Homeಮುಖಪುಟಡಿಎಂಕೆ ಮೈತ್ರಿಕೂಟ ಸೇರಿದ ಕಮಲ್ ಹಾಸನ್ ನೇತೃತ್ವದ 'ಮಕ್ಕಳ್ ನೀಧಿ ಮೈಯಂ'

ಡಿಎಂಕೆ ಮೈತ್ರಿಕೂಟ ಸೇರಿದ ಕಮಲ್ ಹಾಸನ್ ನೇತೃತ್ವದ ‘ಮಕ್ಕಳ್ ನೀಧಿ ಮೈಯಂ’

- Advertisement -
- Advertisement -

ತಮಿಳುನಾಡಿನಲ್ಲಿ ನಟ ಕಮಲ್ ಹಾಸನ್ ಅವರ ಮಕ್ಕಳ್ ನೀಧಿ ಮೈಯಂ (ಎಂಎನ್‌ಎಂ) ಪಕ್ಷ ಆಡಳಿತರೂಡ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ನೇತೃತ್ವದ ಜಾತ್ಯತೀತ ಪ್ರಗತಿಪರ ಮೈತ್ರಿಕೂಟ (ಎಸ್‌ಪಿಎ) ಕ್ಕೆ ಇಂದು (ಮಾ.9) ಸೇರ್ಪಡೆಗೊಂಡಿದೆ. ಈ ಮೂಲಕ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಡಿಎಂಕೆಗೆ ಬೆಂಬಲ ನೀಡುವುದಾಗಿ ಘೋಷಿಸಿದೆ.

ವರದಿಗಳ ಪ್ರಕಾರ, ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಎಂಎನ್‌ಎಂನ ಅಭ್ಯರ್ಥಿಗಳು ಸ್ಪರ್ಧಿಸುವುದಿಲ್ಲ. 2025ರಲ್ಲಿ ಒಬ್ಬರನ್ನು ರಾಜ್ಯಸಭೆಗೆ ಆಯ್ಕೆ ಮಾಡಲು ಡಿಎಂಕೆ ಅವಕಾಶ ಸಿಗಲಿದೆ. ಆಗ ಆ ಸ್ಥಾನಕ್ಕೆ ಕಮಲ್ ಹಾಸನ್‌ ಅವರನ್ನು ಎಸ್‌ಪಿಎ ಮೈತ್ರಿಕೂಟ ಆಯ್ಕೆ ಮಾಡಲಿದೆ. ಈ ಮೂಲಕ ಕಮಲ್ ಹಾಸನ್ ಸಂಸತ್ತಿನ ಮೇಲ್ಮನೆ ಪ್ರವೇಶಿಸಲಿದ್ದಾರೆ.

ಡಿಎಂಕೆ ಮತ್ತು ಎಂಎನ್‌ಎಂ ನಡುವಿನ ಒಪ್ಪಂದದ ಪ್ರಕಾರ, ಕಮಲ್ ಹಾಸನ್ 2024ರ ಲೋಕಸಭೆ ಚುನಾವಣೆಯಲ್ಲಿ ತಮಿಳುನಾಡು ಮತ್ತು ಪುದುಚೇರಿಯಾದ್ಯಂತ ಎಸ್‌ಪಿಎ ಮೈತ್ರಿಕೂಟದ ಪರವಾಗಿ ಪ್ರಚಾರ ನಡೆಸಲಿದ್ದಾರೆ. ಇದಕ್ಕೆ ಪ್ರತಿಯಾಗಿ, 2025ರಲ್ಲಿ ರಾಜ್ಯಸಭೆಯ ಆರು ಸದಸ್ಯರು ನಿವೃತ್ತಿ ಹೊಂದಿದಾಗ ಎಂಎನ್‌ಎಂಗೆ ರಾಜ್ಯಸಭಾ ಸ್ಥಾನ ಸಿಗಲಿದೆ.

“ನಾನು 2024ರ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ. ನಮ್ಮ ಪಕ್ಷದಿಂದಲೂ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದಿಲ್ಲ. ಮೈತ್ರಿಗೆ ಅಗತ್ಯವಿರುವ ಎಲ್ಲ ಸಹಕಾರ ನೀಡುತ್ತೇವೆ. ಈ ಮೈತ್ರಿ ಯಾವುದೇ ಸ್ಥಾನಕ್ಕಾಗಿ ಅಲ್ಲ, ದೇಶಕ್ಕಾಗಿ. ಅದಕ್ಕಾಗಿಯೇ ನಾವು ಡಿಎಂಕೆ ಮೈತ್ರಿಕೂಟಕ್ಕೆ ನಮ್ಮ ಕೈಗಳನ್ನು ಚಾಚಿದ್ದೇವೆ ಎಂದು ಡಿಎಂಕೆ ಅಧ್ಯಕ್ಷ ಮತ್ತು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಅವರನ್ನು ಭೇಟಿ ಮಾಡಿದ ನಂತರ ನಟ, ರಾಜಕಾರಣಿ ಕಮಲ್ ಹಾಸನ್ ಹೇಳಿದ್ದಾರೆ. ಕಮಲ್ ಹಾಸನ್ ಮತ್ತು ಸಿಎಂ ಸ್ಟಾಲಿನ್ ಚೆನ್ನೈನಲ್ಲಿರುವ ಡಿಎಂಕೆಯ ಪ್ರಧಾನ ಕಛೇರಿ ಅಣ್ಣಾ ಅರಿವಲಯಂನಲ್ಲಿ ಮೈತ್ರಿ ಮಾತುಕತೆ ನಡೆಸಿದ್ದಾರೆ.

2019ರ ಲೋಕಸಭೆ ಚುನಾವಣೆ ಮತ್ತು 2021ರ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಎಐಎಡಿಎಂಕೆ-ಬಿಜೆಪಿ ಮೈತ್ರಿಕೂಟವನ್ನು ಡಿಎಂಕೆ ಸೋಲಿಸಿತ್ತು. ಇದೀಗ ಕಮಲ್ ಹಾಸನ್ ಬೆಂಬಲ ಡಿಎಂಕೆ ನೇತೃತ್ವದ ಎಸ್‌ಪಿಎಗೆ ಬಲ ನೀಡಿದೆ. ಡಿಸೆಂಬರ್ 2022ರಲ್ಲಿ ನವದೆಹಲಿಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಯಾತ್ರೆಯಲ್ಲಿ ಕಮಲ್ ಹಾಸನ್ ಪಾಲ್ಗೊಂಡಿದ್ದರು. ಈ ಮೂಲಕ ಮೈತ್ರಿಗೆ ಅಡಿಪಾಯ ಹಾಕಿದ್ದರು. ಡಿಎಂಕೆ ಮತ್ತು ಎಂಎನ್‌ಎಂ ಎರಡೂ ಪಕ್ಷಗಳು ಕಾಂಗ್ರೆಸ್ ನೇತೃತ್ವದ ಇಂಡಿಯಾ ಮೈತ್ರಿಕೂಟದ ಪಕ್ಷಗಳಾಗಿವೆ.

ಕಮಲ್ ಹಾಸನ್ ಅವರ ಎಂಎನ್‌ಎಂಗೆ ಡಿಎಂಕೆ ಒಂದು ಲೋಕಸಭೆ ಮತ್ತು ಒಂದು ರಾಜ್ಯಸಭೆ ಸ್ಥಾನವನ್ನು ಮುಂದಿಟ್ಟು ಆಯ್ಕೆ ಮಾಡುವಂತೆ ಸೂಚಿಸಿತ್ತು. ಎಂಎನ್‌ಎಂ ರಾಜ್ಯಸಭೆ ಸ್ಥಾನವನ್ನು ಆಯ್ಕೆ ಮಾಡಿದೆ. ಲೋಕಸಭೆ ಆಯ್ಕೆ ಮಾಡಿದ್ದರೆ, ಕಮಲ್ ಹಾಸನ್ ಈ ಬಾರಿಯ ಲೋಕಸಭೆ ಚುನಾವಣೆಗೆ ಕೊಯಮತ್ತೂರು ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದರು. ಈ ಕ್ಷೇತ್ರದಿಂದ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಸ್ಪರ್ಧಿಸುವ ಸಾಧ್ಯತೆ ಇದೆ.

2018 ರಲ್ಲಿ ರಾಜಕೀಯಕ್ಕೆ ಪಾದಾರ್ಪಣೆ ಮಾಡಿದ ಕಮಲ್ ಹಾಸನ್, ಆರಂಭದಿಂದಲೂ ಕಾಂಗ್ರೆಸ್‌ ಜೊತೆ ಮೈತ್ರಿ ಮಾಡಿಕೊಳ್ಳಲು ಉತ್ಸುಕರಾಗಿದ್ದರು. ಆದರೆ, ಅದು ಆಗಿರಲಿಲ್ಲ. ಇದೀಗ ಡಿಎಂಕೆ ನೇತೃತ್ವದ ಮೈತ್ರಿಕೂಟ ಬೆಂಬಲಿಸುವ ಮೂಲಕ ಕಮಲ್ ಹಾಸನ್ ಅವರ ಪಕ್ಷ ಇಂಡಿಯಾ ಮೈತ್ರಿಕೂಟದ ಭಾಗವಾಗಿದೆ.

ಇದನ್ನೂ ಓದಿ : ಜಾತಿ ಗಣತಿ: ಕಾಂಗ್ರೆಸ್‌ನ ಬದ್ಧತೆಯನ್ನು ಪುನರುಚ್ಛರಿಸಿದ ರಾಹುಲ್‌ ಗಾಂಧಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ನೀವು ಕಾನೂನಿಗಿಂತ ಮೇಲಲ್ಲ: ಜಾರಿ ನಿರ್ದೇಶನಾಲಯಕ್ಕೆ ತರಾಟೆಗೆ ತೆಗೆದುಕೊಂಡ ದೆಹಲಿ ಹೈಕೋರ್ಟ್‌

0
ಜಾರಿ ನಿರ್ದೇಶನಾಲಯವು (ಇಡಿ) ಕಾನೂನಿನ ಚೌಕಟ್ಟಿಗೆ ಒಳಪಟ್ಟಿದೆ ಮತ್ತು ಸಾಮಾನ್ಯ ನಾಗರಿಕರ ವಿರುದ್ಧ ಬಲಪ್ರದರ್ಶನ ಮಾಡುವಂತಿಲ್ಲ ಎಂದು ದೆಹಲಿ ಹೈಕೋರ್ಟ್‌ ಜಾರಿ ನಿರ್ದೇಶನಾಲಯಕ್ಕೆ ಹೇಳಿದ್ದು, ನೀವು ಕಾನೂನಿಗಿಂತ ಮೇಲಲ್ಲ ಎಂದು ಸ್ಪಷ್ಟವಾಗಿ ಹೇಳಿದೆ. ಮಧ್ಯಂತರ...