Homeಮುಖಪುಟಕರಾವಳಿಯ ಕೋಮುದ್ವೇಷದ ಇನ್ನೊಂದು ರಕ್ತಸಿಕ್ತ ಅಧ್ಯಾಯಕ್ಕೆ ಕಾರಣಗಳು: ನಿಖಿಲ್ ಕೋಲ್ಪೆ

ಕರಾವಳಿಯ ಕೋಮುದ್ವೇಷದ ಇನ್ನೊಂದು ರಕ್ತಸಿಕ್ತ ಅಧ್ಯಾಯಕ್ಕೆ ಕಾರಣಗಳು: ನಿಖಿಲ್ ಕೋಲ್ಪೆ

- Advertisement -
- Advertisement -

ಕರಾವಳಿಯ ಅತ್ಯಂತ ಭೀಕರ ಕೋಮುಗಲಭೆ ನಡೆದ ಸುರತ್ಕಲ್ ಸುತ್ತಮುತ್ತಲಿನ ಕೋಮುಗಲಭೆಗಳು, ಕೊಲೆಗಳು ಅಲ್ಲಿಗೇ ನಿಲ್ಲಲಿಲ್ಲ. ಅದು ಇಂದಿನ ವರೆಗೂ ಮುಂದುವರಿದಿದೆ. ಕೃಷ್ಣಾಪುರ-ಕಾಟಿಪಳ್ಳ ಪ್ರದೇಶಗಳಲ್ಲಿ ಮತ್ತೆ ಮತ್ತೆ ಘರ್ಷಣೆಗಳು ನಡೆಯುತ್ತಾ ಬಂದಿವೆ. ಇದಕ್ಕೆ ಒಂದು ಪ್ರಮುಖ ಕಾರಣವೂ ಇದೆ. ಈ ಪ್ರದೇಶದಲ್ಲಿ ಇರುವುದು ಹೆಚ್ಚಾಗಿ ಬಂದರು ನಿರ್ಮಾಣದ ವೇಳೆ ನಿರಾಶ್ರಿತರಾದವರ ಮನೆಗಳು. ಸರಕಾರ ಅವರಿಗೆ ಸೈಟುಗಳನ್ನು ಹಂಚುವಾಗ ಹಿಂದೂ ಮತ್ತು ಮುಸ್ಲಿಮರಿಗೆ ಮಿಶ್ರ ಮಾಡಿ ಹಂಚಬೇಕಿತ್ತು. ಆದರೆ, ಅದು ಕೆಲವು ಬ್ಲಾಕ್‌ಗಳಲ್ಲಿ ಕೇವಲ ಹಿಂದೂಗಳಿಗೆ ಮತ್ತು ಕೆಲವು ಬ್ಲಾಕ್‌ಗಳಲ್ಲಿ ಮುಸ್ಲಿಮರಿಗೆ ಮಾತ್ರ ಸೈಟುಗಳನ್ನು ಹಂಚಿತ್ತು. ಪರಿಣಾಮವಾಗಿ ಯಾವುದೇ ಕೋಮು ಉದ್ವಿಗ್ನತೆ ಉಂಟಾದಾಗ ಈ ಎರಡು ಪ್ರದೇಶಗಳು ಎರಡು ದೇಶಗಳಂತೆ ಕಂಡು, ಎರಡೂ ಕಡೆ ಜನರು ಜಮಾಯಿಸುತ್ತಾರೆ.

ಅಲ್ಲದೇ, ಬಂದರು ಆದ ಬಳಿಕ ಪಣಂಬೂರು, ಕುಳಾಯಿ, ಸುರತ್ಕಲ್, ನೆರೆಯ ಕಾನ, ಬಾಳ ಮುಂತಾದ ಕಡೆ ಎಂಆರ್‌ಪಿಎಲ್ ಸಹಿತ ಹಲವು ಚಿಕ್ಕದೊಡ್ಡ ಉದ್ದಿಮೆಗಳ ಜೊತೆ ಹಲವಾರು ರೀತಿಯ ದಂಧೆಗಳು ಆರಂಭವಾಗಿದ್ದವು. ಹಾಗಾಗಿ ವಹಿವಾಟು ಸಂಬಂಧಿ ವೈಯಕ್ತಿಕ ದ್ವೇಷಗಳೂ ಕೋಮುಗಲಾಟೆಗೆ ಕಾರಣಗಳಾಗುತ್ತಿದ್ದವು.

ಸುರತ್ಕಲ್‌ ಪ್ರದೇಶದಲ್ಲಿ ಮತ್ತೆ ನಡೆದ ಘಟನೆಯೆಂದರೆ 2006ಲ್ಲಿ ನಡೆದ ಮಾರ್ಬಲ್ ಅಂಗಡಿಯೊಂದರ ಮಾಲಕನಾಗಿದ್ದ ಸುಖಾನಂದ ಶೆಟ್ಟಿ ಕೊಲೆ. ಮೂಲತಃ ಮುಲ್ಕಿಯ ಶೆಟ್ಟಿ  ಹಿಂದೂತ್ವವಾದಿ ಸಂಘಟನೆಗಳಲ್ಲಿ ಸಕ್ರಿಯನಾಗಿದ್ದು, ಗೋವು ಸಾಗಾಟಗಾರರ ಮೇಲೆ ದಾಳಿ, ಲವ್ ಜೆಹಾದ್ ವಿಷಯದಲ್ಲಿ ಹಲ್ಲೆ ಮುಂತಾಗಿ ಯುವಕರಿಗೆ ಸಕ್ರಿಯ ಬೆಂಬಲ ನೀಡುತ್ತಿದ್ದ ವ್ಯಕ್ತಿ. ಈತನನ್ನು ಸುರತ್ಕಲ್ ಸಮೀಪದ ಕುಳಾಯಿ ಹೊನ್ನಕಟ್ಟೆಯಲ್ಲಿದ್ದ ಆತನ ಮಾರ್ಬಲ್ ಅಂಗಡಿಗೆ ಕಾರಿನಲ್ಲಿ ಬಂದ ಗುಂಪೊಂದು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಂದಿತ್ತು. ಈ ಪ್ರಕರಣದ ವಿಚಾರಣೆ ಕೆಲವರ್ಷ ನಡೆದು 17 ಆರೋಪಿಗಳಿಗೆ ಖುಲಾಸೆಯಾಗಿತ್ತು. ಇವರಲ್ಲಿ ಕೆಲವರು ಬಾಡಿಗೆ ಹತ್ಯೆಯಿಂದ ಹಿಡಿದು ಹಲವು ರೀತಿಯ ಕ್ರಿಮಿನಲ್ ಕೃತ್ಯಗಳಲ್ಲಿ ಬಾಗಿಯಾದ ಪಕ್ಕಾ ರೌಡಿಗಳಿದ್ದರು. ಈ ಪ್ರಕರಣದಲ್ಲಿಯೂ ಘರ್ಷಣೆಯ ಕಿಚ್ಚು ಹೊತ್ತಿದ್ದು, ಎಜೆ ಆಸ್ಪತ್ರೆ ಬಳಿ ಗೋಲಿಬಾರ್ ಕೂಡಾ ನಡೆದಿತ್ತು. ಗಲಭೆಗಳಲ್ಲಿ ಹಲವರು ಗಂಭೀರವಾಗಿ ಗಾಯಗೊಂಡಿದ್ದರು.

ಇವರಲ್ಲಿ ಒಬ್ಬನಾದ ಕಬೀರ್ ಎಂಬಾತನನ್ನು ಗುರುಪುರ ಬಳಿ ಬೈಕಿಗೆ ಕಾರು ಡಿಕ್ಕಿ ಹೊಡೆಸಿ, ನಂತರ ತಲವಾರಿನಿಂದ ಕೊಚ್ಚಿ ಕೊಲೆ ಮಾಡಲಾಯಿತು. ಬಾಡಿಗೆ ಹಂತಕನೆಂದು ಕುಖ್ಯಾತಿ ಗಳಿಸಿದ್ದ ಮುಲ್ಕಿ ರಫೀಕ್ ಯಾನೆ ಕೊಳಚೆಕಂಬ್ಳ ರಫೀಕ್‌ನನ್ನು ತಮಿಳುನಾಡಿನಿಂದ ಪೊಲೀಸರು ಬಂಧಿಸಿತಂದಿದ್ದರು. ನಂತರ ಈತ ಮಣಿಪಾಲದ ಬಳಿ ರೈಲು ನಿಲ್ದಾಣದ ಎದುರು ಪೊಲೀಸ್ ಎನ್‌ಕೌಂಟರ್‌ನಲ್ಲಿ ಹತನಾಗಿದ್ದ. ಇನ್ನೊಬ್ಬ ರೌಡಿ ಮಾಡೂರು ಯೂಸುಫ್ ಅಥವಾ ಇಸುಬುನನ್ನು ಮಂಗಳೂರು ಜೈಲಿನಲ್ಲಿ ಸಹಕೈದಿಗಳು ಕೊಂದಿದ್ದರು. ಬುಲೆಟ್ ಸುಧೀರ್ ಎಂಬಾತ ಕುಂದಾಪುರದಲ್ಲಿ ಪೊಲೀಸ್ ಎನ್‌ಕೌಂಟರ್‌ನಲ್ಲಿ ಹತನಾಗಿದ್ದ.

ಇದರ ಅರ್ಥವೆಂದರೆ, ಕರಾವಳಿಯಲ್ಲಿ ನಡೆಯುವ ಕೋಮುಗಲಭೆಗಳು, ಕೊಲೆಗಳು ನೇರವಾಗಿ ಧರ್ಮಕ್ಕೆ ಸಂಬಂಧಿಸಿದವುಗಳಲ್ಲ. ಅವು ಧರ್ಮರಾಜಕಾರಣ ಮತ್ತು ಎರಡು ನಂಬರ್ ದಂಧೆಗಳಿಗೆ, ಇತರ ವ್ಯವಹಾರಗಳಿಗೆ ಸಂಬಂಧಿಸಿದವುಗಳಾಗಿವೆ. ಇಲ್ಲಿ ನಡೆದ ಎಲ್ಲಾ ಕೋಮು ಗಲಭೆ ಮತ್ತು ಆ ಸಂಬಂಧಿ ಕೊಲೆಗಳ ವಿಷಯವನ್ನು ಬರೆಯುತ್ತಾ ಹೋದರೆ, ಒಂದು ಪುಸ್ತಕವನ್ನೇ ಬರೆಯಬೇಕಾದೀತು.  ಸುರತ್ಕಲ್‌ ಪರಿಸರದಲ್ಲಿ 2018ರಲ್ಲಿಯೇ ಕಾಟಿಪಳ್ಳದಲ್ಲಿ ದೀಪಕ್ ರಾವ್ ಎಂಂಬಾತನ ಕೊಲೆ ನಡೆದಿದ್ದರೆ, ಪ್ರತೀಕಾರವೋ ಎಂಬಂತೆ ಕೆಲದಿನಗಳಲ್ಲೇ ಕೊಟ್ಟಾರ ಚೌಕಿಯಲ್ಲಿ ಬಶೀರ್ ಎಂಬಾತನ ಕೊಲೆ ನಡೆದಿತ್ತು.

ಇಲ್ಲಿ ಇನ್ನೊಂದು ವಿಷಯವನ್ನು ಇಲ್ಲಿ ಉಲ್ಲೇಖಿಸಬೇಕು. ಎಲ್ಲಾ ಪ್ರಕರಣಗಳಲ್ಲಿ ರಾಜಕೀಯ ಮಧ್ಯಪ್ರವೇಶದಿಂದ ಪೊಲೀಸರು ಪಕ್ಷಪಾತದ ಆರೋಪಕ್ಕೆ ಗುರಿಯಾಗಿ ಪ್ರತಿಭಟನೆ, ಪೊಲೀಸ್ ಠಾಣೆಗೆ ಮುತ್ತಿಗೆ ಮುಂತಾದ ಘಟನೆಗಳು ನಡೆದಿದ್ದವು. ಸುರತ್ಕಲ್ ಠಾಣೆಯಂತೂ ಹಲವಾರು ಬಾರಿ ಗುಂಪು ಮುತ್ತಿಗೆಗೆ ಗುರಿಯಾಗಿದೆ.

ಆದುದರಿಂದ ಇಲ್ಲಿ ಎಲ್ಲಾ ಪ್ರಕರಣಗಳನ್ನು ಕಾಲಾನುಕ್ರಮದಲ್ಲಿ ಹೇಳಲು ಹೋಗದೆ, ಅತ್ಯಂತ ಸೂಕ್ಷ್ಮವಾದ ಕೆಲವು ಪ್ರದೇಶಗಳು ಮತ್ತು ಅವುಗಳಲ್ಲಿ ನಡೆದ ಪ್ರಮುಖ ಘಟನೆಗಳನ್ನು ಮಾತ್ರ ಉಲ್ಲೇಖಿಸಲಾಗಿದೆ. ಇದಕ್ಕೆ ಇನ್ನೊಂದು ಕಾರಣವೆಂದರೆ, ಎಲ್ಲಾ ಘಟನೆಗಳು ಒಂದೇ ಮಾದರಿ (ಮೋಡಸ್ ಒಪೆರಾಂಡಿ)ಯಲ್ಲಿ ನಡೆದಿದ್ದು, ಎರಡೂ ಕೋಮುಗಳು ಮತ್ತು ಅವುಗಳನ್ನು ಬೆಂಬಲಿಸುವ ರಾಜಕೀಯ ಪಕ್ಷಗಳ ಪ್ರತಿಕ್ರಿಯೆ ಒಂದೇ ರೀತಿ ಇರುವುದರಿಂದ ಅವುಗಳನ್ನು ಮತ್ತೆ ಮತ್ತೆ ಪುನರಾವರ್ತಿಸುವ ಅಗತ್ಯವಿಲ್ಲ.

ಸುರತ್ಕಲ್‌ನಂತೆ ಕೋಮುಸೂಕ್ಷ್ಮವಾಗಿದ್ದು, ಹಲವಾರು ಕೊಲೆ ಮತ್ತು ಪ್ರತೀಕಾರದ ಕೊಲೆಗಳಿಗೆ ಸಾಕ್ಷಿಯಾಗಿರುವುದೆಂದರೆ, ಪೊಳಲಿ ಮತ್ತು ಮಾಡೂರು ಪರಿಸರ. ಇಲ್ಲಿ ಏನಾದರೂ ಆರಂಭವಾದರೆ, ಅದು ಬಜ್ಪೆ, ಬಿ.ಸಿ.ರೋಡು, ಮಾರಿಪಳ್ಳ, ಫರಂಗಿಪೇಟೆ ಮುಂತಾದ ಕಡೆಗಳಿಗೆ ವ್ಯಾಪಿಸುತ್ತದೆ. ವರ್ಷಗಳ ಹಿಂದೆ ಇಲ್ಲಿ ಪೊಳಲಿ ಕಮಲಾಕ್ಷ ಎಂಬಾತನ ಕೊಲೆ ನಡೆದಿತ್ತು. ಕಾಟಿಪಳ್ಳ-ಕೃಷ್ಣಾಪುರದಂತೆಯೇ ಮಾಡೂರಿನಲ್ಲಿ ಮುಸ್ಲಿಂ ಬಾಹುಳ್ಯವಿದ್ದರೆ, ಸುತ್ತಲೂ ಹಿಂದೂ ಬಾಹುಳ್ಯವಿದೆ. ನಂತರ ನಾಗೇಶ ಶೆಟ್ಟಿಗಾರ್ ಎಂಬಾತನ ಕೊಲೆ ನಡೆಯಿತು. ತಕ್ಷಣವೇ ಮಂಗಳೂರಿನ ಜಪ್ಪು ಪ್ರದೇಶದಲ್ಲಿ ಮುಸ್ಲಿಂ ಯುವಕನೊಬ್ಬನ ಕೊಲೆ ನಡೆದಿತ್ತು. ಇದು ಪ್ರತೀಕಾರಾರ್ಥ ಕೊಲೆ ಎಂದು ಹೇಳಲಾಗಿತ್ತು.

ನಂತರ ಎಲ್ಲರನ್ನೂ ಬೆಚ್ಚಿ ಬೀಳಿಸಿದ ಘಟನೆ ಎಂದರೆ, ಮಾಡೂರಿನ ಕಾಂಗ್ರೆಸ್ ನಾಯಕ ಮತ್ತು ಮಂಗಳೂರು ತಾಲೂಕು ಪಂಚಾಯತ್ ಅಧ್ಯಕ್ಷರಾಗಿದ್ದ ಅಬ್ದುಲ್ ಜಬ್ಬಾರ್ ಅವರನ್ನು ಅವರ ಕಚೇರಿಯಲ್ಲಿಯೇ, ಅವರ ಹೆಂಡತಿ ಮಕ್ಕಳ ಕಣ್ಣೆದುರೇ, ಭೀಕರವಾಗಿ ಕೊಚ್ಚಿ ಕೊಲ್ಲಲಾಗಿತ್ತು. ಈ ಪ್ರಕರಣದ ಆರೋಪಿಗಳೆಂದರೆ ಪೊಳಲಿ ಅನಂತು ಮತ್ತು ಇತರರು. ಮಾಡೂರು ಇಸುಬು ಕೊಲೆ ಪ್ರಕರಣವನ್ನು ಹಿಂದೆ ಉಲ್ಲೇಖಿಸಲಾಗಿದೆ. ಈ ಪ್ರಕರಣದಲ್ಲಿ ಬಿಡುಗಡೆ ಹೊಂದಿದ ಅನಂತುವನ್ನು ಹಿಂದೂತ್ವವಾದಿ ಸಂಘಟನೆಗಳು ಮಂಗಳೂರಿನಿಂದ ಪೊಳಲಿಗೆ ಮೆರವಣಿಗೆಯಲ್ಲಿ ಒಯ್ದಿದ್ದರು. ನಂತರ ಒಂಟಿಯಾಗಿ ಹೋಗುತ್ತಿದ್ದ ಆತನನ್ನು ಪ್ರತೀಕಾರವಾಗಿ ಕೊಲ್ಲಲಾಗಿತ್ತು. ಬೆನ್ನಲ್ಲೇ ಜಬ್ಬಾರ್ ಹತ್ಯೆಯಲ್ಲಿ ಶಾಮೀಲಾಗಿದ್ದನೆನ್ನಲಾದ ಸಂತೋಷ ಯಾನೆ ಕ್ಯಾಂಡಲ್ ಸಂತು ಎಂಬಾತನ ಕೊಲೆಯೂ ನಡೆದಿತ್ತು. ಈ ರೀತಿಯ ಕೊಲೆಗಳ ಸರಣಿ ಉಳ್ಳಾಲ ಮತ್ತಿತರ ಕಡೆಗಳಲ್ಲೂ ನಡೆದಿದ್ದು, ಕೋಮು ವಿಷ ಎಷ್ಟರ ಮಟ್ಟಿಗೆ ಹರಡಿದೆ ಎಂಬುದಕ್ಕೆ ಸಾಕ್ಷಿಯಾಗಿದೆ. (ಇನ್ನಷ್ಟು ಕೋಮುಸಂಬಂಧಿ ಘಟನೆಗಳು ಮತ್ತು ಹುನ್ನಾರಗಳ ವಿವರ ಮುಂದೆ ನೋಡೋಣ)

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಹಾರ: ಬಿಸಿಲಿನ ತಾಪಕ್ಕೆ ಪ್ರಜ್ಞೆ ತಪ್ಪಿದ ಶಾಲಾ ವಿದ್ಯಾರ್ಥಿಗಳು; ಆಸ್ಪತ್ರೆಗೆ ದಾಖಲು

0
ಪ್ರಸ್ತುತ ಉತ್ತರ ಭಾರತದಲ್ಲಿ ಉರಿಯುತ್ತಿರುವ ತೀವ್ರತರವಾದ ಶಾಖದ ಅಲೆಯಿಂದಾಗಿ ಬಿಹಾರದ ಶೇಖ್‌ಪುರದ ಹಲವಾರು ಶಾಲಾ ವಿದ್ಯಾರ್ಥಿಗಳು ಪ್ರಜ್ಞೆ ತಪ್ಪಿದ್ದು, ಅವರನ್ನು ಆಸ್ಪತ್ರೆಗೆ ದಾಖಲಾಗಿದ್ದಾರೆ. ಸ್ಥಳೀಯವಾಗಿ ಮಂಗಳವಾರ ಗರಿಷ್ಠ ತಾಪಮಾನ 42.9 ಡಿಗ್ರಿ ಸೆಲ್ಸಿಯಸ್...