| ನಾನುಗೌರಿ ಡೆಸ್ಕ್ |

ನಟಿ ಮತ್ತು ಕಾಂಗ್ರೆಸ್ ನಾಯಕಿ ರಮ್ಯ (ದಿವ್ಯ ಸ್ಪಂದನ) ಅವರು ಸುವರ್ಣ ನ್ಯೂಸ್ ಚಾನೆಲ್ ವಿರುದ್ಧ ಹಾಕಿದ್ದ ಕೇಸಿನಲ್ಲಿ ಬೆಂಗಳೂರಿನ 8ನೇ ಅಪರ ನಗರ ಸಿವಿಲ್ & ಸೆಷನ್ಸ್ ನ್ಯಾಯಾಧೀಶರು, ಸದರಿ ಚಾನೆಲ್‍ಗೆ 50 ಲಕ್ಷ ರೂಗಳನ್ನು ದಂಡ ವಿಧಿಸಿದ್ದಾರೆ. ಈ ಹಣವನ್ನು 2 ತಿಂಗಳೊಳಗೆ ರಮ್ಯಾರಿಗೆ ಪಾವತಿಸಬೇಕೆಂದು ಕೋರ್ಟ್ ಆದೇಶಿಸಿದೆ. ಈ ಕುರಿತು ವರದಿ ಮಾಡಿರುವ ಲೈವ್‍ಲಾ ವೆಬ್ ತಾಣವು, ಕೋರ್ಟಿನ ಜಡ್ಜ್‍ಮೆಂಟ್ ( https://www.livelaw.in/amp/news-updates/asianet-suvarna-news-held-liable-for-defaming-divya-spandana-50-lakhs-damages-144883 ) ಅನ್ನೂ ಪೂರ್ಣವಾಗಿ ಪ್ರಕಟಿಸಿದೆ. ಏಷ್ಯಾನೆಟ್ ಅವರ ಮಾಲೀಕತ್ವದಲ್ಲಿರುವ ಸುವರ್ಣ ಚಾನೆಲ್ ಮೇ 2013ರಲ್ಲಿ ಒಂದು ಸುಳ್ಳು ಸುದ್ದಿ ಪ್ರಕಟಿಸಿದ್ದರೆಂಬ ಪ್ರಕರಣಕ್ಕೆ ಸಂಬಂಧಿಸಿದ ಕೇಸು ಇದಾಗಿತ್ತು.

ಐಪಿಎಲ್ ಕ್ರಿಕೆಟ್‍ಗೆ ಸಂಬಂಧಿಸಿದಂತೆ ಬೆಟ್ಟಿಂಗ್ ನಡೆಯುತ್ತಿದ್ದು, ಅದರಲ್ಲಿ ರಮ್ಯ ಭಾಗಿಯಾಗಿದ್ದರೆಂಬುದು ಆ ಸಂದರ್ಭದಲ್ಲಿ ಪ್ರಕಟವಾದ ಸುದ್ದಿಯ ಸಾರಾಂಶವಾಗಿತ್ತು. ಅದನ್ನು ಪ್ರಸಾರ ಮಾಡುವಾಗ ‘ಬೆಟ್ಟಿಂಗ್ ರಾಣಿಯರು’, ‘ಬೆಟ್ಟಿಂಗ್‍ನಲ್ಲಿ ಕನ್ನಡದ ಬೊಂಬೆಗಳು’, ‘ಲಿಂಕ್ ಏಜೆಂಟ್ ಆಗಿ ಕೆಲಸ ಮಾಡುತ್ತಿರುವ ನಟಿಯರು’, ‘ಆ ನಟಿಮಣಿಯರು ಯಾರು ಗೊತ್ತಾ?’ ಇತ್ಯಾದಿ ವಿಶೇಷಣಗಳನ್ನು ಬಳಸಿ ಸುದ್ದಿಯನ್ನು ಪ್ರಸಾರ ಮಾಡಲಾಗಿತ್ತು. ಇದಲ್ಲದೆ ಆ ಸಂದರ್ಭದಲ್ಲಿ ಆರ್‍ಸಿಬಿ ತಂಡದ ಬ್ರಾಂಡ್ ಅಂಬಾಸಿಡರ್ ಆಗಿದ್ದ ರಮ್ಯಾರ ಫೋಟೊವನ್ನು ಸುದ್ದಿಯೊಂದಿಗೆ ಪದೇ ಪದೇ ಪ್ರಸಾರ ಮಾಡಲಾಗಿತ್ತು. ರಮ್ಯಾರ ಹೆಸರನ್ನು ಹೇಳಿ, ಅವರೇ ಇಂತಹ ಬೆಟ್ಟಿಂಗ್ ಪ್ರಕರಣದಲ್ಲಿ ಭಾಗಿಯಾಗಿದ್ದ ಕನ್ನಡದ ನಟಿ ಎಂದು ಬಿಂಬಿಸಲಾಗಿತ್ತು.

ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ರಮ್ಯಾ ಕೋರ್ಟ್ ಮೆಟ್ಟಿಲೇರಿದ್ದರು. ತನಗೂ ಐಪಿಎಲ್‍ಗೂ ಅಥವಾ ಐಪಿಎಲ್ ಬೆಟ್ಟಿಂಗ್‍ಗೂ ಯಾವುದೇ ಸಂಬಂಧವಿಲ್ಲ. ಇದು ದುರುದ್ದೇಶಪೂರ್ವಕವಾಗಿ ತನಗೆ ಮಾನಹಾನಿ ಮಾಡುವ ಸುದ್ದಿಯಾಗಿದೆ. ಅದಕ್ಕಾಗಿ ತನಗೆ ಹತ್ತು ಕೋಟಿ ರೂಪಾಯಿ ನಷ್ಟ ಪರಿಹಾರವನ್ನು ಕಟ್ಟಿಕೊಡಬೇಕೆಂದು ಕೇಳಿದ್ದರು. ವಿಚಾರಣೆ ನಡೆಸಿ ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿದ ಕೋರ್ಟ್ ರಮ್ಯಾರ ವಾದವನ್ನು ಎತ್ತಿಹಿಡಿದಿದೆ. ಸುವರ್ಣ ನ್ಯೂಸ್ ಚಾನಲ್ ದುರುದ್ದೇಶಪೂರ್ವಕವಾಗಿ ಈ ಸುದ್ದಿಯನ್ನು ಪ್ರಕಟಿಸಿರುವುದಕ್ಕೆ ತಪರಾಕಿ ಕೊಟ್ಟಿರುವ ಕೋರ್ಟ್, ಇನ್ನು ಮುಂದೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಮ್ಯಾರ ಬಗ್ಗೆ ಸುದ್ದಿ ಪ್ರಕಟಣೆ ಮಾಡಬಾರದೆಂದು ಸದರಿ ಚಾನೆಲ್ ಗೆ ಆದೇಶಿಸಿದೆ.

ಈ ಕುರಿತು ನಾನು ನಾನುಗೌರಿ.ಕಾಂನೊಂದಿಗೆ ಮಾತನಾಡಿದ ವಕೀಲೆ ರಾಜಲಕ್ಷ್ಮಿ ಅಂಕಲಗಿ ‘ಕೀಳು ಮಟ್ಟದ ರೋಚಕತೆ, ಟಿಆರ್‍ಪಿ ಮತ್ತು ಬಿಜೆಪಿ ಪರ ಸುದ್ದಿ ಮಾಡುವ ದುರುದ್ದೇಶದೊಂದಿಗೆ ಇಂತಹ ಸುದ್ದಿಗಳನ್ನು ಚಾನೆಲ್‍ಗಳು ಪ್ರಕಟಿಸುತ್ತವೆ. ಈ ಪ್ರಕರಣದಲ್ಲಿ ಸದರಿ ಚಾನೆಲ್ ಬಳಸಿರುವ ಶೀರ್ಷಿಕೆಗಳೆ ಆ ಚಾನೆಲ್ ನ ಕೀಳು ಅಭಿರುಚಿಯನ್ನು ಎತ್ತಿ ತೋರಿಸುತ್ತದೆ. ಕೋರ್ಟ್ ಸರಿಯಾದ ಪಾಠ ಕಲಿಸಿದೆ. ಇದು ಇದೇ ರೀತಿ ಸುದ್ದಿ ಪ್ರಕಟಿಸುತ್ತಿರುವ ಉಳಿದ ಚಾನೆಲ್‍ಗಳಿಗೂ ದೊಡ್ಡ ಪಾಠವಾಗಲಿದೆ. ಮುಂದಾದರೂ ಈ ಚಾನೆಲ್‍ಗಳು ಬುದ್ದಿ ಕಲಿಯುತ್ತಾರ ನೋಡಬೇಕು’ ಎಂದು ತಿಳಿಸಿದರು.

ಈ ಪ್ರಕರಣದಲ್ಲಿ ರಮ್ಯಾರ ಪರ ಪ್ರಮೋದ್ ನಾಯರ್ ಅವರು ಮತ್ತು ಸುವರ್ಣ ಚಾನೆಲ್ ಪರ ಪೂವಯ್ಯ ಅಂಡ್ ಕಂಪನಿ ವಕಾಲತ್ತು ವಹಿಸಿದ್ದರು. ಪಾಟೀಲ್ ನಾಗಲಿಂಗನಗೌಡ ಅವರು ತೀರ್ಪು ನೀಡಿದ ನ್ಯಾಯಾಧೀಶರಾಗಿದ್ದಾರೆ.

Donate

ಈ ಲೇಖನ, ಈ ವೆಬ್‌ಸೈಟ್ ನಿಮಗೆ ಇಷ್ಟವಾಯಿತೇ? ನಿಮ್ಮ ಬೆಂಬಲ ಇದಕ್ಕೆ ಅಗತ್ಯ.

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

+ posts