Homeಕರೋನಾ ತಲ್ಲಣಲಾಕ್‌ಡೌನ್‌ ಘೋಷಿಸಬೇಡಿ, ಅದರಿಂದ ಬಡವರಿಗೆ ಸಂಕಷ್ಟ- ಆನಂದ್ ಮಹೀಂದ್ರಾ

ಲಾಕ್‌ಡೌನ್‌ ಘೋಷಿಸಬೇಡಿ, ಅದರಿಂದ ಬಡವರಿಗೆ ಸಂಕಷ್ಟ- ಆನಂದ್ ಮಹೀಂದ್ರಾ

- Advertisement -
- Advertisement -

ಕಳೆದ ಕೆಲವು ವಾರಗಳಲ್ಲಿ ಮಹಾರಾಷ್ಟ್ರದಲ್ಲಿ ಕೊರೊನಾ ಸೋಂಕು ಪ್ರಕರಣಗಳು ಉಲ್ಬಣವಾಗುತ್ತಿದ್ದು, ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಲಾಕ್‌ಡೌನ್ ವಿಧಿಸುವ ಮುನ್ಸೂಚನೆ ನೀಡಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಉದ್ಯಮಿ ಆನಂದ್ ಮಹೀಂದ್ರಾ “ಲಾಕ್‌ಡೌನ್‌ನಿಂದ ಹೆಚ್ಚು ಸಂಕಷ್ಟಕ್ಕೆ ಒಳಗಾಗುವವರು ಹೆಚ್ಚು ಬಡವರು, ವಲಸೆ ಕಾರ್ಮಿಕರು. ಅಲ್ಲದೆ ಸಣ್ಣ ಉದ್ಯಮಗಳಿಗೆ ಹೊಡೆತ ಬೀಳುತ್ತದೆ” ಎಂದಿದ್ದಾರೆ.

ಮಹಾರಾಷ್ಟ್ರದಲ್ಲಿ ಕೊರೊನಾ ವೈರಸ್ ಪ್ರಕರಣಗಳು ಗಣನೀಯವಾಗಿ ಹೆಚ್ಚುತ್ತಿರುವ ಹಿನ್ನೆಲೆ, ಜನರು ಕೊರೊನಾ ನಿಯಮಾವಳಿಗಳನ್ನು ಅನುಸರಿಸದ ಕಾರಣ ಲಾಕ್‌ಡೌನ್ ವಿಧಿಸುವ ಯೋಜನೆಯನ್ನು ಸಿದ್ಧಪಡಿಸುವಂತೆ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ ಎಂದು ಭಾನುವಾರ ಸಿಎಂ ಕಚೇರಿಯ ಅಧಿಕೃತ ಹೇಳಿಕೆ ತಿಳಿಸಿತ್ತು.

ಮುಖ್ಯಮಂತ್ರಿ ಉದ್ಧವ್ ಠಾಕ್ರೆ, ಆರೋಗ್ಯ ಸಚಿವ ರಾಜೇಶ್ ಟೊಪೆ, ಮುಖ್ಯ ಕಾರ್ಯದರ್ಶಿ ಸೀತಾರಾಮ್ ಕುಂಟೆ, ಕೊರೊನಾ ಟಾಸ್ಕ್‌ಪೋರ್ಸ್ ವೈದ್ಯರು ಮತ್ತು ಇತರ ಅಧಿಕಾರಿಗಳು ಭಾಗವಹಿಸಿದ್ದ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಲಾಗಿತ್ತು.

ಇದನ್ನೂ ಓದಿ: ಲಾಕ್‌ಡೌನ್‌ ಯೋಜನೆ ಸಿದ್ಧಪಡಿಸಿ: ಅಧಿಕಾರಿಗಳಿಗೆ ಸೂಚನೆ ನೀಡಿದ ಉದ್ಧವ್ ಠಾಕ್ರೆ

ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಸರ್ಕಾರದ ನಿರ್ಧಾರದ ಹಿನ್ನೆಲೆ ಟ್ವೀಟ್ ಮಾಡಿದ್ದ ಉದ್ಯಮಿ ಆನಂದ್ ಮಹಿಂದ್ರಾ, ಲಾಕ್‌ಡೌನ್‌ ವಿಧಿಸುವುದರಿಂದ ಹೆಚ್ಚು ಬಡವರು, ವಲಸೆ ಕಾರ್ಮಿಕರು ಮತ್ತು ಸಣ್ಣ ಉದ್ಯಮಗಳು ತೊಂದರೆಗೆ ಒಳಗಾಗುತ್ತವೆ. ಆಸ್ಪತ್ರೆ ಮತ್ತು ಆರೋಗ್ಯವನ್ನು ಉತ್ತಮಗೊಳಿಸುತ್ತಾ, ಅವುಗಳನ್ನು ಪುನರುತ್ಥಾನಗೊಳಿಸುವ ಮತ್ತು ಮರಣ ಪ್ರಮಾಣವನ್ನು ತಪ್ಪಿಸುವತ್ತ ಗಮನ ಹರಿಸೋಣ ಎಂದು ಸಲಹೆ ನೀಡಿದ್ದಾರೆ.

ಕೊರೊನಾ ನಿಯಂತ್ರಣ ಹೆಸರಲ್ಲಿ ದೇಶದಲ್ಲಿ ಯೋಜಿತವಲ್ಲದ ಕಠಿಣ ಲಾಕ್‌ಡೌನ್‌ ಒಂದನ್ನು ಜಾರಿಗೊಳಿಸಿ ಒಂದು ವರ್ಷವಾಗಿದೆ. ಲಾಕ್‌ಡೌನ್‌ನಿಂದ ನಗರ ಪ್ರದೇಶಗಳಲ್ಲಿ ಸಾವಿರಾರು ವಲಸಿಗರು ನಿರುದ್ಯೋಗಿಗಳಾಗಿ, ಅಸಹಾಯಕರಾಗಿದ್ದರು. ವಲಸೆ ಕಾರ್ಮಿಕರು ತಮ್ಮ ತಮ್ಮ ಹಳ್ಳಿಗಳನ್ನು ಸೇರಿಕೊಳ್ಳಲು ಸರ್ಕಾರ ಯಾವುದೇ ಸಹಾಯಹಸ್ತ ಚಾಚದೇ ಕಾಲ್ನಡಿಗೆಯಲ್ಲಿ ಪ್ರಯಾಣಿಸಲು ಪ್ರಾರಂಭಿಸಿ ಸಾವಿರಾರು ಸಾವು-ನೋವುಗಳಿಗೆ ಕಾರಣವಾಗಿತ್ತು.

ಭಾರತದಲ್ಲಿ ಕೊರೊನಾ ಎರಡನೇ ಅಲೆ ಉಂಟಾಗಿದೆ ಎನ್ನಲಾಗಿದೆ. ದೇಶದ ಹಲವು ರಾಜ್ಯಗಳಲ್ಲಿ ಕೊರೊನಾ ಪ್ರಕರಣಗಳ ಏರಿಕೆಯಾಗಿದೆ. ಮಹಾರಾಷ್ಟ್ರದಲ್ಲಿ ದಿನೊಂದಕ್ಕೆ 40 ಸಾವಿರದವರೆಗೆ ಕೊರೊನಾ ಪ್ರಕರಣಗಳು ವರದಿಯಾಗಿವೆ. ಸದ್ಯಕ್ಕೆ ರಾಜ್ಯಲ್ಲಿ ನೈಟ್ ಕರ್ಫ್ಯೂ ವಿಧಿಸಲಾಗಿದೆ. ಸಾರ್ವಜನಿಕ ಸಭೆ, ಸಮಾರಂಭಗಳಲ್ಲಿ ಜನ ಸೇರುವುದನ್ನು ತಡೆಯಲಾಗಿದೆ. ಕೊರೊನಾ ನಿಯಮಗಳ ಪಾಲನೆ ಕಡ್ಡಾಯ ಮಾಡಲಾಗಿದೆ.


ಇದನ್ನೂ ಓದಿ: `1232 ಕಿ.ಮೀ’ | ಕರಾಳ ಲಾಕ್‌ಡೌನ್‌‌ನಲ್ಲಿ ಕಾರ್ಮಿಕರ ‘ಮಹಾವಲಸೆ’ಯ ಕತೆ ಹೇಳುವ ಸಾಕ್ಷ್ಯಚಿತ್ರ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read