ಇತ್ತೀಚೆಗೆ ಬಿಡುಗಡೆಯಾದ ನಟ, ನಿರ್ಮಾಪಕ ರಕ್ಷಿತ್ ಶೆಟ್ಟಿ ಅವರ ಚಾರ್ಲಿ 777 ಸಿನಿಮಾವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವೀಕ್ಷಿಸಿ, ಭಾವುಕರಾಗಿದ್ದರು. ಇದಾದ ಬಳಿಕ ಈ ಸಿನಿಮಾಗೆ ಶೇಕಡಾ 100 ರಷ್ಟು ಜಿಎಸ್‌ಟಿ ತೆರಿಗೆ ವಿನಾಯಿತಿ ನೀಡಿ ಆದೇಶ ಹೊರಡಿಸಿದ್ದಾರೆ.
ಈ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿರುವ ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಮಂಸೋರೆ, “ಕನ್ನಡ ನೆಲದಲ್ಲಿ ಶ್ವಾನದಷ್ಟೇ ಅಮೂಲ್ಯವಾದ ಜೀವ ಪಡೆದಿರುವ ಮಾನವೀಯ, ಮನುಷ್ಯತ್ವದ ಅಂಶ ಎತ್ತಿ ಹಿಡಿಯುವ ನೂರಾರು ಕನ್ನಡ ಸಿನೆಮಾಗಳು ಪ್ರತೀ ವರ್ಷ ತಯಾರಾಗುತ್ತಿವೆ. ಎಲ್ಲಾ ಸಿನಿಮಾಗಳಿಗೂ ಹಿಂದೆ ಇದ್ದಂತೆ ತೆರಿಗೆ ವಿನಾಯಿತಿ ನೀಡಿ” ಎಂದು ಆಗ್ರಹಿಸಿದ್ದಾರೆ.
ನಿರ್ದೇಶಕ ಮಂಸೋರೆ ಅವರ ಪತ್ರದ ವಿವರ ಹೀಗಿದೆ.
“ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರಿಗೆ ನಮಸ್ಕಾರ. ತಾವು ಕನ್ನಡ ಸಿನೆಮಾ, ಚಾರ್ಲಿ 777 ಗೆ ನಿರ್ಮಾಪಕರ ಕೋರಿಕೆಯ ಮೇರೆಗೆ ಸದರಿ ಸಿನೆಮಾಗೆ 100% ಜಿಎಸ್‌ಟಿ ಇಂದ ವಿನಾಯಿತಿ ಕೊಟ್ಟಿರುವುದು ತುಂಬಾ ಸಂತೋಷದ ವಿಷಯ. ಕನ್ನಡ ಸಿನೆಮಾಗಳ ಏಳಿಗೆಗೆ ಇದು ಅತ್ಯವಶ್ಯಕ. ಜೊತೆಗೆ ಈ ಹಿಂದೆ ಯಾವುದೋ ಅನ್ಯ ಭಾಷೆಯ ಸಿನೆಮಾಗು ತಾವು 100% ಜಿಎಸ್‌ಟಿ ತೆರಿಗೆ ವಿನಾಯಿತಿ ಕೊಟ್ಟಿದ್ದೀರಿ ಎಂದು ಯಾವುದೋ ಸುದ್ದಿ ಪತ್ರಿಕೆಯಲ್ಲಿ ಓದಿದ ನೆನಪು. ಈಗ ಈ ಪತ್ರವನ್ನು ತಮಗೆ ಬರೆಯುತ್ತಿರುವುದರ ಕಾರಣವನ್ನು ಮೊದಲಿಗೆ ತಮಗೆ ವಿವರಿಸುತ್ತೇನೆ”.
“ತಾವು ಮುಖ್ಯಮಂತ್ರಿ ಆಗುವ ಮೊದಲು, ತಮ್ಮ ಬಿಜೆಪಿ ಸರ್ಕಾರ ಬರುವ ಮೊದಲು ಕನ್ನಡದ ಸಿನೆಮಾಗಳಿಗೆ ಕನ್ನಡದ ನೆಲದಲ್ಲೇ ಸಂಪೂರ್ಣವಾಗಿ ತಯಾರಾಗುವ (ಹೊರ ರಾಜ್ಯದಲ್ಲಿ ಚಿತ್ರೀಕರಣವಾಗುವುದಾದರೆ ಅದಕ್ಕೆ ಸೂಕ್ತ ಕಾರಣ ಕೊಡಬೇಕಿತ್ತು) ಎಲ್ಲಾ ಕನ್ನಡ ಸಿನೆಮಾಗಳಿಗೆ 100% ತೆರಿಗೆ ವಿನಾಯಿತಿ ಇತ್ತು ಎಂಬ ವಿಷಯ ತಮಗೆ ಗೊತ್ತಿತ್ತೇ..? ಕನ್ನಡದ ಸಿನೆಮಾಗಳಿಗೆ ಇದ್ದ ಈ ವಿನಾಯಿತಿಯನ್ನು ಕನ್ನಡಿಗರ ಕೈಯಿಂದ (ಕನ್ನಡದ ನಿರ್ಮಾಪಕರ ಹೊಟ್ಟೆ ಮೇಲೆ ಹೊಡೆದು ಕಿತ್ತುಕೊಂಡಿದ್ದು) ನಿಮ್ಮದೇ ಆದ ಬಿಜೆಪಿ ಸರ್ಕಾರ ಎಂಬುದು ನಿಮಗೆ ತಿಳಿದಿದೆಯೇ..? ಅದು ಜಿಎಸ್‌ಟಿ ಎಂಬ ಹೆಮ್ಮಾರಿಯ ಹೆಸರಲ್ಲಿ ಎಂಬುದು ತಮಗೆ ತಿಳಿದಿದೆಯೇ..?”
ಇದನ್ನೂ ಓದಿ: ಪೊಲೀಸ್ ವ್ಯವಸ್ಥೆಯ ವಾಸ್ತವಗಳತ್ತ ತಮಿಳು, ಮಲಯಾಳಂ ಚಿತ್ರರಂಗ
“ಈ ಹಿಂದೆ ಕರ್ನಾಟಕದ ಮುಖ್ಯಮಂತ್ರಿಗಳಾಗಿದ್ದ ರಾಮಕೃಷ್ಣ ಹೆಗಡೆ ಅವರು ಕನ್ನಡ ಸಿನೆಮಾಗಳ ಮೇಲೆ ಮನರಂಜನಾ ತೆರಿಗೆ ವಿಧಿಸಲು ಹೋದಾಗ, ನಮ್ಮೆಲ್ಲರ ಪಾಲಿನ ಅಣ್ಣಾವ್ರು, ಡಾ. ರಾಜ್‌ಕುಮಾರ್ ಅವರು ಕನ್ನಡ ಚಿತ್ರರಂಗವನ್ನೇ ತ್ಯಜಿಸಿ ತಮ್ಮ ಹಳ್ಳಿಗೆ ಹೋಗುವ ನಿರ್ಧಾರ ಮಾಡುತ್ತಾರೆ, ಆಗ ಮುಖ್ಯಮಂತ್ರಿಗಳೇ ಅಣ್ಣಾವ್ರ ಮನೆಗೆ ಹೋಗಿ ಅವರ ನಿರ್ಧಾರವನ್ನು ಹಿಂತೆಗೆದುಕೊಳ್ಳುವಂತೆ ಅವರ ಮನವೊಲಿಸಿ ಅವರು ತಮ್ಮ ನಿರ್ಧಾರವನ್ನು ಹಿಂತೆಗೆದುಕೊಳ್ಳುವಂತೆ ಒಪ್ಪಿಸುತ್ತಾರೆ ಹಾಗು ತೆರಿಗೆ ವಿಧಿಸುವ ತಮ್ಮ ನಿಲುವನ್ನು ಹಿಂತೆಗೆದುಕೊಳ್ಳುತ್ತಾರೆ. (ಹಿರಿಯ ಪತ್ರಕರ್ತರಾದ ಬಿ.ವಿ.ವೈಕುಂಠರಾಜು ರವರ ಸಿನೆಮಾತು ಪುಸ್ತಕದಲ್ಲಿ ಇದರ ಬಗ್ಗೆ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ) ಅದೇ ಮುಂದೆ ಕನ್ನಡ ಹಾಗೂ ಕನ್ನಡ ನೆಲದಲ್ಲಿ ತಯಾರಾಗುವ ಎಲ್ಲಾ ಸಿನೆಮಾಗಳಿಗೂ ೧೦೦% ತೆರಿಗೆ ವಿನಾಯಿತಿ ನೀಡಲಾಗುವ ನಿರ್ಧಾರ ಕೈಗೊಳ್ಳಲಾಗುತ್ತದೆ. ಅಂತಹ ಮಹಾನುಭಾವರ ನಿರ್ಧಾರದಿಂದ ಕನ್ನಡ ಚಿತ್ರರಂಗಕ್ಕೆ ಸಿಕ್ಕಿದ್ದ ಸೌಲಭ್ಯವನ್ನು ಕಿತ್ತುಕೊಂಡಿದ್ದು ಜಿಎಸ್‌ಟಿ ನೆಪದಲ್ಲಿ ನಿಮ್ಮದೇ ಬಿಜೆಪಿ ಸರ್ಕಾರ ಎಂಬುದು ತಮಗೆ ತಿಳಿದಿದೆಯೇ..?”
“ಈಗ ವಾಪಸ್ಸು ನಿಮ್ಮ ಆಡಳಿತದ ಸರ್ಕಾರದ ವಿಷಯಕ್ಕೆ ಬರುವುದಾದರೆ, ಶ್ವಾನದ ಕಾಳಜಿಯಿಂದ ತಾವು ಆ ‘ಒಂದು’ ಕನ್ನಡ ಸಿನೆಮಾಗೆ ಮಾತ್ರ 100% ಜಿಎಸ್‌ಟಿ ತೆರಿಗೆ ವಿನಾಯಿತಿ ನೀಡಲು ಆ ಹಣವನ್ನು ತಾವು ತಮ್ಮ ಜೇಬಿನಿಂದ ನೀಡುತ್ತಿದ್ದೀರ ಎಂದು ತಿಳಿಯಲು ಡಾ.ಬಿ.ಆರ್.ಅಂಬೇಡ್ಕರ್ ಸರ್ ಬರೆದಿರುವ, ಸಾಂವಿಧಾನಿಕ ಹಕ್ಕನ್ನು ಪಡೆದಿರುವ ಕರ್ನಾಟಕದ ಪ್ರಜೆಗಳಾಗಿ ಕೇಳಿತ್ತಿದ್ದೇನೆ, ದಯವಿಟ್ಟು ತಿಳಿಸಿ”.
“ಶ್ವಾನದಷ್ಟೇ ಅಮೂಲ್ಯವಾದ ಜೀವ ಪಡೆದಿರುವ ಮಾನವೀಯ, ಮನುಷ್ಯತ್ವದ ಅಂಶ ಎತ್ತಿ ಹಿಡಿಯುವ ನೂರಾರು ಕನ್ನಡ ಸಿನೆಮಾಗಳು ಪ್ರತೀ ವರ್ಷ ತಯಾರಾಗುತ್ತಿವೆ. ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಪ್ರದರ್ಶನವಾಗುತ್ತಿರುವ ಅನೇಕ ಕನ್ನಡ ಚಿತ್ರಗಳು ಕನ್ನಡ ನೆಲದಲ್ಲಿ ತಯಾರಾಗುತ್ತಿವೆ. ಉದಾಹರಣೆಗೆ ಪೆಡ್ರೋ, ಕೋಳಿತಾಲ್, ಡೊಳ್ಳು, ದಾರಿ ಯಾವುದಯ್ಯ ವೈಕುಂಟಕ್ಕೆ, ಅಮೃತಮತಿ, ನೀಲಿ ಹಕ್ಕಿ ಇನ್ನೂ ಬಹಳಷ್ಟು ಸಿನೆಮಾ ಇದೆ. ಜೊತೆಗೆ ಅಂತರ್ರಾಷ್ಟ್ರೀಯ ಚಿತ್ರೋತ್ಸವಕ್ಕೆ ಹೋಗದಿದ್ದರೂ ಸಹ, ಅನೇಕ ಕನ್ನಡ ಸಿನೆಮಾಗಳು ಅತ್ತ್ಯುತ್ತಮವಾದ ಮಾನವೀಯ ಗುಣವುಳ್ಳ ಸಿನೆಮಾಗಳು ಕಳೆದ ನಾಲ್ಲೈದು ವರ್ಷಗಳಲ್ಲೇ ಸಾಕಷ್ಟಿವೆ, ಅದು ಯಾವುದಕ್ಕೂ ನೀಡದ 100% ತೆರಿಗೆ ವಿನಾಯಿತಿ ಕೇವಲ ಒಂದು ಸಿನೆಮಾಗೆ ನೀಡುವುದು ನಮ್ಮೆಲ್ಲರ ಮೆಚ್ಚಿನ ಅಣ್ಣಾವ್ರ ಆಶಯಕ್ಕೆ ತದ್ವಿರುದ್ಧವಾದದ್ದು ಎಂದು ತಮಗೆ ಮನವರಿಕೆ ಮಾಡಲು ಇಚ್ಚಿಸುತ್ತೇನೆ”.
“ಚಾರ್ಲಿ ಸಿನೆಮಾದ ನಿರ್ಮಾಪಕರೂ ಸೇರಿದಂತೆ ಕನ್ನಡದ ಯಾರೊಬ್ಬ ನಿರ್ಮಾಪಕರು ಅಣ್ಣಾವ್ರ ಆಶಯ ಮೀರಿ, ಕನ್ನಡ ಚಿತ್ರರಂಗವನ್ನು ಹೊರಗಿಟ್ಟು, ಸ್ವಾರ್ಥಿಗಳಂತೆ ತಮ್ಮ ಸಿನೆಮಾಗೆ ಮಾತ್ರ 100% ತೆರಿಗೆ ವಿನಾಯಿತಿ ಕೊಡಬೇಕೆಂದು ಹಂಬಲಿಸಲಾರರು, ತಮ್ಮಲ್ಲಿ ಬೇಡಿಕೊಳ್ಳಲಾರರು ಎಂದು ನನ್ನ ಬಲವಾದ ನಂಬಿಕೆ. ಇದು ಕನ್ನಡ ಚಿತ್ರರಂಗದ ಏಳಿಗೆಗಾಗಿ ಶ್ರಮಿಸುತ್ತಿರುವ ಪ್ರತಿಯೊಬ್ಬ ನಿರ್ಮಾಪಕರ, ತಂತ್ರಜ್ಞ, ಶ್ರಮಿಕ ಹಾಗೂ ಕಲಾವಿದರ ಅನ್ನದ ಪ್ರಶ್ನೆಯಾಗಿರುವುದರಿಂದ ಹಾಗೂ ನಮ್ಮ ನೆಚ್ಚಿನ ಅಣ್ಣಾವ್ರು ಡಾ. ರಾಜ್‌ಕುಮಾರ್ ಅವರ ಆಶಯವೂ ಆಗಿರುವ ಕಾರಣದಿಂದಾಗಿ ಕನ್ನಡದ, ಕನ್ನಡದ ನೆಲದಲ್ಲೇ ಸಂಪೂರ್ಣವಾಗಿ ತಯಾರಾಗುವ ಪ್ರತೀ ಸಿನೆಮಾಗೂ ಈ ಹಿಂದೆ ಇದ್ದಂತೆ ಸಂಪೂರ್ಣ ತೆರಿಗೆ ವಿನಾಯಿತಿ ನೀಡುತ್ತೀರಾ ಎಂಬ ನಂಬಿಕೆಯಿಂದ ಈ ಪತ್ರ ಬರೆಯುತ್ತಿದ್ದೇನೆ” ಎಂದಿದ್ದಾರೆ.
ಪತ್ರದ ಜೊತೆಗೆ ಚಾರ್ಲಿ 777 ಸಿನಿಮಾಗೆ ನೀಡಿರುವ ತೆರಿಗೆ ವಿನಾಯಿತಿಯ ಆದೇಶ ಪತ್ರವನ್ನು ಮಂಸೋರೆ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ‘ಚಾರ್ಲಿ 777’ ಭಾವುಕತೆಯಾಚೆಗೆ ತೆರೆದುಕೊಳ್ಳದ ಸರಳರೇಖೆಯ ಸಿನಿಮಾ