ತಮ್ಮ 18 ವರ್ಷದ ಮಗಳು ಅಂತರ್ಜಾತಿ ವಿವಾಹವಾಗಿದ್ದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಪೋಷಕರು, ಆಕೆಗೆ ಸಾಂಕೇತಿಕವಾಗಿ ಅಂತ್ಯಕ್ರಿಯೆ ನಡೆಸಿದ ಘಟನೆ ಬಿಹಾರದ ಪೂರ್ಣಿಯಾದಲ್ಲಿ ಬೆಳಕಿಗೆ ಬಂದಿದೆ.
ಯುವತಿಯ ಫೋಟೋವಿರುವ ಪ್ರತಿಕೃತಿಯನ್ನು ಸಿದ್ಧಪಡಿಸಿ ಊರಿನಲ್ಲಿ ಶವಯಾತ್ರೆ ನಡೆಸಿ ಅಂತ್ಯಕ್ರಿಯೆ ಮಾಡಿದ್ದಾರೆ. ಆಕೆ ತನ್ನ ಇಚ್ಛೆಯಂತೆ ಮದುವೆಯಾಗಿರುವುದಾಗಿ ಸ್ಥಳೀಯ ನ್ಯಾಯಾಲಯದಲ್ಲಿ ಒಪ್ಪಿಕೊಂಡ ನಂತರ ಈ ಸಾಂಕೇತಿಕ ಅಂತ್ಯಕ್ರಿಯೆಯ ವಿಧಿವಿಧಾನಗಳನ್ನು ನೆರವೇರಿಸಲಾಗಿದೆ. ಪೂರ್ಣಿಯಾದ ಟೌನ್ ಪೊಲೀಸ್ ಠಾಣೆ ವ್ಯಾಪ್ತಿಯ ಚಪಾಯ ಗ್ರಾಮದಲ್ಲಿ ಮಂಗಳವಾರ ಈ ಘಟನೆ ನಡೆದಿದೆ.
ಪ್ರಥಮ ವರ್ಷದ ಕಾಲೇಜು ವಿದ್ಯಾರ್ಥಿನಿಯಾದ ರಿಯಾ, ಸೆಪ್ಟೆಂಬರ್ 8 ರಂದು 24 ವರ್ಷದ ಮಿನಾಲ್ ಕುಮಾರ್ ಜತೆ ಓಡಿಹೋಗಿ ಕೋರ್ಟ್‌ನಲ್ಲಿ ವಿವಾಹವಾಗಿದ್ದಳು.
ಆಕೆಯ ತಂದೆ ಮನೋಜ್ ಕುಮಾರ್ ಗೋಸ್ವಾಮಿ, ತನ್ನ ಮಗಳು ಅಪಹರಣಕ್ಕೊಳಗಾಗಿದ್ದಾಳೆ ಎಂದು ಶಂಕಿಸಿ ಮರಂಗಾ ಪೊಲೀಸ್ ಠಾಣೆಗೆ ತೆರಳಿ ನಾಪತ್ತೆಯಾಗಿರುವ ಬಗ್ಗೆ ದೂರು ದಾಖಲಿಸಿದ್ದರು.
ಗ್ರಾಮಸ್ಥರ ಪ್ರಕಾರ, ರಿಯಾ ಮತ್ತು ಮಿನಾಲ್ ಸುಮಾರು ಮೂರು ವರ್ಷಗಳಿಂದ ಪ್ರೇಮ ಸಂಬಂಧದಲ್ಲಿದ್ದರು. ಇವರ ಮನೆಗಳು ಪರಸ್ಪರ ಕೇವಲ 100 ಮೀಟರ್ ದೂರದಲ್ಲಿದ್ದವು.
ರಿಯಾ ಕಾಲೇಜಿಗೆ ಪ್ರಯಾಣಿಸುವಾಗ ಇಬ್ಬರೂ ಮೊದಲು ಪರಸ್ಪರ ಪರಿಚಯವಾಗಿದ್ದರು, ಕ್ರಮೇಣ ಭೇಟಿಯಾಗಿ ಮಾತನಾಡಲು ಶುರು ಮಾಡಿದ್ದರು. ಎರಡು ದಿನಗಳ ಹಿಂದೆ ಪೊಲೀಸರು ದೆಹಲಿಯಿಂದ ರಿಯಾವನ್ನು ಪತ್ತೆಹಚ್ಚಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಅಲ್ಲಿ ಆಕೆಯ ಹೇಳಿಕೆಯನ್ನು ದಾಖಲಿಸಲಾಯಿತು.
ಆಕೆಯು ಮಿನಾಲ್ ಪರವಾಗಿ ಮಾತನಾಡಿ, ತಾನು ಸ್ವಯಂಪ್ರೇರಿತವಾಗಿ ಮದುವೆಯಾಗಿರುವುದಾಗಿ ಹೇಳಿದಾಗ ಆಕೆಯ ತಂದೆ ತೀವ್ರವಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಳಿಕ ಅವರು ಅಂತ್ಯಕ್ರಿಯೆಯ ಸಮಾರಂಭದ ಮೂಲಕ ತಮ್ಮ ಮಗಳ ಜತೆಗಿನ ಸಂಬಂಧವನ್ನು ಸಾಂಕೇತಿಕವಾಗಿ ಮುಗಿಸಲು ನಿರ್ಧರಿಸಿದ್ದಾರೆ.
ಗ್ರಾಮಸ್ಥರ ಪ್ರಕಾರ, ಸೋಮವಾರ ರಾತ್ರಿಯೇ ಕುಟುಂಬವು ರಿಯಾಳ ಪ್ರತಿಕೃತಿಯನ್ನು ತಯಾರಿಸಿ, ಆಕೆಯ ಫೋಟೋವಿರುವ ಪೋಸ್ಟರ್ ಅನ್ನು ಸಿದ್ಧಪಡಿಸಿತ್ತು. ಮೆರವಣಿಗೆಯಲ್ಲಿ ಭಾಗವಹಿಸಲು ಮರುದಿನ ಬೆಳಿಗ್ಗೆ ಗ್ರಾಮಸ್ಥರನ್ನು ಆಹ್ವಾನಿಸಿದ್ದರು.
ನಂತರ ಪ್ರತಿಕೃತಿಯನ್ನು ಮನೆಯಿಂದ ಹೊತ್ತುಕೊಂಡು ಗ್ರಾಮದಾದ್ಯಂತ ಶವಯಾತ್ರೆ ನಡೆಸಲಾಯಿತು. ಮನೋಜ್ ಸಾಂಕೇತಿಕ ದಹನ ಕ್ರಿಯೆಯನ್ನು ನೆರವೇರಿಸುವ ಮೊದಲು ಜನರು ಹಿಂದೂ ಅಂತ್ಯಕ್ರಿಯೆಯ ಜಪವಾದ “ರಾಮ್ ನಾಮ್ ಸತ್ಯ ಹೈ” ಎಂದು ಘೋಷಣೆಗಳನ್ನು ಕೂಗಿದರು.
ಕುಟುಂಬವು 10 ಮತ್ತು 13 ನೇ ದಿನಗಳ ನಡುವೆ ಶ್ರಾದ್ಧ ಮತ್ತು ಪಿಂಡ-ದಾನ ಸೇರಿದಂತೆ ಸಾವಿಗೆ ಸಂಬಂಧಿಸಿದ ವಿಧಿಗಳನ್ನು ನಿರ್ವಹಿಸುವುದಾಗಿ ತಿಳಿಸಿದೆ.
ರಿಯಾಳ ಮದುಲೆಯನ್ನು ಈಗಾಗಲೇ ನಿಶ್ಚಯಿಸಲಾಗಿತ್ತು ಎಂದು ಮನೋಜ್ ಹೇಳಿದ್ದಾರೆ. ನವೆಂಬರ್‌ನಲ್ಲಿ ಮದುವೆ ದಿನಾಂಕ ನಿಗದಿಪಡಿಸಲಾಗಿತ್ತು.
“ನಾವು ಮಗಳ ಮದುವೆಗೆ ಸಿದ್ಧತೆಗಳನ್ನು ಆರಂಭಿಸಿದ್ದೆವು. ಅಷ್ಟರಲ್ಲಿ ನನ್ನ ಅವಳು ಓಡಿಹೋಗಿ ತನ್ನ ಇಚ್ಛೆಯಂತೆ ಮದುವೆಯಾಗಿದ್ದಾಳೆ. ಈಗ ನಾನು ಆ ಇನ್ನೊಂದು ಕುಟುಂಬಕ್ಕೆ ಏನು ಹೇಳಲಿ? ಅವರ ಎದುರು ಹೇಗೆ ಮುಖ ತೋರಿಸಲಿ?” ಎಂದು ಅವರು ಬೇಸರ ವ್ಯಕ್ತಪಡಿಸಿದರು.
“ನಾನು ನನ್ನ ಮಗಳಿಗೆ ಶಿಕ್ಷಣ ನೀಡಿದೆ, ಬೆಳೆಸಿದೆ ಮತ್ತು ಆಕೆ ನಮ್ಮ ತಲೆ ತಗ್ಗಿಸುವಂತೆ ಮಾಡಿದ್ದಾಳೆ. ಯಾರಿಗೂ ಇಂತಹ ಮಗಳು ಸಿಗದಂತೆ ದೇವರು ನೋಡಿಕೊಳ್ಳಲಿ. ನಾವು ಈಗ ಯಾರಿಗೂ ಮುಖ ತೋರಿಸುವ ಸ್ಥಿತಿಯಲ್ಲಿಲ್ಲ” ಎಂದು ಹೇಳಿದರು.
ನಮ್ಮ ಪಾಲಿಗೆ ಈಗ ರಿಯಾ ಸತ್ತಿದ್ದಾಳೆ, ಆಕೆಯೊಂದಿಗೆ ತಮಗೆ ಯಾವುದೇ ಸಂಬಂಧವಿರುವುದಿಲ್ಲ ಎಂದು ಕುಟುಂಬ ಸ್ಪಷ್ಟಪಡಿಸಿದೆ.
ಈ ವಿವಾದವನ್ನು ಬಗೆಹರಿಸಲು ಸಮುದಾಯದ ಸದಸ್ಯರು ಈ ಹಿಂದೆ ಪ್ರಯತ್ನಿಸಿದ್ದರು ಎಂದು ಗ್ರಾಮಸ್ಥ ಅವಧೇಶ್ ಕುಮಾರ್ ತಿಳಿಸಿದ್ದಾರೆ. ಇಬ್ಬರನ್ನೂ ಸಭೆಗೆ ಕರೆದು ಸಾಮಾಜಿಕ ಮಟ್ಟದಲ್ಲಿ ಸಮಸ್ಯೆ ಬಗೆಹರಿಸಿಕೊಳ್ಳುವಂತೆ ಸೂಚಿಸಲಾಗಿತ್ತು.
“ನಾವು ಮೊದಲು ಸಭೆ ನಡೆಸಿ ಎರಡೂ ಕಡೆಯವರನ್ನು ಕರೆದಿದ್ದೆವು. ಸಾಮಾಜಿಕ ಮಟ್ಟದಲ್ಲಿ ಪರಿಹಾರ ಕಂಡುಕೊಳ್ಳುವಂತೆ ತಿಳಿಸಿದ್ದೆವು. ಹಿಂದೆ ಹೇಗಿದ್ದರೋ ಹಾಗೆ ಬದುಕಿ, ಇಬ್ಬರನ್ನೂ ಬೇರೆ ಮಾಡುವಂತೆ ಹೇಳಿದ್ದೆವು, ಆದರೆ ಹಾಗೆ ನಡೆಯಲಿಲ್ಲ” ಎಂದು ಅವಧೇಶ್ ಹೇಳಿದರು.


