Homeಮುಖಪುಟಅಧಿಕಾರ ದಾಹ: ಬಹುಮತವಿಲ್ಲದಿದ್ದರೂ 6 ವರ್ಷಗಳಲ್ಲಿ 11 ನೇ ಭಾರಿ ಅಧಿಕಾರ ಕಸಿಯಲು ಪ್ರಯತ್ನಿಸುತ್ತಿರುವ ಬಿಜೆಪಿ

ಅಧಿಕಾರ ದಾಹ: ಬಹುಮತವಿಲ್ಲದಿದ್ದರೂ 6 ವರ್ಷಗಳಲ್ಲಿ 11 ನೇ ಭಾರಿ ಅಧಿಕಾರ ಕಸಿಯಲು ಪ್ರಯತ್ನಿಸುತ್ತಿರುವ ಬಿಜೆಪಿ

ಬಿಜೆಪಿ ಇದುವರೆಗೂ ಹಣದ ಆಮಿಷ, ಬೆದರಿಕೆಗಳು, ಸ್ನೇಹಪರ ಗವರ್ನರ್‌ಗಳು, ಕುದುರೆ ವ್ಯಾಪಾರ, ಸಿಬಿಐ-ಐಟಿ ಹಾಗೂ ಇಡಿಯಂತಹ ಇಲಾಖೆಯ ದುರ್ಬಳಕೆ ಅಥವಾ ಪೊಲೀಸ್ ಪ್ರಕರಣಗಳು ಹೀಗೆ ಮುಂತಾದ ಮಾರ್ಗದಿಂದ ಅಧಿಕಾರ ಕಸಿದುಕೊಳ್ಳಲು ಸಾಕಷ್ಟು ಹೀನ ತಂತ್ರಗಳನ್ನು ಬಳಸಿದೆ

- Advertisement -
- Advertisement -

ರಾಜಸ್ಥಾನದ ರಾಜಕೀಯ ಬಿಕ್ಕಟ್ಟು ಮುಂದುವರೆದಿದ್ದು, ಆದಾಯ ತೆರಿಗೆ ಇಲಾಖೆ ಕಾಂಗ್ರೆಸ್ ಬೆಂಬಲಿಗರಾದ ಮೂವರ ವ್ಯಕ್ತಿಗಳಿಗೆ ಸಂಬಂದಿಸಿದ 43 ಮನೆಗಳು ಹಾಗೂ ಕಚೇರಿಗಳ ಮೇಲೆ ದಾಳಿ ನಡೆಸಿದೆ. ಇದು ಕಾಂಗ್ರೆಸ್ ಪಕ್ಷಕ್ಕೆ ಸಹಾಯ ಮಾಡುವವರನ್ನು ಭಯಪಡಿಸುವ ಹಾಗೂ ಹೇಗಾದರೂ ಮಾಡಿ ಅಧಿಕಾರ ಹಿಡಿಯಬೇಕು ಎಂದು ಹೊರಟ ಬಿಜೆಪಿಯ ಜನವಿರೋಧಿ ನಡೆಯಾಗಿದೆ ಎಂದು ಹಲವಾರು ಜನರು ಅಭಿಪ್ರಾಯ ಪಟ್ಟಿದ್ದಾರೆ.

ಕಳೆದ ಆರು ವರ್ಷಗಳಲ್ಲಿ ಬಿಜೆಪಿಯು 11 ನೇ ಬಾರಿಗೆ ಚುನಾವಣೆಯಲ್ಲಿ ಬಹುಮತವನ್ನು ಪಡೆಯದೆ ಅಧಿಕಾರವನ್ನು ಕಸಿದುಕೊಳ್ಳಲು ಪ್ರಯತ್ನಿಸುತ್ತಿದೆ.

ಈ ಸರಣಿಯಲ್ಲಿ ರಾಜಸ್ಥಾನ ಹನ್ನೊಂದನೆಯದಾಗಿದ್ದು, ಬಿಜೆಪಿ ಇದುವರೆಗೂ ಹಣದ ಆಮಿಷ, ಬೆದರಿಕೆಗಳು, ಸ್ನೇಹಪರ ಗವರ್ನರ್‌ಗಳು, ಕುದುರೆ ವ್ಯಾಪಾರ, ಸಿಬಿಐ-ಐಟಿ ಹಾಗೂ ಇಡಿಯಂತಹ ಇಲಾಖೆಯ ದುರ್ಬಳಕೆ ಅಥವಾ ಪೊಲೀಸ್ ಪ್ರಕರಣಗಳು ಹೀಗೆ ಮುಂತಾದ ಮಾರ್ಗದಿಂದ ಅಧಿಕಾರ ಕಸಿದುಕೊಳ್ಳಲು ಸಾಕಷ್ಟು ಹೀನ ತಂತ್ರಗಳನ್ನು ಬಳಸಿದೆ ಎಂದು ಸುಬೋದ್ ವರ್ಮಾರವರ ಲೇಖನವನ್ನು ನ್ಯೂಸ್ ಕ್ಲಿಕ್ ವರದಿ ಮಾಡಿದೆ. ಅದರ ಕನ್ನಡ ಅನುವಾದ ಇಲ್ಲಿದೆ.

2014 ರಿಂದ ಬಹುಮತವನ್ನು ಗಳಿಸದೆ ಹಲವು ರಾಜ್ಯಗಳಲ್ಲಿ ಬಿಜೆಪಿಯು ಅಧಿಕಾರವನ್ನು ಹೇಗೆ ಪಡೆದುಕೊಂಡಿದೆ ಎಂಬುದು ಇಲ್ಲಿದೆ:

1. ಅರುಣಾಚಲ ಪ್ರದೇಶ (2014):

60 ವಿಧಾನ ಸಭಾ ಕ್ಷೇತ್ರಗಳಿರು ಅರುಣಾಚಲದಲ್ಲಿ 2014ರಲ್ಲಿ ನಡೆದ ಅಸೆಂಬ್ಲಿ ಚುನಾವಣೆಯಲ್ಲಿ ಕಾಂಗ್ರೆಸ್ 42, ಬಿಜೆಪಿ 11, ಪೀಪಲ್ಸ್ ಪಾರ್ಟಿ ಆಫ್ ಅರುಣಾಚಲ 5 ಮತ್ತು ಪಕ್ಷೇತರರು 2 ಸ್ಥಾನಗಳನ್ನು ಗೆದ್ದಿದ್ದರು. ಎರಡು ವರ್ಷಗಳ ಪ್ರಕ್ಷುಬ್ಧತೆಯ ನಂತರ: ಬಿಜೆಪಿ 48; ಕಾಂಗ್ರೆಸ್ 1; ಪಿಪಿಎ 9; ಪಕ್ಷೇತರರು 2! ಹೀಗೆ ಎಲ್ಲವೂ ಅದಲು ಬದಲಾದವು. ಹೋಲ್ ಸೇಲ್ ಪಕ್ಷಾಂತರಗಳು, ರಾಷ್ಟ್ರಪತಿ ಆಡಳಿತ ಹೇರಿಕೆ, ಮಾಜಿ ಮುಖ್ಯಮಂತ್ರಿಯ ಸಾವು, ಸುಪ್ರೀಂ ಕೋರ್ಟ್‌ನ ಹಸ್ತಕ್ಷೇಪ ಹೀಗೆ ಬಿಜೆಪಿ ಅಂತಿಮವಾಗಿ ಅಧಿಕಾರವನ್ನು ಪಡೆದುಕೊಂಡಿತು!

2. ಜಾರ್ಖಂಡ್ (2014):

81 ಸದಸ್ಯರ ಸಂಖ್ಯಾ ಬಲವಿದ್ದ ವಿಧಾನಸಭೆಯಲ್ಲಿ ಬಿಜೆಪಿ 35 ಸ್ಥಾನಗಳನ್ನು ಮತ್ತು ಅದರ ಮಿತ್ರಪಕ್ಷವಾದ ಆಲ್ ಜಾರ್ಖಂಡ್ ವಿದ್ಯಾರ್ಥಿ ಸಂಘ 5 ಸ್ಥಾನಗಳನ್ನು ಗೆದ್ದಿದ್ದವು. ಸರಳ ಬಹುಮತಕ್ಕಿಂತ ಕಡಿಮೆ ಸ್ಥಾನಗಳನ್ನು ಹೊಂದಿದ್ದರಿಂದ, ಕೆಲವು ಪಕ್ಷೇತರ ಹಾಗೂ ಜಾರ್ಖಂಡ್ ವಿಕಾಸ್ ಮೋರ್ಚಾದ 8 ಶಾಸಕರಲ್ಲಿ 6 ಜನರನ್ನು ಸೆಳೆದು ಬಹುಮತ ಗಳಿಸಿದರು.

3. ಬಿಹಾರ (2015):

243 ಸದಸ್ಯ ಬಲವಿರುವ ಬಿಹಾರ ವಿಧಾನಸಭೆಯಲ್ಲಿ ಬಿಜೆಪಿ ಗಳಿಸಿದ್ದು ಕೇವಲ 53 ಸ್ಥಾನಗಳು. ಚುನಾವಣಾ ಪೂರ್ವ ಮೈತ್ರಿ ಮಾಡಿದ್ದ ಆರ್‌ಜೆಡಿ ಹಾಗೂ ಜೆಡಿಯು ಒಟ್ಟು 178 ಸ್ಥಾನಗಳನ್ನು ಗಳಿಸಿದ್ದವಾದ್ದರಿಂದ ಸರ್ಕಾರ ರಚಿಸಿತು. ಆದರೆ ಬಿಜೆಪಿ ಈ ಮೈತ್ರಿಯನ್ನು ಮುರಿದು ಜೆಡಿಯು ಮತ್ತು ಅದರ ನಾಯಕ ನಿತೀಶ್ ಕುಮಾರ್ ಅವರಿಗೆ ಆಮಿಷವೊಡ್ಡಿ ಜುಲೈ 2017 ರಲ್ಲಿ ಸಮ್ಮಿಶ್ರ ಸರ್ಕಾರ ರಚಿಸಿ ಅಧಿಕಾರ ಹಿಡಿಯಿತು.

4. ಗೋವಾ (2017):

ಒಟ್ಟು 40 ಸ್ಥಾನಗಳಲ್ಲಿ ಬಿಜೆಪಿ ಕೇವಲ 13 ಸ್ಥಾನಗಳನ್ನು ಗೆದ್ದಿತ್ತು. ಚುನಾವಣೆಯ ನಂತರ ಅವರ ವಿರುದ್ದವೆ ಸ್ಪರ್ಧಿಸಿದ್ದ ಸ್ಥಳೀಯ ಸಣ್ಣ ಪಕ್ಷಗಳೊಂದಿಗೆ ಒಕ್ಕೂಟ ರಚಿಸಿ ಸರ್ಕಾರವನ್ನು ರಚಿಸಿತು. ಕಾಂಗ್ರೆಸ್ 17 ಸ್ಥಾನ ಗಳಿಸಿದ್ದರೂ ಸಹ ವಿರೋಧ ಪಕ್ಷವಾಯಿತು.

5. ಮಣಿಪುರ (2017):

60 ಸ್ಥಾನಗಳಲ್ಲಿ ಬಿಜೆಪಿ 21 ಸ್ಥಾನಗಳನ್ನು ಗೆದ್ದರೆ, ಕಾಂಗ್ರೆಸ್ 28 ಸ್ಥಾನಗಳನ್ನು ಗಳಿಸಿತ್ತು. ಆದರೆ ಬಿಜೆಪಿ ತನ್ನ ಮಿತ್ರ ಪಕ್ಷವಾದ ಲೋಕ ಜನಶಕ್ತಿ ಪಕ್ಷದ ಜೊತೆಗೆ, ಎರಡು ಸ್ಥಳೀಯ ಪಕ್ಷಗಳಾದ ನ್ಯಾಷನಲ್ ಪೀಪಲ್ಸ್ ಪಾರ್ಟಿ ಮತ್ತು ನಾಗಾ ಪೀಪಲ್ಸ್ ಫ್ರಂಟ್ ಜೊತೆ ಸೇರಿಕೊಂಡು ಅಧಿಕಾರಕ್ಕೆ ಮುನ್ನುಗ್ಗಿತು. ಇದಕ್ಕೆ ಬಿಜೆಪಿ ಮಾಜಿ ಸಂಸದರಾದ ರಾಜ್ಯಪಾಲ ನಜ್ಮಾ ಹೆಪ್ತುಲ್ಲಾ ಕೂಡಾ ಸರ್ಕಾರ ರಚಿಸಲು ಮೊದಲು ಬಿಜೆಪಿ ನೇತೃತ್ವದ ಮೈತ್ರಿಕೂಟವನ್ನು ಆಹ್ವಾನಿಸಿ ಸಹಾಯ ಮಾಡಿದರು.

6. ಮೇಘಾಲಯ (2018):

ಈ ಚುನಾವಣೆಯಲ್ಲಿ 60 ಸದಸ್ಯ ಬಲದ ವಿಧಾನಸಭೆಯಲ್ಲಿ ಬಿಜೆಪಿ ಗಳಿಸಿದ್ದು ಕೇವಲ ಎರಡು ಸ್ಥಾನಗಳನ್ನು ಮಾತ್ರ. ಆದರೆ ತನ್ನ ಸರ್ಕಾರ ರಚಿಸಲು ನ್ಯಾಷನಲ್ ಪೀಪಲ್ಸ್ ಪಕ್ಷದೊಂದಿಗೆ ಚುನಾವಣೋತ್ತರ ಮೈತ್ರಿ ಮಾಡಿಕೊಂಡಿತು. ಇಲ್ಲಿ ಕೂಡಾ ಬಿಹಾರದ ಮಾಜಿ ಬಿಜೆಪಿ ಎಂಎಲ್ಸಿ ಗಂಗಾ ಪ್ರಸಾದ್ ಮೇಘಾಲಯದ ರಾಜ್ಯಪಾಲರಾಗಿದ್ದರು ಹಾಗೂ ಸರ್ಕಾರ ರಚಿಸಲು ಸಹಾಯ ಮಾಡಿದರು.

7. ಕರ್ನಾಟಕ (2018-19):

ಕರ್ನಾಟಕದಲ್ಲಿ ಅಧಿಕಾರ ಹಿಡಿಯಲು ಬಿಜೆಪಿ ಎರಡು ಭಾರಿ ಪ್ರಯತ್ನಿಸಿದೆ.

ಭಾಗ 1 (ವಿಫಲ ಪ್ರಯತ್ನ) – 2018: 224 ಸದಸ್ಯರ ವಿಧಾನಸಭೆಯಲ್ಲಿ ಬಿಜೆಪಿ 104 ಶಾಸಕರನ್ನು ಗೆದ್ದುಕೊಂಡಿತ್ತಾದರೂ ಬಹುಮತ ಪಡೆಯುವಲ್ಲಿ ವಿಫಲವಾಯಿತು. ಕಾಂಗ್ರೆಸ್ 80 ಮತ್ತು ಜೆಡಿಎಸ್ 39 ಸ್ಥಾನಗಳನ್ನು ಗೆದ್ದು ಚುನಾವಣೋತ್ತರ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಲು ಮುಂದಾದರು. ಆದರೆ ಆಗ ಗವರ್ನರ್‌ ಆಗಿದ್ದ ಮಾಜಿ ಗುಜರಾತ್ ಬಿಜೆಪಿ ಶಾಸಕ ವಾಜುಭಾಯ್ ವಾಲಾ ಅವರು ಕಾಂಗ್ರೆಸ್-ಜನತಾದಳ (ಜಾತ್ಯತೀತ) ಪಕ್ಷಗಳ ಮೈತ್ರಿಯನ್ನು ಕಡೆಗಣಿಸಿ ಸರ್ಕಾರ ರಚಿಸಲು ಬಿಜೆಪಿ ನಾಯಕ ಬಿ.ಎಸ್.ಯಡಿಯುರಪ್ಪ ಅವರನ್ನು ಆಹ್ವಾನಿಸಿದರು.

ಆದರೆ ಮಧ್ಯಪ್ರವೇಶಿಸಿದ ಸುಪ್ರೀಂ ಕೋರ್ಟ್ ಮರುದಿನ ವಿಶ್ವಾಸ ಮತ ಯಾಚನೆಗೆ ಆದೇಶ ನೀಡಿತು. ಬಹುಮತವಿಲ್ಲವಾದ್ದರಿಂದ ವಿಶ್ವಾಸಮತಕ್ಕೆ ಹೋಗದೆ ಯಡಿಯೂರಪ್ಪ ರಾಜೀನಾಮೆ ನೀಡಿದರು. ಇದರ ನಂತರ ಹೊಸ ಕಾಂಗ್ರೆಸ್-ಜೆಡಿ (ಎಸ್) ಸರ್ಕಾರ ರಚಿಲಾಯಿತು.

ಭಾಗ 2 – 2019 (ಯಶಸ್ವಿ): ಅಧಿಕಾರ ಹಿಡಿಯಲು ಹೊಸ ಮಾದರಿಯನ್ನು ಅನುಸರಿಸಿದ ಬಿಜೆಪಿಯು 13 ಕಾಂಗ್ರೆಸ್, 3 ಜೆಡಿ (ಎಸ್), ಮತ್ತು ಇತರ ಪಕ್ಷೇತರ ಶಾಸಕರನ್ನು ರಾಜಿನಾಮೆ ಕೊಡಿಸಿ, ಸರ್ಕಾರವನ್ನು ಅಲ್ಪಮತಕ್ಕೆ ದೂಡಿದರು. ವಿಶ್ವಾಸಮತ ಕಳೆದುಕೊಂಡು ಸರ್ಕಾರ ಬಿದ್ದುಹೋದಾಗ ಯಡಿಯೂರಪ್ಪ ನೇತೃತ್ವದ ಬಿಜೆಪಿ ಮತ್ತೆ ಅಧಿಕಾರವನ್ನು ಪಡೆದುಕೊಂಡಿತು. ರಾಜೀನಾಮೆ ಕೊಟ್ಟಿದ್ದವರನ್ನು ಬಿಜೆಪಿ ಸೇರಿಸಿಕೊಂಡು ಬಹುತೇಕರನ್ನು ಗೆಲ್ಲಿಸಿ ಸಚಿವ ಸ್ಥಾನಗಳನ್ನು ನೀಡಲಾಯಿತು.

8. ಹರಿಯಾಣ (2019):

ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಮನೋಹರ್ ಲಾಲ್ ಖಟ್ಟರ್ ನೇತೃತ್ವದ ಬಿಜೆಪಿ ಸರ್ಕಾರ ಬಹುಮತ ಕಳೆದುಕೊಂಡು 90 ಸದಸ್ಯರ ಸದನದಲ್ಲಿ 40 ಸ್ಥಾನಗಳನ್ನು ಪಡೆಯಿತು. ಜೆಜೆಪಿ ಪಕ್ಷ ತನ್ನ ಚುನಾವಣಾ ಪ್ರಚಾರದಲ್ಲಿ ಬಿಜೆಪಿಯ ವಿರುದ್ದ ತೀವ್ರವಾಗಿ ಟೀಕೆ ಮಾಡಿದ್ದರೂ, ಜೆಜೆಪಿ ಮುಖಂಡ ದುಶ್ಯಂತ್ ಚೌತಲಾ ಅವರನ್ನು ಉಪಮುಖ್ಯಮಂತ್ರಿಯನ್ನಾಗಿ ಮಾಡಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದಿತು.

9. ಮಹಾರಾಷ್ಟ್ರ (ವಿಫಲ ಪ್ರಯತ್ನ) (2019):

ಇಲ್ಲಿ ಕೂಡ ಎರಡು ಭಾರಿ ಅಧಿಕಾರಗಳನ್ನು ಹಿಡಿಯಲು ಪ್ರಯತ್ನಿಸಿದೆ.

ಭಾಗ 1: ಆಡಳಿತಾರೂಡ ಬಿಜೆಪಿ-ಶಿವಸೇನೆ ಮೈತ್ರಿಕೂಟವು ವಿಧಾನಸಭಾ ಚುನಾವಣೆಯಲ್ಲಿ ಬಹುಮತವನ್ನು ಗಳಿಸಿತು ಆದರೆ ಮುಖ್ಯಮಂತ್ರಿ ಸ್ಥಾನದ ಬಗ್ಗೆ ವಿವಾದಗಳಾಗಿ ಮೈತ್ರಿ ಮುರಿದು ಬಿತ್ತು. ವಾರಗಳವರೆಗೂ ನಡೆದ ರಾಜಕೀಯ ಆಟಗಳಲ್ಲಿ, ಶಾಸಕರನ್ನು ಹೋಟೆಲ್‌ಗಳಲ್ಲಿ ಇಡುವುದು ಹಾಗೂ ರಾಷ್ಟ್ರಪತಿ ಆಡಳಿತ ಹೇರಿಕೆಯ ನಂತರ, ಶಿವಸೇನಾ, ಕಾಂಗ್ರೆಸ್ ಮತ್ತು ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ) ನಡುವೆ ಮೈತ್ರಿ ಏರ್ಪಟ್ಟಿತು. ಇದರ ನಡುವೆ ಎನ್‌ಸಿಪಿಯ ಅಜಿತ್ ಪವಾರ್ ಅವರನ್ನು ಸೆಳೆದ ಬಿಜೆಪಿ 54 ಎನ್‌ಸಿಪಿ ಶಾಸಕರು ಅವರ ಬೆಂಬಲ್ಕಕೆ ಇದ್ದಾರೆಂದು ಹೇಳಿ ಗವರ್ನರ್‌ ಬಿಎಸ್ ಕೋಶ್ಯಾರಿ ಸರ್ಕಾರ ರಚನೆ ಮಾಡಲು ಅನುಮತಿ ನೀಡಿದರು.

ರಾಜ್ಯಪಾಲರು ಬಿಜೆಪಿಯ ದೇವೇಂದ್ರ ಫಡ್ನವಿಸ್ ಮುಖ್ಯಮಂತ್ರಿಯಾಗಿ ಮತ್ತು ಎನ್‌ಸಿಪಿಯಿಂದ ಬಂಡಾಯವೆದ್ದಿದ್ದ ಅಜಿತ್ ಪವಾರ್ ಉಪಮುಖ್ಯಮಂತ್ರಿಯಾಗಿ ಬೆಳಿಗ್ಗೆ 5 ಗಂಟೆಗೆ ಪ್ರಮಾಣ ವಚನ ಸ್ವೀಕರಿಸಿದರು. ಆದರೆ ಸುಪ್ರೀಂ ಮತ್ತೆ ಬಹುಮತ ಸಾಬೀತುಪಡಿಸಲು ಕೇಳಿತು. ಅಜಿತ್ ಪವಾರ್ ಉಲ್ಟಾ ಹೊಡೆದರು. ಬಿಜೆಪಿಗೆ ಮುಖಭಂಗವಾಗಿ ದೇವೇಂದ್ರ ಫಡ್ನವಿಸ್ ರಾಜೀನಾಮೆ ನೀಡಿದರು.

ಭಾಗ 2: ಆದರೆ ಅಜಿತ್ ಪವಾರ್ ಅವರೊಂದಿಗೆ ಯಾರೂ ಇಲ್ಲದ ಕಾರಣ ಕೆಲವೇ ಗಂಟೆಗಳಲ್ಲಿ ಈ ಸರ್ಕಾರ ಕುಸಿದು, ಅವರು ಮತ್ತೆ ಎನ್‌ಸಿಪಿಗೆ ಹೋದರು. ಇದರ ನಂತರ ಶಿವಸೇನೆಯ ಉದ್ಧವ್ ಠಾಕ್ರೆ ನೇತೃತ್ವದಲ್ಲಿ ಶಿವಸೇನೆ, ಕಾಂಗ್ರೆಸ್ ಮತ್ತು ಎನ್‌ಸಿಪಿ ಮೈತ್ರಿಯ ಹೊಸ ಸರ್ಕಾರ ಪ್ರಮಾಣವಚನ ಸ್ವೀಕರಿಸಿತು.

10. ಮಧ್ಯಪ್ರದೇಶ (2020):

ಇಲ್ಲಿ ಕರ್ನಾಟಕದ ಮಾದರಿಯನ್ನು ಅನುಸರಿಸಿದ ಬಿಜೆಪಿ, ಕಾಂಗ್ರೆಸ್ ಶಾಸಕರನ್ನು ಪಕ್ಷ ತೊರೆಯುಂತೆ ಮಾಡಿತು. ನಂತರ ಅಲ್ಲಿ ಬಿಜೆಪಿ ಸರ್ಕಾರ ರಚಿಸಿತು. ಅತೃಪ್ತ ಕಾಂಗ್ರೆಸ್ ನಾಯಕರಾದ ಮಾಜಿ ಸಂಸದ ಜ್ಯೋತಿರಾದಿತ್ಯ ಸಿಂಧಿಯಾ ನಂತರ ಬಿಜೆಪಿಯಿಂದ ರಾಜ್ಯಸಭಾ ಸದಸ್ಯರಾಗಿ ನಾಮನಿರ್ದೇಶನಗೊಂಡರು.

11.ರಾಜಸ್ಥಾನ (2020):

ಅಶೋಕ್ ಗೆಹ್ಲೋಟ್ ನೇತೃತ್ವದ ಕಾಂಗ್ರೆಸ್ ಸರ್ಕಾರವನ್ನು ಕರ್ನಾಟಕ ಮತ್ತು ಮದ್ಯಪ್ರದೇಶದ ಮಾದರಿಯಲ್ಲೇ ಪದಚ್ಯುತಗೊಳಿಸುವ ಪ್ರಯತ್ನ ನಡೆಯುತ್ತಿದೆ.

– ಸುಬೋದ್ ವರ್ಮಾ( ನ್ಯೂಸ್ ಕ್ಲಿಕ್)


ಓದಿ: ನಾನು ಬಿಜೆಪಿ ಸೇರುವುದಿಲ್ಲ: ರಾಜಸ್ಥಾನ ಉಪಮುಖ್ಯಮಂತ್ರಿ ಸಚಿನ್ ಪೈಲಟ್


 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

2ಜಿ ತರಂಗಾಂತರ ತೀರ್ಪಿನ ಸ್ಪಷ್ಟನೆ ಕೋರಿದ್ದ ಕೇಂದ್ರದ ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್ ರಿಜಿಸ್ಟ್ರಿ

0
2ಜಿ ತರಂಗಾಂತರ ಹಂಚಿಕೆ ಪ್ರಕರಣಕ್ಕೆ ಸಂಬಂಧಪಟ್ಟಂತೆ 2012ರಲ್ಲಿ ನೀಡಿರುವ ತೀರ್ಪಿನ ಸ್ಪಷ್ಟನೆ ಕೋರಿ ಕೇಂದ್ರ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಸ್ವೀಕರಿಸಲು ಸುಪ್ರೀಂ ಕೋರ್ಟ್‌ನ ರಿಜಿಸ್ಟ್ರಾರ್ ನಿರಾಕರಿಸಿದ್ದಾರೆ. ಕೆಲ ಸಂದರ್ಭಗಳಲ್ಲಿ ಸಾರ್ವಜನಿಕ ಹರಾಜು ಹೊರತುಪಡಿಸಿ...