Homeಮುಖಪುಟಈ ಮಧುರ ದಾಂಪತ್ಯಕ್ಕೆ ‘ಎನ್‌ಆರ್‌ಸಿ’ ಏಕೆ?

ಈ ಮಧುರ ದಾಂಪತ್ಯಕ್ಕೆ ‘ಎನ್‌ಆರ್‌ಸಿ’ ಏಕೆ?

ಭಾರತ- ಬಾಂಗ್ಲಾ ನಡುವಿನ ಗಡಿಗಳನ್ನು ಮೀರಿದ ಅಫ್ಸಾನಾ ಬೀಬಿ-ಶೇಖ್ ರಫೀಕುಲ್‌ ಪ್ರೇಮಕಥನವಿದು... 26 ವರ್ಷಗಳ ದಾಂಪತ್ಯಕ್ಕೆ ಯಾವ ಪುರಾವೆ ಬೇಕು?

- Advertisement -
- Advertisement -

ನಾನು ಅವನನ್ನು ಮಾತ್ರ ಮದುವೆಯಾಗುತ್ತೇನೆ ಎಂದು ಹೇಳಿದ್ದ ಅಫ್ಸಾನಾ ಬೀಬಿ ಅವರಿಗೆ ಆಗ ಆಕೆಗೆ ಕೇವಲ 14 ವರ್ಷ. ಇಂದು, ಅವರು ಶೇಖ್ ರಫೀಕುಲ್ ಜೊತೆ 26 ವರ್ಷಗಳ ವೈವಾಹಿಕ ಜೀವನವನ್ನು ಪೂರ್ಣಗೊಳಿಸಿದ್ದಾರೆ. ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಜಿಲ್ಲೆಯ ಲಾಲ್ಗೋಲಾ ಎಂಬ ಗಡಿ ಗ್ರಾಮದಲ್ಲಿ ವಾಸಿಸುತ್ತಿದ್ದಾರೆ. “ನಾವು ಎರಡು ವಿಭಿನ್ನ ದೇಶಗಳಿಗೆ ಸೇರಿದವರಾಗಿರುವುದರಿಂದ ನಮ್ಮಿಬ್ಬರ ಪೋಷಕರು ನಮ್ಮ ಮದುವೆಯನ್ನು ವಿರೋಧಿಸಿದ್ದರು” ಎಂದು ಅವರು ನೆನಪಿಸಿಕೊಳ್ಳುತ್ತಾರೆ.

ಅವರ ಒಂದು ಅಂತಸ್ತಿನ ಮನೆಯ ಮೇಲೆ ಕುಳಿತು ಮೆಲುಕು ಹಾಕುತ್ತಿದ್ದ ಅವರಿಗೆ, ದೂರದ ಬಿಸಿಲಿನಲ್ಲಿ ಕಾಣುವ ತಾಜಾ, ಹಳದಿ ಸಾಸಿವೆ ಹೊಲಗಳು. ಅದರ ಮಧ್ಯೆ ಕಾಡುವ ವಿರೋಧ ಮತ್ತು ಅಸಮ್ಮತಿಯ ಮಂದ ನೆನಪುಗಳು.

50 ವರ್ಷದ ರಫೀಕುಲ್ ಅವರು ಸುಮಾರು 31 ವರ್ಷಗಳ ಹಿಂದೆ ಅಫ್ಸಾನಾ ಅವರೊಂದಿಗೆ ಭಾರತದಲ್ಲಿ ಬದುಕಲೆಂದು ತಮ್ಮ ಕುಟುಂಬ ಮತ್ತು ದೇಶವನ್ನು (ಬಾಂಗ್ಲಾದೇಶ) ತೊರೆದಿದ್ದರು. “ಮೊದಲ ನೋಟದ ಪ್ರೀತಿಯದು. ಅವಳನ್ನು ಮದುವೆಯಾಗುವುದು ನನ್ನ ಜೀವನದ ಪ್ರಮುಖ ನಿರ್ಧಾರವಾಗಿತ್ತು. ನಾನು ದೇಶತೊರೆದಿದ್ದಕ್ಕಾಗಿ ಒಂದು ದಿನವೂ ವಿಷಾದಿಸುವುದಿಲ್ಲ” ಎಂದು ರಫೀಕುಲ್ ಹೇಳುತ್ತಾರೆ.

ಭಾರತ-ಬಾಂಗ್ಲಾದೇಶ ಗಡಿಯಿಂದ ಕೇವಲ ಎರಡು ಕಿಲೋಮೀಟರ್ ದೂರದಲ್ಲಿರುವ ಲಾಲ್ಗೋಲಾ ಹಳ್ಳಿಯಲ್ಲಿ ಈ ದಂಪತಿಗಳು ಮತ್ತು ಅವರ ನಾಲ್ಕು ಮಕ್ಕಳು ವಾಸಿಸುತ್ತಿದ್ದಾರೆ. ಗಡಿಯಲ್ಲಿರುವ ಮುಳ್ಳುತಂತಿಯ ಬೇಲಿಗಳ ಆಚೆಯೇ ರಫೀಕುಲ್ ಬೆಳೆದದ್ದು, ಗಡಿಯಲ್ಲೇ ಹರಿಯುವ ಪದ್ಮಾ ನದಿಯು ಎರಡು ದೇಶಗಳ ನಡುವಿನ ನೈಸರ್ಗಿಕ ಗಡಿಯಾಗಿದೆ.

“ಆಗ, 90ರ ದಶಕದಲ್ಲಿ, ಇದು ಅಂದಾಜಿನ ಗಡಿಯಾಗಿತ್ತು. ಯಾವುದೇ ಬೇಲಿ ಇರಲಿಲ್ಲ. ಎರಡೂ ಕಡೆ ಜನರ ಸಂಚಾರ ಸಾಮಾನ್ಯವಾಗಿತ್ತು” ಎಂದು ರಫೀಕುಲ್ ನೆನಪಿಸಿಕೊಳ್ಳುತ್ತಾರೆ. ಕೆಲಸ ಸಿಗುವ ನಿರೀಕ್ಷೆಯಲ್ಲಿ ಲಾಲ್ಗೊಲಾಗೆ ತೆರಳಲು ಅವರು ಉದ್ದೇಶಿಸಿದ್ದರು. ಆದರೆ ಅವರು ಕೋಲ್ಕತ್ತಾಗೆ ಬಂದರು. ಅವರು ತಮ್ಮ ಮನೆಗೆ ಮರಳಲು ಹಣ ಸಂಪಾದಿಸಲು ಸೀಲ್ದಾ ರೈಲು ನಿಲ್ದಾಣದಲ್ಲಿ ಕಾರ್ಮಿಕನಾಗಿ ಕೆಲಸ ಮಾಡಬೇಕಾಗಿತ್ತು.

ಆದರೆ, ಅವರಿಚ್ಚಿಸಿದ್ದ ಉದ್ಯೋಗ ಅಲ್ಲಿ ದೊರೆಯಲಿಲ್ಲ. ಹೀಗಾಗಿ ಅವರು ಮುರ್ಷಿದಾಬಾದ್‌ಗೆ ಮರಳಿದರು. ಐದು ವರ್ಷಗಳ ಕಾಲ ಅಲ್ಲಿ ಕೆಲಸ ಮಾಡಿದರು. ಆಗ ಅವರು ಅಫ್ಸಾನಾ ಅವರ ಸಹೋದರರ ಗೆಳೆಯನಾಗಿದ್ದರು. ನಂತರ, ರಫೀಕುಲ್ ಅವರು ಅಫ್ಸಾನಾರನ್ನು ಮೊದಲ ಬಾರಿಗೆ ಭೇಟಿ ಮಾಡಿದರು. ಅದೂ, ಅವರ ಮನೆಯಲ್ಲೇ. ಆದರೆ, ಅವರ ಪ್ರೀತಿಯಿಂದ ಮದುವೆಯವರೆಗಿನ ಪ್ರಯಾಣವು ಸುಲಭವಾಗಿರಲಿಲ್ಲ.

“ರಫೀಕುಲ್ ಅವರ ತಂದೆ ನಮ್ಮ ಮದುವೆಯನ್ನು ಒಪ್ಪಲಿಲ್ಲ. ನನ್ನ ಪೋಷಕರು ಮತ್ತು ಸಹೋದರರೂ ಕೂಡ ಇದಕ್ಕೆ ವಿರುದ್ಧವಾಗಿದ್ದರು. ಏಕೆಂದರೆ, ಎರಡೂ ದೇಶಗಳ ಗಡಿಯಲ್ಲಿ ಬೇಲಿಗಳು ಬಂದರೆ ಏನಾಗುತ್ತದೆ ಎಂದು ಅವರು ಭಯಪಟ್ಟಿದ್ದರು” ಎಂದು 40 ವರ್ಷದ ಅಫ್ಸಾನಾ ಹೇಳುತ್ತಾರೆ.

ಆದರೂ ಅವರು ಹೇಗೂ ಮದುವೆಯಾದರು. ರಫೀಕುಲ್ ಅವರು ಕುಟುಂಬವನ್ನು, ಬಾಂಗ್ಲಾವನ್ನು ತೊರೆದು ಭಾರತದಲ್ಲಿ ಅಫ್ಸಾನಾ ಜೊತೆ ನೆಲೆಸಲು ಅತ್ಯಂತ ಧೈರ್ಯಶಾಲಿ ನಿರ್ಧಾರವನ್ನು ತೆಗೆದುಕೊಂಡರು. “ನನ್ನ ಮಾವನ ಮನೆಯವರು ನಮಗೆ ಅವರ ಮನೆಯಲ್ಲಿ ಇರಲು ಅವಕಾಶ ಕಲ್ಪಿಸಿಕೊಟ್ಟರು. ಅಲ್ಲದೆ, ಸಣ್ಣ ಜಮೀನನ್ನು ಖರೀದಿಸಲು ನಮಗೆ ಸಹಾಯ ಮಾಡಿದರು. ನಾವು ನೆಲೆ ನಿಲ್ಲಲು ಅವರು ಸಹಕರಿಸಿದರು” ಎಂದು ರಫೀಕುಲ್ ಹೇಳುತ್ತಾರೆ.

ರಫೀಕುಲ್ ಅವರು ಬಾಂಗ್ಲಾದೇಶದಲ್ಲಿ ಅವರ ಹೆತ್ತವರು ಮತ್ತು ನಾಲ್ಕು ಸಹೋದರಿಯರೊಂದಿಗೆ ವಾಸವಾಗಿದ್ದರು. ಅವರು ಬಾಂಗ್ಲಾ ತೊರೆದು ಬಂದ ನಂತರ, ಕಳೆದ ಎರಡು ದಶಕಗಳಲ್ಲಿ ಒಮ್ಮೆ ಮಾತ್ರ ಮನೆಗೆ ಹೋಗಿಬಂದಿದ್ದಾರೆ. ಅದು ಕೇವಲ ಒಂದು ದಿನಕ್ಕಾಗಿ ಮಾತ್ರ. “ಸುಮಾರು 10 ವರ್ಷಗಳ ಹಿಂದೆ, ನನ್ನ ತಾಯಿ ಇನ್ನಿಲ್ಲ ಎಂಬ ಸುದ್ದಿ ಬಂದಿತ್ತು. ಆಗ ಗಡಿ ಪ್ರವೇಶಕ್ಕೆ ಸಂಬಂಧಿತ ದಾಖಲೆಗಳನ್ನು ಸಲ್ಲಿಸಿದ ನಂತರ ಭಾರತೀಯರಿಗೆ ಬಾಂಗ್ಲಾದೇಶಕ್ಕೆ ಒಂದು ದಿನ ಭೇಟಿ ನೀಡಲು ಅವಕಾಶವನ್ನು ಗಡಿ ಭದ್ರತಾ ಪಡೆ ನೀಡುತ್ತಿತ್ತು” ಎಂದು ಅವರು ಹೇಳುತ್ತಾರೆ.

ದಂಪತಿಗಳ ಜೀವನವು ಸರಾಗವಾಗಿ ಸಾಗುತ್ತಿದೆ. ಅವರ ಹಿರಿಯ ಮಗ ಚೆನ್ನೈನಲ್ಲಿ ಕೆಲಸ ಮಾಡುತ್ತಿದ್ದಾರೆ. ಒಬ್ಬ ಮಗಳ ಮದುವೆಯಾಗಿದೆ. ಅವರ ಇನ್ನಿಬ್ಬರು ಹೆಣ್ಣು ಮಕ್ಕಳು ಶಾಲೆಯಲ್ಲಿ ಓದುತ್ತಿದ್ದಾರೆ.

ಆದರೆ, ಅಸ್ಸಾಂನಲ್ಲಿ ರಾಷ್ಟ್ರೀಯ ನಾಗರಿಕರ ನೋಂದಣಿ (NRC) ಜಾರಿಗೊಳಿಸಲು ಮುಂದಾದಾಗ ರಫೀಕುಲ್‌ಗೆ ಅನಿಶ್ಚಿತತೆ ಎದುರಾಗಿದೆ. ರಫೀಕುಲ್ ಈಗ ತನ್ನ ಭವಿಷ್ಯದ ಬಗ್ಗೆ ಚಿಂತಿಸುತ್ತಿದ್ದಾರೆ. “ಏನಾಗುತ್ತದೆ ಎಂದು ನನಗೆ ಗೊತ್ತಿಲ್ಲ. ನನ್ನ ಬಳಿ ಎಲ್ಲಾ ಭಾರತೀಯ ದಾಖಲೆಗಳು ಮತ್ತು ಕಾಗದಗಳಿವೆ. ನನ್ನ ಹೆಂಡತಿ ಮಕ್ಕಳಿಗಿಂತ ನನ್ನನ್ನು ಈ ದೇಶದವನಾಗಿಸುವ ದಾಖಲೆ ಬೇರೊಂದಿಲ್ಲ. ಅವು ನನ್ನ ಪ್ರಮುಖ ದಾಖಲೆಗಳಾಗಿವೆ” ಎನ್ನುತ್ತಾರೆ ರಫೀಕುಲ್.

“ನಾನು ಅವನನ್ನು ತೊರೆಯಲು ಎಂದಿಗೂ ಅನುಮತಿಸುವುದಿಲ್ಲ. ನನ್ನ ಮತ್ತು ನನ್ನ ಮಕ್ಕಳ ಬಗ್ಗೆ ಅವರಿಗೆ ಜವಾಬ್ದಾರಿ ಇದೆ. ನಾನು ಭಾರತದಲ್ಲಿ ಅವರೊಂದಿಗೆ ನನ್ನ ಜೀವನವನ್ನು ಕಟ್ಟಿಕೊಂಡಿದ್ದೇನೆ. ಯಾರೂ ಅವರನ್ನು ನಮ್ಮಿಂದ ದೂರ ಮಾಡಲು ಸಾಧ್ಯವಿಲ್ಲ” ಎಂದು ಅಫ್ಸಾನಾ ಹೇಳುತ್ತಾರೆ.

ಮೂಲ: ಇಂಡಿಯನ್ ಎಕ್ಸ್‌ಪ್ರೆಸ್‌

ಕನ್ನಡಕ್ಕೆ: ಸೋಮಶೇಖರ್ ಚಲ್ಯ


ಇದನ್ನೂ ಓದಿ: ಮತಾಂತರ ನಿಷೇಧ ಕಾಯ್ದೆ ಬಗ್ಗೆ ಆತಂಕ ಬೇಡ: ಸಿಎಂ ಹೇಳಿಕೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಅರವಿಂದ್ ಕೇಜ್ರಿವಾಲ್‌ಗೆ ಮಧ್ಯಂತರ ಜಾಮೀನು ನೀಡುವ ಬಗ್ಗೆಯೂ ಯೋಚಿಸಬಹುದು: ಸುಪ್ರೀಂ ಕೋರ್ಟ್‌

0
ಲೋಕಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಅರವಿಂದ್ ಕೇಜ್ರಿವಾಲ್‌ಗೆ ಮಧ್ಯಂತರ ಜಾಮೀನು ನೀಡುವ ಬಗ್ಗೆ ಕೂಡ ನಾವು ಯೋಚಿಸಬಹುದು ಎಂದು ಸುಪ್ರೀಂ ಕೋರ್ಟ್ ನಿನ್ನೆ ಹೇಳಿದೆ. ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ಇಡಿ) ತನ್ನ...