ಎನ್‌ಡಿಎ ಅಭ್ಯರ್ಥಿಯ ಚುನಾವಣಾ ಪ್ರಚಾರ ರ್‍ಯಾಲಿಯಲ್ಲಿದ್ದ ಬಿಜೆಪಿ ಕಾರ್ಯಕರ್ತರು ಆಸ್ಪತ್ರೆಗೆ ತುರ್ತಾಗಿ ತೆರಳುತ್ತಿದ್ದ ಗರ್ಭಿಣಿ ಮತ್ತು ಅವರ ಕುಟುಂಬಿಕರಿದ್ದ ಕಾರನ್ನು ತಡೆದು, ಕಾರಲ್ಲಿದ್ದ ಗರ್ಭಿಣಿಯ ಪತಿಯನ್ನು ಹೊರಗೆಳೆದು ಹಲ್ಲೆ ನಡೆಸಿದ ಘಟನೆ ಕೇರಳದ ಕಲ್ಯಾಸೇರಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಸೋಮವಾರ ನಡೆದಿದೆ.
ತುರ್ತಾಗಿ ಆಸ್ಪತ್ರೆಗೆ ತೆರಳುತ್ತಿದ್ದ ಕಾರನ್ನು ದುಷ್ಕರ್ಮಿಗಳು ಒಂದು ಗಂಟೆ ತಡೆದು ನಿಲ್ಲಿಸಿ ಗರ್ಭಿಣಿ ಮಹಿಳೆಯ ಗಂಡನ ಮೇಲೆ ಹಲ್ಲೆ ನಡೆಸಿದ್ದಾರೆ. ಘಟನೆಯನ್ನು ನೋಡುತ್ತಿದ್ದ ಗರ್ಭಿಣಿಯು ಅಘಾತಗೊಂಡು ಕುಸಿದು ಬಿದ್ದಿದ್ದಾರೆ ಎಂದು ದೇಶಾಭಿಮಾನಿ ಪತ್ರಿಕೆ ವರದಿ ಮಾಡಿದೆ.
ಇದನ್ನೂ ಓದಿ: ಕೇರಳದಲ್ಲಿನ ಏಕೈಕ ಬಿಜೆಪಿ ಖಾತೆಯನ್ನೂ ಕ್ಲೋಸ್ ಮಾಡುತ್ತೇವೆ: ಪಿಣರಾಯಿ ವಿಜಯನ್
ಘಟನೆಯು ಸಂಜೆ 6 ಗಂಟೆಗೆ ನಡೆದಿದ್ದು, ಸ್ಥಳೀಯರಾದ ಗರ್ಭಿಣಿ ನಜೀಲ್ ಮತ್ತು ಕುಟುಂಬ ಆಸ್ಪತ್ರೆಗೆ ತೆರಳುತ್ತಿದ್ದಾಗ ಬಿಜೆಪಿ ಕಾರ್ಯಕರ್ತರು ಇದ್ದಕ್ಕಿದ್ದಂತೆ ಕಾರನ್ನು ತಡೆದು ನಿಲ್ಲಿಸಿದ್ದಾರೆ. ಗರ್ಭಿಣಿಗೆ ಭ್ರೂಣದಲ್ಲಿ ಸಮಸ್ಯೆಗಳಿದ್ದ ಕಾರಣ ವೈದ್ಯರ ಸಲಹೆಯ ಮೇರೆಗೆ ಪಯ್ಯನ್ನೂರಿನ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗುತ್ತಿತ್ತು.
ನಜೀಲ್ ಅವರ ಗಂಭೀರ ಆರೋಗ್ಯ ಸ್ಥಿತಿಯ ಬಗ್ಗೆ ಬಿಜೆಪಿ ಕಾರ್ಯಕರ್ತರೊಂದಿಗೆ ಕೇಳಿಕೊಂಡರೂ, ಅವರನ್ನು ಕದಲಲು ನಿರಾಕರಿಸಿದರು ಎನ್ನಲಾಗಿದೆ. ಇಷ್ಟೇ ಅಲ್ಲದೆ ಕಾರಿನ ಗಾಜನ್ನು ಪುಡಿ ಮಾಡಿದ ಬಿಜೆಪಿ ಕಾರ್ಯಕರ್ತರು ನಜೀಲ್ ಅವರ ಪತಿ ಅಬ್ದುಲ್ ಮುನೀರ್ ಅವರನ್ನು ಹೊರಗೆ ಎಳೆದುಕೊಂಡು ಹಲ್ಲೆ ನಡೆಸಿದ್ದಾರೆ. ಇದನ್ನು ನೋಡಿದ ಗರ್ಭಿಣಿಯು ಅಘಾತಗೊಂಡು ಕಾರಿನಲ್ಲೇ ಕುಸಿದುಬಿದ್ದಿದ್ದಾರೆ.
ಘಟನೆ ನಡೆದು ಒಂದು ಗಂಟೆಯ ನಂತರವೇ ವಾಹನಕ್ಕೆ ಹೋಗಲು ಅನುಮತಿ ನೀಡಲಾಯಿತು. ನಜೀಲ್ ಅವರನ್ನು ಪಯ್ಯನ್ನೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಪತಿ ಅಬ್ದುಲ್ ರೆಹಮಾನ್ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವರದಿಯಾಗಿದೆ.
ರೋಡ್ ಶೋ ಸಮಯದಲ್ಲಿ ಬಿಜೆಪಿ ಕಾರ್ಯಕರ್ತರು ಹಲವಾರು ಕಾರುಗಳ ಮೇಲೆ ದಾಳಿ ನಡೆಸಿದ್ದು, ಘಟನಾ ಸ್ಥಳದಲ್ಲಿದ್ದ ಪೊಲೀಸರಿಗೆ ಬೆದರಿಕೆ ಹಾಕಿದ್ದಾರೆ ಎಂದು ದೇಶಾಭಿಮಾನಿ ಪತ್ರಿಕೆ ತನ್ನ ವರದಿಯಲ್ಲಿ ಉಲ್ಲೇಖಿಸಿದೆ.
ಇದನ್ನೂ ಓದಿ: ಮಸ್ಕಿ ಬೆವರು ಬೆಂಗಳೂರಿನಲ್ಲಿ: ಬಸವಕಲ್ಯಾಣದಲ್ಲಿ ನಾರಾಯಣರಾವ್ ಸರಳತೆ ಉಳಿಯುವುದೇ?
ಈ ದೌರ್ಜನ್ಯ ಎಸಗಿರುವವರಿಗೆ ಶಿಕ್ಷೆ ಆಗಬೇಕು.