Homeಚಳವಳಿಕನಸುಗಾರ್ತಿಯೊಬ್ಬಳ ಕಣ್ಣೀರು : ಆತಿಶಿ ಮರ್ಲೀನಾ ಎಂಬ ಶೈಕ್ಷಣಿಕ ಚೈತನ್ಯದ ಕುರಿತು

ಕನಸುಗಾರ್ತಿಯೊಬ್ಬಳ ಕಣ್ಣೀರು : ಆತಿಶಿ ಮರ್ಲೀನಾ ಎಂಬ ಶೈಕ್ಷಣಿಕ ಚೈತನ್ಯದ ಕುರಿತು

ದೆಹಲಿ ಸರ್ಕಾರಿ ಶಾಲೆಗಳ ಅಭಿವೃದ್ದಿಯ ಹಿಂದಿನ ಪ್ರೇರಕ ಶಕ್ತಿ ಇವರು.

- Advertisement -
- Advertisement -

| ಪುರುಷೋತ್ತಮ ಬಿಳಿಮಲೆ |

 

ನಾಡಿದ್ದು ಜೂನ್ 8ನೇ ತಾರೀಕಿಗೆ 39 ವರ್ಷ ತುಂಬಲಿರುವ ಆತಿಶಿ ಮರ್ಲಿನಾ ಅವರನ್ನು ಅವರ ಶೈಕ್ಷಣಿಕ ಕಾರ್ಯಕ್ರಮಗಳಿಗಾಗಿ ನಾನು ಹತ್ತಿರದಿಂದ ಬಲ್ಲೆ. ಜೆ ಎನ್ ಯುವಿನ ಚರ್ಚೆಗಳಲ್ಲಿ ಆಗಾಗ ಕಾಣಿಸಿಕೊಳ್ಳುವ ಆಕೆಗೆ ಭಾರತೀಯ ಇತಿಹಾಸ ಮತ್ತು ವರ್ತಮಾನದ ಬಗ್ಗೆ ಆಳವಾದ ತಿಳುವಳಿಕೆಯಿದೆ. ಅವಳ ತಂದೆಯ ಹೆಸರು ಪ್ರೊ. ವಿಜಯ್ ಸಿಂಗ್ , ತಾಯಿ ತೃಪ್ತಿ ವಹಿ. ಇಬ್ಬರೂ ದೆಹಲಿ ವಿವಿಯಲ್ಲಿ ಪ್ರಾಧ್ಯಾಪಕರಾಗಿದ್ದರು. ಎಡಪಂಥೀಯ ಒಲವಿರುವ ಈ ದಂಪತಿಗಳು ಮಾರ್ಕ್ಸ್ ಮತ್ತು ಲೆನಿನ್ ಅವರ ನೆನಪಿಗಾಗಿ ಅತಿಶಿ ಹೆಸರಿಗೆ ಮರ್ಲೀನಾ ಸೇರಿಸಿದರು.

ದೆಹಲಿಯ ಸ್ಪ್ರಿಂಗ್ ಡೇಲ್ ಶಾಲೆಯಲ್ಲಿ ಹೈಸ್ಕೂಲು ಕಲಿತ ಅತಿಶಿಯು ತನ್ನ ಸ್ವಂತ ಪ್ರತಿಭೆಯಿಂದ ದೆಹಲಿಯ ಪ್ರಖ್ಯಾತವಾದ ಸೈಂಟ್ ಸ್ಟೀಫನ್ ನಲ್ಲಿ ಪ್ರವೇಶ ಪಡೆದು, 2001ರಲ್ಲಿ ದೆಹಲಿ ವಿವಿಗೇ ಪ್ರಥಮಳಾಗಿ ಇತಿಹಾಸದಲ್ಲಿ ಪದವಿ ಪಡೆದಳು. ತಕ್ಷಣ ಅವಳಿಗೆ ಬ್ರಿಟನ್ನಿನ ಚೀವಿನಿಂಗ್ ( Chevening Scholarship) ಶಿಷ್ಯವೇತನ ದೊರೆತದ್ದರಿಂದ ಮುಂದಿನ ಶಿಕ್ಷಣಕ್ಕಾಗಿ ಆಕೆ ಆಕ್ಸಫರ್ಡ್ ವಿವಿಗೆ ತೆರಳಿ, 2003ರಲ್ಲಿ ಇತಿಹಾಸದಲ್ಲಿ ಎಂ ಎ ಪದವಿ ಪಡೆದಳು.

ದೆಹಲಿಯ ಸರ್ಕಾರಿ ಶಾಲೆ

ಮುಂದೆ ರೋಡ್ ಸ್ಕಾಲರ್ ಶಿಪ್ ಪಡೆಯುವಲ್ಲಿ ಯಶಸ್ವಿಯಾದ ಆಕೆ 2005ರವರೆಗೆ ಲಂಡನ್ನಿನ ಅತ್ಯಂತ ಶ್ರೀಮಂತವಾದ ಮೆಗ್ಡಲಿನ್ ಕಾಲೇಜಿನಲ್ಲಿ ( Magdalen College) ತನ್ನ ಸಂಶೋಧನೆ ಮತ್ತು ಅಧ್ಯಾಪನವನ್ನು ಮುಂದುವರಿಸಿ, 2006ರಲ್ಲಿ ಭಾರತಕ್ಕೆ ಹಿಂದಿರುಗಿ, ಸ್ವಲ್ಪ ಕಾಲ ಆಂಧ್ರದ ಋಷಿವ್ಯಾಲಿ ಶಾಲೆಯಲ್ಲಿ ಇತಿಹಾಸ ಮತ್ತು ಇಂಗ್ಲಿಷ್ ಅಧ್ಯಾಪಕಿಯಾಗಿ ಕೆಲಸ ಮಾಡಿದಳು.

2007ರಲ್ಲಿ ಆಕೆ ಮಧ್ಯಪ್ರದೇಶದ ಹಳ್ಳಿಯೊಂದಕ್ಕೆ ತೆರಳಿ ಸಾವಯವ ಕೃಷಿ ಮತ್ತು ಶಿಕ್ಷಣ ಕ್ಷೇತ್ರದ ಅಭಿವೃದ್ಧಿಯಲ್ಲಿ ತನ್ನನ್ನು ತೊಡಗಿಸಿಕೊಂಡಳು. ಅಲ್ಲಿಯ ಸಂಭಾವನಾ ಸಂಸ್ಥೆಯನ್ನು ( Sambhavana Institute of Public policy) ಆಕೆ ಬೆಳೆಸಿದ ರೀತಿ ಅನನ್ಯವಾದುದು. 2015ರಲ್ಲಿ ನಡೆದ ಖಾಂಡ್ವಾ ಸತ್ಯಾಗ್ರಹದ ಪ್ರೇರಕ ಶಕ್ತಿ ಈಕೆಯೇ.

ಮಧ್ಯಪ್ರದೇಶದಿಂದ ಆಕೆಯನ್ನು ಬಿಡಿಸಿದ ಪ್ರೊ. ಯೋಗೇಂದ್ರ ಯಾದವ್ ಮತ್ತು ಪ್ರಶಾಂತ್ ಭೂಷಣ ಅವರು 2011ರಲ್ಲಿ ಅವಳನ್ನು ದೆಹಲಿಗೆ ಕರೆತಂದರು. ಆತಿಶಿ ಭ್ರಷ್ಟಾಚಾರ ವಿರೋಧಿ ಆಂದೋಲನದಲ್ಲಿ ತನ್ನನ್ನು ತೀವ್ರವಾಗಿ ತೊಡಗಿಸಿಕೊಂಡು 2013ರಲ್ಲಿ ಆಪ್ ( AAP)ನ ಸೈದ್ಧಾಂತಿಕೆಯನ್ನು ರೂಪಿಸುವ ಸಮಿತಿಗಳಲ್ಲಿ ಆಳವಾಗಿ ಕೆಲಸ ಮಾಡಿದಳು. ಆಪ್ ನ ಪರವಾಗಿ ಆಕೆ ಟೆಲಿವಿಷನ್ ಚ್ಯಾನೆಲ್ ಗಳಲ್ಲಿ ಮಾತಾಡುತ್ತಿದ್ದ ರೀತಿಯಿಂದ ಆಕೆ ವಿಶ್ವದಾದ್ಯಂತ ಜನರ ಗಮನ ಸೆಳೆದಳು. ಒಳ್ಳೆಯ ಭಾಷೆ, ಆಳವಾದ ತಿಳುವಳಿಕೆ, ನಿರುದ್ವಿಗ್ನವಾಗದ ವಿಷಯ ಮಂಡನೆ, ಇದಿರಾಳಿಯ ಮಾತಿಗೂ ಸಂಯಮದಿಂದ ಕಿವಿಗೊಡುತ್ತಿದ್ದ ರೀತಿಯಿಂದ ಆಕೆ ದೆಹಲಿಯಲ್ಲಿ ಅಪಾರ ಜನಪ್ರಿಯತೆಯನ್ನು ಪಡೆದಳು.

ದೆಹಲಿಯಲ್ಲಿ ಆಪ್ ಸರಕಾರ ರಚನೆಯಾದ ಮೇಲೆ ಮುಖ್ಯಮಂತ್ರಿ ಕೇಜ್ರಿವಾಲ್, ಆತಿಶಿ ಅವರನ್ನು ಶಿಕ್ಷಣ ಮಂತ್ರಿ ಮನೀಶ್ ಸಿಸೋಡಿಯಾ ಅವರ ಶೈಕ್ಷಣಿಕ ಸಲಹೆಗಾರರೆಂದು ನೇಮಕ ಮಾಡಿದರು. ಜುಲಾಯಿ 2015ರಿಂದ ಎಪ್ರಿಲ್ 17, 2018ರವರೆಗೆ ಈ ಹುದ್ದೆಯಲ್ಲಿ ಅಭೂತಪೂರ್ವವಾಗಿ ಕೆಲಸ ಮಾಡಿ, ದೆಹಲಿಯ ಸರಕಾರೀ ಶಾಲೆಗಳ ಸ್ವರೂಪವನ್ನೇ ಅತಿಶಿ ಬದಲು ಮಾಡಿದಳು. ಆದರೆ ಆತಿಶಿಯ ನೇಮಕಾತಿಯೇ ಕಾನೂನು ಬಾಹಿರ ಎಂದು ಹೇಳಿದ ಕೇಂದ್ರ ಸರಕಾರವು ಆಕೆಯ ನೇಮಕಾತಿಯನ್ನೇ ರದ್ದುಗೊಳಿಸಿತು. ಸುಮಾರು ಎರಡು ವರ್ಷಗಳ ತನ್ನ ಸೇವಾವಧಿಯಲ್ಲಿ ಆಕೆ ತಿಂಗಳಿಗೆ ಕೇವಲ ಒಂದು ರೂಪಾಯಿ ಸಂಭಾವನೆ ಮಾತ್ರ ಪಡೆಯುತ್ತಿದ್ದಳು.

ಆಡಳಿತವನ್ನು ಜನರ ಹತ್ತಿರ ಕೊಂಡೊಯ್ಯುವ ಆಕೆಯ ಮೊಹಲ್ಲಾ ಸಭಾ ( ಅದರ ಕೆಲವು ಪ್ರಾಯೋಗಿಕ ಸಭೆಗಳಲ್ಲಿ ನಾನು ಭಾಗಿಯಾಗಿದ್ದೆ) ಯೋಜನೆಯನ್ನು ದೆಹಲಿಯ ರಾಜ್ಯಪಾಲರು ಕೊನೆಗೂ ಅಂಗೀಕರಿಸಲೇ ಇಲ್ಲ.

ಇಂಥ ಕನಸುಕಂಗಳ , ಹೋರಾಟಗಾರ್ತಿ ಅತಿಶಿ ಇವತ್ತು ಸಾರ್ವಜನಿಕರೆದುರು ಕಣ್ಣೀರು ಸುರಿಸುವಂಥ ವಾತಾವರಣ ನಿರ್ಮಾಣವಾಗಿದೆ. ಉತ್ತರ ದೆಹಲಿಯಲ್ಲಿ ಆಕೆ ಲೋಕ ಸಭೆಗೆ ಸ್ಪರ್ಧಿಸುವ ಪ್ರದೇಶಗಳಲ್ಲಿ ಆಕೆಯ ಚಾರಿತ್ರ್ಯ ಹರಣ ಮಾಡುವಂಥ ಅಶ್ಲೀಲ ಕರಪತ್ರಗಳನ್ನು ಹಂಚಲಾಗಿದೆ. ಅವಳ ಹೆಸರಿನ ಮುಂದಿರುವ ಮಾರ್ಲೀನಾ ಪದವನ್ನು ಗಮನಿಸಿ, ಆಕೆ ಬೇರಾವುದೋ ಧರ್ಮದವಳೆಂದು ಭಾವಿಸಿ, ಜನರನ್ನು ತಪ್ಪುದಾರಿಗೆಳೆಯುವ ಕೆಲಸ ಮಾಡಲಾಗಿದೆ. ಇಂಥ ಕೆಲಸಗಳನ್ನು ಯಾರು ಮಾಡುತ್ತಾರೆ ಎಂದು ನಾನೇನೂ ಹೇಳಬೇಕಾಗಿಲ್ಲವಲ್ಲ! ಅವಳ ಇದಿರಾಳಿ ಕ್ರಿಕೆಟಿಗ ಗೌತಮ್ ಗಂಭೀರ್ ಇಂಥ ಲುಚ್ಛ ಕೆಲಸ ಮಾಡಿರಲಾರ, ಆದರೆ ಕರಪತ್ರವನ್ನು ಖಂಡಿಸುವ ಘನತೆಯನ್ನೂ ಆತ ತೋರಿಲ್ಲ.

ದೆಹಲಿಯಲ್ಲಿ ನನ್ನ ಕಣ್ಣೆದುರೇ ಬೆಳೆದವರು ಇಬ್ಬರು- ಒಬ್ಬ ಕನ್ನಯ್ಯ ಕುಮಾರ್ ಮತ್ತು ಇನ್ನೊಬ್ಬರು ಆತಿಶಿ. ಅವರು ಎಷ್ಟು ಒಳ್ಳೆಯವರು, ಸಾಮಾಜಿಕ ಕಳಕಳಿಯುಳ್ಳವರು ಮತ್ತು ಪ್ರತಿಭಾವಂತರೆಂಬುದೆಂಬುದನ್ನು ನಾನು ಹತ್ತಿರದಿಂದ ಬಲ್ಲೆ. ಈ ಪ್ರತಿಭೆಗಳನ್ನು ಎಳವೆಯಲ್ಲಿಯೇ ಮಟ್ಟ ಹಾಕಲು ಎಷ್ಟೊಂದು ಶಕ್ತಿಗಳು, ಎಷ್ಟೊಂದು ಬಗೆಯಲ್ಲಿ ಕೆಲಸ ಮಾಡುತ್ತಿವೆ ಎಂಬುದನ್ನು ನೋಡಿದಾಗ ನಿಜಕ್ಕೂ ದಿಗ್ಭ್ರಮೆಯಾಗುತ್ತದೆ.
ನಮ್ಮ ದೇಶಕ್ಕೆ ನಿಜಕ್ಕೂ ಏನು ಬೇಕಾಗಿದೆ ಎಂದೇ ತಿಳಿಯುತ್ತಿಲ್ಲ.

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಸಿಲಿನ ತಾಪವಿದ್ದರೂ ಬಿಜೆಪಿ ಒತ್ತಡದಿಂದ ಬಂಗಾಳದಲ್ಲಿ 7 ಹಂತದ ಚುನಾವಣೆ: ಅಭಿಷೇಕ್ ಬ್ಯಾನರ್ಜಿ

0
ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಬಿಸಿಲಿನ ತಾಪವಿದ್ದರೂ, ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ಆಯೋಜಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ ಎಂದು ಟಿಎಂಸಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ. ಟಿಎಂಸಿಯ ಡಾರ್ಜಿಲಿಂಗ್ ಅಭ್ಯರ್ಥಿ ಗೋಪಾಲ್...