Homeಮುಖಪುಟಮುಸ್ಲಿಮರನ್ನು ಹೊರಗಟ್ಟಲಿಕ್ಕೆ ಇಷ್ಟು ಹುನ್ನಾರ ಬೇಕಿತ್ತೆ?: ಲೇಖಕಿ ಬಾನು ಮುಷ್ತಾಕ್ ಪ್ರಶ್ನೆ

ಮುಸ್ಲಿಮರನ್ನು ಹೊರಗಟ್ಟಲಿಕ್ಕೆ ಇಷ್ಟು ಹುನ್ನಾರ ಬೇಕಿತ್ತೆ?: ಲೇಖಕಿ ಬಾನು ಮುಷ್ತಾಕ್ ಪ್ರಶ್ನೆ

"ಅವರು ಕೊಲೆ ಮಾಡಿದರೂ ಸಹ ಚರ್ಚೆ ಆಗುವುದಿಲ್ಲ. ಆದರೆ ನಾವು 'ಆ' ನೋವಾಗುತ್ತಿದೆ ಎಂದರೂ ಬದ್ನಾಮ್ ಆಗಿ ಬಿಡುತ್ತೇವೆ-ದೇಶದ್ರೋಹಿ ಆಗಿಬಿಡ್ತಿವಿ"

- Advertisement -
- Advertisement -

“ಕನ್ನಡ ಭಾಷೆಯ ಬಗ್ಗೆ ಒಬ್ಬ ಅಲ್ಪಸಂಖ್ಯಾತ ಮಹಿಳೆಯಾಗಿ ನನ್ನ ಗ್ರಹಿಕೆ ಎಂದರೆ, ಕನ್ನಡವನ್ನು ಬಳಸಲು ನನಗೆ ನೀವು ಅವಕಾಶವನ್ನೆ ಕೊಡಲಿಲ್ಲ. ಕನ್ನಡವನ್ನು ಭುವನೇಶ್ವರಿಯಾಗಿ ಮಾಡಿದಿರಿ. ಕನ್ನಡ ಬಾವುಟವನ್ನು ಅರಿಶಿನ ಕುಂಕುಮ ಎಂದು ಮಂದಾಸನದ ಮೇಲೆ ಕೂರಿಸಿಬಿಟ್ಟರಿ. ಆಗ ನಾನು ಎಲ್ಲಿ ನಿಲ್ಲಬೇಕು, ಎಲ್ಲಿ ನೋಡಬೇಕು? ನನ್ನ ಹೊರಗಟ್ಟುವಿಕೆ ಯಾವತ್ತೊ ಆರಂಭವಾಗಿದೆ, ಇಂದು ಪೂರ್ಣಗೊಳ್ಳುತ್ತಿದೆ ಅಷ್ಟೆ” ಎಂದು ಲೇಖಕಿ ಬಾನು ಮುಷ್ತಾಕ್‌ರವರು ವಿಷಾದ ವ್ಯಕ್ತಪಡಿಸಿದರು.

ಬೆಂಗಳೂರಿನಲ್ಲಿ ನಡೆಯುತ್ತಿರುವ ಜನಸಾಹಿತ್ಯ ಸಮ್ಮೇಳನ ಉದ್ಘಾಟನಾ ಗೋಷ್ಟಿಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, “ಅವರು ಕೊಲೆ ಮಾಡಿದರೂ ಸಹ ಚರ್ಚೆ ಆಗುವುದಿಲ್ಲ. ಆದರೆ ನಾವು ‘ಆ’ ನೋವಾಗುತ್ತಿದೆ ಎಂದರೂ ಬದ್ನಾಮ್ ಆಗಿ ಬಿಡುತ್ತೇವೆ-ದೇಶದ್ರೋಹಿ ಆಗಿಬಿಡ್ತಿವಿ” ಎಂದು 1946ರಲ್ಲಿ ಉರ್ದು ಕವಿ ಬರೆದಿದ್ದಾರೆ. ಈ ಪರಿಸ್ಥಿತಿ ಇವತ್ತಿಗೂ ಕೂಡ ಪುನರಾವರ್ತನೆಯಾಗುತ್ತಿದೆ ಎಂದರೆ ನಾವು ಎಂತಹ ಭಯಾನಕ ಸ್ಥಿತಿಯಲ್ಲಿದ್ದೇವೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.

ಇಂದು ದ್ವೇಷ ಭಾಷಣಗಳ, ಸುಳ್ಳು ಸುದ್ದಿಗಳ ಪ್ರಾಸನವಾಗುತ್ತಿದೆ. ನಮ್ಮ ನಂದಿನಿ ಕೈತಪ್ಪಿ ಹೋಗುತ್ತಿದೆ. ನಾವು ಕರ್ನಾಟಕದವರು ಬಹಳ ದೇಶಭಕ್ತರು, ಉದಾರಿಗಳೆಂದುಕೊಂಡು ಸುಮ್ಮನಿದ್ದೇವೆ. ನಂದಿನಿ ನಮ್ಮ ಸಾಹಿತ್ಯ, ಅನ್ನ, ಯುವಜನರ ನೆಮ್ಮದಿ ನೀರು, ವಸತಿ ಎಲ್ಲವೂ ಆಗಿದೆ. ಆದರೆ ಅದು ಕೈ ತಪ್ಪುತ್ತಿದ್ದರು ಸಹ ಏಕೆ ನಾವು ಮಾತನಾಡುತ್ತಿಲ್ಲ ಎಂದು ಬಾನು ಮುಷ್ತಾಕ್ ಪ್ರಶ್ನಿಸಿದರು.

ಮಹಿಳೆಯರನ್ನು ಹೇಗೆ ಹೊಗಳಿ, ಮಂದಾಸನದಲ್ಲಿ ಕೂರಿಸಿ ತುಳಿಯುತ್ತಿದ್ದಾರೋ, ನೀವುಗಳು ಹಾಗೆಯೆ ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯ ಮಾಡುತ್ತಿದ್ದೀರಿ. ಕನ್ನಡದ ರಥವನ್ನು ಎಳೆದು, ಕನ್ನಡದ ಜಾತ್ರೆ, ಪರಿಷೆ ಮಾಡಿ ನನ್ನನ್ನು ಅಂದರೆ ಮುಸ್ಲಿಮರನ್ನು ಹೊರಗಟ್ಟಲಿಕ್ಕೆ ಇಷ್ಟು ಹುನ್ನಾರ ಬೇಕಿತ್ತೆ? ಏಕೆ ಹೀಗೆ ಮಾಡುತ್ತಿದ್ದೀರಿ ಎಂಬುದಕ್ಕೆ ನನಗೆ ಉತ್ತರ ಕೊಡಿ ಎಂದು ಆಗ್ರಹಿಸಿದರು.

ಅಲ್ಪಸಂಖ್ಯಾತರು, ದಲಿತರು, ಅಲಕ್ಷಿತ ಸಮುದಾಯಗಳು ಕನ್ನಡದಲ್ಲಿ ಬರೆಯುತ್ತಿದ್ದಾರೆ. ಒಂದೂ ಪುಸ್ತಕ ಪ್ರಕಟಿಸದ ಕನಿಷ್ಟ 600ಕ್ಕಿಂತ ಹೆಚ್ಚಿನ ಮುಸ್ಲಿಂ ಬರಹಗಾರರಿದ್ದಾರೆ. ಆದರೆ ಅವರನ್ನೆಲ್ಲ ನಾವು ಮರೆತುಬಿಟ್ಟಿದ್ದೇವೆ ಎಂದು ವಿಷಾದಿಸಿದರು.

ಬಂಡಾಯ ಸಾಹಿತ್ಯ ಸಂಘಟನೆಯು ಅಲ್ಪಸಂಖ್ಯಾತರು, ದಲಿತರು, ಅಲಕ್ಷಿತ ಸಮುದಾಯಗಳಿಗೆ ಕನ್ನಡದ ಹೆಬ್ಬಾಗಿಲನ್ನು ತೆಗೆದರು. ನಮ್ಮ ಅಭಿವ್ಯಕ್ತಿಯ ಅಡೆತಡೆಗಳನ್ನು ಬಂಡಾಯ ಸಂಘಟನೆ ನಿವಾರಣೆ ಮಾಡಿತು. ಇಂದು ಜನ ಸಾಹಿತ್ಯ ಸಮ್ಮೇಳನ ಆ ಕೆಲಸಕ್ಕೆ ಮುಂದಾಗಿದೆ. ಈ ಪ್ರತಿರೋಧ ಸಮಾವೇಶ ಒಂದು ಅದ್ಭುತವಾದ ಅವಕಾಶ ಕಲ್ಪಿಸಿಕೊಟ್ಟಿದೆ. ಇದು ಸಂತೋಷದ ವಿಷಯ ಎಂದರು.

ಅತ್ಯಂತ ಸಂವೇದನಶೀಲ ಕಲೆ ಸೃಷ್ಟಿಯಾಗಲು ತಳಸಮುದಾಯಗಳ ಚಲನಶೀಲತೆ ಮತ್ತು ಔದಾರ್ಯವೇ ಮುಖ್ಯ ಕಾರಣ. ಇಂದಿಗೂ ಆ ಸಮುದಾಯಗಳ ಕಲೆ ಮತ್ತು ಸಾಹಿತ್ಯದ ಮೌಲ್ಯ ಮಾಪನ ಮಾಡುವುದು ಬಿಟ್ಟು ಟಿಪ್ಪುವಿನಲ್ಲಿ, ಎಂ ಎಫ್ ಹುಸೇನ್‌ನಲ್ಲಿ ಮುಸ್ಲಿಮನನ್ನು ಹುಡುಕುವ, ಬಾಬಾ ಸಾಹೇಬರಲ್ಲಿ ದಲಿತನನ್ನು ಕಾಣುವ ನಿಮ್ಮ ದೃಷ್ಟಿಯನ್ನು ನೀವೆ ಸರಿಪಡಿಸಿಕೊಳ್ಳಿ ಎಂದು ಒತ್ತಾಯಿಸಿದರು.

ಕೆಲವರು ನಾನು ಅವರ ಮರಿ ಮಗ, ಮರಿ ಮೊಮ್ಮಗ ಎಂದು ಹೇಳಿಕೊಳ್ಳುತ್ತಿದ್ದಾರೆ. ಮರಿ ಮಗನೊ, ನರಿ ಮಗನೊ ಏನಾದರೂ ಆಗಿ. ಆದರೆ ನೀವು ಯಾರ ಮಗ ಎಂದುಕೊಳ್ಳುತ್ತೀರಿ ಆ ಮಹಾನ್ ಪುರುಷನ ಗೌರವಕ್ಕೆ ಚ್ಯುತಿ ತರದಂತೆ ನಡೆದುಕೊಳ್ಳಿ. ಅವರ ಜೀವಪರ-ಜನಪರ ಮೌಲ್ಯಗಳಿಗೆ ಅನುಗುಣವಾಗಿ ನಡೆದುಕೊಳ್ಳಿ. ಏಕೆಂದರೆ ಅವರ ಮೆರಗು ಇಳಿದುಹೋಗುತ್ತದೆ, ಉಳಿಯುವುದಿಲ್ಲ ಎಂದು ಬಾನು ಮುಷ್ತಾಕ್ ಹೇಳಿದರು.

ಸರ್ವಾಧಿಕಾರಿಗಳು ಉಪಯುಕ್ತವಾದ ಶತ್ರು ಅಥವಾ ಅನ್ಯನನ್ನು ಆಯ್ಕೆ ಮಾಡಿಕೊಂಡು ಜನರ ರೋಷವನ್ನು ಘರ್ಷಣೆ ಅಥವಾ ಯುದ್ದದ ಮೂಲಕ ಆ ಕಡೆ ತಿರುಗಿಸುತ್ತಾರೆ. ಇಂದು ಅವರು ಮುಸ್ಲಿಮರನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಅವರನ್ನು ದೇಶದ್ರೋಹಿಗಳಾಗಿ ಬಿಂಬಿಸಿ ದಿಕ್ಕು ತಪ್ಪಿಸುತ್ತಿದ್ದಾರೆ. ಕಲಾವಿದರು ಕೆಲಸ ಮಾಡಬೇಕಾದ ಕಾಲ ಇದು. ಇಲ್ಲಿ ನಿರಾಶೆಗೆ ಜಾಗವಿಲ್ಲ. ನಾವು ಮಾತಾಡುತ್ತೇವೆ, ಬರೆಯುತ್ತೇವೆ, ನಾವು ಭಾಷೆಯನ್ನು ಬಳಸುತ್ತೇವೆ ಹೀಗೆ ಆದಾಗ ಮಾತ್ರ ನಾಗರೀಕತೆಗಳು ವಾಸಿಯಾಗುತ್ತವೆ ಎಂದರು.

ಇದನ್ನೂ ಓದಿ; ರಾಷ್ಟ್ರಗಳನ್ನು ನಿರ್ಮಿಸುವವರು ಕಲಾವಿದರು ಮತ್ತು ಕವಿಗಳೆ ಹೊರತು ವ್ಯಾಪಾರಿಗಳು, ರಾಜಕಾರಣಿಗಳಲ್ಲ: ಡಾ. ಮೂಡ್ನಾಕೂಡು ಚಿನ್ನಸ್ವಾಮಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. ಪ್ರತಿ ಕ್ಷಣ ಈ ಭಾರತ. ಪ್ರತಿ ವರ್ಷದ ಹಾಗೆ ಎಲ್ಲಾ ತರಹದಲ್ಲೂ ಹಿಂದೆ ಉರುಳುತ್ಹಿದೆ.
    ನಮ್ಮೆಲ್ಲರ ಕರ್ತವ್ಯ ನಿಷ್ಠೆಗೆ ಯಾವ ಬೆಲೆಯೇ ಇಲ್ಲಾ
    ನಮ್ಮ ದ್ವನಿ ಅರನುರೋಧನೆ ಯಾಗಿದೆ.

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...