Homeಮುಖಪುಟಬೇರೆ ಯಾವ ಪಕ್ಷಕ್ಕೂ ಹಣ ನೀಡದಂತೆ ದಾನಿಗಳಿಗೆ ಬಿಜೆಪಿಯಿಂದ ಬೆದರಿಕೆ: ಗೆಹ್ಲೋಟ್‌

ಬೇರೆ ಯಾವ ಪಕ್ಷಕ್ಕೂ ಹಣ ನೀಡದಂತೆ ದಾನಿಗಳಿಗೆ ಬಿಜೆಪಿಯಿಂದ ಬೆದರಿಕೆ: ಗೆಹ್ಲೋಟ್‌

ಚುನಾವಣಾ ಬಾಂಡ್‌ಗಳ ಮೂಲಕ ಬರುವ ಒಟ್ಟು ದೇಣಿಗೆಯಲ್ಲಿ ಶೇಕಡಾ 95ರಷ್ಟು ಪಾಲನ್ನು ಬಿಜೆಪಿ ಪಡೆಯುತ್ತಿದೆ ಎಂದು ಅಶೋಕ್ ಗೆಹ್ಲೋಟ್  ಹೇಳಿದ್ದಾರೆ.

- Advertisement -
- Advertisement -

ಚುನಾವಣಾ ಬಾಂಡ್‌ಗಳ ಮೂಲಕ ಬರುವ ಒಟ್ಟು ದೇಣಿಗೆಯಲ್ಲಿ ಶೇಕಡಾ 95ರಷ್ಟು ಪಾಲನ್ನು ಬಿಜೆಪಿ ಪಡೆಯುತ್ತಿದೆ. ಏಕೆಂದರೆ ದಾನಿಗಳು ಭಯಭೀತರಾಗಿ ಇತರ ಪಕ್ಷಗಳಿಗೆ ಹಣವನ್ನು ನೀಡುತ್ತಿಲ್ಲ ಎಂದು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್  ಹೇಳಿದ್ದಾರೆ.

ಮುಂಬರುವ ಗುಜರಾತ್ ವಿಧಾನಸಭಾ ಚುನಾವಣೆಯ ಕಾಂಗ್ರೆಸ್ ಪಕ್ಷದ ಪ್ರಚಾರದ ಭಾಗವಾಗಿ ಸೂರತ್‌ನಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿದ್ದಾರೆ. “ಕಾಂಗ್ರೆಸ್ ಮತ್ತು ಇತರ ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡಲು ಬಯಸುವ ಕಾರ್ಪೊರೇಟ್‌ಗಳಿಗೆ ಬಿಜೆಪಿಯು ಬೆದರಿಕೆ ಒಡ್ಡುತ್ತಿದೆ” ಎಂದು ದೂರಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಆಮ್ ಆದ್ಮಿ ಪಕ್ಷ (ಎಎಪಿ) ಮತ್ತು ಅದರ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರನ್ನೂ ಟೀಕಿಸಿರುವ ಗೆಹ್ಲೋಟ್‌, “ತಮ್ಮ ವಿರುದ್ಧದ ಯಾವುದೇ ನಕಾರಾತ್ಮಕ ಸುದ್ದಿಗಳನ್ನು ತಡೆಹಿಡಿಯಲು ಕೇಜ್ರಿವಾಲ್‌‌ ಹಣವನ್ನು ಖರ್ಚು ಮಾಡುತ್ತಾರೆ” ಎಂದಿದ್ದಾರೆ.

“ಬೇರೆ ಪಕ್ಷಗಳಿಗೆ ದೇಣಿಗೆ ನೀಡಿದರೆ ಜಾರಿ ನಿರ್ದೇಶನಾಲಯ ಮತ್ತು ಆದಾಯ ತೆರಿಗೆ ಇಲಾಖೆಗಳು ದಾನಿಗಳ ಬಾಗಿಲು ತಟ್ಟುತ್ತವೆ. ನಮ್ಮ ಪ್ರಜಾಪ್ರಭುತ್ವದಲ್ಲಿ ದೇಣಿಗೆ ಕೂಡ ಒಂದು ಪಕ್ಷಕ್ಕೆ ಮಾತ್ರ ಹೋಗುತ್ತಿದೆ. ಅವರು ಕೋಟ್ಯಂತರ ರೂಪಾಯಿಗಳನ್ನು ಸಂಗ್ರಹಿಸಿದ್ದಾರೆ. ದೇಶದಾದ್ಯಂತ ಪಂಚತಾರಾ ದರ್ಜೆಯಲ್ಲಿ ಪಕ್ಷದ ಕಚೇರಿಗಳನ್ನು ನಿರ್ಮಿಸಲು ಈ ಹಣವನ್ನು ಬಳಸುತ್ತಾರೆ” ಎಂದು ಗೆಹ್ಲೋಟ್ ಆರೋಪಿಸಿದ್ದಾರೆ.

“ಚುನಾವಣಾ ಬಾಂಡ್‌ಗಳನ್ನು ಪರಿಚಯಿಸಿದ ನಂತರ, ಒಟ್ಟು ದೇಣಿಗೆಯ ಶೇಕಡಾ 95ರಷ್ಟು ಹಣ ಬಿಜೆಪಿಗೆ ಹೋಗುತ್ತಿದೆ. ದಾನಿಗಳು ಭಯದಿಂದ ಇತರ ಪಕ್ಷಗಳಿಗೆ ನೀಡುತ್ತಿಲ್ಲ. ದೇಣಿಗೆ ಮೂಲಕ ಸಂಗ್ರಹಿಸಿದ ಹಣದ ಸಹಾಯದಿಂದ ರಾಜ್ಯ ಸರ್ಕಾರಗಳನ್ನು ಉರುಳಿಸುವ ಮಾದರಿಯನ್ನು ಬಿಜೆಪಿ ಪರಿಚಯಿಸಿದೆ. ಅವರು ಮಹಾರಾಷ್ಟ್ರ ಮತ್ತು ಕರ್ನಾಟಕದಲ್ಲಿ ಇದನ್ನು ಮಾಡಿದ್ದಾರೆ” ಎಂದು ವಾಗ್ದಾಳಿ ನಡೆಸಿದ್ದಾರೆ.

ಆಡಳಿತಾರೂಢ ಬಿಜೆಪಿಯನ್ನು ‘ಫ್ಯಾಸಿಸ್ಟ್’ ಶಕ್ತಿ ಎಂದು ಕರೆದಿರುವ ಗೆಹ್ಲೋಟ್, “ಬಿಜೆಪಿಯು ಯಾವುದೇ ನೀತಿ, ಕಾರ್ಯಕ್ರಮ ಅಥವಾ ತತ್ವಗಳ ಬದಲಿಗೆ ಧಾರ್ಮಿಕ ಆಧಾರದ ಮೇಲೆ ಚುನಾವಣೆಯನ್ನು ಗೆಲ್ಲುತ್ತದೆ” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

“ಗುಜರಾತ್ ಮಹಾತ್ಮಾ ಗಾಂಧೀಜಿಯವರ ನಾಡು. ಆದರೆ ಇಲ್ಲಿ ಹಿಂಸಾಚಾರ ಮತ್ತು ಅಶಾಂತಿಯ ವಾತಾವರಣವಿದೆ. ಈ ಪರಿಸ್ಥಿತಿ ಪ್ರಜಾಪ್ರಭುತ್ವಕ್ಕೆ ಅಪಾಯಕಾರಿ. ಸಮಾಜದ ಎಲ್ಲಾ ವರ್ಗಗಳು ಬಿಜೆಪಿಯಿಂದ ಅಸಮಾಧಾನಗೊಂಡಿವೆ. ಈ ಆಡಳಿತವನ್ನು ಬದಲಾಯಿಸುವ ಸಮಯ ಬಂದಿದೆ. ಕಾಂಗ್ರೆಸ್ ಮುಂದಿನ ಸರ್ಕಾರ ರಚನೆಗೆ ಸಿದ್ಧವಾಗಿದೆ” ಎಂದು ಗುಡುಗಿದ್ದಾರೆ.

ಮುಂಬರುವ ಗುಜರಾತ್ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್‌ನ ಹಿರಿಯ ವೀಕ್ಷಕರಾಗಿರುವ ಗೆಹ್ಲೋಟ್, “ಎಎಪಿ ಮತ್ತು ಅದರ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರು ಹಣದ ಮೂಲಕ ಮಾಧ್ಯಮಗಳನ್ನು ನಿಯಂತ್ರಿಸುತ್ತಿದ್ದಾರೆ” ಎಂದು ಆರೋಪಿಸಿದ್ದಾರೆ.

“ಕೇಜ್ರಿವಾಲ್ ಮಾಡುತ್ತಿರುವುದು ಪ್ರಜಾಪ್ರಭುತ್ವಕ್ಕೂ ಅಪಾಯಕಾರಿ. ಅವರು ತಮ್ಮ ವಿರುದ್ಧದ ಯಾವುದೇ ನಕಾರಾತ್ಮಕ ಸುದ್ದಿಗಳನ್ನು ಪ್ರಕಟಿಸದಂತೆ ಹಣವನ್ನು ಖರ್ಚು ಮಾಡುತ್ತಾರೆ. ಅವರ ಟಿವಿ ಸಂದರ್ಶನಗಳು ಸಹ ನಕಲಿ. ಕಳೆದ ಮೂರು ತಿಂಗಳ ಅವಧಿಯಲ್ಲಿ ಎಲ್ಲವೂ ಬದಲಾಗಿದೆ ಎಂಬ ವಾತಾವರಣವನ್ನು ಅವರು ಸೃಷ್ಟಿಸಿದರು. ಆದರೆ ಅದು ನಿಜವಲ್ಲ. ಈ ತಂತ್ರಗಳು ಜನರಿಗೆ ತಿಳಿದಿವೆ” ಎಂದಿದ್ದಾರೆ.

ಏನಿದು ಚುನಾವಣಾ ಬಾಂಡ್‌?

ಚುಣಾವಣಾ ಬಾಂಡ್‌ಗಳನ್ನು 2017ರ ಒಕ್ಕೂಟ ಸರ್ಕಾರದ ಬಜೆಟ್‌ನಲ್ಲಿ ಘೋಷಿಸಲಾಗಿತ್ತು. ಈ ಚುನಾವಣಾ ಬಾಂಡ್‌ಗಳು ರಾಜಕೀಯ ಪಕ್ಷಗಳಿಗೆ ಅನಾಮಧೇಯವಾಗಿ ಹಣವನ್ನು ದೇಣಿಗೆ ನೀಡಲು ಬಳಸುವ ಬಡ್ಡಿ ಮುಕ್ತ ವ್ಯವಸ್ಥೆಯಾಗಿದೆ. ಇವುಗಳನ್ನು ಭಾರತೀಯ ಸ್ಟೇಟ್‌ ಬ್ಯಾಂಕ್‌(ಎಸ್‌ಬಿಐ) ನಿರ್ದಿಷ್ಟ ದಿನಗಳಂದು ವಿತರಣೆ ಮಾಡುತ್ತವೆ. ಒಂದು ಸಾವಿರ, 10 ಸಾವಿರ, ಒಂದು ಲಕ್ಷ, 10 ಲಕ್ಷ ಮತ್ತು ಒಂದು ಕೋಟಿ ರೂಗಳ ಚುನವಣಾ ಬಾಂಡ್‌ಗಳು ಇರುತ್ತವೆ.

2017 ರ ಬಜೆಟ್ ಭಾಷಣದಲ್ಲಿ ಆಗಿನ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಇದನ್ನು ಮೊದಲು ಘೋಷಿಸಿದ್ದರು. ಆರಂಭದಲ್ಲಿ, ಚುನಾವಣಾ ಬಾಂಡ್‌ಗಳು ಕಂಪನಿಗಳು ತಮ್ಮ ಗುರುತನ್ನು ಬಹಿರಂಗಪಡಿಸದೆ ದೇಣಿಗೆ ನೀಡುವ ಮಾರ್ಗವಾಗಿ ಹೊರಹೊಮ್ಮಿದ್ದವು.

ಇದನ್ನೂ ಓದಿರಿ: ಅಸೆಂಬ್ಲಿ ಎಲೆಕ್ಷನ್: ಚುನಾವಣಾ ಬಾಂಡ್ ತಡೆಗೆ ಸುಪ್ರೀಂಗೆ ಅರ್ಜಿ

ಆದರೆ, ಈಗ ಅನಾಮಧೇಯ ವ್ಯಕ್ತಿಗಳು, ಜನರ ಗುಂಪುಗಳು, ಎನ್‌ಜಿಒಗಳು, ಧಾರ್ಮಿಕ ಮತ್ತು ಇತರ ಟ್ರಸ್ಟ್‌ಗಳು ತಮ್ಮ ವಿವರಗಳನ್ನು ಬಹಿರಂಗಪಡಿಸದೆ ಚುನಾವಣಾ ಬಾಂಡ್‌ಗಳ ಮೂಲಕ ಪಕ್ಷಗಳಿಗೆ ದೇಣಿಗೆ ನೀಡಲು ಅನುಮತಿಸಲಾಗಿದೆ.

2018-19ರಲ್ಲಿ ಚುನಾವಣಾ ಬಾಂಡ್ ಗಳ ಮೌಲ್ಯ 2539.58 ಕೋಟಿ ರೂ ಆಗಿದ್ದು, ಈ ಬಾಂಡ್‌‌ಗಳ ಮೂಲಕ ಬಿಜೆಪಿ, ಕಾಂಗ್ರೆಸ್, ಸಿಪಿಎಂ, ಬಿಎಸ್‌ಪಿ, ತೃಣಮೂಲ ಕಾಂಗ್ರೆಸ್, ಸಿಪಿಐ ಪಕ್ಷಗಳು 76%ರಷ್ಟು ಹಣವನ್ನು ಸ್ವೀಕರಿಸಿವೆ. ರಾಷ್ಟ್ರೀಯ ಮತ್ತು ಪ್ರಾದೇಶಿಕ ಪಕ್ಷಗಳು 2018-19ರಲ್ಲಿ ಚುನಾವಣಾ ಬಾಂಡ್ ಗಳ ಮೂಲಕ ಹಣವನ್ನು ಪಡೆದಿದ್ದು 2422.02 ಕೋಟಿ ಆಗಿದೆ.

ಈ ಅವಧಿಯಲ್ಲಿ ಆರು ರಾಜಕೀಯ ಪಕ್ಷಗಳ ಅದಾಯದ ಮೂರನೇ ಎರಡಷ್ಟು ಆದಾಯ ಬಿಜೆಪಿಗೆ ಬಂದಿದೆ ಎಂದು ವಿಶ್ಲೇಷಿಸಲಾಗಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಸ್ವಾತಿ ಮಲಿವಾಲ್ ಮೇಲಿನ ಹಲ್ಲೆ ಪ್ರಕರಣ: ಕೇಜ್ರಿವಾಲ್ ಸಹಾಯಕ ಬಂಧನ

0
ಎಎಪಿ ಸಂಸದೆ ಸ್ವಾತಿ ಮಲಿವಾಲ್ ಅವರ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಸಹಾಯಕ ಮತ್ತು ಮಾಜಿ ಆಪ್ತ ಕಾರ್ಯದರ್ಶಿ ಬಿಭವ್ ಕುಮಾರ್ ಅವರನ್ನು ಶನಿವಾರ ದೆಹಲಿ...