Homeಮುಖಪುಟಕೇಂದ್ರಿಯ ವಿವಿ ಹಾಸ್ಟೆಲ್‌ಗೆ 'ಸ್ವಾತಂತ್ರ ಹೋರಾಟಗಾರ್ತಿ'ಯ ಹೆಸರು ಕೈಬಿಟ್ಟು 'ಆರೆಸ್ಸೆಸ್‌ ನಾಯಕಿ'ಯ ಹೆಸರು ನಾಮಕರಣ

ಕೇಂದ್ರಿಯ ವಿವಿ ಹಾಸ್ಟೆಲ್‌ಗೆ ‘ಸ್ವಾತಂತ್ರ ಹೋರಾಟಗಾರ್ತಿ’ಯ ಹೆಸರು ಕೈಬಿಟ್ಟು ‘ಆರೆಸ್ಸೆಸ್‌ ನಾಯಕಿ’ಯ ಹೆಸರು ನಾಮಕರಣ

- Advertisement -
- Advertisement -

ಮಹಾರಾಷ್ಟ್ರದ ವಾರ್ಧಾದಲ್ಲಿರುವ ಕೇಂದ್ರೀಯ ವಿಶ್ವವಿದ್ಯಾನಿಲಯದ ಹಾಸ್ಟೆಲ್‌ ಹೆಸರನ್ನು ಸ್ವಾತಂತ್ರ್ಯ ಹೋರಾಟಗಾರ್ತಿ ‘ರಾಣಿ ಲಕ್ಷ್ಮೀಬಾಯಿ’ಯ ಹೆಸರನ್ನು ಬದಲಾಯಿಸಿ RSSನ ಮಹಿಳಾ ಅಂಗಸಂಸ್ಥೆಯಾದ ರಾಷ್ಟ್ರೀಯ ಸೇವಿಕಾ ಸಮಿತಿಯ ಸಂಸ್ಥಾಪಕಿ ‘ಲಕ್ಷ್ಮೀಬಾಯಿ ಕೇಲ್ಕರ್’ ಅವರ ಹೆಸರನ್ನು ಮರುನಾಮಕರಣ ಮಾಡಲಾಗಿದೆ. ಶಿಕ್ಷಣ ಸಂಸ್ಥೆಯ ಕೇಸರಿಕರಣದ ಬಗ್ಗೆ ಇದೀಗ ವ್ಯಾಪಕ ಟೀಕೆ ವ್ಯಕ್ತವಾಗಿದೆ.

ಕೇಂದ್ರೀಯ ವಿಶ್ವವಿದ್ಯಾನಿಲಯವು ರಾಣಿ ಲಕ್ಷ್ಮಿಬಾಯಿ ಹೆಸರಿನಿಂದ “ರಾಣಿ” ಅನ್ನು ಸದ್ದಿಲ್ಲದೆ ಕೈಬಿಟ್ಟು   “ಕೇಲ್ಕರ್” ಅನ್ನು ಸೇರಿಸಿದೆ. ಈ ವರ್ಷದ ಜನವರಿಯಲ್ಲಿ ಮಹಾತ್ಮಾ ಗಾಂಧಿ ಅಂತರಾಷ್ಟ್ರೀಯ ಹಿಂದಿ ವಿಶ್ವವಿದ್ಯಾಲಯ (MGAHV) ಹೊಸದಾಗಿ ನಿರ್ಮಿಸಲಾದ ಬಾಲಕಿಯರ ಹಾಸ್ಟೆಲ್‌ಗೆ RSSನ ಮಹಿಳಾ ವಿಭಾಗವಾದ ರಾಷ್ಟ್ರ ಸೇವಿಕಾ ಸಮಿತಿಯ ಸಂಸ್ಥಾಪಕಿ ಲಕ್ಷ್ಮೀಬಾಯಿ ಕೇಲ್ಕರ್ ಅವರ ಹೆಸರನ್ನು ಇಡಲು ನಿರ್ಧರಿಸಿತ್ತು. ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ಝಾನ್ಸಿ ರಾಣಿ ಲಕ್ಷ್ಮೀಬಾಯಿ ಅವರ ಹೆಸರನ್ನು ಹಾಸ್ಟೆಲ್‌ಗೆ ಇಡಲಾಗುತ್ತದೆ ಎಂದು ಹೇಳಲಾಗಿತ್ತು. ಆದರೆ ‘ಲಕ್ಷ್ಮೀಬಾಯಿ ಕೇಲ್ಕರ್’ ಅವರ ಹೆಸರನ್ನು ಇಟ್ಟಿರುವುದಕ್ಕೆ ವ್ಯಾಪಕವಾದ ವಿರೋಧ ವ್ಯಕ್ತವಾಗಿತ್ತು. ಕೆಲವು ಶಿಕ್ಷಣ ತಜ್ಞರು ಕೇಂದ್ರೀಯ ವಿಶ್ವವಿದ್ಯಾಲಯದ ಈ ಕ್ರಮಗಳನ್ನು ವಂಚನೆ ಮತ್ತು ರಾಷ್ಟ್ರಕ್ಕಾಗಿ ತನ್ನ ಪ್ರಾಣವನ್ನು ಅರ್ಪಿಸಿದ ಮಹಾನ್ ಹೋರಾಟಗಾರರಿಗೆ ಮಾಡಿದ ಅವಮಾನ ಎಂದು ಹೇಳಿದ್ದರು.

ವಿಶ್ವವಿದ್ಯಾನಿಲಯದ ಧನಸಹಾಯ ಆಯೋಗದ(ಯುಜಿಸಿ) ಅನುದಾನದಿಂದ ಹಾಸ್ಟೆಲ್‌ನ್ನು ನಿರ್ಮಿಸಲಾಗಿದೆ. 2017-18 ಮತ್ತು 2018-19ರ MGAHVಯ ವಾರ್ಷಿಕ ವರದಿಗಳು ರಾಣಿ ಲಕ್ಷ್ಮೀಬಾಯಿ ಬಾಲಕಿಯರ ಹಾಸ್ಟೆಲ್ ಅನ್ನು ಸ್ಥಾಪಿಸಲು ವಿಶ್ವವಿದ್ಯಾಲಯವು ಹಣವನ್ನು ಪಡೆದಿದೆ ಎಂದು ಉಲ್ಲೇಖಿಸಿದೆ.

ವಿಶ್ವವಿದ್ಯಾನಿಲಯದ ಮಾಜಿ ಉಪಕುಲಪತಿ ಪ್ರೊ.ಗಿರೀಶ್ವರ್ ಮಿಶ್ರಾ ಮಾತನಾಡಿ, ನಾನು ಉಪಕುಲಪತಿ ಆಗಿದ್ದ ಅವಧಿಯಲ್ಲಿ ಮಹಾರಾಷ್ಟ್ರದ ರಾಜ್ಯಪಾಲರಾದ ಮೃದುಲಾ ಸಿನ್ಹಾ ಅವರು ರಾಣಿ ಲಕ್ಷ್ಮೀಬಾಯಿ ಹಾಸ್ಟೆಲ್‌ಗೆ ಅಡಿಪಾಯ ಹಾಕಿದ್ದರು. ಆದರೆ, ಅದರ ನಂತರ ಬೇರೆ ರೀತಿಯ ಬೆಳವಣಿಗೆ ನಡೆದಿದೆ. ವಿಶ್ವವಿದ್ಯಾನಿಲಯವು ಜನವರಿ 23, 2024ರಂದು ಹೊರಡಿಸಿದ ಆದೇಶದಲ್ಲಿ ‘ಲಕ್ಷ್ಮೀಬಾಯಿ ಕೇಲ್ಕರ್’ ಬಾಲಕಿಯರ ಹಾಸ್ಟೆಲ್ ಎಂದು ಹೆಸರಿಸಿದೆ. ಪ್ರೊ.ರಜನೀಶ್ ಕುಮಾರ್ ಶುಕ್ಲಾ ಅವರು ಉಪಕುಲಪತಿಯಾಗಿದ್ದಾಗ ಈ ನಿರ್ಧಾರ ಕೈಗೊಳ್ಳಲಾಗಿತ್ತು. ಶುಕ್ಲಾ ಆಗಸ್ಟ್ 2023ರಲ್ಲಿ ಹುದ್ದೆಗೆ ರಾಜೀನಾಮೆ ನೀಡಿದ್ದರು.

ಹಾಸ್ಟೆಲ್‌ನ ಆರಂಭಿಕ ಹಂತದಲ್ಲಿ ಇದರ ಹೆಸರನ್ನು ಕಾರ್ಯಕಾರಿ ಮಂಡಳಿ ನಿರ್ಧರಿಸಿತ್ತು. ಸಭಾಂಗಣಗಳು, ಹಾಸ್ಟೆಲ್‌ಗಳು ಮತ್ತು ಇತರ ವಿಶ್ವವಿದ್ಯಾನಿಲಯದ ಕಟ್ಟಡಗಳ ಹೆಸರನ್ನು ನಿರ್ಧರಿಸಲು ಕಾರ್ಯಕಾರಿ ಮಂಡಳಿಗೆ ಅಧಿಕಾರವಿದೆ ಎಂದು ಶುಕ್ಲಾ ಹೇಳಿದ್ದಾರೆ.

ವಿಶ್ವವಿದ್ಯಾನಿಲಯದ ಈ ಕೃತ್ಯವು ವಂಚನೆಗೆ ಸಮಾನವಾಗಿದೆ. ಇದು ನಮ್ಮ ಸ್ವಾತಂತ್ರ್ಯ ಹೋರಾಟಗಾರರನ್ನು ವಂಚಿಸುವ ಮತ್ತು ಅವಮಾನಿಸುವ ಪ್ರಕರಣವಾಗಿದೆ. ಈ ಕುರಿತು ಕೋರ್ಟ್‌ ಮೊರೆ ಹೋಗಬೇಕಿದೆ. ವಿಶ್ವವಿದ್ಯಾನಿಲಯದೊಳಗಿನ ಯಾವುದೇ ಕಟ್ಟಡಕ್ಕೆ ಯಾವುದೇ ಆರೆಸ್ಸೆಸ್‌ ಅಥವಾ ಹಿಂದೂ ಮಹಾಸಭಾದ ನಾಯಕರ ಹೆಸರನ್ನು ಇಡಬಾರದು ಎಂದು ನಾಗಪುರದ ಧರಂಪೆತ್ ವಿಜ್ಞಾನ ಕಾಲೇಜಿನ ಅಧ್ಯಾಪಕ ವೈ.ಜೆ.ರಾಯಲು ಹೇಳಿದ್ದಾರೆ.

ಇದಲ್ಲದೆ ಕ್ಯಾಂಪಸ್‌ನಲ್ಲಿರುವ ಆಸ್ಪತ್ರೆಗೆ 1925ರಲ್ಲಿ ಆರೆಸ್ಸೆಸ್‌ ಆರಂಭಿಸಿದ ಬಲಿರಾಮ್ ಹೆಡ್ಗೆವಾರ್ ಅವರ ಹೆಸರನ್ನಿಡಲು ಶಿಫಾರಸ್ಸು ಮಾಡಲಾಗಿದೆ ಎಂದು ತಿಳಿದು ಬಂದಿದೆ. ಇದರ ಬೆನ್ನಲ್ಲಿ ವಿಶ್ವವಿದ್ಯಾನಿಲಯವು ತನ್ನ ಜಾತ್ಯತೀತ ಪರಂಪರೆಯಿಂದ ದೂರ ಸರಿಯುತ್ತಿದೆ ಎಂಬ ಟೀಕೆ ವ್ಯಾಪಕವಾಗಿ ವ್ಯಕ್ತವಾಗಿದೆ.

ಇದನ್ನು ಓದಿ:  ಆಮ್‌ ಆದ್ಮಿ ಪಕ್ಷದಿಂದ ‘ಎಎಪಿ ಕಾ ರಾಮ್‌ರಾಜ್ಯ’ ವೆಬ್‌ಸೈಟ್‌ ಬಿಡುಗಡೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ದೌರ್ಜನ್ಯ ಪ್ರಕರಣ : ರೇವಣ್ಣ, ಪ್ರಜ್ವಲ್‌ಗೆ ಎಸ್‌ಐಟಿ ನೋಟಿಸ್

0
ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆಗೆ ಹಾಜರಾಗಲು ಆರೋಪಿಗಳಾದ ಹೆಚ್‌.ಡಿ ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣಗೆ ಎಸ್ಐಟಿ ಅಧಿಕಾರಿಗಳು ಇಂದು (ಏ.30) ನೋಟಿಸ್ ಜಾರಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಹಾಸನದ ಹೊಳೆನರಸೀಪುರ ನಗರ...