ಆ ಈ ಸಂಕಷ್ಟ ಕಾಲದಲ್ಲೂ ಇಂಥದ್ದನ್ನು ಕಾಣಬೇಕಾಯಿತಲ್ಲಾ… ಕಳೆದ ಕೆಲ ದಿನಗಳಿಂದ ಒಂದೇ ಸಮನೆ ಸಾಮಾಜಿಕ ಮಾಧ್ಯಮಗಳಲ್ಲಿ ಕೆಲ ಟೆಲಿವಿಷನ್ ಚಾನೆಲ್ ಗಳನ್ನು ಬಹಿಷ್ಕರಿಸಿ ಎಂಬ ಸಂದೇಶಗಳು ಹರಿದಾಡುತ್ತಿವೆ. ಲಾಕ್ ಡೌನ್ ಪರಿಸ್ಥಿತಿ ಇಲ್ಲದೆ ಹೋಗಿದ್ದರೆ ಈ ಬಹಿಷ್ಕಾರದ ಕರೆ, ಅದಕ್ಕೆ ಓಗೊಡುವ ಪ್ರತಿಭಟನೆ ಇತ್ಯಾದಿಗಳೆಲ್ಲಾ ಬೀದಿಗಳಲ್ಲೇ ನಡೆದು ಹೋಗುತ್ತಿದ್ದವು ಎನ್ನುವುದರಲ್ಲಿ ಸಂಶಯವಿಲ್ಲ.

ಎಂತಹ ವಿಪರ್ಯಾಸ ನೋಡಿ. ಸರಕಾರ ಮಾಧ್ಯಮಗಳನ್ನು ನಿಯಂತ್ರಿಸಲು ಹೊರಟಾಗ ಬೀದಿಗಿಳಿಯುತಿದ್ದ ಜನ ಇಂದು ತಾವೇ ಮಾಧ್ಯಮಗಳಿಗೆ ಬಹಿಷ್ಕಾರ ಹಾಕಲು ಮುಂದಾಗಿದ್ದಾರೆ. ಕೊರೊನದಂತಹ ವೈರಾಣುಗಳ ಸೋಂಕು ಮಾನವ ಸಮಾಜವನ್ನು ಈ ಹಿಂದೆ ಕೂಡಾ ಕಾಡಿದ ಕತೆಯನ್ನು ಚರಿತ್ರೆ ದಾಖಲಿಸುತ್ತದೆ. ಆದರೆ ಮಾಧ್ಯಮಗಳು ಸುಳ್ಳು ಹೇಳುವುದನ್ನು ಪ್ರತಿಭಟಿಸಿ, ಮಾಧ್ಯಮಗಳು ಮತಾಂಧತೆಯನ್ನು ಪೋಷಿಸುವುದನ್ನು ವಿರೋಧಿಸಿ ಜನ ಬೀದಿಗೆ ಇಳಿಯಲು ಸಜ್ಜಾಗುವ ಸನ್ನಿವೇಶವನ್ನು ಭಾರತದ ಚರಿತ್ರೆ ಈ ತನಕ ಬಹುಶ ದಾಖಲಿಸಿರಲಾರದು. ಕರ್ನಾಟಕದ ಮಟ್ಟಿಗಂತೂ ಹೀಗೆ ಮಾಧ್ಯಮದ ವಿರುದ್ಧ ಜನಾಂದೋಲನ ರೂಪುಗೊಳ್ಳುತ್ತಿರುವುದು ಖಂಡಿತಾ ಹೊಸತು.

ಅನಾದಿಯಿಂದಲೂ ಸುಳ್ಳು ಬದುಕಿನ ಭಾಗವಾಗಿಬಿಟ್ಟಿದೆ. ಸುಳ್ಳು ಸಮಾಜದ ಅವಿಭಾಜ್ಯ ಅಂಗದಂತಿದೆ. ರಾಜಕೀಯಕ್ಕಂತೂ ಸುಳ್ಳೇ ಮೂಲ ದ್ರವ್ಯ. ಅದೆಂತಹಾ ಸಜ್ಜನ ರಾಜಕೀಯ ನಾಯಕನಾದರೂ ಸರಿ, ಆತ ಸುಳ್ಳು ಹೇಳುವುದಿಲ್ಲ ಅಂತ ಮಾತ್ರ ಯಾರೂ ತಿಳಿದುಕೊಳ್ಳಬಾರದು ಅಂತ ಶಾಶ್ವತವಾಗಿ ಸಾರುವ ಉದ್ದೇಶದಿಂದಲೇ ಇರಬೇಕು ವೇದವ್ಯಾಸರು ಮಹಾಭಾರತದಲ್ಲಿ ಸಾಕ್ಷಾತ್ ಧರ್ಮರಾಜನ ಬಾಯಲ್ಲೂ ಸುಳ್ಳು ಹೇಳಿಸಿದ್ದು. ಅಧಿಕಾರದ ವ್ಯವಹಾರದಲ್ಲಿ, ಲೌಕಿಕ ಬದುಕಿನ ನಿರ್ವಹಣೆಗಳಲ್ಲಿ ಸುಳ್ಳು ಡಾಳಾಗಿ ಇರುತ್ತದೆ ಎನ್ನುವ ಕಾರಣಕ್ಕೆ, ಸುಳ್ಳನ್ನು ಎತ್ತಿ ತೋರಿಸಲು ಪ್ರಜಾತಂತ್ರದಲ್ಲಿ ಮಾಧ್ಯಮಗಳು ಎಂಬ ಸಂಸ್ಥೆಯನ್ನು ಆವಿಷ್ಕರಿಸಿದ್ದು ಮತ್ತು ಅದಕ್ಕೆ ನಾಲ್ಕನೆಯ ಸ್ಥಂಭ ಎಂಬ ಬಿರುದಾವಳಿ ನೀಡಿರುವುದು. ಹೀಗೆ ಎಲ್ಲರ, ಎಲ್ಲಾ ಬಗೆಯ ಸುಳ್ಳುಗಳನ್ನು ಎತ್ತಿ ತೋರಿಸಲೆಂದೇ ಇರುವ ಸಂಸ್ಥೆಯೇ ಸುಳ್ಳು ಹರಡುವ ಸೋಂಕನ್ನು ಮಿತಿ ಮೀರಿ ಅಂಟಿಸಿಕೊಂಡ ಪರಿಣಾಮವಾಗಿ ಜನರೇ ಬೀದಿಗಿಳಿದು ಮದ್ದರೆಯಲು ಮುಂದಾಗಬೇಕಾದ ಪರಿಸ್ಥಿತಿ ಬಂದಿದೆ. ಇದನ್ನು ಏನೆಂದು ಕರೆಯುವುದು? ಹೇಗೆ ಅರ್ಥ ಮಾಡಿಕೊಳ್ಳುವುದು? ಭವ್ಯ ಭಾರತವನ್ನು ಆವರಿಸುತ್ತಿರುವ ಈ ಸೋಂಕಿನ ಮುಂದೆ ಇಡೀ ಜಗತ್ತನ್ನೇ ಕಂಗೆಡಿಸಿರುವ ಕರೋನ ಸೋಂಕು ಖಂಡಿತಾ ಪೇಲವವಾಗಿ ಕಾಣಿಸುತ್ತದೆ.

ಮಾಧ್ಯಮಗಳು ಗುಟ್ಟಾಗಿ ಸುಳ್ಳು ಹೇಳುವುದು, ಒಗಟಾಗಿ ಸುಳ್ಳು ಹೇಳುವುದು, ಅಸ್ಪಷ್ಟವಾಗಿ ಸುಳ್ಳು ಹೇಳುವುದು, ಸುಳ್ಳು ಹರಡುವ ಉದ್ದೇಶದಿಂದ ಭಾಗಶಃ ಸತ್ಯ ಹೇಳುವುದು ಇತ್ಯಾದಿಗಳೆಲ್ಲಾ ಮಾಧ್ಯಮದ ಚರಿತ್ರೆಯುದ್ದಕ್ಕೂ ಕಂಡ ಸತ್ಯ. ನೋಮ್ ಚಾಮ್ಸ್ಕಿಯವರ ಪ್ರಸಿದ್ಧ Manufacturing consent ಎಂಬ ವಾದ ಹುಟ್ಟಿಕೊಂಡದ್ದು ಈ ಹಿನ್ನೆಲೆಯಲ್ಲೇ. ಅಂದರೆ, ಸುಳ್ಳು ಹೇಳುವ ಉದ್ದೇಶವನ್ನು ಹೊಂದಿದ ಮಾಧ್ಯಮಗಳಿಗೂ ಸುಳ್ಳು ಹೇಳುವುದರ ಬಗ್ಗೆ ಒಂದು ವಿಧದ ಅಳುಕು, ನಾಚಿಕೆ, ಪಾಪಪ್ರಜ್ಞೆ ಇತ್ಯಾದಿಗಳೆಲ್ಲಾ ಇದ್ದ ಕಾರಣಕ್ಕಾಗಿಯೇ ಅವುಗಳು ಸುಳ್ಳು ಹೇಳುವ ವಿವಿಧ ಸೂತ್ರಗಳ ಮೊರೆ ಹೋಗುತ್ತಿದ್ದದ್ದು. ಆದರೆ ಈಗ ಹಾಗಲ್ಲ. ಈಗಿನ ಭಾರತದ ಮಾಧ್ಯಮಗಳು, ಅದರಲ್ಲೂ ಕನ್ನಡ ಮಾಧ್ಯಮ, ಅದರಲ್ಲೂ ಕನ್ನಡ ಟೆಲಿವಿಷನ್ ಚಾನೆಲ್‍ಗಳು ಯಾವ ಅಳುಕೂ ಇಲ್ಲದೆ, ಯಾವ ನಾಚಿಕೆಯೂ ಇಲ್ಲದೆ, ಯಾವ ಪಾಪಪ್ರಜ್ಞೆಯೂ ಇಲ್ಲದೆ ಶುದ್ಧ ಸುಳ್ಳುಗಳನ್ನು ಹೇಳುವುದೇ ಅದ್ಭುತ ದೇಶ ಸೇವೆ ಎನ್ನುವಂತೆ, ಹಸಿಹಸಿ ಸುಳ್ಳುಗಳನ್ನು ಹೇಳುವುದೇ ಅಪ್ರತಿಮ ಈಶ ಸೇವೆ ಎನ್ನುವಂತೆ ವರ್ತಿಸುತ್ತಿವೆ.

ಇಲ್ಲಿ `ದೇಶ ಸೇವೆ’ ಮತ್ತು `ಈಶ ಸೇವೆ’ ಎನ್ನುವ ಪದಗಳನ್ನು ಉದ್ದೇಶ ಪೂರ್ವಕವಾಗಿಯೇ ಬಳಸಿಕೊಳ್ಳಲಾಗಿದೆ. ಯಾಕೆಂದರೆ, ಈ ಸುಳ್ಳುಗಳನ್ನು ಈ ಮಾಧ್ಯಮಗಳು ಸಮರ್ಥಿಸುವುದು ದೇಶ ಭಕ್ತಿಯ ಹೆಸರಲ್ಲಿ ಮತ್ತು ಧರ್ಮ ರಕ್ಷಣೆಯ ನೆಪದಲ್ಲಿ. ಇದು ದುರಂತದೊಳಗಣ ಮಹಾ ದುರಂತ. ಇದನ್ನು ಸತ್ಯಮೇವ ಜಯತೇ ಅಂತ ತನ್ನ ಲಾಂಛನದಲ್ಲಿ ಕೆತ್ತಿಸಿಕೊಂಡಿರುವ ದೇಶದ ದುರ್ಗತಿ ಎಂದು ಕರೆಯ ಬೇಕೋ, ಅಥವಾ ಸತ್ಯವೇ ದೇವರು ಅಂತ ಸಾರುವ ಉಪನಿಷದ್‍ಗಳ ತತ್ವಗಳ ಮೇಲೆ ನಿಂತಿರುವ ಧರ್ಮದ ಅಧಃಪತನ ಎಂದು ಕರೆಯಬೇಕೋ ತಿಳಿಯುವುದಿಲ್ಲ. ಅದೇ ರೀತಿ ಹೀಗೆ ಮಾಡುತ್ತಿರುವವರು ಮೂರ್ಖತನದಿಂದ ಮಾಡುತ್ತಿದ್ದಾರೋ ಅಥವಾ ಯಾವುದೋ ಮನೋಕ್ಷೋಭೆಗೆ ಒಳಗಾಗಿ ಹೀಗೆ ಮಾಡುತ್ತಿದ್ದಾರೋ ಎನ್ನುವು ಕುರಿತೂ ವೈಜ್ಞಾನಿಕ ಅಧ್ಯಯನಗಳಾಗಬೇಕಿವೆ. ಇದರ ಬಗ್ಗೆ ಹೇಸಿಗೆ ಪಟ್ಟುಕೊಂಡರಷ್ಟೇ ಸಾಲದು, ಇದರ ಬಗ್ಗೆ ರೋಷಾವಿಷ್ಟತೆಯಿಂದ ಪ್ರತಿಭಟಿಸಿದರಷ್ಟೆ ಸಾಲದು, ಅಲ್ಲೋ ಇಲ್ಲೋ ಒಂದು ಚಾನೆಲ್‍ಅನ್ನು ಬಹಿಷ್ಕರಿಸಿದರೆ ಸಾಲದು. ಈ ಇಡೀ ವಿದ್ಯಮಾನವನ್ನು ಸೂಕ್ಷ್ಮವಾಗಿ ಅರ್ಥ ಮಾಡಿಕೊಳ್ಳುವ ಕೆಲಸ ಆಗಬೇಕು. ಯಾಕೆಂದರೆ, ಮಾಧ್ಯಮಗಳ ಈ ವರ್ತನೆ ಇದೆಯಲ್ಲಾ ಇದು ಒಂದು ರೋಗವಲ್ಲ, ಇದು ಯಾವುದೋ ಭೀಕರ ರೋಗದ ಲಕ್ಷಣ. ದೇಶದ ಆತ್ಮಸಾಕ್ಷಿಯ ಕೋಶಗಳಲ್ಲಿ ಬೀಡುಬಿಟ್ಟಿರುವ ರೇಬೀಸ್‍ನಂತಹ ಯಾವುದೋ ಭಯಾನಕ ವೈರಾಣು ಸಮಾಜದ ಸಾಕ್ಷಿಪ್ರಜ್ಞೆಗಳಂತೆ ಕೆಲಸ ಮಾಡಬೇಕಾಗಿರುವ ಮಾಧ್ಯಮಗಳನ್ನು ಈ ರೀತಿ ವಿಲಕ್ಷಣವಾಗಿ ವರ್ತಿಸಲು ಪ್ರೇರೇಪಿಸುತ್ತಿದೆ. ಈ ಸೂಕ್ಷ್ಮವನ್ನು ಅರಿಯದೆ ಯಾವುದೊ ಒಂದೆರಡು ಚಾನೆಲ್‍ಗಳನ್ನು ಬಹಿಷ್ಕರಿಸಿದರೆ ಅದು ಅವುಗಳಿಗೆ ಪಾಠ ಕಲಿಸುವ ಬದಲಿಗೆ ಅವುಗಳ ‘ಪ್ರತಿಷ್ಠೆ’ ಮತ್ತು ಅವುಗಳ ಜನಪ್ರಿಯತೆಯನ್ನು ಇನ್ನೂ ಹೆಚ್ಚಿಸುವ ಸಾಧ್ಯತೆಯೂ ಇದೆ.

ಹೀಗೆ ಆಳವಾದ ಅಧ್ಯಯನವೊಂದು ನಡೆಯಬೇಕು ಎನ್ನುವ ವಾದಕ್ಕೆ ಪೂರಕವಾಗಿ ಮೇಲ್ನೋಟಕ್ಕೆ ಕಾಣಿಸುವ ವಸ್ತುಸ್ಥಿತಿಯ ಕೆಲ ಅಂಶಗಳನ್ನು ನೋಡೋಣ. ಕನ್ನಡದ ಟಿವಿ ಚಾನೆಲ್‍ಗಳ ವರ್ತನೆಯನ್ನೇ ಗಮನದಲ್ಲಿಸಿ ನೋಡಿದಾಗ ತಿಳಿಯುವುದೇನು? ಮೊದಮೊದಲಿಗೆ ಈ ಚಾನೆಲ್‍ಗಳಲ್ಲಿ ಆಂಕರ್‍ಗಳು ವಿದೂಷಕರಂತೆ ವರ್ತಿಸತೊಡಗಿದಾಗ, ಪುಂಖಾನುಪುಂಖ ಉಪದೇಶಗಳಲ್ಲಿ ಹದವಾಗಿ ಸುಳ್ಳನ್ನು ಬೆರೆಸತೊಡಗಿದಾಗ, ಚರ್ಚೆಗೆ ಅಂತ ಕರೆದು ಕೂರಿಸಿದವರ ಮೇಲೆ ವಿಕಾರವಾಗಿ ಅರಚಾಡುತ್ತಿದ್ದಾಗ, ನಾಚಿಕೆ ಮುಂತಾದ ಸೂಕ್ಷ್ಮ ಸಂವೇದನೆಗಳನ್ನು ಕಳೆದುಕೊಂಡು ವ್ಯವಹರಿಸಲು ತೊಡಗಿದಾಗ, ಧರ್ಮಾಂಧತೆಯನ್ನು ಸಾರುವ ನುಡಿಗಟ್ಟುಗಳನ್ನು ಎಗ್ಗಿಲ್ಲದೆ ಬಳಸತೊಡಗಿದಾಗ ಅದು ಒಂಥಾರಾ ಎಲೆಕ್ಟ್ರಾನಿಕ್ಸ್ ಮಾಧ್ಯಮದ ಟ್ಯಾಬ್ಲಾಯ್ಡೀಕರಣ (Tabloidization) ಎಂಬಂತೆ ತೋರುತಿತ್ತು. ಈಗ ನೋಡಿದರೆ, ಅದು ಅಷ್ಟೊಂದು ಸರಳವಾದ ರೂಪಾಂತರ ಅಲ್ಲ ಅನ್ನಿಸುತ್ತದೆ. ಯಾಕೆಂದರೆ ಈ ಟ್ಯಾಬ್ಲಾಯ್ಡೀಕರಣದ ಹಿಂದೆ ಇರುವುದು ಕೇವಲ ಆರ್ಥಿಕ ಲೆಕ್ಕಾಚಾರ. ತೀರಾ ಕೆಳಮಟ್ಟಕ್ಕಿಳಿದು ಆ ಮಟ್ಟದಲ್ಲೇ ಇದ್ದ ದೊಡ್ಡ ಸಂಖ್ಯೆಯ ಜನರನ್ನು ತಮ್ಮತ್ತ ಆಕರ್ಷಿಸಿ ಹಣ ಮಾಡುವ ಸರಳ ವ್ಯಾವಹಾರಿಕ ಲೆಕ್ಕಾಚಾರ ಅದು.

ಅಷ್ಟೇ ಆಗಿದ್ದರೆ, ಅದೊಂದು ಸಣ್ಣ ಮಟ್ಟಿನ ಅನಾಚಾರ ಮಾತ್ರ. ಮಾರುಕಟ್ಟೆಯ ಶಕ್ತಿಗಳೇ ಅದನ್ನು ಕಾಲಾಂತರದಲ್ಲಿ ಸರಿದಾರಿಗೆ ತರುತ್ತವೆ. ಈಗ ನಾವು ಕಾಣುತ್ತಿರುವ ಮಾಧ್ಯಮಾಧಃಪತನದ ಹಿಂದೆ ಇರುವುದು ಇಂತಹ ವ್ಯಾವಹಾರಿಕವಾದ ಅಲ್ಪಕಾಲೀನ ಅರ್ಥಶಾಸ್ತ್ರವಲ್ಲ. ಅದರ ಹಿಂದಿನ ಪ್ರೇರೇಪಣೆ ಭಾರೀ ಅನಾಹುತಕಾರಿಯಾದ ಅಧಿಕಾರ ರಾಜಕೀಯ ಸೃಷ್ಟಿಸಿದ ಒಂದು ಸೋಂಕು. ಈ ಸುಳ್ಳುಗಳ ಸರಣಿ ಪ್ರಾರಂಭವಾದದ್ದು ಟಿವಿ ಸ್ಟುಡಿಯೋಗಳಲ್ಲಿ ಅಲ್ಲ. ಇವೆಲ್ಲಾ ಮೊದಲು ಪ್ರಾರಂಭವಾದದ್ದು ಒಂದು ರಾಜಕೀಯ ತಂತ್ರಗಾರಿಕೆಯ ಭಾಗವಾಗಿ. ಒಂದು ರಾಜಕೀಯ ಪಕ್ಷ ಅಪ್ಪಟ ಸುಳ್ಳುಗಳನ್ನು ಬಳಸಿಯೇ ತನ್ನ ಚುನಾವಣಾ ತಂತ್ರಗಾರಿಕೆಯನ್ನು ಹೆಣೆಯಲು ಪ್ರಾರಂಭಿಸಿತು. ಕೋಟಿಕೋಟಿ ಸುಳ್ಳುಗಳನ್ನು ಕೋಟಿ ಕೋಟಿ ಬಾರಿ, ಕೋಟಿಕೋಟಿ ಜನರ ಮುಂದೆ ಇರಿಸಿದರೆ ಒಂದಷ್ಟು ಸಾವಿರ ಸಂಖ್ಯೆಯ ಜನರಾದರೂ ಅದನ್ನು ಸತ್ಯವೆಂದು ನಂಬುತ್ತಾರೆ ಎನ್ನುವ ಲೆಕ್ಕಾಚಾರದ ಚುನಾವಣಾ ತಂತ್ರಗಾರಿಕೆ ಇದು.

ಡಿಜಿಟಲ್ ತಂತ್ರಜ್ಞಾನ ಸಾಧ್ಯವಾಗಿಸಿದ ಬೃಹತ್ ಮಾಹಿತಿ (Big data) ಜಾಲವನ್ನು ಬಳಸಿ ತರಹೇವಾರಿ ಸುಳ್ಳುಗಳನ್ನು ಬಳಸಿ ಒಂದು ರೀತಿಯ ರಾಷ್ಟ್ರೀಯತೆಯ ಅಭದ್ರತೆ ಮತ್ತು ಒಂದು ರೀತಿಯ ಧಾರ್ಮಿಕ ಅಭದ್ರತೆಯನ್ನು ಏಕ ಕಾಲಕ್ಕೆ ಒಂದು ದೊಡ್ಡ ಸಂಖ್ಯೆಯ ಜನಮನದಲ್ಲಿ ಸೃಷ್ಟಿಸುವ ಮೂಲಕ ರಾಜಕೀಯ ಅಧಿಕಾರವನ್ನು ಪಡೆಯುವ ಚುನಾವಣಾ ತಂತ್ರಗಾರಿಕೆ ಇದು. ಈ ತಂತ್ರಗಾರಿಕೆ ಒಂದು ಉದ್ಯಮೋಪಾದಿಯಲ್ಲಿ ನಡೆಯಲು ಪ್ರಾರಂಭವಾಗಿ ಇಡೀ ಸಮಾಜದ ನೈತಿಕ ಸಮತೋಲನವನ್ನೇ ಬುಡಮೇಲು ಮಾಡಿದ ಹಾಗಿದೆ. ಸತ್ಯ ಮತ್ತು ಸುಳ್ಳುಗಳನ್ನು ಪ್ರತ್ಯೇಕಿಸುತ್ತಾ ತನ್ನ ವೈಯಕ್ತಿಕ ಮತ್ತು ಸಾಮಾಜಿಕ ಬದುಕಿನಲ್ಲಿ ಮನುಷ್ಯ ಮನುಷ್ಯನಾಗಿ ವ್ಯವಹರಿಸುವುದು ಒಂದು ಸೂಕ್ಷ್ಮವಾದ ಸಮತೋಲನ. ಒಮ್ಮೆ ಇದರ ಲಯ ತಪ್ಪಿದರೆ ಅದು ತೀರಾ ಅಸಹಜವಾದ ವಿದ್ಯಮಾನಗಳಿಗೆ ಕಾರಣವಾಗಬಹುದು.

ತಣ್ಣಗೆ ಸಾಮಾಜಿಕ ಮಾಧ್ಯಮಗಳ ಜಾಲತಾಣಗಳ ಪ್ರಯೋಗಾಲಯದಲ್ಲಿ ಸೃಷ್ಟಿಯಾದ ಈ ವೈರಾಣು ಈಗ ಮಾಧ್ಯಮಗಳ ಮಂದಿಯ ಹೃದಯ ಮತ್ತು ಮಿದುಳು ಎರಡನ್ನೂ ಏಕಕಾಲದಲ್ಲಿ ಆವರಿಸಿಕೊಂಡಿದೆ. ಸತ್ಯ ಮತ್ತು ಸುಳ್ಳುಗಳನ್ನು ಪ್ರತ್ಯೇಕಿಸುವ ಸೂಕ್ಷ್ಮ ಪ್ರಜ್ಞೆ, ಸುಳ್ಳನ್ನು ಹೇಗೆ ನಿರಾಕರಿಸಬೇಕು ಮತ್ತು ಸತ್ಯವನ್ನು ಹೇಗೆ ಸ್ವೀಕರಿಸಬೇಕು ಎಂಬ ನೈತಿಕ ಪ್ರಜ್ಞೆ ಸಾರ್ವತ್ರಿಕವಾಗಿ ಕುಸಿಯುತ್ತಿರುವ ಪ್ರಾತಿನಿಧಿಕ ರೂಪದಲ್ಲಿ ಈ ಮಾಧ್ಯಮ ಸಂಸ್ಥೆಗಳು ಮತ್ತು ಅವುಗಳಲ್ಲಿ ವಕ್ಕರಿಸಿರುವ ಗಂಡು- ಹೆಣ್ಣುಗಳು ಕಾಣಿಸುತ್ತವೆ. ಮೇಲೆ ಹೇಳಿರುವ ಹಾಗೆ ಈ ಹಂತದಲ್ಲಿ ಇದೊಂದು ಊಹಾತ್ಮಕ ಸತ್ಯ (Hypothesis). ಇದನ್ನು ಪರಿಶೀಲಿಸುವ ಮೂಲಕ ನಮ್ಮ ಮಾಧ್ಯಮಗಳ ಸುಳ್ಳು ಹೇಳುವ ಹೊಸ ಗೀಳನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕು. ಚಿಕಿತ್ಸೆ ನಂತರ.

LEAVE A REPLY

Please enter your comment!
Please enter your name here