Homeಕರ್ನಾಟಕಪ್ರಚಾರ ಬಯಸದೆ ಸದ್ದಿಲ್ಲದೆ ಜನಸೇವೆಯಲ್ಲಿ ತೊಡಗಿದ ಬಿಎಂಸಿ-92 ವೈದ್ಯರ ತಂಡ

ಪ್ರಚಾರ ಬಯಸದೆ ಸದ್ದಿಲ್ಲದೆ ಜನಸೇವೆಯಲ್ಲಿ ತೊಡಗಿದ ಬಿಎಂಸಿ-92 ವೈದ್ಯರ ತಂಡ

"ವಿಜ್ಞಾನ ಮೊದಲು" ಎಂಬುದು ಬಿಎಂಸಿ 92 ತಂಡದ ಘೋಷವಾಕ್ಯ. ವೈಜ್ಞಾನಿಕ ಸಂಗತಿಗಳನ್ನು ಚರ್ಚಿಸಿ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವುದು ಇವರ ಗುರಿ.

- Advertisement -
- Advertisement -

ತಾವು ಮಾಡುವ ಚಿಕ್ಕ ಚಿಕ್ಕ ಸಹಾಯವನ್ನೂ ಕೂಡ ಪ್ರಚಾರಕ್ಕೆ ಬಳಸಿಕೊಳ್ಳುವ, ಪಿಆರ್‌ಒಗಳನ್ನು ನೇಮಿಸಿಕೊಂಡು ಹೆಸರು ಗಳಿಸುವ ಜನರ ಮಧ್ಯೆ ಸದ್ದಿಲ್ಲದೇ ಕೊರೊನಾ ಸಂಕಷ್ಟದಲ್ಲಿ ಜನರ ಸಹಾಯಕ್ಕೆ ನಿಂತಿದೆ ಬಿಎಂಸಿ-92 ವೈದ್ಯರ ತಂಡ.

ಬೆಂಗಳೂರು ವೈದ್ಯಕೀಯ ಕಾಲೇಜಿನ 1992 ಬ್ಯಾಚ್‌ನ (ಬಿಎಂಸಿ- 92)ನ ಹಲವಾರು ವೈದ್ಯರು ಈಗ ಪ್ರಪಂಚದ ವಿವಿದೆಡೆ ಕೆಲಸ ಮಾಡುತ್ತಿದ್ದಾರೆ. ಆದರೆ ಕೋವಿಡ್‌ ಎರಡನೇ ಅಲೆ ಅವರನ್ನು ಮತ್ತೆ ಒಗ್ಗೂಡುವಂತೆ ಮಾಡಿದೆ. ಈ ಮಾನವೀಯ ಬಿಕ್ಕಟ್ಟಿನ ಸಂದರ್ಭದಲ್ಲಿ ಎಲ್ಲರೂ ಜನರ ಜೀವ ಉಳಿಸಲು ಒಂದು ತಂಡವಾಗಿ ತಮ್ಮ ಶಕ್ತಿ ಮೀರಿ ಕೆಲಸ ಮಾಡಲು ಮುಂದಾಗಿದ್ದಾರೆ.

ಕೋವಿಡ್ ಎರಡನೇ ಅಲೆಗೆ ಅತಿ ಹೆಚ್ಚು ತುತ್ತಾಗಿರುವ ನಮ್ಮ ರಾಜ್ಯದಲ್ಲಿ ಬೆಡ್‌ ಕೊರತೆ, ಆಕ್ಸಿಜನ್, ಔಷಧಿ ಅಲಭ್ಯತೆಯಿಂದ ಜನ ಗೋಳಾಡುತ್ತಿದ್ದಾರೆ. ಅಪಾರ ಸಾವು ನೋವುಗಳು ಸಂಭವಿಸುತ್ತಿವೆ. ಇಂತಹ ಸಂದರ್ಭದಲ್ಲಿ ಕೊರೊನಾ ಉಲ್ಬಣವಾಗದಂತೆ ತಡೆಯಲು ಅಂದರೆ ಜನರಿಗೆ ಬೆಡ್‌, ಐಸಿಯು, ವೆಂಟಿಲೇಟರ್ ಬೇಕಾಗುವಂತ ಪರಿಸ್ಥಿತಿ ಬರುವ ಮೊದಲೇ ಅವರನ್ನು ಗುಣಪಡಿಸುವುದು ಮತ್ತು ಆಸ್ಪತ್ರೆಗಳ ಮೇಲಿನ ಭಾರ ತಗ್ಗಿಸುವುದು ಬಿಎಂಸಿ- 92 ವೈದ್ಯರ ಗುರಿಯಾಗಿದೆ.

ಇದನ್ನೂ ಓದಿ: ರಾಜ್ಯದ 97 ಜನರಲ್ಲಿ ಬ್ಲಾಕ್ ಫಂಗಸ್ ಪತ್ತೆ, ನಾಲ್ವರು ಬಲಿ- ಸಚಿವ ಸುಧಾಕರ್‌

ಬಹಳಷ್ಟು ಜನರಿಗೆ ಕೊರೊನಾ ಬಂದಾಗ ಏನು ಮಾಡಬೇಕು? ಉಸಿರಾಟದ ಸಮಸ್ಯೆಯುಂಟಾದರೆ ಏನು ಮಾಡಬೇಕು ಎಂಬುದು ತಿಳಿದಿಲ್ಲ. ಆ ಸಂದರ್ಭದಲ್ಲಿ ಬೆಡ್, ಔಷಧಿ ಸಿಗುತ್ತಿಲ್ಲವೆಂಬ ಭಯಕ್ಕೆ ಅವರು ಎದೆಗುಂದಿ ಮತ್ತಷ್ಟು ರೋಗಕ್ಕೆ ತುತ್ತಾಗುತ್ತಾರೆ. ನಮ್ಮ ರಾಜ್ಯದ ಆರೋಗ್ಯ ವ್ಯವಸ್ಥೆ ಅದನ್ನು ನಿಭಾಯಿಸುವ ಸ್ಥಿತಿಯಲ್ಲಿ ಇಲ್ಲ. ಹಾಗಾಗಿ ವೈದ್ಯರು ಆರಂಭದಿಂದಲೇ ಸೋಂಕಿತರಿಗೆ ಫೋನಿನಲ್ಲಿ/ಆಪ್ ಮೂಲಕ ಹೇಳಿದ ಸಲಹೆಗಳನ್ನು ಪಾಲಿಸುವಂತೆ ಮಾಡಿ ಆಕ್ಸಿಜನ್ ಬೆಡ್‌ಗಾಗಿ ಹುಡುಕುವ ಪರಿಸ್ಥಿತಿಗೆ ಹೋಗದಂತೆ ಮಾಡಲು, ಕೊರೊನಾ ಉಲ್ಭಣಿಸಿದಂತೆ ತಡೆಯಲು ಮುಂದಾಗಿದೆ ಇದಕ್ಕೆ ಕರ್ನಾಟಕ ಕೋವಿಡ್ ವಾಲಂಟೀಯರ್ಸ್ ಟೀಮ್‌ (ಕೆಸಿವಿಟಿ) ರಚನೆಯಾಗಿ, ಈಗಾಗಲೇ ರಾಜ್ಯದಲ್ಲಿ ಕಾರ್ಯನಿರತವಾಗಿದೆ. ಅದರಲ್ಲಿ ಈ ತಂಡ ಸಕ್ರಿಯವಾಗಿ ತೊಡಗಿಸಿಕೊಂಡಿದೆ.

“ವಿಜ್ಞಾನ ಮೊದಲು” ಎಂಬುದು ಬಿಎಂಸಿ 92 ತಂಡದ ಘೋಷವಾಕ್ಯ. ಇಂದು ಕೋವಿಡ್ ಕುರಿತು ನೂರಾರು ಜನ ನೂರಾರು ರೀತಿಯ ಅಭಿಪ್ರಾಯ ಹೊಂದಿದ್ದು, ನೂರಾರು ಸಲಹೆಗಳನ್ನು ನೀಡುತ್ತಿದ್ದಾರೆ. ಹಾಗಾಗಿ ತಪ್ಪು ಗ್ರಹಿಕೆಗಳು, ಮೂಡನಂಬಿಕೆಗಳಿಗೆ ಜನರು ಬಲಿಯಾಗುವುದನ್ನು ತಡೆಯಲು ಈ ತಂಡ ವೈಜ್ಞಾನಿಕ ಸಂಗತಿಗಳನ್ನು ಚರ್ಚಿಸಿ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವಲ್ಲಿ ನಿರತವಾಗಿದೆ. ಜನರಿಗೆ ಉಚಿತ ಚಿಕಿತ್ಸೆಯ ಜೊತೆಗೆ ಕೊರೊನಾ ಕುರಿತ ವಿಚಾರ ಸಂಕಿರಣಗಳು, ಮುನ್ನೆಚ್ಚರಿಕೆಗಳು, ಚಿಕಿತ್ಸಾ ವಿಧಾನಗಳ ಮಾಹಿತಿ ಸೇರಿದಂತೆ ವೈದ್ಯಕೀಯ ವಿಜ್ಞಾನದ ಹಲವು ವಿಚಾರಗಳನ್ನು ಸರಳಿಕರಿಸಿ ಅದನ್ನು ಜನರಿಗೆ ತಲುಪಿಸುವ ಕೆಲಸಕ್ಕೆ ಈ ತಂಡ ಕೈ ಹಾಕಿದೆ.

ಈಗಾಗಲೇ ರಾಜ್ಯದಲ್ಲಿಯೂ ಬ್ಲಾಕ್ ಫಂಗಸ್ ಕಾಯಿಲೆ ಸುಮಾರು 100 ಮಂದಿಯಲ್ಲಿ ಕಾಣಿಸಿಕೊಂಡಿದೆ. ಈ ಸೋಂಕಿನ ಬಗ್ಗೆಯೂ ವೈದ್ಯವೃಂದಲ್ಲಿ ಸಮರ್ಪಕ ಅರಿವು ಮೂಡಿಸಲು ಬಿಎಂಸಿ ವೈದ್ಯರು ಮುಂದಾಗಿದ್ದು, ಮೇ 20 ರಂದು “ಕೋವಿಡ್ ನಂತರದ ಬ್ಲಾಕ್ ಫಂಗಸ್: ಹಿನ್ನೆಲೆ ಮತ್ತು ಮುಂದಿರುವ ದಾರಿ” ವಿಚಾರದ ಕುರಿತು ವೆಬಿನಾರ್‌ ಆಯೋಜಿಸಲಾಗಿದೆ.

ಇದನ್ನೂ ಓದಿ: ‘ಬ್ಲಾಕ್‌ ಫಂಗಸ್‌‌’ಗೆ ಉಚಿತ ಚಿಕಿತ್ಸೆ ನೀಡಿ: ರಾಜ್ಯ ಸರ್ಕಾರಕ್ಕೆ ಸಿದ್ದರಾಮಯ್ಯ ಆಗ್ರಹ

ಈ ವೆಬಿನಾರ್‌ನಲ್ಲಿ ದೇಶದ ಮತ್ತು ವಿದೇಶದ ವೈದ್ಯರು ಭಾಗವಹಿಸಲಿದ್ದಾರೆ. ಪ್ಯಾನೆಲ್‌ನಲ್ಲಿ ಅಮೆರಿಕಾದ  ಮೆಡಿಕಲ್ ಸಿಟಿ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿರುವ  ಸಾಂಕ್ರಾಮಿಕ ರೋಗಗಳ ತಜ್ಞೆ ಡಾ. ಹರಿಕಾ ಯಲಮಂಚಿಲಿ, ಪಾಂಡಿಚೇರಿಯ ಸರ್ಜನ್ ಡಾ. ಅರುಣ್ ಅಲೆಕ್ಸಾಂಡರ್, ಬೆಂಗಳೂರಿನ ನೇತ್ರತಜ್ಞ ಡಾ. ಕೃಷ್ಣ ಆರ್ ಮೂರ್ತಿ ಮತ್ತು ಬೆಂಗಳೂರಿನ ಆರ್.ವಿ ಆಸ್ಟರ್ ಆಸ್ಪತ್ರೆಯ ನರಶಸ್ತ್ರ ಚಿಕಿತ್ಸಕ ಡಾ.ಧನಂಜಯ್ ಭಟ್ ಭಾಗವಹಿಸಲಿದ್ದಾರೆ. ಮುಂದಿನ ದಿನಗಳಲ್ಲಿ ಇಂತಹ ಸರಣಿ ವೈಜ್ಞಾನಿಕ ಕಾರ್ಯಕ್ರಮಗಳನ್ನು ಯೋಜಿಸಲಾಗಿದೆ.

ನಾನುಗೌರಿ.ಕಾಂ ಜೊತೆಗೆ ಮಾತನಾಡಿದ ಈ ತಂಡ ಸದಸ್ಯರಾದ ಪತ್ರಕರ್ತ ಡಾವೆಂಕಿ, “ಜನರಿಗೆ ಸರಳವಾದ ಭಾಷೆಯಲ್ಲಿ ವಿಡಿಯೋಗಳ ಮೂಲಕ ಜನರಿಗೆ ಸೋಂಕಿನ ಬಗ್ಗೆ ಮಾಹಿತಿ ನೀಡುವುದು ಮತ್ತು ಅವರಲ್ಲಿ ಅರಿವು ಮೂಡಿಸುವುದು ನಮ್ಮ ಉದ್ದೇಶ” ಎನ್ನುತ್ತಾರೆ.

“ಜನರಿಗೆ ಕೆಲವೊಂದು ವೈದ್ಯಕೀಯ ವಿಷಯಗಳು ಸರಿಯಾಗಿ ತಿಳಿಯುವುದಿಲ್ಲ. ಅದನ್ನು ಅರ್ಧ ತಿಳಿದು ಸುಮ್ಮನಾಗುತ್ತಾರೆ. ಇದು ತುಂಬಾ ತಪ್ಪು. ಹಾಗಾಗಿ ವಿಡಿಯೊಗಳನ್ನು ಮಾಡಿಸುವ ಕೆಲಸವನ್ನು ನಾನು ಮೆಲ್ವಿಚಾರಣೆ ಮಾಡುತ್ತೇನೆ. ವಿದೇಶಗಳ ವೈದ್ಯರು ಇದರಲ್ಲಿ ತೊಡಗಿಸಿಕೊಂಡಿದ್ದಾರೆ. ಇಂಗ್ಲಿಷ್ನಲ್ಲಿರುವ ವಿಷಯಗಳನ್ನು ಭಾಷಾಂತರಿಸಿ ಸರಳವಾಗಿ ತಿಳಿಸಲಾಗುತ್ತದೆ” ಎನ್ನುತ್ತಾರೆ.

ಇದನ್ನೂ ಓದಿ: ಈ ಊರಿನಲ್ಲಿ ಮರವೇ ಕೊರೊನಾ ಕೇಂದ್ರ, ಕೊಂಬೆಗಳಲ್ಲಿ ನೇತಾಡುತ್ತವೆ ಗ್ಲೂಕೋಸ್ ಬಾಟಲ್‌ಗಳು!

“ಉತ್ತಮ ಜೀವನ ನಡೆಸುತ್ತಿರುವ ಇವರೆಲ್ಲರೂ ತಮ್ಮ ಪಾಡಿಗೆ ತಾವು ಆರಾಮಾವಾಗಿ ಇರಬಹುದಿತ್ತು. ಆದರೆ, ಈ ಸಂಕಷ್ಟದ ಸಮಯದಲ್ಲಿ ಜನರ ನೆರವಿಗೆ ನಿಂತಿದ್ದಾರೆ. ಅಂದು ಕಾಲೇಜಿನ ದಿನಗಳಲ್ಲಿ ನಾವು ಒಟ್ಟುಗೂಡಿ ಮಾಡುತ್ತಿದ್ದ ಕೆಲಸಗಳು ಇಂದು ಇಂತಹ ಪ್ರಬುದ್ಧ ಕಾರ್ಯಕ್ಕೆ ಕೈಹಾಕುವಂತೆ ಮಾಡಿದೆ. ಇವರೆಲ್ಲರ ಬಗ್ಗೆ ನನಗೆ ಹೆಮ್ಮೆಯಿದೆ. ಸಣ್ಣ ಸಣ್ಣ ಕೆಲಸಗಳಿಗೆ, ಮಾಡುವ ಪುಟ್ಟ ಕೆಲಸಕ್ಕೆ ಮಾಧ್ಯಮಗಳಲ್ಲಿ ಪ್ರಚಾರ ಪಡೆಯುವ ದಿನಗಳಲ್ಲಿ ಇವರು ಯಾವುದನ್ನೂ ಬಯಸದೇ, ನೇಪತ್ಯದಲ್ಲೇ ಉಳಿದು ಕೆಲಸ ಮಾಡುತ್ತಿದ್ದಾರೆ” ಎಂದು ಡಾವೆಂಕಿ ಹೇಳುತ್ತಾರೆ.

“ಜನರ ಜೀವವುಳಿಸುವ ವೈದ್ಯರ ಜೊತೆಗೆ ಪರೋಕ್ಷವಾಗಿ ಲಜೀಶ್, ಸುರೇಂದ್ರ, ಹರ್ಷವರ್ಧನ್ ಸುಳ್ಯ, ಸುಧಾಕರ್‌ ದರ್ಬೆ ಸೇರಿದಂತೆ ಹಲವು ಜನ ಕೆಲಸ ಮಾಡುತ್ತಿದ್ದಾರೆ. ಹಳ್ಳಿಗಳಲ್ಲಿ, ದೂರದ ಗ್ರಾಮಗಳಲ್ಲಿ ಸರ್ಕಾರ ಕೆಲವೊಮ್ಮೆ ಎಡವಬಹುದು ಅಂತಹ ಸಮಯದಲ್ಲಿ ಈ ತಂಡ ಪರ್ಯಾಯವಾಗಿ ಕಾರ್ಯ ನಿರ್ವಹಿಸುತ್ತದೆ” ಎಂಬ ವಿಶ್ವಾಸದ ಮಾತನಾಡುತ್ತಾರೆ ಡಾವೆಂಕಿ.

ಈ ತಂಡದಲ್ಲಿ ಅಮೆರಿಕಾದ ಡಾ.ಸೀಮಾ ಶಂಕರ್‌, ಡಾ.ಆನಂದ್‌ ರೆಡ್ಡಿ, ಇಂಗ್ಲೆಂಡಿನಲ್ಲಿರುವ ಡಾ.ರವಿ, ಡಾ.ನಾಗವೆಂಕಟೇಶ್ ಗುಪ್ತಾ, ಬೆಂಗಳೂರಿನ ವಿಕ್ರಮ್‌ ಆಸ್ಪತ್ರೆಯ ಡಾ.ಉಮೇಶ್‌, ಬೆಂಗಳೂರಿನ ಡಾ.ಭಾಗ್ಯಶ್ರೀ, ಡಾ.ರಾಜೀವ್, ಡಾ.ಪ್ರವೀಣ್, ಡಾ.ಎಚ್.ವಿ ವಾಸು ಹೀಗೆ ಹಲವರು ಆಸಕ್ತಿಯಿಂದ ಕ್ರಿಯಾಶೀಲರಾಗಿದ್ದಾರೆ.

ಈ ಚಿಕಿತ್ಸೆಗಳಿಗೆ ಅನುಕೂಲವಾಗಲೆಂದು ವಿದೇಶಗಳಲ್ಲಿ ನೆಲೆಸಿರುವ ಬೆಂಗಳೂರು ಮೆಡಿಕಲ್ ಕಾಲೇಜಿನ 1992ರ ಸಾಲಿನ ವೈದ್ಯರೆಲ್ಲರೂ ಸೇರಿ ಕೋಟ್ಯಂತರ ರೂ ವೆಚ್ಚದಲ್ಲಿ 110 ಆಕ್ಸಿಜನ್ ಕಾನ್ಸನ್ಟ್ರೇಟರ್ ಗಳನ್ನು ಕಳಿಸಿದ್ದಾರೆ. ಡಾ.ಸುಜಾತ ಮತ್ತು ಡಾ.ಸಾಯಿಪ್ರಕಾಶ್ ಮತ್ತಿತರರು ಇವುಗಳನ್ನು ಕಳಿಸಲು ಶ್ರಮವಹಿಸಿದ್ದಾರೆ. ಇನ್ನೂ 300 5ಲೀ ಮತ್ತು 10 ಲೀ ಸಾಮರ್ಥ್ಯದ ಆಕ್ಸಿಜನ್ ಕಾನ್ಸನ್ಟ್ರೇಟರ್‌ಗಳನ್ನು ಇನ್ನು ಕೆಲವೇ ದಿನಗಳಲ್ಲಿ ಕಳಿಸುವುದಾಗಿ ಅವರು ನಿರ್ಧರಿಸಿದ್ದಾರೆ.


ಇದನ್ನೂ ಓದಿ: ಕೊರೊನಾ ಉಲ್ಬಣವಾಗದಂತೆ ತಡೆಯಲು ಸಜ್ಜುಗೊಂಡ ಕೆಸಿವಿಟಿ ಜನಸಹಾಯ – ಬಿಎಂಸಿ 92 ಡಾಕ್ಟರ್ಸ್‌ ತಂಡ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

‘ಚುನಾವಣಾ ಬಾಂಡ್’ ಯೋಜನೆ ಬಿಜೆಪಿ ಮತ್ತೆ ಜಾರಿಗೆ ತರಲಿದೆ?

0
ಸುಪ್ರೀಂಕೋರ್ಟ್‌ ಅಸಾಂವಿಧಾನಿಕ ಎಂದು ರದ್ದುಗೊಳಿಸಿದ್ದ 'ಚುನಾವಣಾ ಬಾಂಡ್ ಯೋಜನೆ'ಯನ್ನು ಕೇಂದ್ರದಲ್ಲಿ ಮತ್ತೆ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದರೆ ಜಾರಿಗೆ ತರುವುದಾಗಿ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದು, ಪ್ರತಿಪಕ್ಷಗಳು 'ಸ್ವತಂತ್ರ ಭಾರತದ...