Homeಮುಖಪುಟಬಿಜೆಪಿ ಪರ ಪ್ರಚಾರಕ್ಕೆ ತೆರಳಲು ಸಾರ್ವಜನಿಕ ಬೊಕ್ಕಸದ ಕೋಟ್ಯಾಂತರ ರೂ. ಹಣ ಬಳಸಿದ ಅಸ್ಸಾಂ ಸಿಎಂ:...

ಬಿಜೆಪಿ ಪರ ಪ್ರಚಾರಕ್ಕೆ ತೆರಳಲು ಸಾರ್ವಜನಿಕ ಬೊಕ್ಕಸದ ಕೋಟ್ಯಾಂತರ ರೂ. ಹಣ ಬಳಸಿದ ಅಸ್ಸಾಂ ಸಿಎಂ: ವರದಿ

- Advertisement -
- Advertisement -

ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಅಸ್ಸಾಂ ರಾಜ್ಯದೊಳಗೆ ಮತ್ತು ಹೊರಗೆ ಬಿಜೆಪಿ ಪರ ಪ್ರಚಾರಕ್ಕೆ ಹೆಲಿಕಾಪ್ಟರ್‌ಗಳು ಮತ್ತು ಚಾರ್ಟರ್ಡ್ ವಿಮಾನಗಳನ್ನು ಬಾಡಿಗೆಗೆ ಪಡೆಯಲು ರಾಜ್ಯ ಸರ್ಕಾರದ ಬೊಕ್ಕಸದಿಂದ ಕೋಟ್ಯಂತರ ರೂಪಾಯಿ ಹಣವನ್ನು ಬಳಸಿದ್ದಾರೆ ಎಂದು ಆರ್‌ಟಿಐ ಮಾಹಿತಿಯಿಂದ ಬಹಿರಂಗವಾಗಿದೆ.

ಯಾವುದೇ ಸರ್ಕಾರವು ಯಾವುದೇ ಸಾರ್ವಜನಿಕ ಹಣವನ್ನು ಅನಧಿಕೃತ ಕೆಲಸಗಳಿಗೆ ಖರ್ಚು ಮಾಡಬಾರದು. ಪಕ್ಷದ ಕೆಲಸ , ವೈಯ್ಯಕ್ತಿಕ ಕೆಲಸಗಳಿಗ ಸಾರ್ವಜನಿಕ ನಿಧಿಯಿಂದ ಹಣವನ್ನು ವೆಚ್ಚ ಮಾಡುವಂತಿಲ್ಲ. ಆದರೆ  ಆಗಸ್ಟ್ 26, 2022ರಂದು ‘ದಿ ಕ್ರಾಸ್ ಕರೆಂಟ್’ ಸಲ್ಲಿಸಿದ ಆರ್‌ಟಿಐ ಅರ್ಜಿಗೆ ಸಿಕ್ಕ ಪ್ರತಿಕ್ರಿಯೆಯಲ್ಲಿ, ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ, ಪಾರ್ಟಿ, ಸಭೆಗಳಲ್ಲದೆ ಹಲವಾರು ಮದುವೆಗಳಲ್ಲಿ ಭಾಗವಹಿಸಲು ತೆರಿಗೆದಾರರ ಹಣದಿಂದ ಚಾರ್ಟರ್ಡ್ ವಿಮಾನಗಳನ್ನು ಬಾಡಿಗೆಗೆ ಪಡೆದಿದ್ದಾರೆ ಎಂದು ಬಯಲಾಗಿದೆ.

ಸೆಪ್ಟೆಂಬರ್ 30, 2023ರಂದು, ಇಲಾಖೆಯ ಅಧೀನ ಕಾರ್ಯದರ್ಶಿ ಮತ್ತು ರಾಜ್ಯ ಸಾರ್ವಜನಿಕ ಮಾಹಿತಿ ಅಧಿಕಾರಿ ಪ್ರದೀಪ್ ಶರ್ಮಾ ಈ ಕುರಿತು ಕೆಲ ಮಾಹಿತಿಯನ್ನು ‘ದಿ ಕ್ರಾಸ್ ಕರೆಂಟ್‌’ಗೆ ನೀಡಿದ್ದರು. ಆರ್‌ಟಿಐ ಅರ್ಜಿಯು ಮೇ 10, 2021ರಿಂದ ಈವರೆಗಿನ ವಿವರಗಳನ್ನು ಕೋರಿಸಲ್ಲಿಸಿದ್ದರೂ, ಇಲಾಖೆಯು ಕೆಲವು ಮಾಹಿತಿಯನ್ನು ಮಾತ್ರ ನೀಡಿತ್ತು.

ಚುನಾವಣಾ ಆಯೋಗದ ಮಾದರಿ ನೀತಿ ಸಂಹಿತೆಯ ಕಲಂ 7 (ಎ) ಪ್ರಕಾರ, ಸಚಿವರು ತಮ್ಮ ಅಧಿಕೃತ ಭೇಟಿಯನ್ನು ಚುನಾವಣಾ ಪ್ರಚಾರದ ಜೊತೆ ಮಾಡಬಾರದು ಮತ್ತು ಚುನಾವಣಾ ಕಾರ್ಯದ ಸಮಯದಲ್ಲಿ ಸರಕಾರದ ನಿಧಿ, ಸಿಬ್ಬಂದಿಗಳನ್ನು ಬಳಕೆ ಮಾಡಬಾರದು ಎಂದು ಹೇಳುತ್ತದೆ. ಸರ್ಕಾರ ಒದಗಿಸಿದ ಮಾಹಿತಿಯು ಕಡಿಮೆ ಆದರೂ  ಶರ್ಮಾ ಅವರ ಸ್ವಂತ ಸಾಮಾಜಿಕ ಮಾಧ್ಯಮ ಖಾತೆಗಳ ಛಾಯಾಚಿತ್ರದ ಪುರಾವೆಗಳು ಮುಖ್ಯಮಂತ್ರಿಗಳು ತಮ್ಮ ಪಕ್ಷದ ಮತ್ತು ಮಿತ್ರಪಕ್ಷಗಳ ಅಭ್ಯರ್ಥಿಗಳ ಪ್ರಚಾರಕ್ಕಾಗಿ ಅಸ್ಸಾಂ ಸರ್ಕಾರದ ಅನುದಾನಿತ ಹೆಲಿಕಾಪ್ಟರ್‌ಗಳನ್ನು ಬಳಸಿಕೊಂಡಿದ್ದಾರೆ ಎನ್ನುವುದನ್ನು ಬಯಲು ಮಾಡಿದೆ.

ಆರ್‌ಟಿಐ ಮಾಹಿತಿ ಪ್ರಕಾರ, ಅಕ್ಟೋಬರ್ 17, 2021ರಂದು ಗುವಾಹಟಿಯಿಂದ ತಮುಲ್‌ಪುರಕ್ಕೆ ತೆರಳಲು ಮತ್ತು ಹಿಂತಿರುಗಲು ಶರ್ಮಾ ಅವರು  ರಾಜ್ಯದ ಬೊಕ್ಕಸದಿಂದ ಅನುದಾನಿತ ಹೆಲಿಕಾಪ್ಟನ್ನು ಬಳಸಿದ್ದಾರೆ.  ಶರ್ಮಾ ಅವರು ಬಿಜೆಪಿ ಮಿತ್ರಪಕ್ಷ ಯುನೈಟೆಡ್ ಪೀಪಲ್ಸ್ ಪಾರ್ಟಿ ಲಿಬರಲ್ ಅಭ್ಯರ್ಥಿ ಜೋಲೆನ್ ಡೈಮರಿ ಅವರ ಪರ ಪ್ರಚಾರಕ್ಕೆ ತೆರಳಿದ್ದರು.

ಅಕ್ಟೋಬರ್ 18, 2021ರಂದು ಗುವಾಹಟಿಯಿಂದ ಗೊಸ್ಸೈಗಾಂವ್‌ಗೆ ಪ್ರಯಾಣಿಸಲು ಶರ್ಮಾ ಮತ್ತೆ ರಾಜ್ಯ ಸರ್ಕಾರದಿಂದ ಪಾವತಿಸಿದ ಹೆಲಿಕಾಪ್ಟರ್‌ ಬಳಸಿದ್ದಾರೆ. ಆ ದಿನ ಅವರು ಅಸ್ಸಾಂನ ಆದಿವಾಸಿ ವಿದ್ಯಾರ್ಥಿ ಸಂಘದ ಸ್ಥಾಪಕ ಅಧ್ಯಕ್ಷ ಜಸ್ಟಿನ್ ಲಾಕ್ರಾ ಅವರಿಗೆ ಶ್ರದ್ಧಾಂಜಲಿ ಸಭೆಯಲ್ಲಿ ಪಾಲ್ಗೊಂಡಿದ್ದರು.

ಅಕ್ಟೋಬರ್ 19, 2021 ರಂದು ಗೊಸ್ಸೈಗಾಂವ್‌ನಲ್ಲಿ ಯುನೈಟೆಡ್ ಪೀಪಲ್ಸ್ ಪಾರ್ಟಿ ಲಿಬರಲ್ ಅಭ್ಯರ್ಥಿ ಜಿರೋನ್ ಪರ ಪ್ರಚಾರ ಮಾಡುವ ಕುರಿತ ಪೋಟೋಗಳನ್ನು ಸಿಎಂ ಸಾಮಾಜಿಕ ಜಾಲತಾಣದಲ್ಲಿ ಖಾತೆಯಲ್ಲಿ ಹಂಚಿಕೊಳ್ಳಲಾಗಿತ್ತು. ಅಕ್ಟೋಬರ್ 30, 2021ರಂದು, ಗೊಸ್ಸೈಗಾಂವ್ ಮತ್ತು ತಮುಲ್ಪುರ್ ಜೊತೆಗೆ ಅಸ್ಸಾಂನ ಥೌರಾ, ಮರಿಯಾನಿ ಮತ್ತು ಭಬಾನಿಪುರ ವಿಧಾನಸಭಾ ಕ್ಷೇತ್ರಗಳಲ್ಲಿ ಉಪಚುನಾವಣೆಗಳು ನಡೆದವು. ಶರ್ಮಾ ಆ ಕ್ಷೇತ್ರಗಳಲ್ಲಿ ತಮ್ಮ ಪಕ್ಷದ ಪ್ರಚಾರಕ್ಕಾಗಿ ಹೆಲಿಕಾಪ್ಟರ್‌ಗಳನ್ನು ಬಳಸಿದರೆ, ರಾಜ್ಯದ ಸಾಮಾನ್ಯ ಆಡಳಿತ ಇಲಾಖೆಯು ಆ ಪ್ರಯಾಣದ ದಿನಾಂಕಗಳ ನಿರ್ದಿಷ್ಟ ಮಾಹಿತಿಯನ್ನು ಒದಗಿಸದ ಕಾರಣ ಅವರಿಗೆ ಯಾರು ಹಣ ನೀಡಿದ್ದಾರೆ ಎಂಬುದು ಸ್ಪಷ್ಟವಾಗಿಲ್ಲ. ಫೆಬ್ರವರಿ 16, 2022ರಂದು ಬಿಜೆಪಿ ಅಭ್ಯರ್ಥಿ ಭುವನ್ ಗಮ್ ಅವರು ಮಜುಲಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ನಾಮಪತ್ರ ಸಲ್ಲಿಸಿದರು. ಸಿಎಂ ಶರ್ಮಾ ಅವರು ಮಜುಲಿಯಲ್ಲಿ ನಾಮಪತ್ರ ಸಲ್ಲಿಸುವ ವೇಳೆ ಹಾಜರಿದ್ದರು. ಶರ್ಮಾ ಸರ್ಕಾರದ ಆರ್‌ಟಿಐ ಉತ್ತರದಲ್ಲಿ ಮುಖ್ಯಮಂತ್ರಿಯವರು ಆ ದಿನ ಮಜುಲಿಗೆ ಸರ್ಕಾರದ ಅನುದಾನಿತ ಹೆಲಿಕಾಪ್ಟರ್ ಬಳಸಿ ಪ್ರಯಾಣ ನಡೆಸಿದ್ದರು.

 

ದೆಹಲಿ ಮುನ್ಸಿಪಲ್ ಚುನಾವಣೆ ಸೇರಿದಂತೆ ರಾಜ್ಯದ ಹೊರಗೆ ಬಿಜೆಪಿ ಪರ ಪ್ರಚಾರ ಮಾಡಲು ಶರ್ಮಾ ಸಾರ್ವಜನಿಕ ಹಣವನ್ನು ಬಳಸಿದ್ದಾರೆ ಎಂದು ಆರ್‌ಟಿಐ ಉತ್ತರಗಳಲ್ಲಿ ಉಲ್ಲೇಖಿಸಲಾದ ದಿನಾಂಕಗಳು ಬಹಿರಂಗಪಡಿಸುತ್ತವೆ.

ಜನವರಿ 30, 2023ರಂದು ಶರ್ಮಾ, ಬಾರ್ಡೋಲಿ ಕ್ಷೇತ್ರದಲ್ಲಿ ಮಾಣಿಕ್ ಸಹಾ ಅವರು ನಾಮಪತ್ರ ಸಲ್ಲಿಕೆ ವೇಳೆ ತ್ರಿಪುರಾಗೆ ತೆರಳಲು ಸರ್ಕಾರದಿಂದ ಹಣಕಾಸು ಪಡೆದ ಚಾರ್ಟರ್ಡ್ ಫ್ಲೈಟ್ ಬಳಸಿದ್ದಾರೆ. ಶರ್ಮಾ ಅವರು ಬಿಜೆಪಿಯ ಸ್ಟಾರ್ ಪ್ರಚಾರಕರಾಗಿದ್ದರು. ಬಿಜೆಪಿಯ ಪ್ರಾದೇಶಿಕ ನಾಯಕರು ನಾಮಪತ್ರ ಸಲ್ಲಿಸುವಾಗ ಅವರು ಆಗಾಗ್ಗೆ ಅಲ್ಲಿಗೆ ತೆರಳುತ್ತಿದ್ದರು. ಕರ್ನಾಟಕ, ಛತ್ತೀಸ್‌ಗಢ, ರಾಜಸ್ಥಾನ ಮತ್ತು ತೆಲಂಗಾಣದಲ್ಲಿ ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಅವರು ಪಕ್ಷದ ಚುನಾವಣಾ ರ್ಯಾಲಿಗಳಲ್ಲಿ ಭಾಗವಹಿಸುತ್ತಿದ್ದರು. ಚಾರ್ಟರ್ಡ್ ಫ್ಲೈಟ್‌ಗಳನ್ನು ಬಳಸಿಕೊಂಡು ತಮ್ಮ ಪಕ್ಷಕ್ಕಾಗಿ ಪ್ರಚಾರ ಮಾಡಲು ತೆರಳುತ್ತಿದ್ದರು. ಆದರೆ ಅವರ ಸರ್ಕಾರ ಸಲ್ಲಿಸಿದ ಮಾಹಿತಿಯು ಆ ಪ್ರಯಾಣಕ್ಕೆ ಯಾರು ಪಾವತಿಸಿದ್ದಾರೆ ಎಂಬುದನ್ನು ಸ್ಪಷ್ಟಪಡಿಸುವುದಿಲ್ಲ ಎಂದು ದಿ ವೈರ್‌ ವರದಿ ತಿಳಿಸಿದೆ.

ಆರ್‌ಟಿಐ ಸೂಚಿಸಿದ ದಿನಾಂಕಗಳ ಪ್ರಕಾರ ರಾಜ್ಯ ಸರ್ಕಾರದ ಪಾವತಿಯಿಂದ  ಹೆಲಿಕಾಪ್ಟರ್‌ಗಳನ್ನು ಬಳಸಿ ಶರ್ಮಾ ಅವರು ಐದು ಮದುವೆಗಳಲ್ಲಿ ಭಾಗವಹಿಸಿದ್ದಾರೆ. ನವೆಂಬರ್ 11, 2022ರಂದು ನಾಗಾಲ್ಯಾಂಡ್ ಮುಖ್ಯಮಂತ್ರಿ ನೈಫು ರಿಯೊ ಅವರ ಮಗಳ ವಿವಾಹವನ್ನು ಒಳಗೊಂಡಿದೆ. ನಾಗಾಲ್ಯಾಂಡ್ ಪ್ರವಾಸಕ್ಕೆ ಅಸ್ಸಾಂನ ಬೊಕ್ಕಸಕ್ಕೆ 14,08,562 ರೂಪಾಯಿ ವೆಚ್ಚವಾಗಿದೆ ಎಂದು RTI ಉತ್ತರವು ತೋರಿಸಿದೆ.

 

ಜನವರಿ 31, 2023ರಂದು, ಶರ್ಮಾ ಅವರು ಲಕ್ನೋಗೆ ತೆರಳಲು ಅಸ್ಸಾಂ ಸರ್ಕಾರದ ಅನುದಾನಿತ ಚಾರ್ಟರ್ಡ್ ವಿಮಾನವನ್ನು ಬಳಸಿರುವುದು ಬಯಲಾಗಿದೆ. ಅಂದು ಉತ್ತರ ಪ್ರದೇಶದ ಉಪಮುಖ್ಯಮಂತ್ರಿ ಬ್ರಜೇಶ್ ಪಾಠಕ್ ಅವರ ಮಗಳ ಮದುವೆಯಲ್ಲಿ ಅವರು ಭಾಗವಹಿಸಿದ್ದರು. ಅದರಿಂದ ರಾಜ್ಯದ ಬೊಕ್ಕಸಕ್ಕೆ ಬರೊಬ್ಬರಿ 23,43,750 ರೂ.ವೆಚ್ಚವಾಗಿತ್ತು.

ಸೆಪ್ಟೆಂಬರ್ 22, 2021 ಮತ್ತು ಜನವರಿ 24, 2023ರ ನಡುವೆ ಅಸ್ಸಾಂ ರಾಜ್ಯ ಸರ್ಕಾರವು ಒದಗಿಸಿದ RTI ದತ್ತಾಂಶದ ಪ್ರಕಾರ ಶರ್ಮಾ ಹೈದರಾಬಾದ್‌ನಲ್ಲಿ ನಡೆದ ಬಿಜೆಪಿ ಸಭೆಗಳನ್ನು ಒಳಗೊಂಡಂತೆ ಬಿಜೆಪಿ ಸಭೆಗಳಲ್ಲಿ ಭಾಗವಹಿಸಲು ಕನಿಷ್ಠ 7 ಬಾರಿ ರಾಜ್ಯ ಅನುದಾನಿತ ಚಾರ್ಟರ್ಡ್ ವಿಮಾನಗಳನ್ನು ಬಳಸಿದ್ದಾರೆ.

 

ದಿ ಕ್ರಾಸ್‌ಕರೆಂಟ್‌ಗೆ ನೀಡಿದ ಆರ್‌ಟಿಐ ಉತ್ತರಗಳ ದಿನಾಂಕಗಳು ಅಸ್ಸಾಂನಲ್ಲಿ ಸಾರ್ವಜನಿಕ ಹಣವನ್ನು ಬಳಸಿಕೊಂಡು ಐದು ಪಕ್ಷದ ಸಭೆಗಳಲ್ಲಿ ಶರ್ಮಾ ಭಾಗವಹಿಸಿದ್ದರು ಎಂದು ತೋರಿಸಿದೆ. ಅವರು ಸೆಪ್ಟೆಂಬರ್ 22, 2021 ರಂದು ಗುವಾಹಟಿ ಬಳಿಯ ಅಮಿಂಗ್‌ಗಾವ್‌ನಲ್ಲಿದ್ದರು, ನವೆಂಬರ್ 25, 2021ರಂದು ಬೊಂಗೈಗಾಂವ್‌ನಲ್ಲಿ, ಡಿಸೆಂಬರ್ 10, 2021 ಮೊರಿಗಾಂವ್‌ನಲ್ಲಿದ್ದರು ಎಂಬುವುದನ್ನು ಸೂಚಿಸುತ್ತದೆ.

ರಾಜಕೀಯ ಪ್ರಚಾರ, ಪಕ್ಷದ ಸಭೆಗಳು ಮತ್ತು ಮದುವೆ ಪಾರ್ಟಿ ಸೇರಿದಂತೆ ಇತರ ಕಾರ್ಯಕ್ರಮಗಳಿಗೆ ತೆರಳಲು ಅಸ್ಸಾಂನ ಉನ್ನತ ನಾಯಕರಿಗೆ ಚಾರ್ಟರ್ಡ್ ಫ್ಲೈಟ್‌ಗಾಗಿ ಕೋಟಿಗಳನ್ನು ಖರ್ಚು ಮಾಡಿದೆ ಎಂದು ಆರ್‌ಟಿಐ ಮಾಹಿತಿಯು ತೋರಿಸಿದೆ. ಭಾರತೀಯ ರಿಸರ್ವ್ ಬ್ಯಾಂಕ್  ಡಿಸೆಂಬರ್‌ನಲ್ಲಿ ಆನ್‌ಲೈನ್‌ನಲ್ಲಿ ಅಪ್‌ಲೋಡ್ ಮಾಡಿದ ಮಾಹಿತಿಯ ಪ್ರಕಾರ, ತರುಣ್ ಗೊಗೊಯ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರ ನಡೆಸುವವರೆಗೆ ಅಸ್ಸಾಂ ಸರ್ಕಾರವು 41,963 ಕೋಟಿ ರೂಪಾಯಿಗಳ ಸಾಲವನ್ನು ಬಾಕಿ ಉಳಿಸಿಕೊಂಡಿತ್ತು. ಈಶಾನ್ಯ ರಾಜ್ಯದಲ್ಲಿ ಬಿಜೆಪಿ ಆಡಳಿತದ ಕಳೆದ ಎಂಟು ವರ್ಷಗಳಲ್ಲಿ ಈ ಮೊತ್ತವು ದುಪ್ಪಟ್ಟು ಆಗಿದೆ.

ಇದನ್ನು ಓದಿ: ಉತ್ತರಾಖಂಡ: UCC ಕುರಿತ 750 ಪುಟಗಳ ಅಂತಿಮ ಕರಡು ವರದಿ ಸಲ್ಲಿಕೆ; ತ್ರಿವಳಿ ತಲಾಖ್‌ಗೆ ಕಠಿಣ ಶಿಕ್ಷೆ ಸೇರಿ ಹಲವು ಅಂಶಗಳು ಉಲ್ಲೇಖ

 

 

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಹಾಸನ ಲೈಂಗಿಕ ದೌರ್ಜನ್ಯ ಪ್ರಕರಣ: ಸಂತ್ರಸ್ತೆಯರಿಗೆ ಸಹಾಯವಾಣಿ ಆರಂಭಿಸಿದ ಎಸ್‌ಐಟಿ

0
ಹಾಸನದ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತರಿಗಾಗಿ ವಿಶೇಷ ತನಿಖಾ ತಂಡ (ಎಸ್‌ಐಟಿ) ಸಹಾಯವಾಣಿ ತೆರೆದಿದೆ. ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಎಸ್‌ಐಟಿ ಮುಖ್ಯಸ್ಥ ಬಿ.ಕೆ ಸಿಂಗ್, "ಹಾಸನ ಜಿಲ್ಲೆಯಲ್ಲಿ ನಡೆದ ಲೈಂಗಿಕ ದೌರ್ಜನ್ಯ...