| ನಾನುಗೌರಿ ಡೆಸ್ಕ್ |

ತಮಿಳುನಾಡಿನಲ್ಲಿ ಹಿಂದಿ ಕಡ್ಡಾಯವಿಲ್ಲ ಎಂದು ಕೇಂದ್ರ ಸರ್ಕಾರ ಮಾಡಿರುವ ತಿದ್ದುಪಡಿಯನ್ನು ಬೆಂಬಲಿಸುವ ಮೂಲಕ ಎ.ಆರ್ ರೆಹಮಾನ್ ಹಿಂದಿ ಹೇರಿಕೆಯ ವಿರುದ್ಧದ ಹೋರಾಟಕ್ಕೆ ಬೆಂಬಲ ನೀಡಿದ್ದಾರೆ. ಸಾಮಾನ್ಯವಾಗಿ ಯಾವುದೇ ರಾಜಕೀಯ ಆಗು ಹೋಗುಗಳಿಗೆ ಪ್ರತಿಕ್ರಿಯಿಸದ ಅವರು ಹಿಂದಿ ಹೇರಿಕೆಯ ವಿಚಾರಕ್ಕೆ ಮಾತ್ರ ದೃಢವಾಗಿ ಪ್ರತಿಕ್ರಿಯಿಸಿ ಅಚ್ಚರಿ ಹುಟ್ಟಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು “ಕರಡು ತಿದ್ದುಪಡಿಯಾಗಿದೆ!. ತಮಿಳುನಾಡಿನಲ್ಲಿ ಹಿಂದಿ ಕಡ್ಡಾಯವಿಲ್ಲ. ಇದೊಂದು ಅತ್ಯುತ್ತಮ ಪರಿಹಾರ” ಎಂದಿದ್ದಾರೆ.

ನೂತನ ಶಿಕ್ಷಣ ನೀತಿಯ ಮೂಲಕ ಹಿಂದಿ ಹೇರಿಕೆಗೆ ಮುಂದಾಗಿರುವ ಕೇಂದ್ರ ಸರ್ಕಾರದ ಕ್ರಮದ ವಿರುದ್ಧ ದಕ್ಷಿಣದ ರಾಜ್ಯಗಳು ದನಿಯೆತ್ತಿವೆ. ಅದರಲ್ಲಿಯೂ ತಮಿಳುನಾಡಿನಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಎ.ಆರ್ ರೆಹಮಾನ್ ರವರು ಭಾನುವಾರ ತಮ್ಮ ಮರ್ಯಾನ್ ಚಿತ್ರದ ಹಾಡೊಂದನ್ನು ಟ್ವಿಟ್ಟರ್ ನಲ್ಲಿ ಷೇರ್ ಮಾಡಿದ್ದರು. ಅದರ ಜೊತೆಗೆ ‘ಪಂಜಾಬ್ ನಲ್ಲಿ ತಮಿಳು ಹರಡುತ್ತಿದೆ’ ಎಂಬ ಒಕ್ಕಣೆಯನ್ನು ಸಹ ಸೇರಿಸಿದ್ದರು.

ಶುಕ್ರವಾರವಷ್ಟೇ ಡಾ. ಕೆ ಕಸ್ತೂರಿರಂಗನ್ ರವರ ನೇತೃತ್ವದಲ್ಲಿ ಮಾನವ ಸಂಪನ್ಮೂಲ ಸಚಿವಾಲವು ಹೊಸ ಶಿಕ್ಷಣ ನೀತಿಯ ಕರಡನ್ನು ಬಿಡುಗಡೆ ಮಾಡಿದ್ದರು. ಶಾಲಾ ಹಂತದಲ್ಲಿ ಹಿಂದಿಯೇತರ ರಾಜ್ಯಗಳಲ್ಲಿ ಮುಂದೆ ಸ್ಥಳೀಯ ಭಾಷೆಯೊಂದಿಗೆ ಹಿಂದಿ ಮತ್ತು ಇಂಗ್ಲಿಷ್ ಅನ್ನು ಕಡ್ಡಾಯವಾಗಿ ಕಲಿಯಬೇಕೆಂದು, ಹಿಂದಿ ಭಾಷಿಕ ರಾಜ್ಯಗಳಲ್ಲಿ ಹಿಂದಿ, ಇಂಗ್ಲಿಷ್ ಜೊತೆಗೆ ಯಾವುದಾದರು ಆಧುನಿಕ ಭಾರತದ ಭಾಷೆಯೊಂದನ್ನು ಕಲಿಯುವುದನ್ನು ಕಡ್ಡಾಯ ಮಾಡಲಾಗಿತ್ತು.

ಇದರ ವಿರುದ್ಧ ತಮಿಳುನಾಡಿನ ಎಂ.ಕೆ ಸ್ಟ್ಯಾಲಿನ್, ಕರ್ನಾಟಕದ ಸಿಎಂ ಕುಮಾರಸ್ವಾಮಿ, ಮಾಜಿ ಸಿಎಂ ಸಿದ್ದರಾಮಯ್ಯ ಸೇರಿದಂತೆ ಸಾವಿರಾರು ಸಂಘಟನೆಗಳು, ಕಾರ್ಯಕರ್ತರು ದನೆಯೆತ್ತಿದ್ದರು. ವ್ಯಾಪಕ ವಿರೋಧ ದಾಖಲಾಗುತ್ತಲೆ ಎಚ್ಚೆತ್ತ ಕೇಂದ್ರ ಸರ್ಕಾರ ಕಡ್ಡಾಯಗೊಳಿಸುವುದನ್ನು ತಿದ್ದುಪಡಿ ಮಾಡಲಾಗಿದ್ದು ಹೊಸ ಕರಡನ್ನು ಬಿಟ್ಟಿದೆ. ಆದ್ಯಾಗ್ಯೂ ಹಿಂದಿ ಹೇರಿಕೆಯ ವಿರುದ್ಧ ಚಳವಳಿ ದಿನೇ ದಿನೇ ಜೋರಾಗುತ್ತಲೆ ಇದೆ.

 

LEAVE A REPLY

Please enter your comment!
Please enter your name here