ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ಅವರ ವಿರುದ್ಧದ ಪ್ರತಿಭಟನೆಯ ವೇಳೆ ಮಹಿಳಾ ಪತ್ರಕರ್ತೆಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ಸಹಾಯಕ ಪೊಲೀಸ್ ಆಯುಕ್ತ (ಎಸಿಪಿ) ವಿವೇಕ್ ಭಗತ್ ಅವರಿಗೆ ನೀಡಲಾಗಿದ್ದ ಹೆಚ್ಚುವರಿ ಉಪ ಪೊಲೀಸ್ ಆಯುಕ್ತ (ಡಿಡಿಸಿಪಿ) ಹುದ್ದೆಯ ಪ್ರಸ್ತುತ ಕರ್ತವ್ಯದ ಜವಾಬ್ದಾರಿಯನ್ನು (ಸಿಡಿಸಿ) ತಡೆಹಿಡಿಯಲಾಗಿದೆ ಎಂದು ದೆಹಲಿ ಸರ್ಕಾರ ತಿಳಿಸಿದೆ.
ಹೆಚ್ಚುವರಿ ಡಿಸಿಪಿ ಸಿಡಿಸಿಯನ್ನು ಪಡೆದಿದ್ದ 12 ಡಿಎಎನ್‌ಐಪಿಎಸ್ ಅಧಿಕಾರಿಗಳಲ್ಲಿ ಭಗತ್ ಕೂಡ ಒಬ್ಬರಾಗಿದ್ದರು. ಮಹಿಳಾ ಪತ್ರಕರ್ತೆಯರ ಮೇಲೆ ನಡೆದಿದೆ ಎನ್ನಲಾದ ಕಿರುಕುಳದ ಕುರಿತು ಸಂಪೂರ್ಣ ತನಿಖೆ ನಡೆದು ಅದು ‘ತೃಪ್ತಿಕರವಾಗಿ ಮುಕ್ತಾಯಗೊಳ್ಳುವವರೆಗೆ’ ತಾವಾಗಿಯೇ ಸ್ವಯಂಪ್ರೇರಿತರಾಗಿ ಆ ಜವಾಬ್ದಾರಿಯನ್ನು ಸ್ವೀಕರಿಸುವುದಿಲ್ಲ ಎಂದು ಭಗತ್ ಕೋರಿದ್ದಾರೆ ಎಂದು ಸರ್ಕಾರ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದೆ.
ಅದರಂತೆ, ಹಿಂದಿನ ಆದೇಶವನ್ನು ಮಾರ್ಪಡಿಸಲಾಗುತ್ತಿದ್ದು, ಉಳಿದ 11 ಅಧಿಕಾರಿಗಳಿಗೆ ಸಿಡಿಸಿ ನಿಯೋಜನೆಗಾಗಿ ಅದನ್ನು ಮರುಹೊರಡಿಸಲಾಗುವುದು ಎಂದು ತಿಳಿಸಲಾಗಿದೆ.
ಭಗತ್ ಸೇರಿದಂತೆ 12 ಅಧಿಕಾರಿಗಳಿಗೆ ಹೆಚ್ಚುವರಿ ಕರ್ತವ್ಯದ ಜವಾಬ್ದಾರಿಯನ್ನು ನೀಡುವ ಪ್ರಸ್ತಾವನೆಯನ್ನು ಪ್ರಸ್ತುತ ಘಟನೆಗಳಿಗಿಂತ ಬಹಳ ಮುಂಚಿತವಾಗಿ; ಅಂದರೆ ಆಗಸ್ಟ್ 25 ರಂದೇ ಆರಂಭಿಸಲಾಗಿತ್ತು. ಅಕ್ಟೋಬರ್ 5 ರಂದು ಸೂಕ್ತ ಅನುಮೋದನೆಯ ನಂತರ ಆದೇಶಗಳನ್ನು ಹೊರಡಿಸಲಾಗಿದೆ ಎಂದು ದೆಹಲಿ ಸರ್ಕಾರ ಸ್ಪಷ್ಟಪಡಿಸಿದೆ.
ಅಲ್ಲದೆ, ಸಿಡಿಸಿ ನಿಯೋಜನೆಯು ತಾತ್ಕಾಲಿಕ ವ್ಯವಸ್ಥೆಯಾಗಿದ್ದು, ಇದರಿಂದ ಯಾವುದೇ ಆರ್ಥಿಕ ಲಾಭವಿರುವುದಿಲ್ಲ. ಹೆಚ್ಚುವರಿ ಜವಾಬ್ದಾರಿ ಪಡೆದ ಅಧಿಕಾರಿಗಳು ಸಾಮಾನ್ಯ ಹುದ್ದೆಯಲ್ಲಿರುವವರಂತೆ ಯಾವುದೇ ಶಾಸನಬದ್ಧ ಕರ್ತವ್ಯಗಳನ್ನು ನಿರ್ವಹಿಸಲು ಸಾಧ್ಯವಿಲ್ಲ ಎಂದು ಸರ್ಕಾರ ತಿಳಿಸಿದೆ.
ಅಕ್ಟೋಬರ್ 3 ರಂದು ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನೆಯ ವೇಳೆ ಮಹಿಳಾ ಪತ್ರಕರ್ತೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಹೊತ್ತಿರುವ ದೆಹಲಿ ಪೊಲೀಸ್ ಸಿಬ್ಬಂದಿಯಲ್ಲಿ ಭಗತ್ ಕೂಡ ಒಬ್ಬರಾಗಿರುವುದರಿಂದ, ಸೋಮವಾರ ಮುಂಚಿತವಾಗಿ ಅವರಿಗೆ ಹೆಚ್ಚುವರಿ ಡಿಸಿಪಿ ಹುದ್ದೆ ನೀಡಿದ್ದು ತೀವ್ರ ಪ್ರತಿಕ್ರಿಯೆಗೆ ಕಾರಣವಾಗಿತ್ತು.
ಚುನಾವಣಾ ಆಯೋಗದ ಕಾರ್ಯವೈಖರಿಯಲ್ಲಿನ ಅಕ್ರಮಗಳು ಮತ್ತು ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ವಿರೋಧಿಸಿ ನಡೆದ ಪ್ರತಿಭಟನೆಯ ವೇಳೆ ದೆಹಲಿ ಪೊಲೀಸ್ ಅಧಿಕಾರಿಗಳು ತಮ್ಮ ಮೇಲೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಮೂವರು ಪತ್ರಕರ್ತೆಯರು ಆರೋಪಿಸಿದ್ದಾರೆ.
ದೆಹಲಿ ಪೊಲೀಸರು ದೂರುಗಳನ್ನು ಸ್ವೀಕರಿಸಿದ್ದು, ಹೆಚ್ಚಿನ ತನಿಖೆಗಾಗಿ ಅಪರಾಧ ವಿಭಾಗಕ್ಕೆ (ಕ್ರೈಮ್ ಬ್ರಾಂಚ್) ಹಸ್ತಾಂತರಿಸಿದ್ದಾರೆ.


