Homeಚಳವಳಿನೈಸರ್ಗಿಕ ಕೃಷಿ ಸಂವಾದ: ಕೃಷಿಯ ಅಸ್ಮಿತೆ ಉಳಿಸಬೇಕಾಗಿದೆ ಬದಲಿಗೆ ಕೃಷಿ ವಿ.ವಿಗಳದಲ್ಲ...

ನೈಸರ್ಗಿಕ ಕೃಷಿ ಸಂವಾದ: ಕೃಷಿಯ ಅಸ್ಮಿತೆ ಉಳಿಸಬೇಕಾಗಿದೆ ಬದಲಿಗೆ ಕೃಷಿ ವಿ.ವಿಗಳದಲ್ಲ…

- Advertisement -
- Advertisement -

ಕಳೆದ ಜುಲೈನಲ್ಲಿ ಕೇಂದ್ರ ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಮಂಡಿಸಿದ ಕೇಂದ್ರ ಬಜೆಟ್ ನಲ್ಲಿ ರೈತರ ಆದಾಯವನ್ನು ದ್ವಿಗುಣಗೊಳಿಸಲು “ಶೂನ್ಯ ಬಂಡವಾಳದ (ನೈಸರ್ಗಿಕ) ಕೃಷಿ” ಯನ್ನು ಉತ್ತೇಜಿಸುವುದಾಗಿ ಉಲ್ಲೇಖಿಸಿದ್ದರು. ಇದಕ್ಕೂ ಮುಂಚೆಯೇ ಕರ್ನಾಟಕ ವೂ ಸೇರಿದಂತೆ ಆಂಧ್ರ ಪ್ರದೇಶ, ಛತ್ತೀಸ್ ಘಡ, ಹಿಮಾಚಲ ಪ್ರದೇಶ ಮತ್ತು ಮಣಿಪುರ ರಾಜ್ಯಗಳಲ್ಲೂ ಈ ಕೃಷಿ ಪದ್ದತಿಯನ್ನು  ಪ್ರೋತ್ಸಾಹಿಸುವ ಕಾರ್ಯಕ್ರಮಗಳನ್ನು ಆಯಾಯ ರಾಜ್ಯ ಸರ್ಕಾರಗಳು ಹಮ್ಮಿಕೊಂಡಿವೆ. ಈ ನಡುವೆ ನೈಸರ್ಗಿಕ ಕೃಷಿ ಪದ್ಧತಿಯ ಬಗ್ಗೆ ಅನೇಕ ಕೃಷಿ ಪಂಡಿತರು, ವಿಜ್ಞಾನಿಗಳು, ರೈತಪರ ಚಿಂತಕರು ಕೃಷಿ ವಿಶ್ಲೇಷಕರು ಒಳಗೊಂಡಂತೆ ರಾಷ್ಟ್ರವ್ಯಾಪಿ ಚರ್ಚೆ ನಡೆದಿದೆ. ಕಳೆದ ವಾರ ರಮೇಶ್ ಮುಳಬಾಗಿಲುರವರು ಬರೆದ ‘ನೈಸರ್ಗಿಕ ಕೃಷಿಯೊಳಗಿನ ಬಲಪಂಥೀಯ ವಾದ’ ಲೇಖನಕ್ಕೆ ಚುಕ್ಕು ನಂಜುಡಸ್ವಾಮಿಯವರು ಪ್ರತಿಕ್ರಿಯೆ ನೀಡಿದ್ದಾರೆ.

‘ಶೂನ್ಯ ಬಂಡವಾಳ’- ನೈಸರ್ಗಿಕ ಕೃಷಿಯನ್ನು ವಿಮರ್ಶೆ ಮಾಡುತ್ತಿರುವ ಅನೇಕ ಕೃಷಿ ತಜ್ಞರಿಗೆ ನೈಸರ್ಗಿಕ ಕೃಷಿ ಬಗ್ಗೆ ಅನೇಕ ಅನುಮಾನಗಳು ಇದ್ದಂತಿವೆ. ಯಾವ ಬಂಡವಾಳವೂ ಹೂಡದ ಕೃಷಿ ಸಾಧ್ಯವೇ? ಈ ಪದ್ದತಿಯಿಂದ ದೇಶದ 130 ಕೋಟಿ ಜನರ ಹೊಟ್ಟೆ ತುಂಬಿಸಲು ಸಾಧ್ಯವೇ? ದೇಶದ ಎಲ್ಲ ಹವಾಮಾನ ವಲಯಗಳಲ್ಲಿ ಇದನ್ನು ಅಳವಡಿಸಲು ಸಾಧ್ಯವೇ. ಈ ಪದ್ಧತಿಯು ಕೃಷಿ ವಿಶ್ವ ವಿದ್ಯಾಲಯಗಳ ಮಾನ್ಯತೆ ಪಡೆದಿದೆಯೇ ಎಂಬ ಪ್ರಶ್ನೆಗಳನ್ನು ಎತ್ತಿದ್ದಾರೆ. ಈ ಕೃಷಿ ಪದ್ಧತಿಯನ್ನು ಸಂಶೋಧನೆಗೆ ಒಳಪಡಿಸಿ ಪರೀಕ್ಷಿಸಬೇಕೆಂದು ಇನ್ನು ಕೆಲವರು ಅಭಿಪ್ರಾಯಪಟ್ಟಿದ್ದಾರೆ.

ಈ ದೇಶದ ಬಹು ಸಂಖ್ಯಾತರ ಭೂಮಿ ಮತ್ತು ಬದುಕನ್ನು ಜೋಪಾನ ಮಾಡುವ ಜವಾಬ್ದಾರಿಯನ್ನು ನಮ್ಮ ಕೃಷಿ ವಿಶ್ವವಿದ್ಯಾಲಯಗಳಿಗೆ ಕೊಡಲಾಗಿತ್ತು. ಆದರೆ ನಮಗೆ ಎದುರಾಗಿದ್ದ ಸವಾಲುಗಳಿಗೆ ನಮ್ಮಲ್ಲೇ ಉತ್ತರ ಹುಡಕುವ ಗೋಜಿಗೆ ಹೋಗಲಿಲ್ಲ ಈ ವಿಶ್ವವಿದ್ಯಾಲಯಗಳು. ಪಾಶ್ಚಿಮಾತ್ಯ ದೇಶಗಳಿಂದ ಎರವಲು ಪಡೆದ ‘ಹಸಿರು ಕ್ರಾಂತಿ’ಯನ್ನು ಪ್ರಚುರಪಡಿಸಿದ್ದಷ್ಟೇ ಇವುಗಳ ಸಾಧನೆಯಾಯಿತು.

ಹಸಿರು ಕ್ರಾಂತಿಯ ನಂತರ ಭಾರತ ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಿತು ಎನ್ನುವುದೇನೋ ಸತ್ಯ. ಎರಡನೇ ಮಹಾಯುದ್ಧದ ನಂತರ ಶಸ್ತ್ರಾಸ್ತ್ರಗಳಿಗೆ ರಾಸಾಯನಿಕಗಳನ್ನು ತಯಾರಿಸುತ್ತಿದ್ದ ಕಂಪೆನಿಗಳಿಗೆ ಮಾರುಕಟ್ಟೆ ಇಲ್ಲದಂತಾಗಿತ್ತು. ಕೃಷಿ ಸಾಧನ ಸಲಕರಣೆಗಳು- ಬೀಜ ಗೊಬ್ಬರ ಕೀಟನಾಶಕಗಳ ತಯಾರಿಕೆಯಲ್ಲಿ ತಮ್ಮ ವ್ಯಾಪಾರವನ್ನು ಮುಂದುವರೆಸಲು ಈ ಎಲ್ಲ ಕಂಪೆನಿಗಳಿಗೆ ಹಸಿರು ಕ್ರಾಂತಿಯೇ ರತ್ನಗಂಬಳಿ ಹಾಸಿಕೊಟ್ಟಿತು ಎಂಬುದೂ ಅಷ್ಟೇ ಸತ್ಯ.

ಹಸಿರು ಕ್ರಾಂತಿಗೂ ಮುಂಚೆ ಭಾರತದ ಕೃಷಿ ಬದುಕಿನ ಭಾಗವಾಗಿತ್ತು. ಸಂಸ್ಕೃತಿಯ ನೆಲೆಯಾಗಿತ್ತು. ನಿಸರ್ಗದಲ್ಲಿರುವ ವೈವಿಧ್ಯತೆಯನ್ನು ಆರಾಧಿಸಿ ನಮ್ಮ ಹಿರಿಯರು ಮಾಡುತ್ತಿದ್ದುದು ಮಿಶ್ರ ಬೆಳೆ ಪದ್ಧತಿ. ಕರ್ನಾಟಕದಲ್ಲಿ ಅಕ್ಕಡಿ ಎಂದು ಕರೆದರೆ, ಉತ್ತರ ಭಾರತದಲ್ಲಿ `ಬಾರಾ ಅನಾಜ್” (ಹನ್ನೆರಡು ದವಸ ಧಾನ್ಯ) ಎಂದು ಕರೆದರು. ಮನೆಯ ಆಹಾರ ಭದ್ರತೆಗೆ ಬೇಕಾದ ಧವಸ, ಧಾನ್ಯ, ಬೇಳೆಕಾಳುಗಳು, ಎಣ್ಣೆಬೀಜಗಳನ್ನು ಒಂದಕ್ಕೊಂದು ಹೊಂದುವಂತೆ ಬಿತ್ತಿ ಬೆಳೆಯುವ ಪದ್ಧತಿ ನಶಿಸುತ್ತ ಬಂದು ಅದರ ಜಾಗವನ್ನು ಕಾಲಕ್ರಮೇಣ ಏಕ ಬೆಳೆಯ ಪದ್ಧತಿಯು ಆವರಿಸಿಕೊಂಡಿತು. ನಮ್ಮಲ್ಲಿದ್ದ ಕೋಟ್ಯಾಂತರ ತಳಿಗಳು ಕಾಣೆಯಾದವು. ಹೆಚ್ಚು ಹೆಚ್ಚು ಬೆಳೆ ಬೆಳೆಯಲು ರಾಸಾಯನಿಕ ಗೊಬ್ಬರಗಳು-, ಕ್ರಿಮಿನಾಶಕಗಳನ್ನು ಮನೆ ಬಾಗಿಲಿಗೆ ತಂದುಕೊಟ್ಟರು. ಇವುಗಳನ್ನು ಸುರಿದು ಭೂಮಿ ಬಂಜರಾಯಿತು. ಎಕರೆಗಟ್ಟಲೆ ಭೂಮಿಯಲ್ಲಿ ರೈತರು ಕಬ್ಬು, ಭತ್ತ, ಹತ್ತಿ, ಅಡಿಕೆಯಂತಹ ಬೆಳೆಗಳನ್ನು ಈ ದೇಶದ ಆಹಾರ ಸ್ವಾವಲಂಬನೆಗಾಗಿ ಬೆಳೆದರು. ಮಿಕ್ಕೆಲ್ಲದಕ್ಕೂ ಮಾರುಕಟ್ಟೆಯ ಮೊರೆ ಹೋಗುವಂತಾಯಿತು. ಆಹಾರದ ಉತ್ಪಾದನೆಯಲ್ಲಿ ದೇಶ ಸ್ವಾವಲಂಬಿಯಾಯಿತು. ರೈತ ತನ್ನ ಖುದ್ದು ಆಹಾರ ಭದ್ರತೆಗೆ ಪರಾವಲಂಬಿಯಾದ. ಬೇರೆಯವರಿಗೆ ಕೊಡುತ್ತಿದ್ದ ರೈತನ ಕೈ ಮೂರು ಕಾಸಿನ ಸಬ್ಸಿಡಿ ಬೇಡಿ ಚಾಚುವಂತಾಯಿತು. ಇದೆಲ್ಲದರ ಶ್ರೇಯಸ್ಸು ಈ ದೇಶದ ಕೃಷಿ ವಿಜ್ನಾನಿಗಳಿಗೇ ಸಲ್ಲಬೇಕು.

ಇದರ ನಡುವೆ ತೊಂಬತ್ತರ ದಶಕದಲ್ಲಿ ಮುಕ್ತ ಮಾರುಕಟ್ಟೆ ನೀತಿ ಜಾರಿಯಾಯಿತು ವಿದೇಶೀ ಕೃಷಿ ಉತ್ಪನ್ನಗಳು ಯಾವುದೇ ಆಮದು ಸುಂಕವಿಲ್ಲದೆ ಅಗ್ಗದ ದರದಲ್ಲಿ ದೇಶದೊಳಗೆ ಭಾರೀ ಪ್ರಮಾಣದಲ್ಲಿ ಸುರಿದವು. ನಮ್ಮ ದೇಶದ ರೈತರ ಗಾಯದ ಮೇಲೆ ಬರೆ ಎಳೆದವು. ನಮ್ಮ ಕೃಷಿ ಉತ್ಪನ್ನಗಳಿಗೆ ಮಾರುಕಟ್ಟೆ ಇಲ್ಲದಂತಾಯಿತು. ಇಂದಿಗೂ ಕೃಷಿ ಮಾರುಕಟ್ಟೆ ಜೂಜಾಟವಿದ್ದಂತೆ. ಯಾರು ಯಾವಾಗ ಬಾಜಿ ಕಟ್ಟುತ್ತಾರೋ ಯಾರಿಗೂ ತಿಳಿಯದು. ಇಂದಿಗೂ ಬೆಳೆಗಳ ಬೆಲೆ ರಕ್ಷಣೆಗೆ ಸಂಬಂಧಿಸಿದಂತೆ ಈ ದೇಶದಲ್ಲಿ ಯಾವ ಶಾಸನವೂ ಇಲ್ಲ. ಬೆಂಬಲ ಬೆಲೆ ನೀತಿಗಾಗಿ ಪ್ರತಿ ವರ್ಷ ನಡೆಯುವ ರೈತರ ಹೋರಾಟಗಳು ಮತ್ತು ಕೃಷಿ ಕ್ಷೇತ್ರದಲ್ಲಿ ನಡೆಯುತ್ತಿರುವ ಲಕ್ಷಾಂತರ ರೈತರ ಆತ್ಮಹತ್ಯೆಗಳು ನಮ್ಮ ಕಣ್ಮುಂದೆ ಇವೆ. ಭಾರತ ಸರ್ಕಾರದ ಕೃಷಿ ಮಂತ್ರಾಲಯದ ಅಂಕಿಅಂಶಗಳ ಪ್ರಕಾರ 1951ರಲ್ಲಿ ಭಾರತದಲ್ಲಿ ಒಕ್ಕಲುತನದಲ್ಲಿ ತೊಡಗಿದ್ದ ಜನಸಂಖ್ಯೆಯ ಒಟ್ಟು ಶೇಕಡಾ 69.7%. ಈ ಪ್ರಮಾಣ 2011 ರಲ್ಲಿ 54.6% ಕ್ಕೆ ಕುಸಿದಿದೆ.

ಇಷ್ಟೆಲ್ಲಾ ಆದರೂ ಸರ್ಕಾರಗಳೇ ಆಗಲಿ, ಕೃಷಿ ವಿಶ್ವವಿದ್ಯಾಲಯಗಳೇ ಆಗಲಿ, ಕೃಷಿ ಒಂದು ಗಂಭೀರ ಬಿಕ್ಕಟ್ಟಿಗೆ ಸಿಲುಕಿದೆಯೆಂದು ಗುರುತಿಸುವ ಕನಿಷ್ಠ ಕೆಲಸವನ್ನು ಕೂಡ ಮಾಡಲಿಲ್ಲ. ಕೃಷಿಯಲ್ಲಾಗುತ್ತಿದ್ದ ಅನ್ಯಾಯ, ಮೋಸಗಳ ಕುರಿತು ಕಣ್ಣು ಬಾಯಿ ಕಿವಿ ಮುಚ್ಚಿಕೊಂಡವು. ಇದೇ ಸಮಯದಲ್ಲಿ ಅನೇಕ ವರ್ಷಗಳ ಸಂಶೋಧನೆಗಳ ನಂತರ ಹಸಿರು ಕ್ರಾಂತಿಯಿಂದಾಗುತ್ತಿರುವ ದುಷ್ಪರಿಣಾಮಗಳ ಬಗ್ಗೆ ತಿಳಿ ಹೇಳುತ್ತಾ ನೈಸರ್ಗಿಕ ತತ್ವಗಳನ್ನಾಧರಿಸಿದ “ಶೂನ್ಯ ಬಂಡವಾಳದ ನೈಸರ್ಗಿಕ ಕೃಷಿ” ಎಂಬ ಹೆಸರಿನ ಒಂದು ಪರ್ಯಾಯವನ್ನು ದೇಶದ ರೈತರ ಮುಂದಿಟ್ಟವರು ಮಹಾರಾಷ್ಟ್ರದ ಶ್ರೀ.ಸುಭಾಷ್ ಪಾಳೇಕರ್ ರವರು.

ಸುಭಾಷ್ ಪಾಳೇಕಾರ್

ಇದಕ್ಕೂ ಮುಂಚೆ ನೈಸರ್ಗಿಕ ತತ್ವಗಳನ್ನಾಧರಿಸಿ ಮಾಡಬಹುದಾದ ಕೃಷಿಯನ್ನು “ಶೂನ್ಯ ಉಳುಮೆ ಕೃಷಿ” (Zero Tillage Farming) ಎಂಬ ಹೆಸರಿನ ಸಹಜ ಕೃಷಿಯನ್ನು ಜಗತ್ತಿಗೇ ಪರಿಚಯಿಸಿದ್ದು ಜಪಾನಿನ ಕೃಷಿ ಸಂತ ಮಸನೊಬು ಫುಕುವೊಕಾ. ಆನಂತರ ನಮ್ಮವರೇ ಆದ ತಮಿಳುನಾಡಿನ ಶ್ರೀಯುತ ನಮ್ಮಾಳವರ್, ಗ್ರಾಮೀಣ ಗಾಂಧೀ ಎಂದೇ ಹೆಸರುವಾಸಿಯಾಗಿದ್ದ ಶ್ರೀ.ಭಾಸ್ಕರ್ ಸಾವೆ ಹಾಗೂ ಇತ್ತೀಚೆಗೆ ನಮ್ಮನ್ನಗಲಿದ ನಾಡೋಜ ಡಾ.ನಾರಾಯಣರೆಡ್ಡಿಯವರು.

2002 ನೇ ಇಸವಿಯಲ್ಲಿ ಕರ್ನಾಟಕದ ರೈತ ಚಳವಳಿಯ ಹಿರಿಯ ಮುಖಂಡರಾಗಿದ್ದ ಶ್ರೀ.ಬಸವರಾಜ್ ತಂಬಾಕೆಯವರು ಶ್ರೀ. ಸುಭಾಷ್ ಪಾಳೇಕರ್ ರವರನ್ನು ಕರ್ನಾಟಕಕ್ಕೆ ಪರಿಚಯ ಮಾಡಿದರು. ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸುಭಾಷ್ ಪಾಳೇಕರರ ಅನೇಕ ತರಬೇತಿಗಳನ್ನು ಆಯೋಜಿಸಿತು. ಶಿಬಿರಕ್ಕೆ ಬರುತ್ತಿದ್ದ ರೈತರ ಊಟ, ವಸತಿಗೆ ಅನೇಕ ಪ್ರಗತಿಪರ ಮಠಾಧೀಶರುಗಳ ಸಹಕಾರ ದೊರಕಿತು. ಕರ್ನಾಟಕದಲ್ಲಿ ಮೊದಲಿಗೆ ಈ ಕೃಷಿ ಪದ್ಧತಿಯಲ್ಲಿ ರೈತ ಸಂಘದ ಕಾರ್ಯಕರ್ತ ಬನ್ನೂರಿನ ಕೃಷ್ಣಪ್ಪ ಅಳವಡಿಸಿ ಎಲ್ಲರೂ ಹುಬ್ಬೇರಿಸುವಂತೆ ಬಾಳೆ ಬೆಳೆದರು. ಆಗ ಪತ್ರಕರ್ತರಾಗಿ ಕೆಲಸ ಮಾಡುತ್ತಿದ್ದ ಮೈಸೂರಿನ ಸ್ವಾಮಿ ಆನಂದ್ ರವರು ಕೃಷ್ಣಪ್ಪರವರ ಬಾಳೆಯ ಬಗ್ಗೆ ಲೇಖನ ಬರೆದರು. ನಂತರ ಹೀಗೆ ನೈಸರ್ಗಿಕ ಕೃಷಿಯ ಆಂದೋಲನ ಕರ್ನಾಟಕದಲ್ಲಿ ವ್ಯಾಪಕಗೊಳ್ಳುತ್ತಾ ಹೋಯಿತು. 2006 ಅಥವಾ 2007 ಇರಬೇಕು. ಕೂಡಲ ಸಂಗಮದಲ್ಲಿ ನಡೆದ ಪಾಳೇಕರ್ ರವರ ಏಳು ದಿನಗಳ ಶಿಬಿರದಲ್ಲಿ ಭಾಗವಹಿಸಿದ ರೈತರ ಸಂಖ್ಯೆ ಆರು ಸಾವಿರ ದಾಟಿತ್ತು.

ಕರ್ನಾಟಕದಲ್ಲಿ ಮೌನವಾಗಿ ನಡೆಯುತ್ತಿದ್ದ ಈ ಚಳವಳಿಯನ್ನು ನೋಡಿದ ತಮಿಳುನಾಡಿನ “ಪಸುಮೈ ವಿಕಟನ್” ಪತ್ರಿಕೆ ತಮಿಳುನಾಡಿನಲ್ಲೂ ಪಾಳೇಕರರ ಶಿಬಿರ ಆಯೋಜಿಸಿತು. ನಂತರ ಕೇರಳ, ಪಂಜಾಬ್, ಆಂಧ್ರ ಪ್ರದೇಶ, ರಾಜಸ್ಥಾನ ಹೀಗೆ ನೈಸರ್ಗಿಕ ಕೃಷಿಯ ಆಂದೋಲನ ವ್ಯಾಪಕವಾಗಿ ಬೆಳೆಯತೊಡಗಿತು. ವಿಶ್ವ ರೈತ ಚಳವಳಿಯಾದ `ಲಾ ವಿಯಾ ಕ್ಯಾಂಪೆಸಿನಾ”ದ ಮೂಲಕ ಶ್ರೀಲಂಕಾ, ನೇಪಾಳ ಮತ್ತು ಇಂಡೋನೇಷಿಯಾದಲ್ಲೂ ಅನೇಕ ರೈತರು ನೈಸರ್ಗಿಕ ಕೃಷಿಯನ್ನು ಅಳವಡಿಸಿ ಯಶಸ್ಸನ್ನು ಕಂಡಿದ್ದಾರೆ.

ಆದರೆ, ಇದೆಲ್ಲದರ ನಡುವೆ ನಮ್ಮ ಯಾವೊಬ್ಬ ಕೃಷಿ ವಿಜ್ಞಾನಿಯೂ, ಕೃಷಿ ಅಧಿಕಾರಿಯೂ ಇದರ ಕಡೆ ತಿರುಗಿ ನೋಡಲಿಲ್ಲ. ಪಾಳೇಕರ್ ಪದ್ಧತಿ ಅವೈಜ್ಞಾನಿಕ ಅಥವಾ ಅರ್ಥಹೀನ ಎಂದು ತೀರ್ಮಾನಿಸಿದಂತಿತ್ತು ಅವರ ನಡೆ.

ಇವರೆಲ್ಲರನ್ನೂ ಮೀರಿ ಅನೇಕ ರಾಜ್ಯ ಸರ್ಕಾರಗಳು ಮತ್ತು ಇತ್ತೀಚೆಗೆ ಕೇಂದ್ರ ಸರ್ಕಾರವೂ ಸೇರಿದಂತೆ ಶೂನ್ಯ ಬಂಡವಾಳ (ನೈಸರ್ಗಿಕ) ಕೃಷಿಗೆ ಒತ್ತು ನೀಡಲು ತೀರ್ಮಾನಿಸಿಯಾಗಿದೆ. ಆಂಧ್ರ ಪದೇಶದ ಸರ್ಕಾರ 2015ರಲ್ಲಿ ಈ ಕೃಷಿ ಪದ್ಧತಿಯನ್ನು ರಾಜ್ಯದಾದ್ಯಂತ ಒಯ್ಯಲು ಕೈಗೊಂಡ ತೀರ್ಮಾನವೇ ಇದೆಲ್ಲಕ್ಕೆ ನಾಂದಿ ಆಗಿತ್ತು. 2024 ರವರೆಗೆ ಇಡೀ ರಾಜ್ಯವನ್ನು ನೈಸರ್ಗಿಕ ಕೃಷಿಗೆ ಒಳಪಡಿಸಬೇಕೆಂದು ಆಂಧ್ರ ಪಣ ತೊಟ್ಟಿದೆ. ಇದಕ್ಕೆ ಮೀಸಲಿಟ್ಟಿರುವ ಹಣ ಹದಿನೇಳು ಸಾವಿರಕೋಟಿಗಳಷ್ಟು. ಇದರ ಬಗ್ಗೆ ಅನೇಕ ಟೀಕೆಗಳು ಕೇಳಿ ಬರುತ್ತಿವೆ.

ಶೂನ್ಯ ಬಂಡವಾಳವೆಂದಮೇಲೆ ಹದಿನೇಳು ಸಾವಿರ ಕೋಟಿ ಏಕೆ? ಹದಿನೇಳುಸಾವಿರ ಕೋಟಿ ಮೀಸಲಿಟ್ಟಿರುವುದು ಎಂಟರಿಂದ ಹತ್ತು ವರ್ಷಗಳ ಯೋಜನಾ ಅವಧಿಗೇ ಹೊರತು ಕೇವಲ ಒಂದು ವರ್ಷಕ್ಕಲ್ಲ. 2024 ರ ಒಳಗೆ ರಾಜ್ಯದ ಅರವತ್ತು ಲಕ್ಷ ರೈತರನ್ನು ತಲುಪಲು ಈ ಹಣವನ್ನು ಬಳಸಲಾಗುತ್ತಿದೆ. (http://apzbnf.in/an-open-letter-to-critics/). ಈ ಹಣ ಬಹುರಾಷ್ಟೀಯ ಕಂಪೆನಿಗಳಿಂದ ಅಥವಾ ಜಗತ್ತಿನ ದೈತ್ಯ ಕಂಪೆನಿಗಳಿಂದ ಬರುತ್ತಿದ್ದಲ್ಲಿ, ಅದನ್ನು ವಿರೋಧಿಸಬೇಕಾಗುತ್ತೆ. ಆದರೆ ಈ ಆಪಾದನೆಗಳಿಗೆ ಸದ್ಯ ಯಾವ ಪುರಾವೆಗಳೂ ಇಲ್ಲ.

ಈಗ ವಿಮರ್ಶೆ ಮಾಡಿರುವ ಅನೇಕರು “ಶೂನ್ಯ ಬಂಡವಾಳ” ಎಂಬುದನ್ನು ಯಥಾವತ್ ಅರ್ಥ ಮಾಡಿಕೊಂಡಂತಿದೆ. ಪಾಳೇಕರ್ ಅವರು ಹೇಳಿರುವುದು ಒಂದು ಬೆಳೆಯನ್ನು ಬೆಳೆಯಲು ತಗಲುವ ವೆಚ್ಚವನ್ನು ಬೆಳೆಯ ನಡುವೆ ಬೆಳೆಯಬಹುದಾದ ಅಂತರ ಬೆಳೆಯಿಂದ ಬರುವ ಆದಾಯದಿಂದ ಭರಿಸುವುದೆಂದು. ಅದಕ್ಕೂ ಮಿಗಿಲಾಗಿ “ಶೂನ್ಯ ಬಂಡವಾಳ” ಎಂಬುದು ಒಂದು ಪರ್ಯಾಯ ಕೃಷಿ ಚಿಂತನೆಗೆ ಆಹ್ವಾನ ನೀಡುವ ಘೋಷಣೆಯೂ ಆಗಿದೆ. ಈಗ ಸುಭಾಷ್ ಪಾಳೇಕರ್ ರವರು ಹೆಸರನ್ನು ಬದಲಾಯಿಸಿದ್ದಾರೆ. ಅದಕ್ಕೆ ಅನೇಕರ ಸಹಮತ ಇಲ್ಲ.

ಶೂನ್ಯ ಬಂಡವಾಳದ ಕೃಷಿಯಲ್ಲಿ ಹೊರಗಿನಿಂದ ಏನನ್ನೂ ತರುವುದಿಲ್ಲ. ಬೀಜ, ಜೀವಾಮೃತ, ಕ್ರಿಮಿನಾಶಕಗಳ ಸಿದ್ಧತೆಯಲ್ಲಿ ಪ್ರಕೃತಿದತ್ತವಾಗಿ ಸಿಗುವದನ್ನೇ ಬಳಸಲಾಗುತ್ತದೆ. ಇದನ್ನು ವೈಜ್ನಾನಿಕ ಪರೀಕ್ಷೆಗೆ ಒಳಪಡಿಸಬೇಕು ಎಂದು ಒತ್ತಾಯಿಸುತ್ತಿರುವ ವಿಜ್ಞಾನಿಗಳು ಕಾನೂನುಬಾಹಿರವಾಗಿ ಮಾರಲಾಗುತ್ತಿರುವ ಬಿಟಿ ಬದನೆ ಬೀಜಗಳ ಬಗ್ಗೆ ಯಾಕೆ ಬಾಯಿ ಬಿಡುತ್ತಿಲ್ಲ? ಜಗತ್ತಿನ ಅನೇಕ ದೇಶಗಳಲ್ಲಿ ಈಗಾಗಲೇ ನಿಷೇಧಿಸಲಾಗಿದ್ದು ನಮ್ಮ ದೇಶದಲ್ಲಿ ರಾಜಾರೋಷವಾಗಿ ಮಾರಾಟ್ವಾಗುತ್ತಿರುವ ಹಾನಿಕಾರಕ Glyphosate ಅಥವಾ Round Up ಕಳೆ ನಾಶಕಗಳ ಬಗ್ಗೆ ಯಾವುದೇ ವಿಜ್ಞಾನಿ ಏಕೆ ಪ್ರಶ್ನೆ ಮಾಡುತ್ತಿಲ್ಲ?

ನೈಸರ್ಗಿಕ ಕೃಷಿಗೆ ವೈಜ್ಞಾನಿಕ ಮಾನ್ಯತೆ ಇದೆಯೇ ಎಂಬ ಪ್ರಶ್ನೆ ಅಪ್ರಸ್ತುತ. ಈಗಾಗಲೇ ಹದಿನೈದು ವರ್ಷಗಳಿಂದ ನೈಸರ್ಗಿಕ ಕೃಷಿಯನ್ನು ಮಾಡುತ್ತಿರುವ ರೈತರೇ ಮಾನ್ಯತೆ ಕೊಟ್ಟಿರುವಾಗ, ವಿಶ್ವವಿದ್ಯಾಲಯಗಳ ಮಾನ್ಯತೆ ಪಡೆಯುವ ಅಗತ್ಯವಿದೆಯೇ?

ಹಿಮಾಚಲದ ಸೇಬು ಬೆಳೆಗಾರರಿಂದ ಹಿಡಿದು ಬೀದರ ಜಿಲ್ಲೆಯ ಖುಷ್ಕಿ ಬೆಳೆಗಾರರು ನೈಸರ್ಗಿಕ ಕೃಷಿಯನ್ನು ಅಳವಡಿಸಿಕೊಂಡಿದ್ದಾರೆ. ಎಲ್ಲಾ ಹವಾಮಾನಗಳಿಗೂ ಹೊಂದುವುದಿಲ್ಲ ಎನ್ನುವವರಿಗೆ ಒಂದು ಸಲಹೆ: ದಯವಿಟ್ಟು ನೈಸರ್ಗಿಕ ಕೃಷಿ ಮಾಡುತ್ತಿರುವ ರೈತರನ್ನು ಭೇಟಿ ಮಾಡಿ ಮಾತನಾಡಿಸಿ. ವಿತಂಡ ವಾದಗಳನ್ನು ಮಾಡುತ್ತಿರುವವರಿಗೆ ಜಗತ್ತಿನ ಮುಂದೆ ನಿಂತಿರುವ ಅತಿ ದೊಡ್ಡ ಗಂಡಾಂತರ ಕಾಣಿಸುತ್ತಿಲ್ಲ.

ಹವಾಮಾನ ವೈಪರೀತ್ಯ ಅಥವಾ “Climate Change” ಮನುಕುಲದ ಮುಂದಿರುವ ಭಯಾನಕ ಸತ್ಯ. ಈಗಾಗಲೇ ಕಾಯಂ ಆಗಿಹೋಗಿರುವ ಅತಿವೃಷ್ಟಿ ಮತ್ತು ಅನಾವೃಷ್ಟಿಯೇ ನಮ್ಮ ಮುಂದಿರುವ ನಿಜವಾದ ಸಮಸ್ಯೆ.

ಇಲ್ಲಿ ಯಾರೂ ಮುಖ್ಯರಲ್ಲ. ಯಾರೂ ಅಮುಖ್ಯರಲ್ಲ. ಜಗತ್ತನ್ನು ಉಳಿಸುವುದೊಂದೇ ನಮ್ಮ ಧರ್ಮ. ಕೃಷಿಯ ಅಸ್ಮಿತೆ ರಕ್ಷಿಸಬೇಕಾಗಿದೆ, ಕೃಷಿ ವಿಶ್ವ ವಿದ್ಯಾಲಯಗಳದ್ದಲ್ಲ. ನಮ್ಮೆಲ್ಲ ಬಿಗುಮಾನವ ಬಿಟ್ಟು ಒಂದಾಗಿ ಕೆಲಸಮಾಡಬೇಕಾಗಿದೆ. ನಮಗಲ್ಲದಿದ್ದರೂ ನಮ್ಮ ಮುಂದಿನ ತಲೆಮಾರುಗಳಿಗಾಗಿ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ದೌರ್ಜನ್ಯ: ಅಂತರಾಷ್ಟ್ರೀಯ ಮಾಧ್ಯಮಗಳಲ್ಲೂ ಸುದ್ದಿಯಾದ ಪ್ರಜ್ವಲ್‌ ರೇವಣ್ಣ

0
ಹಾಸನದ ಪೆನ್‌ಡ್ರೈವ್‌ ವೈರಲ್‌ ಕೇಸ್‌ ಮತ್ತು ಪ್ರಜ್ವಲ್‌ ರೇವಣ್ಣ ವಿರುದ್ಧದ ಲೈಂಗಿಕ ದೌರ್ಜನ್ಯ ಪ್ರಕರಣ ದೇಶದಲ್ಲಿ ಭಾರೀ ಸುದ್ದಿಯಾಗಿತ್ತು, ಇದೀಗ ಈ ಸುದ್ದಿ ಅಂತರಾಷ್ಟ್ರೀಯ ಸುದ್ದಿ ವಾಹಿನಿಗಳಲ್ಲೂ ವರದಿಯಾಗಿದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ವ್ಯಾಪಕ ಓದುಗರನ್ನು,...