ಥೂ….ಮುಂದಿನ ಎಲೆಕ್ಷನ್ನಿನ್ಯಾಗೆ ನಾನು ಬ್ಲೂಜೆಪಿ ಪರುವಾಗಿ ಪ್ರಚಾರ ಮಾಡಕಿಲ್ಲ, ಮಾಡಕಿಲ್ಲ, ಮಾಡಕಿಲ್ಲsss

ಪ್ರಿಯ ಕೇಳುಗರಿಗೆಲ್ಲ ನಮಸ್ಕಾರ. ಆಘಾತವಾಣಿ ವಾರ್ತಾವಾಚನಕ್ಕೆ ಸ್ವಾಗತ. ಓದುತ್ತಿರುವವರು ನಿಮ್ಮ ಪ್ರೀತಿಯ ಅಟ್ಯಾಕ್ ಹನ್ಮಂತು. ಇದೀಗ ವಾರ್ತೆಗಳ ವಿವರ.
ಬಾಬಾ ಲಾಂದೇವನಿಂದ ಹೆಡ್ಡಾಫೀಸಿಗೆ ಬಗನಿಗೂಟ: ಕಂಗಾಲಾಗಿ ಕುಳಿತುಕೊಂಡಿವೆ ನಾಗಪುರದ ಕ್ರಿಮಿಕೀಟ
ಕಳೆದ ಲೋಕಸಭಾ ಚುನಾವಣೆಯಲ್ಲಿ ಅಣ್ಣ ಹಜಾರೆ ಜೊತೆ ಸೇರಿ ಭ್ರಷ್ಟಾಚಾರ ನಿರ್ಮೂಲನೆ, ಲೋಕಪಾಲ ಮಸೂದೆ ಇನ್ನಿತ್ಯಾದಿ ಜನಪ್ರಿಯ ಸ್ಲೋಗನ್‍ಗಳ ರಿಯಾಯಿತಿ ದರದ ಮಾರಾಟಕ್ಕಿಳಿದಿದ್ದ ಬಾಬಾ ಲಾಂದೇವ್ ನಂತರ ಬ್ಲೂಜೆಪಿ ಗೆದ್ದ ನಂತರ ಧರಿಸಿದ್ದ ಚೂಡಿದಾರ್ ಸಮೇತ ನಾಗಪುರದ ಕುದುರೆರೇಸ್ ಹೆಡ್ಡಾಫೀಸಿನ ಬಚ್ಚಲುಮನೆಗೆ ನೆಗೆದಿದ್ದರು. ತನ್ನ ಮೂರಡಿ ಗಡ್ಡವನ್ನು ನಿರ್ಮಾಪುಡಿ ನೀರಿನಲ್ಲಿ ನೆನೆಸಿ ನಾಗಪುರದ ಹೆಡ್ಡಾಫೀಸ್ ನೆಲ ಒರೆಸುತ್ತ ತನ್ನ ತಪಂಜಲಿ ಕಂಪನಿಯನ್ನು ಬೆಳೆಸಿಕೊಂಡ ಲಾಂದೇವ್ ಇದೀಗ ಹೆಡ್ಡಾಫೀಸ್ ಗಢವಗಳ ಮುಖಕ್ಕೆ ಡಿಚ್ಚಿ ಹೊಡೆದಿರುವ ವರ್ತಮಾನ ಲಭ್ಯವಾಗಿದೆ. ಮುಂದಿನ ಎಲೆಕ್ಷನ್ನಿನಲ್ಲಿ ನಾನು ಬ್ಲೂಜೆಪಿ ಪರವಾಗಿ ಪ್ರಚಾರ ಮಾಡುವುದಿಲ್ಲ, ನನ್ನ ಬಾಯೊಳಗೆ ಹುಣ್ಣಾಗಿದ್ದು ಮೊದಲಿನಂತೆ ಈಗ ಭಾಷಣ ಜಡಿಯಲು ಸಾಧ್ಯವಾಗುತ್ತಿಲ್ಲ, ಆದ್ದರಿಂದ ಬ್ಲೂಜೆಪಿಯವರು ಅವರ ಗುಂಡಿಯನ್ನು ಅವರೇ ತೋಡಿಕೊಳ್ಳಲಿ, ಬೇಕಿದ್ರೆ, ಅದೇ ಗುಂಡಿಯೊಳಗೆ ಬಿದ್ದು ಅವರ ಮುಖದ ಮೇಲೆ ಅವರೇ ಮಣ್ಣು ಎಳೆದುಕೊಳ್ಳಲಿ, ನಾನು ಗೋಮೂತ್ರವನ್ನು 100 ಡಿಗ್ರಿಯಲ್ಲಿ ಕುದಿಸಿ, ಅದಕ್ಕೆ ಕರ್ಪೂರ ಚಕ್ಕೆ ಲವಂಗ ಮಿಕ್ಸ್ ಮಾಡಿ ಪೆಟ್ರೋಲ್ ಕಂಡುಹಿಡಿದು 35 ರುಪಾಯಿಗೆ ಲೀಟರಿನಂತೆ ಮಾರಿಕೊಂಡು ಬದುಕ್ಕೋತೀನಿ ಎಂದ ಲಾಂದೇವನ ಮಾತು ಕೇಳಿದ ನಾಗಪುರದ ವಯೋವೃದ್ಧ ಕ್ರಿಮಿಕೀಟಗಳು ಗಾಬರಿಬಿದ್ದು ಮೂಛೆರ್É ಹೋಗಿದ್ದಾರೆಂದು ತಿಳಿದುಬಂದಿದೆ.

********

ರೋಗಪೀಡಿತ ಮಂತ್ರಿಗಳೆಲ್ಲ ಫಾರಿನ್ನಿಗೆ ಹಾರ್ತಾವ್ರಲ್ಲ: ಚರಂಡಿಗ್ಯಾಸ್ ತಜ್ಞ ಮೋದಿ ಮಾತಿಗೆ ಬೆಲೆಯೇ ಇಲ್ಲ
ಜಿಲ್ಲೆಗೊಂದರಂತೆ ಆಯುರ್ವೇದ ಆಸ್ಪತ್ರೆ ತೆಗೀತೀನಿ, ಅಡ್ಮಿಟ್ ಆದವ್ರಿಗೆ ಗ್ಲೂಕೋಸ್ ಬದಲು ಗಂಜಲ ಹೆಟ್ಟಿ ರೋಗ ವಾಸಿ ಮಾಡ್ತೀನಿ, ಆಹಾರಪಥ್ಯಕ್ಕೆ ಬದಲಾಗಿ ಗೋವಿನಸೆಗಣಿ, ಹಾಸಿಗೆ ಬೆಡ್ ಬದಲು ಭತ್ತದ ಹುಲ್ಲಿನ ಮೆದೆ ಮೇಲೆ ರೋಗಿ ಮಲಗಿಸ್ತೀನಿ, ಹೀಗೆಂದು ಎರಡೂ ಕೈಯಲ್ಲಿ ಢಮಢಮನೆ ಎದೆ ಚಚ್ಚಿಕೊಂಡು ಆಯುರ್ವೇದದ ಬಗ್ಗೆ ಕಕ್ಕಿಕೊಂಡ ಮೋದಿ ಮಾತನ್ನು ಯಾರೂ ಮೂಸದೆ ಇರುವ ವರ್ತಮಾನ ತಿಳಿದುಬಂದಿದೆ. ಈ ಫುಲ್‍ಟೈಂ ಮೆಮೋರಿ ಲಾಸ್ ಗಿರಾಕಿಯ ಕ್ರಿಸ್ತಪೂರ್ವ ಕಾಲದ ಹೆಲ್ತ್ ಟ್ರೀಟ್‍ಮೆಂಟ್ ತಗೊಂಡ್ರೆ ಅಡ್ಮಿಟ್ ಆದ ಎರಡೇ ಗಂಟೆಗೆ ಕೈಲಾಸಕ್ಕೆ ಪಾರ್ಸೆಲ್ ಆಗೋದು ಗ್ಯಾರಂಟಿ ಎಂದರಿತ ಗೋವಾ ಮುಖ್ಯಮಂತ್ರಿ ಮನೋಹರ ಟುರಿಕ್ಕರ್ ಮೊನ್ನೆಯಷ್ಟೇ ಅಮೆರಿಕಕ್ಕೆ ಚಿಕಿತ್ಸೆಗಂತ ಓಡಿಹೋಗಿ ವಾಪಸ್ ಬಂದರು. ಇದೀಗ ಕೇಂದ್ರ ಕೆಮಿಕಲ್ & ಗೊಬ್ಬರದ ಮಂತ್ರಿ ಡೆಂಟಲ್ ಅನಂತ್ಕುಮಾರ್ ಲಂಡನ್ನಿಗೆ ಆರೋಗ್ಯ ಚಿಕಿತ್ಸೆಗೆ ಓಡಿಹೋಗಿದ್ದಾರೆ. ನಮ್ಮ ಟಣಾಟಣ ಸಂಸ್ಕøತಿಯ ಆರೋಗ್ಯವಿದ್ಯೆ, ವೇದಪುರಾಣ, ಆಯುರ್ವೇದ ಚರಕ ಪಂಡಿತನ ಜ್ಞಾನ ಆಧರಿಸಿದ ಚಿಕಿತ್ಸೆ ತಗೊಳ್ಳಿ ಎಂದು ಪುಂಗುವ ಈ ಪುಂಗಿವಾದಕರು ತಮಗೇನಾದರೂ ರೋಗ ಬಡಿದರೆ ಊರಿಗೆ ಮುಂಚೆ ದೇಶ ಬಿಟ್ಟು ವಿದೇಶಿ ಲಕ್ಸುರಿ ಆಸ್ಪತ್ರೆಗಳ ಬೆಡ್ ಮೇಲೆ ಮಕಾಡೆ ಮಲಗುವ ಈ ಐಚಿತ್ರಕ್ಕೆ ಭಕ್ತಗಣವೇ ಬೇಸ್ತುಬಿದ್ದಿರುವುದಾಗಿ ತಿಳಿದುಬಂದಿದೆ. ‘ಸ್ವದೇಶಿ ವೈದ್ಯಪದ್ದತಿಯ ಬಗ್ಗೆ ರಾತ್ರಿಹಗಲು ಬಡಬಡಿಸುವ ಈ ಮಂದಿ ಚಿಕಿತ್ಸೆಗಾಗಿ ಫಾರಿನ್‍ಗೆ ಹಾರುತ್ತಿದ್ದಾರೆಂದರೆ ಇವರಿಗೆ ಯಾವುದೋ ಗುಹ್ಯರೋಗಳು ಒಕ್ಕರಿಸಿಕೊಂಡಿರಬಹುದು; ತಮ್ಮ ಗೌಪ್ಯತೆಯನ್ನು ಕಾಪಾಡಿಕೊಳ್ಳಲಿಕ್ಕಾಗಿಯೇ ಫಾರಿನ್‍ಗೆ ಹಾರುತ್ತಿರಬಹುದು’ ಎಂಬ ವಿಶ್ಲೇಷಣೆ ಅವರ ವಿರೋಧಿಗಳ ಪಡಸಾಲೆಯಿಂದ ಕೇಳಿಬಂದಿದೆ.

********

ಸರ್ಕಾರಿ ಬ್ಯಾಂಕ್ ಹೆಸರು ಕಿವಿಗೆ ಬಿದ್ದರೆ ಶ್ರೀಸಾಮಾನ್ಯ ಪರಾರಿ: ದರೋಡೆಕೋರರ ಕಷ್ಟ ನಿವಾರಿಸಲು ಏಕಗವಾಕ್ಷಿ ನೀತಿ ಜಾರಿ
ಓದು ಬರಹ ಗೊತ್ತಿಲ್ಲದ ಅನ್ನೆಜುಕೇಟೆಡ್ ಮುಠ್ಠಾಳರ ಕೊಂಪೆಯಾಗಿರುವ ಕೇಂದ್ರ ಸರ್ಕಾರದ ಮಟಾಶ್ ಯೋಜನೆಗಳಿಂದ ದೇಶದ ಸರ್ಕಾರಿ ಬ್ಯಾಂಕುಗಳು ಕಾಲು ಕಿಸಿದುಕೊಂಡು ಮಲಗಿರುವ ಹೊತ್ತಿನಲ್ಲೇ, ಜನರು ಈ ಬ್ಯಾಂಕ್‍ಗಳಲ್ಲಿ ಹಣ ಡಿಪಾಸಿಟ್ ಮಾಡುವ ಅಂದರ್‍ಬಾಹರ್ ಅಪಾಯಕಾರಿ ಆಟಕ್ಕೆ ಬೆನ್ನು ತಿರುಗಿಸಿ ದಿಕ್ಕಾಪಾಲಾಗಿ ಓಡುತ್ತಿರುವ ಸುದ್ದಿ ಬಂದಿದೆ. ಸರ್ಕಾರಿ ಬ್ಯಾಂಕುಗಳಲ್ಲಿ ಜನರು ಇಡುತ್ತಿದ್ದ ಠೇವಣಿಯ ಮೊತ್ತ ಕಳೆದ 4 ದಶಕಗಳಲ್ಲೇ ಅತ್ಯಂತ ಕನಿಷ್ಠಮಟ್ಟ ತಲುಪಿದೆಯೆಂದು ಸರ್ಕಾರದ ವರದಿಯಿಂದಲೇ ಬಯಲಾಗಿದೆ. ಜನರ ಠೇವಣಿ ದುಡ್ಡನ್ನು ಬ್ಯಾಂಕುಗಳು ವಂಚಕ ಕಂಪನಿಗಳಿಗೆ ಕೊಡುವುದು, ಕಂಪನಿ ಮಾಲೀಕರು, ಕೇಂದ್ರ ಸರ್ಕಾರದ ಮೂರೂಬಿಟ್ಟ ಮಂತ್ರಿಗಳಿಗೆ ಪುಳಿಯೊಗರೆ ಪಾರ್ಟಿ ಕೊಟ್ಟು ಹಣದ ಸಮೇತ ದೇಶ ಬಿಟ್ಟು ಓಡಿಹೋಗುವುದು ಹೆಚ್ಚುತ್ತಿರುವುದರ ಹಿನ್ನೆಲೆಯಲ್ಲಿ ಬ್ಯಾಂಕಿನಲ್ಲಿ ಹಣವಿಡುವುದಕ್ಕಿಂತ ಆ ದುಡ್ಡನ್ನು ನಾವೇ ಪರಪರ ಹರಿದು ಬಿಸಾಕುವುದು ಬೆಟರ್ ಎಂಬ ತೀರ್ಮಾನಕ್ಕೆ ಜನರು ಬಂದಿರುವ ಸೂಚನೆಯಿದೆಯೆಂದು ಆರ್ಥಿಕ ತಜ್ಞರು ಅಂದಾಜಿಸಿದ್ದಾರೆ. ಇದರೊಡನೆ ದೇನಾ ಬ್ಯಾಂಕ್, ವಿಜಯಾಬ್ಯಾಂಕ್, ಬ್ಯಾಂಕ್ ಆಫ್ ಬರೋಡ ಬ್ಯಾಂಕ್‍ಗಳನ್ನು ಒಂದುಗೂಡಿಸಿ ಒಂದೇ ಬ್ಯಾಂಕ್ ಮಾಡಲು ಹೊರಟಿರೋ ಮುಠ್ಠಾಳ ಮಡೆಯರ ಹುನ್ನಾರವೇನೆಂದು ಆರ್ಥಿಕತಜ್ಞರಲ್ಲಿ ವಿಚಾರಿಸಿದಾಗ.. ಬ್ಯಾಂಕ್ ವಂಚಕರು ಸೆಪರೇಟ್ ಸೆಪರೇಟಾಗಿ ಬ್ಯಾಂಕುಗಳಿಗೆ ಸಾವಿರಾರು ಕೋಟಿ ಮುಂಡಾಮೋಚಲು ತೊಂದರೆಯಾಗಿರುವುದರಿಂದ ಒಂದೇ ಬ್ಯಾಂಕಿನಲ್ಲಿ ದೊಡ್ಡಮೊತ್ತದ ಸಾಲದ ದರೋಡೆ ನಡೆಸಲು “ಏಕಗವಾಕ್ಷಿ ಟ್ಯಾಕ್ಸ್‍ಮನಿ ದರೋಡೆ’ ಸ್ಕೀಂ ಕೆಳಗೆ ಈ ಬ್ಯಾಂಕುಗಳನ್ನು ವಿಲೀನಗೊಳಿಸಲಾಗಿದೆಯೆಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

********

ಕಾಲೆತ್ತಿಕೊಂಡ ಧಡಿಯೂರಪ್ಪನ ಆಪರೇಷನ್ ಕಮಲ: ಬೆರಕೆ ಸರ್ಕಾರ ಉರುಳಿಸೋ ಯತ್ನ ವಿಫಲ
ಅಧಿಕಾರದಲ್ಲಿದ್ದಾಗ ಚೆಕ್ಕು, ಡಿಡಿ, ಮನಿಯಾರ್ಡರ್‍ನಲ್ಲೆಲ್ಲ ಲಂಚ ಗೆಬರಿದ ಕಳ್ಳಗಂಟನ್ನು ಬಿಚ್ಚದೆ, ಬೆಂಗಳೂರು ಸಕಲೇಶಪುರ ಮುಂತಾದ ಊರುಗಳ ಪಿಕ್‍ಪಾಕೆಟರ್‍ಗಳು, ದರೋಡೆಕೋರರು, ಮಣ್ಣುಕಳ್ಳರ ಹಿಂದೆ ಬಿದ್ದಿರುವ ಧಡಿಯೂರಪ್ಪ ‘ನಿನ್ನ ಮಿನಿಸ್ಟರ್ ಮಾಡ್ತೀನಿ ಕೈ-ದಳ ಪಕ್ಷದ ಎಮ್ಮೆಲ್ಲೆಗಳನ್ನ ಪರ್ಚೇಸ್ ಮಾಡ್ಕೊಡು’ ಎಂದು ದುಂಬಾಲು ಬಿದ್ದಿದ್ದರೆಂಬ ಸುದ್ದಿ ವರದಿಯಾಗಿದೆ. ಅತ್ತ ಜಾರಕಿಹೊಳಿ ಬ್ರದರ್ಸ್ ಒದ್ದ ಎಡಗಾಲಿನ ಏಟಿಗೆ ಬುರುಡೆ ತೂತು ಮಾಡಿಕೊಂಡು ಬ್ಯಾಂಡೇಜ್ ಹಾಕಿಸಿಕೊಳ್ಳೋ ಲೆವೆಲ್ಲಿಗೆ ಬಂದಿರುವ ಬ್ಲೂಜೆಪಿ ಪಕ್ಷದ ಪ್ಲಾನು ಎರಡೂ ಕಾಲೆತ್ತಿಕೊಂಡು ಕಿಸಕೊಂಡು ಬಿದ್ದಿದ್ದು ಮತ್ತೊಮ್ಮೆ ಮುಖಭಂಗವಾಗಿದೆ. ಹೊಲಿಸಿಕೊಂಡಿದ್ದ ಹೊಸ ಕೋಟನ್ನು ಮಡಚಿಡುತ್ತ ಗೋಳಾಡುತ್ತಲೇ ವಾಮಿಟ್ ಶಾಗೆ ಫೋನ್ ಮಾಡಿದ ಧಡಿಯೂರಪ್ಪ ‘ಹಲೋ ಹಲೋ, ನಮ್ ಪ್ಲಾನಿಗೆ ವಾಂತಿಬೇಧಿಯಾಗಿ ಸ್ಕೆಚ್ಚು.. ಪಚ್ಚ್ ಎಂದಿದೆ.. ಮುಂದೆ ಯಾವತಿಪ್ಪೆ ಸೆಗಣಿ ತಿಂದರೆ ಅಧಿಕಾರ ಪಡೆಯಬಹುದು ಹೇಳಿ’ ಎಂದು ಕೇಳಿದರಂತೆ. ಅದಕ್ಕೆ ವಾಮಿಟ್ ಶಾ “ಅರೇ ಧಡಿಯೂರಪ್ಪಾಜೀ.. ಆಪ್ ಕೈಕೂ ಬಾರ್ ಬಾರ್ ಅಗಣಿ ಹಾಕಕ್ಕೆ ಹೋಗಿ.. ಉಸ್ಕೋ ಸಿಗಿಸ್ಕೋತೀರಿ, ಫಿರ್‍ಸೆ ಮತ್ ಫೋನ್ ಕರ್ನಾ.. ಮುಝೆ ಬಹೋತ್ ದರ್ದ್ ಹೋತಾ ಹಯ್, ಆಪ್ ಏಕ್ ಕಾಮ್ ಕೀಜಿಯೇ, ಏಕ್ ಚೊಂಬು ಉಠಾಕೆ ಕೋಯಿ ಡ್ಯಾಮ್ ಕಡೀಕೆ ಜಾವೋ. ವಾಪಸ್ ಮತ್ ಆನಾ.. ಡ್ಯಾಮ್ ಕೆ ಅಂದರ್ ಜಂಪ್ ಮಾರ್ಕೆ ಡೂಬ್ ಮರೋ” ಎಂದು ಬೈದು ಫೋನ್ ಕುಕ್ಕಿದರೆಂದು ಬಲ್ಲ ಮೂಲಗಳು ತಿಳಿಸಿವೆ.
ಇಲ್ಲಿಗೆ ನಮ್ಮ ವಾರ್ತಾಪ್ರಸಾರ ಮುಕ್ತಾಯವಾಯಿತು. ಮತ್ತೆ ನಮ್ಮ ನಿಮ್ಮ ಬೇಟಿ, ಮುಂದಿನವಾರ ಇದೇ ಸಮಯಕ್ಕೆ. ಮತ್ತೆ ಸಿಗೋಣ. ಅಲ್ಲಿಯವರೆಗೂ ನಮಸ್ಕಾರ.

Donate

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

LEAVE A REPLY

Please enter your comment!
Please enter your name here