ಸಿಂಧೂ ನದಿ ನಾಗರಿಕತೆ ನಿರ್ಮಾಣದಲ್ಲಿ ಸ್ಟೆಪ್ ಮೂಲದ ಆರ್ಯ ವೈದಿಕರ ಪಾತ್ರವಿಲ್ಲ: ಅದನ್ನು ಕಟ್ಟಿದವರು ದಕ್ಷಿಣ ಏಷಿಯನ್ನರು

ಸಿಂಧೂ ನದಿ ನಾಗರಿಕತೆಯನ್ನು ಕಟ್ಟಿ ಬೆಳೆಸಿದವರು ದಕ್ಷಿಣ ಏಷಿಯನ್ನರು; ಸಿಂಧೂ ನದಿ ನಾಗರಿಕತೆ ನಿರ್ಮಾಣದಲ್ಲಿ ಸ್ಟೆಪ್ ಮೂಲದ ಆರ್ಯ ವೈದಿಕರ ಪಾತ್ರವಿಲ್ಲ; 9000 ವರ್ಷಗಳ ಹಿಂದೆ ರೂಪುಗೊಂಡ ಇರಾನಿ ಬೇಸಾಯಗಾರರಿಗೂ ಸಿಂಧೂ ನಾಗರೀಕತೆಯ ಜನರಿಗೂ ಸಂಬಂಧವಿಲ್ಲ! ಎಂಬ ಸತ್ಯ ಹೊರಬಿದ್ದಿದೆ.

ಹರಪ್ಪಾ ಅಥವಾ ಸಿಂಧೂ ಕಣೆವೆ ನಾಗಹರಿಕತೆಗೆ ಸಂಬಂಧಿಸಿದ ಬಹುನಿರೀಕ್ಷಿತ ರಾಖಿಗರಿ ಪಳೆಯುಳಿಕೆಯ ಡಿಎನ್‍ಎ ಸಂಶೋಧನೆಯ ಫಲಿತಾಂಶ ಕೊನೆಗೂ ಅಧಿಕೃತವಾಗಿ ಹೊರಬಿದ್ದಿದೆ. ಈ ಸಂಶೋಧನೆಗಳ ವರದಿಯನ್ನು ಪ್ರತಿಷ್ಟಿತ ಅಂತರರಾಷ್ಟ್ರೀಯ ವಿಜ್ಞಾನ ಪತ್ರಿಕೆಗಳಾದ  ಸೆಲ್ (Cell) ಮತ್ತು “ಸೈನ್ಸ್” ಮ್ಯಾಗಜೀನ್‍ಗಳಲ್ಲಿ ಗುರುವಾರ (ಸೆ.5) ಪ್ರಕಟಿಸಲಾಗಿದೆ.

ಸುಮಾರು 5000 ವರ್ಷಗಳ ಹಿಂದೆ ರೂಪುಗೊಂಡಿದ್ದ ಜಗತ್ ಪ್ರಸಿದ್ಧ ಸಿಂಧೂ ನದಿ ನಾಗರಿಕತೆ ಅಥವಾ ಹರಪ್ಪ ನಾಗರಿಕತೆಗೆ ಸಂಬಂಧಿಸಿದ ಸಂಶೋಧನೆ ಇದಾಗಿದೆ. ಕಳೆದ ಕೆಲವಾರು ವರ್ಷಗಳಿಂದ ವಿಜ್ಞಾನಿಗಳು ನಾಲ್ಕು ವರ್ಷಗಳಿಂದಲೂ ಅವಿರತ ಸಂಶೋಧನೆ ನಡೆಸಿದ್ದರು. ಇದರ ಫಲವಾಗಿ ಸಿಂಧೂ ನಾಗರಿಕತೆಯನ್ನು ಕಟ್ಟಿದವರು ಯಾರು ಎಂಬ ಪ್ರಶ್ನೆಗೆ ಉತ್ತರ ದೊರಕಿಸುವಲ್ಲಿ ವಿಜ್ಞಾನಿಗಳು ಸಫಲರಾಗಿದ್ದಾರೆ.

ಇಂದಿನ ದೆಹಲಿಗೆ ಸುಮಾರು 150 ಕಿಲೋಮೀಟರ್ ದೂರದಲ್ಲಿ ಹರ್ಯಾಣದ ಹಿಸಾರ್ ಜಿಲ್ಲೆಯ ರಾಖಿಗರಿ ಎಂಬಲ್ಲಿ ಹರಪ್ಪ ನಾಗರಿಕತೆಗೆ ಸಂಬಂಧಿಸಿದ್ದ ಸು.4500 ವರ್ಷ ಹಿಂದಿನ ಪಳೆಯುಳಿಕೆಗಳು ದೊರಕಿದ್ದವು. ಪುಣೆಯ ಡೆಕನ್ ಕಾಲೇಜಿನ ಉಪಕುಲಪತಿಗಳೂ ಪ್ರಾಕ್ತನ ಶಾಸ್ತ್ರಜ್ಞರೂ ಆಗಿರುವ ಡಾ.ವಸಂತ ಶಿವರಾಮ ಶಿಂಧೆ ನೇತೃತ್ವದ ಸಂಶೋಧಕರ ತಂಡವೊಂದು 2015ರ ಮಾರ್ಚ್ 11 ರಂದು ರಾಖಿಗರಿಯಲ್ಲಿ ಇಬ್ಬರು ಪುರುಷರದ್ದು, ಒಂದು ಸ್ತ್ರೀಯದು ಮತ್ತು ಒಂದು ಮಗುವಿನದು ಸೇರಿ ಒಟ್ಟು ನಾಲ್ಕು ಮಾನವ ಅವಶೇಷಗಳನ್ನು ಪತ್ತೆ ಹಚ್ಚಿತ್ತು. ಸಿಂಧೂ ನದಿ ನಾಗರಿಕತೆಯ ಕಾಲದಲ್ಲಿ ಸ್ಮಶಾನವೊಂದರಲ್ಲಿ ಹೂಳಲಾಗಿದ್ದ ವ್ಯಕ್ತಿಗಳ ಪೈಕಿ ಒಂದರ ಪಳೆಯುಳಿಕೆಗಳಿಂದ ವಂಶವಾಹಿಗಳನ್ನು ಪತ್ತೆಹಚ್ಚಲು ವಿಜ್ಞಾನಿಗಳಿಗೆ ಸಾಧ್ಯವಾಗಿತ್ತು. ನಾಲ್ಕು ಅವಶೇಷಗಳ ಪೈಕಿ ವಂಶವಾಹಿ ದೊರೆತ ದೇಹ ಸ್ತ್ರೀ ದೇಹದ ಪಳೆಯುಳಿಕೆ ಎಂದು ವಿಜ್ಞಾನಿಗಳು ಅಂದಾಜಿಸಿದ್ದಾರೆ.

ರಾಖಿಗರಿ ಪಳೆಯುಳಿಕೆಯ ವಂಶವಾಹಿಗಳನ್ನು ತುರ್ಕ್‍ಮೆನಿಸ್ತಾನದ ಗೋನುರ್ ಮತ್ತು ಪೂರ್ವ ಇರಾನಿನ ಶಹರ್-ಇ-ಶೋಕ್ತಾ ಎಂಬಲ್ಲಿ ದೊರೆತ 523 ಪಳೆಯುಳಿಕೆಗಳ ವಂಶವಾಹಿಗಳೊಂದಿಗೆ ವಿಶ್ಲೇಷಣೆ ನಡೆಸಲಾಗಿದೆ. ಈ 523 ಜನರ ವಂಶವಾಹಿಗಳ ಪೈಕಿ 11 ಜನರ ವಂಶವಾಹಿಗಳು ರಾಖಿಗರಿ ವಂಶವಾಹಿಯೊಂದಿಗೆ ತಾಳೆಯಾಗಿವೆ. ಅವುಗಳನ್ನು ಮತ್ತಷ್ಟು ಅಧ್ಯಯನಕ್ಕೆ ಒಳಪಡಿಸಿದಾಗ ಆ 11 ವಂಶವಾಹಿಗಳು ಭಾರತದಿಂದಲೇ ವಲಸೆ ಹೋದ ಸಿಂಧೂ ನಾಗರಿಕತೆಯ ಜನರಿಗೆ ಸೇರಿವೆ ಎಂದು ತಿಳಿದು ಬಂದಿದೆ. ಆ 11 ಜನರು ಮತ್ತು ರಾಖಿಗರಿ ವ್ಯಕ್ತಿಯ ವಂಶವಾಹಿಗಳನ್ನು ಸೇರಿ 12 ಜನರ ವಂಶವಾಹಿಗಳನ್ನು ತಳಿ ವಿಜ್ಞಾನಿಗಳು IVC Cline (ಸಿಂಧೂ ಕಣಿವೆ ನಾಗರಿಕೆಯ ಶ್ರೇಣಿ) ಎಂದು ಕರೆದಿದ್ದಾರೆ.

ಕಳೆದ ಹಲವಾರು ದಶಕಗಳಿಂದ ನಾನಾ ಬಗೆಯ ಸಂಶೋಧನೆಗಳು ನಡೆದಿದ್ದರೂ ಸಿಂಧೂ ನದಿ ನಾಗರಿಕತೆಯ ಮೂಲ ಜನರು ಯಾರು ಎಂಬ ಬಗ್ಗೆ ಊಹಾಪೋಹಗಳಷ್ಟೇ ಇದ್ದವು. ಯಾವುದೇ ಸಂಶೋಧನೆ ಕರಾರುವಕ್ಕಾದ ಮಾಹಿತಿ ನೀಡಲು ವಿಫಲವಾಗಿತ್ತು. ಆದರೆ ರಾಖಿಗರಿ ವಂಶವಾಹಿ ಸಂಶೋಧನೆ ನಡೆಸಿರುವ ತಳಿವಿಜ್ಞಾನಿಗಳು ಮಾತ್ರ ಕೊನೆಗೂ ಹರಪ್ಪ ನಾಗರಿಕತೆಯ ರಹಸ್ಯವನ್ನು ಬಯಲು ಮಾಡಿದ್ದಾರೆ.
ವಿಜ್ಞಾನಿಗಳಾದ ವಸಂತ್ ಶಿಂಧೆ, ಡೇವಿಡ್ ರೀಷ್, ಪ್ರಿಯಾಂಕಾ ಮೂರ್ಜಾನಿ, ನಿಕ್ ಪ್ಯಾಟರ್ಸನ್, ವಾಗೀಶ್ ಎಂ ನರಸಿಂಹನ್, ನೀರಾಜ್ ರಾಯ್ ಮೊದಲಾದ ವಿಜ್ಞಾನಿಗಳು ವರ್ಷಗಳ ಕಾಲ ನಡೆಸಿರುವ ಸಂಶೋಧನೆ ಹೊರಗೆಡವಿರುವ ಅಂಶಗಳು ಇದುವರೆಗಿನ ಕೆಲವು ನಂಬಿಕೆಗಳನ್ನು ಬುಡಮೇಲು ಮಾಡಿವೆ. ಮಾತ್ರವಲ್ಲ ಹಿಂದೆಂದಿಗಿಂತಲೂ ನಿಖರ ಮಾಹಿತಿಗಳನ್ನು ಈ ಸಂಶೋಧನೆ ಹೊರಗೆಡವಿವೆ. ಕೇವಲ ರಾಖಿಗರಿ ಪಳೆಯುಳಿಕೆಯಲ್ಲದೇ ಹರಪ್ಪ ನಾಗರಿಕತೆಯ ಅಂಚಿನಲ್ಲಿ ದೊರೆತ ಇನ್ನಿತರ ಪುರಾತನ ಪಳೆಯುಳಿಕೆಗಳನ್ನೂ ಆಳವಾಗಿ ಅಧ್ಯಯನ ನಡೆಸಲಾಗಿದೆ. ಎಲ್ಲಾ ಸಂಶೋಧನೆಗಳನ್ನು ಕೂಲಂಕಶವಾಗಿ ತಾಳೆ ನೋಡಿ ತೀರ್ಮಾನಕ್ಕೆ ಬರಲಾಗಿದೆ.

ವಸಂತ ಶಿಂಧೆ

ವಿಜ್ಞಾನಿಗಳು ಪ್ರಕಟಗೊಳಿಸಿರುವ ಅಧಿಕೃತ ಫಲಿತಾಂಶಗಳ ಮುಖ್ಯಾಂಶಗಳು ಇಂತಿವೆ:
ಹರಪ್ಪ ನಾಗರಿಕತೆಯ ಜನರು ಜಗತ್ತಿನಲ್ಲೇ ಅತ್ಯಂತ ಪುರಾತನವಾದ ನಾಗರಿಕತೆಗಳ ಪೈಕಿ ಒಂದು ನಾಗರಿಕತೆಯ ಜನರಾಗಿದ್ದರು. ಈ ನಾಗರಿಕತೆಯನ್ನು ಕಟ್ಟಿ ಬೆಳೆಸಿವರು ದಕ್ಷಿಣ ಏಷಿಯನ್ನರು.

ಸಿಂಧೂ ಅಥವಾ ಹರಪ್ಪ ನಾಗರಿಕತೆಯನ್ನು ಕಟ್ಟಿದ ಜನರು ಸ್ಟೆಪ್ ಮೂಲದ ವೈದಿಕ ಆರ್ಯರಾಗಲೀ ಅಥವಾ ಇರಾನಿನ ಬೇಸಾಯಗಾರ ಸಮೂಹಕ್ಕೆ ಸೇರಿದವರಾಗಲೀ ಅಲ್ಲ. ಈ ಎರಡೂ ಸಮುದಾಯದ ಜನರ ವಂಶವಾಹಿಗಳು ಸಿಂಧೂ ನಾಗರಿಕತೆ ಜನರಿಗೆ (IVC Cline) ಸಂಬಂಧಿಸಿದ ವಂಶವಾಹಿಗಳಲ್ಲಿ ಕಂಡುಬಂದಿಲ್ಲ. ರಾಖಿಗರಿ ಪಳೆಯುಳಿಕೆಗಳಲ್ಲಿ ಲಭ್ಯವಾದ ವಂಶವಾಹಿಗಳು ಮತ್ತು ಸಿಂಧೂ ನದಿ ನಾಗರಿಕತೆಗೆ ಸಂಬಂಧಿಸಿದ ಇತರ 11 ಕಡೆಗಳಲ್ಲಿ ಲಭ್ಯವಾದ ವಂಶವಾಹಿಗಳನ್ನು (Genome) ಆಳವಾದ ಅಧ್ಯಯನಕ್ಕೊಳಪಡಿಸಿದಾಗ ಸಿಂಧೂ ನಾಗರಿಕತೆಯ ಜನರ ಪೂರ್ವಿಕರು ಇನ್ನೂ ಹಿಂದಿನ ಕಾಲಾವಧಿಯ ವಂಶವಾಹಿ ಗುಣಲಕ್ಷಣಗಳನ್ನು ಹೊಂದಿರುವುದು ಕಂಡುಬಂದಿದೆ.

ಸಿಂಧೂ ನದಿ ನಾಗರಿಕತೆ ಕಟ್ಟಿದವರಲ್ಲಿ ಭಾರತಕ್ಕೆ ಸುಮಾರು 60,000 ವರ್ಷಗಳ ಹಿಂದೆ ಭಾರತಕ್ಕೆ ಬಂದಿದ್ದ ಹಾಗೂ ಇಂದಿಗೂ ಅಂಡಮಾನ್‍ ದ್ವೀಪಗಳಲ್ಲಿರುವ ಜನರ ಪೂರ್ವಿಕರು ಮತ್ತು ಇರಾನಿನ ಬೇಸಾಯಗಾರರ ಒಂದು ಮಿಶ್ರಣ ಜನಾಂಗ ಎನ್ನಲಾಗಿತ್ತು. ಆದರೆ ಇರಾನಿನ ಬೇಸಾಯಗಾರರ ವಂಶವಾಹಿಗಳು ಸಿಂಧೂ ನಾಗರಿಕತೆ ಜನರ ವಂಶವಾಹಿಗಳಲ್ಲಿ ಇಲ್ಲ ಎಂದು ಸಂಶೋಧನೆ ತಿಳಿಸಿದೆ. ಬದಲಿಗೆ ಸಿಂಧೂ ನಾಗರಿಕತೆಯ ಜನರ ವಂಶವಾಹಿಗಳು ಬೇರೊಂದು ಜನರ ವಂಶವಾಹಿಗಳನ್ನು ಒಳಗೊಂಡಿವೆ ಎಂಬುದು ಅಚ್ಚರಿದಾಯಕ ಫಲಿತಾಂಶವಾಗಿದೆ. ನಾಗರಿಕತೆಯ ತೊಟ್ಟಿಲು ಅಥವಾ ಫರ್ಟೈಲ್ ಕ್ರೆಸೆಂಟ್ ಎಂದು ಕರೆಯಲಾಗುವ ಇಂದಿನ ಇರಾಕ್, ಪ್ಯಾಲೆಸ್ತೀನ್, ಸಿರಿಯಾ ಇತ್ಯಾದಿಗಳಿರುವ ಮಧ್ಯಪ್ರಾಚ್ಯದಲ್ಲಿ ವಿಕಾಸಗೊಂಡ ಇರಾನಿನ ಬೇಸಾಯಗಾರು ಕೃಷಿ ಆವಿಷ್ಕರಿಸುವುದಕ್ಕೂ ಕೆಲವು ಸಾವಿರ ವರ್ಷಗಳಿಗೆ ಮುಂಚೆಯೇ (ಇಂದಿಗೆ ಸುಮಾರು 12,000 ವರ್ಷಗಳ ಹಿಂದೆ) ಕವಲೊಡೆದಿದ್ದ ಇರಾನಿನ ಬೇಟೆ-ಆಹಾರ ಸಂಗ್ರಾಹಕರ ಬುಡಕಟ್ಟು ಗುಂಪೊಂದು ಪೂರ್ವಾಭಿಮುಖವಾಗಿ ಚಲಿಸಿತ್ತು. ಅದರ ವಂಶಸ್ಥರು ಭಾರತದಲ್ಲಿ ಅದಾಗಲೇ ನೆಲೆಯೂರಿದ್ದ ಮೂಲನಿವಾಸಿಗಳ ಜೊತೆ ಸಮ್ಮಿಲನಗೊಂಡಿತ್ತು. ಹೀಗೆ ರೂಪುಗೊಂಡ ದಕ್ಷಿಣ ಏಷಿಯಾದ ಜನರೇ ಸಿಂಧೂ ನಾಗರಿಕತೆಗೆ ಬುನಾದಿ ಹಾಕಿದ್ದು. ಕ್ರಮೇಣ ಸಿಂಧೂ ನಾಗರಿಕತೆ ಜಗತ್ತಿನ ಪ್ರಾಚೀನ ನಾಗರಿಕತೆ ಎನಿಸಿಕೊಂಡಿತು.

ಹರಪ್ಪ ನಾಗರಿಕತೆಯಲ್ಲಿ ಕೃಷಿ ಬಂದಿದ್ದು ಇರಾನಿನ ಬೇಸಾಯಗಾರರಿಂದ ಎಂಬ ಜನಪ್ರಿಯ ನಂಬಿಕೆ ತಪ್ಪು ತಿಳುವಳಿಕೆ ಎಂದು ರಾಖಿಗರಿ ಸಂಶೋಧನೆ ತಿಳಿಸಿದೆ. ಈ ತಳಿ ಶೋಧನೆಯಲ್ಲಿ ಮುಖ್ಯ ಪಾತ್ರ ವಹಿಸಿರುವ ತಳಿವಿಜ್ಞಾನಿ ಡೇವಿಡ್ ರೀಚ್ ಪ್ರಕಾರ, “ವಂಶವಾಹಿಗಳ ವಿಶ‍್ಲೇಷಣೆ ನಡೆಸಿದಾಗ ರಾಖಿಗರಿ ಪಳೆಯುಳಿಕೆಯಲ್ಲಿ ದೊರೆತ ವಂಶವಾಹಿಯ ಇರಾನಿನ ಪೂರ್ವಿಕರು ಇರಾನಿನಲ್ಲಿ ಬೇಸಾಯಗಾರರು ಮತ್ತು ಬೇಟೆ-ಸಂಗ್ರಾಹಕರು ಪರಸ್ಪರ ಬೇರಾಗುವುದಕ್ಕಿಂತಲೂ ಮೊದಲಿನ ಜನರದ್ದೆಂದು ತಿಳಿದು ಬಂದಿದೆ. ಸಿಂಧೂ ನಾಗರಿಕತೆಯ ಜನರ ಪೂರ್ವಿಕರು ಕೃಷಿಯು ಇರಾನಿನಲ್ಲಿ ಆರಂಭಗೊಳ್ಳುವುದಕ್ಕೂ ಮೊದಲೇ ಇರಾನನ್ನು ತೊರೆದು ಭಾರತದ ಕಡೆಗೆ ಪಯಣ ಬೆಳೆಸಿದ್ದರು”. “ದಕ್ಷಿಣ ಏಷಿಯಾದಲ್ಲಿ ಕೃಷಿ ಬೆಳವಣಿಗೆಯಾಗಿದ್ದು ಸ್ಥಳೀಯ ಆವಿಷ್ಕಾರದಿಂದಾಗಿ ಇಲ್ಲವೇ ಪಶ್ವಿಮ ದೇಶಗಳ ನೆರೆಹೊರೆಯವರನ್ನು ನೋಡಿ ಕಲಿತಿದ್ದಿರಬಹುದು (Adaptation) ಇಲ್ಲವೇ ಎರಡರ ಸಂಯೋಜನೆಯಿಂದ ಆಗಿರಬಹುದು” ಎಂದು ರೀಚ್ ಹೇಳುತ್ತಾರೆ. ಅಂದರೆ ಸಿಂಧೂ ನಾಗರಿಕತೆ ಜನರು ಕೃಷಿಯನ್ನು ತಾವೇ ಸ್ವತಃ ಅಭಿವೃದ್ಧಿ ಪಡಿಸಿಕೊಂಡಿದ್ದ ಸಂಗತಿ ಇದರ ಮೂಲಕ ಸ್ಪಷ್ಟವಾಗುತ್ತದೆ. ಯಾಕೆಂದರೆ ಸಿಂಧೂ ನದಿ ನಾಗರಿಕತೆ ಜನರಿಗೂ, ಪುರಾತನ ಇರಾನಿನ ಕೃಷಿಕರಿಗೂ ಮೂಲತಃ ಸಂಬಂಧವಿರಲಿಲ್ಲ. ಸಿಂಧೂ ನಾಗರಿಕತೆ ಜನರು ಆ ಕಾಲದಲ್ಲಿ ಅಸ್ತಿತ್ವ ಹೊಂದಿದ್ದ ಈಜಿಪ್ಟ್ ಮುಂತಾದ ಜಗತ್ತಿನ ಇತರೆ ನಾಗರಿಕತೆಗಳೊಂದಿಗೆ ಸಾಂಸ್ಕೃತಿಕ ಸಂವಹನ ಸಾಧಿಸಿಕೊಂಡಿದ್ದರು.


ಸಿಂಧೂ ನಾಗರಿಕತೆಯ ಅಂತಿಮ ಹಂತದಲ್ಲಿ (ಕ್ರಿ.ಪೂ.1500) ಭಾರತಕ್ಕೆ ಪ್ರವೇಶಿಸಿದ ಸ್ಟೆಪ್‍ ಮೂಲದ ಯಾಮ್ನಾಯ ಸಂಸ್ಕೃತಿಯ ಆರ್ಯ ವೈದಿಕರು ಸಿಂಧೂ ನಾಗರಿಕತೆ ರೂಪುಗೊಳ್ಳುವಾಗ ಭಾರತಕ್ಕೆ ಬಂದಿರಲೇ ಇಲ್ಲ ಎಂಬುದನ್ನು ರಾಖಿಗರಿ ಫಲಿತಾಂಶ ದೃಢಪಡಿಸಿದೆ. ಇವರು ಭಾರತಕ್ಕೆ ಸೆಂಟ್ಲರ್ ಏಶಿಯಾದಿಂದ ಸುಮಾರು ಕ್ರಿ.ಪೂ.2500ರಲ್ಲಿ (4500 ವರ್ಷಗಳ ಹಿಂದೆ) ಹೊರಟು ಸುಮಾರು 3500-3000 ವರ್ಷಗಳ ಹಿಂದೆ ಆಗ್ನೇಯ ಭಾರತಕ್ಕೆ ಕಾಲಿಟ್ಟರು ಎನ್ನಲಾಗಿದೆ. ಸಿಂಧೂ ನದಿ ನಾಗರಿಕತೆಯ ಕಾಲಮಾನವು ಯಾಮ್ನಾಯಾ ಸಂಸ್ಕೃತಿಯ ಆರ್ಯ ವೈದಿಕರು ಇಲ್ಲಿಗೆ ಕಾಲಿಡುವುದಕ್ಕಿಂತೂ ಕೆಲವು ಸಾವಿರ ವರ್ಷಗಳ ಹಿಂದಿನದು ಎಂಬುದನ್ನು ಈ ತಳಿ ಸಂಶೋಧನೆ ದೃಢಪಡಿಸಿದೆ.
ಸಿಂಧೂ ನದಿ ನಾಗರಿಕತೆಯ ಅವಸಾನದ ನಂತರದ ಕಾಲಘಟ್ಟದಲ್ಲಿ ನಡೆದ ವರ್ಣ ಸಂಕರಗಳಿಂದ ಭಾರತದಲ್ಲಿ ದಕ್ಷಿಣ ಭಾರತೀಯ ಪೂರ್ವಜರು (Ancestral South Indians) ಮತ್ತು ಉತ್ತರ ಭಾರತೀಯ ಪೂರ್ವಜರು (Ancestral North Indians) ಉಂಟಾದರು. ಇಂದು ಭಾರತಲ್ಲಿರುವ ಬಹುತೇಕ ಜನವರ್ಗಗಳು ಈ ಗುಂಪುಗಳಿಗೆ ಸೇರಿದವರು. ಇವರಲ್ಲಿ ದಕ್ಷಿಣ ಭಾರತೀಯ ಪೂರ್ವಜರ ನೇರ ವಂಶಸ್ಥರು ಇಂದು ದಕ್ಷಿಣ ಭಾರತದಲ್ಲಿರುವ ಹಲವಾರು ಆದಿವಾಸಿ ಬುಡಕಟ್ಟು ಜನರಾಗಿದ್ದಾರೆ ಎಂದು ಸಂಶೋಧನೆ ತಿಳಿಸಿದೆ. ಉತ್ತರ ಭಾರತೀಯ ಪೂರ್ವಜರಲ್ಲಿ ಸ್ಟೆಪ್‍ ಮೂಲದ ಯಾಮ್ನಾಯ ವೈದಿಕ ಸಂಸ್ಕೃತಿಯ ಗುಣಲಕ್ಷಣಗಳು ಹೆಚ್ಚಿದ್ದರೆ ದಕ್ಷಿಣ ಭಾರತೀಯ ಪೂರ್ವಜರು ಸಿಂಧೂ ನದಿ ನಾಗರಿಕತೆ ಕಟ್ಟಿದ ದಕ್ಷಿಣ ಏಷಿಯನ್ನರಾಗಿದ್ದಾರೆ ಎಂದು ಅಧ್ಯಯನ ತಿಳಿಸಿದೆ.

ಸಿಂಧೂ ಅಥವಾ ಹರಪ್ಪ ನಾಗರಿಕತೆಯ ಜನರು ವ್ಯವಸ್ಥಿತವಾದ ನಗರಗಳನ್ನು ನಿರ್ಮಿಸಿದ್ದರು, ಅತ್ಯುತ್ತಮ ಒಳಚರಂಡಿ ವ್ಯವಸ್ಥೆ ರೂಪಿಸಿದ್ದರು, ಸುವ್ಯವಸ್ಥಿತ ಆಹಾರ ಸಂಗ್ರಹ ವ್ಯವಸ್ಥೆಯನ್ನು ರಚಿಸಿದ್ದರು. ತಮ್ಮದೇ ವಿಶಿಷ್ಟ ರೀತಿಯ ತೂಕದ ಮಾಪನಗಳನ್ನು ಹಾಗೂ ಅಳತೆಯ ಸಾಧನಗಳನ್ನು ಇವರು ಅಭಿವೃದ್ಧಿಪಡಿಸಿಕೊಂಡಿದ್ದರು.

ಹರಪ್ಪ ನಾಗರಿಕತೆಯಲ್ಲಿ ದೊರಕಿರುವ ಪಳೆಯುಳಿಕೆಗಳಲ್ಲಿ ಬಳಸಿರುವ ಭಾಷೆ ಯಾವುದು ಎಂಬ ಕುರಿತು ಸಾಕಷ್ಟು ಜಿಜ್ಞಾಸೆ ನಡೆದಿದೆ. ಭಾಷಾ ವಿಜ್ಞಾನಿಗಳು ಇತ್ತೀಚೆಗೆ ದೃಢಪಡಿಸಿರುವ ಪ್ರಕಾರ ಹರಪ್ಪ ಜನರ ಭಾಷೆಯು ಯಾವುದೇ ಇಂಡೋ ಯೂರೋಪಿಯನ್ ಅಥವಾ ಸಂಸ್ಕೃತ ಸಂಬಂಧೀ ಭಾಷೆಯಾಗಿರದೇ ಪ್ರೊಟೋ ದ್ರಾವಿಡ ನುಡಿಯಾಗಿದೆ ಎಂದು ಖಚಿತಪಡಿಸಿದ್ದಾರೆ. ಆದರೆ ಇನ್ನೂ ಇದರ ಲಿಪಿಯನ್ನು ಓದಲು ಸಾಧ್ಯವಾಗಿಲ್ಲ. ಇಂಡೋ ಯೂರೋಪಿಯನ್ ಭಾಷೆಗಳು ಸ್ಟೆಪ್ ಮೂಲದ ಸಮುದಾಯಗಳೊಂದಿಗೆ ಪೂರ್ವ ಯೂರೋಪಿಗೆ ಹರಡಿದ ರೀತಿಯಲ್ಲಿಯೇ ದಕ್ಷಿಣ ಏಷಿಯಾಕ್ಕೆ ಹರಡಿದ್ದು ಸ್ಟೆಪ್ ಮೂಲದ ಯಾಮ್ನಾಯ ಸಂಸ್ಕೃತಿಯ ಜನರಿಂದ ಎಂಬುದನ್ನು ಸಹ ಪ್ರಸ್ತುತ ವಂಶವಾಹಿ ಸಂಶೋಧನೆಗಳು ಸೂಚಿಸಿರುವುದನ್ನು ಗಮನಿಸಬಹುದು.

ಇಂದು ಪ್ರಪಂಚದಲ್ಲಿ ಜೀವಿಸುತ್ತಿರುವ ಎಲ್ಲಾ ಮನುಷ್ಯರ ಜೀವಿಗಳ ಮೂಲ ಸುಮಾರು 70 ಸಾವಿರ ವರ್ಷಗಳ ಹಿಂದೆ ಆಫ್ರಿಕಾದಿಂದ ವಲಸೆ ಹೊರಟ ಮನುಷ್ಯ ಜೀವಿಗಳು ಎಂಬುದನ್ನು ಕೆಲವು ವರ್ಷಗಳ ಹಿಂದೆ ಇದೇ ತಳಿವಿಜ್ಞಾನಿಗಳು ಸಾಕ್ಷಾಧಾರ ಸಮೇತ ಬಯಲುಗೊಳಿಸಿದ್ದರು. ಭಾರತಕ್ಕೆ ಬಂದ ಮೂಲ ಜನರ ಕುರಿತು ಇತ್ತೀಚೆಗೆ ಟೋನಿ ಜೋಸೆಫ್ ಎಂಬುವವರು Early Indians ಎಂಬ ಕೃತಿ ರಚಿಸಿದ್ದರು. ತಳಿ ವಿಜ್ಞಾನದ ಸಂಗತಿಗಳನ್ನು ಆಧರಿಸಿ ಬರೆದಿರುವ ಇವರ ವಿಚಾರಗಳು ದೇಶದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿರುವುದನ್ನು ಗಮನಿಸಬಹುದು.
ಭಾರತದ ಚರಿತ್ರೆಯಲ್ಲಿ ಅತ್ಯಂತ ವಿವಾದಾಸ್ಪದ ಸಂಗತಿಗಳಲ್ಲಿ ಸಿಂಧೂ ನದಿ ನಾಗರಿಕತೆಯನ್ನು ಕಟ್ಟಿದವರು ಯಾರು ಎಂಬುದು ಒಂದಾಗಿತ್ತು. ಈ ಕುರಿತು ನಾನಾ ಬಗೆಯ ವಾದ ವಿವಾದಗಳು ಹಲವಾರು ವರ್ಷಗಳಿಂದ ನಡೆದಿವೆ. ಕಳೆದ ಐದಾರು ವರ್ಷಗಳಲ್ಲಿ ತಳಿವಿಜ್ಞಾನವು (Genetics) ಈ ಕುರಿತು ಗಮನ ಹರಿಸಿತ್ತು. ಜಾಗತಿಕ ಮಟ್ಟದಲ್ಲಿ ಪುರಾತನ ಮನುಷ್ಯರ ವಲಸೆ ಕುರಿತು ವಿಶೇಷ  ಆಸ್ತೆ ತಳೆದ ತಳಿ ವಿಜ್ಞಾನಿಗಳು ಪುರಾತನವೆನಿಸಿದ ಜನಸಮುದಾಯಗಳ ವಲಸೆ ಮತ್ತು ಸಂಕರ-ಸಮ್ಮಿಳನಗಳ ಕುರಿತು ಬೆಳಕು ಚೆಲ್ಲಿದ್ದಾರೆ. ಜಾಗತಿಕ ಮಟ್ಟದ ಹಲವಾರು ವಿಜ್ಞಾನಿಗಳು ಸೇರಿ ನಡೆಸಿದ ಸಂಶೋಧನೆ ಮತ್ತು ವಿಶ್ಲೇಷಣೆ ಕೊನೆಗೂ ಸಮರ್ಪಕ ಉತ್ತರ ನೀಡುವಲ್ಲಿ ಯಶಸ್ವಿಯಾಗಿದೆ ಎನ್ನಬಹುದು.

ಈ ವರದಿ ಬಂದ ನಂತರ ವಿಜಯ ಕರ್ನಾಟಕ ಪತ್ರಿಕೆಯಲ್ಲಿ “ದಕ್ಷಿಣ ಏಷಿಯಾದ ಮೂಲ ನಿವಾಸಿಗಳೇ ಆರ್ಯರು” ಎಂದು ವರದಿಯಾಗಿದೆ. ಆದರೆ ದಕ್ಷಿಣ ಏಷಿಯನ್ನರು ಎಂದರೆ ಆರ್ಯ ವೈದಿಕರಲ್ಲ. ಇರಾನಿನ ಬೇಟೆಗಾರ-ಆಹಾರ ಸಂಗ್ರಾಹಕರು ಮತ್ತು ಅಂಡಮಾನ್ ದ್ವೀಪ ನಿವಾಸಿಗಳ ಪೂರ್ವಜರು ಸೇರಿ ಆಗಿದ್ದ ಜನರು ದಕ್ಷಿಣ ಏಷಿಯನ್ ಜನ. ಇವರೇ ಸಿಂಧೂ ನದಿ ನಾಗರಿಕತೆ ಕಟ್ಟಿದವರು, ಅಂದಿನ ಕಾಲದ ಪಶ್ವಿಮದ ದೇಶಗಳೊಂದಿಗೆ ಸಾಂಸ್ಕೃತಿಕ ಕೊಡುಕೊಳೆ ನಡೆಸಿದವರು.  ಇದೇ ವರದಿಯಲ್ಲಿ “ಹರಪ್ಪ ನಾಗರಿಕತೆಯು ಜಿನೋಮ್ ಸ್ಟೆಪ್ ಪ್ಯಾಸ್ಟೊರಲಿಸ್ಟ್ ಗಳು ಅಥವಾ ಇರಾನಿ ಕೃಷಿಕ ಸಮುದಾಯಕ್ಕೆ ಸಂಬಂಧಿಸಿದ್ದಲ್ಲ” ಎಂದು ವಿಜ್ಞಾನಿಗಳು ಹೇಳಿದ್ದನ್ನು ಸರಿಯಾಗಿ ದಾಖಲಿಸಿದ್ದಾನೆ. ಆದರೆ ವರದಿ ಮಾಡಿದವರಿಗೆ ಸ್ಟೆಪ್ ಪ್ಯಾಸ್ಟೊರಲಿಸ್ಟ್ ಗಳೇ ಆರ್ಯರು ಎಂಬ ಸಾಮಾನ್ಯ ಜ್ಞಾನವೂ ಇಲ್ಲ” ಎಂದು ಪತ್ರಕರ್ತ ಹರ್ಷಕುಮಾರ್ ಕುಗ್ವೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

(ಈ ಲೇಖನವನ್ನು ಟ್ರೂಥ್ ಇಂಡಿಯಾ ಕನ್ನಡದಿಂದ ಯಥಾವತ್ತಾಗಿ ತೆಗೆದುಕೊಳ್ಳಲಾಗಿದ್ದು ಶೀರ್ಷಿಕೆ ಮಾತ್ರ ಬದಲಿಸಲಾಗಿದೆ)

Donate

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

4 COMMENTS

  1. ಸಿಂಧೂ ನಾಗರಿಕತೆಯ ನಿರ್ಮಾಣದಲ್ಲಿ ಆರ್ಯ ವೈದಿಕರ ಪಾತ್ರ ಇಲ್ಲ ಎಂಬ ಸತ್ಯಾಂಶ ಈಗ ಹೊರಬಿದ್ದಿದೆ.
    ಇದು ಸ್ವಾಗತಾರ್ಹವಾದ ಸಮಾಧಾನಕರ ಸಂಗತಿ.

  2. ಆರ್ಯರು ನಾಗರೀಕತೆಯನ್ನು ನಾಶಗೊಳಿಸಿರುವುದಕ್ಕೆ ವೇದಗಳಲ್ಲಿ ಸಾಕಷ್ಟು ವಿವರಗಳಿವೆ.ಆದರೆ ನಾಗರೀಕತೆಯನ್ನು ಕಟ್ಟರುವುದಕ್ಕೆ ಆಧಾರಗುಳಿಲ್ಲ.

LEAVE A REPLY

Please enter your comment!
Please enter your name here