗಳಿಗೋ? ಆತ ನಿಜಕ್ಕೂ ಆತನ ಮಗಳನ್ನು ಮಾಧ್ಯಮಗಳು ಕಟ್ಟಿಕೊಡಲು ಪ್ರಯತ್ನಿಸುತ್ತಿರುವಂತೆ ಅನ್‍ಕಂಡೀಷನಲ್ ಆಗಿ ಪ್ರೀತಿಸುತ್ತಿದ್ದದ್ದೇ ನಿಜವಾದರೆ ಆಕೆಯ ಆಯ್ಕೆ ಮತ್ತು ಇಷ್ಟವನ್ನು ಗೌರವಿಸಿ ಆಕೆ ಖುಷಿಯಾಗಿರುವುದೇ ತನಗೆ ಮುಖ್ಯ ಎಂದಿರುತ್ತಿದ್ದ. ಬಸುರಿ ಮಗಳ ಮುಂದೆ ಆಕೆಯ ಗಂಡನನ್ನು ಕೊಚ್ಚಿ ಕೊಲೆಗೈಯ್ಯಿಸುತ್ತಿರಲಿಲ್ಲ. ಅದು ಮಗಳ ಮೇಲಿನ ಪ್ರೀತಿ ಅಲ್ಲ. ಅತ್ಯಂತ ಪಿತೃಪ್ರಧಾನ ರೀತಿಯಲ್ಲಿ ಆತ ಮಗಳನ್ನು ತನ್ನ ಸ್ವತ್ತು ಎಂದೇ ನೋಡಿದ್ದ. ಆತನ “ಕುಲಗೌರವ”ವನ್ನು ಆಕೆ ಹಾಳು ಮಾಡಿದಳೆಂದೆಣಿಸಿದ್ದ. ಆದರೆ ಮಗಳ ಮೇಲೆ ಕೋಪ ಬರಲಿಲ್ಲ. ಆಕೆಯನ್ನು ಈ ದಲಿತ ಹುಡುಗ ತಲೆಕೆಡಿಸಿದ್ದಾನೆ ಎಂದೆಣಿಸಿರಬೇಕು, ಆತನನ್ನು ಸಾಯಿಸಿಬಿಟ್ಟ. ಆತ ಮಗಳಿಗೆ ತನ್ನ ನಿರ್ಧಾರಗಳನ್ನು ತಾನು ತೆಗೆದುಕೊಳ್ಳಬಹುದೆಂದು ಅನ್ನಿಸಿರಲೇ ಇಲ್ಲ ಎನಿಸುತ್ತೆ. ಆಕೆಗೆ ತನ್ನ ಬಾಳಸಂಗಾತಿಯನ್ನು ಆರಿಸಿಕೊಳ್ಳುವ ಸ್ವಾತಂತ್ರ್ಯವೂ ಇಲ್ಲ ಮತ್ತು ಆಕೆ ಮಾಡಿದ ಆಯ್ಕೆ ಸರಿಯಾದುದಲ್ಲ, ಆಕೆಯನ್ನು ದಿಕ್ಕುತಪ್ಪಿಸಲಾಗಿದೆ ಎಂಬ ನಿರ್ಣಯಗಳು ಮಾರುತಿ ರಾವ್‍ನ ನಡವಳಿಕೆಗಳ ಹಿಂದೆ ಸ್ಪಷ್ಟವಾಗಿ ಕಾಣಿಸುತ್ತಿವೆ. ಅದು ಮಗಳ ಬಗೆಗಿನ ಆರೋಗ್ಯಕರ ಪ್ರೀತಿ ಖಂಡಿತ ಅಲ್ಲ, ಮೀರಲಾರದ ತನ್ನ ವ್ಯರ್ಥ, ಅರ್ಥವಿಲ್ಲದ ಜಾತಿ ಮತ್ತು ಪಿತೃಪ್ರಧಾನ ಗರ್ವ ಅಷ್ಟೆ.

ಮಾರಿ ಸೆಲ್ವರಾಜ್ ಅವರ ನಿರ್ದೇಶನದ ಪರಿಯೆರುಂ ಪೆರುಮಾಳ್ ಚಿತ್ರದಲ್ಲಿ ಒಂದು ವಿಲಕ್ಷಣ ಪಾತ್ರವಿದೆ. ಮೇಲ್ಜಾತಿಯ ಮಕ್ಕಳನ್ನು ಪ್ರೀತಿಸುವ ಕೆಳಜಾತಿಯವರನ್ನು ಸಾಕ್ಷಿ ಉಳಿಯದೆ ಕೊಲ್ಲುವ ಮುದುಕನ ಪಾತ್ರ. ಚಿತ್ರದುದ್ದಕ್ಕೂ ಆತ ಅನೇಕರನ್ನು ಹೀಗೆ ಕೊಲ್ಲುತ್ತಾನೆ, “ಕುಲಗೌರವರ”ದ ಹೆಸರಿನಲ್ಲಿ. ಚಿತ್ರದ ನಾಯಕ ಪೆರುಮಾಳ್ ದಲಿತ, ಮೇಲ್ಜಾತಿಯ ಹುಡುಗಿಯನ್ನು ಪ್ರೀತಿಸುತ್ತಿದ್ದಾನೆ. ಆ ಹುಡುಗಿಯ ಸೋದರ ಸಂಬಂಧಿ ಮತ್ತು ಇಬ್ಬರೂ ಪ್ರೇಮಿಗಳ ಸಹಪಾಠಿ ಮತ್ತು ಹುಡುಗಿಯ ತಂದೆ ಇದೇ ಮುದುಕನಿಗೆ ಪೆರುಮಾಳ್‍ನನ್ನು ಕೊಲ್ಲಲು ಸುಪಾರಿ ನೀಡುತ್ತಾರೆ. ಈ ಮುದುಕ ಪೆರುಮಾಳ್‍ಗೆ ಪರಿಚಿತನೇ. ಆತನ ಸೈಕಲ್‍ನಲ್ಲೇ ಡ್ರಾಪ್ ಕೇಳಿ ಹತ್ತಿಕೊಳ್ಳುತ್ತಾನೆ. ಕಡೆಗೆ ಆತನನ್ನು ರೈಲ್ವೆಹಳಿಗಳ ಮೇಲೆ ನೂಕಿ ರೈಲಿಗೆ ತಲೆಕೊಡಿಸಿ ಕೊಲ್ಲಲೆತ್ನಿಸುತ್ತಾನೆ. ಪೆರುಮಾಳ್ ಮೊದಲ ಬಾರಿಗೆ ತಿರುಗಿ ಬಿದ್ದು ಮುದುಕ ಮತ್ತು ತನ್ನ ಸಹಪಾಠಿಗೆ ಹೊಡೆಯುತಾನೆ. ಅಷ್ಟರಲ್ಲಿ ಹುಡುಗಿಯ ತಂದೆ ಅಲ್ಲಿಗೆ ಕಾರಿನಲ್ಲಿ ಬರುತ್ತಾನೆ. ಒಂದು ಶಾಟ್‍ನಲ್ಲಿ ಕಾರೊಳಗೆ ಕೂತ ತಂದೆ, ಡಾಶ್‍ಬೋರ್ಡ್‍ನಲ್ಲಿರುವ ಮಚ್ಚು ಮತ್ತು ಹೊರಗೆ ನಿಂತಿರುವ ಪೆರುಮಾಳ್ ಇದ್ದಾರೆ. ತಂದೆ ಮಚ್ಚಿಗೆ ಕೈಹಾಕುವುದಿಲ್ಲ. ಮುದುಕ ಸೋತಿದ್ದಾನೆ, ರೈಲಿಗೆ ಎದುರು ಕೂತು ತಾನೇ ಸಾಯುತ್ತಾನೆ. ಆ ಮುದುಕ ಜಾತಿಯ ವೃಥಾ ಗರ್ವ ಮತ್ತು ಅದ ಸ್ಥಾಪಿಸಲು ಹಿಂಸೆಗೆ ಹಪಹಪಿಸುವ ಮನಸ್ಸು.

ಆದರೆ ಇವತ್ತು ಅದೇ ತಮಿಳುನಾಡಿನಲ್ಲಿ ದ್ರೌಪದಿ ಎಂಬ ಚಲನಚಿತ್ರ ಬಿಡುಗಡೆ ಆಗಿದೆ. ಈ ಚಿತ್ರದಲ್ಲಿ ದಲಿತ ಹುಡುಗರು “ಲವ್ ಜಿಹಾದ್”ನ ಮಾದರಿಯಲ್ಲಿ ಮೇಲ್ಜಾತಿಗಳ ಹೆಣ್ಣುಮಕ್ಕಳನ್ನು ವ್ಯವಸ್ಥಿತ ಷಡ್ಯಂತ್ರದ ಭಾಗವಾಗಿ ಮದುವೆ ಆಗುತ್ತಿದ್ದಾರೆ ಎಂಬಂತಹ ಕಥಾಹಂದರವಿದೆ. ಅದು ಹೇಗೆ ಈ ಚಿತ್ರ ಸೆನ್ಸಾರ್ ಆಗಿ ಬಿಡುಗಡೆಯಾಯಿತೋ ದೇವರೇ ಬಲ್ಲ. ಜಾತ್ಯಹಂಕಾರಗಳ ರುದ್ರನರ್ತನ ಇನ್ನೂ ನಡೆದೇ ಇದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸರ್ಕಾರ ಆಧಾರ್ ವ್ಯವಸ್ಥೆಯನ್ನು ನಂಬುವುದಾದರೆ, SIR‌ ತಪಾಸಣೆಗೂ ಇದನ್ನೇ ಬಳಸಲಿ: ಆರ್‌ ಎಸ್‌ ಶರ್ಮಾ ಸಲಹೆ

ಪ್ರಸ್ತುತ ಚರ್ಚೆಯಲ್ಲಿರುವ ಮತದಾರರ ಪಟ್ಟಿ ಪರಿಷ್ಕರಣೆ (SIR) ಮತ್ತು ದಾಖಲೆಗಳ ತಪಾಸಣೆ ಪ್ರಕ್ರಿಯೆಗೆ ಸಂಬಂಧಿಸಿದಂತೆ ಆಧಾರ್‌ ವ್ಯವಸ್ಥೆಯ ಮಾಜಿ ಮುಖ್ಯಸ್ಥ (UIDAI) ಶರ್ಮಾ ಅವರು ಮಹತ್ವದ ಸಲಹೆಯೊಂದನ್ನು ನೀಡಿದ್ದಾರೆ. ಪ್ರತಿ ಬಾರಿ ಸಾವಿರಾರು...

ಸೋಶಿಯಲ್ ಮೀಡಿಯಾಗಳಲ್ಲಿ ಅಪ್ರಾಪ್ತರಿಗೆ ಹೆಚ್ಚುತ್ತಿರುವ ಅಪಾಯ; ಲೈಂಗಿಕ ಶೋಷಣೆ ತಡೆಗೆ ಮೆಟಾದಿಂದ ಮಹತ್ವದ ನಿರ್ಧಾರ!

ಸಾಮಾಜಿಕ ಜಾಲತಾಣಗಳ ಬಳಕೆ ಯುವಜನರು ಮತ್ತು ಮಕ್ಕಳ ದೈನಂದಿನ ಬದುಕಿನ ಅವಿಭಾಜ್ಯ ಭಾಗವಾಗಿರುವ ಬೆನ್ನಲ್ಲೇ, ಆನ್‌ಲೈನ್‌ನಲ್ಲಿ ಮಕ್ಕಳ ಲೈಂಗಿಕ ಶೋಷಣೆ ಮತ್ತು ದೌರ್ಜನ್ಯಕ್ಕೆ ಸಂಬಂಧಿಸಿದ ಪ್ರಕರಣಗಳನ್ನು ಎದುರಿಸಲು ಮೆಟಾ ಮಹತ್ವದ ನಿರ್ಧಾರ ಕೈಗೊಂಡಿದೆ....

ಬೆಂಗಳೂರಿನ ಎನ್‌ಎಲ್‌ಎಸ್‌ಐಯು‌ನಲ್ಲಿ ಉಮರ್ ಖಾಲಿದ್ ಸಾಕ್ಷ್ಯಚಿತ್ರ ಪ್ರದರ್ಶನ; ಕೇಂದ್ರದ ಹಸ್ತಕ್ಷೇಪಕ್ಕೆ ಎಬಿವಿಪಿ ಮನವಿ

ಬೆಂಗಳೂರಿನಲ್ಲಿರುವ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯಲ್ಲಿ (ಎನ್‌ಎಲ್‌ಎಸ್‌ಐಯು‌) ಜೈಲಿನಲ್ಲಿರುವ ಹೋರಾಟಗಾರ ಉಮರ್ ಖಾಲಿದ್ ಕುರಿತಾದ ಸಾಕ್ಷ್ಯಚಿತ್ರದ ಪ್ರದರ್ಶನವನ್ನು ಕಾಯಂ ಆಗಿ ರದ್ದುಗೊಳಿಸಲು ಆರ್‌ಎಸ್ಎಸ್ ಸಂಯೋಜಿತ ವಿದ್ಯಾರ್ಥಿ ಸಂಘಟನೆ ಎಬಿವಿಪಿ ಕೇಂದ್ರ...

‘NAZA’ಗೆ ವೆನಿಸ್ ವಿಶೇಷ ಜ್ಯೂರಿ ಪ್ರಶಸ್ತಿ; ಸ್ವದೇಶ ಇಸ್ರೇಲ್‌ನ ಎಐ ಹತ್ಯಾಕಾಂಡ ಬಯಲಿಗೆಳೆದ ನಿರ್ದೇಶಕರಿಗೆ ಪೌರತ್ವ ಕಸಿಯುವ ಬೆದರಿಕೆ

ವೆನಿಸ್ ಚಲನಚಿತ್ರೋತ್ಸವದಲ್ಲಿ ವಿಶೇಷ ಜ್ಯೂರಿ ಪ್ರಶಸ್ತಿ ಗೆದ್ದ ‘NAZA’ ಸಾಕ್ಷ್ಯಚಿತ್ರದ ನಿರ್ದೇಶಕರ ವಿರುದ್ಧ ಇಸ್ರೇಲಿ ಸಂಸ್ಕೃತಿ ಸಚಿವ ಮಿಕಿ ಜೋಹರ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ‘ರಾಜ್ಯಕ್ಕೆ ದ್ರೋಹ’ ಎಸಗಿದ್ದಾರೆಂದು ಆರೋಪಿಸಿ ಅವರ ಇಸ್ರೇಲಿ...

ಕರ್ನಾಟಕದಲ್ಲಿ ಬರದ ಬರೆ; ನೀರು, ವಿದ್ಯುತ್‌ ಕೊರತೆ ಸಾಧ್ಯತೆ: ಸಿಎಂ ಡಿಕೆ ಶಿವಕುಮಾರ್‌ ಎಚ್ಚರಿಕೆ

ದುರ್ಬಲ ಮುಂಗಾರು ಹಾಗೂ ಮಳೆಯ ಕೊರತೆಯಿಂದ ಕರ್ನಾಟಕದಲ್ಲಿ ಬರ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುತ್ತಿದ್ದು, ಮುಂದಿನ ದಿನಗಳಲ್ಲಿ ರಾಜ್ಯವು ಕುಡಿಯುವ ನೀರು ಮತ್ತು ವಿದ್ಯುತ್‌ ಕೊರತೆಯನ್ನು ಎದುರಿಸುವ ಸಾಧ್ಯತೆಯಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌...

2,000 ರೂ.ವರೆಗಿನ UPI ಪಾವತಿಗೆ ಶುಲ್ಕವಿಲ್ಲ ಎಂದ ಕೇಂದ್ರ ಸರ್ಕಾರ

ಡಿಜಿಟಲ್ ಪಾವತಿ ಬಳಸುವ ಕೋಟ್ಯಂತರ ಸಾಮಾನ್ಯ ಜನರಿಗೆ ಕೇಂದ್ರ ಹಣಕಾಸು ಸಚಿವಾಲಯ ಮಹತ್ವದ ಸ್ಪಷ್ಟನೆ ನೀಡಿದ್ದು, 2,000 ರೂಪಾಯಿವರೆಗಿನ ಯುಪಿಐ (UPI) ವಹಿವಾಟುಗಳಿಗೆ ಯಾವುದೇ ರೀತಿಯ ಶುಲ್ಕ ವಿಧಿಸುವಂತಿಲ್ಲ ಎಂದು ಅಧಿಸೂಚನೆ ಹೊರಡಿಸಿದೆ....

ಯಾದಗಿರಿ| ಸಿದ್ಧಲಿಂಗೇಶ್ವರ ದೇವಸ್ಥಾನಕ್ಕೆ ತೆರಳಿದ್ದ ದಲಿತರ ಮೇಲೆ ಮಾರಣಾಂತಿಕ ಹಲ್ಲೆ

ಸಿದ್ಧಲಿಂಗೇಶ್ವರ ದೇವಸ್ಥಾನಕ್ಕೆ ತೆರಳಿದ್ದ ದಲಿತ ಸಮುದಾಯದ ಭಕ್ತರ ಮೇಲೆ ಸವರ್ಣೀಯರು ಮಾರಣಾಂತಿಕ ಹಲ್ಲೆ ನಡೆದಿರುವ ಆರೋಪ ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಗುರುಸುಣಿಗಿ ಗುಡ್ಡದಲ್ಲಿ ಕೇಳಿಬಂದಿದೆ. ಚಾಮನಾಳ ಗ್ರಾಮದ ದಲಿತ ಭಕ್ತರನ್ನು ಗುರಿಯಾಗಿಸಿಕೊಂಡು ಗುರುಸುಣಿಗಿ...

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...