Homeಕರ್ನಾಟಕಬೆಂಗಳೂರು: ‘ಕಾಂಗ್ರೆಸ್‌’, ‘ಭಾರತ್‌ ಜೋಡೋ’ ಖಾತೆ ತಾತ್ಕಾಲಿಕವಾಗಿ ರದ್ದು ಮಾಡುವಂತೆ ಟ್ವಿಟರ್‌ಗೆ ಸಿವಿಲ್‌ ಕೋರ್ಟ್ ಆದೇಶ

ಬೆಂಗಳೂರು: ‘ಕಾಂಗ್ರೆಸ್‌’, ‘ಭಾರತ್‌ ಜೋಡೋ’ ಖಾತೆ ತಾತ್ಕಾಲಿಕವಾಗಿ ರದ್ದು ಮಾಡುವಂತೆ ಟ್ವಿಟರ್‌ಗೆ ಸಿವಿಲ್‌ ಕೋರ್ಟ್ ಆದೇಶ

- Advertisement -
- Advertisement -

ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಮತ್ತು ಭಾರತ್ ಜೋಡೋ ಟ್ವಿಟರ್‌ ಖಾತೆಗಳನ್ನು ತಾತ್ಕಾಲಿಕವಾಗಿ ಟ್ವಿಟರ್‌ ಸಂಸ್ಥೆ ನಿರ್ಬಂಧಿಸಬೇಕು ಎಂದು ಬೆಂಗಳೂರಿನ ಸಿವಿಲ್ ನ್ಯಾಯಾಲಯ ಸೋಮವಾರ ಆದೇಶಿಸಿದೆ.

‘ಕೆಜಿಎಫ್‌‌ ಚಾಪ್ಟರ್‌-2’ ಸಿನಿಮಾದ ಸಂಗೀತವನ್ನು ಕಾಂಗ್ರೆಸ್ ಕಾನೂನುಬಾಹಿರವಾಗಿ ತನ್ನ ವೀಡಿಯೊಗಳಲ್ಲಿ ಬಳಸಿಕೊಂಡು ಹಕ್ಕುಸ್ವಾಮ್ಯವನ್ನು ಉಲ್ಲಂಘಿಸಿದೆ ಎಂದು ಆರೋಪಿಸಿ ಎಂಆರ್‌ಟಿ ಸಂಗೀತ ಸಂಸ್ಥೆಯು ಪ್ರಕರಣ ದಾಖಲಿಸಿತ್ತು. ವಿಚಾರಣೆಯನ್ನು ಕೈಗೆತ್ತಿಕೊಂಡ ಕೋರ್ಟ್ ಈ ಆದೇಶ ಹೊರಡಿಸಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಕಾಂಗ್ರೆಸ್ ಪಕ್ಷದ ಖಾತೆಯಾದ @INCIndiaಯಿಂದ ಮಾಡಲಾದ ಮೂರು ಟ್ವೀಟ್‌ಗಳನ್ನು ತೆಗೆದುಹಾಕಬೇಕು ಎಂದು ಕೋರ್ಟ್ ಸೂಚಿಸಿದೆ. ಹೆಚ್ಚುವರಿಯಾಗಿ ಮುಂದಿನ ವಿಚಾರಣೆಯ ದಿನಾಂಕದವರೆಗೆ @INCIndia ಮತ್ತು @BharatJodo ಸಾಮಾಜಿಕ ಮಾಧ್ಯಮ ಖಾತೆಗಳನ್ನು ನಿಷೇಧಿಸಬೇಕು ಎಂದು ಟ್ವಿಟರ್‌‌ ಸಂಸ್ಥೆಗೆ ಆದೇಶಿಸಲಾಗಿದೆ.

ಕೆಜಿಎಫ್- 2ರ ಸಂಗೀತವನ್ನು ಬಳಸಿದ್ದಕ್ಕಾಗಿ ರಾಹುಲ್ ಗಾಂಧಿ, ಜೈರಾಮ್ ರಮೇಶ್ ಮತ್ತು ಸುಪ್ರಿಯಾ ಶ್ರಿನೇಟ್ ವಿರುದ್ಧ ಕೃತಿಸ್ವಾಮ್ಯ ಕಾಯ್ದೆ, ಮಾಹಿತಿ ತಂತ್ರಜ್ಞಾನ ಕಾಯ್ದೆ ಮತ್ತು ಭಾರತೀಯ ದಂಡ ಸಂಹಿತೆಯ ನಿಬಂಧನೆಗಳ ಅಡಿಯಲ್ಲಿ ನವೆಂಬರ್ 4 ರಂದು ಯಶವಂತಪುರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿತ್ತು. ಎಂಆರ್‌ಟಿ ಮ್ಯೂಸಿಕ್ ಸಂಸ್ಥೆಯ ಎಂ.ನವೀನ್ ಕುಮಾರ್ ಅವರು ನೀಡಿದ ದೂರಿನ ಮೇರೆಗೆ ಪೊಲೀಸರು ಎಫ್‌ಐಆರ್‌ ಮಾಡಿದ್ದರು.

ಭಾರತ್ ಜೋಡೋ ಯಾತ್ರೆಯು ಕರ್ನಾಟಕದಲ್ಲಿ ಸಾಗುವಾಗ ಪ್ಲೇ ಮಾಡಲಾಗಿರುವ ಕೆಜಿಎಫ್‌-2ರ ಹಿಂದಿ ಅವತರಣಿಕೆಯ ‘ಸುಲ್ತಾನ್’ ಹಾಡಿನ ಕುರಿತು ಆಕ್ಷೇಪ ಎತ್ತಲಾಗಿದೆ. ರಾಹುಲ್ ಅವರ ಪಾದಯಾತ್ರೆ ಮತ್ತು ಸಾರ್ವಜನಿಕರೊಂದಿಗೆ ಸಂವಹನ ನಡೆಸುವುದನ್ನು ತೋರಿಸುವ ವೀಡಿಯೊದಲ್ಲಿ ಹಾಡು ಬಳಸಲಾಗಿದೆ ಎಂದು ದೂರು ನೀಡಲಾಗಿದೆ.

ಜೈರಾಮ್ ರಮೇಶ್ ಅವರು ತಮ್ಮ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಲ್ಲಿ ಭಾರತ್‌ ಜೋಡೋ ಯಾತ್ರೆಯ ಎರಡು ವೀಡಿಯೊಗಳನ್ನು ಪೋಸ್ಟ್ ಮಾಡಿದ್ದಾರೆ. ಇದರಲ್ಲಿ ಕೆಜಿಎಫ್ 2ರ ಚಿತ್ರದ ಜನಪ್ರಿಯ ಹಾಡುಗಳನ್ನು ಅನುಮತಿಯಿಲ್ಲದೆ ಬಳಸಲಾಗಿದೆ ಎಂದು ದೂರುದಾರರು ಆರೋಪಿಸಿದ್ದಾರೆ.

“ವೀಡಿಯೊಗಳನ್ನು ನೋಡಿದಾಗ ಆರೋಪಿಗಳು ಮೋಸದಿಂದ, ಅಕ್ರಮ ಲಾಭ ಗಳಿಸುವ ಉದ್ದೇಶದಿಂದ ಅನಧಿಕೃತವಾಗಿ ಮತ್ತು ಕಾನೂನುಬಾಹಿರವಾಗಿ ದೂರುದಾರನ ಮಾಲೀಕತ್ವದ ಧ್ವನಿಮುದ್ರಿಕೆಯನ್ನು ಬಳಸಿದ್ದಾರೆ ಎಂಬುದು ಸ್ಪಷ್ಟವಾಗುತ್ತದೆ” ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಭಾರತ್‌ ಜೋಡೋ ಯಾತ್ರೆಯು ಸೆಪ್ಟೆಂಬರ್ 7 ರಂದು ತಮಿಳುನಾಡಿನ ಕನ್ಯಾಕುಮಾರಿಯಿಂದ ಪ್ರಾರಂಭವಾಯಿತು. ಜನವರಿ 30, 2023ರಂದು ಜಮ್ಮುವನ್ನು ತಲುಪುವ ಗುರಿಯನ್ನು ಹೊಂದಿದೆ. ಈ ಯಾತ್ರೆಯು ಇದುವರೆಗೆ ಕೇರಳ, ತಮಿಳುನಾಡು, ಕರ್ನಾಟಕ, ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳ ಮೂಲಕ ಹಾದುಹೋಗಿದೆ.

ಇದನ್ನೂ ಓದಿರಿ: ನಾವೇಕೆ ಭಾರತ್ ಜೋಡೋ ಯಾತ್ರೆಯಲ್ಲಿ ರಾಹುಲ್ ಕಾಣಲು ಹೋದೆವು?

ಹಕ್ಕುಸ್ವಾಮ್ಯದ ಆರೋಪಗಳು ಇತ್ತೀಚೆಗೆ ಸದ್ದು ಮಾಡುತ್ತಿವೆ. ‘ಕಾಂತಾರ’ ಚಿತ್ರದ ‘ವರಾಹ ರೂಪಂ’ ಹಾಡಿನ ವಿರುದ್ಧ ಕೇರಳ ಮೂಲದ ಜನಪ್ರಿಯ ಸಂಗೀತ ಬ್ಯಾಂಡ್ ಥೈಕ್ಕುಡಂ ಬ್ರಿಡ್ಜ್ ಇತ್ತೀಚೆಗೆ ಪ್ರಕರಣ ದಾಖಲಿಸಿತ್ತು. ಹಕ್ಕುಸ್ವಾಮ್ಯ ಉಲ್ಲಂಘನೆಯ ಮೊಕದ್ದಮೆ ವಿಚಾರಣೆ ನಡೆಸಿದ ನ್ಯಾಯಾಲಯ ಹಾಡನ್ನು ಪ್ಲೇ ಮಾಡದಂತೆ ಸ್ಟ್ರೀಮಿಂಗ್ ಫ್ಲಾಟ್‌ಫಾರ್ಮ್‌ಗಳಿಗೆ ತಡೆಯಾಜ್ಞೆ ನೀಡಿತ್ತು.

ಕಾಂತಾರ ಚಿತ್ರದ ವರಾಹ ರೂಪಂ ಹಾಡು ಮತ್ತು 2015 ರಲ್ಲಿ ಬಿಡುಗಡೆಯಾದ ಥಕ್ಕುಡಂ ಬ್ರಿಡ್ಜ್‌‌ನ ‘ನವರಸಂ’ ಗೀತೆ ನಡುವೆ ‘ಸಾಮ್ಯತೆ’ ಇದೆ ಎಂದು ದೂರಲಾಗಿದೆ.

ನಿರ್ಮಾಪಕ, ನಿರ್ದೇಶಕ, ಸಂಗೀತ ಸಂಯೋಜಕರು, ಅಮೇಜಾನ್, ಯೂಟ್ಯೂಬ್‌, ಸ್ಪೋಟಿಫೈ, ವಿಂಕ್ ಮ್ಯೂಸಿಕ್, ಜಿಯೋಸಾವನ್ ಮತ್ತು ಇತರರು ಕಾಂತಾರ ಚಿತ್ರದ ವರಾಹ ರೂಪಂ ಹಾಡನ್ನು ಥೈಕ್ಕುಡಂ ಬ್ರಿಡ್ಜ್‌ನ ಅನುಮತಿಯಿಲ್ಲದೆ ಬಳಸುವಂತಿಲ್ಲ ಎಂದು ಕೋರ್ಟ್ ತಡೆಯಾಜ್ಞೆ ನೀಡಿತ್ತು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...