Homeಮುಖಪುಟಸ್ವಇಚ್ಛೆಯಿಂದ ಇಸ್ಲಾಂ ಸ್ವೀಕಾರ : ಆಯುಷ್ ಮಲಿಕ್‌ರನ್ನು ಗೃಹಬಂಧನದಿಂದ ಬಿಡುಗಡೆಗೊಳಿಸಿದ ಅಲಹಾಬಾದ್ ಹೈಕೋರ್ಟ್

ಸ್ವಇಚ್ಛೆಯಿಂದ ಇಸ್ಲಾಂ ಸ್ವೀಕಾರ : ಆಯುಷ್ ಮಲಿಕ್‌ರನ್ನು ಗೃಹಬಂಧನದಿಂದ ಬಿಡುಗಡೆಗೊಳಿಸಿದ ಅಲಹಾಬಾದ್ ಹೈಕೋರ್ಟ್

- Advertisement -
- Advertisement -

ತಾನು ಸ್ವಇಚ್ಛೆಯಿಂದ ಇಸ್ಲಾಂ ಧರ್ಮವನ್ನು ಸ್ವೀಕರಿಸಿರುವುದಾಗಿ ಮತ್ತು ಆ ನಂತರ ತನ್ನ ತಂದೆಯೇ ತನಗೆ ಬೆದರಿಕೆ ಹಾಕಿ, ಕಾನೂನುಬಾಹಿರವಾಗಿ ಗೃಹಬಂಧನದಲ್ಲಿ ಇರಿಸಿದ್ದರು ಎಂದು ಆರೋಪಿಸಿದ್ದ ಆಯುಷ್ ಮಲಿಕ್ ಎಂಬ 31 ವರ್ಷದ ಯುವಕನನ್ನು ಅಲಹಾಬಾದ್ ಹೈಕೋರ್ಟ್ ಗುರುವಾರ (ಸೆ.16) ಬಂಧಮುಕ್ತಗೊಳಿಸಿದೆ.

ಹೇಬಿಯಸ್ ಕಾರ್ಪಸ್ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಂದೀಪ್ ಜೈನ್ ಅವರ ಪೀಠ, “ವಯಸ್ಕರಾದ ಯಾವುದೇ ವ್ಯಕ್ತಿ ಸಾಮಾನ್ಯ ನಿಯಮದಂತೆ ತನ್ನ ವಿವೇಚನೆಗೆ ಅನುಗುಣವಾಗಿ ತನ್ನ ಧರ್ಮ ಅಥವಾ ನಂಬಿಕೆಯನ್ನು ನಿರ್ಧರಿಸುವ ಹಕ್ಕನ್ನು ಹೊಂದಿರುತ್ತಾರೆ ಮತ್ತು ಅಂತಹ ಆಯ್ಕೆಯನ್ನು ಕೇವಲ ಆತನ ಕುಟುಂಬದ ಸದಸ್ಯರಿಗೆ ಅದು ಒಪ್ಪಿಗೆಯಿಲ್ಲ ಎಂಬ ಕಾರಣಕ್ಕಾಗಿ ತಿರಸ್ಕರಿಸಲು ಸಾಧ್ಯವಿಲ್ಲ” ಎಂದು ತೀರ್ಪು ನೀಡಿದೆ.

“ವಯಸ್ಕರೊಬ್ಬರು ತಮ್ಮ ಜೀವನ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವುದು ಅವರ ವೈಯಕ್ತಿಕ ಸ್ವಾಯತ್ತತೆಯ ವಿಷಯವಾಗಿದೆ. ಕೇವಲ ಕುಟುಂಬದ ಅಸಮ್ಮತಿಯು ಅಂತಹ ಆಯ್ಕೆಯನ್ನು ಮೊಟಕುಗೊಳಿಸಲು ಒಂದು ಕಾನೂನುಬದ್ಧ ಆಧಾರವಾಗಲು ಸಾಧ್ಯವಿಲ್ಲ” ಎಂದೂ ನ್ಯಾಯಾಲಯವು ಅಭಿಪ್ರಾಯಪಟ್ಟಿದೆ.

ರಾಜ್ಯ ಅಧಿಕಾರಿಗಳ ಸಹಾಯದೊಂದಿಗೆ ಆಯುಷ್ ಮಲಿಕ್ ಅವರನ್ನು ಅವರ ತಂದೆ (ದೇವ್‌ರಾಜ್ ಸಿಂಗ್ ಮಲಿಕ್) ಕಾನೂನುಬಾಹಿರವಾಗಿ ಬಂಧನದಲ್ಲಿರಿಸಿದ್ದಾರೆ ಎಂದು ಆರೋಪಿಸಿ, ಮಲಿಕ್ ಅವರ ಸ್ನೇಹಿತರೊಬ್ಬರು ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದರು.

ಸೆಪ್ಟೆಂಬರ್ 9ರಂದು, ಹೈಕೋರ್ಟ್ ಆಯುಷ್ ಮಲಿಕ್ ಅವರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸುವಂತೆ ರಾಜ್ಯ ಅಧಿಕಾರಿಗಳಿಗೆ ಮತ್ತು ಅವರ ತಂದೆಗೆ ಆದೇಶಿಸಿತ್ತು. ಅವರ ಕಾನೂನುಬಾಹಿರ ಬಂಧನದ ಆರೋಪಗಳು ಮತ್ತು ಅದರಲ್ಲಿ ರಾಜ್ಯ ಅಧಿಕಾರಿಗಳ ಭಾಗೀದಾರಿಕೆ ಇರುವುದು ಗಂಭೀರವಾದ ವಿಷಯವಾಗಿದೆ ಎಂದೂ ಪೀಠ ಹೇಳಿತ್ತು.

ನ್ಯಾಯಾಲಯದ ಆದೇಶದಂತೆ ಸೆ.9ರಂದು ಮಲಿಕ್ ಅವರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿತ್ತು. ನ್ಯಾಯಮೂರ್ತಿ ಜೈನ್ ಅವರೊಂದಿಗೆ ಸಂವಾದ ನಡೆಸಿದ್ದಾರೆ.

ಈ ವೇಳೆ ಅವರು, “ತನಗೆ ಸುಮಾರು 31 ವರ್ಷ ವಯಸ್ಸೆಂದೂ, ಮತ್ತು ತಾನು ಬಿ.ಫಾರ್ಮಾ ಪದವಿ ಪೂರೈಸಿರುವುದಾಗಿಯೂ ಮಲಿಕ್ ತಿಳಿಸಿದ್ದಾರೆ. ಯಾವುದೇ ಬಲವಂತ, ಬೆದರಿಕೆ, ಅನಗತ್ಯ ಪ್ರಭಾವ ಅಥವಾ ಆಮಿಷವಿಲ್ಲದೆ, ಸಂಪೂರ್ಣ ಸ್ವಯಂಪ್ರೇರಣೆಯಿಂದ 2014ರಲ್ಲಿ ತಾವು ಇಸ್ಲಾಂ ಧರ್ಮವನ್ನು ಸ್ವೀಕರಿಸಿದ್ದಾಗಿ” ಅವರು ನ್ಯಾಯಾಲಯಕ್ಕೆ ಹೇಳಿದ್ದಾರೆ.

“ತನ್ನ ನಿರ್ಧಾರವು ಪೋಷಕರಿಗೆ ಮತ್ತು ಕುಟುಂಬದ ಇತರ ಸದಸ್ಯರಿಗೆ ಒಪ್ಪಿಗೆಯಿರದಿದ್ದರೂ, ತಾನು ಇಸ್ಲಾಂನ ಅಗತ್ಯ ಆಚರಣೆಗಳನ್ನು ಪಾಲಿಸುತ್ತಿದ್ದೆ” ಎಂದು ಅವರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

ಚಾಂದನಿ ಖುರೇಷಿ ಅವರೊಂದಿಗೆ ವೈವಾಹಿಕ ಸಂಬಂಧವನ್ನು ಬೆಳೆಸುವ ಉದ್ದೇಶವನ್ನು ಹೊಂದಿದ್ದಾಗಿ ಮಲಿಕ್ ತಿಳಿಸಿದ್ದು, ಆದರೆ ಅವರ ಈ ನಿರ್ಧಾರಕ್ಕೆ ಪೋಷಕರಿಗೆ ಒಪ್ಪಿಗೆಯಿರಲಿಲ್ಲ.

ಆ ಬಳಿಕ ತನ್ನನ್ನು ಬೆದರಿಸಲಾಯಿತು ಮತ್ತು ಕಾನೂನುಬಾಹಿರವಾಗಿ ಬಂಧಿಸಿಡಲಾಯಿತು ಹಾಗೂ 2026ರ ಜೂನ್ 4ರಿಂದ ಗೃಹಬಂಧನದಲ್ಲಿ ಇರಿಸಲಾಗಿತ್ತು ಎಂದು ಮಲಿಕ್ ಆರೋಪಿಸಿದ್ದಾರೆ. ಯಾವುದೇ ಬಲವಂತ, ಬೆದರಿಕೆ, ಅತಿಯಾದ ಪ್ರಭಾವ ಅಥವಾ ಒತ್ತಡಕ್ಕೆ ಒಳಗಾಗದೆ, ಸ್ವತಂತ್ರವಾಗಿ ಇಸ್ಲಾಂ ಧರ್ಮವನ್ನು ಸ್ವೀಕರಿಸಲು ಮತ್ತು ಆಚರಿಸಲು ತಾನು ನಿರ್ಧರಿಸಿರುವುದಾಗಿ ಅವರು ನ್ಯಾಯಾಲಯಕ್ಕೆ ಸ್ಪಷ್ಟವಾಗಿ ತಿಳಿಸಿದ್ದಾರೆ.

ಮತ್ತೊಂದೆಡೆ, ಮಲಿಕ್‌ ಅವರ ತಂದೆ ತನ್ನ ಮಗನ ಆರೋಪಗಳನ್ನು ಅಲ್ಲಗಳೆದಿದ್ದಾರೆ. ಮಲಿಕ್ ಪ್ರಭಾವಕ್ಕೆ ಒಳಗಾಗಿದ್ದ ಅಥವಾ ಅವನಿಗೆ ಬ್ರೈನ್‌ವಾಶ್ ನಡೆಸಲಾಗಿತ್ತು. ಆತ ಸ್ವಯಂಪ್ರೇರಣೆಯಿಂದ ಇಸ್ಲಾಂ ಧರ್ಮವನ್ನು ಸ್ವೀಕರಿಸಿಲ್ಲ ಎಂದು ಅವರು ನ್ಯಾಯಾಲಯದ ಮುಂದೆ ವಾದಿಸಿದ್ದಾರೆ.

ತನ್ನ ಮಗನ ಕ್ಷೇಮದ ಬಗ್ಗೆ ತನಗೆ ಕಾಳಜಿಯಿದ್ದುದರಿಂದ, ಆತ ಇಸ್ಲಾಂ ಧರ್ಮವನ್ನು ಸ್ವೀಕರಿಸುವ ಅಥವಾ ಚಾಂದಿನಿ ಖುರೇಷಿ ಅವರೊಂದಿಗೆ ವಿವಾಹವಾಗುವ ನಿರ್ಧಾರವನ್ನು ತಾನು ಒಪ್ಪಿಲ್ಲ ಎಂದು ಅವರು ತಿಳಿಸಿದ್ದಾರೆ.

ಮಲಿಕ್ ಮತ್ತು ಆತನ ತಂದೆ ಇಬ್ಬರೊಂದಿಗೂ ಸಂವಾದ ನಡೆಸಿದ ನಂತರ, ಮಲಿಕ್ ಪ್ರಾಯಪೂರ್ಣನಾಗಿದ್ದಾನೆ ಮತ್ತು ತನ್ನ ಜೀವನಕ್ಕೆ ಸಂಬಂಧಿಸಿದ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಮರ್ಥನಾಗಿದ್ದಾನೆ ಎಂದು ನ್ಯಾಯಾಲಯ ಹೇಳಿದೆ.

"ತಾವು ಸ್ವಇಚ್ಛೆಯಿಂದ ಇಸ್ಲಾಂ ಧರ್ಮವನ್ನು ಸ್ವೀಕರಿಸಿರುವುದಾಗಿ ಮತ್ತು ಆ ನಿರ್ಧಾರವು ಯಾವುದೇ ಬೆದರಿಕೆ, ಬಲವಂತ, ಅನಗತ್ಯ ಪ್ರಭಾವ ಅಥವಾ ಒತ್ತಡದಿಂದ ಪ್ರೇರೇಪಿಸಲ್ಪಟ್ಟಿದ್ದಲ್ಲ ಅಥವಾ ಸಂಭವಿಸಿದ್ದಲ್ಲ ಎಂಬುದು ನ್ಯಾಯಾಲಯದ ಮುಂದೆ ಅವರು ನೀಡಿರುವ ಸ್ಪಷ್ಟವಾದ ಹೇಳಿಕೆಯಾಗಿದೆ. ನ್ಯಾಯಾಲಯದೊಂದಿಗಿನ ಸಂವಾದದ ಸಂದರ್ಭದಲ್ಲಿ ಅರ್ಜಿದಾರರು (ಆಯುಷ್ ಮಲಿಕ್) ನೀಡಿದ ಈ ಹೇಳಿಕೆಯನ್ನು ನಂಬದಿರಲು ಈ ನ್ಯಾಯಾಲಯಕ್ಕೆ ಪ್ರೇರೇಪಿಸುವ ಯಾವುದೇ ಅಂಶಗಳು ದಾಖಲೆಯಲ್ಲಿ ಕಂಡುಬಂದಿಲ್ಲ" ಎಂದು ನ್ಯಾಯಾಧೀಶರು ತಿಳಿಸಿದ್ದಾರೆ. 

ವಯಸ್ಕರಾದ ವ್ಯಕ್ತಿಯೊಬ್ಬರು ಸಾಮಾನ್ಯವಾಗಿ ತಮ್ಮ ಸ್ವಂತ ಅಂತಃಸಾಕ್ಷಿಗೆ ಅನುಗುಣವಾಗಿ ತಮ್ಮ ಧರ್ಮವನ್ನು ನಿರ್ಧರಿಸುವ ಹಕ್ಕನ್ನು ಹೊಂದಿರುತ್ತಾರೆ ಎಂಬುದನ್ನೂ ಹೈಕೋರ್ಟ್ ಒತ್ತಿಹೇಳಿದೆ.

ವಿವಾಹದ ವಿಷಯಕ್ಕೆ ಸಂಬಂಧಿಸಿದಂತೆ, ವೈವಾಹಿಕ ಸಂಬಂಧವನ್ನು ಬೆಳೆಸಲು ಬಯಸುವ ವ್ಯಕ್ತಿಯನ್ನು ಆಯ್ಕೆ ಮಾಡಿಕೊಳ್ಳುವ ಹಕ್ಕು, ಸಂವಿಧಾನದ 21ನೇ ವಿಧಿಯಡಿ ಖಾತರಿಪಡಿಸಲಾದ ‘ಜೀವಿಸುವ ಹಕ್ಕು’ ಮತ್ತು ‘ವೈಯಕ್ತಿಕ ಸ್ವಾತಂತ್ರ್ಯ’ದ ಅವಿಭಾಜ್ಯ ಅಂಗವಾಗಿದೆ ಎಂದು ನ್ಯಾಯಾಲಯವು ಅಭಿಪ್ರಾಯಪಟ್ಟಿದೆ.

"ವಯಸ್ಕರೊಬ್ಬರು ತಾನು ಯಾರನ್ನು ಮದುವೆಯಾಗಬೇಕೆಂದು ಬಯಸುತ್ತಾರೆ ಅಥವಾ ಯಾರೊಂದಿಗೆ ಸಂಬಂಧವನ್ನು ಹೊಂದಲು ಇಚ್ಛಿಸುತ್ತಾರೆ ಎಂಬ ಆಯ್ಕೆಯು ಅವರ ವೈಯಕ್ತಿಕ ಸ್ವಾಯತ್ತತೆಯ ವಿಷಯವಾಗಿದೆ" ಎಂದು ನ್ಯಾಯಾಲಯವು ಹೇಳಿದೆ.

“ಅಂತಹ ಆಯ್ಕೆಯು ಕುಟುಂಬದ ಇಚ್ಛೆ ಅಥವಾ ನಿರೀಕ್ಷೆಗಳಿಗೆ ವಿರುದ್ಧವಾಗಿರಬಹುದು ಎಂಬ ಕಾರಣವೊಂದೇ, ಅಂತಹ ಆಯ್ಕೆಯನ್ನು ಮೊಟಕುಗೊಳಿಸಲು ಸಮಂಜಸವಾದ ಆಧಾರವಾಗಲಾರದು” ಎಂದಿದೆ.

ಇಸ್ಲಾಂ ಧರ್ಮವನ್ನು ಸ್ವೀಕರಿಸುವ ಹಾಗೂ ಆಚರಿಸುವ ತನ್ನ ಬಯಕೆಯನ್ನು ಮತ್ತು ಚಾಂದನಿ ಖುರೇಷಿ ಅವರನ್ನು ವಿವಾಹವಾಗುವ ತನ್ನ ಉದ್ದೇಶವನ್ನು ಮಲಿಕ್ ಸ್ಪಷ್ಟವಾಗಿ ವ್ಯಕ್ತಪಡಿಸಿದ್ದಾರೆ ಎಂದು ನ್ಯಾಯಾಲಯವು ಹೇಳಿದೆ. ಆ ಹಂತದಲ್ಲಿ, ಅವರು ವ್ಯಕ್ತಪಡಿಸಿದ ಆಯ್ಕೆಗಳು ಸ್ವಯಂಪ್ರೇರಿತವಾಗಿರಲಿಲ್ಲ ಎಂದು ಸಂಶಯಿಸಲು ಯಾವುದೇ ಆಧಾರಗಳು ಕಂಡುಬರಲಿಲ್ಲ ಎಂದು ಸ್ಪಷ್ಟಪಡಿಸಿದೆ.

"ಒಬ್ಬ ವಯಸ್ಕ ವ್ಯಕ್ತಿಯು ನ್ಯಾಯಾಲಯದ ಮುಂದೆ ತನ್ನ ಮುಕ್ತ ಇಚ್ಛೆ ಮತ್ತು ಆಯ್ಕೆಯನ್ನು ನಿಸ್ಸಂದಿಗ್ಧವಾಗಿ ವ್ಯಕ್ತಪಡಿಸಿದ ನಂತರ, ಕಾನೂನಿನಲ್ಲಿ ಮಾನ್ಯತೆ ಪಡೆದ ಸಂದರ್ಭಗಳಿಂದ ಆ ಆಯ್ಕೆಯ ಚಲಾವಣೆಯು ದೋಷಪೂರಿತವಾಗಿದೆ ಎಂದು ಸಾಬೀತಾಗದ ಹೊರತು, ಸಾಮಾನ್ಯ ನಿಯಮದಂತೆ ಆ ಆಯ್ಕೆಯನ್ನು ಗೌರವಿಸಬೇಕಾಗುತ್ತದೆ."

ಸಂವಿಧಾನದ 226ನೇ ವಿಧಿಯ ಅಡಿಯಲ್ಲಿ ತನ್ನ ಅಧಿಕಾರ ವ್ಯಾಪ್ತಿಯನ್ನು ಚಲಾಯಿಸುವಾಗ, ವಯಸ್ಕ ವ್ಯಕ್ತಿಯೊಬ್ಬರು ಪರಿಗಣಿಸಿ ಮಾಡಿರುವ ಆಯ್ಕೆಯ ಬದಲಾಗಿ, ಆತನಿಗೆ ಯಾವುದು ಪ್ರಯೋಜನಕಾರಿ ಅಥವಾ ಸೂಕ್ತ ಎಂಬ ತನ್ನದೇ ಆದ ಗ್ರಹಿಕೆಯನ್ನು ಹೇರುವ ಅಗತ್ಯ ನ್ಯಾಯಾಲಯಕ್ಕೆ ಇಲ್ಲ ಎಂದು ನ್ಯಾಯಾಲಯವು ಅಭಿಪ್ರಾಯಪಟ್ಟಿದೆ.

ಮಗನ ಯೋಗಕ್ಷೇಮದ ಕುರಿತು ತಂದೆಗೆ ಇರುವ ಕಳಕಳಿಯು ಅರ್ಥವಾಗುವಂತಹದ್ದು ಎಂಬುದನ್ನು ನ್ಯಾಯಾಲಯವು ಒಪ್ಪಿಕೊಂಡಿದೆ, ಆದರೆ ಅಂತಹ ಕಳಕಳಿಯು ತನ್ನ ಧರ್ಮ, ವಾಸಸ್ಥಳ ಮತ್ತು ಜೀವನ ಸಂಗಾತಿಯ ಆಯ್ಕೆಗೆ ಸಂಬಂಧಿಸಿದಂತೆ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಮರ್ಥನಾಗಿರುವ ವಯಸ್ಕ ವ್ಯಕ್ತಿಯ ಸಂವಿಧಾನಾತ್ಮಕವಾಗಿ ಸಂರಕ್ಷಿಸಲ್ಪಟ್ಟ ಸ್ವಾಯತ್ತತೆಯನ್ನು ಮೀರಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ತೀರ್ಪು ನೀಡಿದೆ.

ಆದ್ದರಿಂದ, ಮಲಿಕ್ ಅವರ ವೈಯಕ್ತಿಕ ಸ್ವಾತಂತ್ರ್ಯದ ಮೇಲಿನ ಯಾವುದೇ ನಿರ್ಬಂಧವನ್ನು ಮುಂದುವರಿಸಲು ಯಾವುದೇ ಕಾನೂನುಬದ್ಧ ಸಮರ್ಥನೆ ಇಲ್ಲದಿರುವುದನ್ನು ಕಂಡು ಕೊಂಡ ನ್ಯಾಯಾಲಯವು, ಅವರನ್ನು ಮುಕ್ತಗೊಳಿಸಲು ಆದೇಶಿಸಿದೆ.

ತಾನು ಆಯ್ಕೆಮಾಡುವ ಸ್ಥಳದಲ್ಲಿ ಹಾಗೂ ವ್ಯಕ್ತಿಯೊಂದಿಗೆ ವಾಸಿಸಲು, ತನ್ನ ಇಚ್ಛೆಯ ಧರ್ಮವನ್ನು ಪಾಲಿಸಲು ಮತ್ತು ಆಚರಿಸಲು, ಹಾಗೂ ಕಾನೂನಿಗೆ ಅನುಗುಣವಾಗಿ ತನ್ನ ವೈವಾಹಿಕ ಸಂಬಂಧದ ಕುರಿತು ಸೂಕ್ತ ನಿರ್ಧಾರವನ್ನು ತೆಗೆದುಕೊಳ್ಳಲು ಆತನು ಸ್ವತಂತ್ರನಾಗಿರುತ್ತಾನೆ ಎಂದು ನ್ಯಾಯಾಲಯದ ಸ್ಪಷ್ಟಪಡಿಸಿದೆ. ಹೇಬಿಯಸ್ ಕಾರ್ಪಸ್ ಅರ್ಜಿಯನ್ನು ವಿಲೇವಾರಿ ಮಾಡಿದೆ.

Courtesy : livelaw.in




















ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬಿಹಾರ| ದಲಿತ ಯುವಕನ ವಿವಾಹವಾದ ಯುವತಿ; ಮಗಳ ಸಾಂಕೇತಿಕ ಅಂತ್ಯಕ್ರಿಯೆ ನಡೆಸಿದ ಪೋಷಕರು

ತಮ್ಮ 18 ವರ್ಷದ ಮಗಳು ಅಂತರ್ಜಾತಿ ವಿವಾಹವಾಗಿದ್ದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಪೋಷಕರು, ಆಕೆಗೆ ಸಾಂಕೇತಿಕವಾಗಿ ಅಂತ್ಯಕ್ರಿಯೆ ನಡೆಸಿದ ಘಟನೆ ಬಿಹಾರದ ಪೂರ್ಣಿಯಾದಲ್ಲಿ ಬೆಳಕಿಗೆ ಬಂದಿದೆ. ಯುವತಿಯ ಫೋಟೋವಿರುವ ಪ್ರತಿಕೃತಿಯನ್ನು ಸಿದ್ಧಪಡಿಸಿ ಊರಿನಲ್ಲಿ ಶವಯಾತ್ರೆ...

ಬಿಜ್ನೋರ್‌ನಲ್ಲಿ ಮುಸ್ಲಿಂ ಶಿಕ್ಷಕನ ಗುಂಡಿಕ್ಕಿ ಹತ್ಯೆ: ‘ಲವ್ ಜಿಹಾದ್’ ಆರೋಪ; ವೈಯಕ್ತಿಕ ದ್ವೇಷದ ಬಗ್ಗೆಯೂ ಪೊಲೀಸರಿಂದ ತನಿಖೆ 

ಬಿಜ್ನೋರ್: ಉತ್ತರ ಪ್ರದೇಶದ ಬಿಜ್ನೋರ್ ಜಿಲ್ಲೆಯಲ್ಲಿ 43 ವರ್ಷದ ಮುಸ್ಲಿಂ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕನೊಬ್ಬರನ್ನು ರೈತನೊಬ್ಬ ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ನಡೆದಿದೆ. ಶಿಕ್ಷಕ ನೌಶಾದ್ ಅಹ್ಮದ್ ಅವರು ‘ಲವ್ ಜಿಹಾದ್’...

ತುಳು ನುಡಿಗೆ ಹೆಚ್ಚುವರಿ ಅಧಿಕೃತ ಭಾಷೆಯ ಮಾನ್ಯತೆ ನೀಡಿ: ಕರವೇ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ

"ಮಂಗಳೂರಿನಲ್ಲಿ ಶುಕ್ರವಾರ ಕರ್ನಾಟಕ ಸರ್ಕಾರದ ಸಚಿವ ಸಂಪುಟ ಸಭೆ ನಡೆಯಲಿದೆ; ಇದೊಂದು ಐತಿಹಾಸಿಕ ಸಂದರ್ಭ. ರಾಜ್ಯ ಸರ್ಕಾರ ತುಳು ನುಡಿಯನ್ನು ತುಳು ಮಾತನಾಡುವ ಪ್ರದೇಶಗಳಲ್ಲಿ ಹೆಚ್ಚುವರಿ ಅಧಿಕೃತ ಭಾಷೆಯಾಗಿ ಮಾನ್ಯತೆ ನೀಡುವ ನಿರ್ಧಾರವನ್ನು...

ಕರಾವಳಿ ಸಮಸ್ಯೆಗೆ ಶಾಶ್ವತ ಪರಿಹಾರದ ಭರವಸೆ: ಸಚಿವ ಕೆ.ಎಸ್.ಬಸವಂತಪ್ಪ

ರಾಜ್ಯದ ಕರಾವಳಿ ಭಾಗದಲ್ಲಿ ಮೀನುಗಾರಿಕೆ ಕ್ಷೇತ್ರದ ಅಭಿವೃದ್ಧಿ ಕುಂಠಿತವಾಗುತ್ತಿರುವ ಕುರಿತು ಕಳವಳ ವ್ಯಕ್ತವಾಗುತ್ತಿರುವ ಬೆನ್ನಲ್ಲೇ, ಸ್ಥಳೀಯ ಸಮಸ್ಯೆಗಳಿಗೆ ಸ್ಪಂದಿಸಲು ಸರ್ಕಾರ ಮುಂದಾಗಿದೆ. ಕರಾವಳಿ ವ್ಯಾಪ್ತಿಯ ಬಂದರುಗಳು, ಮೀನು ಮಾರುಕಟ್ಟೆಗಳು, ಬ್ರೇಕ್‌ವಾಟರ್‌ಗಳು ಹಾಗೂ ಜೆಟ್ಟಿಗಳಿಗೆ...

SIR ಪ್ರಕ್ರಿಯೆಯಲ್ಲಿ ಯಾರ ಹೆಸರು ಬಿಟ್ಟುಹೋಗಬಾರದು: PRC ನೀಡಲು ವಿಳಂಬ ಬೇಡ ಡಾ. ಜಿ. ಪರಮೇಶ್ವರ್

ಉದ್ಯೋಗ ಅಥವಾ ವಿವಿಧ ಕಾರಣಗಳಿಂದಾಗಿ ತಮ್ಮ ಸ್ವಂತ ಊರು ತೊರೆದು ಬೇರೆಡೆಗೆ ಸ್ಥಳಾಂತರಗೊಂಡು ನೆಲೆಸಿರುವ ರಾಜ್ಯದ ಯಾವುದೇ ನಾಗರಿಕರು ಯಾವುದೇ ಕಾರಣಕ್ಕೂ ಮತದಾರರ ಪಟ್ಟಿಯಿಂದ ಹೊರಗುಳಿಯಬಾರದು ಎಂದು ಉಪಮುಖ್ಯಮಂತ್ರಿ ಹಾಗೂ ಕಂದಾಯ ಸಚಿವರಾದ...

ಬಿಹಾರ ಪ್ರವಾಹದ ನಡುವೆ ಮೋದಿ ಹುಟ್ಟುಹಬ್ಬದ ಪ್ರಯುಕ್ತ ದೀಪೋತ್ಸವ; ‘ಆಶೀರ್ವಾದ್ ಕಾ ದಿಯಾ’ ಕಾರ್ಯಕ್ರಮಕ್ಕೆ ತೇಜಸ್ವಿ ಯಾದವ್ ಆಕ್ಷೇಪ

ಬಿಹಾರದಲ್ಲಿ ಪ್ರವಾಹ ಪರಿಸ್ಥಿತಿ ಮುಂದುವರಿದಿರುವ ನಡುವೆಯೇ ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬದ ಅಂಗವಾಗಿ ಸೆಪ್ಟೆಂಬರ್ 17ರಂದು ‘ಆಶೀರ್ವಾದ್ ಕಾ ದಿಯಾ’ ಕಾರ್ಯಕ್ರಮ ಆಯೋಜಿಸಿರುವುದು ರಾಜಕೀಯ ಚರ್ಚೆಗೆ ಕಾರಣವಾಗಿದೆ. ರಾಜ್ಯದ 15 ಜಿಲ್ಲೆಗಳಲ್ಲಿ...

ಉಮರ್ ಖಾಲಿದ್ ಅವರನ್ನು ‘ದೇಶಪ್ರೇಮಿ’ ಎಂದ ಬಿ.ಕೆ. ಹರಿಪ್ರಸಾದ್; ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲು

ಬೆಂಗಳೂರಿನ ರಾಷ್ಟ್ರೀಯ ಕಾನೂನು ಶಾಲೆ (ಎನ್‌ಎಲ್‌ಎಸ್‌ಐಯು) ಯೂನಿವರ್ಸಿಟಿಯಲ್ಲಿ ಜೈಲಿನಲ್ಲಿರುವ ಹೋರಾಟಗಾರ ಉಮರ್ ಖಾಲಿದ್ ಕುರಿತಾದ ಸಾಕ್ಷ್ಯಚಿತ್ರಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ವಿವಾದದ ನಡುವೆ, ಅವರನ್ನು "ರಾಷ್ಟ್ರಪ್ರೇಮಿ" ಎಂದು ಕರೆದಿರುವ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ...

ಇಂದಿರಾ ಗಾಂಧಿಯಂತೆ ನೇರವಾಗಿ ನಿಲ್ಲಿ, ಟ್ರಂಪ್ ಮುಂದೆ ಮಂಡಿಯೂರುತ್ತಿದ್ದೀರಿ: ‘UPI ಟ್ಯಾಕ್ಸ್’ ಬಗ್ಗೆ ಮೋದಿ ವಿರುದ್ಧ ರಾಹುಲ್ ವಾಗ್ದಾಳಿ!

ಯುಪಿಐ (UPI) ವಹಿವಾಟುಗಳಿಗೆ ಸಂಬಂಧಿಸಿದಂತೆ ಜಾರಿಯಾಗುತ್ತಿರುವ ಹೊಸ 'ಮರ್ಚೆಂಟ್ ಡಿಸ್ಕೌಂಟ್ ರೇಟ್' (MDR) ವ್ಯವಸ್ಥೆ ಇದೀಗ ತೀವ್ರ ರಾಜಕೀಯ ಸಂಘರ್ಷಕ್ಕೆ ಕಾರಣವಾಗಿದೆ. ಇದನ್ನು "ಬ್ಯಾಂಕ್‌ಗಳು ವಿಧಿಸುವ ಸೇವಾ ಶುಲ್ಕ" ಎಂದು ಸರ್ಕಾರ ಸಮರ್ಥಿಸಿಕೊಳ್ಳುತ್ತಿದ್ದರೂ,...

ಲಿಯೋನೆಲ್ ಮೆಸ್ಸಿ ಕೇರಳ ಭೇಟಿ ಪ್ರಕರಣ: ಕೊಚ್ಚಿಯ ‘ರಿಪೋರ್ಟರ್ ಟಿವಿ’ ಕಚೇರಿಯಲ್ಲಿ ಪೊಲೀಸರಿಂದ ಶೋಧ

ಮಲಯಾಳಂ ಸುದ್ದಿ ವಾಹಿನಿ 'ರಿಪೋರ್ಟರ್ ಟಿವಿ'ಯ ಕೊಚ್ಚಿ ಪ್ರಧಾನ ಕಚೇರಿಯಲ್ಲಿ ಬುಧವಾರ (ಸೆ.16) ಮುಂಜಾನೆ ಪೊಲೀಸ್ ತಂಡವೊಂದು ಶೋಧ ಕಾರ್ಯ ನಡೆಸಿದ್ದು, ಇದರಿಂದಾಗಿ ತನ್ನ ಸುದ್ದಿ ಪ್ರಸಾರ ಕಾರ್ಯಾಚರಣೆಗೆ ಅಡಚಣೆಯಾಗಿದೆ ಎಂದು ವಾಹಿನಿ...

‘ಏಕರೂಪತೆ ಸಮಾನತೆಯಲ್ಲ’: 2029ಕ್ಕೂ ಮುನ್ನ 21 ರಾಜ್ಯಗಳಲ್ಲಿ ಯುಸಿಸಿ ಜಾರಿ ಘೋಷಿಸಿದ ಅಮಿತ್ ಶಾಗೆ ಪ್ರತಿಪಕ್ಷಗಳ ತೀವ್ರ ತಿರುಗೇಟು

ನವದೆಹಲಿ/ಮುಂಬೈ: 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರಗಳಿರುವ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಜಾರಿಗೆ ತರಲಾಗುವುದು ಎಂಬ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ...