ದೇವನೂರು

ಜಾತೀಯ ಅಸಮಾನತೆಗಳು ಭಾರತದ ಮೂಲ ಗುಣ. ಭಾರತ ಧರ್ಮಗಳ ಆಧಾರದಲ್ಲಿ ರೂಪಿತವಾಗಿರುವ ಸಾಮಾಜಿಕ ವ್ಯವಸ್ಥೆಯಲ್ಲ. ಇಲ್ಲಿ ಧರ್ಮವೆಂದು ಹೇಳುವ ವಿಚಾರಗಳು ಕೂಡ ಜಾತಿಗಳೇ ಆಗಿವೆ. ಭಾರತದಲ್ಲಿ ಪ್ರತಿಯೊಂದು ಧರ್ಮವೂ ಜಾತಿಯೇ ಆಗಿದೆ ಎಂದು ಡಾ. ಅಂಬೇಡ್ಕರ್‌ ಹೇಳುವ ಮಾತು ಭಾರತದಲ್ಲಿ ಸಂವಿಧಾನ ಜಾರಿಗೆ ಬಂದು 71 ವರ್ಷಗಳ ನಂತರವೂ ಪ್ರಸ್ತುತವೇ ಆಗಿದೆ. ಈಗ ಮೊದಲಿದ್ದ ಜಾತಿಯ ಸ್ವರೂಪಗಳು ಬದಲಾಗಿ ಹೊಸ ಹೊಸ ರೀತಿಯಲ್ಲಿ ನಮ್ಮ ಮುಂದೆ ಧುತ್ತನೇ ಬಂದು ನಿಂತಿವೆ. ಒಂದು ಕಾಲದಲ್ಲಿ ಬುದ್ಧ ಬಸವಣ್ಣನಿಂದ ಆರಂಭವಾಗಿ ಗಾಂಧಿ, ಅಂಬೇಡ್ಕರ್‌, ಫುಲೆ, ವಿನೋದಾ ಭಾವೆ, ನಾರಾಯಣ ಗುರು ಅವರಂತಹ ಮಹನೀಯರು ಇದೇ ಜಾತಿ ವ್ಯವಸ್ಥೆ, ತಾರತಮ್ಯ, ಅಸಮಾನತೆಗಳನ್ನು ಹೋಗಲಾಡಿಸುವ ಪ್ರಯತ್ನ ಮಾಡಿದ್ದಾರೆ. ಮಹಾನ್‌ ಚೇತನಗಳ ಪ್ರಯತ್ನದ ನಂತರವೂ, ಸಾವಿರ ವರ್ಷಗಳ ಸುದೀರ್ಘ ಹೋರಾಟದ ನಂತರವೂ ಇಂದು ಜಾತಿಯೇ ಮೇಲುಗೈ ಸಾಧಿಸುತ್ತಿದೆ. ಹೊಸ ಕಾಸ್ಮೋ ಪಾಲಿಟಿನ್‌ ನಗರಗಳಲ್ಲಿ ಮಧ್ಯಮ ಮೇಲ್ಮಧ್ಯಮ ವರ್ಗಗಳ ಹಣೆಪಟ್ಟಿ ಹೊತ್ತು ಜಾತಿ ವ್ಯವಸ್ಥೆ ತನ್ನ ಅಸ್ಥಿತ್ವವನ್ನು ಉಳಿಸಿಕೊಂಡಿದೆ ಹಾಗೆಂದ ಮಾತ್ರಕ್ಕೆ ಗಾಂಧಿ-ಅಂಬೇಡ್ಕರ್‌ ಹೋರಾಟ ಮತ್ತು ಚಿಂತನೆಗಳು ನಿಂತಿವೆ ಎಂದಲ್ಲ. 21ನೇ ಶತಮಾನದ ಸಾಮಾಜಿಕ ಜಾಲತಾಣಗಳ ಜಾತೀಯ ಕೆಸರೆರಚಾಟ, ಹೋರಾಟ ಕೂಗಾಟಗಳ ಮಧ್ಯೆ ನಮ್ಮ ನಡುವೆ ಅನೇಕರು ಸದ್ದಿಲ್ಲದೇ ಎಲ್ಲ ಅಸಮಾನತೆಗಳ ವಿರುದ್ಧ ಧ್ವನಿಯೆತ್ತುತ್ತಲೇ ಬಂದಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯ ಬೇರುಗಳನ್ನು ಭದ್ರಪಡಿಸುವ ಯತ್ನ ನಡೆಸುತ್ತಿದ್ದಾರೆ. ತಮ್ಮ ಅಪಾರವಾದ ಅನುಭವದ ಮೂಸೆಯಿಂದ, ಜ್ಞಾನ ಭಂಡಾರದಿಂದ, ತಿಳುವಳಿಕೆಯಿಂದ ಹೋರಾಟಗಳನ್ನು ಸಂಘಟಿಸುತ್ತಿದ್ದಾರೆ. ಹೊಸ ತಲೆಮಾರಿಗೆ ಒಂದಷ್ಟು ಸ್ಪೂರ್ತಿ ಮತ್ತು ಮಾರ್ಗದರ್ಶಕರಾಗಿದ್ದಾರೆ. ಅವರಲ್ಲಿ ಮೂವರು ಬಹುಮುಖ್ಯ ವ್ಯಕ್ತಿಗಳು ಕನ್ನಡ ನಾಡಿನ ಸಾಕ್ಷಿ ಪ್ರಜ್ಞೆಗಳೆಂದು ಗುರುತಿಸಬಹುದು. ಅವರೆಂದರೆ ತೇಜಸ್ವಿ, ಲಂಕೇಶ್‌ ಮತ್ತು ದೇವನೂರು ಮಹಾದೇವ. ಈ ಮೂವರೂ ಅಪ್ಪಟ ಪ್ರತಿಭಟನಾವಾದಿಗಳು. ತಮ್ಮ ಬದುಕು ಬರಹ ವ್ಯಕ್ತಿತ್ವಗಳನ್ನು ಬಂಡಾಯದ ಪ್ರವೃತ್ತಿಯಲ್ಲಿಯೇ ಕಳೆದವರು. ಕರ್ನಾಟಕದ ಮೂವರು ದೊಡ್ಡ ಜಗಳಗಂಟರೆಂದು ಕುಖ್ಯಾತಿ ಪಡೆದವರು. ಅವರನ್ನು ಸಾಹಿತಿಗಳೆಂದರೆ ಒಪ್ಪಲು ತಯಾರಿಲ್ಲದವರು, ಹೋರಾಟಗಾರರೆಂದರೆ ಅದನ್ನೂ ಒಪ್ಪಲಿಕ್ಕೆ ತಯಾರಿಲ್ಲದವರು. ಒಟ್ಟಿನಲ್ಲಿ ನಮ್ಮ ನಿಮ್ಮಂತೆ ಸಾಧಾರಣ ವ್ಯಕ್ತಿಗಳಂತೆಯೆ ಇದ್ದ ಅಸಾಧಾರಣ ಚೈತನ್ಯಗಳು. ಮೂವರಲ್ಲಿ ತೇಜಸ್ವಿ ಮತ್ತು ಲಂಕೇಶ್‌ ಇಂದು ನಮ್ಮ ನಡುವೆ ಇಲ್ಲ. ದೇವನೂರು ಮಹಾದೇವರವರು 73 ವರ್ಷ ದಾಟಿ 74ಕ್ಕೆ ಕಾಲಿರಿಸಿದ್ದಾರೆ. 74 ರ ಪ್ರಾಯದಲ್ಲೂ 24 ರ ಹೋರಾಟದ ಉತ್ಸಾಹವನ್ನು ಹಾಗೆಯೇ ಉಳಿಸಿಕೊಂಡಿದ್ದಾರೆ.

ದೇವನೂರು ಮಹಾದೇವ. ಕರ್ನಾಟಕದಲ್ಲಿ ಎಲ್ಲರಿಗೂ ಚಿರ ಪರಿಚಿತ ಹೆಸರು. ತಮ್ಮದೇ ವಿಶಿಷ್ಟ ಗ್ರಾಮೀಣ ಸೊಗಡಿನ ಭಾಷೆಯನ್ನು ಕನ್ನಡ ಸಾಹಿತ್ಯಕ್ಕೆ ಪರಿಚಯಿಸಿಕೊಟ್ಟವರು. ಕುಸುಮಬಾಲೆ, ಒಡಲಾಳ, ದ್ಯಾವನೂರು, ಅಮಾಸ ಹೀಗೆ ದೇವನೂರು ಸಾಹಿತ್ಯಿಕವಾಗಿ ಹಳ್ಳಿಯ ದೊಡ್ಡ ಆಲದ ಮರ. ದೇವನೂರು ಮಹದೇವ ಅವರ ಸಾಹಿತ್ಯ ಮತ್ತು ವ್ಯಕ್ತಿತ್ವ ಎರಡರಲ್ಲೂ ಕಾಣುವ ಗುಣ ಪ್ರತಿಭಟನೆ ಮತ್ತು ಸಾಹಿತ್ಯವನ್ನು ಸಮಾಜದಿಂದ ಬೇರ್ಪಡಿಸಿ ನೋಡಲು ಸಾಧ್ಯವಿಲ್ಲ ಎನ್ನುವ ಕಳಕಳಿ. ಅವರ ಬದುಕೂ ಹಾಗೆ ಒಂದಿಲ್ಲೊಂದು ಹೋರಾಟಗಳು ಒಟ್ಟೂ ಮೊತ್ತವೇ. ಆದರೆ ದೇವನೂರು ಮಹದೇವ ಅವರ ನಿಲುವು ಕನ್ನಡದ ಬಹುತೇಕ ಸಾಹಿತಿಗಳಲ್ಲಿ ಕಾಣಿಸುವುದಿಲ್ಲ. ನಮ್ಮಲ್ಲಿಯ ಚಿಂತಕರು ಸಾಹಿತಿಗಳು ಶುದ್ಧ ಸಾಹಿತ್ಯವೆಂದು ಸಮಾಜದಲ್ಲಿನ ಕ್ರೌರ್ಯಗಳೆಲ್ಲವನ್ನು ಸೋಸಿ ಸುಂದರವಾದದ್ದನ್ನು ಮಾತ್ರ ಬರೆಯುವ ಜಾಯಮಾನವನ್ನು ರೂಢಿಸಿಕೊಂಡ ಹೊತ್ತಲ್ಲಿ ದೇವನೂರು ಮಹಾದೇವ ಕೇವಲ ಸಾಹಿತಿಯಾಗಲ್ಲದೇ ಸಮಾಜದ ಸಾಕ್ಷಿಪ್ರಜ್ಞೆಯಾಗಿ ಮತ್ತು ಪ್ರಜಾಪ್ರಭುತ್ವದ ಸಾಕ್ಷಿ ಪ್ರಜ್ಞೆಯಾಗಿ ನಿಲ್ಲುತ್ತಾರೆ.

ಜಯಪ್ರಕಾಶ್‌ ನಾರಾಯಣರು ಆರಂಭಿಸಿದ ಜೆಪಿ ಚಳುವಳಿಯಿಂದ ಹಿಡಿದು, ದಲಿತ ಸಂಘರ್ಷ ಸಮಿತಿಯ ಮೂಲಕ ಹೋರಾಟ, ರೈತ ಸಂಘದ ಹೋರಾಟ, ಬದನವಾಳು ಸತ್ಯಾಗ್ರಹ ಹೀಗೆ ದೇವನೂರು ಮಹಾದೇವ ಸದಾ ಒಂದಿಲ್ಲೊಂದು ಹೋರಾಟದಲ್ಲಿ ತಮ್ಮನ್ನು ತೊಡಗಿಸಿಕೊಂಡು ಬಂದಿದ್ದಾರೆ. ಇತ್ತೀಚಿನ ದಿನಗಳಲ್ಲಿ ವಯೋಸಹಜ ಆಯಸ್ಸು ಸುಸ್ತುಗಳನ್ನು ಬದಿಗೊತ್ತಿ ಕೇಂದ್ರ ಸರ್ಕಾರದ ದಮನಕಾರಿ ಸಿಎಎ, ರೈತ ಹೋರಾಟ ಮುಂತಾದ ಕಾನೂನುಗಳ ವಿರುದ್ಧದ ಹೋರಾಟದಲ್ಲಿ ಕೂಡ ಭಾಗವಹಿಸುತ್ತಿದ್ದಾರೆ. ಅವಿರತವಾಗಿ ಸರ್ಕಾರದ ವಿರುದ್ಧ ಅಂಕಣಗಳನ್ನು ಬರೆಯುತ್ತಿದ್ದಾರೆ. ಈ ಹೊತ್ತಿನಲ್ಲಿ ಅವರ ಕೆಲವು ಹೊಳಹುಗಳು ನಮಗೆ ಅತ್ಯಂತ ಅಗತ್ಯ. ನಮ್ಮಲ್ಲಿನ ಪ್ರಶ್ನಿಸುವ ಗುಣವನ್ನು ಜೀವಂತವಾಗಿಟ್ಟುಕೊಳ್ಳಬೇಕಾದರೆ ದೇವನೂರು ಮಹಾದೇವ ಅವರ ಬರಹ ಮತ್ತು ಬದುಕನ್ನು ಹೊಸ ಪೀಳಿಗೆ ಓದಿ ಅರ್ಥೈಸಿಕೊಳ್ಳಬೇಕು. ಇಲ್ಲವಾದಲ್ಲಿ ಅನುಭವ ಮತ್ತು ಜ್ಞಾನದ ಅಂತಃಸತ್ವವಿಲ್ಲದೇ ಸಣ್ಣ ಗಾಳಿ ಮಳೆಗೆ ಬುಡಮೇಲಾಗುವ ಸಂದರ್ಭ ನಮ್ಮ ಮುಂದಿದೆ. ನಮ್ಮೆಲ್ಲರ ಅಸ್ಮಿತೆಯ ಸಾಕ್ಷಿಪ್ರಜ್ಞೆಯಂತಿರುವ ದೇವನೂರು ಮಹಾದೇವ ಅವರ ಲೇಖನದ ಕೆಲವು ತುಣುಕುಗಳು ಮತ್ತು ಅವರು ಹೇಳಿದ ಘಟನೆಗಳು ನಮ್ಮನ್ನು ವಿಚಾರಕ್ಕೆ ಹಚ್ಚಬಹುದು.

“ಭಾರತಕ್ಕೆ ಗಣತಂತ್ರ ಬಂದು ಅರವತ್ಮೂರು ವರ್ಷಗಳಾದವು, ನೀವು ಕುಸುಮಬಾಲೆ ಬರೆದು ಮೂವತ್ತು ವರ್ಷ, ಲಂಕೇಶರು ತೀರಿಹೋಗಿ ಹದಿಮೂರು ವರ್ಷಗಳು. ಹೀಗೆ ವರ್ಷಗಳನ್ನು ನೆನೆನೆನೆದುಕೊಂಡು ನಾವೆಷ್ಟು ದಿನ ಕಾಲ ಕಳೆಯುವುದು? ಇಲ್ಲಿನ ಬಡತನ, ಇಲ್ಲಿನ ಜೀತ, ಇಲ್ಲಿನ ಖದೀಮತನ ಬರೀ ಇವನ್ನೇ ನೆನೆಸಿಕೊಂಡು ಎಷ್ಟು ಅಂತ ಮರುಗುವುದು? ಈ ದೇಶ, ಇಲ್ಲಿನ ಜನ, ಇಲ್ಲಿನ ಖುಷಿ, ಈ ಬಣ್ಣ, ಈ ಮಕ್ಕಳ ನಗು, ಇಲ್ಲಿನ ಕಥೆಗಳು ಇವನ್ನೆಲ್ಲ ನಾವು ಹೇಗೆ ಬರೆಯದಿರುವುದು?’ ಎಂದು ದೇವನೂರು ಮಹದೇವವರನ್ನು ಯಾರಾದರೂ ಕೇಳಿದರೆ ಅವರು ಹೇಳುವ ಮಾತು.‘ ನಿಮ್ಮ ನಿಮ್ಮ ಕನಸು ಮತ್ತು ಭ್ರಮೆಗಳಲ್ಲಿ ಮುಳುಗಲು ನೀವು ಸ್ವತಂತ್ರರು. ಆದರೆ ನಾನು ಪ್ರೀತಿ, ಸಮಾನತೆ ಹಾಗೂ ಸಹನೆಗಳನ್ನು ಹುಡುಕುತ್ತಾ ಇದುವರೆತನಕ ಬದುಕಿ ಬಂದವನು. ಅವು ಈ ತನಕ ಈ ದೇಶದಲ್ಲಿ ನನಗೆ ಕಂಡುಬಂದಿಲ್ಲ. ಹಾಗಾಗಿ ಈ ಬೇಸರದಲ್ಲಿ ಬದುಕಲೂ ನಾನು ಸ್ವತಂತ್ರನು’ ಎಂದು ಅವರು ಉತ್ತರಿಸುತ್ತಾರೆ. ಸದಾ ಚಿಂತಿತರಾಗಿ, ವಿಷಾದದಿಂದಲೇ ಇರುವ ದೇವನೂರು ಮಹದೇವ ನಕ್ಕಿದ್ದು ಅತ್ಯಂತ ಕಡಿಮೆ.

ಜಾತೀಯ ಅಸಮಾನತೆಗಳು ಮತ್ತು ನಮ್ಮ ಸಮಾಜದ ಹೊಂದಾಣಿಕೆಗಳ ಕುರಿತು ದೇವನೂರು ಮಹಾದೇವ ಅವರಿಗಿರುವ ಸ್ಪಷ್ಟತೆ ಬಹಳ ದೊಡ್ಡದು. ಅವರು ಸಮಾಜ ಹೇಗೆ ಜಾತಿಪದ್ದತಿಗೆ ಹೊಂದಿಕೊಂಡಿದೆ ಎಂಬುದನ್ನು ತಮ್ಮ ಜೀವನದ ಒಂದು ಅನುಭವದ ಮೂಲಕ ಹೇಳುತ್ತಾರೆ.
“‘ಈಗ ನೋಡಿ ನಮ್ಮ ಹಳ್ಳಿ. ಅಲ್ಲಿ ಎಲ್ಲಿಯವರೆಗೆ ಸಮಾನತೆ ಇರಬೇಕು ಅಂತ ಎಚ್ಚರ ಇರೋದಿಲ್ಲವೋ ಅಲ್ಲಿವರೆಗೆ ಸಾಮರಸ್ಯ ಇರುತ್ತದೆ. ಯಾವಾಗ ಎಲ್ಲರೂ ಸಮಾನರು ಅಂತ ಹೊರಡ್ತೀವೋ ಆವಾಗ ಅಲ್ಲಿ ಸಾಮರಸ್ಯ ಕೆಡ್ತದೆ. ಇದು ಇಂಡಿಯಾದ ವಿಚಿತ್ರವಾದ ಸಂಕೀರ್ಣತೆ. ನಾವು ಡಿ ಎಸ್ ಎಸ್ ನಿಂದ ಹಳ್ಳಿ ಕಡೆ ಹೊರಟಾಗ ಇವರೆಲ್ಲ ಊರನ್ನ ವಿಘಟಿಸಕ್ಕೆ ಹೊರಟಿದ್ದಾರೆ ಅನ್ನುವ ಆರೋಪಕ್ಕೆ ಒಳಗಾದೆವು. ಊರಲ್ಲಿ ಜಗಳ ತಂದು ಹಾಕಕ್ಕೆ ಬರ್ತಾ ಇದೀರಿ ಅಂದ್ರು. ಏಕೆಂದ್ರೆ ಅವರ ನ್ಯಾಯವೇ ಬೇರೆ, ನಾವು ಕೇಳ್ತಿರೋ ನ್ಯಾಯವೇ ಬೇರೆ. ಈ ತರಹ ಬೇರೆ ಬೇರೆ ನ್ಯಾಯಗಳು ಇರೋದು ನಮ್ಮ ದೇಶದಲ್ಲಿ ಮಾತ್ರ ಕಾಣುತ್ತೆ.’ ಎಂದು ಅಸಮಾನತೆಯನ್ನೇ ಸಾಮರಸ್ಯ ಎಂದು ಬದುಕುತ್ತಿರುವ ನಮ್ಮ ಸಮಾಜ ವ್ಯವಸ್ಥೆ ಬಗ್ಗೆ ದೇವನೂರು ಮಹಾದೇವ ಅವರು ಈ ರೀತಿಯಾಗಿ ಹೇಳುತ್ತಾರೆ.

ಅವರ ಜೀವನದ ಒಂದು ಸ್ವಾರಸ್ಯದ ಘಟನೆ ಮೂಲಕ ಅದನ್ನು ಹೀಗೆ ವಿವರಿಸುತ್ತಾರೆ
“ಯಾವ ಕಾರಣಕ್ಕೆ ಜಾತಿ ಪದ್ಧತಿ ಆಯ್ತೋ, ಯಾವ ಕಾರಣಕ್ಕೆ ಅಸ್ಪ್ರಶ್ಯತೆ ಬಂತೋ ನಮಗೆ ಗೊತ್ತಿಲ್ಲ. ನೂರೆಂಟು ಕಾರಣ ಇರಬಹುದು ಆದರೆ ಅಸ್ಪ್ರಶ್ಯತೆಗೆ ಒಳಗಾದವನೂ ಅದನ್ನು ರೂಡಿಗತ ಮಾಡಿಕೊಂಡು ಹೋದ. ಅದನ್ನು ಆಚರಿಸುವವನೂ ರೂಡಿಗತ ಮಾಡಿಕೊಂಡು ಹೋದ’

ʼಮರಿಸ್ವಾಮಿ ಅಂತ ಒಬ್ರು ಇದ್ರು. ಅವರು ಹಿಂದಿ ಪ್ರೊಫೆಸರ್ ಆಗಿದ್ರು. ಕೊನೆಗೆ ಬೌದ್ಧ ಬಿಕ್ಷುವಾಗಿ ತೀರಿಕೊಂಡ್ರು. ಅವರು ಪ್ರೈಮರಿ ಸ್ಕೂಲಲ್ಲಿ ಮೇಷ್ಟರಾಗಿದ್ದಾಗ ಯಾರದೋ ಜಗುಲಿಯಲ್ಲಿ ಕೂತು ಬಸ್ಸಿಗೆ ಕಾಯ್ತಾ ಇದ್ರು. ಯಾರದೋ ಮೇಲುಜಾತಿಯವರ ಜಗುಲಿ. ಆ ಮನೆಯ ಯಜಮಾನನಿಗೆ ಸ್ವಲ್ಪ ಕಣ್ಣು ಕಾಣಿಸ್ತಿರ್ಲಿಲ್ಲ. ಇವರು ಬಿಳಿ ಬಟ್ಟೆ ಹಾಕಿಕೊಂಡು ಕೂತಿರ್ತಾರೆ.

‘ಯಾರೋ ಅಲ್ಲಿ ಕೂತಿರೋನು?’ ಅಂತ ಆ ಯಜಮಾನ ಮಗನಲ್ಲಿ ಕೇಳ್ತಾನೆ. ಅದಕ್ಕೆ ಆ ಮಗ ಹೇಳ್ತಾನೆ, ‘ ಅದು ಮೇಷ್ಟ್ರು ಅಪ್ಪಾ.. ಅದೇ ಹೆಂಡ ಮಾರ್ತಾರಲ್ಲ ಮಾರಯ್ಯ ಅಂತ ಅವರ ಮಗ’ ಅಂತ.

‘ಏನು? ನಮ್ಮ ಮನೆ ಮುಂದೆ ಕೂತಿದಾನಾ? ಎದ್ದು ಹೋಗು ಅಂತ ಅನ್ನು’ ಅಂತ ಅಪ್ಪ ಕೂಗು ಹಾಕ್ತಾನೆ.

‘ಪಾಪ ಮರಿಸ್ವಾಮಿ, ಅಯ್ಯೋ ನಮ್ಮ ಹಣೆಬರಹ ಇಷ್ಟೇ ಅಂತ ಎದ್ದು ಬರ್ತಾರೆ.“

‘ಆಮೇಲೆ ಇನ್ನೊಮ್ಮೆ ಇನ್ನೊಂದು ಮೇಲುಜಾತಿಯ ಅವರ ಸಹೋದ್ಯೋಗಿ ಗೆಳೆಯರೊಬ್ಬರು ಅವರನ್ನ ಮನೆಗೆ ಊಟಕ್ಕೆ ಕರ್ಕೊಂಡು ಹೋಗ್ತಾರೆ. ಹಜಾರದಲ್ಲಿ ಎಲೆ ಹಾಕಿ ಊಟಕ್ಕೆ ಬಡಿಸ್ತಾರೆ. ಊಟಮಾಡಿದ ಮೇಲೆ ಅವ್ರಿಗೆ ಒಂದು ಅನುಮಾನ ಬರುತ್ತೆ. ಎಲೆ ಎತ್ಬೇಕೋ ಬೇಡವೋ ಅಂತ ಸುಮ್ನೆ ನೋಡ್ತಿರ್ತಾರೆ. ಅದಕ್ಕೆ ಆ ಮೇಷ್ಟ್ರ ಅಣ್ಣ,‘ ರೀ ಮೇಷ್ಟ್ರೇ,ನಿಮಗೆ ಊಟ ಹಾಕೋದಲ್ದೇನೇ ಎಲೇನೂ ಎತ್ಬೇಕೇ? ತಗೊಂಡು ಎದ್ದೇಳಯ್ಯಾ’ ಅಂತ ಬಹುವಚನದಲ್ಲಿ ಶುರು ಮಾಡಿ ಏಕವಚನದಲ್ಲಿ ಮುಗಿಸ್ತಾರೆ.

“ಆಮೇಲೆ ಮರಿಸ್ವಾಮಿಯವರು ಚಿಕ್ಕಮಗಳೂರಿಗೆ ಬರ್ತಾರೆ. ಅಲ್ಲಿ ಡಿ ಎಸ್ ಎಸ್, ತೇಜಸ್ವಿ, ಆರೆಸ್ಸೆಸ್ ಹೀಗೆ ಎಲ್ರೂ ಪರಿಚಯ ಆಗ್ತಾರೆ. ಎಲ್ರೂ ಸಮಾನರು ಅಂತಾರಲ್ಲಾ ಅಂತ ಆರೆಸ್ಸೆಸ್ಸಿಗೂ ಸೇರ್ತಾರೆ.

ಅದ್ರೆ ಎಲ್ರೂ ಸಮಾನ ಅನ್ನೋವವರು ಸುಳ್ಳು ಹೇಳ್ತಿದಾರೆ ಅಂತ ಗೊತ್ತಾದಾಗ ಅಲ್ಲಿಂದ್ಲೂ ವಾಪಾಸು ಬರ್ತಾರೆ.

‘ಅಂಬೇಡ್ಕರ್ ಪುಸ್ತಕ ಓದ್ತಾರೆ, ಕೊನೆಗೆ ಅವರು ಒಂದು ಮಾತು ಹೇಳ್ತಾರೆ ‘ಆವಾಗ್ಲೆ ನಂಗೆ ಅಸ್ಪ್ರಶ್ಯತೆ ಅಂದ್ರೆ ಗಾಯಾಂತ ಗೊತ್ತಾಗಿದ್ದು’ ಅಂತ.

‘ಅಲ್ಲಿವರೆಗೂ ನಂಗೆ ಗಾಯ ಗಾಯ ಅಂತಾನೇ ಅನಿಸ್ತಿರಲಿಲ್ಲ’ ಅಂತ ಹೇಳ್ತಾರೆ.

ಇನ್ನೊಂದು ಘಟನೆಯ ಮೂಲಕ ದೇವನೂರು ಜಾತಿ ವ್ಯವಸ್ಥೆಯನ್ನು ತಿರಸ್ಕರಿಸುವುದಕ್ಕಿಂತ ಅದರ ವಿರುದ್ಧ ಪ್ರತಿಭಟಿಸಬೇಕು ಎಂದು ಕರೆ ಕೊಡುತ್ತಾರೆ. ದಲಿತರ ದೇವಾಲಯದ ಪ್ರವೇಶ, ಹೊಟೇಲುಗಳ ಪ್ರವೇಶ, ದಲಿತರ ಮನೆಯಲ್ಲಿ ಮುಖ್ಯಮಂತ್ರಿ, ಅಧಿಕಾರಿಗಳ ವಾಸ್ತವ್ಯದ ಪ್ರಹಸನಗಳು ನಡೆಯುವ ಈ ಕಾಲದಲ್ಲಿ ದೇವನೂರು ಮಹದೇವ ಹೇಳಿದ ಈ ಘಟನೆ ಅತ್ಯಂತ ಮುಖ್ಯ ಅನಿಸುತ್ತದೆ.

ನೋಡಿ ಗಣರಾಜ್ಯ ಸುಂದರವಾಗಿದೆ ಅಂತ ನಿಮಗೆಲ್ಲಾ ಅನಿಸುವ ಸಲುವಾಗಿ ಅಸ್ಪ್ರಶ್ಯತೆಯನ್ನು ಅಸ್ಪ್ರಶ್ಯತೆಯಲ್ಲ ಎಂದು ನಾವು ಅಂದುಕೊಂಡು ಬದುಕಬೇಕು, ನಮಗೆ ಅದು ಅಸ್ಪ್ರಶ್ಯತೆ ಅಂತ ಅನಿಸಿದ ತಕ್ಷಣ ನಿಮ್ಮ ಸಾಮರಸ್ಯ ಕೆಡುತ್ತದೆ. ಇದನ್ನು ನೀವು ಹೆಂಗೆ ಬ್ಯಾಲೆನ್ಸ್ ಮಾಡ್ತೀರಾ? ಎಂಬ ಪ್ರಶ್ನೆಯನ್ನು ನಮ್ಮ ಮುಂದಿಡುತ್ತ ದೇವನೂರು ಮಹಾದೇವ ಈ ಕೆಳಗಿನ ಘಟನೆಯನ್ನು ಹೀಗೆ ವಿವರಿಸುತ್ತಾರೆ.

ಹಿಂದೆ ಒಂದು ಸಲ ನಾನು, ಅನಂತಮೂರ್ತಿ ಮತ್ತು ಆಲನಹಳ್ಳಿ ಕೃಷ್ಣ ಹುಣಸೂರು ಹತ್ತಿರದ ಬಿಳಿಕೆರೆ ಎನ್ನುವ ಹಳ್ಳಿಗೆ ಹೋಗಿದ್ದೆವು.. ಅಲ್ಲೊಂದು ಜಾತಿ ಜಗಳವಾಗಿತ್ತು. ಕುಂಬಾರರ ಹೋಟಲ್ಲಿಗೆ ದಲಿತರಿಗೆ ಪ್ರವೇಶವಿಲ್ಲ ಅನ್ನುವುದು ಜಗಳಕ್ಕೆ ಕಾರಣ. ಅಲ್ಲಿ ಹೋಗಿ ನೋಡಿದರೆ ಆ ಹೋಟಲ್ಲು ಹೋಟಲ್ಲಿನ ತರಹ ಇಲ್ಲದೆ ನೊಣಗಳು ಮುತ್ತಿಕೊಂಡು ತುಂಬಾ ಗಲೀಜಾಗಿತ್ತು.
ಅದನ್ನು ನೋಡಿದ ಆಲನಹಳ್ಳಿ ಕೃಷ್ಣ, ‘ಅಲ್ಲ ಮಾದೇವ ಈ ಗಲೀಜು ಹೋಟಲ್ಲಿಗೆ ದಲಿತರು ಹೋಗದಿರುವುದೇ ಒಳ್ಳೆಯದಲ್ಲವಾ?’ ಅಂದರು. ಅದಕ್ಕೆ ನಾನು ‘ಅಲ್ಲ ಕೃಷ್ಣಾ, ನಾವು ಎಂಟ್ರಿ ಕೇಳುತ್ತಿರುವುದು ಹೋಟಲ್ಲಿನೊಳಕ್ಕೆ ಅಲ್ಲ. ಮನಸ್ಸಿನ ಒಳಕ್ಕೆ ಎಂದೆ”

ಕೊನೆಯಲ್ಲಿ ದೇವನೂರು ಮಹಾದೇವ ಎತ್ತಿದ ಪ್ರಶ್ನೆ ಇಂದಿಗೂ ನಮ್ಮನ್ನು ಕಾಡುತ್ತದೆ. ನಾವು ಸಂವಿಧಾನದ ಮೂಲಕ, ಕಾನೂನಿನ ಮೂಲಕ ಎಲ್ಲವನ್ನೂ ಸರಿಪಡಿಸಲು ಸಾಧ್ಯವಿದೆಯೇ? ಇಂದಿಗೂ ದಲಿತರಿಗೆ ಹಿಂದುಳಿದವರಿಗೆ ನಗರಗಳಲ್ಲಿ ಮನೆಗಳನ್ನು ಬಾಡಿಗೆಗೆ ನೀಡಲಾಗುತ್ತಿದೆಯೇ? ಶೋಷಣೆಯ ಸ್ವರೂಪಗಳು ಬದಲಾದ ಮಾತ್ರಕ್ಕೆ ಶೋಷಣೆಯನ್ನು ಒಪ್ಪಲು ಸಾಧ್ಯವೇ.. ದೇವನೂರು ಹೇಳಿದಂತೆ ನಮ್ಮೆಲ್ಲರ ಮನಸ್ಸಿನೊಳಗೆ ಈ ವಿಚಾರಗಳು ಪ್ರವೇಶಿಸಲು, ಸಮಾಜದ ಎಲ್ಲರೂ ಸಮಾನರು ಎಂಬ ನಾಗರಿಕತೆಯ ಮೊದಲ ಪಾಠ ನಮ್ಮದಾಗಲು ಇನ್ನೆಷ್ಟು ಕಾಲಬೇಕು?

73 ತುಂಬಿ 74 ಕ್ಕೆ ಕಾಲಿಡುತ್ತಿರುವ ದೇವನೂರು ಮಹಾದೇವ ಅವರ ಬತ್ತದ ಹೋರಾಟದ ಉತ್ಸಾಹ ಹೀಗೆ ಮುಂದುವರೆಯಲಿ. ಅವರ ವಿಚಾರಗಳಲ್ಲಿ ಒಂದಷ್ಟು ನಮ್ಮ ಮನಸ್ಸಿಗೆ ಮುಟ್ಟಲಿ. ಎದೆಗೆ ಬಿದ್ದ ಅಕ್ಷರ, ಭೂಮಿಗೆ ಬಿದ್ದ ಬೀಜ ಹುಸಿ ಹೋಗುವುದಿಲ್ಲ ಎಂಬ ದೇವನೂರು ಅವರ ಸಾಲುಗಳು ಸುಳ್ಳಾಗದಿರಲಿ. ʼಸಂಬಂಜ ಎಂಬೊದು ದೊಡ್ಡದು ಕಣಾʼ ಎಂಬಂತೆ ನಾವೆಲ್ಲರೂ ಒಬ್ಬರಿಗೊಬ್ಬರು ಸಂಬಂಧಿಗಳಾಗಿ ಈ ಕಷ್ಟದ ಕಾಲವನ್ನು ದಾಟಿ ಮುಂದಕ್ಕೆ ಹೊರಡಬೇಕಿದೆ.

ಸಂಗ್ರಹ ಬರಹ: ರಾಜೇಶ್ ಹೆಬ್ಬಾರ್


ಇದನ್ನೂ ಓದಿ: ಪೋಲಿ ಕಥೆಗೆ ಬಹುಮಾನ ಬಂದ ಕತೆ: ದೇವನೂರು ಮಹಾದೇವರ ಮಾತಲ್ಲಿ ಕೇಳಿ…

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
+ posts

LEAVE A REPLY

Please enter your comment!
Please enter your name here