HomeUncategorizedಹೊನ್ನಿನೊಳಗೊಂದೊರೆಯನ್ನೂ ಬಯಸದ ಬಸವಣ್ಣನವರು ಹಾಗೂ ಅಕ್ಷಯ ತೃತೀಯ ಎಂಬ ಮೋಸ !

ಹೊನ್ನಿನೊಳಗೊಂದೊರೆಯನ್ನೂ ಬಯಸದ ಬಸವಣ್ಣನವರು ಹಾಗೂ ಅಕ್ಷಯ ತೃತೀಯ ಎಂಬ ಮೋಸ !

- Advertisement -
| ವಿಶ್ವಾರಾಧ್ಯ ಸತ್ಯಂಪೇಟೆ |
ಪ್ರತಿ ವರ್ಷ ಅಕ್ಷಯ ತೃತೀಯ ದಿನ ಬಂತೆಂದರೆ ಬಂಗಾರ ಮಾರಾಟ ಮಾಡುವವರಿಗೂ ಹಾಗೂ ತೆಗೆದುಕೊಳ್ಳುವವರಿಗೂ ಖುಷಿಯೋ ಖುಷಿ. ಹಿಂದೂ ಪಂಚಾಂಗದ ಪ್ರಕಾರ ಅಕ್ಷಯ ತೃತೀಯ ದಿನದಂದು ಯಾರು ಬಂಗಾರ ಖರೀದಿ ಮಾಡುತ್ತಾರೊ ಅವರ ಮನೆಯಲ್ಲಿ ಬಂಗಾರದ ಹೊಳೆಯೇ ಹರಿಯುತ್ತದೆ ಎಂಬುದೊಂದು ನಂಬಿಕೆ. ಈ ನಂಬಿಕೆಗೆ ಯಾವುದೆ ರೀತಿಯ ವೈಜ್ಞಾನಿಕ ಆಧಾರವಿಲ್ಲವೆಂಬುದು ಅಷ್ಟೇ ಸತ್ಯ. ಆದರೆ ಜನ ನಂಬುಗೆಯ ಜಾತ್ರೆಯಲ್ಲಿ ತಮ್ಮ ಅಸಲಿತನವನ್ನು ಕಳಕೊಂಡಿದ್ದಾರೆ. ಜೋತಿಷ್ಯಗಾರರಿಗೆ ತಮ್ಮ ತಲೆಯನ್ನು ಒತ್ತೆ ಇಟ್ಟ ಮೇಲೆ ಅವರ ಮಿದುಳು ಕ್ರಿಯಾಶೀಲವಾಗಿದೆ ಎಂದು ಊಹಿಸಲು ಸಾಧ್ಯವಿಲ್ಲದ ವಾತಾವರಣ ಇಂದು ಸೃಷ್ಟಿಯಾಗಿದೆ. ಇದು ನಮ್ಮ ಭಾರತಿಯರೆಲ್ಲರ ದುರಂತವಾಗಿದೆ.
ಮತ್ತೊಂದು ಆಶ್ಚರ್ಯ ಹಾಗೂ ವ್ಯಂಗ್ಯದ ಸಮಾಚಾರವೆಂದರೆ ಇದೆ ಅಕ್ಷಯ ತೃತೀಯ ನಕ್ಷತ್ರದ ದಿನ ಯುಗ ಯುಗಳ ಪುರುಷ, ವೈಚಾರಿಕ ಚಿಂತಕ, ಚಳುವಳಿಗಳ ಜನಕ ವಿಶ್ವಗುರು ಬಸವಣ್ಣನವರು ಹುಟ್ಟಿದ ದಿನ. ಅಕ್ಷಯ ತೃತೀಯ ದಿನದ ನಂಬುಗೆ ಒಂದು ಬಗೆಯಾದರೆ ಬಸವಣ್ಣನವರ ವಿಚಾರ ಧಾರೆ ಮತ್ತೊಂದು ಮಗ್ಗುಲು. ಇವು ಒಂದಕ್ಕೊಂದು ಸೇರಲು ಸಾಧ್ಯವೇ ಇಲ್ಲ. ಒಂದು ಉತ್ತರವಾದರೆ ಮತ್ತೊಂದು ದಕ್ಷಿಣ. ಆದರೆ ನಾವು ಇವೆರಡರಲ್ಲಿ ಯಾವುದನ್ನು ಆಯ್ದುಕೊಂಡರೆ ನಮ್ಮ ಬದುಕು ಪಾವನವಾಗುತ್ತದೆ ಎಂಬ ಸತ್ಯವನ್ನು ಮನಗಾಣಲೆಬೇಕಾಗಿದೆ. ಇಲ್ಲದೆ ಹೋದರೆ ನಾವು ಬದುಕಿರುವವರೆಗೂ ಭ್ರಮೆಗಳ ನಡುವೆಯೆ ಬದುಕು ವಾಸ್ತವವನ್ನು ಅರ್ಥಮಾಡಿಕೊಳ್ಳದೆ ಸತ್ತು ಹೋಗುವ ಅಪಾಯ ಇದೆ.
ಹೊನ್ನಿನೊಳಗೊಂದೊರೆಯ , ಸೀರೆಯೊಳಗೊಂದೆಳೆಯ
ಇಂದಿಂಗೆ ನಾಳಿಂಗೆ ಬೇಕೆಂದೆನಾದಡೆ
ನಿಮ್ಮಾಣೆ ನಿಮ್ಮ ಪ್ರಮಥರಾಣಿ
ನಿಮ್ಮ ಶರಣರಿಗಲ್ಲದೆ ಮತ್ತೊಂದನರಿಯೆ ಕೂಡಲಸಂಗಮದೇವಾ
ಎಂಬುದು ಬಸವಣ್ಣನವರ ಉಸಿರು. ನಾಳೆ ಬೇಕೆಂದು ತೆಗೆದು ಇರಿಸುವುದೆ ಬಹು ದೊಡ್ಡ ಅಪರಾಧ. ಅಲ್ಲದೆ ಹೊನ್ನು ಮಾಯೆ ಎಂಬರು. ಹೊನ್ನು ಮಾಯೆ ಅಲ್ಲವೆ ಅಲ್ಲ, ಮನದ ಮುಂದಣ ಆಸೆಯೆ ಮಾಯೆ ಎಂಬುದು ಶರಣರ ಇಂಗಿತವಾಗಿದೆ. ನಾಳೆ ಬೇಕೆಂದು ತೆಗೆದು ಇಡುವುದು ಅಪರಾಧ. ಒಂದು ಸಲ ಬಸವಣ್ಣನವರ ಮಹಾಮನೆಗೆ ಕಳ್ಳನೊಬ್ಬ ಬರುತ್ತಾನೆ. ಆ ಕಳ್ಳ ಸಹಜವಾಗಿ ನೀಲಾಂಬಿಕೆಯ ಕಿವಿಯಲ್ಲಿರುವ ಓಲೆಗೆ ಕೈಹಾಕಿ ಕಳ್ಳತನ ಮಾಡಬೇಕೆಂದು ಪ್ರಯತ್ನ ಮಾಡುತ್ತಿರುತ್ತಾನೆ. ಆಗ ನೀಲಾಂಬಿಕೆ ಚಟಾರನೆ ಕಿರುಚಿಕೊಂಡು ಕಳ್ಳ ಕಳ್ಳ ಎಂದು ಧಾವಂತಗೊಳ್ಳುತ್ತಾರೆ. ಆಶ್ಚರ್ಯವೆಂದರೆ ಕಲ್ಯಾಣ ನಾಡಿನ ಅಂದಿನ ಪ್ರಧಾನಿಯಾಗಿದ್ದ ಬಸವಣ್ಣನವರು ತನ್ನ ಮಡದಿ ನೀಲಾಂಬಿಕೆಯನ್ನು ಗದರಿಸುವ ಧ್ವನಿಯಲ್ಲಿ  :
ಒಡನಿರ್ದ ಸತಿಯೆಂದು ನಚ್ಚಿರ್ದೆನಯ್ಯಾ
ಕೈವಿಡಿದ ಸಜ್ಜನೆಯೆಂದು ನಂಬಿರ್ದೆನಯ್ಯಾ
ಅಯ್ಯ ನಮ್ಮಯ್ಯನ ಕೈನೊಂದಿತು,
ತೆಗೆದುಕೊಡಾ ಎಲೆ ಬೆಂಡೊಲೆ ಕಿತ್ತಿ
ಕಳ್ಳನ ಮನೆಗೊಬ್ಬ ಬಲುಗಳ್ಳ ಬಂದಡೆ
ಕೂಡಲಸಂಗಮನಲ್ಲದೆ ಆರೂ ಇಲ್ಲ
ಎಂಬ ವಚನದಲ್ಲಿ ಸ್ಪಷ್ಟವಾಗಿ ಹೇಳಿರುವಂತೆ ನಮಗೆ ಬೇಕಾಗಿರುವುದಕ್ಕಿಂತಲೂ ಹೆಚ್ಚು ಹೆಚ್ಚು ಸಂಗ್ರಹ ಮಾಡಿಕೊಂಡಿರುವುದೆ ದೊಡ್ಡ ಅಪರಾಧ. ಕಳ್ಳನಾದರೂ ತನ್ನ ಹಸಿವನ್ನು ಹಿಂಗಿಸಿಕೊಳ್ಳಲು ಕಳ್ಳತನಕ್ಕೆ ಇಳಿದಿರಬಹುದು. ಆದರೆ ನಮ್ಮ ಹೊಟ್ಟೆ ತುಂಬಿಸಿಕೊಂಡೂ ಹೆಚ್ಚು ಹೆಚ್ಚು ಬೇಕೆಂಬ ಬಯಕೆ ಇಟ್ಟುಕೊಂಡವರೆ ಬಲುಗಳ್ಳರು. ಹೀಗಾಗಿ ಆತ ಹಸಿವೆಗಾಗಿ ನಮ್ಮ ಮನೆಗೆ ಬಂದಾತ. ನಾವು ಬಲುಗಳ್ಳರು ಎಂಬುದು ಬಸವಣ್ಣನವರ ಆಶಯ.
ಹೊನ್ನಿಂಗೆ ಬಂದಿಲ್ಲದ, ಹೆಣ್ಣಿಂಗೆ ಬಂದಿಲ್ಲದ , ಆಶನಕ್ಕೆ- ವಸನಕ್ಕೆ ಬಂದಿಲ್ಲದ ಭಕ್ತಿಯ ಪಥವ ತೋರಲು ಬಂದ ಬಸವಣ್ಣನವರ ಹುಟ್ಟು ಹಬ್ಬದ ದಿನವೆ ಅಕ್ಷಯ ತೃತಿ ಎಂಬ ದಿನ ಬಂದಿರುವುದು ಕಾಕತಾಳೀಯ. ಕನಿಷ್ಠ ಪಕ್ಷ ಬಸವಾದಿ ಶರಣರ ಆಶಯಗಳನ್ನು ಹೇಳುವ , ಅನುಸರಿಸುವ ಜನಗಳಾದರೂ ಅಕ್ಷಯ ತೃತೀಯ ಎಂಬ ವಿಶೇಷ ದಿನದಂದು  ಪುರೋಹಿತರು ನಂಬಿಸಿದ ಮೌಢ್ಯದ ಎದುರು ಈಜಬೇಕಿದೆ. ನಮ್ಮ ರಾಜ್ಯದಲ್ಲಿಯೆ ನಿನ್ನೆಯ ದಿನ 3900 ಕೋಟಿ ಮೌಲ್ಯದ ಚಿನ್ಹ ಮಾರಾಟವಾಗಿರುವುದು ನೋಡಿದರೆ ನಾವು ಎತ್ತ ಹೊರಟಿದ್ದೇವೆ ? ಎಂಬುದು ಮನದಟ್ಟಾಗುತ್ತದೆ. ಹೊನ್ನಿನೊಳಗೆ ಒಂದೊರೆಯ ಎಂಬ ಬಸವಣ್ಣನವರ ಮಾತು ಒತ್ತಟ್ಟಿಗಿರಲಿ, ಈ ದಿನ ಖರೀದಿಸಿದ ಬಂಗಾರ ಮುಂದಿನ ವರ್ಷದಷ್ಟೊತ್ತಿಗೆ ದುಪ್ಪಟ್ಟು ಆಗುತ್ತದೆ ಎಂಬುದೆ ಮೂರ್ಖತನವಲ್ಲವೆ ? ವ್ಯಾಪಾರಿಗಳು ಹಾಗೂ ಜೋತಿಷ್ಯಿಗಳು ಕೂಡಿ ಮಾಡಿದ ಆಟಕ್ಕೆ ಭಾರತೀಯ ಮನಸ್ಸುಗಳು ಪಿಗ್ಗಿ ಬಿದ್ದಿರುವುದು ಕಾಣುತ್ತೇವೆ. ಪಂಚಾಂಗವೆಂಬ ಗಣಿತವಲ್ಲದ, ವಿಜ್ಞಾನವಲ್ಲದ ಅರೆ ಬರೆ ಅಜ್ಞಾನದ ಹಿಂದೆ ಹೋಗುತ್ತಿದ್ದೇವೆ. ಪ್ರಜ್ಞಾವಂತ ಬಸವಣ್ಣನವರ ನಾಡಿನ ನಾವೆಲ್ಲ ವ್ಯಾಪಾರಿಗಳ ಹಾಗೂ ಜೋತಿಷ್ಯಿಗಳ ಕೌಲು ಕೂಟಕ್ಕೆ ಬಲಿಯಾಗಿರುವುದು ಎಷ್ಟು ಸರಿ ? ಎಂದು ನಮ್ಮನ್ನೆ ನಾವು ಕೇಳಿಕೊಳ್ಳಬೇಕಾಗಿದೆ.
- Advertisement -

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಸಿಲಿನ ತಾಪವಿದ್ದರೂ ಬಿಜೆಪಿ ಒತ್ತಡದಿಂದ ಬಂಗಾಳದಲ್ಲಿ 7 ಹಂತದ ಚುನಾವಣೆ: ಅಭಿಷೇಕ್ ಬ್ಯಾನರ್ಜಿ

0
ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಬಿಸಿಲಿನ ತಾಪವಿದ್ದರೂ, ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ಆಯೋಜಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ ಎಂದು ಟಿಎಂಸಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ. ಟಿಎಂಸಿಯ ಡಾರ್ಜಿಲಿಂಗ್ ಅಭ್ಯರ್ಥಿ ಗೋಪಾಲ್...