Homeಎಕಾನಮಿಕುಸಿಯುತ್ತಲೇ ಇದೆ ಆರ್ಥಿಕತೆ: ಜನಕ್ಕೆ ಈಗಲಾದರೂ ಅರ್ಥವಾದೀತೆ...

ಕುಸಿಯುತ್ತಲೇ ಇದೆ ಆರ್ಥಿಕತೆ: ಜನಕ್ಕೆ ಈಗಲಾದರೂ ಅರ್ಥವಾದೀತೆ…

ದುರಂತವೆಂದರೆ, ಭಾರತೀಯ ವಾಯುಸೇನೆ ಬಳಸುತ್ತಿರುವ ಹಲವು ವಿಮಾನ ಮತ್ತು ಹೆಲಿಕಾಪ್ಟರ್‌ಗಳನ್ನು ತಯಾರಿಸಿರುವ ಎಚ್‌ಎಎಲ್ ಬಳಿ ಕಾರ್ಮಿಕರಿಗೆ ಸಂಬಳ ಕೊಡಲು ಹಣವಿಲ್ಲ!

- Advertisement -
- Advertisement -

ತೀವ್ರ ಆರ್ಥಿಕ ಹಿಂಜರಿತದತ್ತ ಭಾರತ!

ಕನ್ನಡಿಯೊಳಗಿನ ಗಂಟನ್ನು ತೋರಿಸಿ, ಜನರಲ್ಲಿ ಇನ್ನಿಲ್ಲದ ಆಸೆಗಳನ್ನು ಹುಟ್ಟಿಸಿ ಮೊದಲ ಅವಧಿಗೆ ಅಧಿಕಾರಕ್ಕೆ ಬಂದ ನರೇಂದ್ರ ಮೋದಿ ಸರಕಾರ, ಎರಡನೆಯ ಅವಧಿಯ ಮೊದಲ ಬಜೆಟಿನಲ್ಲಿಯೂ ಸ್ವರ್ಗವನ್ನೇ ಭೂಮಿಗಿಳಿಸುವ ಭರವಸೆ ನೀಡಿದೆ. ಆದರೆ ಆರ್ಥಿಕ ಪರಿಸ್ಥಿತಿ ಮಾತ್ರ ಅದಕ್ಕೆ ವ್ಯತಿರಿಕ್ತವಾಗಿದೆ. ದೇಶದ ಎದುರಿಸಲಿರುವ ಭೀಕರ ಆರ್ಥಿಕ ತುರ್ತು ಪರಿಸ್ಥಿತಿಯ ಲಕ್ಷಣಗಳನ್ನಷ್ಟೇ ಇಲ್ಲಿ ಕೆಲವು ಉದಾಹರಣೆಗಳ ಮೂಲಕ ನೋಡೋಣ.

ಆರ್ಥಿಕತೆಯು ತೀರಾ ಮಂದಗತಿಯಲ್ಲಿ ಸಾಗುತ್ತಿದ್ದು, ಭಯಹುಟ್ಟಿಸುವಷ್ಟು ಪ್ರಮಾಣದಲ್ಲಿ ದಾಖಲೆ ಮಟ್ಟಕ್ಕೆ ಏರಿರುವ ನಿರುದ್ಯೋಗದ ಜೊತೆ, ಕೃಷಿ ಬಿಕ್ಕಟ್ಟು ಸೇರಿಕೊಂಡು ಜನರ ಜನಜೀವನದ ಮೇಲೆ ಅಸಹನೀಯ ಪರಿಣಾಮ ಬೀರುತ್ತಿದೆ ಎಂದು ಹೇಳಲು ಆರ್ಥಿಕ ತಜ್ಞರು ಬೇಕಾಗಿಲ್ಲ. ಸ್ವಂತ ಅನುಭವದಿಂದ, ಸುತ್ತಮುತ್ತ ಗಮನಿಸುವುದರಿಂದಲೇ ಇದನ್ನು ಹೇಳಬಹುದು. ಇದರ ಪರಿಣಾಮ ಕೇವಲ ಬಡ ಮತ್ತು ಮಧ್ಯಮ ವರ್ಗದ ಜನರ ಮೇಲೆ ಆಗುತ್ತಿಲ್ಲ. ಅದಾನಿ, ಅಂಬಾನಿಯಂತಹ ಗುಜರಾತಿ ಕುಬೇರರ ಹೊರತಾಗಿ ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ಯಮಿಗಳಿಗೂ ಎಂತಹಾ ಪರಿಣಾಮ ಆಗುತ್ತಿದೆ ಎಂಬುದನ್ನು ಕಾಫಿ ಡೇ ಸಾಮ್ರಾಜ್ಯ ಕಟ್ಟಿದ ಸಿದ್ಧಾರ್ಥ ಹೆಗಡೆಯವರ ದುರಂತ ಸಾವಿನಲ್ಲಿ ಕಾಣಬಹುದು.

ಈಗ ಕೆಲವು ಅಂಕಿ ಅಂಶಗಳನ್ನು ಗಮನಿಸೋಣ. ಮುಖ್ಯ ಕ್ಷೇತ್ರದ ಕೈಗಾರಿಕಾ ಬೆಳವಣಿಗೆ ದರ ಜೂನ್ 2019ರ ಲೆಕ್ಕಾಚಾರ ಪ್ರಕಾರ 0.2 ಶೇಕಡಾ ಮಾತ್ರ ಇದ್ದು, ಇದು 44 ತಿಂಗಳುಗಳಲ್ಲೇ ಕನಿಷ್ಟ. ಜೂನ್ 2018ರಲ್ಲಿ ಅದು 7.5 ಶೇಕಡಾ ಇತ್ತು. ಒಂದೇ ವರ್ಷದಲ್ಲಿ ಈ ಪ್ರಮಾಣದ ಕುಸಿತಕ್ಕೆ ಕಾರಣವೇನು?

ವಾಹನೋದ್ಯಮ ಕ್ಷೇತ್ರವು ದೇಶದ ಒಟ್ಟು ದೇಶೀಯ ಉತ್ಪನ್ನ (ಜಿಡಿಪಿ)ದ 7.5 ಶೇಕಡಾವನ್ನು ನೀಡುತ್ತಿದ್ದು, ಹೆಚ್ಚುಕಡಿಮೆ ನಾಲ್ಕು ಕೋಟಿ ಜನರಿಗೆ ಉದ್ಯೋಗ ನೀಡುತ್ತಿದೆ. ಅದರ ಪಾಲು ಉತ್ಪಾದನಾ ಜಿಡಿಪಿಯ 49 ಶೇಕಡಾದಷ್ಟಿದೆ. ದೇಶದ ಅತೀ ದೊಡ್ಡ ಕಾರು ಉತ್ಪಾದಕ ‘ಮಾರುತಿ’ ಸಹಿತ 17 ಪ್ರಮುಖ ಕಂಪೆನಿಗಳಲ್ಲಿ 10ರ ಮಾರಾಟ ಇಳಿಮುಖವಾಗಿದ್ದು, ಅವುಗಳಲ್ಲಿ ಕಾರ್ಮಿಕರ ಕೆಲಸ ಕಡಿತ, ವಜಾ ಇತ್ಯಾದಿ ನಡೆಯುತ್ತಿದೆ ಮತ್ತು ಮುಂದೆ ದೊಡ್ಡ ಪ್ರಮಾಣದಲ್ಲಿ ಉದ್ಯೋಗ ನಷ್ಟವಾಗುವ ಸೂಚನೆಗಳಿವೆ. ಪೂರಕ ಕೈಗಾರಿಕೆಗಳಲ್ಲಿ ಈಗಾಗಲೇ ಹತ್ತು ಲಕ್ಷ ಮಂದಿ ಉದ್ಯೋಗ ಕಳೆದುಕೊಂಡಿರುವ ವರದಿಗಳಿವೆ. 55,000 ಕೋಟಿ ರೂ. ಮೌಲ್ಯದ ಕಾರುಗಳು ಮಾರಾಟವಾಗದೇ ಹಾಗೆಯೇ ಬಿದ್ದುಕೊಂಡಿವೆ ಎಂದರೆ, ಬಿಕ್ಕಟ್ಟಿನ ತೀವ್ರತೆಯನ್ನು ಊಹಿಸಬಹುದು.

ಮೋದಿ ಸರಕಾರವು ದೊಡ್ಡ ಪ್ರಮಾಣದಲ್ಲಿ ಖಾಸಗೀಕರಣ ಪ್ರಕ್ರಿಯೆಯಲ್ಲಿ ತೊಡಗಿದೆ. ಉದ್ದೇಶ- ಸಾರ್ವಜನಿಕ ರಂಗದ ಉದ್ದಿಮೆಗಳ ಸರಕಾರಿ ಬಂಡವಾಳವನ್ನು ಭಾಗಶಃ ಅಥವಾ ಪೂರ್ಣವಾಗಿ ಮಾರಿ ಹಣ ಸಂಗ್ರಹಿಸಿ ಆರ್ಥಿಕ ಕೊರತೆಯನ್ನು ಮರೆಮಾಚುವುದು ಮತ್ತು ಕೆಲವೇ ಉದ್ಯಮ ಸಂಸ್ಥೆಗಳಿಗೆ ಲಾಭ ಮಾಡಿಕೊಡುವ ಮೂಲಕ ಪಕ್ಷದ ಮತ್ತು ಅದರ ನಾಯಕರ ‘ಬಂಡವಾಳ’ ಹೆಚ್ಚಿಸುವುದು. ಇದಕ್ಕಾಗಿ ರಕ್ಷಣೆಗೆ ಸಂಬಂಧಿಸಿದ ಉದ್ದಿಮೆಗಳನ್ನು ಕೂಡಾ ಈ ‘ದೇಶ ಪ್ರೇಮಿ’ ಸರಕಾರ ಬಿಟ್ಟಿಲ್ಲ.

ಹಿಂದಿನವರು ರಕ್ಷಣಾ ವಲಯದಲ್ಲಿ ಖಾಸಗಿ ರಂಗಕ್ಕೆ ಅವಕಾಶ ನೀಡಿದಲ್ಲಿ ಭದ್ರತಾ ಅಪಾಯ ಹೆಚ್ಚೆಂಬ ಕಾರಣದಿಂದ ಸಾರ್ವಜನಿಕ ರಂಗದ ಉದ್ದಿಮೆಗಳನ್ನು ಸ್ಥಾಪಿಸಿದ್ದರು. ಈ ಸರಕಾರ 42 ಅಂತಹಾ ಉದ್ದಿಮೆಗಳನ್ನು ಖಾಸಗಿಗೆ ಮಾರಲು ಹೊರಟಿದೆ. ಇವುಗಳಲ್ಲಿ ಶಸ್ತ್ರಾಸ್ತ್ರ ಮತ್ತು ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಓ) ಮತ್ತು ಮಿಲಿಟರಿ ಇಂಜಿನಿಯರಿಂಗ್ ಘಟಕಗಳೂ ಸೇರಿವೆ. ಈ ಕ್ಷೇತ್ರದಲ್ಲಿ ಈಗಾಗಲೇ ಅನಿಲ್ ಅಂಬಾನಿ ಹೊಸ ಶಸ್ತ್ರಾಸ್ತ್ರ ಉದ್ದಿಮೆ ಸ್ಥಾಪಿಸಿ, ಅನುಭವಿ ಸಾರ್ವಜನಿಕ ರಂಗದ ಉದ್ದಿಮೆಯಾದ ಹಿಂದೂಸ್ಥಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್‌ಎಎಲ್) ಕಂಪೆನಿಯನ್ನೂ ಮೀರಿಸಿ ರಫೇಲ್ ಗುತ್ತಿಗೆ ಪಡೆದಿರುವುದರಿಂದ, ಈ ಘಟಕಗಳು ಯಾರ ಪಾಲಾಗಲಿವೆ ಎಂಬುದನ್ನು ಊಹಿಸಲು ಕಷ್ಟವಿಲ್ಲ. ಈ ಘಟಕಗಳಲ್ಲಿ ಸದ್ಯಕ್ಕೆ ನಾಲ್ಕು ಲಕ್ಷ ಮಂದಿ ಕೆಲಸ ಮಾಡುತ್ತಿದ್ದಾರೆ ಎಂಬುದನ್ನು ಗಮನಿಸಬೇಕು. ದುರಂತವೆಂದರೆ, ಭಾರತೀಯ ವಾಯುಸೇನೆ ಬಳಸುತ್ತಿರುವ ಹಲವು ವಿಮಾನ ಮತ್ತು ಹೆಲಿಕಾಪ್ಟರ್‌ಗಳನ್ನು ತಯಾರಿಸಿರುವ ಎಚ್‌ಎಎಲ್ ಬಳಿ ಕಾರ್ಮಿಕರಿಗೆ ಸಂಬಳ ಕೊಡಲು ಹಣವಿಲ್ಲ!

ಕೇಂದ್ರವು ಆರು ವಿಮಾನ ನಿಲ್ದಾಣಗಳನ್ನು ಖಾಸಗೀಕರಣಗೊಳಿಸಿದ್ದು, ಅದರ ಗುತ್ತಿಗೆ ಮೋದಿ ಮಿತ್ರ ಅದಾನಿಗೆ ಹೋಗಿದೆ. ಸರಕಾರವು ಇನ್ನೂ 20-25 ವಿಮಾನ ನಿಲ್ದಾಣಗಳ ಖಾಸಗೀಕರಣವನ್ನು ಘೋಷಿಸಿದೆ. ಭಾರತೀಯ ರೈಲ್ವೇಯ ಖಾಸಗೀಕರಣ ಹಂತಹಂತವಾಗಿ ನಡೆಯುತ್ತಿದೆ. ಕೆಲವು ರೈಲು ನಿಲ್ದಾಣಗಳು ಈಗಾಗಲೇ ಖಾಸಗಿ ಪಾಲಾಗಿವೆ. ಇದೇ ಹೊತ್ತಿಗೆ ಏರ್‌ಇಂಡಿಯಾ ಭಾರೀ ನಷ್ಟ ಅನುಭವಿಸುತ್ತಿದ್ದು, ಅದನ್ನೂ ಖಾಸಗೀಕರಣ ಮಾಡುವ ಯೋಜನೆ ಭರದಿಂದ ಸಾಗಿದೆ.

ದೇಶದ ಹಳ್ಳಿಹಳ್ಳಿಗೆ ದೂರವಾಣಿ ತಲುಪಿಸಿದ ಬಿಎಸ್ಎನ್‌‌ಎಲ್, ಮೋದಿ ಜಾಹೀರಾತು ಮಾಡೆಲ್ ಆಗಿದ್ದ ಜಿಯೋ ಎದುರು ಉಸಿರೆಳೆಯುತ್ತಾ ನಷ್ಟದಲ್ಲಿದೆ. 4ಜಿ ಸೌಲಭವನ್ನು ಇನ್ನೂ ಒದಗಿಸಲಾಗದ ಅದರ ಪುನಶ್ಚೇತನಕ್ಕೆ ಸರಕಾರ ಯಾವುದೇ ನೆರವು ನೀಡಿಲ್ಲ. ಅದನ್ನು ಬೇಕೆಂದೇ ಕೊಲ್ಲಲಾಗುತ್ತಿದೆ ಎಂಬ ಆರೋಪದಲ್ಲಿ ಹುರುಳಿದೆ. ಇದೀಗ ಅದರ 54,000 ನೌಕರರನ್ನು ಮನೆಗೆ ಕಳಿಸುವ ಯೋಜನೆ ಸಿದ್ಧವಾಗಿದೆ ಮಾತ್ರವಲ್ಲ, ಅದರ 18,000 ಕೋಟಿ ಬೆಲೆಯ ಆಸ್ತಿಯನ್ನು ಮಾರುವ ಸಿದ್ಧತೆ ನಡೆದಿದೆ. ಇದನ್ನು ಯಾರು ಖರೀದಿಸಲಿದ್ದಾರೆ ಎಂಬುದನ್ನು ಊಹಿಸುವುದೂ ಕಷ್ಟವಲ್ಲ.

ಅಂಚೆ ಇಲಾಖೆ ಕೂಡಾ ಸುಮಾರು 18,000 ಕೋಟಿ ರೂ.ನಷ್ಟದಲ್ಲಿದ್ದು, ಹಾಗೋಹೀಗೋ ಜೀವ ಎಳೆಯುತ್ತಿದೆ. ಲಾಭದಾಯಕವಾಗಿ ನಡೆಯುತ್ತಿದ್ದ ನವರತ್ನ ಸಂಸ್ಥೆಗಳಲ್ಲಿ ಒಂದಾದ ಅಯಿಲ್ ಎಂಡ್ ನ್ಯಾಚುರಲ್ ಗ್ಯಾಸ್ ಕಾರ್ಪೊರೇಷನ್ (ಓಎನ್‌ಜಿಸಿ) ಹಿಂದೆಯೂ ಕಾಣದ ನಷ್ಟ ಅನುಭವಿಸುತ್ತಿದೆ. ಇಲ್ಲಿಯೂ ಅದರ ಪ್ರತಿಸ್ಪರ್ಧಿ ಅಂಬಾನಿಯ ರಿಲಯನ್ಸ್ ಪೆಟ್ರೊ ಆಗಿರುವುದು ಕೇವಲ ಕಾಕತಾಳೀಯ ಇರಲಾರದು. ಹಿಂದಿನ ರಷ್ಯನ್ ಗುತ್ತಿಗೆ ಹಗರಣವನ್ನು ಇಲ್ಲಿ ನೆನಪಿಸಬಹುದು.

ಇನ್ನೂ ಆತಂಕಕಾರಿ ವಿಷಯವೆಂದರೆ, ಮುಂದಿನ ಮೂರು ವರ್ಷಗಳಲ್ಲಿ ಎಲ್ಲಾ ಸಾರ್ವಜನಿಕ ಉದ್ದಿಮೆಗಳಲ್ಲಿ ಸರಕಾರದ ಪಾಲುಬಂಡವಾಳವನ್ನು 49 ಶೇಕಡಾಕ್ಕೆ ಇಳಿಸಿ, ನಿಯಂತ್ರಣವನ್ನು ಖಾಸಗಿಯವರಿಗೆ ಧಾರೆ ಎರೆದುಕೊಡುವ ಕಾರ್ಯಸೂಚಿಯನ್ನು ಸರಕಾರ ಈಗಾಗಲೇ ರೂಪಿಸಿರುವುದು. ಖಾಸಗಿ ಉದ್ದಿಮೆಗಳೇನಾದರೂ ಉದ್ಧಾರವಾಗಿವೆಯೇ ಎಂದರೆ ಅದೂ ಇಲ್ಲ. ಮೋದಿಕಾಲದಲ್ಲಿ ಮುಚ್ಚಿಹೋದ ಸಂಸ್ಥೆಗಳಲ್ಲಿ ಟಾಟಾ ಡೊಕೋಮೊ, ಏರ್‌ಸೆಲ್, ಜೆಟ್‌ ಏರ್‌ವೇಸ್, ಜೆ.ಪಿ. ಗ್ರೂಪ್ ಮೊದಲಾದವುಗಳನ್ನು ಹೆಸರಿಸಬಹುದು. ವಿಡಿಯೋಕಾನ್ ಕೂಡಾ ದಿವಾಳಿ ಎದ್ದಿದೆ. ಆದರೆ, ಇದೇ ಅವಧಿಯಲ್ಲಿ ಅಂಬಾನಿ ಮೌಲ್ಯ ಮಾತ್ರ ದ್ವಿಗುಣ! ಅಷ್ಟು ವರ್ಷಗಳ ಸಂಪಾದನೆ ಕೇವಲ ಐದು ವರ್ಷಗಳಲ್ಲಿ!

ಇನ್ನು ಬ್ಯಾಂಕಿಂಗ್ ಕ್ಷೇತ್ರಕ್ಕೆ ಬಂದರೆ, ಬಹುತೇಕ ಎಲ್ಲಾ ಸಾರ್ವಜನಿಕ ರಂಗದ ಬ್ಯಾಂಕುಗಳು ನಷ್ಟದಲ್ಲಿವೆ. ಇದೇ ಕಾರಣದಿಂದ ಕೆಲವು ಬ್ಯಾಂಕುಗಳ ವಿಲೀನ ಮಾಡಿರುವುದು ಎಲ್ಲರಿಗೂ ಗೊತ್ತು. ಇದಕ್ಕೆ ಕಾರಣ ಬ್ಯಾಂಕುಗಳ ಮೂಲಕ ದೇಶದ ಸಂಪತ್ತಿನ ಲೂಟಿ. ಸರಕಾರದ ಹೇಳಿಕೆಗೆ ವ್ಯತಿರಿಕ್ತವಾಗಿ ರಾಷ್ಟ್ರೀಕೃತ ಬ್ಯಾಂಕಗಳ ದುಡಿಯದ ಆಸ್ತಿ (ಎನ್‌ಪಿಎ) ಅಂದರೆ ಹೆಚ್ಚಾಗಿ, ವಸೂಲಾಗದ ಅಥವಾ ವಸೂಲು ಮಾಡದ ಸಾಲದ ಪ್ರಮಾಣ ಸ್ವತಃ ಬ್ಯಾಂಕುಗಳ ಅಂಕಿಅಂಶ ಪ್ರಕಾರವೇ 2,30,811 ಕೋಟಿ ರೂ.ಗಳು! ಇದು ಕೂಡ 2018-19ರ ಸಾಲಿನಲ್ಲಿ- ರೈತರ ಸಾಲ ಮನ್ನಾ ಮಾಡದ ಸರಕಾರ- 1,96,000 ಕೋಟಿ ರೂ.ಗಳಷ್ಟು ಶ್ರೀಮಂತ ವಂಚಕರ ಸಾಲ ಮನ್ನಾ ಮಾಡಿದ ಬಳಿಕದ ಅಂಕಿಅಂಶ! ಇದಕ್ಕೆ ಹೊರತಾಗಿ ಚೌಕಿದಾರನ ಮೂಗಿನ ಅಡಿಯಲ್ಲಿ ಓಡಿಹೋದ ಅತಿದೊಡ್ಡ 36 ಸಾಲಗಾರರು ದೇಶಬಿಟ್ಟು ಪರಾರಿಯಾಗಿದ್ದಾರೆ. ಚುನಾವಣೆ ಮುಗಿದಕೂಡಲೇ ಸಾಮಾಜಿಕ ಜಾಲತಾಣಗಳಲ್ಲಿ ಬೇಕಾಬಿಟ್ಟಿ ಕಾಣಸಿಗುತ್ತಿದ್ದ ಚೌಕಿದಾರರೆಲ್ಲಾ ಮಾಯವಾಗಿದ್ದಾರೆ.

ಈಗಿನ ಪರಿಸ್ಥಿತಿಗೆ ಕಾರಣಗಳನ್ನು ಹಣಕಾಸು ತಜ್ಞರು ಬಜೆಟ್ ಮತ್ತು ಸಿಎಜಿ ವರದಿಯಲ್ಲಿ ಹುಡುಕಿದ್ದಾರೆ. ದೇಶದ ಮೇಲಿನ ಸಾಲದ ಹೊರೆ ದಾಖಲೆ 1,31,100 ಡಾಲರ್ (ರೂಪಾಯಿ ಅಲ್ಲ!) ತಲಪಿದೆ. ಸರಕಾರ ಎಲ್ಲವನ್ನು ಮರೆಮಾಚಲು ಅಂಕಿಅಂಶಗಳ ಇಂದ್ರಜಾಲ ನಡೆಸಿದೆ. ಬಜೆಟ್ ಲೆಕ್ಕಾಚಾರದಲ್ಲಿ ಕನಿಷ್ಟ 1,70,000 ಕೋಟಿ ರೂ.ಗಳ ವ್ಯತ್ಯಾಸ ಇದೆ ಎಂದು ತಜ್ಞರು ಹೇಳುತ್ತಾರೆ. ಆದಾಯ ಮತ್ತು ಜಿಎಸ್‌ಟಿ ಸಂಗ್ರಹವನ್ನು ಉಬ್ಬರಿಸಿ ತೋರಿಸಲಾಗಿದೆ. ಸಿಎಜಿ ವರದಿ ಪ್ರಕಾರ ಸರಕಾರದ ಆರ್ಥಿಕ ಕೊರತೆ ಜೂನ್ ತನಕ 3,42,000 ಕೋಟಿ ರೂ.ಗಳಿಗೆ ತಲಪಿದೆ. ಇದು 2019-20ರ ಬಜೆಟ್ ಅಂದಾಜಿನ 61.4 ಶೇಕಡಾ! ಈ ಹಣಕಾಸು ವರ್ಷದಲ್ಲಿ ಇನ್ನೂ ಮೂರು ತ್ರೈಮಾಸಿಕಗಳು ಉಳಿದಿವೆ. ಇದರಿಂದ ಆರ್ಥಿಕ ಹಿಂಜರಿಕೆ ಸ್ಪಷ್ಟ.

ಇವೆಲ್ಲದರ ಪರಿಣಾಮವಾಗಿ ನಿರುದ್ಯೋಗ ಪ್ರಮಾಣ ಕಳೆದ 45 ವರ್ಷಗಳಲ್ಲೇ ಅತೀ ಹೆಚ್ಚಾಗಿದೆ. ಇವೆಲ್ಲವನ್ನೂ ಮರೆ ಮಾಚಲು ಸರಕಾರದ ಅಂಕಿಅಂಶ ಇಲಾಖೆ ನಿರುದ್ಯೋಗದ ಕುರಿತಾಗಲೀ, ರೈತರ ಆತ್ಮಹತ್ಯೆ ಕುರಿತಾಗಲೀ ಯಾವುದೇ ಅಂಕಿಅಂಶ ಸಂಗ್ರಹಿಸುತ್ತಿಲ್ಲ. ಹಾಗಾಗಿಯೇ ಪಕೋಡ ಮಾರಿ 200 ರೂ. ಸಂಪಾದಿಸುವುದೂ ಒಂದು ಉದ್ಯೋಗ ಎಂದು- ವರ್ಷಕ್ಕೆ ಅಷ್ಟು ಲಕ್ಷ ಉದ್ಯೋಗ ಸೃಷ್ಟಿ, ಇಷ್ಟು ಲಕ್ಷ ಉದ್ಯೋಗ ಸೃಷ್ಟಿ ಎಂದು- 2014ರಲ್ಲಿ ಬೊಗಳೆ ಬಿಟ್ಟಿದ್ದ ಪ್ರಧಾನಿ ಹೇಳುವ ದುಸ್ಥಿತಿ ಬಂದಿರುವುದು. ವಾಸ್ತವಿಕವಾಗಿ ಜನರು ಉದ್ಯೋಗ ಕಳೆದುಕೊಳ್ಳುತ್ತಿದ್ದಾರೆಂದು ಮೇಲೆ ನೋಡಿದ್ದೀರಿ.

ಪರಿಸ್ಥಿತಿ ಇಷ್ಟು ಕೆಟ್ಟಿದ್ದರೂ, ನಮ್ಮ ಭಾರತೀಯ ನೀರೋ, ಮ್ಯಾನ್ ವರ್ಸಸ್ ವೈಲ್ಡ್‌ನಲ್ಲಿ ಕಾಡು ತಿರುಗುತ್ತಾ ಪಿಟೀಲು ಬಾರಿಸುತ್ತಿದ್ದಾರೆ. ಭಕ್ತರು ಭಜನೆ ಮುಂದುವರಿಸಿದ್ದಾರೆ. ಮಾರಿಕೊಂಡ ಮಾಧ್ಯಮಗಳು ಈ ಕುರಿತು ಬೆಳಕು ಚೆಲ್ಲದೇ ಇದ್ದರೂ, ಕೊನೆಗೂ ಅನಿವಾರ್ಯವಾಗಿ ಆರ್ಥಿಕ ಹಿಂಜರಿತ ಕುರಿತು ಬರೆಯಬೇಕಾಗಿಬಂದರೂ, ಪಿಳ್ಳೆನೆವಗಳನ್ನು ಹೇಳಿ ಸಮರ್ಥಿಸುತ್ತಿವೆ. ಜನರು ಮಾತ್ರ ಮೋದಿ ಜಾದುಗಾರರು ಖಾಲಿ ಟೊಪ್ಪಿಯಿಂದ ಮೊಲವನ್ನು ಹೊರತೆಗೆಯುತ್ತಾರೆ ಎಂದು ಕಾಯುತ್ತಿದ್ದಾರೆ. ಆದರೆ, ಮೊಲದ ಬದಲು ಅದರ ಅಸ್ತಿಪಂಜರ ಹೊರಬರುವ ಸಾಧ್ಯತೆ ಹೆಚ್ಚೆಂದು ಆರ್ಥಿಕ ತಜ್ಞರು ಹೇಳುತ್ತಿದ್ದಾರೆ!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ರೇವಣ್ಣ ಸಹಚರ ಸತೀಶ್ ಬಾಬಣ್ಣಗೆ ನ್ಯಾಯಾಂಗ ಬಂಧನ

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಲೈಂಗಿಕ ದೌರ್ಜನ್ಯ ಪ್ರಕರಣ ಬಯಲಾದ ಬೆನ್ನಲ್ಲಿ ಮೈಸೂರಿನಲ್ಲಿ ಮಹಿಳೆಯನ್ನು ಅಪಹರಿಸಿದ ಪ್ರಕರಣಕ್ಕೆ ಸಂಬಂಧಿಸಿ ಪ್ರಕರಣದ ಎರಡನೇ ಆರೋಪಿ ಸತೀಶ್ ಬಾಬಣ್ಣ ಬಂಧನವಾಗಿದ್ದು, ಅವರನ್ನು ನ್ಯಾಯಾಲಯ 14...