Homeಚಳವಳಿಕರ್ನಾಟಕದಲ್ಲಿ ಜಾನುವಾರು ಹತ್ಯೆ ಪ್ರತಿಬಂಧಕ ಕಾಯಿದೆ ಜಾರಿಯಿಂದ ಜನರ ಜೀವನೋಪಾಯಕ್ಕೆ ಧಕ್ಕೆ, ಗೂಂಡಾಗಿರಿ ಹೆಚ್ಚಳ: ಅಧ್ಯಯನ...

ಕರ್ನಾಟಕದಲ್ಲಿ ಜಾನುವಾರು ಹತ್ಯೆ ಪ್ರತಿಬಂಧಕ ಕಾಯಿದೆ ಜಾರಿಯಿಂದ ಜನರ ಜೀವನೋಪಾಯಕ್ಕೆ ಧಕ್ಕೆ, ಗೂಂಡಾಗಿರಿ ಹೆಚ್ಚಳ: ಅಧ್ಯಯನ ವರದಿ

ಕಾಯ್ದೆಯು ಪೊಲೀಸರಿಗೆ ಮತ್ತು ಸ್ವಘೋಷಿತ ಗೋ ರಕ್ಷಕರಿಗೆ ಅನಿಯಮಿತ ಅಧಿಕಾರ ನೀಡಿದ್ದು, ನಿತ್ಯ ಕಿರುಕುಳ ಮತ್ತು ಹಣದ ಸುಲಿಗೆ ನಡೆಯುತ್ತಿದೆ. ನಾಲ್ಕು ತಿಂಗಳಲ್ಲಿ 29 FIR ದಾಖಲಿಸಲಾಗಿದೆ.

- Advertisement -
- Advertisement -

ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣ ಕಾಯಿದೆ 2020 ರ ಜಾರಿಯಿಂದ ಜನರ ಜೀವನೋಪಾಯವನ್ನು ಅಪರಾಧೀಕರಿಸುವ ಪ್ರಕ್ರಿಯೆಗಳು ಆರಂಭವಾಗಿದ್ದು, ಗೂಂಡಾಗಿರಿಯನ್ನು ಕಾನೂನುಬದ್ಧಗೊಳಿಸಲಾಗುತ್ತಿದೆ. ಇದರಿಂದ ರೈತರು, ಮಾಂಸದ ವ್ಯಾಪಾರಿಗಳು ಸೇರಿದಂತೆ ಬಡವರ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗಿದೆ ಎಂದು ಆಹಾರ ನಮ್ಮ ಹಕ್ಕು ಒಕ್ಕೂಟದ ಅಧ್ಯಯನ ವರದಿ ತಿಳಿಸಿದೆ.

ಆಹಾರ ನಮ್ಮ ಹಕ್ಕು ಒಕ್ಕೂಟವು ವೈದ್ಯರಾದ ಡಾ. ಸಿಲ್ವಿಯಾ ಕರ್ಪಗಂ ಮತ್ತು ಸಂಶೋಧಕರಾದ ಸಿದ್ಧಾರ್ಥ್ ಕೆ ಜೋಶಿಯವರ ನೇತೃತ್ವದಲ್ಲಿ ಈ ಕಾಯ್ದೆ ಜಾರಿಯಿಂದಾಗಿರುವ ಪರಿಣಾಮಗಳ ಕುರಿತು ಅಧ್ಯಯನ ನಡೆಸಿದೆ. ಜಾನುವಾರು ವ್ಯಾಪಾರಿಗಳು, ಮಾಂಸದ ವ್ಯಾಪಾರಿಗಳು, ಮಾರಾಟಗಾರರು ಮತ್ತು ಗ್ರಾಹಕರ ಮೇಲೆ ಜಾನುವಾರು ಹತ್ಯೆ ನಿಷೇಧವು ತೀವ್ರ ಪರಿಣಾಮ ಬೀರಿದ್ದು, ಈ ಕಾಯ್ದೆಯು ಕರ್ನಾಟಕದ ಜಾನುವಾರು, ಚರ್ಮ ಮತ್ತು ಮಾಂಸದ ಆರ್ಥಿಕತೆಗೆ ಬಲವಾದ ಹೊಡೆತ ನೀಡಿದೆ ಎಂದು ಅಭಿಪ್ರಾಯಪಟ್ಟಿದೆ.

ಕರ್ನಾಟಕ ರಾಜ್ಯ ರೈತ ಸಂಘ, ದನದ ಮಾಂಸ ವ್ಯಾಪಾರಿಗಳ ಸಂಘ, ಜಮಾತೆ ಇಸ್ಲಾಮಿ, ಕರ್ನಾಟಕ ಅಲ್ಪಸಂಖ್ಯಾತರ ಹಕ್ಕುಗಳ ವೇದಿಕೆ, ದಲಿತ ಸಂಘರ್ಷ ಸಮಿತಿ (ಭೀಮವಾದ), ಚರ್ಮ ಘಟಕಗಳು, ಕಸಾಯಿಖಾನೆಗಳು, ಹೋಟಲ್ ಮಾಲೀಕರು, ಜಾನುವಾರು ಮಾರುಕಟ್ಟೆ ಅಧಿಕಾರಿಗಳು ಮತ್ತು ವ್ಯಾಪಾರಿಗಳು ಹಾಗೂ ಗ್ರಾಹಕರರನ್ನು ಸಂದರ್ಶಿಸಿ ಈ ವರದಿ ತಯಾರಿಸಲಾಗಿದೆ.

ಹಳೆಯ 1964 ಕಾಯಿದೆಯಿಂದ ಈಗಾಗಲೇ ನಿಷೇಧಿಸಲ್ಪಟ್ಟಿರುವ ಆಕಳು ಜೊತೆಗೆ ಎಲ್ಲ ವಯಸ್ಸಿನ ಗೂಳಿ, ಎತ್ತು ಹಾಗು ಹದಿಮೂರು ವರ್ಷದೊಳಗಿನ ಎಮ್ಮೆ ಮತ್ತು ಕೋಣಗಳ ಹತ್ಯೆವನ್ನು ನಿಷೇಧಿಸುವ ಕಾಯ್ದೆಯನ್ನು ಬಿಜೆಪಿ ಸರ್ಕಾರವು 2021 ರಲ್ಲಿ ತಂದಿತು.

ರೈತರು ಹಾಲು, ಗೊಬ್ಬರ, ಸಾಗಣೆ ಉದ್ದೇಶಗಳಿಗಾಗಿ ಜಾನುವಾರುಗಳನ್ನು ಸಾಕುತ್ತಾರೆ ಮತ್ತು ಈ ಜಾನುವಾರುಗಳು ಅನುತ್ಪಾದಕವಾದಾಗ ಅವುಗಳನ್ನು ಮಾರಿ ಬೇರೆಯವನ್ನು ಖರೀದಿಸುತ್ತಾರೆ. ರಾಜ್ಯದಲ್ಲಿ “ಅನುತ್ಪಾದಕ ಜಾನುವಾರು” ಗಳಿಂದ ಮಾಂಸ, ಗೊರಸು, ಚರ್ಮ, ಮೂಳೆಗಳು, ರಕ್ತ, ಟ್ಯಾಲೋ ಮತ್ತು ಇತರ ಉತ್ಪನ್ನಗಳ ದೊಡ್ಡ ವ್ಯಾಪಾರವೂ ಇದೆ. 2018-19ರಲ್ಲಿ ಕರ್ನಾಟಕದಲ್ಲಿ ಜಾನುವಾರು ಉತ್ಪನ್ನಗಳ ಒಟ್ಟು ಅಂದಾಜು ಮೌಲ್ಯ ರೂ. 49834.6 ಕೋಟಿಗಳು ಇತ್ತು. ಆದರೆ ಕಾಯ್ದೆ ಜಾರಿಯಿಂದ ಇದರಲ್ಲಿ ಬಹುತೇಕ ಕುಸಿತ ಕಂಡಿದೆ. ಕಾಯ್ದೆಯು ಪೊಲೀಸರಿಗೆ ಮತ್ತು ಸ್ವಯಂ ನೇಮಕಗೊಂಡ ಗೋ ರಕ್ಷಕರಿಗೆ ಅನಿಯಮಿತ ಅಧಿಕಾರವನ್ನು ನೀಡಿದ್ದು, ನಿತ್ಯ ಕಿರುಕುಳ ಮತ್ತು ಹಣ ಸುಲಿಗೆ ನಡೆಯುತ್ತಿದೆ. ಕಾಯ್ದೆಯ ಅನುಷ್ಠಾನವಾದ ನಾಲ್ಕು ತಿಂಗಳೊಳಗೆ 29 ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ; ಅವುಗಳಲ್ಲಿ ಹೆಚ್ಚಿನವು ದಕ್ಷಿಣ ಕನ್ನಡ ಮತ್ತು ಮೈಸೂರಿನಲ್ಲಿವೆ ಎಂದು ವರದಿ ಹೇಳಿದೆ.

ಜಾನುವಾರು ವ್ಯಾಪಾರವನ್ನು ಅವಲಂಬಿಸಿರುವ ಇಡೀ ಆರ್ಥಿಕ ಮೌಲ್ಯ ಸರಪಳಿಯಲ್ಲಿ, ಟ್ಯಾಲೋ ವ್ಯಾಪಾರಿಗಳು, ಕ್ಲೀನರ್‌ಗಳು, ಲೋಡರ್‌ಗಳು, ಟೆಂಪೋ ಡ್ರೈವರ್‌ಗಳು, ಅಂಗಡಿ ಕೆಲಸಗಾರರು, ಬೀದಿ ವ್ಯಾಪಾರಿಗಳು, ಹೋಟೆಲ್ ಮಾಲೀಕರು ಮತ್ತು ಕಸಾಯಿಖಾನೆಗಳಲ್ಲಿ ಕೆಲಸ ಮಾಡುವವರು ಕೆಲಸ ಕಳೆದುಕೊಂಡಿದ್ದಾರೆ ಮತ್ತು ಇವರಿಗೆ ಮೂಲ ಜೀವನೋಪಾಯಕ್ಕೂ ಸರಕಾರದಿಂದ ಯಾವುದೇ ರೀತಿಯ ಬೆಂಬಲ ಸಿಕ್ಕಿಲ್ಲ ವರದಿ ತಿಳಿಸಿದೆ.

ಬೆಂಗಳೂರಿನ ದೇವರಜೀವನಹಳ್ಳಿಯ ಚರ್ಮ ಸಂಸ್ಕರಣ ಘಟಕ ಮುಚ್ಚಿಹೋಗಿರುವುದು

2018-19ರಲ್ಲಿ ಕರ್ನಾಟಕದಲ್ಲಿ ಉತ್ಪಾದನೆಯಾಗುವ ದನ ಮತ್ತು ಎಮ್ಮೆ ಮಾಂಸದ ಅಂದಾಜು ಮಾರುಕಟ್ಟೆ ಮೌಲ್ಯ ಕ್ರಮವಾಗಿ 270.6 ಕೋಟಿ ಮತ್ತು 185.5 ಕೋಟಿ ಇತ್ತು. ಅದೇ ರೀತಿ 2018-19 ರಲ್ಲಿ ಕರ್ನಾಟಕದಲ್ಲಿ ಉತ್ಪಾದಿಸಲಾದ ದನ ಮತ್ತು ಎಮ್ಮೆಗಳ ಚರ್ಮದ ಅಂದಾಜು ಮೌಲ್ಯವನ್ನು 8.26 ಮತ್ತು 4.84 ಕೋಟಿ ಎಂದು ಅಂದಾಜಿಸಲಾಗಿದೆ. ಚರ್ಮೋದ್ಯಮದ ಅತ್ಯಂತ ಕೀಳು ಉದ್ಯೋಗದಲ್ಲಿ ತೊಡಗಿರುವ ಹೆಚ್ಚಿನ ಜನರು ದಲಿತ ಸಮುದಾಯಕ್ಕೆ ಸೇರಿದವರಾಗಿದ್ದಾರೆ ಮತ್ತು ಈ ಕಾಯಿದೆಯಿಂದಾಗಿ ತೀವ್ರ ಸಂಕಷ್ಟವನ್ನು ಅನುಭವಿಸಿದ್ದಾರೆ. ಚರ್ಮಗಳ ಪೂರೈಕೆಯು ಕಡಿಮೆಯಾಗಿದೆ; ಇದರಿಂದಾಗಿ ಉದ್ಯಮವನ್ನು ಅವಲಂಬಿಸಿಕೊಂಡಿದ್ದವರ ಜೀವನೋಪಾಯದ ಮೇಲೆ ಗಣನೀಯವಾಗಿ ಪರಿಣಾಮ ಬೀರಿದೆ. ಸ್ಪಷ್ಟವಾಗಿ, ‘ಮೇಲ್ಜಾತಿ’ ಹಿಂದೂಗಳ ನಂಬಿಕೆಗಳಿಗಾಗಿ, ರಾಜ್ಯದ ಅಂಚಿನಲ್ಲಿರುವ ಸಮುದಾಯಗಳ ಮೇಲೆ ದೊಡ್ಡ ಹೊರೆ ಹಾಕಲಾಗುತ್ತಿದೆ. ದಲಿತ ಸಮುದಾಯವನ್ನು ಆರ್ಥಿಕವಾಗಿ ಮೇಲಕ್ಕೆತ್ತಲು ಚರ್ಮದ ವ್ಯಾಪಾರವನ್ನು ಆಧುನೀಕರಿಸಲು ಮೂಲಸೌಕರ್ಯ ಮತ್ತು ಯಂತ್ರೋಪಕರಣಗಳಲ್ಲಿ ಹೂಡಿಕೆ ಮಾಡುವ ಬದಲು, ಈಗಿರುವ ಜೀವನೋಪಾಯವನ್ನು ಸಹ ಕಸಿದುಕೊಳ್ಳಲಾಗುತ್ತಿದೆ; ಇದು ಒಂದು ರೀತಿಯ ಜಾತಿ ತಾರತಮ್ಯವಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

ಕಾಯ್ದೆಯಿಂದ ಒಂದೇ ಗುಂಪಿಗೆ ಲಾಭ

ಸಂದರ್ಶಿಸಿದ ಹೆಚ್ಚಿನ ಜನರು ಜಾನುವಾರು ಹತ್ಯೆ ನಿಷೇಧದಿಂದ ಪ್ರಯೋಜನ ಪಡೆಯುತ್ತಿರುವವರು ದೊಡ್ಡ ದನದ ಮಾಂಸ ರಫ್ತು ಕಂಪನಿಗಳು ಎಂದು ಒಕ್ಕೊರಲಲ್ಲಿ ಹೇಳುತ್ತಾರೆ. ಅವರು ಕೆಲವೊಮ್ಮೆ ತಮ್ಮ ಸಂಸ್ಥೆಗಳಿಗೆ ಮುಸ್ಲಿಂ ಹೆಸರುಗಳನ್ನು ಬಳಸುತ್ತಾರೆ. ಸತೀಶ್ ಸಬರ್ವಾಲ್ ಅವರ ಕಂಪನಿಯ ಹೆಸರು ಅಲ್ ಕಬೀರ್ ಎಕ್ಸ್‌ಪೋರ್ಟ್ಸ್ ಎಂದಾಗಿದೆ. ಅದೇ ರೀತಿ ಸುನಿಲ್ ಕಪೂರ್ ಒಡೆತನದ ಅರೇಬಿಯನ್ ಎಕ್ಸ್‌ಪೋರ್ಟ್ಸ್, ಸುನಿಲ್ ಸೂದ್ ಒಡೆತನದ ಅಲ್ ನೂರ್ ಎಕ್ಸ್‌ಪೋರ್ಟ್ಸ್ ಎಂಬ ಹೆಸರುಗಳಿವೆ ಎಂದು ವರದಿ ಹೇಳಿದೆ.

15% (ಅಥವಾ 18 ಕೋಟಿ) ಭಾರತೀಯರು, ಇದರಲ್ಲಿ ದಲಿತರು, ಮುಸ್ಲಿಮರು, ಕ್ರಿಶ್ಚಿಯನ್ನರು, ಇತರ ಹಿಂದುಳಿದ ಜಾತಿಗಳು ಮತ್ತು ಆದಿವಾಸಿಗಳು ದನಮಾಂಸವನ್ನು ಸೇವಿಸುತ್ತಾರೆ. ದನಮಾಂಸವು ಅಗ್ಗದ ಪೌಷ್ಟಿಕಾಂಶದ ದಟ್ಟವಾದ ಆಹಾರಗಳಲ್ಲಿ ಒಂದಾಗಿದೆ. 100 ಗ್ರಾಂ ಲೀನ್ ದನಮಾಂಸವು ದೈನಂದಿನ ಪ್ರೋಟೀನ್ ಅಗತ್ಯದ 54% ಅನ್ನು ಒದಗಿಸುತ್ತದೆ ಮತ್ತು ದನಮಾಂಸದಲ್ಲಿ ಲಭ್ಯವಿರುವ ಪೋಷಕಾಂಶಗಳು ಅರಗಬಲ್ಲವಾಗುತ್ತದೆ ಮತ್ತು ಚೆನ್ನಾಗಿ ಹೀರಲ್ಪಡುತ್ತವೆ. ಬೆಂಗಳೂರಿನಲ್ಲಿ ಒಂದು ಕೆಜಿ ಬೀಫ್‌ ಬೆಲೆ 250 ರೂ ಇತ್ತು. ಕಾಯ್ದೆ ಜಾರಿಯಾದ ನಂತರ 300ರಿಂದ 350ರವರೆಗೆ ತಲುಪಿದೆ. ಅದೇ ರೀತಿಯ ಕರ್ನಾಟಕದ ಇತರ ಜಿಲ್ಲೆಗಳಲ್ಲಿ 150-200 ರೂ ಇದ್ದ ಬೀಫ್ ಬೆಲೆಯು 250-275 ರೂ ವರೆಗೆ ತಲುಪಿದೆ. ಇದು ಗ್ರಾಹಕರ ಮೇಲೆ ಹೊರೆ ಬಿದ್ದಿದೆ ಎಂದು ವರದಿ ಹೇಳಿದೆ.

ಮಾಂಸದಂಗಡಿ

ಕೀಳು ಮಟ್ಟದ ಚಿಂತನೆಯಿಂದ ರೂಪುಗೊಂಡಿರುವ ಈ ಕಾಯಿದೆಯಿಂದ ಜೀವನೋಪಾಯ, ಪೋಷಣೆ ಮತ್ತು ಮಾನಸಿಕ ಆರೋಗ್ಯದ ಮೇಲೆ ಉಂಟಾಗುವ ಅಗಾಧವಾದ ಹಾನಿಯನ್ನು ಅರಿತುಕೊಂಡು ಜನರಿಂದ ಜನರಿಗಾಗಿ ರಚನೆಗೊಂಡಿರುವ ಸರ್ಕಾರವು ಈ ಕಾಯಿದೆಯನ್ನು ಅದರ ಪ್ರಸ್ತುತ ಸ್ವರೂಪದಲ್ಲಿ ಹಿಂಪಡೆಯಬೇಕು. ಜಾನುವಾರು ವ್ಯವಹಾರದಲ್ಲಿ ತೊಡಗಿರುವ ಯಾವುದೇ ವ್ಯಕ್ತಿ ಅಥವಾ ಸಮುದಾಯವು ಅವರ ಔದ್ಯೋಗಿಕ, ಸಾಂಸ್ಕೃತಿಕ ಅಥವಾ ಪೌಷ್ಟಿಕಾಂಶದ ಆಯ್ಕೆಗಳಿಗಾಗಿ ಕಿರುಕುಳ, ಬೆದರಿಕೆ ಅಥವಾ ಕೀಳ್ಬಳಕೆಗೆ ಒಳಗಾಗುವುದಿಲ್ಲ ಎಂದು ಖಚಿತಪಡಿಸಿಕೊಳ್ಳಬೇಕು. ಈ ಕಾಯಿದೆಯಿಂದಾಗಿ ತೊಂದರೆಗೊಳಗಾದ ಕರ್ನಾಟಕದ ನಾಗರಿಕರಿಗೆ ನ್ಯಾಯದ ಹಿತದೃಷ್ಟಿಯಿಂದ ಆದಷ್ಟು ಬೇಗ ಪರಿಹಾರ ನೀಡಬೇಕು. ದನಗಳ ರಕ್ಷಣೆಯ ಹೆಸರಿನಲ್ಲಿ ನಡೆಯುತ್ತಿರುವ ಹಿಂಸಾಚಾರವನ್ನು ಅಪರಾಧೀಕರಣಗೊಳಿಸಬೇಕೆ ವಿನಃ ಜನರ ಜೀವನೋಪಾಯ ಮತ್ತು ಆಹಾರದ ಆಯ್ಕೆಗಳನ್ನಲ್ಲ ಎಂದು ವರದಿಯು ಒತ್ತಾಯಿಸಿದೆ.

ಪೂರ್ತಿ ವರದಿ ಓದಲು ಇಲ್ಲಿ ಕ್ಲಿಕ್ ಮಾಡಿ


ಇದನ್ನೂ ಓದಿ: ಬಡಪಾಯಿ ಎಮ್ಮೆಗಳಿಗೂ ಥ್ಯಾಂಕ್ಸ್ ಹೇಳೋಣ ಬನ್ನಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ದಲಿತ ಕುಟುಂಬದ ಮೂವರ ಹತ್ಯೆ ಪ್ರಕರಣ: ಪೊಲೀಸರ ವರ್ಗಾವಣೆ

0
ಉತ್ತರಪ್ರದೇಶದ ಕೌಶಂಬಿ ಜಿಲ್ಲೆಯ ಸಂದೀಪನ್ ಘಾಟ್ ಪ್ರದೇಶದಲ್ಲಿ ಜಮೀನು ವಿವಾದಕ್ಕೆ ಸಂಬಂಧಿಸಿ ದಲಿತ ಕುಟುಂಬದ ಮೂವರು ಸದಸ್ಯರ ಹತ್ಯೆ ನಡೆದಿದ್ದು, ಇದೀಗ ಸ್ಥಳೀಯ ಪೊಲೀಸ್ ಠಾಣಾಧಿಕಾರಿ ಮತ್ತು ಹೊರಠಾಣೆ ಪ್ರಭಾರ ಅಧಿಕಾರಿಯನ್ನು ವರ್ಗಾಯಿಸಲಾಗಿದೆ. ಸಾಂದೀಪನ್...