Homeಕರ್ನಾಟಕಎಸ್‌‌ಎಸ್‌ಸಿ ಪರೀಕ್ಷೆಯಲ್ಲಿ ಹಿಂದಿ, ಇಂಗ್ಲಿಷ್‌ಗಷ್ಟೇ ಅವಕಾಶ: ಕನ್ನಡಿಗರ ಕತ್ತು ಹಿಸುಕುತ್ತಿದೆ ಬಿಜೆಪಿ- ಎಚ್‌ಡಿಕೆ

ಎಸ್‌‌ಎಸ್‌ಸಿ ಪರೀಕ್ಷೆಯಲ್ಲಿ ಹಿಂದಿ, ಇಂಗ್ಲಿಷ್‌ಗಷ್ಟೇ ಅವಕಾಶ: ಕನ್ನಡಿಗರ ಕತ್ತು ಹಿಸುಕುತ್ತಿದೆ ಬಿಜೆಪಿ- ಎಚ್‌ಡಿಕೆ

“ಇದು ಕನ್ನಡ ವಿರೋಧಿ ಅಷ್ಟೇ ಅಲ್ಲ; ಭಾರತವನ್ನು ಉತ್ತರ, ದಕ್ಷಿಣ ಎಂದು ವಿಭಜಿಸಲು ಕೇಂದ್ರ ಬಿಜೆಪಿ ಸರಕಾರವೇ ಕೊಡುತ್ತಿರುವ ಕುಮ್ಮಕ್ಕು”

- Advertisement -
- Advertisement -

ಕೇಂದ್ರ ಸರಕಾರದ ಸಿಬ್ಬಂದಿ ಆಯ್ಕೆ ಆಯೋಗ (ಎಸ್‌‌ಎಸ್‌ಸಿ) ವಿವಿಧ ವಿಭಾಗಗಳಿಗೆ ಪೇದೆಗಳ ಆಯ್ಕೆಗೆ ಹಿಂದಿ ಮತ್ತು ಇಂಗ್ಲಿಷ್‌‌ನಲ್ಲಿ ಮಾತ್ರ ಪರೀಕ್ಷೆ ಬರೆಯುವ ಅವಕಾಶ ನೀಡಿರುವ ಬಗ್ಗೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

#ಕೇಂದ್ರ_ಸರಕಾರಿ_ಕೆಲಸ_ಕನ್ನಡಿಗರ_ಹಕ್ಕು ಹ್ಯಾಷ್‌ಟ್ಯಾಗ್‌ ಬಳಸಿರುವ ಅವರು ಸರಣಿ ಟ್ವೀಟ್ ಮಾಡಿದ್ದಾರೆ. “ಕನ್ನಡದ ಕತ್ತು ಹಿಚುಕುವುದನ್ನೇ ನಿತ್ಯ ಕಾಯಕ ಮಾಡಿಕೊಂಡಿರುವ ಬಿಜೆಪಿ ಆಡಳಿತಕ್ಕೆ ದೇಶದ ಎಲ್ಲಾ ಪ್ರಾದೇಶಿಕ ಭಾಷೆಗಳನ್ನು ಮುಗಿಸಲೇಬೇಕು ಎನ್ನುವ ಹಪಾಹಪಿ, ತವಕ, ಹಠ ಉತ್ಕಟವಾಗಿದೆ ಎನ್ನುವುದಕ್ಕೆ ಇಲ್ಲಿದೆ ಹೊಸ ಸಾಕ್ಷಿ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

“ಪೇದೆ ಆಯ್ಕೆಗೆ ಅರ್ಜಿ ಕರೆದಿರುವ ಕೇಂದ್ರ ಸಿಬ್ಬಂದಿ ಆಯ್ಕೆ ಆಯೋಗ (ಎಸ್‌ಎಸ್‌ಸಿ) ಹಿಂದಿ, ಇಂಗ್ಲಿಷ್‌‌ನಲ್ಲಿ ಮಾತ್ರ ಪರೀಕ್ಷೆ ಬರೆಯುವ ಅವಕಾಶ ನೀಡಿದೆ. ಹಾಗಾದರೆ, ಕನ್ನಡವೂ ಸೇರಿ ಇತರೆ ಪ್ರಾದೇಶಿಕ ಭಾಷೆಗಳನ್ನು ಮಾತನಾಡುವ ಅಭ್ಯರ್ಥಿಗಳು ಏನು ಮಾಡಬೇಕು? ಹಿಂದಿಗೆ ಬೆಣ್ಣೆ, ಕನ್ನಡಕ್ಕೆ ಸುಣ್ಣ! ಇದೆಂಥಾ ನ್ಯಾಯ?” ಎಂದು ಪ್ರಶ್ನಿಸಿದ್ದಾರೆ.

“ಗಡಿ ಭದ್ರತಾ ಪಡೆ, ಕೇಂದ್ರೀಯ ಕೈಗಾರಿಕಾ ಪಡೆ, ಕೇಂದ್ರ ಪೊಲೀಸ್ ಮೀಸಲು ಪಡೆ, ಇಂಡೋ ಟಿಬೆಟಿಯನ್ ಗಡಿ ಪೊಲೀಸ್, ಸಶಸ್ತ್ರ ಸೀಮಾಬಲ, ಸಚಿವಾಲಯ ಭದ್ರತಾ ಪಡೆ, ಅಸ್ಸಾಂ ರೈಫಲ್ಸ್, ಮಾದಕ ವಸ್ತು ನಿಯಂತ್ರಣಾ ಇಲಾಖೆ ಸೇರಿ ಹಲವು ವಿಭಾಗಗಳಿಗೆ ಪೇದೆಗಳ ಆಯ್ಕೆಗೆ ಜನವರಿಯಲ್ಲಿ ಪರೀಕ್ಷೆ ನಡೆಯಲಿದೆ. ಈ ಪರೀಕ್ಷೆ ಕೇವಲ ಹಿಂದಿ, ಇಂಗ್ಲೀಷ್ ನಲ್ಲಿ ಮಾತ್ರ ಇರುತ್ತದೆ. ಅಲ್ಲಿಗೆ ಹಿಂದಿ ಭಾಷಿಕರು ಬಿಟ್ಟರೆ ಬೇರೆ ಯಾರೂ ಆಯ್ಕೆ ಆಗಲೇಬಾರದು ಎನ್ನುವ ಹುನ್ನಾರ ಇದರಲ್ಲಿ ಅಡಗಿದೆ. ನನ್ನ ಅಭಿಪ್ರಾಯದಲ್ಲಿ, ಇದು ಕನ್ನಡ ವಿರೋಧಿ ಅಷ್ಟೇ ಅಲ್ಲ; ಭಾರತವನ್ನು ಉತ್ತರ, ದಕ್ಷಿಣ ಎಂದು ವಿಭಜಿಸಲು ಕೇಂದ್ರ ಬಿಜೆಪಿ ಸರಕಾರವೇ ಕೊಡುತ್ತಿರುವ ಕುಮ್ಮಕ್ಕು” ಎಂದು ಅಭಿಪ್ರಾಯಪಟ್ಟಿದ್ದಾರೆ.

“ಕೇಂದ್ರದಲ್ಲಿನ ಬಿಜೆಪಿ ಸರ್ಕಾರ ಈ ಅಪಾಯದ ಅರಿವು ಮಾಡಿಕೊಂಡು, ಕೂಡಲೇ ಈ ಕನ್ನಡ ವಿರೋಧಿ ಆದೇಶ ಹಿಂಪಡೆದು, ಹೊಸ ಆದೇಶ ಹೊರಡಿಸಿ ಕನ್ನಡವೂ ಸೇರಿ ಎಲ್ಲಾ ಪ್ರಾದೇಶಿಕ ಭಾಷೆಗಳಲ್ಲಿ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡಬೇಕು. ಇಲ್ಲವಾದರೆ, ಬೀದಿಗಿಳಿದು ಕನ್ನಡಿಗರ ಶಕ್ತಿ ಏನೆಂದು ತೋರಿಸಬೇಕಾಗುತ್ತದೆ” ಎಂದು ಎಚ್ಚರಿಸಿದ್ದಾರೆ.

ಇದನ್ನೂ ಓದಿರಿ: ಸಾವರ್ಕರ್ ಕುರಿತ ಉತ್ಪ್ರೇಕ್ಷಿತ ಕನ್ನಡ ಪಠ್ಯಕ್ಕೆ ತೀವ್ರ ವಿರೋಧ: ಸಾಮಾಜಿಕ ಜಾಲತಾಣದಲ್ಲಿ ವ್ಯಂಗ್ಯ

“ಕೋಟಿ ಕಂಠ ಗಾಯನ ಎಂದರೆ ಕೋಟಿಗೂ ಹೆಚ್ಚು ಕನ್ನಡ ಕಂಠಗಳಿಗೆ ಜೀವ ತುಂಬುವುದು, ಅನ್ನದ ದಾರಿ ತೋರಿಸುವುದು, ಬದುಕಿನ ಖಾತರಿ ಕೊಡುವುದು. ಕೇವಲ ನಾಲಿಗೆ ಮೇಲೆ ಕನ್ನಡ ಎಂದು ಹೇಳಿ, ಮನದಾಳದಲ್ಲಿ ಅದೇ ಕನ್ನಡದ ಮೇಲೆ ವಿಷ ಕಕ್ಕುವುದಲ್ಲ. ಅದನ್ನು ಕನ್ನಡಿಗರು ಎಂದಿಗೂ ಸಹಿಸುವುದೂ ಅಲ್ಲ” ಎಂದು ತಿಳಿಸಿದ್ದಾರೆ.

“ನಿನ್ನೆಯಷ್ಟೇ ಕೋಟಿ ಕಂಠ ಗಾಯನ ಕಾರ್ಯಕ್ರಮ ಮಾಡಿದ ರಾಜ್ಯ ಬಿಜೆಪಿ ಸರಕಾರ ಕನ್ನಡಿಗರಿಗೆ ಆಗುತ್ತಿರುವ ಅನ್ಯಾಯದ ಬಗ್ಗೆ ಏನು ಹೇಳುತ್ತದೆ? ಕೋಟಿ ಕಂಠ ಗಾಯನ ಎನ್ನುತ್ತಲೇ ಕನ್ನಡದ ಕತ್ತು ಸೀಳುವುದಾ? ಕನ್ನಡಿಗರ ಅನ್ನ ಕಸಿದುಕೊಳ್ಳುವುದಾ? ಕನ್ನಡಿಗರ ಹಕ್ಕುಗಳಿಗೆ ಮರಣಶಾಸನ ಬರೆಯುವುದಾ? ಕನ್ನಡಿಗರಿಗೆ ಬೇಕಿದೆ ಉತ್ತರ” ಎಂದು ಆಗ್ರಹಿಸಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...