Homeಕರ್ನಾಟಕಬಿಗ್‌ ಬಾಸ್‌ ಮನೆಗೆ ಶಾಸಕ ಪ್ರದೀಪ್‌ ಈಶ್ವರ್‌ ಎಂಟ್ರಿ: ಸಾಮಾಜಿಕ ಜಾಲತಾಣಗಳಲ್ಲಿ ವಿರೋಧ

ಬಿಗ್‌ ಬಾಸ್‌ ಮನೆಗೆ ಶಾಸಕ ಪ್ರದೀಪ್‌ ಈಶ್ವರ್‌ ಎಂಟ್ರಿ: ಸಾಮಾಜಿಕ ಜಾಲತಾಣಗಳಲ್ಲಿ ವಿರೋಧ

- Advertisement -
- Advertisement -

ಬಿಗ್‌ ಬಾಸ್‌ ಕನ್ನಡ 10ನೇ ಅವೃತ್ತಿ ಆರಂಭಗೊಂಡಿದ್ದು, ವಿವಿಧ ಕ್ಷೇತ್ರಗಳ 17 ಮಂದಿ ಸ್ಪರ್ಧಿಗಳು ಬಿಗ್‌ ಬಾಸ್‌ ಮನೆಗೆ ಪ್ರವೇಶ ಮಾಡಿದ್ದಾರೆ. ಆದರೆ ಅಚ್ಚರಿ ಎಂಬಂತೆ ಚಿಕ್ಕಬಳ್ಳಾಪುರ ಕ್ಷೇತ್ರದ ಕಾಂಗ್ರೆಸ್‌ ಶಾಸಕ ಪ್ರದೀಪ್‌ ಈಶ್ವರ್‌ ಅವರು ಬಿಗ್ ಬಾಸ್‌ ಮನೆಗೆ ಎಂಟ್ರಿ ಕೊಟ್ಟಿದ್ದು ಭಾರೀ ಚರ್ಚೆಗೆ ಕಾರಣವಾಗಿದೆ.

ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್‌ ಅವರು ಬಿಗ್‌ ಬಾಸ್‌ ಮನೆಯನ್ನು ಪ್ರವೇಶ ಮಾಡುವ ವಿಡಿಯೋ ಪ್ರೊಮೊವನ್ನು ಕಲರ್ಸ್‌ ಕನ್ನಡ ವಾಹಿನಿ ಬಿಡುಗಡೆ ಮಾಡಿದೆ. ಇದರ ಬೆನ್ನಲ್ಲೇ ಜನರಿಂದ ಆಯ್ಕೆಯಾದ ಶಾಸಕನೋರ್ವ ಜನರ ಸಂಪರ್ಕ ಇಲ್ಲದೆ ಇರುವ ಮನೆಯಲ್ಲಿ 3 ತಿಂಗಳ ಕಾಲ ಇರುವುದು ಎಷ್ಟು ಸರಿ ಎಂಬ ಬಗ್ಗೆ ಪ್ರಶ್ನೆ ಭುಗಿಲೆದ್ದಿದೆ.

ಈ ವಾರ 11 ಸ್ಪರ್ಧಿಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದ್ದು ಉಳಿದವರನ್ನು ಮುಂದಿನ ವಾರ ಆಯ್ಕೆ ಮಾಡಲಾಗುವುದು ಎಂದು ನಿರೂಪಕ ಕಿಚ್ಚ ಸುದೀಪ್‌ ತಿಳಿಸಿದ್ದರು. ಆದರೆ ಮೊದಲ ದಿನವೇ ಇದ್ದಕ್ಕಿದ್ದಂತೆ ಶಾಸಕ ಪ್ರದೀಪ್‌ ಈಶ್ವರ್‌ ಎಂಟ್ರಿ ಕೊಟ್ಟಿದ್ದಾರೆ.  ನಾನು ನಿನ್ನೆಯೇ ಬಿಗ್‌ ಬಾಸ್‌ ವೇದಿಕೆಗೆ ಬರಬೇಕಿತ್ತು. ಸ್ಪರ್ಧಿಯಾಗಿ ಇಲ್ಲಿ ಸೇರಿದ್ದಕ್ಕೆ ತುಂಬ ಖುಷಿಯಾಗುತ್ತಿದೆ. ಗೆಲ್ಲೋದರಲ್ಲಿ ನಮಗೆ ಕಾಂಪ್ರಮೈಸ್‌ ಇಲ್ಲ ಎಂದು ಸ್ಪರ್ಧಿಗಳ ಮುಂದೆ ಹೇಳಿದ್ದಾರೆ.

ಪ್ರದೀಪ್ ಈಶ್ವರ್‌ ಅವರು ಬಿಗ್‌ ಬಾಸ್‌ ಮನೆಗೆ ಎಂಟ್ರಿ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಟೀಕೆಗೆ ಕಾರಣವಾಗಿದೆ.

ಈ ಬಗ್ಗೆ ಸಾಮಾಜಿಕ ಜಾಲತಾಣ ಫೇಸ್ಬುಕ್ ಪೋಸ್ಟ್ ಮಾಡಿದ ಬಾಲು ವಿಲ್‌, ದಯವಿಟ್ಟು ಈಶ್ವರ ಶಾಸಕನನ್ನು ಈ ಕಾರ್ಯಕ್ರಮದಿಂದ ವಾಪಸ್ ಕರೆಸಿ ಇಲ್ಲ ವಜಾಮಾಡಿ. ಜನ ಆರಿಸಿರೋದು ಇವರ ಮಂಗ ಆಟ ನೋಡೊದಕ್ಕೆ ಅಲ್ಲ. ಯಾವನದ್ದೋ ಟಿಅರ್‌ಪಿಗೋಸ್ಕರ ಜನ ಆರಿಸಿಲ್ಲ, ಕಾಂಗ್ರೆಸ್‌ ಪಕ್ಷದ ಅಧ್ಯಕ್ಷರಾದ ಡಿಕೆ ಶಿವಕುಮಾರ್‌ ಅವರು ದಯವಿಟ್ಟು ಗಮನಿಸಿ ಎಂದು ಬರೆದಿದ್ದಾರೆ.

ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿ ಹನುಮೇಶ ಗುಂಡೂರು ಅವರು ಫೇಸ್ಬುಕ್ ಪೋಸ್ಟ್ ಹಾಕಿದ್ದು, ಜನಪ್ರತಿನಿಧಿ ಆಗಿರುವ ವ್ಯಕ್ತಿ ಈ ತರಹ ಜನರಿಗೆ ಅನುಕೂಲ ಇಲ್ಲದೇ ಇರುವ ಕಾರ್ಯಕ್ರಮಕ್ಕೆ ಹೋಗೋದು ಜನರಿಗೆ ಮಾಡುವ ದ್ರೋಹ ಎಂದು ಬರೆದಿದ್ದಾರೆ.

ಈ ಬಗ್ಗೆ ಫೇಸ್ಬುಕ್ ಪೋಸ್ಟ್‌ ಹಾಕಿದ ಸುಭಾಷ್ ರಾಜಮಾನೆ, ಸಂವಿಧಾನಬದ್ದ ಚುನಾವಣೆಗಳ ಮೂಲಕ ಪ್ರಜೆಗಳಿಂದ ಆಯ್ಕೆಯಾದ ಶಾಸಕರೊಬ್ಬರು ಬಿಗ್ ಬಾಸ್  ಮನೆಯಲ್ಲಿ ಮೂರು ತಿಂಗಳು ಬಂಧಿಯಾಗುವುದು ಎಷ್ಟು ಸರಿ? ಅಲ್ಲಿ ನಡೆಯುವ ಹುಚ್ಚಾಟಗಳಿಗೆ ಕೊನೆಯೇ ಇಲ್ಲ. ಇನ್ನು ಬಿಗ್ ಬಾಸ್ ಮನೆಗೆ ಹೋಗಿ ಬಂದವರು ಹುಚ್ಚರಂತೆ ಆಡುವುದನ್ನು ನೋಡಿದ್ದೇನೆ ಎಂದು ಬರೆದುಕೊಂಡಿದ್ದಾರೆ.

ಈ ಬಗ್ಗೆ ನಾನು ಗೌರಿ.ಕಾಂ ಜೊತೆ ಮಾತನಾಡಿದ ಚಿಕ್ಕಬಳ್ಳಾಪರ ಕ್ಷೇತ್ರದ ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷರಾದ ಆಂಜನೇಯ ರೆಡ್ಡಿ ಆರ್‌, ಶಾಸಕರು ಹೋಗಿದ್ದು ತಪ್ಪು ಅಥವಾ ಇಲ್ಲಿರುವ ಇತರ ಶಾಸಕರ ದೊಡ್ಡ ಕೆಲಸ ಮಾಡುತ್ತಾರೆ ಎನ್ನಲು ಸಾಧ್ಯವಿಲ್ಲ. ಕ್ಷೇತ್ರದ ಸಮಸ್ಯೆ ಬಗ್ಗೆ ಯಾರೂ ಕೂಡ ಗಮನ ಹರಿಸುವುದು ಕಂಡು ಬಂದಿಲ್ಲ. ಆದ್ದರಿಂದ ಯಾವುದೇ ಶಾಸಕರು ಕ್ಷೇತ್ರದಲ್ಲೇ ಇದ್ದರೂ, ಅಥವಾ ಬೆಂಗಳೂರು, ಸಿಂಗಪುರ ಎಲ್ಲಿ ಇದ್ದರೂ ಏನು ಕೂಡ ಪ್ರಯೋಜನ ಇಲ್ಲ. ಇಲ್ಲಿ ನೀರಿನ ಕೊರತೆ ಇದೆ. ಕುಡಿಯುವ ನೀರಿನಲ್ಲಿ ರಾಸಾಯನಿಕ ಮಿಶ್ರಣವಾಗಿ ಕಲುಷಿತವಾಗಿದೆ. ದನಕರುಗಳ ಮೇವಿನ ಸಮಸ್ಯೆ, ಎತ್ತಿನ ಹೊಳೆಯಲ್ಲಿ ಲೂಟಿ, ವಿದ್ಯುತ್‌ ಅಸಮರ್ಪಕ ಪೂರೈಕೆ ಸಮಸ್ಯೆ ಇದೆ. ಜಿಲ್ಲೆಯ ನಿಜವಾದ ಸಮಸ್ಯೆ ಬಗ್ಗೆ ಶಾಸಕರಿಗೆ ಅರಿವಿಲ್ಲ. ಎಲ್ಲರೂ ಅವರವರ ಪ್ರಚಾರಕ್ಕೆ ಒದ್ದಾಡುತ್ತಿರತ್ತಾರೆ, ಇದು ಕೂಡ ಪ್ರಚಾರದ ಒಂದು ವೇದಿಕೆಯಾಗಿದೆ ಎಂದು ಹೇಳಿದ್ದಾರೆ. ಜಿಲ್ಲೆಯ ಎಲ್ಲಾ ಶಾಸಕರು ಇರುವ ಸಮಯದಲ್ಲಿ ಜಿಲ್ಲೆಯ ಸಮಸ್ಯೆಗೆ ಸ್ಪಂದಿಸಬೇಕು. ಜಿಲ್ಲೆಯಲ್ಲಿ ಐವರು ಶಾಸಕರಿದ್ದಾರೆ. ಅವರಿಗೆ ನಿಜವಾದ ಸಮಸ್ಯೆಯ ಅರಿವಿಲ್ಲ ಎಂದು ಹೇಳಿದ್ದಾರೆ. ಬಿಗ್ ಬಾಸ್‌ ಮನೆಗೆ ಅವರು ಹೋದ ಕಾರಣಕ್ಕೆ ಜನರ ಸಂಪರ್ಕಕ್ಕೆ ಅವರು  ಸಿಗಲ್ಲ ಭ್ರಮೆಯಲ್ಲಿ ಕೂಡ ನಾನು ಇಲ್ಲ ಎಂದು ಹೇಳಿದ್ದಾರೆ.

ಮೂಲಗಳ ಪ್ರಕಾರ ಪ್ರದೀಪ್ ಈಶ್ವರ್ ಹೆಚ್ಚು ದಿನ ಬಿಗ್ ಬಾಸ್  ಮನೆಯಲ್ಲಿ ಇರುವುದಿಲ್ಲ ಎನ್ನಲಾಗಿದೆ. ತಮ್ಮ ನೀಟ್ ಅಕಾಡೆಮಿ, ಪಿಯು ಕಾಲೇಜು ಹಾಗೂ ಕ್ಷೇತ್ರದ ಜವಾಬ್ದಾರಿ ಇರುವುದರಿಂದ ಕೇವಲ ಅತಿಥಿಯಾಗಿ ಮಾತ್ರ ಪ್ರವೇಶ ಪಡೆದಿದ್ದಾರೆ ಎನ್ನಲಾಗಿದೆ. ಆದರೆ ಎಷ್ಟು ದಿನ ಇರ್ತಾರೆ ಎನ್ನುವುದು ಮಾತ್ರ ಇನ್ನು ಕೂಡ ನಿಗೂಡವಾಗಿದೆ.

ಇದನ್ನು ಓದಿ: ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆಗೆ ದಿನಾಂಕ ಘೋಷಿಸಿದ ಚುನಾವಣಾ ಆಯೋಗ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕೋಲ್ಕತ್ತಾ: ನಾಪತ್ತೆಯಾಗಿದ್ದ ಬಾಂಗ್ಲಾದೇಶದ ಸಂಸದನ ಮೃತದೇಹ ತುಂಡರಿಸಿದ ಸ್ಥಿತಿಯಲ್ಲಿ ಪತ್ತೆ

0
ಬಾಂಗ್ಲಾದೇಶದ ಸಂಸದ ಅನ್ವರುಲ್ ಅಝೀಂ ಅನಾರ್ ಭಾರತದಲ್ಲಿ ನಾಪತ್ತೆಯಾದ ಎಂಟು ದಿನಗಳ ನಂತರ ಕೋಲ್ಕತ್ತಾ ಪೊಲೀಸರು ಅವರ ತುಂಡರಿಸಿದ ಮೃತದೇಹವನ್ನು ಪತ್ತೆ ಹಚ್ಚಿದ್ದಾರೆ. ಕೋಲ್ಕತ್ತಾ ಪೊಲೀಸರು ಹತ್ಯೆಯು ಪೂರ್ವ ನಿಯೋಜಿತ ಎಂದು ಹೇಳಿಕೊಂಡಿದ್ದಾರೆ. ಅನಾರ್...