Homeಮುಖಪುಟಬಿಹಾರ ಬಿಜೆಪಿ ಮುಖಂಡನ ಸಾವಿಗೆ ಹೃದಯಾಘಾತ ಕಾರಣ ಎಂದ ಮರಣೋತ್ತರ ಪರೀಕ್ಷಾ ವರದಿ

ಬಿಹಾರ ಬಿಜೆಪಿ ಮುಖಂಡನ ಸಾವಿಗೆ ಹೃದಯಾಘಾತ ಕಾರಣ ಎಂದ ಮರಣೋತ್ತರ ಪರೀಕ್ಷಾ ವರದಿ

- Advertisement -
- Advertisement -

ಬಿಹಾರ ಸರ್ಕಾರದ ಶಿಕ್ಷಕರ ನೇಮಕಾತಿ ನೀತಿ ವಿರೋಧಿಸಿ ಬಿಜೆಪಿ ಪಕ್ಷವು ಜುಲೈ 13 ರಂದು ಪಾಟ್ನಾದಲ್ಲಿ ನಡೆಸಿದ ಬೃಹತ್ ಪ್ರತಿಭಟನೆ ವೇಳೆ ಮೃತಪಟ್ಟ ಪಕ್ಷದ ಮುಖಂಡ ವಿಜಯ್ ಕುಮಾರ್ ಸಿಂಗ್ ಸಾವಿಗೆ ಹೃದಯಾಘಾತ ಕಾರಣ ಎಂದ ಮರಣೋತ್ತರ ಪರೀಕ್ಷಾ ವರದಿ ಹೇಳಿದೆ.

ಪಾಟ್ನಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ವೈದ್ಯರು ನೀಡಿರುವ ಮರಣೋತ್ತರ ಪರೀಕ್ಷಾ ವರದಿಯಲ್ಲಿ, “ಮೃತರ ದೇಹದ ಮೇಲೆ ಯಾವುದೇ ಗಾಯದ ಗುರುತುಗಳಿಲ್ಲ. ಹೃದಯಾಘಾತ ಮತ್ತು ಇತರ ಅನಾರೋಗ್ಯದ ಕಾರಣಗಳಿಂದ ಸಾವು ಸಂಭವಿಸಿದೆ” ಎಂದು ಹೇಳಲಾಗಿದೆ.

ಇದನ್ನು ಒಪ್ಪದ ಬಿಜೆಪಿ ಪಕ್ಷವು ಪ್ರತಿಭಟನೆ ನಿಯಂತ್ರಿಸಲು ಪೊಲೀಸರು ಮಾಡಿದ ಲಾಠೀ ಚಾರ್ಜ್‌ನಲ್ಲಿ ವಿಜಯ್ ಕುಮಾರ್ ಸಿಂಗ್ ಸಾವನಪ್ಪಿದ್ದಾರೆ ಎಂದು ಆರೋಪಿಸಿದೆ. ಆದರೆ ಬಿಹಾರ ಸರ್ಕಾರ ತಮಗೆ ಬೇಕಾದಂತೆ ಮರಣೋತ್ತರ ವರದಿ ಬರೆಸಿದೆ, ಈ ಕುರಿತು ಉನ್ನತ ತನಿಖೆ ನಡೆಸಬೇಕು ಎಂದು ಬಿಹಾರದ ವಿರೋಧ ಪಕ್ಷದ ನಾಯಕ ವಿಜಯ್ ಕುಮಾರ್ ಸಿನ್ಹ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್, “ವಿಜಯ್ ಕುಮಾರ್‌ರವರ ಸಾವು ನಮಗೂ ನೋವು ತರಿಸಿದೆ. ಆದರೆ ಪೊಲೀಸರು ಅವರ ಮೇಲೆ ಲಾಠೀಚಾರ್ಜ್‌ ಮಾಡಿಲ್ಲ. ಬದಲಿಗೆ ಹೃದಯಾಘಾತದಿಂದ ಅವರು ಮೃತಪಟ್ಟಿದ್ದಾರೆ ಎಂದು ಮರಣೋತ್ತರ ವರದಿ ಹೇಳಿದೆ. ಹಾಗಾಗಿ ಈ ಸಾವನ್ನು ಬಿಜೆಪಿ ಮುಖಂಡರು ತಮ್ಮ ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳಬಾರದು” ಎಂದಿದ್ದಾರೆ.

ಲಾಠಿ ಚಾರ್ಜ್ ಸಮಯದಲ್ಲಿ ಮೃತ ಸ್ಥಳದಲ್ಲಿರಲಿಲ್ಲ – ಪೊಲೀಸ್ ಹೇಳಿಕೆ

ಬಿಜೆಪಿಯ ಆರೋಪವನ್ನು ತಳ್ಳಿ ಹಾಕಿರುವ ಬಿಹಾರ ಪೊಲೀಸರು ಬಿಜೆಪಿ ಮುಖಂಡ ಲಾಠಿ ಚಾರ್ಜ್ ಸಮಯದಲ್ಲಿ ಪ್ರತಿಭಟನಾ ಸ್ಥಳದಲ್ಲಿರಲಿಲ್ಲ ಎಂದು ಪ್ರತಿಪಾದಿಸಿದ್ದಾರೆ.

ಪೊಲೀಸ್ ಲಾಠಿ ಚಾರ್ಜ್‌ನಲ್ಲಿ ಬಿಜೆಪಿ ಪಕ್ಷದ ಜೆಹಾನಾಬಾದ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿಜಯ್ ಕುಮಾರ್ ಸಿಂಗ್ ಅವರು ಸಾವನ್ನಪ್ಪಿದ್ದಾರೆ ಎಂದು ಬಿಜೆಪಿ ಆರೋಪಿಸಿದ ನಂತರ ಪೊಲೀಸರು ಹೇಳಿಕೆ ನೀಡಿದ್ದು, “ಪ್ರಾಥಮಿಕ ತನಿಖೆ ಮತ್ತು ವಿವಿಧ ಸ್ಥಳಗಳ ಸಿಸಿಟಿವಿ ದೃಶ್ಯಾವಳಿಗಳ ಪರಿಶೀಲನೆಯಿಂದ ಜೆಹಾನಾಬಾದ್ ಮೂಲದ ವಿಜಯ್ ಕುಮಾರ್ ಸಿಂಗ್ ಲಾಠಿ ಚಾರ್ಜ್ ನಡೆದ ಡಾಕ್ ಬಂಗಲೆ ವೃತ್ತವನ್ನು ತಲುಪಿರಲಿಲ್ಲ” ಎಂದು ಪಾಟ್ನಾದ ಹಿರಿಯ ಅಧೀಕ್ಷರಾದ ರಾಜೀವ್ ಮಿಶ್ರಾ ತಿಳಿಸಿದ್ದಾರೆ.

“ಒಂದು ಸಿಸಿಟಿವಿಯ ವಿಡಿಯೋ ತುಣುಕಿನಲ್ಲಿ ವಿಜಯ್ ಕುಮಾರ್ ಸಿಂಗ್ ಮತ್ತು ಅವರೊಂದಿಗೆ ಇಬ್ಬರು ವ್ಯಕ್ತಿಗಳು ಮಧ್ಯಾಹ್ನ 1 ಗಂಟೆ 22 ನಿಮಿಷದ ಸಂದರ್ಭದಲ್ಲಿ ಗಾಂಧಿ ಮೈದಾನ-ಚಜ್ಜು ಬಾಗ್ ರಸ್ತೆಯ ಮೂಲಕ ಚಜ್ಜು ಬಾಗ್ ಪ್ರದೇಶದಲ್ಲಿ ಚಲಿಸುತ್ತಿರುವುದನ್ನು ಕಾಣಬಹುದು. ಆ ಮೂವರೂ ಪರಸ್ಪರ ಮಾತನಾಡುತ್ತಿದ್ದರು ಮತ್ತು ಅವರು ಆರೋಗ್ಯವಾಗಿದ್ದರು. ಆನಂತರ 1 ಗಂಟೆ 27ನೇ ನಿಮಿಷದ ಸಂದರ್ಭದಲ್ಲಿ ಆಟೋ ರಿಕ್ಷಾದಲ್ಲಿ  ಆಸ್ಪತ್ರೆಗೆ ಕರೆದೊಯ್ದದ್ದು ಕೂಡ ಅದೇ ವಿಡಿಯೋದಲ್ಲಿ ದಾಖಲಾಗಿದೆ. ಸಿಸಿಟಿವಿ ಕ್ಯಾಮರಾದಿಂದ ಸುಮಾರು 50 ಮೀಟರ್ ದೂರದಲ್ಲಿ ಎಲೆಕ್ಟ್ರಿಕ್ ಟ್ರಾನ್ಸ್‌ಫಾರ್ಮರ್ ಬಳಿ ಸಿಂಗ್ ರಸ್ತೆಯಲ್ಲಿ ಬಿದ್ದಿರುವುದು ಕಂಡುಬಂದಿದೆ ಎಂದು ಪ್ರತ್ಯಕ್ಷದರ್ಶಿಗಳು ಪೊಲೀಸರಿಗೆ ತಿಳಿಸಿದ್ದಾರೆ ಎಂದು ರಾಜೀವ್ ಮಿಶ್ರಾ ಹೇಳಿದ್ದಾರೆ.

ಆ ಪ್ರದೇಶದಲ್ಲಿ ಯಾವುದೇ ಲಾಠಿ ಚಾರ್ಜ್ ನಡೆದಿಲ್ಲ, ಸಿಂಗ್ ಅವರ ದೇಹದ ಮೇಲೆ ಯಾವುದೇ ಬಾಹ್ಯ ಗಾಯದ ಗುರುತುಗಳು ಕಂಡುಬಂದಿಲ್ಲ ಎಂದು ಅವರು ಹೇಳಿದ್ದಾರೆ.

“ಮೃತ ಸಿಂಗ್ ಜೊತೆಗಿದ್ದ ಇಬ್ಬರು ವ್ಯಕ್ತಿಗಳು ತಾವು ಡಾಕ್ ಬಂಗಲೆ ವೃತ್ತಕ್ಕೆ ಹೋಗಿಲ್ಲ ಎಂದು ಪೊಲೀಸರಿಗೆ ತಿಳಿಸಿದ್ದಾರೆ. ಪೊಲೀಸರು ಆ ವೃತ್ತವನ್ನು ಬ್ಯಾರಿಕೇಡ್ ಹಾಕಿ ಮುಚ್ಚಿದ್ದರಿಂದ ಅವರು ಆ ಕಡೆ ಹೋಗದಿರಲು ನಿರ್ಧರಿಸಿದರು. ನಂತರ ಸಿಂಗ್ ಅವರ ಸ್ನೇಹಿತರು ಅವರನ್ನು ರಿಕ್ಷಾದ ಮೂಲಕ ಹತ್ತಿರದ ಆಸ್ಪತ್ರೆಗೆ ಕರೆದೊಯ್ದರು. ರಿಕ್ಷಾವು ಹತ್ತಿರದ ಆಸ್ಪತ್ರೆಯನ್ನು ತಲುಪಲು ಐದರಿಂದ ಆರು ನಿಮಿಷಗಳನ್ನು ತೆಗೆದುಕೊಂಡಿರಬಹುದು ಎಂದು ನಾವು ನಂಬುತ್ತೇವೆ. ಅವರು ಮೂರ್ಛೆ ಹೋದ ಘಟನೆ ಮಧ್ಯಾಹ್ನ 1.23 ರಿಂದ 1.27 ರ ನಡುವೆ ನಡೆದಿರಬಹುದು. ಸಿಂಗ್ ಸುತ್ತಲೂ ಅಥವಾ ರಿಕ್ಷಾದ ಸುತ್ತಲೂ ಯಾವುದೇ ಪೊಲೀಸರು ಕಂಡುಬಂದಿಲ್ಲ ಎಂದು ದೃಶ್ಯಗಳು ಬಹಿರಂಗಪಡಿಸಿವೆ”ಎಂದು ಅವರು ಹೇಳಿದ್ದಾರೆ.

“ಅಲ್ಲದೇ ಚಜ್ಜು ಬಾಗ್ ಪ್ರದೇಶದಲ್ಲಿನ ಸಿಸಿಟಿವಿಯ ದೃಶ್ಯಗಳಲ್ಲಿ ಯಾವುದೇ ರೀತಿಯ ಕಾಲ್ತುಳಿತದ ದೃಶ್ಯ ಕಂಡುಬಂದಿಲ್ಲ. ಆ ಪ್ರದೇಶದಲ್ಲಿ ಸಂಪೂರ್ಣ ಸಾಮಾನ್ಯ ಸಂಚಾರ ದಟ್ಟಣೆ ಕಂಡುಬಂದಿದೆ. ಮರಣೋತ್ತರ ಪರೀಕ್ಷೆಯ ವರದಿಯ ನಂತರವೇ ಅವರ ಸಾವಿಗೆ ನಿಖರವಾದ ಕಾರಣವನ್ನು ಕಂಡುಹಿಡಿಯಬಹುದು” ಎಸ್‌ಎಸ್‌ಪಿ ಹೇಳಿದ್ದರು.

ಬಿಜೆಪಿಯ ಪ್ರತಿಭಟನಾ ಮೆರವಣಿಗೆಗೆ ಸಂಬಂಧಿಸಿದಂತೆ ಒಟ್ಟು 59 ಜನರನ್ನು ಬಂಧಿಸಲಾಯಿತು ಆದರೆ ಅವರೆಲ್ಲರನ್ನೂ ನಂತರ ಬಿಡುಗಡೆ ಮಾಡಲಾಯಿತು ಎಂದು ಅವರು ಹೇಳಿದರು.

“ಮೃತರ ಮರಣೋತ್ತರ ಪರೀಕ್ಷೆಯನ್ನು ನಡೆಸುವಾಗ ಜಿಲ್ಲಾಡಳಿತವು ಸಂಪೂರ್ಣ ಪಾರದರ್ಶಕತೆಯನ್ನು ಅನುಸರಿಸಿದೆ. ಮ್ಯಾಜಿಸ್ಟ್ರೇಟ್ ಮತ್ತು ಮರಣೋತ್ತರ ಪರೀಕ್ಷೆಯನ್ನು ವೈದ್ಯಕೀಯ ಮಂಡಳಿಯು ವೀಡಿಯೊಗ್ರಫಿ ಅಡಿಯಲ್ಲಿ ನಡೆಸಿತು” ಎಂದು ಎಸ್‌ಎಸ್‌ಪಿ ಹೇಳಿದ್ದಾರೆ.

ಇದನ್ನೂ ಓದಿ: ದೇಶದ ಇತಿಹಾಸದಲ್ಲೇ ವಿಪಕ್ಷ ನಾಯಕನಿಲ್ಲದೆ ನಡೆದ ಅಧಿವೇಶನ: ಕುಖ್ಯಾತಿ ಪಡೆದ ಬಿಜೆಪಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ: ಅಪಹರಣಕ್ಕೊಳಗಾಗಿದ್ದ ಸಂತ್ರಸ್ತೆಯ ರಕ್ಷಣೆ

0
ಅಪಹರಣಕ್ಕೊಳಗಾಗಿದ್ದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ, ಶಾಸಕ ಹೆಚ್‌.ಡಿ ರೇವಣ್ಣ ಅವರ ಮನೆ ಕೆಲಸದ ಮಹಿಳೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಅಧಿಕಾರಿಗಳು ಇಂದು (ಮೇ 4) ರಕ್ಷಣೆ ಮಾಡಿದ್ದಾರೆ. ಪ್ರಜ್ವಲ್...